‘ನೀಲು ಮಾತು ಮೀರಿದ ಮಿಂಚು’ ಈ ಕೃತಿಯಲ್ಲಿ ಎಸ್.ಎಫ್. ಯೋಗಪ್ಪನವರ್ ಇವರು ಲಂಕೇಶ್ ರ ಎಲ್ಲ ನೀಲು ಕಾವ್ಯಗಳನ್ನು ಅಭ್ಯಾಸ ಮಾಡಿ ಬರೆದಿದ್ದಾರೆ. ಓದು, ಪ್ರಾಮಾಣಿಕತೆ, ಸ್ಪಷ್ಟ ನಿಲುವುಗಳು ಎಂಥ ವ್ಯಕ್ತಿಯನ್ನು ರೂಪಿಸಬಲ್ಲವು ಎನ್ನುವುದಕ್ಕೆ ಲಂಕೇಶ್ ಸಾಕ್ಷಿಯಾಗಿದ್ದರು. ಅವರ ಪ್ರತಿಭೆ ಉರಿವ ನಿಷ್ಟುರತೆಯಲ್ಲಿ ರೂಪಗೊಂಡಿತ್ತು. ಜಾಗೃತಾವಸ್ಥೆ ನುರಿತ ಬೇಟೆಗಾರನ ಕಣ್ಣುಗಳಂತಿತ್ತು. ಅನುಕಂಪ ಬುದ್ದನ ಚಂದ್ರ ನೆಲೆ ನಿಂತ ಸೂಚನೆ ಕೊಟ್ಟಿತ್ತು. ಕನ್ನಡದ ಹೆಸರಾಂತ ಚಿಂತಕ ಡಿ.ಆರ್. ನಾಗರಾಜ ‘ಲಂಕೇಶ್ ಶತಮಾನದ ಪ್ರತಿಭೆ’ ಎಂದು ಕರೆದು ಆಖೈರುಗೊಳಿಸಿ ಹೋಗಿದ್ದಾರೆ. ಲಂಕೇಶ್ ಪ್ರಜ್ಞೆ ಮತ್ತು ಭಾಷೆಯ ಅಭ್ಯಾಸಕ್ಕೆ ನಡೆದಷ್ಟು ಹಾದಿ ಇದೆ. ಸಾವಿಗೆ ಮುಖಾಮುಖಿಯಾದ ಸೃಜನಶೀಲತೆಗೆ ಎಲ್ಲಾ ದಿಕ್ಕುಗಳು ಹಾದಿಯಾಗುತ್ತವೆ. ಲಂಕೇಶ್ ವಿಭಿನ್ನ ವಿಷಯಗಳ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಪ್ರಕೃತಿಯ ಚಿತ್ತದಂತೆ ಅಲ್ಲಿ ಎಲ್ಲ ಲೀಲೆಗಳೂ ಒಳಗೊಂಡಿವೆ.
ನೀಲುವಿನಲ್ಲಿ ಗ್ರಾಮ ಹಾಗೂ ನಗರ ಪ್ರಜ್ಞೆಗಳು ಹಾಸುಹೊಕ್ಕಾಗಿವೆ. ಆಕೆಯ ಗ್ರಾಮ ಪ್ರಜ್ಞೆ ಬುಡಕಟ್ಟು ಸಂವೇದನೆಗಳ ಉಗ್ರಾಣದಂತಿದೆ. ಅಲ್ಲಿಯ ಪ್ರಾಮಾಣಿಕತೆ ಕಣ್ಣುಕುಕ್ಕಿಸುತ್ತದೆ. ನಗರದ ನೀಚತನ, ಪಾಪ, ಶೋಷಣೆಗಳನ್ನು ಭೇದಿಸುವಲ್ಲಿ ಗ್ರಾಮ ಪ್ರಜ್ಞೆ ಸಹಾಯಕವಾಗಿದೆ. ಅಲ್ಲಿಯ ಗುರಿ ನೇರ ಹಾಗೂ ಸ್ಪಷ್ಟವಾಗಿದೆ. ನೀಲು ಸೃಜನಶೀಲತೆ ಹೃದಯಸ್ಥ ಕ್ರಿಯೆಯಾಗಿದೆ. ಅಲ್ಲಿ ಬೌದ್ಧಿಕ ನಟನೆಗೆ ಸ್ಥಳವಿಲ್ಲದಾಗಿದೆ. ಆಕೆಯ ಭಾಷೆಗೆ ಕರುಳಿನ ಸಂಬಂಧ ಸಿಕ್ಕಿದೆ. ಅದಕ್ಕೆ ಕತ್ತರಿಸುವ, ಜೋಡಿಸುವ ಶಕ್ತಿ ಲಭಿಸಿದೆ. ಮೇಲಾಗಿ ನೀಲು ಋಷಿ ಕನ್ಯೆಯೂ ಆಗಿದ್ದಾಳೆ.
ಲಂಕೇಶ್ ವಿಶಿಷ್ಟ ಕಾವ್ಯ ನೀಲುವಿನಲ್ಲಿದೆ. ಇಲ್ಲಿಯ ಹನಿ ಹನಿಗಳಲ್ಲಿಯೂ ಲೋಕದರ್ಶನವಿದೆ. ನಮಗೆ ಹೊಳೆದ ಭಾವವನ್ನು ನಾವು ಹೇಳಬಹುದಾಗಿದೆ. ಇಲ್ಲಿ ಎಲ್ಲರ ಭಾವಕ್ಕೂ ಮುಕ್ತ ಅವಕಾಶವಿದೆ. ಈ ಕೃತಿ ಭಾವನೆಗಳ ಮುಖಾಂತರ ಲಂಕೇಶ್ ಅವರನ್ನು ತಲುಪುವ ಕ್ರಿಯೆಯಾಗಿದೆ. ನಿಸರ್ಗ, ಪ್ರೀತಿ, ಕರುಣೆ, ಚಿತ್ತವೃತ್ತಿ, ಆಧ್ಯಾತ್ಮ ಇವೆಲ್ಲವುಗಳಿಗೆ ಹೃದಯವೇ ಸ್ಥಾನವಾಗಿದೆ. ಸಾವಿನ ಎದುರು ಬುದ್ದಿ ಪಲಾಯನ ಮಾಡುತ್ತದೆ. ಹೃದಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತದೆ. ಇದು ನಾವು ತಿಳಿದ ಸತ್ಯವಾಗಿದೆ. ಲಂಕೇಶ್ ಮೇಲ್ನೋಟಕ್ಕೆ ಅತ್ಯಂತ ಲೌಕಿಕರಂತೆ ಕಂಡರೂ ಅವರ ಒಳಗೆ ಬೆಳಕು ಎಳೆದು ತಂದ ಬುದ್ದನೊಬ್ಬ ಸದಾ ಕಾಣುತ್ತಿದ್ದ. ಅವರ ನೈತಿಕ ನಿಲುವು ಹಾಗೂ ಭಾಷೆಯನ್ನು ಎದುರಿಸುವ ಶಕ್ತಿ ಎಂಥವರಿಗೂ ಇರಲಿಲ್ಲ. ಹೀಗಾಗಿ ಲಂಕೇಶ್ ರಂತವರು ಲಂಕೇಶ್ ಒಬ್ಬರೇ ಆಗಿ ಉಳಿದಿದ್ದಾರೆ.
ಕೃತಿ ಲೇಖಕರು : ಎಸ್.ಎಫ್. ಯೋಗಪ್ಪನವರ್
ಬೆಲೆ : ₹200, ಸಂಪರ್ಕಿಸಿ : 9341757653
ಕೃತಿ ವಿಮರ್ಶಕರು : ಡಾ. ಟಿ.ಎಸ್. ಗೊರವರ
ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದ ಟಿ.ಎಸ್. ಗೊರವರ ದಿನಾಂಕ 10 ಜೂನ್ 1984ರಂದು ಜನಿಸಿದರು. ರಾಜೂರು, ಗಜೇಂದ್ರಗಡದಲ್ಲಿ ವಿದ್ಯಾಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ‘ಭ್ರಮೆ’ (2007) ಕಥಾ ಸಂಕಲನ, ‘ಆಡು ಕಾಯೋ ಹುಡುಗನ ದಿನಚರಿ’ (2011) ಅನುಭವ ಕಥನ, ‘ಕುದರಿ ಮಾಸ್ತರ’ (2012) ಕಥಾ ಸಂಕಲನ, ‘ರೊಟ್ಟಿ ಮುಟಗಿ’ (2016) ಕಾದಂಬರಿ, ‘ಮಲ್ಲಿಗೆ ಹೂವಿನ ಸಖ’ (2018) ಕಥಾ ಸಂಕಲನ ಇವರ ಪ್ರಕಟಿತ ಕೃತಿಗಳು. ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ’, ‘ದ.ರಾ.ಬೇಂದ್ರೆ ಗ್ರಂಥ ಬಹುಮಾನ’, ‘ಅರಳು ಪ್ರಶಸ್ತಿ’, ಪ್ರಜಾವಾಣಿ, ಕನ್ನಡಪ್ರಭ ದೀಪಾವಳಿ ಕಥಾಸ್ಪರ್ಧೆ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ವಿಜಯ ಕರ್ನಾಟಕದಲ್ಲಿ ಎಂಟು ವರ್ಷ ಉಪಸಂಪಾದಕನಾಗಿ ಕಾರ್ಯನಿರ್ವಹಣೆ, ಸದ್ಯ ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ.