ಬೆಂಗಳೂರು : ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿರುವ ‘ಮಕ್ಕಳ ರಂಗ ಹಬ್ಬ’ ದಿನಾಂಕ 20 ಮೇ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ನಾಟಕ, ರಂಗಗೀತೆ, ಕುಣಿತ ಹೀಗೆ ದಿನಪೂರ್ತಿ ಮಕ್ಕಳ ಕಲರವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ ನಾಟಕ ಪುಣ್ಯಕೋಟಿ, ಜಾನಪದ ಗೀತೆಗಳು. ಪರಿಸರ ಗೀತೆಗಳ ಗಾಯನ ನೃತ್ಯ ಮತ್ತು ಗೀತೆ ಗಾಯನ ಪ್ರಸ್ತುತಗೊಳ್ಳಲಿವೆ.
ಈ ಸಮಾರಂಭವನ್ನು ಪ್ರಸಿದ್ಧ ನಟಿ ಡಾ. ಗಿರಿಜಾ ಲೋಕೇಶ್ ಇವರು ಉದ್ಘಾಟನೆಗೊಳಿಸಲಿರುವರು. ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರ ತಂಡದವರಿಂದ ಕೋಟಿಗಾನಹಳ್ಳಿ ಕಾಳಿದಾಸ ಕೆ.ವಿ. ರಂಗರೂಪ ಮತ್ತು ಭಾನುಪ್ರಕಾಶ್ ಎಸ್.ವಿ. ನಿರ್ದೇಶನದಲ್ಲಿ ‘ಹೊಸ್ಬಾಬು’ ನಾಟಕ, ಉತ್ತರ ಕನ್ನಡದ ದೇವರಕಲ್ಲಳ್ಳಿ ಸಿದ್ದಿ ಟ್ರಸ್ಟ್ (ರಿ.) ತಂಡದವರಿಂದ ಚನ್ನಕೇಶವ ಜಿ. ರಚನೆಯ ಗಿರಿಜಾ ಸಿದ್ದಿ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಕಾಡಿನಲ್ಲಿ ಕಥೆ’ ನಾಟಕ, ಅಭಯಾಶ್ರಮ ವಾತ್ಸಲ್ಯ ಮಕ್ಕಳ ಮಂದಿರ ತಂಡದವರಿಂದ ಡಾ. ಮನು ಬಳಿಗಾರ್ ರಚನೆ ಮತ್ತು ಕೆ.ಎಸ್.ಡಿ.ಎಲ್.ಚಂದ್ರು ನಿರ್ದೇಶನದಲ್ಲಿ ‘ಮೈಲಾರ ಮಹಾದೇವ’ ನಾಟಕ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಮಿತಿಯ ವತಿಯಿಂದ ನಡೆದ ಮಕ್ಕಳ ಬೇಸಿಗೆ ರಂಗ ತರಬೇತಿಯಲ್ಲಿ ಕಲಿತ ನಾಟಕ ಪ್ರದರ್ಶನಗಳು ನಡೆಯಲಿದೆ. ಚಂದ್ರಶೇಖರ್ ಕಂಬಾರ ರಚನೆಯ ಮಲ್ಲಿಕಾರ್ಜುನ ನಿರ್ದೇಶನದಲ್ಲಿ ‘ಸಂಪಿಗೆ ರಾಣಿ’ ನಾಟಕ, ನಾಗರಾಜ ಕೋಟೆ ರಚನೆಯ ಸತೀಶ್ ಕುಮಾರ ದೊಡ್ಡಮನಿ ನಿರ್ದೇಶನದಲ್ಲಿ ‘ತಾಯಿಯ ಕಣ್ಣು’ ನಾಟಕ, ಕೆ.ಟಿ.ಗಟ್ಟಿ ರಚನೆಯ ಸೋನುಕುಮಾರ್ ಎಸ್. ನಿರ್ದೇಶನದಲ್ಲಿ ‘ಕತ್ತೆ ತಂದ ಭಾಗ್ಯ’ ನಾಟಕ, ಉದಯಕುಮಾರ ಡಿ. ರಚನೆಯ ರಾಜೇಸಾಬ ನಿರ್ದೇಶನದಲ್ಲಿ ‘ಅರ್ಧಾಥ’ ನಾಟಕ ಮಕ್ಕಳಿಂದ ಪ್ರದರ್ಶನಗೊಳ್ಳಲಿವೆ.