ಧಾರವಾಡ : ಮನೋಹರ ಗ್ರಂಥಮಾಲಾ ಧಾರವಾಡದ ಸಂಪಾದಕ, ವ್ಯವಸ್ಥಾಪಕರು, ನಿವೃತ್ತ ಆಂಗ್ಲ ಪ್ರಾಧ್ಯಾಪಕ ಮತ್ತು ಬರಹಗಾರ ಡಾ. ರಮಾಕಾಂತ ಜೋಶಿಯವರು ದಿನಾಂಕ 17 ಮೇ 2025ರಂದು ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮನೋಹರ ಗ್ರಂಥಮಾಲಾ ಸ್ಥಾಪಕರಾದ ಶ್ರೀ ಜಿ.ಬಿ. ಜೋಶಿಯವರ ಮಗನಾದ ಡಾ. ರಮಾಕಾಂತ ಜೋಶಿಯವರು ಗುಜರಾತಿನ ಆನಂದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಪಿ.ಎಚ್.ಡಿ. ಪದವಿ ಪಡೆದ ರಮಾಕಾಂತ ಜೋಶಿಯವರು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. ಹಲವಾರು ಗ್ರಂಥಗಳ ಸಂಪಾದನೆ ಮಾಡಿದ್ದರು ಮತ್ತು ಅನುವಾದ ಕಾರ್ಯವನ್ನು ಸಹ ಮಾಡಿದ್ದರು. ದೀನಾನಾಥ ಮಲ್ಹೋತ್ರಾ ಅವರು ಇಂಗ್ಲೀಷಿನಲ್ಲಿ ಬರೆದ BOOK PUBLISHING ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಪುಸ್ತಕ ಪ್ರಕಾಶನ ಪ್ರಪಂಚದಲ್ಲಿ ಅದೊಂದು ಅತ್ಯಂತ ಪ್ರಮುಖ ಕೃತಿ ಎನಿಸಿದೆ.
1993 ಡಿಸೆಂಬರ್ 26ರಂದು ಜಿ.ಬಿ. ಜೋಶಿಯವರು ನಿಧನರಾದ ನಂತರ ಮನೋಹರ ಗ್ರಂಥಮಾಲಾದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಯಾಗಿ ನಡೆಸಿದರು. ಅನೇಕ ಪ್ರಶಸ್ತಿಗಳಿಗೆ, ಮಾನ ಸನ್ಮಾನಗಳಿಗೆ ಭಾಜನರಾಗಿದ್ದ ಇವರು ದಿಲ್ಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ ‘ವಿಶಿಷ್ಟ ಪ್ರಕಾಶಕ ಪ್ರಶಸ್ತಿ’, ‘ಆಳ್ವಾ ನುಡಿಸಿರಿ’ ಪ್ರಶಸ್ತಿ, ‘ಕನಕದಾಸ ಪ್ರಶಸ್ತಿ’, ಕನ್ನಡ ಪುಸ್ತಕ ಪ್ರಾಧಿಕಾರದ 2007ರ ‘ಅತ್ಯುತ್ತಮ ಪ್ರಕಾಶನ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ’ ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.