Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ
    Article

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಭಾಷೆ, ಭಾಷಾ ಸಮಸ್ಯೆಗಳು, ದೇಶದ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳ ಕುರಿತು ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿರುವ ಅಜಕ್ಕಳ ಗಿರೀಶ ಭಟ್ ಕನ್ನಡದ ಬಹು ಮುಖ್ಯ ಲೇಖಕರು. ಇವರು ಇತ್ತೀಚೆಗೆ ಹೊರತಂದಿರುವ ‘ವ್ಯಥೆ ಕಥೆ’ ಕನ್ನಡಕ್ಕೆ ವಿಶಿಷ್ಟವಾದ ಒಂದು ಕಿರು ಕಾದಂಬರಿ ‘Imagined Reality’ ಅನ್ನುವ ಪ್ರಕಾರದಡಿ ಬರುವಂತಹ ಒಂದು ಕೃತಿ ಎಂದು ಅವರೇ ಹೇಳಿಕೊಂಡಿದ್ದಾರೆ. ಕಟ್ಟುಕಥೆ ಮತ್ತು ಕಲ್ಪನೆಗಳ ಸಹಾಯದಿಂದ ನಿಜವಲ್ಲದೆ ಇರುವ ಒಂದು ಭೌತಿಕ ಜಗತ್ತನ್ನು ಕಟ್ಟುವ ಮತ್ತು ಹಾಗೆ ಕಟ್ಟಿದ ವಿಚಾರಗಳು ನಿಜವಾಗಬಹುದಾದ ಸಾಧ್ಯತೆ ಇರುವಂತಹ ಮತ್ತು ಕಥೆಯ ಸಂದರ್ಭದಲ್ಲಿ ವಿಶ್ವಸನೀಯವಾಗಿರಬಹುದಾಗಿದ್ದರೆ ಅದು ಈ ತಂತ್ರಕ್ಕೆ ಸರಿ ಹೊಂದುತ್ತದೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಲೋಪದೋಷಗಳ ಕುರಿತಾದ ಈ ಕೃತಿ ಓದುಗನ ಕಣ್ಣು ತೆರೆಸುತ್ತದೆ ಮಾತ್ರವಲ್ಲದೆ ಚಿಂತನೆಗೆ ಹಚ್ಚುತ್ತದೆ.

    ಎಲ್ಲಾ ಕಾದಂಬರಿಗಳಂತೆ ಸಾಮಾನ್ಯ ರೀತಿಯಲ್ಲಿ ಕಥಾನಾಯಕನ ಉತ್ತಮ ಪುರುಷ ನಿರೂಪಣೆಯೊಂದಿಗೆ ಆರಂಭವಾಗುವ ಕಾದಂಬರಿಯು ಆತನ ಪ್ರಸ್ತುತ ಪರಿಸ್ಥಿತಿಯ ಕುರಿತು ಒಂದಷ್ಟು ವಿಚಾರಗಳನ್ನು ಹೇಳುತ್ತದೆ. ಆತ ರೆವೆನ್ಯೂ ಇಲಾಖೆಯಲ್ಲಿ ಕೆಲಸ ಮಾಡಿ ತಾಶೀಲ್ದಾರನಾಗಿ ನಿವೃತ್ತಿ ಹೊಂದಿದವನು. ಯಾವುದೇ ಹೆಚ್ಚುವರಿ ಹಣ ಸಂಪಾದನೆ ಮಾಡಿಲ್ಲ. ಹುಟ್ಟೂರಿನಲ್ಲಿ ಅಪ್ಪ ಕೊಡಿಸಿದ ಸ್ವಲ್ಪ ಭೂಮಿಯಲ್ಲಿ ಮನೆ ಕಟ್ಟಿಸಿ ಕೃಷಿ ಮಾಡಿಕೊಂಡು ಕಾಲ ಕಳೆಯೋಣ ಅಂದುಕೊಂಡವನು. ಅವನ ಹೆಂಡತಿಗೂ ತರಕಾರಿ ಕೃಷಿ ಮಾಡುವ ಆಸೆ. ಆದರೆ ಅವರ ಮುಂದೆ ಧುತ್ತೆಂದು ಏಳುವ ಸಮಸ್ಯೆ ಪಕ್ಕದ ಮನೆಯವನು ಆತನ ಆಸ್ತಿಯ ಬಹು ದೊಡ್ಡ ಭಾಗವೊಂದನ್ನು ಒಳಗೆ ಹಾಕಿಕೊಂಡು ಬೇಲಿ ಹಾಕಿದ್ದು. ಕೇಸ್ ಮಾಡಿ ಕೋರ್ಟಿಗೆ ಹೋಗಿ ಎಷ್ಟು ಕಾಲವಾದರೂ ಅದು ಇತ್ಯರ್ಥವಾಗುವುದಿಲ್ಲ. ಇದರೆಡೆಯಲ್ಲಿ ಆತ ತಾಶೀಲ್ದಾರನಾಗಿದ್ದಾಗ ಹುಟ್ಟಿಕೊಂಡ ಹತ್ತಾರು ವ್ಯಾಜ್ಯಗಳಲ್ಲಿ ಸಾಕ್ಷಿ ಹೇಳಲು ಅವನು ಪದೇ ಪದೇ ಬೆಂಗಳೂರಿಗೆ ಹೋಗಬೇಕಾಗಿದೆ. ವರ್ಷಗಟ್ಟಲೆಯಿಂದ ಅವೂ ಕೋರ್ಟಿನಲ್ಲಿ ಕೊಳೆಯುತ್ತಿವೆ. ಅಲ್ಲದೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಮಾತಿಗೆ ಸಿಕ್ಕುವ ಹಲವಾರು ಮಂದಿ ಆಸ್ತಿ ತಗಾದೆ, ಹೆಣ್ಣುಮಕ್ಕಳ ಶೀಲ ಹರಣವೆಂಬ ಸುಳ್ಳು ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡು ನರಳುವುದರ ಬಗ್ಗೆ, ಬೆಂಗಳೂರಿನಂತಹ ನಗರದಲ್ಲಿ ಬಾಡಿಗೆದಾರರು ಮಾಲಿಕರಿಗೆ ಕೊಡುವ ಉಪಟಳ ಹಾಗೂ ಅವರ ಕೋರ್ಟು ಕೇಸುಗಳ ಬಗ್ಗೆ ಕೇಳುತ್ತಾನೆ. ಈ ಎಲ್ಲ ವರ್ಷಗಟ್ಟಲೆ ಪೆಂಡಿಂಗ್ ಕೇಸುಗಳು ಆತನಲ್ಲಿ ಹುಟ್ಟಿಸುವ ಆತಂಕ, ಗೊಂದಲ, ನೋವು, ಭಯಗಳು ಯಾವ ಮಟ್ಟಕ್ಕೆ ಹೋಗುತ್ತವೆಂದರೆ ನಿದ್ದೆಯಲ್ಲಿ ಕನವರಿಸುವಷ್ಟು..! ದೇಶದ ಈ ದುಸ್ಥಿತಿಗೆ ಏನಾದರೊಂದು ಪರಿಹಾರ ಹುಡುಕಿಕೊಳ್ಳಬೇಕೆಂದು ಕಥಾನಾಯಕ ಅಲೋಚಿಸುವಲ್ಲಿಂದ ಕಾದಂಬರಿ ‘ಕಲ್ಪಿತ ವಾಸ್ತವ’ದ ಶೈಲಿಗೆ ಹೊರಳುತ್ತದೆ.

    ಕಥಾನಾಯಕ ಸರಕಾರದ ಪೋರ್ಟಲಿನಲ್ಲಿ ದೇಶದ ಕೋರ್ಟುಗಳಲ್ಲಿ ಕೊಳೆಯುತ್ತಿರುವ ಕೇಸುಗಳು ದೇಶದ ಪ್ರಗತಿಯನ್ನು ಯಾವ ರೀತಿ ಕುಂಠಿಸುತ್ತಿವೆ ಎಂಬುದರ ಬಗ್ಗೆ ಬರೆದು ಹಾಕಿದಾಗ ಮಹಾಮಾತ್ಯರು (ಪ್ರಧಾನ ಮಂತ್ರಿಗಳು) ಸ್ವತಃ ಆತನನ್ನು ತಮ್ಮಲ್ಲಿಗೆ ಕರೆಸಲು ವ್ಯವಸ್ಥೆ ಮಾಡಿ ಒಂದು ಸಂದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ತುಂಬಾ ದೀರ್ಘ ಸಮಯ ತೆಗೆದುಕೊಳ್ಳುವ ಈ ಸಂದರ್ಶನದಲ್ಲಿ ಕಥಾನಾಯಕ ದೇಶದ ನ್ಯಾಯಾಂಗ ವ್ಯವಸ್ಥೆಯ ದುರವಸ್ಥೆ ಬಗ್ಗೆ ತನ್ನ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಾನೆ.

    ‘ಪ್ರಜೆಗಳಿಗೆ ನ್ಯಾಯ ಸಿಗುವುದು ತಡವಾದರೆ ಎಲ್ಲದರ ಮೇಲೂ ಹೊಡೆತ ಬೀಳುತ್ತದೆ. ಅಭಿವೃದ್ಧಿ ಆಗುವುದು ಹಾಗಿರಲಿ, ಜನರಿಗೆ ನ್ಯಾಯ ಪಡೆದ ನೆಮ್ಮದಿ ಇಲ್ಲದಿದ್ದರೆ ಅಭಿವೃದ್ಧಿ ಅನ್ನುವ ಪರಿಕಲ್ಪನೆಗೆ ಅರ್ಥವೇ ಇರುವುದಿಲ್ಲ. ನಿಜ. ಇದು ನಿಮ್ಮ ಗಮನದಲ್ಲಿದೆ ಅಂತ ನನಗೆ ಗೊತ್ತಿದೆ. ಸಾಕಷ್ಟು ಪ್ರಯತ್ನ ನಿಮ್ಮಿಂದಲೂ ಆಗಿದೆ. ಮೊದಲಿಗಿಂತ ಪರಿಸ್ಥಿತಿ ಸ್ವಲ್ಪ ಉತ್ತಮ ಅಂತ ಎಲ್ಲರೂ ಹೇಳುತ್ತಾರೆ. ಆದರೆ ಈಗ ಆಗಿರುವುದು ಏನೇನೂ ಸಾಲದು. ಇಡೀ ದೇಶದಲ್ಲಿ ಎಲ್ಲ ಹಂತಗಳ ನ್ಯಾಯಾಲಯಗಳನ್ನೂ ಪರಿಗಣಿಸಿದರೆ ನಾಲ್ಕೂವರೆ ಕೋಟಿಯಷ್ಟು ಕೇಸುಗಳು ಪೆಂಡಿಂಗ್ ಇವೆಯಂತೆ. ಪ್ರಿಟ್ರಯಲ್, ಪ್ರೀಲಿಟಿಗೇಶನ್ ಕೇಸುಗಳು 12 ಲಕ್ಷದ ಹತ್ತಿರ ಇವೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಕೇಸುಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥಗೊಳಿಸಬೇಕು ಅನ್ನುವ ನಿರ್ದೇಶನವೇ ಇದ್ದಾಗ್ಯೂ ಅಂತಹ 30 ಲಕ್ಷ ಕೇಸುಗಳು ಬಾಕಿಯಿವೆ. ಅಂತಹ ಹಿರಿಯ ನಾಗರಿಕರು ಇನ್ನೆಷ್ಟು ವರ್ಷ ಕಾಯಬೇಕು ? ಅಂತಿಮ ತೀರ್ಪು ಅವರ ಪರವಾಗಿಯೇ ಇದ್ದರೂ ಅಂತಹ ತೀರ್ಪು ಬರುವಾಗ ಅವರ ಕಾಯವೇ ಅಳಿದಿದ್ದರೆ ಏನು ಪ್ರಯೋಜನ ? ಮಹಿಳೆಯರು ದಾಖಲಿಸಿದ 37 ಲಕ್ಷ ಕೇಸುಗಳಿವೆ….’ (ಪುಟ 36) ಮಹಾಮಾತ್ಯರು ಆತನ ಮಾತುಗಳನ್ನು ಶ್ರದ್ಧೆಯಿಂದ ಅಲಿಸುತ್ತಾರೆ. ವ್ಯವಸ್ಥೆಯನ್ನು ಸರಿಪಡಿಸಲು ತಮ್ಮಿಂದಾದ ಪ್ರಯತ್ನ ಮಾಡುವೆನೆಂದು ಭರವಸೆ ಕೊಡುತ್ತಾರೆ.

    ಈ ಒಂದು ಕನಸಿನ ನಂತರ ಎಚ್ಚರವಾಗಿ ಕಥಾನಿರೂಪಕ ಹೆಂಡತಿಯ ಬಳಿ ಏನೋ ಸ್ವಲ್ಪ ಮಾತನಾಡಿ ಮತ್ತೆ ನಿದ್ದೆಗೆ ಹೊರಳುತ್ತಾನೆ. ಪುನಃ ಆತ ಕಾಣುವ ಕನಸಿನಲ್ಲಿ ಆತನ ಆಸ್ತಿ ಕಬಳಿಸಿದ ನೆರೆಮನೆಯವನ ಮೇಲೆ ಕಥಾನಾಯಕನೇ ಏನೇನೋ ಉಪಾಯ ಹೂಡಿ ವಾಮಾಚಾರದ ಪ್ರಯೋಗದ ನಾಟಕವಾಡಿದ ನಂತರ ಮರುದಿನವೇ ಆತನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವಾಸ್ತವ ಸಂಗತಿಗಳೊಂದಿಗೆ ಆರಂಭವಾದ ಕಾದಂಬರಿಯ ಕೊನೆಯ ತನಕ ಕನಸು ಮುಂದುವರೆಯುತ್ತದೆ.

    ಈ ಕಾದಂಬರಿಯಲ್ಲಿ ಬಳಸಿದ ತಂತ್ರ ಕಲ್ಪನೆ ಅನ್ನುವುದಕ್ಕಿಂತ ಕನಸು ಅಂತಲೇ ಹೇಳಬಹುದು. ಯಾಕೆಂದರೆ ವಾಸ್ತವದ ಚಿತ್ರಣದ ಕೊನೆಗೆ ಕಥಾನಾಯಕ ನಿದ್ರೆ ಮಾಡಲು ಹೋಗುತ್ತಾನೆ.‌ ಕನಸನ್ನು ಇಷ್ಟು ವ್ಯವಸ್ಥಿತವಾಗಿ ಹೇಳಲುಬಾರದು. ಇದು ಕಲ್ಪನೆಯೆಂದು ಒಪ್ಪಿಕೊಳ್ಳಲೂ ಸಾಧ್ಯವಿಲ್ಲ. ಅಲ್ಲದೆ ಕಲ್ಪನೆ ಮತ್ತು ಕನಸುಗಳ ನಡುವೆ ವ್ಯತ್ಯಾಸವಿದೆ. ಆದ್ದರಿಂದ ವಾಸ್ತವದಿಂದ ಕಲ್ಪನೆಗೆ ಜಾರುವ ಕ್ಷಣವನ್ನು ತುಸು ಭಿನ್ನವಾಗಿ ಕಟ್ಟಬಹುದಿತ್ತೇನೋ ? ಏನಿದ್ದರೂ ಅಜಕ್ಕಳ ಅವರು ತಾವು ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ನಿಖರವಾಗಿ ನೀಡುವ ಅಂಕಿ-ಅಂಶಗಳ ಹಿಂದೆ ಬಹಳಷ್ಟು ಅಧ್ಯಯನವಿದೆ. ಅಲ್ಲದೆ ಆರಂಭದಲ್ಲಿ ವಾಸ್ತವದಲ್ಲಿ ಇವೆ ಎಂದು ಅವರು ಉಲ್ಲೇಖಿಸುವ ಹತ್ತಾರು ಕೇಸುಗಳಿಗೆ ಅನಂತರ ಬರುವ ಕಲ್ಪನೆಯ (ಕನಸಿನೊಳಗಣ) ಕೇಸುಗಳು ಪೂರಕವಾಗಿವೆ. ಅಜಕ್ಜಳ ಅವರ ಭಾಷೆಯ ಬಳಕೆ ಮತ್ತು ನಿರೂಪಣಾಶೈಲಿಗಳು ಕೃತಿಯನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಕನ್ನಡಕ್ಕೆ ಒಂದು ಹೊಸಪ್ರಕಾರದ ಪರಿಚಯವೂ ಆಗುತ್ತದೆ.

    ಪುಸ್ತಕ ವಿಮರ್ಶಕರು : ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Article‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20
    Next Article ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ತಾಳಮದ್ದಳೆ ಜ್ಞಾನಯಜ್ಞ’ | ಮೇ 26

    May 24, 2025

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.