ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕುಟ್ಟಿ ಹಾಗೂ ತಿಮ್ಮಕ್ಕ ಇವರ ಮಗನಾಗಿ 29.03.1996 ರಂದು ಸುಜನ್ ಕುಮಾರ್ ಅಳಿಕೆ ಅವರ ಜನನ.
ವಿದ್ಯಾಭ್ಯಾಸ:
ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಆರ್ಲಪದವಿನಲ್ಲಿ ಪ್ರಾಥಮಿಕ ಶಿಕ್ಷಣ.
ಸುಬೋಧ ಹೈ ಸ್ಕೂಲ್ ಆರ್ಲಪದವಿನಲ್ಲಿ ಪ್ರೌಢ ಶಿಕ್ಷಣ.
ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿಯಲ್ಲಿ ಪಿಯುಸಿ ಶಿಕ್ಷಣ ಹಾಗೂ ಬಿ. ಕಾಮ್ ಪದವಿಯನ್ನು ಪಡೆದಿರುತ್ತಾರೆ. ವಿದ್ವಾನ್ ವಸಂತ್ ಕುಮಾರ್ ಗೋಸಾಡ ಸಂಗೀತ ಗುರುಗಳು. ಶ್ರೀಯುತ ಬಟ್ಟಮೂಲೆ ಲಕ್ಷ್ಮೀ ನಾರಾಯಣ ಭಟ್ ಇವರ ಯಕ್ಷಗಾನ ಗುರುಗಳು. ಕಳೆದ 5 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ ಸುಜನ್.
ಯಕ್ಷಗಾನಕ್ಕೆ ಬರಲು ಪ್ರೇರಣೆ :
ನನ್ನ ವಿದ್ಯಾಭ್ಯಾಸವೆಲ್ಲ ದೊಡ್ಡಮ್ಮನ ಊರಾದ ಪಾಣಾಜೆ ಆರ್ಲಪದವು ಎಂಬಲ್ಲಿ. ಅಲ್ಲಿಯ ಪರಿಸರವೇ ಯಕ್ಷಮಯವಾಗಿತ್ತು. ಅಲ್ಲಿಯ ಜನರು ಯಕ್ಷಗಾನ ಹವ್ಯಾಸಿ ಕಲಾವಿದರಾಗಿದ್ದು, ಸಂಘವನ್ನು ನಡೆಸುತ್ತಾ ಮಕ್ಕಳಿಗೆ ಉಚಿತ ನಾಟ್ಯವನ್ನು ಕಲಿಸಿಕೊಡುತ್ತಿದ್ದರು. ನನ್ನ ಸಂಬಂಧಿಕರ ಪೈಕಿ ಹಲವಾರು ಮಂದಿ ಯಕ್ಷಪ್ರಿಯರೇ. ಅವರ ಬಾಯಿಮಾತೋ ಏನೋ “ನೀನು ಆಟಕ್ಕೆ ಸೇರಬೇಕು” ಎಂದು ಆಡುತ್ತಿದ್ದರು. ದೊಡ್ಡಮ್ಮ, ಅಕ್ಕಂದಿರು, ದೊಡ್ಡಪ್ಪ ಅವರ ಪರಿಶ್ರಮ ಜೊತೆಗೆ ನನ್ನ ಸ್ನೇಹಿತರೂ ಸಹಪಾಠಿಗಳಾದ ಪವನ್ ಕುಮಾರ್, ಚೇತನ್ ಕುಮಾರ್ ನನ್ನನ್ನು ತೊಡಗಿಸಿಕೊಂಡ ರೀತಿ ಮೆಚ್ಚುವಂತದ್ದು. ಯಕ್ಷಗಾನದ ಯಾವುದೇ ಮೇಳ ಬಂದರೂ ಬೆಳಗ್ಗೆ ಅವರ ಜೊತೆ ನಾನೂ ಭಾಗಿ (ಚೌಕಿಮನೆ ನಿರ್ಮಾಣ, ರಂಗಸ್ಥಳ ನಿರ್ಮಾಣ ಕಾರ್ಯ). ರಾತ್ರಿ ಪೂರ್ತಿ ನಿದ್ದೆಗೆಟ್ಟು ಆಟ ನೋಡಿ ಮರುದಿವಸ ಶಾಲೆಗೆ ಹೋಗಿ ಬೈಗುಳ ತಿಂದದ್ದು ಉಂಟು. ನಮ್ಮ ಶಾಲೆಯಲ್ಲಿ ಯಕ್ಷಗಾನಕ್ಕೆ ಸಿಗುವ ಮನ್ನಣೆ ಬೇರೆಯೇ ಇತ್ತು. ಸಣ್ಣವರಿದ್ದಾಗ ಬೇಸಿಗೆ ರಜೆಯಲ್ಲಿ ಮೇಳದ ರಂಗಸ್ಥಳ, ಚೌಕಿಯ ಹಾಗೆ ನಾವೂ ನಿರ್ಮಿಸಿ ವೇಷಭೂಷಣ ಧರಿಸಿ ಆಟವಾಡಿದ್ದು ಮರೆಯಲಾರದ ನೆನಪು.
ನೆಚ್ಚಿನ ಪ್ರಸಂಗಗಳು:
ದಕ್ಷಾಧ್ವರ, ಶನೀಶ್ವರ ಮಹಾತ್ಮೆ, ನಳ ದಮಯಂತಿ, ಸತ್ಯ ಹರಿಶ್ಚಂದ್ರ, ಮೈರಾವಣ ಕಾಳಗ, ಅಗ್ರಪೂಜೆ, ಅಭಿಮನ್ಯು ಕಾಳಗ, ಕರ್ಣಾವಸಾನ ಇತ್ಯಾದಿ.
ನೆಚ್ಚಿನ ರಾಗಗಳು:
ಜೋಗ್, ಸಾಮ, ಹಿಂದೋಳ, ಸಿಂಧೂ ಭೈರವಿ, ಬಲಿಪ ಶೈಲಿ ಕಲ್ಯಾಣಿ, ಬಲಿಪ ಶೈಲಿ ಮೋಹನ, ಶುದ್ಧಸಾವೇರಿ, ಹಂಸಧ್ವನಿ, ಹವಾರ್ ಕಲ್ಯಾಣಿ.
ನೆಚ್ಚಿನ ಭಾಗವತರು:
ಶ್ರೀಯುತ ದಿನೇಶ್ ಅಮ್ಮಣ್ಣಾಯರು ಹಾಗೂ ರವಿಚಂದ್ರ ಕನ್ನಡಿಕಟ್ಟೆ.
ಪದ್ಯಾಣ ಶಂಕರನಾರಾಯಣ ಭಟ್ ನೆಚ್ಚಿನ ಚೆಂಡೆ ಹಾಗೂ ಮದ್ದಲೆವಾದಕರು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:
ರಂಗಕ್ಕೆ ಹೋಗುವ ಮೊದಲು ಮೇಳದ ಭಾಗವತರಾದ ಪದ್ಯಾಣ ಗೋವಿಂದ ಭಟ್, ವಿಶ್ವೇಶ್ವರ ಭಟ್ ಸುಣ್ಣಂಬಳ, ರವಿರಾಜ್ ಭಟ್ ಪನೆಯಾಲ ಅವರ ಬಳಿ ಪ್ರಸಂಗದ ಬಗ್ಗೆ ಚರ್ಚಿಸಿ ತಯಾರಿ ಮಾಡಿಕೊಳ್ಳುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿಗತಿ:
ಯಕ್ಷಗಾನ ಪಾತ್ರಕ್ಕೆ ಜೀವ ಕೊಡುವ ಮಹಾನ್ ಕಲೆ. ಪಾತ್ರಕ್ಕೆ ಜೀವ ಕೊಡಬೇಕೇ ಹೊರತು, ಮುಖವಾಡ ಧರಿಸಿ ಸಿಕ್ಕ ವೇಷಗಳ ಧಾರಣೆ ಮಾಡಿಕೊಂಡು, ಯಕ್ಷಗಾನವನ್ನು ಅಲ್ಲಗಳೆಯುವುದು ತಪ್ಪು. ಅವನ ಆಂಗಿಕ ಅಭಿನಯ ಹಾಗೂ ಬಣ್ಣಗಾರಿಕೆಯಿಂದಲೇ ಪಾತ್ರ ಯಾವುದೆಂದು ತಿಳಿಯಬೇಕು ಹೊರತು, ಆರ್ಟಿಫಿಷಿಯಲ್ ಕಾಸ್ಟ್ಯೂಮ್ ಧರಿಸಿ ಬಂದು ಮಾಡುವುದು ಅಪರಾಧ. ಯಕ್ಷಗಾನವು ವ್ಯಾಪಾರೀಕರಣವಾಗಬಾರದು. ಸಿಕ್ಕ ಸಿಕ್ಕ ಸಿನಿಮಾ ಹಾಡುಗಳನ್ನು ತಂದು ಯಕ್ಷಗಾನದಲ್ಲಿ ಜೋಡಿಸುವುದು ತಪ್ಪು.
ಸಿಡಿಮದ್ದುಗಳ ಬಳಕೆಯನ್ನು ಕಡಿಮೆಗೊಳಿಸಿ, ಆದಷ್ಟು ಚೌಕಿ ಹಾಗೂ ರಂಗಸ್ಥಳದ ದೂರದ ಜಾಗದಲ್ಲಿ ಬಳಸಬೇಕೆಂಬುದು ನನ್ನ ವಿನಂತಿ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಯಕ್ಷಗಾನಕ್ಕೆ ಖಾಯಂ ಪ್ರೇಕ್ಷಕರು ಇದ್ದಾರೆ. ವಿಮರ್ಶಕ ಪ್ರೇಕ್ಷಕರೂ ಇದ್ದಾರೆ. ಒಳ್ಳೆಯ ವಿಚಾರ ಬಂದರೆ ಅದನ್ನು ಸ್ವೀಕರಿಸಿಕೊಂಡು ಹೋಗುವುದು ಉತ್ತಮ. ವಿಮರ್ಶೆ ಯಾಕೆ? ಎಂಬ ವಿಷಯವನ್ನು ಕಲಾವಿದರಾದ ನಾವು ಮೊದಲು ತಿಳಿಯಬೇಕು. “ಕಾಲಕ್ಕೆ ತಕ್ಕ ಕೋಲ” ಎಂಬಂತೆ ನಡೆಯುವುದು ಉತ್ತಮ, ಹಾಗಂತ ಅದು ಪೂರ್ತಿ ಕೋಲವಾಗಬಾರದು. ಪ್ರೇಕ್ಷಕರನ್ನು ಗೌರವಿಸಬೇಕು, ಅದೇ ರೀತಿ ಪ್ರೇಕ್ಷಕರೂ ಕೂಡ ಕಲಾವಿದರನ್ನು ಗೌರವಿಸಬೇಕು.
ಕಲಾಮಾತೆಯ ಸೇವೆ ಮುಂದುವರೆಸುತ್ತಾ ಶ್ರೀಯುತ ಪಟ್ಲರ ಹಾಗೆ ನಾಲ್ಕು ಜನರಿಗೆ ಕೈಲಾದಷ್ಟು ಸಹಾಯ ಮಾಡಿ ಬದುಕಬೇಕೆಂಬ ಆಸೆ. ಅದಕ್ಕಾಗಿ ಪರಿಶ್ರಮ, ಉದ್ಯೋಗವನ್ನು ಮುಂದುವರೆಸುತ್ತಾ ಕಲಾ ಮಾತೆಯ ಸೇವೆ ಗೈಯಬೇಕೆಂದು ಮನದ ಬಯಕೆ ಎಂದು ಹೇಳುತ್ತಾರೆ ಸುಜನ್ ಕುಮಾರ್ ಅಳಿಕೆ.
ಭಜನೆ, ಬಿಡುವಿನ ಸಂದರ್ಭ ಹಾಡುವುದು, ಹೊಸ ಹೊಸ ವಿಚಾರಗಳನ್ನು ಸಂಗ್ರಹಿಸಿ ಬರೆಯುವುದು, ಕಸದಿಂದ ರಸ (ಬಿಸಾಡುವ ವಸ್ತುವಿನಿಂದ ಕೆಲವು ಕೌಶಲಗಳ ತಯಾರಿ) ಇವರ ಹವ್ಯಾಸಗಳು.
“ಬಂಟ್ವಾಳ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದಲ್ಲಿ ಶಾಲು ಹಾಕಿ ಸನ್ಮಾನಿಸಿದ್ದಾರೆ”.
(ಈ ಹಿಂದೆ ಸನ್ಮಾನಗಳನ್ನು ತಿರಸ್ಕರಿಸಿದ್ದೇನೆ) ಹಾಗೂ ಅನೇಕ ಸ್ಮರಣಿಕೆಗಳು ದೊರೆತಿವೆ.
ಪದ್ಯಾಣ ಗೋವಿಂದ ಭಟ್ ಹಾಗೂ ರಮೇಶ್ ಭಟ್ ಪುತ್ತೂರು ಭಾಗವತರು ನನ್ನೆಲ್ಲಾ ವೈಯಕ್ತಿಕ ಸಮಸ್ಯೆಯಲ್ಲೂ ಸ್ಪಂದಿಸಿದ್ದಾರೆ, ಸ್ಪಂದಿಸುತ್ತಿದ್ದಾರೆ. ಕೆಲವು ಪದ್ಯವನ್ನು ಹೀಗೆಯೇ ಹೇಳಬೇಕೆಂದು ಹೇಳಿಕೊಟ್ಟಿದ್ದಾರೆ. ಸದಾ ಹಸನ್ಮುಖಿ, ಹಾಸ್ಯ ಭರಿತ ಮಾತು, ಮಗುವಿನ ಮನಸ್ಸು.
ವಿಶ್ವೇಶ್ವರ ಭಟ್ (ಮ್ಯಾನೇಜರ್) ಅವರ ಬಗ್ಗೆ ನನ್ನಲ್ಲಿ ಹೇಳಲು ಮಾತೇ ಇಲ್ಲ. ಅಷ್ಟು ದೊಡ್ಡವನೂ ಅಲ್ಲ. ಅವರ ವಿದ್ವತ್ತಿಗೆ ನಾನು ಶರಣು.
“ಒಂದು ಸಲ ನಾನು ದಕ್ಷಯಜ್ಞ ಪ್ರಸಂಗದ ಸುಣ್ಣಂಬಳರ ಈಶ್ವರ ಪಾತ್ರಕ್ಕೆ ಪದ್ಯ ಹೇಳಿ ಮರಳಿ ಚೌಕಿಗೆ ಬಂದು ತಪ್ಪಾಯಿತ ಸರ್?” ಎಂದು ಕೇಳಿದಾಗ, “ಇಲ್ಲ, ಮೊದಲ ಬಾರಿಗೆ ಹಾಡುವಾಗ ತಪ್ಪಾಗುವುದು ಸಹಜ, ತೊಂದರೆ ಇಲ್ಲ, ಮುಂದಿನ ಸಲ ಹಾಡುವಾಗ ಸರಿ ಆಗುತ್ತದೆ” ಎಂದು ಧೈರ್ಯ ಹೇಳಿದ್ದು ನನಗೆ ಆಶೀರ್ವಾದವೆ ಸರಿ.
ರವಿರಾಜ್ ಭಟ್ ಪನೆಯಾಲರು ರಂಗದಲ್ಲಿ ಉತ್ತಮ ಪ್ರೋತ್ಸಾಹಕರೂ ಹೌದು, ಹುರಿದುಂಬಿಸುತ್ತಾರೆ.
ಮಳೆಗಾಲದಲ್ಲಿ ಅಂಡಾಲ ದೇವಿಪ್ರಸಾದ್ ಶೆಟ್ಟಿ ಹಾಗೂ ಪುಂಡಿಕಾಯಿ ಗೋಪಾಲ್ ಕೃಷ್ಣ ಭಟ್ ಅವರ ಮನೆಗೆ ಹೋಗಿ ಛಂದಸ್ಸು, ಪ್ರಸಂಗದ ನಡೆ ಹಾಗೂ ಭಾಗವತಿಕೆಯ ಬಗ್ಗೆ ತುಂಬಾ ವಿಷಯ ಕಲಿಯುತ್ತೇನೆ. ಪ್ರದೀಪ್ ಕುಮಾರ್ ಗಟ್ಟಿ, ಮಹೇಶ್ ಸಾಣೂರು, ತಿರುಮಲೇಶ್ವರ ಕುಲಾಲ್, ಗಣೇಶ್ ಪಾಲೆಚ್ಚರ್, ದಿನೇಶ್ ಭಟ್ ಯಲ್ಲಾಪುರ ಇವರು ನೀನು ಭಾಗವತಿಕೆ ಮಾಡು ನಾವು ನಿನ್ನ ಜೊತೆಗೆ ಇದ್ದೇವೆ ಎಂದು ಹೇಳಿ ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಾರೆ. ಇವರಲ್ಲದೆ ಮೇಳದ ಎಲ್ಲಾ ಕಲಾವಿದರೂ ನನ್ನೊಂದಿಗೆ ಪೂರ್ಣ ಬೆಂಬಲಿಗರಾಗಿದ್ದಾರೆ. ಹಿಮ್ಮೇಳ ಮುಮ್ಮೇಳ ಎಲ್ಲರೂ ಸಹಕಾರಿಯಾಗಿದ್ದಾರೆ, ಪ್ರೋತ್ಸಾಹಿಸುತ್ತಾರೆ. ಹೆಸರು ಹೇಳುವಂತಿದ್ದರೆ ಪುಟವೇ ಸಾಲದು. ಈ ನಿಟ್ಟಿನಲ್ಲಿ ಅದಕ್ಕೆ ಎಲ್ಲರನ್ನೂ ನಾನು ಗೌರವಿಸಲೇಬೇಕು. ಅನ್ಯೋನ್ಯತೆ, ಹೊಂದಾಣಿಕೆ ನನಗೆ ಸಿಕ್ಕ ಮಾನ್ಯತೆ.
ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ತಂದೆ, ತಾಯಿ, ಮನೆಯವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಸುಜನ್ ಕುಮಾರ್ ಅಳಿಕೆ.
- ಶ್ರವಣ್ ಕಾರಂತ್ ಕೆ,
ಶಕ್ತಿನಗರ ಮಂಗಳೂರು