13 ಏಪ್ರಿಲ್ 2023, ಮಂಗಳೂರು: ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 09-04-2023 ಭಾನುವಾರದಂದು ನಡೆದ ಕಾರ್ಯಕ್ರಮವನ್ನು ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿಗಳಾದ ನಾಗರಾಜ್ ಶೆಟ್ಟಿ ಮತ್ತು ಶ್ರೀದೇವಿ ಭಜನಾ ಮಂದಿರದ ಸಂತೋಷ್ ಶೆಟ್ಟಿ ಎಲ್ಲರೂ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಆ ಕೂಡಲೇ ಮೂಡುಶೆಡ್ಡೆಯ ಶ್ರೀದೇವಿ ಭಜನಾಮಂದಿರದ ಸದಸ್ಯರಿಂದ ಭಕ್ತಿ ಭಾವವನ್ನು ಜಾಗೃತಗೊಳಿಸುವ ಕುಣಿತ ಭಜನೆಯು ನೆರವೇರಿತು.
ಬಾಲ ವಾಗ್ಮಿ , ಬೆಂಗಳೂರಿನ ಹಾರಿಕಾ ಮಂಜುನಾಥ್ ರವರು ‘ರಾಷ್ಟ್ರಧರ್ಮ ಜಾಗೃತಿ ಸಂದೇಶ’ದ ಬಗ್ಗೆ ಮಾತನಾಡುತ್ತಾ “ಭಾರತವು ವಿಶ್ವಗುರುವಾಗಬೇಕು ಎಂಬುದು ಎಲ್ಲರ ಕನಸು ನಿಜ, ಆದರೆ ತಾಯಿ ಭಾರತಿಯು ಇಡೀ ವಿಶ್ವದ ತಾಯಿಯಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ತಮ್ಮ ಶ್ರೀಮಂತ ಪರಂಪರೆಯನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು. ಸ್ವಾಮಿ ವಿವೇಕಾನಂದರಂತಹ ಜಿಜ್ಞಾಸುಗಳು ಭಾರತದ ಗರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಹೇಳುವುದಷ್ಟೇ ಅಲ್ಲ, ಅವರ ಸಾಧನೆಯ ಹಾದಿಯನ್ನು ಇಂದಿನ ಯುವಜನರು ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ದೇಶವು ಇತರ ದೇಶಗಳನ್ನು ಮಾತೃವಾತ್ಸಲ್ಯದಿಂದ ಪರಿಗಣಿಸುತ್ತಿರುವುದಕ್ಕೆ ಅನೇಕ ಉದಾಹರಣೆಗಳು ಇಂದಿಗೂ ನಮ್ಮ ಮುಂದಿವೆ” ಎಂದು ಹೇಳಿದರು.
ನಲ್ವತ್ತರ ಸಂಭ್ರಮದ ಸನಾತನ ನಾಟ್ಯಾಲಯದ ನೃತ್ಯ ಗುರು ವಿದುಷಿ ಶಾರದಾ ಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯವೃಂದದಿಂದ ಅಚ್ಚುಕಟ್ಟಾದ ಮತ್ತು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವಂತಹಾ ಭರತನಾಟ್ಯ ಪ್ರದರ್ಶನ ನೆರವೇರಿತು.
ಶ್ರೇಷ್ಟ ಯಕ್ಷಗಾನ ಅರ್ಥದಾರಿ, ಉತ್ತಮ ವಿಮರ್ಶಕ, ಕಲಾವಿದ ಮತ್ತು ಲೇಖಕರಾದ ಡಾ. ಪ್ರಭಾಕರ ಜೋಷಿಯವರು ಬಾಲ ವಾಗ್ಮಿ ಹಾರಿಕಾ ಮಂಜುನಾಥ್ ಮತ್ತು ಅವರ ಸಾಧನೆಗೆ ಪ್ರೇರಣೆ ನೀಡಿ ನೀರೆರೆದು ಪೋಷಿಸಿದ ತಂದೆ ಶ್ರೀಯುತ ಮಂಜುನಾಥ್ ಮತ್ತು ತಾಯಿ ಶ್ರೀಮತಿ ರುಕ್ಮಿಣಿಯವರನ್ನು ಗೌರವಿಸಿದರು. ಸನಾತನ ನಾಟ್ಯಾಲಯ ತಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನೃತ್ಯಾಭ್ಯಾಸ ಮಾಡಿಸುವುದರೊಂದಿಗೆ ಸಂಸ್ಕಾರವನ್ನೂ ನೀಡುತ್ತಾ ಬಂದಿದೆ. ಈ ಒಂದು ಸುಸಂದರ್ಭದಲ್ಲಿ ಹಾರಿಕಾ ಮಂಜುನಾಥ್ ವೇದಿಕೆಯಲ್ಲಿ ನೃತ್ಯ ಮಾಡಿದ ಸನಾತನದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಕಾರಕ್ಕೆ ಪೂರಕವಾದ “ಮನೆಯೇ ಮಾಂಗಲ್ಯ” ಎಂಬ ಕೃತಿಯನ್ನು ಕಾರ್ಯಕ್ರಮದ ನೆನೆಪಿಗೆ ನೀಡಿದರು.
ಈ ಸಂದರ್ಭದಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಶೆಟ್ಟಿ, ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ಶ್ರೀ ತಾರಾನಾಥ ಕೊಟ್ಟಾರಿ, ಆರೆಸ್ಸೆಸ್ಸ್ ನಗರ ಸಂಘ ಚಾಲಕ ಡಾ. ಸತೀಶ್ ರಾವ್, ವಿದ್ವಾಂಸರಾದ ಡಾ. ಪ್ರಭಾಕರ ಜೋಷಿ ಮತ್ತಿತರರು ಉಪಸ್ಥಿತರಿದ್ದರು.