15 ಏಪ್ರಿಲ್ 2023, ಬೆಂಗಳೂರು: ಮಗುವಿನ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಥಿಯೇಟರ್ ವಿಧಾನವನ್ನುಬಳಸುವ ವಿಭಿನ್ನ ಶಿಬಿರವು ಚುಕ್ಕಿರಮಾ ಇವರ ನಿರ್ದೇಶನದಲ್ಲಿ ಸಂಚಾರಿ ಥಿಯೇಟರ್ ಇದರ ಸಹಭಾಗಿತ್ವ ದೊಂದಿಗೆ ಏಪ್ರಿಲ್ 17 ಮತ್ತು ಏಪ್ರಿಲ್ 20ರಂದು ಎರಡು ಬ್ಯಾಚ್ ಗಳಲ್ಲಿ ಬೆಂಗಳೂರಿನ ಬಸವನಗುಡಿಯ ಪುಟ್ಟಣ್ಣ ರಸ್ತೆಯ ಸ್ಕಂದ ಕಟ್ಟಡದಲ್ಲಿ ನಡೆಯಲಿದೆ.
ಕಾಲೇಜಿನ ಪ್ರಾಜೆಕ್ಟಿಗೆ ‘ನಲಿ ಮನ’ ಎಂಬ ಕಲ್ಪನೆ ನನ್ನ ಮನದಲ್ಲಿ ಮೂಡಿತು. ಎಂ.ಎಸ್ಸಿ.ಸೈಕಾಲಜಿಯ ನಮ್ಮ 4ನೇ ಸೆಮಿಸ್ಟರ್ ನಲ್ಲಿ ನಾವೆಲ್ಲರೂ ಈ ಪ್ರಾಜೆಕ್ಟ್ ಮಾಡಬೇಕಾಗಿತ್ತು. ನನ್ನ ಯೋಜನೆ ಸೈಕಾಲಜಿ ಮತ್ತು ಥಿಯೇಟರ್‌ನ ಸಂಯೋಜನೆಯಾಗಿರಬೇಕು ಎಂಬ ಅಸ್ಪಷ್ಟ ಕಲ್ಪನೆ ನನಗಿತ್ತು . ಬಾಲ್ಯದಿಂದಲೂ ರಂಗಭೂಮಿಯೊಂದಿಗೆ ಸದಾ ಸಂಬಂಧ ಹೊಂದಿದ್ದ ನನಗೆ ಮನೋವಿಜ್ಞಾನವನ್ನು ಅಧ್ಯಯನ ಮಾಡುವುದರಿಂದ ನಾನು ಆಯ್ಕೆ ಮಾಡಿದ ವಿಷಯಕ್ಕೆ ಬಹಳ ಪೂರಕವಾಗಿರುತ್ತದೆ ಎಂಬುದು ನನ್ನ ಯೋಚನೆಗೆ ಬಂದಿತು. ನನ್ನ ಜೀವನದಲ್ಲಿ ರಂಗಭೂಮಿಯ ಮಹತ್ವವನ್ನು ನಾನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. ಆದ್ದರಿಂದ ಈ ಎರಡೂ ಅಂಶಗಳನ್ನು ನನ್ನ ಮನಸ್ಸಿನಲ್ಲಿಟ್ಟುಕೊಂಡು ನನ್ನ ಯೋಜನೆಯಲ್ಲಿ ಕೆಲಸ ಮಾಡಲು ನಾನು ಬಯಸಿದೆ. ನಾನು ಹೇಗೆ ಮತ್ತು ಎಲ್ಲಿಂದ ಪ್ರಾರಂಭಿಸುವುದು, ಯಾವ ಅಂಶದ ಬಗ್ಗೆ ಗಮನ ಹರಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಯೋಜನಾ ವಿಷಯವನ್ನು ನಿರ್ಧರಿಸುವಲ್ಲಿ ನನ್ನ ಅನಿಶ್ಚಿತತೆಯ ಕಾರಣದಿಂದಾಗಿ ನನ್ನ ಮಾರ್ಗದರ್ಶಕರಾಗಿದ್ದ ನನ್ನ ವಿಭಾಗ ಮುಖ್ಯಸ್ಥರೊಂದಿಗೆ ನನ್ನ ಆಲೋಚನೆಯ ಬಗ್ಗೆ ಮಾತನಾಡಿದೆ. ಸಾಕಷ್ಟು ಚರ್ಚೆ ಮತ್ತು ವಿಚಾರ ವಿನಿಮಯದ ನಂತರ ಬಾಲ್ಯದಿಂದಲೂ ರಂಗಭೂಮಿಯನ್ನು ಅಭ್ಯಾಸ ಮಾಡುತ್ತಿರುವ ‘ಕಲಾವಿದರ ಆತ್ಮ ವಿಶ್ವಾಸವನ್ನು ಅರಿತುಕೊಳ್ಳುವುದು’ ಎಂಬ ವಿಷಯವನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡೆ. .
ಈ ಯೋಜನೆಯ ವಿಚಾರವಾಗಿ ಬಹಳಷ್ಟು ರಂಗಭೂಮಿ ಕಲಾವಿದರನ್ನು ನಾನು ಸಂದರ್ಶಿಸಿದ್ದೇನೆ. ಅವರು ತಮ್ಮ ವೈಯಕ್ತಿಕ ಜೀವನ ಮತ್ತು ವ್ಯಕ್ತಿತ್ವದ ಮೇಲೆ ರಂಗಭೂಮಿ ಬೀರಿದ ಪ್ರಭಾವದ ಬಗ್ಗೆ ಮಾತನಾಡಿದರು. ಹೆಚ್ಚಿನ ಕಲಾವಿದರು ತಮ್ಮನ್ನು ತಾವು ಉತ್ತಮ ಮನುಷ್ಯರನ್ನಾಗಿ ರೂಪಿಸಿಕೊಳ್ಳಲು ರಂಗಭೂಮಿಯು ಸಾಂಘಿಕವಾಗಿ ಬಹಳಷ್ಟು ಸಹಾಯ ಮಾಡಿದೆ ಎಂದು ಹೇಳಿದಾಗ ನನ್ನಲ್ಲಿ ಆತ್ಮವಿಶ್ವಾಸ ಮೂಡಿತು. ನನ್ನ ಗ್ರಹಿಕೆಯಂತೆ ಎಷ್ಟು ಮಂದಿ ಕಲಾವಿದರು ರಂಗಭೂಮಿಯ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. ಇದು ನಮಗೆ ಜೀವನ ಮತ್ತು ಜೀವನಶೈಲಿಯನ್ನು ಕಲಿಸುತ್ತದೆ. ಮೊದಲು ಉತ್ತಮ ಮನುಷ್ಯರಾಗಬೇಕು, ಮತ್ತೆ ಕಲಾವಿದರು ಅಥವಾ ನಟರಾಗಬೇಕು ಎಂಬುದನ್ನು ಇದು ಪ್ರೋತ್ಸಾಹಿಸುತ್ತದೆ.
ಈ ಯೋಜನೆಯೊಂದಿಗೆ ನನ್ನ ಎಂ.ಎಸ್ಸಿ ಸೈಕಾಲಜಿ ಮುಗಿಸಿದ ನನಗೆ ಇದು ಕೇವಲ 100 ಅಂಕಗಳ ಪತ್ರಿಕೆಯಲ್ಲ,. ಈ ವಿಷಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅವಕಾಶವಿದೆ ಎಂಬುದು ತಿಳಿವಿಗೆ ಬಂದಿತು. ಹಲವು ಹಂತಗಳಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸುವುದರಿಂದ ಮಕ್ಕಳಿಗೆ ಹೆಚ್ಚಿನ ಉಪಯೋಗವಾಗುತ್ತದೆ ಮತ್ತು ಇದೆಲ್ಲವೂ ಸಮಾಜಕ್ಕೆ ಮರಳಿ ಕೊಡುವ ಉದ್ದೇಶವೂ ನನ್ನಲ್ಲಿತ್ತು. ನನ್ನ ಹೆತ್ತವರು, ಉಪನ್ಯಾಸಕರು, ವಿಭಾಗ ಮುಖ್ಯಸ್ಥರು ಮತ್ತು ನನ್ನ ಕುಟುಂಬದವರು ‘ನಲಿ ಮನ’ವನ್ನು ಪ್ರಾರಂಭಿಸಿ ಗಂಭೀರವಾಗಿ ಪರಿಗಣಿಸಲು ಪ್ರೋತ್ಸಾಹದ ಮಾತುಗಳನ್ನಾಡಿದರು.
ಮಕ್ಕಳಿಗೆ ರಂಗಭೂಮಿಯ ಚಟುವಟಿಕೆಯಲ್ಲಿ ತಮ್ಮನ್ನು ಒಡ್ಡಿಕೊಳ್ಳಲು ಮತ್ತು ಅದನ್ನು ಅನುಭವಿಸಲು ಪ್ರೋತ್ಸಾಹಿಸಲಾಗುತ್ತದೆ. ಪಠ್ಯಕ್ರಮವು ಸಂಪೂರ್ಣವಾಗಿ ರಂಗಭೂಮಿ ಚಟುವಟಿಕೆಗಳು ಮತ್ತು ಆಟಗಳನ್ನು ಆಧರಿಸಿದೆ. ಇದು ಮಕ್ಕಳ ಜೀವನ ಕೌಶಲ್ಯ ಮತ್ತು ಎಲ್ಲಾ ರೀತಿಯಲ್ಲೂ ವ್ಯಕ್ತಿತ್ವದ ವಿಕಸನಕ್ಕೆ ಸಹಾಯ ಮಾಡುತ್ತದೆ. ಇದು ಸಂಪೂರ್ಣವಾಗಿ ಚಟುವಟಿಕೆ ಆಧಾರಿತ ಶಿಬಿರವಾಗಿದ್ದು, ಆಲಿಸುವಿಕೆ, ಲಕ್ಷ್ಯ, ಏಕಾಗ್ರತೆ, ಕಲ್ಪನೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಿ, ಪರಸ್ಪರ ಸಂಬಂಧಗಳ ಬಗ್ಗೆ ಮಕ್ಕಳಲ್ಲಿ ತಿದ್ದಿಕೊಳ್ಳಲು ಸಹಾಯ ಪೂರಕವಾಗುತ್ತದೆ. ಇದು ಪ್ರದರ್ಶನಕ್ಕೆ ಹೆಚ್ಚು ಒತ್ತುನೀಡದ ಪ್ರಕ್ರಿಯೆ ಆಧಾರಿತ ಘಟಕವಾಗಿದೆ. ರಂಗಭೂಮಿ ಆಟಗಳು, ಪಾತ್ರಾಭಿನಯ ಮತ್ತು ಹಲವಾರು ಇತರ ಅಂಶಗಳ ಮೂಲಕ ಮಕ್ಕಳ ಒಟ್ಟಾರೆ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ಉದ್ದೇಶವನ್ನು ಇದು ಹೊಂದಿದೆ. ಈ ಶಿಬಿರವನ್ನು ರೂಪಿಸುವಲ್ಲಿ ರಂಗಭೂಮಿಯ ಕೆಲವು ಅಂಶಗಳನ್ನು ಹೊರತೆಗೆಯಲಾಗಿದೆ. ಮಕ್ಕಳಿಗೆ ಅರಿವಿಲ್ಲದೆಯೇ ಅವರ ಒಟ್ಟಾರೆ ವ್ಯಕ್ತಿತ್ವದಲ್ಲಿ ಬದಲಾವಣೆ ತರುವ ಪ್ರಯತ್ನ ನನ್ನದು.
ಉದ್ದೇಶ ;
ಕಲಾವಿದರನ್ನು ರೂಪಿಸುವುದರ ಮೇಲೆ ಅಥವಾ ನಟರನ್ನು ಸಿದ್ಧಪಡಿಸುವುದರ ಮೇಲೆ ಈ ಶಿಬಿರವನ್ನು ಕೇಂದ್ರೀಕರಿಸುವುದಿಲ್ಲ. ರಂಗಭೂಮಿ ಯಾವಾಗಲೂ ಜೀವನ ವಿಧಾನವನ್ನು ಕಲಿಸಿದೆ. ನಾವು ಮೊದಲು ಒಳ್ಳೆಯ ಮನುಷ್ಯರಾಗುವುದು ಮುಖ್ಯ. ನಮ್ಮ ವೈಯಕ್ತಿಕ ಜೀವನಕ್ಕೆ ಬಹಳ ಮುಖ್ಯವಾದ ಜೀವನ ಕೌಶಲ್ಯಗಳನ್ನು ರಂಗಭೂಮಿ ಖಂಡಿತವಾಗಿಯೂ ಕಲಿಸುತ್ತದೆ ಎಂಬುದು ನನ್ನ ತಿಳುವಳಿಕೆ. ಈ ಉದ್ದೇಶದೊಂದಿಗೆ ’ನಲಿ ಮನ’ ಆರಂಭಿಸುತ್ತಿದ್ದೇನೆ . ಮಕ್ಕಳಿಗೆ ಹಲವಾರು ಕರಕುಶಲ ಆಧಾರಿತ ಚಟುವಟಿಕೆಗಳನ್ನು ಪರಿಚಯಿಸುವ ಮೂಲಕ ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಾನು ಸಿದ್ಧಳಿದ್ದೇನೆ. ಇದು ನನ್ನ ಮೊದಲ ಹೆಜ್ಜೆಯಾಗಿದೆ. ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ನಾನು ಪ್ರಯತ್ನಿಸುತ್ತೇನೆ.
- ಚುಕ್ಕಿರಮಾ