Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಯಕ್ಷ ನೃತ್ಯ -ಸಂವಾದ ಸನ್ಮಾನ’ | ಜುಲೈ 12

    July 9, 2025

    ವಿಸ್ತಾರ್‌ ರಂಗಶಾಲೆಯಿಂದ ನಾಟಕ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನ | ಜುಲೈ 30

    July 9, 2025

    ಎಸ್.ಎನ್.ಪಿ.ಯು ಕಾಲೇಜಿನಲ್ಲಿ ‘ಜನಪದದೊಂದಿಗೆ ಜೀವನ ಮೌಲ್ಯ ಸಂಗೀತ ಕಾರ್ಯಾಗಾರ’

    July 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ಕಾದಂಬರಿ ‘ಕಾಯಕ ಕೈಲಾಸ’
    Article

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ಕಾದಂಬರಿ ‘ಕಾಯಕ ಕೈಲಾಸ’

    July 9, 2025No Comments14 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುನಂದಾ ಬೆಳಗಾಂವಕರರ ‘ನಾಸು’ ಮತ್ತು ‘ಝವಾದಿ’ ಧಾರವಾಡದ ಬ್ರಾಹ್ಮಣ ಸಮುದಾಯದ ಬದುಕಿನ ಅನುಭವಗಳನ್ನು ಕಟ್ಟಿಕೊಟ್ಟರೆ ‘ಕಾಯಕ ಕೈಲಾಸ’ವು ಧಾರವಾಡ ಭಾಗದ ಲಿಂಗಾಯತ ಸಮುದಾಯದ ಕುಟುಂಬವೊಂದರ ಮೂರು ಪೀಳಿಗೆಗಳ ಬದುಕಿನ ಚಿತ್ರಣವನ್ನು ನೀಡುತ್ತದೆ. ಅವರ ಬದುಕನ್ನು ಸೂಕ್ಷ್ಮಾತಿಸೂಕ್ಷ್ಮ ನೆಲೆಯಲ್ಲಿ ದಟ್ಟವಾಗಿ ಸೆರೆ ಹಿಡಿಯುವ ವಿವರಗಳು ಬದುಕಿನ ವಿನ್ಯಾಸದ ನೇಯ್ಗೆಯಾಗಿ ಹೆಣೆದುಕೊಂಡಿವೆ. ಪಾಶ್ವಾತ್ಯ ವಾಸ್ತವವಾದಿ ಮಾದರಿಯನ್ನು ಹಿಂಬಾಲಿಸದೆ ಪ್ರಾದೇಶಿಕ ಕಥನದ ಮಾದರಿಯನ್ನು ಮುಂದಿಡುವ ನಿರೂಪಣ ವಿಧಾನವು ಸರಳ ರೇಖಾತ್ಮಕವಾಗಿ ಮುನ್ನುಗ್ಗದೆ ಅಲೆಗಳಂತೆ ಸುತ್ತಲೂ ಹರಡಿಕೊಳ್ಳುತ್ತದೆ.

    ಗಂಗವ್ವನ ಹೆರಿಗೆಯೊಂದಿಗೆ ಆರಂಭವಾಗುವ ಕಾದಂಬರಿಯು ಮಗ ಹುಟ್ಟಿದ ಸಂಭ್ರಮ ಸಡಗರಗಳನ್ನು ದಾಖಲಿಸದೆ ಆಕೆಯ ನೋವಿಗೆ ದನಿಯಾಗುತ್ತದೆ. ಗಂಡ ಶಿವಲಿಂಗಪ್ಪನು ಆಕೆಯ ಒಡವೆಗಳನ್ನು ತನ್ನ ಗೆಳೆಯನಾದ ಎಡೆಯೂರಪ್ಪನಲ್ಲಿ ಅಡವಿರಿಸಿದ್ದಲ್ಲದೆ ಹೆಂಡತಿ ಮೂರು ತಿಂಗಳ ಬಸುರಿಯಾಗಿದ್ದಾಗ ಹೇಳದೆ ಕೇಳದೆ ಓಡಿಹೋಗಿರುತ್ತಾನೆ. ಅಂಥ ಆರ್ಥಿಕ ಸಂಕಷ್ಟದಲ್ಲಿ, ನಾಜೂಕಿನ ಪರಿಸ್ಥಿತಿಯಲ್ಲಿ ಆಕೆಯು ಏಕಾಂಗಿಯಾಗಿ ಕಳೆಯುತ್ತಿರುವಾಗ ಚಿಗವ್ವನ ಸಹಾಯದಿಂದ ಹೆರಿಗೆಯು ಸುಸೂತ್ರವಾಗಿ ನಡೆಯುತ್ತದೆ. ಕಷ್ಟಕಾಲದಲ್ಲಿ ದೇವರು ಮನುಷ್ಯ ರೂಪದಲ್ಲಿ ಸಹಾಯ ಮಾಡುತ್ತಾನೆ ಎಂಬ ನಂಬಿಕೆಯು ಇಲ್ಲಿನ ಸ್ಥಾಯಿಭಾವವಾಗಿದೆ. ಲೇಖಕಿಯು ವಾಸ್ತವವಾದಿಯಾಗಿದ್ದರೂ ಅವರ ಇತರ ಕೃತಿಗಳಿಗಿಂತ ಭಿನ್ನವಾಗಿ ಪಾರಲೌಕಿಕ ಅನುಭವಗಳಿಗೆ ಅವಕಾಶವಿದೆ. ಆಕೆಯ ಭಕ್ತಿ ಶ್ರದ್ಧೆಗಳು ವಾಸ್ತವದ ತರ್ಕಗಳಿಗೆ ಮೀರಿದ ಅನುಭವವನ್ನು ನೀಡಿದೆ. ಗಂಗವ್ವನಿಗೆ ಎದುರಾಗಿ ಬರುವ ಪ್ರಕರಣಗಳು ನಿವಾರಣೆಯಾಗುವಲ್ಲಿ ದೈವಕೃಪೆಯು ನೆರವಿಗೆ ಬರುತ್ತವೆ. ಇದುವೇ ಆಕೆಯ ಚಾರಿತ್ರ್ಯ ಕೆಡದಂತೆ ತಡೆಯುತ್ತದೆ. ರಾತ್ರಿಯ ಹೊತ್ತಿನಲ್ಲಿ ಬಾಗಿಲು ತಟ್ಟಿದ ಚೆನ್ನಯ್ಯನನ್ನು ನಾಗರಹಾವು ಓಡಿಸುವ ಸನ್ನಿವೇಶವು ಅದಕ್ಕೆ ಉದಾಹರಣೆಯಾಗಿದೆ. ಆತನನ್ನು ಒಳಗೆ ಕರೆದು ಕಷ್ಟಗಳನ್ನು ನೀಗಿಕೊಳ್ಳುವ ಅವಕಾಶವಿದ್ದರೂ ಅಂಥ ಪ್ರಲೋಭನೆಗಳನ್ನು ನಿರಾಕರಿಸಿ, ಕಠಿಣವಾದ ಪರಿಶ್ರಮ, ದೈಹಿಕ ದುಡಿಮೆಗಳ ಮೂಲಕ ಕಾಮನೆಗಳನ್ನು ಅಧೀನದಲ್ಲಿಟ್ಟುಕೊಳ್ಳುತ್ತಾಳೆ. ಆಕೆಯು ಕರಿದ ಕಡಲೆ ಬೇಳೆಯನ್ನು ದೇವರಿಗೆ ಅರ್ಪಿಸುವ ಕನಸು ಕಾಯಕದ ಬದುಕಿಗೆ ಸ್ಫೂರ್ತಿಯಾಗುತ್ತದೆ. ಸೋಮೇಶ್ವರ ದೇವಾಲಯದ ಮೂಲೆಯಲ್ಲಿ ಒಲೆಯನ್ನು ಹೂಡಿ, ಎಣ್ಣೆಯಿಂದ ತುಂಬಿದ ಕಡಾಯಿಯನ್ನು ಕಾಯಲಿಟ್ಟು, ನೆನೆಸಿದ ಕಡಲೆ ಬೇಳೆ, ಮಸಾಲೆ, ನೀರುಳ್ಳಿ, ಕೊತ್ತಂಬರಿ, ಹಸಿಮೆಣಸುಗಳನ್ನು ಚಿಕ್ಕದಾಗಿ ಹಚ್ಚಿ, ದೇವರಿಗೆ ನೈವೇದ್ಯರೂಪದಲ್ಲಿ ಅರ್ಪಿಸಲು ಭಕ್ತರಿಗೆ ‘ಕರಿದ ಕಡ್ಲಿಬ್ಯಾಳಿ ಎಡೆ’ಯನ್ನು ಮಾಡಿಕೊಟ್ಟು ಹೊಟ್ಟೆ ಹೊರೆದುಕೊಳ್ಳುತ್ತಾಳೆ. ಸೋಮೇಶನಿಗೆ ಒಂದು ವರುಷ ತುಂಬಿದಾಗ ದೇವಾಲಯಕ್ಕೆ ಹೋಗುವ ಸಂದರ್ಭದಲ್ಲಿ ಜಗದೀಶ್ವರ-ಜಗದಂಬಾ ದಂಪತಿ ಮತ್ತು ಬಸವಣ್ಣ ಭೇಟಿಯಾಗಿ ತಮ್ಮ ಚಕ್ಕಡಿಯಲ್ಲಿ ಆಕೆಯನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ, ಗಂಗವ್ವನ ಅತಿಥಿಗಳಾಗಿ ಬಂದು, ಸಾರನ್ನ, ಮೊಸರನ್ನ ಉಂಡು ಪಾಯಸದೂಟವನ್ನು ಸವಿದು ಸಣ್ಣ ಸೋಮವಾರದಂದು ಬರುವೆವೆಂದು ಮಾತುಕೊಟ್ಟು ಹೋದವರು ಅದೇ ದಿನ ಬಂದ ಆಕೆಯಿಂದ ಎಡೆಯನ್ನು ಪಡೆದುಕೊಳ್ಳುತ್ತಾರೆ. ಜಗದಂಬೆಗೆ ಮಾವಿನಕಾಯಿ ತಿನ್ನುವ ಬಯಕೆ ಕಾಡಿದಾಗ ಶ್ರಾವಣ ಮಾಸದಲ್ಲಿ ಮಾವಿನಕಾಯಿ ಸಿಗುವುದಿಲ್ಲವೆಂದು ಗಂಗವ್ವ ಕಳವಳಿಸುತ್ತಿದ್ದಂತೆ ಬಸವಣ್ಣನು ಮಾವಿನಕಾಯಿಗಳನ್ನು ತಂದುಕೊಡುತ್ತಾನೆ. ಗಂಗವ್ವ ಅಚ್ಚರಿಯಿಂದಲೇ ಕಾಯಿಗಳನ್ನು ಹೋಳುಗಳಾಗಿ ಹಚ್ಚಿ, ಎಡೆಗೆ ಬೆರೆಸಿ ನೀಡಿದಾಗ ಬಯಕೆ ತೀರಿದ ಸಂತಸದಿಂದ ಅವರು ದೇವರ ದರ್ಶನಕ್ಕೆ ಹೊರಟುಹೋಗುತ್ತಾರೆ. ಗಂಗವ್ವನ ತಲೆಯೊಳಗೆ ವಿಚಾರಗಳು ಹುಚ್ಚೆದ್ದು ಹರಿಯತೊಡಗುತ್ತವೆ. ಪಾವಲಿಗಳು, ಎಣ್ಣೆ, ಕಡಲೆಬೇಳೆಗಳು ಅಕ್ಷಯವಾದದ್ದು, ಸೋಮೇಶ ಅಳದೆ ಮಲಗಿದ್ದು, ರೂಢಿಗೆ ವಿರುದ್ಧವಾಗಿ ಕಂಡು ಅವರ ಹಿಂದೆ ಓಡುತ್ತಾಳೆ. ಗುಡಿಯೊಳಗೆ ಹೊಕ್ಕವರು ಮತ್ತೆ ಕಾಣಿಸುವುದಿಲ್ಲ. ಗುಡಿಯೊಳಗೆ ಕರಿದ ಕಡಲೆಬೇಳೆಯ ಎಡೆಯಿದ್ದರೂ ಮಾವಿನಕಾಯಿ ಇರುವುದಿಲ್ಲ. ಸಾಕ್ಷಾತ್ ಶಿವಪಾರ್ವತಿಯರೇ ನಂದಿ ಜೊತೆಯಲ್ಲಿ ಬಂದು ಕಾಯಕವನ್ನು ಕಲಿಸಿ ಹೋಗಿದ್ದಾರೆ. ಬಂಜೆಯ ಉಡಿ ತುಂಬುವ ಬಸುರಿ ಬಯಕೆ ತೀರಿಸುವ ಕಾಯಕವನ್ನು ನಿರ್ವಹಿಸುವ ವರವನ್ನು ನೀಡಿದ್ದಾನೆ ಎಂದುಕೊಳ್ಳುತ್ತಾಳೆ. ಕಹಿ ಪ್ರಸಂಗಗಳಿಂದ ಘಾಸಿಗೊಂಡರೂ ಕುಸಿಯುವುದಿಲ್ಲ. ಬಾಳುವೆಯು ಅಸಹನೀಯವಾದಾಗ ಕಡಲೆಬೇಳೆ ಎಡೆ ಮಾಡಿಕೊಟ್ಟು ಬದುಕುವ ಶ್ರಮ, ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಆಕೆಯು ಹಲವು ಬಗೆಯ ಬವಣೆಯ ಬೆಂಕಿಯಲ್ಲಿ ಬೆಂದರೂ ಹೊಸ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಅದಕ್ಕೆ ಬೇಕಾದ ಮನಸ್ಥಿತಿ, ಧೈರ್ಯ, ಶ್ರಮ ಮತ್ತು ನಿಷ್ಠೆಯನ್ನು ರೂಢಿಸಿಕೊಂಡು ಗುರಿಯನ್ನು ಸಾಧಿಸಲು ದೇವರ ಕೃಪೆ ಕಾರಣವೆಂಬ ದನಿಯಿದೆ. ಕಥನದಲ್ಲಿ ದೈವಕೃಪೆಗೆ ಸಂಬಂಧಿಸಿದ ಜನಪದ ಕತೆಗಳ ಸರಣಿಯ ದಟ್ಟವಾದ ಪ್ರಭಾವವು ಕಂಡುಬರುತ್ತದೆ.

    ಲೇಖಕಿಯು ವಾಸ್ತವವಾದಿ ಬರಹಗಾರ್ತಿಯಾಗಿದ್ದರೂ ಅವರ ಕಾದಂಬರಿಯಲ್ಲಿ ಪಾರಲೌಕಿಕ ಅನುಭವಗಳಿಗೂ ಅವಕಾಶಗಳಿವೆ. ಆದರೆ ಅವುಗಳನ್ನು ಸಂಭ್ರಮದಿಂದ ಶೈಲೀಕೃತ ಪದಪುಂಜಗಳಲ್ಲಿ ಬಣ್ಣಿಸಿ ಬೆರಗುಗೊಳಿಸುವವರಲ್ಲ. ಬದುಕಿನ ಸಹಜ ಅನುಭವಗಳಂತೆ ಸ್ವೀಕರಿಸುವವರು. ಅದರಿಂದ ಅವರ ವ್ಯಕ್ತಿತ್ವಕ್ಕೆ ಆಧ್ಯಾತ್ಮಿಕ ಅಥವಾ ನೈತಿಕ ಆಯಾಮವೊಂದು ಕೂಡಿಕೊಳ್ಳುತ್ತದೆ. ಇಂಥ ಸ್ಥಿತಿಯಲ್ಲಿ ಅವರು ಬದುಕನ್ನು ಗ್ರಹಿಸಿ ಅರ್ಥೈಸಲು ಯತ್ನಿಸುತ್ತಾರೆ. ಬೀದಿಪಾಲಾದರೂ ಬದುಕುವ ಛಲವನ್ನು ಬಿಡದೆ, ನೋವಿಗೆ ಕಾರಣರಾದವರನ್ನು ದೂರದೆ, ಬದುಕಿನ ಬಗ್ಗೆ ಅಪಸ್ವರವನ್ನು ಎತ್ತದೆ, ಅನುಭವದ ಆಧಾರದಿಂದ ಕಂಡುಕೊಂಡ ಮೌಲ್ಯಗಳನ್ನು ಅಡಿಗಲ್ಲಾಗಿಟ್ಟುಕೊಂಡು ಗೌರವಯುತವಾಗಿ ಗಂಗವ್ವಳು ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವ ವಿಧಾನವು ಮುಖ್ಯವಾಗುತ್ತದೆ.
    ಧೂರ್ತ ಜಂಗಮ ಎಡೆಯೂರಪ್ಪನಿಂದ ಮೋಸ ಹೋದ ಶಿವಲಿಂಗಪ್ಪನು ಊರಿಗೆ ಮರಳುವುದರೊಂದಿಗೆ ಕಾದಂಬರಿಯಲ್ಲಿ ಪರಂಪರೆ ಮತ್ತು ಪ್ರತಿರೋಧದ ನೆಲೆಗಳ ತಿಕ್ಕಾಟವು ಕಾಣಿಸತೊಡಗುತ್ತದೆ. ಶಿವಲಿಂಗಪ್ಪನು ತನ್ನ ಒಡನಾಡಿ ಎಡೆಯೂರಪ್ಪನಂತೆ ಲಂಪಟ, ಖದೀಮ ಮತ್ತು ವಂಚಕನಲ್ಲ. ಆತನಲ್ಲಿ ಮಿಡಿಯುವ ಹೃದಯವಿದೆ. ತರುಣನಾದ ಮಗನನ್ನು ಕಂಡಾಗ ಎದೆ ತುಂಬಿ ಬರುತ್ತದೆ. “ಇಂಥ ಕಪಟ ಸನ್ಯಾಸಿ ಕಾಲ ಬೀಳೋದಿಲ್ಲ” (ಪುಟ 72) ಎಂದ ಮಗನ ಮಾತು ಕೇಳಿ ಕಣ್ಣೀರಿಳಿಸುತ್ತಾನೆ. ಗಂಡ ಜೊತೆಗಿಲ್ಲದೆ ಕಂಗೆಟ್ಟಿದ್ದ ಗಂಗವ್ವಳು ಅವನನ್ನು ಕಂಡ ಕೂಡಲೇ ಭಾವುಕಳಾಗಿ ಅವನ ಪಾದಗಳಿಗೆ ಬಿದ್ದು ಹೊರಳಿ ಅತ್ತರೆ ಹದಿಹರೆಯದ ಮಗ ಸೋಮೇಶನು ಕಷ್ಟಕಾಲದಲ್ಲಿ ಹೆಂಡತಿಯನ್ನು ಬಿಟ್ಟುಹೋದ ತಂದೆಯ ನಡತೆಯ ಬಗ್ಗೆ ಬಿರುನುಡಿಗಳನ್ನಾಡಿ ಆತನು ಹೊರಟು ಹೋಗುವಂತೆ ಮಾಡುತ್ತಾನೆ. ‘ಮುಂದಿನ ಸಾರಿ ಬರುವ ಸೋಮೇಶನ ತಂದೆಯಾಗಿ ಬರುತ್ತೇನೆ’ ಎಂದು ಶಪಥವನ್ನು ಮಾಡಿ ಹೋಗುತ್ತಾನೆ. ಮುಂದೆ ಕಾದಂಬರಿಯುದ್ದಕ್ಕೂ ಕಾಣುವ ತಲೆಮಾರುಗಳ ನಡುವಿನ ಸಂಘರ್ಷಕ್ಕೆ ಇದು ಆರಂಭವನ್ನು ಒದಗಿಸುತ್ತದೆ.

    ಹಾಲಪ್ಪ ತಾರಕ್ಕ ದಂಪತಿ ಮಗಳು ಕೆಂಪಿಯ ಜೊತೆಗಿನ ಆತನ ಅಂತರ್ಜಾತೀಯ ಪ್ರೇಮ ಪ್ರಕರಣವು ಇದರ ಇನ್ನೊಂದು ಮುಖವಾಗಿದ್ದು ಸಾಮಾಜಿಕವಾಗಲು ಹವಣಿಸುತ್ತದೆ. ಕೆಂಪವ್ವನನ್ನು ಕರಿದ ಕಡಲೆ ಬೇಳೆ ಮಾರುವ ವ್ಯಾಪಾರಕ್ಕೆ ಕೂರಿಸಬಾರದು, ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ನಾವು ಕೊಡುವ ಮನೆಯಲ್ಲಿ ವಾಸಿಸಬೇಕು, ನಾವು ಕೊಡುವ ಭೂಮಿಯನ್ನು ಕೂಡಲೇ ಆರಿಸಬೇಕು ಎಂಬ ನಿಬಂಧನೆಯನ್ನು ಒಡ್ಡುತ್ತಾರೆ. ಸಾಮಾನ್ಯ ಮಟ್ಟದ ಕಾದಂಬರಿಗಳಲ್ಲಿ ರೋಷಾವೇಶದ ಘಟನೆಗಳಿಗೆ ದಾರಿಯಾಗಬಹುದಿದ್ದ ಸನ್ನಿವೇಶವು ಇಲ್ಲಿ ಸಂಯಮದ ನಿರೂಪಣೆಯಿಂದ ದಾರ್ಶನಿಕ ಮಟ್ಟವನ್ನು ಏರುತ್ತದೆ. “ನಿಮ್ಮ ಕರಾರುಗಳಿಗೆ ಸಂಕ್ಷಿಪ್ತವಾಗಿ ಹೌದು ಅಲ್ಲ ಎನ್ನುವುದು ಸರಿಯಲ್ಲ. ಅವುಗಳಿಗೆ ಸಕಾರಣವಾಗಿ ಪ್ರಾಮಾಣಿಕವಾಗಿ ಉತ್ತರಿಸಬೇಕಾದ್ದು ನನ್ನ ಧರ್ಮ. ಜೀವನದಲ್ಲಿ ಪ್ರಾಮಾಣಿಕತೆಗಿಂತ ಐಶ್ವರ್ಯ ದೊಡ್ಡದಲ್ಲ. ಮದುವೆ ಜನ್ಮ ಜನ್ಮದ ಸಂಬಂಧ. ಅದು ಕೈಲಾಸದಲ್ಲಿ ಕೂಡಿರುತ್ತದೆ. ಪ್ರೇಮ ಹಸಿವು ಜೀವನದ ಪ್ರತ್ಯಕ್ಷ ದೇವರುಗಳು. ಮನುಷ್ಯ ಅವುಗಳ ಆರಾಧಕ. ಅವುಗಳಿಲ್ಲದೆ ಆತ ಬದುಕಲಾರ. ಕರಿದ ಕಡ್ಲಿಬ್ಯಾಳಿ ಮಾರುವುದು ನನ್ನಮ್ಮನಿಗೆ ಸೋಮೇಶ್ವರ ಕರುಣಿಸಿದ ಕಾಯಕ. ಅದೇ ನಮ್ಮ ಕೈಲಾಸ. ತಾಯಿಯೇ ನನಗೆ ಮೊದಲ ಗುರು. ಅವಳು ನನಗೆ ಕಲಿಸಿದ ಪಾಠ ಈ ಕಾಯಕ. ಬಡವ ಜಂಗಮರಾದ ನಮಗೆ ಅದೇ ಹೊಟ್ಟೆಗೆ ಅನ್ನ ನೀಡುವ ತಾಯಿ. ಅದು ನಮ್ಮ ಕುಲ ಕಸುಬು. ಸತಿ ಪತಿಯ ಕಾಯಕ ಅನುಸರಿಸುವುದು ಅವಳ ಧರ್ಮ. ನಮ್ಮ ಮನೆ – ನಮ್ಮ ಗುಡಿಸಲು. ನಾವಿಬ್ಬರು ತಾಯಿ ಮಗನಿಗೆ ಆಕಾಶವೇ ಚಪ್ಪರವಾದಾಗ ಚಳಿ, ಗಾಳಿ, ಮಳೆ, ಬಿಸಿಲುಗಳಿಂದ ರಕ್ಷಿಸಿದ ಮನೆ. ನಮ್ಮನ್ನು ಬದುಕಿಸಿದ ಶಿವನ ಮನೆ. ಚಿಗವ್ವ ದಾನ ಕೊಟ್ಟ ಮನೆ. ಹೆಣ್ಣುಮಕ್ಕಳ ಉಡಿ ತುಂಬಿದ ಪುಣ್ಯದ ಮನೆ. ಮುಂದಿಟ್ಟ ತಾಟು ಕೊಡಬೇಕು. ಕೂತ ಮಣೆ ಬಿಟ್ಟು ಕೊಡಬಾರದು. ಪತಿಯಿದ್ದಲ್ಲಿ ಸತಿ ಇರುವುದೇ ಅವರ ಧರ್ಮ. ನನ್ನ ಆಸ್ತಿ ಕೆಂಪಿ. ಆಕೆಯ ಮೇಲೆ ನಿಮ್ಮ ಅಧಿಕಾರವಿಲ್ಲ ಅಂತ ನನಗೆ ಬರೆದು ಕೊಡಬೇಕು. ಪ್ರೇಮ ಅಧಿಕಾರಕ್ಕಾಗಿ ಕಚ್ಚಾಡುವುದಿಲ್ಲ. ಅದು ತ್ಯಾಗ ಬಯಸುತ್ತದೆ.” (ಪುಟ 95-96) ಎಂಬ ಸೋಮೇಶನ ಮಾತಿಗೆ ಕೆಂಪಿಯ ತಂದೆ ಮಾನಪ್ಪ ಗೌಡರು ಕರಗಿ ಅವನನ್ನು ತಬ್ಬಿಕೊಳ್ಳುತ್ತಾರೆ. ಜಾತಿ, ಮತ, ಕುಲಗಳೆಂಬ ಕಟ್ಟುಪಾಡುಗಳನ್ನು ಹರಿದೊಗೆದು ಮಾನವೀಯತೆಯಲ್ಲಿ ಲೀನವಾಗುವ ಕ್ಷಣವನ್ನು ಸೊಗಸಾಗಿ ಚಿತ್ರಿಸಿದ ಲೇಖಕಿಯು ತಮ್ಮ ಧೋರಣೆ ಮತ್ತು ಆದರ್ಶಗಳನ್ನು ವ್ಯಕ್ತಪಡಿಸುವ ಉದ್ದೇಶದಿಂದ ಸೋಮೇಶನ ವಯಸ್ಸಿಗೆ ಮೀರಿದ ಮಾತುಗಳನ್ನು ಆಡಿಸಿದ್ದಾರೆ.

    ಮಾನಪ್ಪ ತಾರಕ್ಕ ದಂಪತಿಗಳು ಅಪಘಾತದಲ್ಲಿ ತೀರಿಕೊಂಡ ಮೇಲೆ ಅವರ ಮಗ ವೃಷಭೇಂದ್ರ ಎಲ್ಲ ಅರ್ಥಗಳಲ್ಲೂ ಒಂಟಿಯೆನಿಸಿಕೊಳ್ಳುತ್ತಾನೆ. ಅಕ್ಕ ಕೆಂಪಿ ಮತ್ತು ಬಾವ ಸೋಮೇಶ ತಮ್ಮ ಮಗನಾದ ಸಿದ್ಧೇಶನ ಪಾಲನೆಗಳಲ್ಲಿ ಮಗ್ನರಾಗಿರುವುದರಿಂದ ತಾಯಿಯ ಕೊರತೆ ಕಾಡುತ್ತದೆ. ಇದು ಅವನ ವಿದ್ಯಾಭ್ಯಾಸದ ಮೇಲೆ ವಿರುದ್ಧ ಪರಿಣಾಮವನ್ನು ಬೀರುತ್ತದೆ. ಅವನು ಓದಿನಲ್ಲಿ ಹಿಂದೆ ಬಿದ್ದರೆ ಸಿದ್ಧೇಶನು ಆಟಪಾಠಗಳಲ್ಲಿ ಮೊದಲಿಗನಾಗಿ ಊರಿಗೆ ಹೆಸರು ತರುತ್ತಾನೆ. ಆದರೆ ಆತನಿಗೆ ವೃಷಭೇಂದ್ರನ ಮೇಲೆ ಮತ್ಸರವಿರುತ್ತದೆ. ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಾನೆ. ಆದರೆ ಸಿದ್ಧೇಶನ ತಂಗಿ ಶಾಂಭವಿಯು ವೃಷಭೇಂದ್ರನನ್ನೇ ಹಚ್ಚಿಕೊಂಡಿರುತ್ತಾಳೆ. ಹಿತನುಡಿಗಳನ್ನು ಹೇಳಲು ಬಂದ ಅಜ್ಜಿ ಗಂಗವ್ವನನ್ನು ನೀ ಸೋಮೇಶ್ವರಕ್ಕೆ ಹೋಗಿ ಬಿಡ (ಪುಟ 159) ಅನ್ನುವುದು, ಪರೀಕ್ಷೆಗಳಲ್ಲಿ ತೇರ್ಗಡೆಯಾಗದ ವೃಷಭೇಂದ್ರನನ್ನು ‘ದಡ್ಡಧ್ವಾಮಾ’ ಎಂದು ಜರೆಯುವುದು ಇವುಗಳಿಗೆ ಉದಾಹರಣೆಗಳಾಗಿವೆ. ಕೆಂಪಿಯ ಅತಿಯಾದ ಪ್ರೀತಿಯು ಅವನ ಬುದ್ಧಿಗೆಡಿಸಿರುತ್ತದೆ. “ಮಗಾ ಶಾಣ್ಯಾ ಅದಾನ. ಗುಣಾ ಕಮ್ಮಿ. ಭಾಳ ಹಟ; ಸೊಕ್ಕು. ಬಡವರು, ದಡ್ಡರು, ಕುರೂರ್ನಪ ಕಂಡ್ರ ಆಗೂದಿಲ್ಲ. ಜೀವನ ತಲೀಗೆ ಬಡೀತಂದ್ರ ಹಾದಿಗೆ ರ್ತಾನನು” (ಪುಟ 161) ಎಂಬ ರುದ್ರಣ್ಣಮಾವಾರ ಮಾತು ಸಿದ್ಧೇಶನ ವ್ಯಕ್ತಿತ್ವವನ್ನು ಒಂದೇ ಮಾತಿನಲ್ಲಿ ಕಡೆದು ನಿಲ್ಲಿಸುತ್ತದೆ. ಇದಕ್ಕೆ ವಿರುದ್ಧ ನೆಲೆಯಲ್ಲಿದೆ ವೃಷಭೇಂದ್ರ ಶಾಂಭವಿಯರ ಜಗತ್ತು. ಓದಿನಲ್ಲಿ ಹಿಂದುಳಿದ ವೃಷಭೇಂದ್ರನಿಗೆ ಓದಿನಲ್ಲಿ ಮಾತ್ರವಲ್ಲ ಬದುಕಿನಲ್ಲಿಯೂ ಆಸಕ್ತಿ ಚಿಗುರುವಂತೆ ಮಾಡಿ ಓದಿಸಿ ಅವನನ್ನು ಇಂಟರ್ ಆರ್ಟ್ಸ ಪರೀಕ್ಷೆಯಲ್ಲಿ ಮೊದಲ ವರ್ಗದಲ್ಲಿ ತೇರ್ಗಡೆಯಾಗುವಂತೆ ಮಾಡುವಲ್ಲಿ ಶಾಂಭವಿಯ ಪಾತ್ರ ದೊಡ್ಡದು. ಅವನು ಎಷ್ಟು ಮುಗ್ಧನೆಂದರೆ “ಶಾಂಭವಿ ಇದ್ಲಂತ ಫಸ್ಟ್ ಕ್ಲಾಸಲ್ಲಿ ಪಾಸಾಗೇನಿ. ಇಲ್ಲಂದ್ರ ಢುಮುಕಿ ಹೊಡೀತಿದ್ದೆ. ನನಗಿನ್ನು ಎಂ.ಎ., ಪಿ.ಎಚ್.ಡಿ ಮಾಡಬೇಕು” (ಪುಟ 162) ಎಂದು ಪೋಷಕರಲ್ಲಿ ಬಾಯಿಬಿಟ್ಟು ಹೇಳುವಲ್ಲಿ ಪರಿಶುದ್ಧ ಪ್ರೇಮದ ದಿವ್ಯ ಶಕ್ತಿಯ ಪರಿಚಯವಾಗುತ್ತದೆ. ವಿಶ್ವವಿದ್ಯಾಲಯಕ್ಕೇ ಮೊದಲಿಗನಾದ ಸಿದ್ಧೇಶನನ್ನು ಹಿಡಿಯುವವರೇ ಇಲ್ಲ. ಅಲ್ಲಿಗೆ ಕಾಲಿಟ್ಟ ಬಳಿಕ ಆತನು ಎಂಥ ದುರಹಂಕಾರಿಯಾಗುತ್ತಾನೆ ಎಂದರೆ ತನ್ನ ಹೆಸರಿನ ಮುಂದೆ ‘ಬ್ಯಾಳಿಮಠ’ ಎಂಬ ಕುಲನಾಮವು ಅವನ ಪಾಲಿಗೆ ಅಪಸ್ವರವೆನಿಸುತ್ತದೆ. ಈ ಮಾತನ್ನು ಸೊಕ್ಕಿನಿಂದ ನುಡಿದೂ ಬಿಡುತ್ತಾನೆ. ಗಂಗವ್ವನನ್ನು ‘ಮುದುಕಿ’ ಎಂದರೆ ‘ವಿದ್ಯೆ ಜೊತೆಗೆ ವಿನಯವಿಲ್ಲದಿದ್ದರೆ ಅದು ನಾಯಿ ಮೊಲೆಯ ಹಾಲು’ ಎಂದ ರುದ್ರಣ್ಣಮಾವನ ಬಳಿ “ನಾಯಿಹಾಲ ಕುನ್ನಿ ಕುಡೀತವ. ತಾಯಿನೂ ನಾಯಿರಿ. ನಾಯಿನೂ ತಾಯಿರಿ” (ಪುಟ 170) ಎನ್ನುತ್ತಾನೆ. ಎಷ್ಟೇ ಬೈದರೂ ಆತ ಗುಣಹೀನನೆಂಬುದು ಸೋಮೇಶನಿಗೆ ಮನದಟ್ಟಾಗುತ್ತದೆ. ಮಗ ಕೈಬಿಟ್ಟು ಹೋದನೆಂದು ಸ್ಪಷ್ಟವಾಗುತ್ತದೆ. ತೀವ್ರ ಬಡತನದಲ್ಲೂ ಆತನು ಮಗನನ್ನು ಓದಿಸಿದ್ದ. ಆತನು ಮಗನ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದ. ದೊಡ್ಡವನಾಗಿ ಬೆಳೆದ ಬಳಿಕ ಆತನ ಸ್ವಭಾವವು ಇಷ್ಟೂ ಬದಲಾಗಬಹುದೆಂದು ಭಾವಿಸಿರಲಿಲ್ಲ. ಗರಿಬಲಿತ ಕೂಡಲೇ ಹಾರಿಹೋಗುವ ಹಕ್ಕಿಯಂತೆ ದೂರವಾದಾನು ಎಂದುಕೊಂಡಿರಲಿಲ್ಲ. ನೆನಪುಗಳನ್ನು ಸಲೀಸಾಗಿ ಕತ್ತರಿಸಿಕೊಂಡು ಬೇರೆಲ್ಲೋ ಬದುಕುವನು ಎಂದು ಯೋಚಿಸಿರಲಿಲ್ಲ. ತಾನು ಹದಿಹರೆಯದವನಾಗಿದ್ದಾಗ ತಂದೆಯನ್ನು ನೋಯಿಸಿ ಕಳುಹಿಸಿದ್ದಕ್ಕೆ ದೇವರು ನೀಡಿದ ಶಿಕ್ಷೆ ಎಂದುಕೊಂಡು ಸುಮ್ಮನಾಗುತ್ತಾನೆ. ಲೇಖಕಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟ ‘ನಾಸು’ ಕಾದಂಬರಿಯಲ್ಲೂ ಇದೇ ರೀತಿಯ ಪಾತ್ರವಿನ್ಯಾಸ ಮತ್ತು ಕಥನವಿನ್ಯಾಸವಿದೆ. ಸಿದ್ಧೇಶನ ಜಾಗದಲ್ಲಿ ಲಕ್ಷ್ಮಣನಿದ್ದರೆ ವೃಷಭೇಂದ್ರನ ಜಾಗದಲ್ಲಿ ನಾನಿ ಇರುತ್ತಾನೆ. ಆದ್ದರಿಂದ ‘ಕಾಯಕ ಕೈಲಾಸ’ದ ಪಾತ್ರಗಳು ‘ನಾಸು’ ಕಾದಂಬರಿ ಜಗತ್ತಿನ ಸೂಕ್ಷ್ಮರೂಪವಾಗಿ ಕಂಡು ಬರುತ್ತವೆ.

    ಸಿದ್ಧೇಶನ ಗೆಳೆಯನೂ ಆಗರ್ಭ ಶ್ರೀಮಂತನೂ ಆದ ಉಮೇಶ ಮತ್ತು ಆತನ ತಂಗಿಯಾದ ರಂಜಿತಾಳ ಪ್ರವೇಶವು ಕಾದಂಬರಿಗೆ ತಿರುವನ್ನು ನೀಡುತ್ತದೆ. ಉಮೇಶನು ವೃಷಭೇಂದ್ರನ ಹುಡುಗಿ ಶಾಂಭವಿಯನ್ನು ಕಂಡು ಮೋಹಗೊಳ್ಳುವುದರೊಂದಿಗೆ ತ್ರಿಕೋನ ಪ್ರೇಮದ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಸಿದ್ಧೇಶನು ತನ್ನ ತಾಯಿ ಕೆಂಪಿಗೆ ಉಮೇಶನ ಸಿರಿವಂತಿಕೆಯನ್ನು ಬಣ್ಣಿಸಿ ಆಕೆಯ ಮನದಲ್ಲಿ ಮಗಳ ಮದುವೆಯ ಬಗ್ಗೆ ಆಸೆಯನ್ನು ಹುಟ್ಟಿಸುವುದರಲ್ಲಿ ಸಫಲನಾದರೂ ಶಾಂಭವಿಯು ಈ ಪ್ರಸ್ತಾಪವನ್ನು ನಿರಾಕರಿಸಿ ಅಣ್ಣನ ಕೋಪಕ್ಕೆ ತುತ್ತಾಗುತ್ತಾಳೆ. ಪ್ರೀತಿ ಒಲಿಯುವುದು ಗುಣಕ್ಕೆ ಹೊರತು ಹಣಕ್ಕಲ್ಲ ಎಂಬ ದನಿಯು ಇಲ್ಲಿದೆ. ಮಾತಿಗೆ ಮಾತು ಬೆಳೆದು ಸಿದ್ಧೇಶನು ವೃಷಭೇಂದ್ರನನ್ನು ಚುಚ್ಚಿ ನುಡಿದಾಗ “ಹೌದು ನಾನು ಅವನ್ನ ಲವ್ ಮಾಡ್ತೀನಿ. ಶ್ರೀಮಂತ ಗೆಳ್ಯಾನ ಬೆನ್ನತ್ತಿ, ನನ್ನ ಅವಗ ಕೊಡಿಸಿ ಆಕಿನ್ನ ತರಾಂವ ಅಲ್ಲ. ಅಲ್ಲಿ ಹೋಗಿ ಇರಾಂವ” (ಪುಟ 189) ಎಂದು ಅವನ ಮುಖಕ್ಕೆ ಹೊಡೆಯುವಂತೆ ಹೇಳುತ್ತಾಳೆ. ಸಮಸ್ಯೆಗಳನ್ನು ನಿವಾರಿಸುವಲ್ಲಿ ಗಂಗವ್ವನಿಗೆ ದೈವಕೃಪೆಯು ನೆರವಿಗೆ ಬಂದರೆ, ಕೆಂಪವ್ವನ ಕಷ್ಟಗಳಿಗೆ ಸೋಮೇಶ ಜೊತೆಯಾಗಿರುತ್ತಾನೆ. ಆದರೆ ಶಾಂಭವಿಯು ಏಕಾಂಗಿಯಾಗಿ ಎದುರಿಸುತ್ತಾಳೆ. ಸಿದ್ಧೇಶನಿಗೆ ಅವಮಾನವಾದುದರಿಂದ ಸಿಟ್ಟುಗೊಂಡು ಅಲ್ಲಿದ್ದ ಮನೆಮಂದಿಗಳನ್ನು ಕೆಟ್ಟದಾಗಿ ಬೈಯತೊಡಗುತ್ತಾನೆ. ಸೋಮೇಶನಿಂದ ಏಟುಗಳನ್ನು ತಿಂದು ಮನೆಬಿಟ್ಟು ಹೊರಡಲು ತಯಾರಾಗುತ್ತಾನೆ. ಆತನು ತನ್ನ ಮೇಲೆ ಮಾಡಿದ ಅನ್ಯಾಯಗಳನ್ನು ಒಂದೊಂದಾಗಿ ಹೇಳಿದ ವೃಷಭೇಂದ್ರನು “ಇಷ್ಟು ದಿನ ಆ ಸಿದ್ಧು ಬಾಯಿ ಬಂದದ್ದ ಅಂದಾನ, ಹೊಡದಾನ. ನಮ್ಮಕ್ಕಗ ಎಲ್ಲ ಗೊತ್ತೈತಿ. ಒಂದು ದಿನಾ ಆಕಿ ಮಗ್ಗ ನಿಮ್ಮ ಮಾವ ದೊಡ್ಡಾವ, ಅವಗ ಹಾಂಗ ಅನಬ್ಯಾಡಂತ ಹೇಳಿಲ್ಲ. ಆಕಿಗೆ ನನಗಿಂತ ಮಗ ಹೆಚ್ಚು. ನನಗ ತಾಯಿ ಇಲ್ಲ. ತಂದಿ ಇಲ್ಲ. ಅನಾಥ” (ಪುಟ 198) ಎಂದು ಕೆಂಪಿಯನ್ನೇ ವಿಮರ್ಶಿಸಿ ಮನೆ ಬಿಟ್ಟು ಹೋಗಲು ನಿರ್ಧರಿಸುತ್ತಾನೆ. ಇದರಿಂದ ಮಖಭಂಗಕ್ಕೆ ಒಳಗಾದ ಕೆಂಪವ್ವ ವೃಷಭೇಂದ್ರನ ಜೊತೆ ನಡೆಯಲಿರುವ ಶಾಂಭವಿಯ ಮದುವೆಯನ್ನು ಮುಂದೂಡುತ್ತಾಳೆ. ಕೂಡಿ ಬಾಳಿದ ಕುಟುಂಬವು ವಿಘಟನೆಯಾಗುವ ಬಗೆಯನ್ನು ಇಲ್ಲಿ ಕಾಣಬಹುದು. ಸೋಮೇಶನು ಮಗನನ್ನು ಬೆಂಬಲಿಸದಿದ್ದರೂ ಸಿದ್ಧೇಶನು ತನ್ನ ಮಗನಾಗಿರುವುದರಿಂದ ತನ್ನ ಕುದಿತವನ್ನು ತೋರಿಸಿಕೊಳ್ಳದೆ ಒಳಗೊಳಗೆ ಬೇಯುತ್ತಾನೆ. ಎಳೆಜೀವಗಳ ಪ್ರೇಮದ ಮೊಗ್ಗು ಕಮರದಂತೆ ನೋಡಿಕೊಳ್ಳುವ ಉದ್ದೇಶದಿಂದ, ಪುತ್ರವಾತ್ಸಲ್ಯವು ಕೆಂಪವ್ವ ಸೋಮೇಶರನ್ನು ಕುರುಡರಾಗಿಸಿದರೆ ತಾವು ಭೀಷ್ಮರಂತೆ ಶರಶಯ್ಯೆಯ ಮೇಲೆ ಮಲಗಿ ಪ್ರೇಮ ಗಂಗೆ ಚಿಮ್ಮುವಂತೆ ನೋಡಿಕೊಳ್ಳಬೇಕೆಂದು ಗಟ್ಟಿ ಮಾಡಿಕೊಂಡ ರುದ್ರಣ್ಣ ಮಾವನು ವೃಷಭೇಂದ್ರನ ಪರ ನಿಲ್ಲುತ್ತಾರೆ. ಹದಿಹರೆಯದಲ್ಲಿ ತಾನು ತಂದೆಗೆ ಎದುರಾಡಿದಂತೆ ಮಗ ಸಿದ್ಧೇಶನು ದೂರವಾಗುವ ಹಂತದಲ್ಲಿ ಮೊದಲೇ ಮಾತು ಕೊಟ್ಟಂತೆ ಸೋಮೇಶನ ತಂದೆಯಾಗಿ ಬರುವ ಶಿವಲಿಂಗೇಶ್ವರಪ್ಪನು ಕದಡಿದ ಸಂಸಾರವನ್ನು ತಿಳಿಯಾಗಿಸುತ್ತಾನೆ. ಅದು ಆತನ ಮಡದಿ ಗಂಗವ್ವನ ಬದುಕಿನ ಪೂರ್ಣತೆಯ ಹಂತ. ಆದ್ದರಿಂದ ಆತನು ಗಂಗವ್ವನನ್ನು ತನ್ನ ಜೊತೆಗೆ ಕಾಶಿಗೆ ಕರೆದುಕೊಂಡು ಹೋಗುತ್ತಾನೆ. ಇತ್ತ ಸಿದ್ಧೇಶನು ಲಿಂಗನಮಕ್ಕಿಯವರ ಮನೆಯಲ್ಲಿ ಉಳಿದುಕೊಂಡು, ಮನೆಯ ಶುಭ ಕಾರ್ಯಕ್ರಮಕ್ಕೆ ಬಾರದೆ, ಹೆತ್ತವರಿಗೆ ಒಂದು ಮಾತೂ ತಿಳಿಸದೆ ರಂಜಿತಾಳೊಂದಿಗಿನ ನಿಶ್ಚಿತಾರ್ಥವನ್ನು ಮುಗಿಸಿ ಮದುವೆಯಾಗುತ್ತಾನೆ. ಇವರ ಸಂಸಾರವು ಯಾವ ಗೊಂದಲ ಗೋಜಲುಗಳಿಲ್ಲದೆ ಸುಖವಾಗಿ ಸಾಗುತ್ತದೆ. ಆಧುನಿಕತೆ – ಪರಂಪರಾಗತ ಮೌಲ್ಯಗಳು ಮತ್ತು ನಗರ ಜೀವನ – ಗ್ರಾಮ್ಯ ಬದುಕಿನ ವ್ಯತ್ಯಾಸಗಳನ್ನು ಅವಲೋಕಿಸುವ ಅವಕಾಶವು ಇಲ್ಲಿಂದ ಸೃಷ್ಟಿಯಾಗುತ್ತದೆ. ಪೂರ್ವಜರ ಬದುಕು ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಶೋಧಕ್ಕೆ ಸಿದ್ಧೇಶನು ಮಾನದಂಡವಾಗುತ್ತಾನೆ. ಮಕ್ಕಳನ್ನು ಹೆತ್ತು ಸಾಕಿ ಸಲಹುವುದು ಕೇವಲ ಸ್ವಾರ್ಥಕ್ಕಾಗಿ ಅಲ್ಲ. ಸೃಷ್ಟಿಯ ಈ ವರದಾನವು ದೈಹಿಕ ಅಗತ್ಯಗಳ ಪೂರೈಕೆಗಾಗಿ ಮಾತ್ರವಲ್ಲ. ರೆಕ್ಕೆ ಬಲಿತ ಹಕ್ಕಿಗಳಂತೆ ದೂರವಾಗುವ ಮನುಷ್ಯನಿಗೆ ತಾನು ಮೃಗಪಕ್ಷಿಗಳಿಗಿಂತ ಭಿನ್ನವೆಂದು ತಿಳಿಯುವ ಬುದ್ಧಿಯಿಲ್ಲ. ಸಿದ್ಧೇಶನು ದೊಡ್ಡವನಾಗಿದ್ದಾನೆ. ತನ್ನ ಇಚ್ಛೆಯಂತೆ ಬದುಕು ಸಾಗಿಸುವ ಹಕ್ಕು ಅವನಿಗೆ ಇದೆ. ಆದರೆ ತಂದೆ ತಾಯಿಯರಿಗೆ ತಿಳಿಸದೆ ಮದುವೆಯಾಗಿ ಅವರಿಗೆ ಅವಮಾನಿಸುವ ಹಕ್ಕು ಅವನಿಗಿಲ್ಲ ಎಂಬ ಧ್ವನಿ ಇಲ್ಲಿದೆ. ಕಡಲೆಬೇಳೆಯ ಎಡೆ ಮಾಡುವ ಕಾಯಕವನ್ನು ಹೀನೈಸಿ ಮಾತನಾಡಿದ ಸಿದ್ಧೇಶನ ಬಳಿ “ನಿನಗೂ ನಿನ್ನಂಥಾವನ ಮಗ ಹುಟ್ಟಲಿ. ನಮ್ಮ ಮನಿ ಕಾಯಕ ಆ ಮಗನ ಸಲುವಾಗಿ ನೀ ಮಾಡಾಕ ಬೇಕ. ರಸ್ತೆಗೆ ಕುಂತ ನೀ ಕಡ್ಲಿಬ್ಯಾಳಿ ಮಾರಬಾಕ. ನಿನ್ನ ಹೆಂಡ್ತಿ ನಮ್ಮ ಎಡಿ ತಿಂದು ಹಡೀಬೇಕ” (ಪುಟ 132) ಎನ್ನುವ ಕೆಂಪವ್ವನ ಒಡಲ ಉರಿಯ ಬೇಗೆ ಅದನ್ನು ಪುಷ್ಟೀಕರಿಸುತ್ತದೆ. ತಮ್ಮನ್ನು ಕರೆಯದೆ ಮದುವೆಯಾದ ಕೊರಗಿನಲ್ಲಿ ಕೆಂಪಿಯು ಮರಣ ಹೊಂದುತ್ತಾಳೆ. ಸೋಮೇಶ ಕೆಂಪವ್ವರ ಪ್ರೇಮ, ಹಿರಿಯರ ವಿರೋಧ, ಮಾನಪ್ಪನ ಕರಾರು ಪತ್ರಕ್ಕೆ ಸೋಮೇಶನ ಉತ್ತರ, ಸಜ್ಜನಿಕೆಯ ಮೂಲಕ ಸೋಮೇಶ ಅವರ ಮನಗೆದ್ದ ರೀತಿ, ಮದುವೆ ಸಂಭ್ರಮ, ಸಿದ್ಧೇಶ ಶಾಂಭವಿಯರ ಜನನ ಮುಂತಾದ ವಿದ್ಯಮಾನಗಳು ಬದುಕಿನ ಬೆಳವಣಿಗೆಯನ್ನು ದಾಖಲಿಸಿದರೆ ಮಾನಪ್ಪ ತಾರಕ್ಕನ ಮರಣ, ಸೋಮೇಶನ ಪಾಲಿಗೆ ಅವರ ಮನೆ ಮತ್ತು ವೃಷಭೇಂದ್ರನ ಪಾಲನೆಯ ಭಾರ, ಸಿದ್ಧೇಶನ ವಿಚಿತ್ರ ನಡತೆ, ವೃಷಭೇಂದ್ರನ ಮೇಲೆ ದ್ವೇಷ ಇವುಗಳು ಮನೆಯ ಹದವನ್ನು ಕೆಡಿಸಿಬಿಡುತ್ತವೆ. ಸಿದ್ಧೇಶನ ಮದುವೆಯು ಕೆಂಪಿಯ ಜೀವವನ್ನು ಬಲಿ ತೆಗೆದುಕೊಳ್ಳುತ್ತದೆ. ಆಘಾತವನ್ನು ತಾಳಲಾರದೆ ಅನಾರೋಗ್ಯ ಪೀಡಿತನಾದ ಸೋಮೇಶನನ್ನು ಸಾಂತ್ವನಪಡಿಸುತ್ತಾ “ಸಾವು ಯಾರ್ನೂ ಬಿಟ್ಟಿಲ್ಲ. ಬದುಕು ಉಚಿತ. ಸಾವು ಖಚಿತ. ಅದು ನಮ್ಮ ಬೆನ್ನು ಹತ್ತಿ ಬರ್ತಕದ, ಬಾಜೂಕ ಕೂಡ್ತದ. ದೂರದ ಹಾದಿ ತನಕಾ ನಮ್ಮ ಜೋಡಿ ಬರತದ. ತಾ ಹೋಗೋ ಮುಂದ ನಮ್ಮನ್ನ ಕರಕೊಂಡು ಹೋಗತದ. ಸಂಸಾರ ನಾಕ ದಿನದ ಸಂತಿ. ಪತಿ ಪತ್ನಿ ಒಂದಾಗಿ ಇದ್ರೂ ಹಿಂದಮುಂದ ಆಗೋದ. ಅದು ಶಿವನ ಆಜ್ಞಾ. ಮನುಷ್ಯಗ ತಪ್ಪಿಸಾಕ ಸಾಧ್ಯಯಿಲ್ಲ. ಈ ಭೂಮಿ ಬಿಟ್ಟು ಹೋದೊರು ಪರತ ಬರೂದಿಲ್ಲ. ವಿವೇಕ ಕಳಕೋಬಾರದು. ಅದನ್ನ ಬಂಗಾರದ್ಹಂಗ ವರಿಗೆ ಹಚ್ಚಬೇಕು. ನಮ್ಮನ್ನು ನಂಬಿದವರಿಗೆ, ಪ್ರೀತಿಸಿದವರಿಗೆ, ಹಿರೇರಿಗೆ ಇನ್ನೂ ಹೆಚ್ಚ ನೋವ ಕೊಡಬಾರದು. ಹಂಗ ನಡಿಯೋದ ಧರ್ಮ. ನಮ್ಮ ಕರ್ತವ್ಯನ ಶಿವನ ಪೂಜಿ. ಸೂತಕದಾಗ ಇದ್ದಾಗೂ ಶಿವನ ಧ್ಯಾನ ಬಿಡಬಾರದು.” (ಪುಟ 354) ಎಂಬ ಮಾತು ಕಾದಂಬರಿಯ ಆಶಯಕ್ಕೆ ದನಿಯಾಗುತ್ತವೆ. ಆರೋಗ್ಯವು ಸುಧಾರಿಸಿದ ಬಳಿಕ ವೈರಾಗ್ಯಪರನಾಗಿ ಮಠವನ್ನು ಸೇರಿದಾಗ ಆತನಿಗೆ ಕರ್ತವ್ಯದ ಹೊಣೆಯನ್ನು ನೆನಪಿಸಿ ಮರಳಿ ಕರೆತರುವ ಶಾಂಭವಿಯ ನಡತೆಯು ‘ಈಸಬೇಕು ಇದ್ದು ಜೈಸಬೇಕು’ ಎಂಬ ನುಡಿಯನ್ನು ನೆನಪಿಸುತ್ತದೆ.

    ಅಮ್ಮನ ಉತ್ತರಕ್ರಿಯೆಗೆ ಬಾರದಿದ್ದ ಸಿದ್ಧೇಶನ ಮನದಲ್ಲಿ ಮಂಥನ ನಡೆಯುತ್ತದೆ. ಸಿಟ್ಟಿನ ಭರದಲ್ಲಿ ತಾಯಿಯ ಮುಖ ನೋಡದೆ ಹೊರಟ ಬಂದದ್ದು ತಪ್ಪೆನಿಸುತ್ತದೆ. ತಾಯಿಯ ಪ್ರೀತಿಯಷ್ಟು ನಿಷ್ಕಲ್ಮಶ ಪ್ರೀತಿಯು ಲಿಂಗಕ್ಕಿಮಠದ ಸಾಹೇಬರ ಮನೆಯಲ್ಲಿ ದೊರಕದಿರುವುದು ಇದಕ್ಕೆ ಕಾರಣವಾಗಿದೆ. ಅವನು ತನ್ನ ತಂದೆಯನ್ನೂ ಪ್ರೀತಿಸುತ್ತಿರಲಿಲ್ಲ. ಆದರೆ ತಾಯಿಯ ಮರಣದ ಬಳಿಕ ಅವರ ತಲೆಕೆಟ್ಟು ಪರಿಸ್ಥಿತಿ ನಾಜೂಕಾಗಿದೆ ಎಂದು ತಿಳಿದಾಗ ತಲ್ಲಣಿಸುತ್ತಾನೆ. ತನ್ನ ಮನೆಯವರು ಸುಸಂಸ್ಕೃತ ಜನರಲ್ಲ. ಸುಮ್ಮನಿದ್ದರೆ ಅವರು ಶಾಂಭವಿಯ ಹೆಸರಿಗೆ ಆಸ್ತಿಯನ್ನು ಬರೆಯುವ ಸಾಧ್ಯತೆ ಇರುವುದರಿಂದ ನ್ಯಾಯವಾದಿಗಳ ಮೂಲಕ ಈಗಲೇ ಸೂಚನೆಯನ್ನು ಕಳುಹಿಸಬೇಕು ಎಂದ ಲಿಂಗಕ್ಕಿಮಠ ಸಾಹೇಬರಿಗೆದುರಾಗಿ ‘ನಮ್ಮಮ್ಮ ಮಲಗಿದ ಕುಣಿಯ ದೀಪ ಇನ್ನೂ ಆರಿಲ್ಲ. ತಂದೆಗೆ ಆಸ್ತಿ ಕೇಳುವುದೇ?’ ಎಂದು ವಾದಿಸುತ್ತಾನೆ. ಇದು ರಕ್ತಸಂಬಂಧದ ಬಲವನ್ನು ಸೂಚಿಸುತ್ತದೆ. ಸಿದ್ಧೇಶನ ಮನೆಯವರು ಹಣವಂತರಲ್ಲದಿದ್ದರೂ ನಡತೆಯಿಂದ ಧನಿಕರಾಗಿದ್ದು ತನ್ನ ಹೆಂಡತಿಯ ಮನೆಯವರು ಧನಿಕರಾಗಿದ್ದೂ ಬಡವರು. ಮನೆಯ ಅಳಿಯನಾದವನು ಹಂಗಿನ ಕೂಳಿಗೆ ಬಿದ್ದಂತೆ ಎಂಬ ಸತ್ಯವು ಮನವರಿಕೆಯಾಗುತ್ತದೆ. ವೃಷಭೇಂದ್ರನನ್ನು ಹಂಗಿಗೆ ಬಿದ್ದವನೆಂಬಂತೆ ನೋಡುತ್ತಿದ್ದ ಸಿದ್ಧೇಶನೇ ಹಂಗಿಗೆ ಬೀಳುವಂತಾಗುವ ವಿಪರ್ಯಾ ಸವನ್ನು ಕಾಣುತ್ತೇವೆ. ಆದರೆ ಲಿಂಗನಮಕ್ಕಿ ಸಾಹೇಬರು ಸ್ವಾಮೀಜಿಯವರ ಬಳಿಗೆ ಹೋಗಿ ನನ್ನ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಬೇಕಾಗಿರುವುದರಿಂದ ಸಿದ್ಧೇಶನ ಓದಿಗಾಗಿ ವೆಚ್ಚ ಮಾಡಲು ರೊಕ್ಕವಿಲ್ಲ. ಆದ್ದರಿಂದ ಸೋಮೇಶನ ತೋಟವನ್ನು ಸಿದ್ಧೇಶನಿಗೆ ಕೊಡಿಸಬೇಕು’ ಎಂದು ನಯವಾಗಿ ಆಸ್ತಿ ಒಳಗೆ ಹಾಕಲು ಹವಣಿಸುತ್ತಾನೆ. ಆದರೆ ಸ್ವಾಮೀಜಿಯು ಸೋಮೇಶನ ಉತ್ತರವನ್ನೇ ಹೇಳಿ ಬಾಯಿ ಮುಚ್ಚಿಸಿ ಕಳುಹಿಸುತ್ತಾರೆ.

    ರಂಜಿತಾ ಬಸುರಾದ ಸುದ್ದಿಯನ್ನು ಕೇಳಿದಾಗ ಸೋಮೇಶನ ಹೃದಯದಲ್ಲಿ ಸಂತಸ ಜಿನುಗುತ್ತದೆ. ಬಾಯಿ ಕಟ್ಟುತ್ತದೆ. ಕಣ್ಣುಗಳು ತುಂಬಿಕೊಳ್ಳುತ್ತವೆ. ಇಲ್ಲಿ ತಂದೆಯ ಆರ್ದ ಹೃದಯದ ಪರಿಚಯವಾಗುತ್ತದೆ. ಆಕೆಯ ಉಡಿಯಲ್ಲಿ ಎಡೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಸಿದ್ಧೇಶನು ಅದರಲ್ಲಿ ಭಾಗವಹಿಸಬಯಸಿದರೂ ರಂಜಿತಾ ಪ್ರಜ್ಞೆ ತಪ್ಪಿ ಬಿದ್ದ ನಾಟಕವಾಡಿ ಕಾರ್ಯಕ್ರಮವನ್ನು ತಪ್ಪಿಸಿ ಎಲ್ಲರಿಗೂ ಬೇಸರವಾಗುವಂತೆ ನಡೆದುಕೊಳ್ಳುತ್ತಾಳೆ. ಕುಟುಂಬದ ಆಚಾರಗಳನ್ನು ತಪ್ಪಿಸಬಾರದು ಎಂಬ ನಿಟ್ಟಿನಲ್ಲಿ ಸೋಮೇಶನು ಎಡೆಯನ್ನು ಕೊಡಲು ಹೋದಾಗ ಬೈರಾಗಿಯಂತಿದ್ದ ಆತನ ಗುರುತು ಹಿಡಿಯಲಾರದೆ ಲಿಂಗನಮಕ್ಕಿ ಸಾಹೇಬರು ಅವಮಾನಿಸಿ ಕಳುಹಿಸುತ್ತಾರೆ. ಎಡೆಗೆ ಅವಮಾನವಾದುದರಿಂದ ಎರಡು ದಿನಗಳೂ ನಾಗರಹಾವು, ಜೇನುನೊಣಗಳು ಮತ್ತು ಇಲಿಗಳು ಕಾಣಿಸಿಕೊಂಡ ಬೆನ್ನಲ್ಲೇ ರಂಜಿತಾಳ ಗರ್ಭಪಾತವಾಗುತ್ತದೆ. ಸಿದ್ಧೇಶನಿಗೆ ತಪ್ಪಿನ ಅರಿವಾಗಿ ಅಪ್ಪನ ಕಾಲಿಗೆ ಬಿದ್ದು ಕ್ಷಮೆಯನ್ನು ಕೇಳುತ್ತಾನೆ. ಆದರೆ ಅವನು ಸೋಮೇಶನ ಪಾಲಿಗೆ ಇದ್ದೂ ಇಲ್ಲವಾಗುತ್ತಾನೆ. ಬದುಕಿನ ಕೊನೆಯಲ್ಲಿ ಅನುಭವಕ್ಕೆ ಬರುವ ಅಭದ್ರತೆ ಮತ್ತು ಶೂನ್ಯತೆಯನ್ನು ಸೋಮೇಶನ ವರ್ತನೆಯಲ್ಲಿ ಕಾಣುತ್ತೇವೆ. ಆದ್ದರಿಂದ ಅವನು ಯಾರಿಗೂ ಹೇಳದೆ ಜ್ಯೋತಿರ್ಲಿಂಗಕ್ಕೆ ತೆರಳುತ್ತಾನೆ. ಹಿರಿಯರ ಮತ್ತು ಕಿರಿಯರ ನಡುವಿನ ಅಪನಂಬಿಕೆ, ಆತಂಕ, ತಿರಸ್ಕಾರ ಮನೋಭಾವ, ತಲೆಮಾರುಗಳ ನಡುವಿನ ಅಂತರ, ಸಂಘರ್ಷ, ಸಂಸ್ಕೃತಿಯ ಮೇಲಿನ ತಿರಸ್ಕಾರ, ಯಾಂತ್ರಿಕ ಬದುಕು, ನೈತಿಕ ಮೌಲ್ಯಗಳ ಕುಸಿತ ಮೊದಲಾದವುಗಳ ಕುರಿತು ಬೆಳಕು ಚೆಲ್ಲುವ ಈ ಕೃತಿಯು ತಂದೆ ತಾಯಿಯರ ಹೃದಯ ವೈಶಾಲ್ಯತೆಯನ್ನು ಪ್ರತಿಪಾದಿಸುತ್ತದೆ. ಹೆತ್ತವರು ಮತ್ತು ಒಡಹುಟ್ಟುಗಳ ನಡುವಿನ ಬಾಂಧವ್ಯದ ಬೆಸುಗೆಯು ಬಲವಾಗಿದ್ದರೆ ಅದುವೇ ಸ್ವರ್ಗ ಎಂಬ ವಿಚಾರವನ್ನು ಪ್ರತಿಪಾದಿಸುತ್ತದೆ.

    ಸಾಹಿತ್ಯದಲ್ಲಿ ನೈತಿಕತೆಯ ಸ್ಥಾನವೇನು ಎಂಬ ಪ್ರಶ್ನೆಗೆ ಈ ಕಾದಂಬರಿಯೇ ಉತ್ತರವಾಗಿದೆ. ಸಂವೇದನೆಯ ಸೂಕ್ಷ್ಮತೆಗೆ ಕೊಡುವ ಮಹತ್ವದಲ್ಲಿ, ನೋವಿಗೆ ಸ್ಪಂದಿಸುವ ಸೂಕ್ಷ್ಮತೆಯಲ್ಲಿ, ಇತರರ ನೋವನ್ನು ಅಲಕ್ಷಿಸುವ ವಿಷಯದ ಬಗೆಗಿನ ತಿರಸ್ಕಾರದಲ್ಲಿ ಈ ನೈತಿಕತೆಯ ಸಾನ್ನಿಧ್ಯವಿದೆ. ಸಂಬಂಧಗಳ ಸಂಕೀರ್ಣತೆ, ವಿಷಮ ದಾಂಪತ್ಯ, ವ್ಯಕ್ತಿಯನ್ನು ಕ್ರೂರವೂ, ನಿರ್ದಯವೂ ಆಗಿ ನಡೆಸಿಕೊಳ್ಳುವ ವ್ಯವಸ್ಥೆ, ಸಣ್ಣಪುಟ್ಟ ಕನಸುಗಳನ್ನು ನನಸಾಗಿಸಲು ಸಾಧ್ಯವಾಗದ ಜನಸಾಮಾನ್ಯರ ದಿನನಿತ್ಯದ ಬದುಕು, ಅಮೂರ್ತ ಕ್ರೌರ್ಯ, ತಲ್ಲಣ, ಭೀತಿ, ವಿಷಾದ, ಒಂಟಿತನ, ಉದ್ವಿಗ್ನತೆ, ಸಾವಿನ ಆಘಾತ ಮತ್ತು ಪರಿಣಾಮಗಳನ್ನು ಬೆಸೆದು ಹೆಣೆದ ಕಾದಂಬರಿಯು ತನ್ನ ಆರ್ದ್ರತೆಯೊಂದಿಗೆ ಮನಮುಟ್ಟುತ್ತದೆ. ನೈತಿಕಪ್ರಜ್ಞೆಗೆ ಪೂರಕವಾಗಿ ದುಡಿಸಿಕೊಳ್ಳುತ್ತದೆ. ಹಿಂದಿನ ತಲೆಮಾರಿನ ಬದುಕಿನ ಅಧ್ಯಯನದ ಮೂಲಕ ಶಾಶ್ವತವಾದ ಜೀವನಸೂತ್ರಗಳನ್ನು ಕಂಡುಕೊಂಡಿರುವ ಕಾದಂಬರಿಯು ಸಂಪ್ರದಾಯ ನಿಷ್ಠ ಲಿಂಗಾಯತ ಸಮಾಜವನ್ನು ಅತ್ಯಂತ ಕಾಳಜಿಯಿಂದ, ನಿಷ್ಠೆಯಿಂದ ಚಿತ್ರಿಸುತ್ತದೆ. ಸೋಮೇಶನ ಅಸಾಧಾರಣ ಮಾನವೀಯ ಗುಣಗಳನ್ನು ಸೆರೆ ಹಿಡಿಯುತ್ತವೆ. ಮಾನವನ ವಿಚ್ಛಿದ್ರಕಾರಿ ಪ್ರವೃತ್ತಿಯನ್ನು, ಮೌಲ್ಯಗಳ ಕಡೆ ತೋರುವ ತಿರಸ್ಕಾರಗಳನ್ನು ವಿಷಾದ ಬೆರೆತ ಧಾಟಿಯಲ್ಲಿ ವಿವರಿಸುತ್ತಾ ಬದುಕಿನ ಕ್ರೂರ ವಾಸ್ತವಗಳನ್ನು ನಿರೂಪಿಸುತ್ತದೆ. ವ್ಯಕ್ತಿಗತ-ಸಾಮಾಜಿಕ-ಸಾಂಸ್ಕೃತಿಕ ಅನುಭವಗಳನ್ನು ಹಿಡಿದಿಡುತ್ತದೆ. ಕುರೂಪಗೊಂಡ ಬದುಕಿನ ರೀತಿನೀತಿ, ಜೀವನದೃಷ್ಟಿ, ಮೌಲ್ಯ, ಭಾವನೆ, ಇಳಿಮುಖವಾಗುತ್ತಿರುವ ಮನುಷ್ಯನ ಮನಸ್ಸು, ಆಧುನಿಕ ತಲೆಮಾರಿನ ವಿರೋಧಾಭಾಸಗಳನ್ನು ಅನಾವರಣಗೊಳಿಸುತ್ತದೆ. ದಾಂಪತ್ಯದ ಅರ್ಥ, ಕಷ್ಟ ನಿಷ್ಠುರದಿಂದ ಕೂಡಿದ ಬಾಳುವೆ, ವಾತ್ಸಲ್ಯದ ಹಿಂದಿನ ಜೀವನದರ್ಶನ, ಮತ್ತು ಜೀವನಪ್ರೀತಿಯನ್ನು ಜೀವದ್ರವ್ಯವಾಗಿಸಿಕೊಂಡ ಕಾದಂಬರಿಯ ಪದ ಸಂಪತ್ತು, ಧ್ವನಿ, ಸತ್ವಯುತವಾದ ಭಾಷೆ, ನಿರೂಪಣೆಗಳಿಂದ ಗಮನವನ್ನು ಸೆಳೆಯುವ ಕಾದಂಬರಿಯಲ್ಲಿ ಸಾಂಸಾರಿಕ ವಿರಸಕ್ಕಿಂತ ಬೇರೆಯಾದ ಅನುಭವಗಳೂ ಸೇರಿಕೊಳ್ಳುವುದರಿಂದ ತನ್ನೆಲ್ಲ ಸಂಕೀರ್ಣತೆಯೊಂದಿಗೆ ಮನಸ್ಸನ್ನು ತಟ್ಟುತ್ತದೆ. ಒಂದೇ ಆಶಯಕ್ಕೆ ಕಟ್ಟು ಬೀಳದೆ ಸಮಸ್ಯೆಯ ಹಲವು ಮಗ್ಗುಲುಗಳನ್ನು ಗಮನಿಸುವ ಲೇಖಕಿಯು ಹೆಣ್ಣಿನ ಬವಣೆಗೆ ಮಾತ್ರ ಮೀಸಲಾಗದೆ ಎಲ್ಲರ ಸಮಸ್ಯೆಗಳನ್ನು ಹಲವು ನೆಲೆಗಳಲ್ಲಿ ಕಾಣಿಸುತ್ತಾರೆ. ಬದುಕಿನ ಕುರಿತು ಸಕಾರಾತ್ಮಕ ನೋಟದಿಂದ ಮನುಜವರ್ಗವನ್ನು ಕುರಿತ ಮುಖ್ಯ ಸೂತ್ರಗಳನ್ನು ಸಾಧಿಸುತ್ತಾರೆ. ಜೀವನವೆಂಬುದು ಅಸಂಖ್ಯ ಬಣ್ಣ, ವಾಸನೆಗಳಿಂದ ಕೂಡಿರುವುದೆಂಬ ಗ್ರಹಿಕೆ, ಮಾನವೀಯ ಸಂಬಂಧಗಳ ಹಿಂದೆ ಹಲವು ಬಗೆಯ ಒತ್ತಡಗಳಿರುತ್ತವೆ ಎಂಬ ತಿಳುವಳಿಕೆ, ಯಾವುದೇ ವ್ಯಕ್ತಿಯ ಬದುಕಿನ ಸಾಫಲ್ಯದ ಪ್ರಶ್ನೆಯು ಎಲ್ಲಾ ಜೀವಿಗಳ ಮತ್ತು ವರ್ಗಗಳ ಸಂಬಂಧಗಳ ಪ್ರಶ್ನೆಗಳೇ ಆಗಿರುತ್ತವೆ ಎಂಬ ಅರಿವು ಇಲ್ಲಿ ಕೆಲಸ ಮಾಡಿದೆ. ಸಾತ್ವಿಕವಾದದ್ದು ದುರ್ಬಲವಾಗಿರಬೇಕಾಗಿಲ್ಲ ಎಂಬುದನ್ನು ಉದಾಹರಣೆ ಸಮೇತ ತೋರಿಸಿಕೊಡುತ್ತದೆ. ಒಳಗಿನ ದೌರ್ಬಲ್ಯ ಮತ್ತು ಹೊರಗಿನ ಆಕ್ರಮಣಶೀಲತೆಗಳು ಸಂಧಿಸುವ ಕ್ಷಣಗಳನ್ನು ಸೆರೆ ಹಿಡಿಯುತ್ತದೆ. ಕಾದಂಬರಿಯಲ್ಲಿ ಪೂರ್ತಿ ದುಷ್ಟರಲ್ಲದ, ಪ್ರೇಮಿಗಳಾದರೂ ಪ್ರೀತಿಯನ್ನು ಸರಿಯಾಗಿ ವ್ಯಕ್ತಪಡಿಸಲಾರದ, ದಾಂಪತ್ಯವನ್ನು ಸರಿಯಾಗಿ ನಿರ್ವಹಿಸಲಾರದ, ಸಂಬಂಧಗಳನ್ನು ನಿರ್ವಹಿಸಲಾರದ ಪಾತ್ರಗಳು ಇವೆ. ಪಾತ್ರಗಳ ಗುರಿ ಮತ್ತು ನಿಲುವು ಸ್ಪಷ್ಟವಾಗಿದೆ. ಹೇಳಿಕೊಳ್ಳುವಂಥ ಕತೆ ಇಲ್ಲದಿದ್ದರೂ ಜೀವನಾನುಭವದ ಚಿತ್ರಣವಿದೆ.

    ವಸ್ತು ಮತ್ತು ತಂತ್ರಗಳ ದೃಷ್ಟಿಯಿಂದ ‘ಕಾಯಕ ಕೈಲಾಸ’ ಎಂಬ ಕಾದಂಬರಿಯು ವಿಶಿಷ್ಟವಾದ ರಚನೆಯಾಗಿದೆ. ಬದಲಾಗುತ್ತಿರುವ ಕಾಲದ ಲಯವನ್ನು ಗಂಗವ್ವ, ಆಕೆಯ ಮಗ ಸೋಮೇಶ ಮತ್ತು ಅವರ ಮಗನ ಪ್ರಜ್ಞೆಯಲ್ಲಿ ಸೆರೆ ಹಿಡಿಯುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಕಾಲವನ್ನು ಹಲವು ನೆಲೆಗಳ ಮೂಲಕ ಪ್ರವೇಶಿಸಿರುವುದರಿಂದ, ಅವುಗಳಿಂದ ಹುಟ್ಟುವ ಅರ್ಥಗಳಿಂದ ತುಂಬ ಬೇರೆಯಾದ ಅನುಭವ ಮತ್ತು ದರ್ಶನವು ದೊರಕುತ್ತದೆ. ಹಿರಿಯ ತಲೆಮಾರು ನಡೆಸಿದ ಬದುಕಿನ ಶೈಲಿಯ ಅರಿವು ಮತ್ತು ತಿಳುವಳಿಕೆಯನ್ನು, ಕಥನ ಕೌಶಲವನ್ನು ಏಕಕಾಲದಲ್ಲಿ ದುಡಿಸಿಕೊಂಡು ಲಿಂಗಾಯತರ ಬದುಕು, ಆಚಾರ ಮತ್ತು ಸಂಸ್ಕೃತಿಗಳ ಕುರಿತು ಯೋಚಿಸುವಂತೆ ಮಾಡುವ ಕೃತಿಯನ್ನು ಲೇಖಕಿಯು ನೀಡಿದ್ದಾರೆ. ನಿರ್ದಿಷ್ಟ ಜಾತಿ ಮತ್ತು ಅದಕ್ಕೆ ಸಂಬಂಧಿಸಿದ ಅಚರಣೆಗಳನ್ನು ‘ಅವಶ್ಯಕ’ ಮತ್ತು ‘ಅನವಶ್ಯಕ’ ಎಂದು ವಿಂಗಡಿಸುವ ಕ್ರಮವು ಎರಡು ವರ್ಗಗಳ ನಡುವಿನ ಕಲಹಗಳಿಗೆ ಕಾರಣವಾಗಿರುವುದು ನಿಜವಾದರೂ ಈ ಕಾದಂಬರಿಯು ಒಂದು ದಳದ ಸಮರ್ಥನೆಯನ್ನಾಗಲೀ ಮತ್ತೊಂದು ದಳದ ಭರ್ತ್ಸನೆಯನ್ನಾಗಲೀ ಮಾಡುವುದಿಲ್ಲ. ಸಂಸ್ಕೃತಿಯ ಮೇಲಿರುವ ಗೌರವವನ್ನು ವ್ಯಕ್ತಪಡಿಸುವುದರೊಂದಿಗೆ ಪರಂಪರೆಯು ಕಳೆದುಹೋಗುತ್ತಿರುವ ವಿಷಾದ ಭಾವನೆಯು ಕೃತಿಯುದ್ದಕ್ಕೂ ವ್ಯಾಪಿಸಿಕೊಂಡಿದೆ. ಮೊದಲ ಭಾಗವು ಕೌಟುಂಬಿಕ ವ್ಯವಸ್ಥೆಯೊಳಗಿನ ಇಕ್ಕಟ್ಟುಗಳ ಬಗ್ಗೆ ಗಮನವನ್ನು ಹರಿಸಿದರೆ ಉಳಿದ ಭಾಗಗಳು ಕುಟುಂಬವನ್ನು ಮತ್ತು ಅದನ್ನು ಮೀರಿದ ಮಾನವ ಪ್ರಯತ್ನವು ಕೆಲಸ ಮಾಡುವ ಪರಿಯನ್ನು, ಅವುಗಳಲ್ಲಿ ಹಾಸುಹೊಕ್ಕಿರುವ ಬಿಕ್ಕಟ್ಟುಗಳನ್ನು ಶೋಧಿಸಲು ಯತ್ನಿಸುತ್ತವೆ. ವ್ಯವಸ್ಥೆಯನ್ನು ಅದರ ಒಟ್ಟಂದದಲ್ಲಿ ಗ್ರಹಿಸುವ ಸಾಧ್ಯತೆಯನ್ನು ತೋರುವ ಕೃತಿಯು ವೈಯಕ್ತಿಕ ಆವರಣವನ್ನು ದಾಟಿ ಸಾಂಸ್ಕೃತಿಕ ಪರಿಧಿಯನ್ನು ಪ್ರವೇಶಿಸುತ್ತದೆ.

    ಲಿಂಗಾಯತರ ದೈನಂದಿನ ಬದುಕಿನ ಸುಖ ದುಃಖಗಳ, ಇಕ್ಕಟ್ಟು ಬಿಕ್ಕಟ್ಟುಗಳ ಚಿತ್ರಣವನ್ನು ನಿರೂಪಿಸುವ ಈ ಕಾದಂಬರಿಯು ಧರ್ಮವನ್ನು ನಿಷ್ಠೆಯಿಂದ ಅನುಸರಿಸುವವರತ್ತ ದೃಷ್ಟಿಯನ್ನು ಹರಿಸುತ್ತದೆ. ಮನುಷ್ಯ ಪ್ರಯತ್ನ ಮತ್ತು ಸಾಧ್ಯತೆಗಳ ಮೇಲೆ ನಂಬಿಕೆಯನ್ನು ವ್ಯಕ್ತಪಡಿಸುತ್ತದೆ. ಧರ್ಮವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಮಾನವೀಯ ಮೌಲ್ಯಗಳ ಹುಡುಕಾಟದಲ್ಲಿ ಕಾದಂಬರಿಯು ತನ್ನ ಸ್ವರೂಪವನ್ನು ಕಂಡುಕೊಳ್ಳುತ್ತದೆ. ಹುಳುಕುಗಳನ್ನು ಬಯಲಿಗೆಳೆಯುವುದಕ್ಕಿಂತ ಧರ್ಮಮೂಲದಲ್ಲಿರುವ ಇತ್ಯಾತ್ಮಕ ಮೌಲ್ಯಗಳನ್ನು ತಡವಿ ನೋಡುವ ಮನೋಭಾವವು ಎದ್ದು ಕಾಣುತ್ತದೆ. ಲೇಖಕಿಯು ಲಿಂಗಾಯತರ ಕಷ್ಟ ನಷ್ಟಗಳನ್ನು ಚಿತ್ರಿಸುವಾಗ ಅವರ ಆಸೆಗಳನ್ನು, ಕನಸುಗಳನ್ನು, ಸಾಧ್ಯತೆಗಳನ್ನು ಅಲ್ಲಗೆಳೆಯುವುದಿಲ್ಲ. ಅವರ ಧರ್ಮಶ್ರದ್ಧೆಯು ನೀಡುವ ಆತ್ಮವಿಶ್ವಾಸ, ಶಕ್ತಿಗಳನ್ನು ಸಿನಿಕತನದಿಂದ ನೋಡುವುದಿಲ್ಲ. ಒಂದು ಸಮುದಾಯದ ವಿರೋಧಾಭಾಸಗಳನ್ನು ಬಯಲಿಗೆಳೆಯುವುದಕ್ಕಿಂತ ಲೇಖಕಿಯು ಆ ಸಮುದಾಯದ ದೈನಂದಿನ ಬದುಕಿಗೆ ಪ್ರಭೆಯನ್ನು ನೀಡುವ ಧಾರ್ಮಿಕ ಆಚರಣೆಗಳ ಅಗತ್ಯ ಮತ್ತು ಮಹತ್ವಗಳನ್ನು ನಿರೂಪಿಸುತ್ತಾರೆ. ಮಧ್ಯಮ ವರ್ಗದವರ ಕಷ್ಟ ಕಾರ್ಪಣ್ಯಗಳು ಮುಟ್ಟಬಹುದಾದ ಆಳಗಳನ್ನು ತೋರಿಸಿರುವ ಕಾದಂಬರಿಯು ಬದುಕುವ ದಾರಿಗಳನ್ನು ಶೋಧಿಸುತ್ತದೆ. ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ ಸುಖಗಳನ್ನುಂಡು ತಮ್ಮ ಸಾಧನೆಯಲ್ಲೂ ಏರಿಳಿತಗಳನ್ನು ಕಂಡು ಮಾಗುತ್ತಾ ಬೆಳೆಯುವ ವ್ಯಕ್ತಿಗಳು ಇಲ್ಲಿದ್ದಾರೆ. ಕಾದಂಬರಿಯ ಕೊನೆಗೆ ಬರುವಷ್ಟರಲ್ಲಿ ಅವರು ತಮ್ಮ ಸಾಧನೆ ಮತ್ತು ವ್ಯಕ್ತಿತ್ವದ ಪಕ್ವತೆಗಳಿಂದಾಗಿ ಸುತ್ತಲಿನವರ ಗಮನವನ್ನು ಸೆಳೆಯುತ್ತಾರೆ. ಅಪ್ಪ ಮಗನ ನಡುವಿನ ವೈದೃಶ್ಯವು ಕಾದಂಬರಿಯ ದರ್ಶನವನ್ನು ರೂಪಿಸುವ ಪ್ರಮುಖ ಅಂಶವಾಗುತ್ತದೆ. ಇಲ್ಲಿ ಯಾರ ಬದುಕೂ ಸುಖದ ಸುಪ್ಪತ್ತಿಗೆಯಾಗಿಲ್ಲ. ಬದುಕು ಎಲ್ಲರ ಪ್ರಜ್ಞಾಪೂರ್ವಕ ಆಯ್ಕೆಯಾಗಿದೆ. ಅದಕ್ಕಾಗಿ ಹಲವು ಬಗೆಯ ಕಷ್ಟಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ. ಸಾಧನೆ ಮತ್ತು ಜೀವನಾನುಭವಗಳಿಂದ ಇವರ ವ್ಯಕ್ತಿತ್ವಗಳು ಹದಗೊಂಡಿವೆ. ಈ ದೃಷ್ಟಿಯಿಂದ ನೋಡಿದರೆ ಸೋಮೇಶನ ಪಾತ್ರವು ವಿಸ್ತೃತವಾದ, ಸಮೃದ್ಧವಾದ ವಿವರ ವರ್ಣನೆಗಳಲ್ಲಿ ಮೂಡಿ ಬಂದ ಪಾತ್ರವಾಗಿದೆ. ಆತನು ಈ ಕಾದಂಬರಿಯ ಪ್ರಧಾನ ಪಾತ್ರವಾಗಿದ್ದರೂ ಇವರೊಂದಿಗೆ ವೈದೃಶ್ಯದಲ್ಲಿ ನಿಲ್ಲುವ ಹಲವು ಪಾತ್ರಗಳು ಇರುವುದರಿಂದ ಅವುಗಳು ಸೂಚಿಸುವ ಬಹುಮುಖಿ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಗ್ರಹಿಸಿದರೆ ಈ ಕಾದಂಬರಿಯು ಇತರ ಕಾದಂಬರಿಗಳಿಗಿಂತ ಭಿನ್ನವಾಗಿರುವ ಬಗೆಯು ತಿಳಿಯುತ್ತದೆ.

    ಸೋಮೇಶನ ಅನುಭವಗಳನ್ನು ವಿಸ್ತಾರದ ಚೌಕಟ್ಟಿನಲ್ಲಿ ಚಿತ್ರಿಸುವ ಕಾದಂಬರಿಯು ಅವರನ್ನು ತನ್ನ ನಾಯಕನೆಂಬಂತೆ ಬಿಂಬಿಸುವುದಿಲ್ಲ. ಏಕಪಾತ್ರ ಅಥವಾ ನಾಯಕಪಾತ್ರ ಪ್ರಧಾನ ಕಾದಂಬರಿಗಳಿಗಿಂತ ಈ ಕಾದಂಬರಿಯು ಭಿನ್ನವಾಗಿದೆ. ಯಾರೂ ಏಕ ಶಿಲಾಕೃತಿಯಲ್ಲೆಂಬಂತೆ ಚಿತ್ರಿತರಾಗಿಲ್ಲ. ಯಾವ ಪಾತ್ರವನ್ನೂ ಜಾತಿ, ವರ್ಗ ಮತ್ತು ಲಿಂಗ ಮಾದರಿ ಎನ್ನುವಂತಿಲ್ಲ. ನಿರ್ದಿಷ್ಟ ಜಾತಿಯವರು ಧಾರಣ ಮಾಡುವ ರೂಢಿಗತ ಲಕ್ಷಣಗಳು ಇದ್ದರೂ ಅವುಗಳನ್ನು ಮೀರಿ ಅಪ್ಪಟ ಮನುಷ್ಯತ್ವವನ್ನು ಅನಾವರಣಗೊಳಿಸುವ ಆಸ್ಥೆಯು ಕಂಡು ಬರುತ್ತದೆ. ಅವರ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳು ಮನುಷ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳೆಂಬಂತೆ ಚಿತ್ರಿತವಾಗಿವೆ. ಎಲ್ಲ ಬಗೆಯ ದ್ವಿದಳ ವರ್ಗೀಕರಣದ ಕಥನ ರೀತಿಯನ್ನು ಲೇಖಕಿಯು ಕೈಬಿಟ್ಟಿದ್ದಾರೆ. ಆದ್ದರಿಂದ ಈ ಕಾದಂಬರಿಯು ಜಾತಿವಾದಿ ಕಥನವಾಗದೆ ಮಾನವೀಯ ಕಥನವಾಗುತ್ತದೆ. ಹಲವು ಬಗೆಯ ಜೀವನ ಕ್ರಮಗಳನ್ನು, ಮನಸ್ಥಿತಿಗಳನ್ನು, ಜೀವನ ದೃಷ್ಟಿಗಳನ್ನು ಮುಖಾಮುಖಿಯಾಗಿಸುವ ಕಾದಂಬರಿಯು ಬದುಕಿನ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ. ಯಾವ ಬಗೆಯ ಬದುಕು ಹೆಚ್ಚು ಅರ್ಥಪೂರ್ಣವಾದದ್ದು? ಬದುಕಿನಲ್ಲಿ ತರತಮ ಎಂಬುದು ಇದೆಯೇ? ಬದುಕು ಸಫಲವಾಗುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಸರಳವಲ್ಲ. ಅತಿವಿಸ್ತಾರ ಮತ್ತು ವಿವರಗಳ ಪುನರಾವರ್ತನೆಯ ಈ ಕಾದಂಬರಿಯ ಬಹುದೊಡ್ಡ ದೋಷವಾಗಿದೆ. ಆದರೆ ಇಂಥ ಮಿತಿಗಳನ್ನು ಮೀರಿಯೂ ‘ಕಾಯಕ ಕೈಲಾಸ’ವು ಓದುರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.

    ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಕೆ. ಜಿ. ಭಟ್ ಗ್ರಂಥಾಲಯದ ವತಿಯಿಂದ ವಾಚನಾ_ ಪಕ್ಷಾಚರಣೆ
    Next Article ಕೊಯ್ಯೂರು ಸರಕಾರಿ ಪ್ರೌಢ ಶಾಲೆಯಲ್ಲಿ ‘ಸಾಹಿತ್ಯ ಸಂಘ’ ಉದ್ಘಾಟನೆ | ಜುಲೈ 10
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ಯಕ್ಷ ನೃತ್ಯ -ಸಂವಾದ ಸನ್ಮಾನ’ | ಜುಲೈ 12

    July 9, 2025

    ವಿಸ್ತಾರ್‌ ರಂಗಶಾಲೆಯಿಂದ ನಾಟಕ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನ | ಜುಲೈ 30

    July 9, 2025

    ಎಸ್.ಎನ್.ಪಿ.ಯು ಕಾಲೇಜಿನಲ್ಲಿ ‘ಜನಪದದೊಂದಿಗೆ ಜೀವನ ಮೌಲ್ಯ ಸಂಗೀತ ಕಾರ್ಯಾಗಾರ’

    July 9, 2025

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಲಕ್ಷ್ಮೀ ಕಟಾಕ್ಷ’ | ಜುಲೈ 13

    July 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.