ಕನ್ನಡ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು ಡಾ. ಜನಾರ್ದನ ಭಟ್ ಅವರದ್ದು. ಕಥೆ, ಕಾದಂಬರಿ, ವಿಮರ್ಶೆ, ಸಾಹಿತ್ಯದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೋಸ್ಕರ ಪರಾಮರ್ಶನ ಗ್ರಂಥಗಳ ರಚನೆ -ಹೀಗೆ ನಿರಂತರವಾಗಿ ಬರೆಯುತ್ತ ವಿದ್ವತ್ ವಲಯದಲ್ಲೂ ಹೆಸರಾದವರು ಅವರು. ಇತ್ತೀಚೆಗೆ ಅವರು ಪ್ರಕಟಿಸಿದ ಬೃಹತ್ ಕೃತಿ ‘ಕನ್ನಡ ಕಾದಂಬರಿ ಮಾಲೆ’ ಅವರ ನೂರನೆಯ ಕೃತಿ. ಅದರ ನಂತರವೂ ಅವರ ಕೃತಿಗಳು ಪ್ರಕಟವಾಗುತ್ತಲೇ ಇವೆ.
‘ಉತ್ತರಾಧಿಕಾರ’ ಜನಾರ್ದನ ಭಟ್ಟರ ಮೊದಲ ಕಾದಂಬರಿ. 205 ಪುಟಗಳ ಈ ಕಾದಂಬರಿಯಲ್ಲಿ ನಾವು ಕಾಣುವುದು ಗ್ರಾಮ ಭಾರತದ ಇಂಚಿಂಚಾದ ಚಿತ್ರಣ. ಕಥೆ ನಡೆಯುವ ಕಾಲ ಇಪ್ಪತ್ತನೇ ಶತಮಾನದ ಆರಂಭದಿಂದ ತೊಡಗಿ ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿಯ ತನಕ. ಕಾದಂಬರಿಯ ವಸ್ತು ಒಂದು ಗ್ರಾಮದಲ್ಲಿ ಮಣ್ಣಿನಲ್ಲಿ ಹೂತುಹೋಗಿ ಜೀರ್ಣಾವಸ್ಥೆಯಲ್ಲಿದ್ದ ಒಂದು ಮಹಾಲಿಂಗೇಶ್ವರನ ಗುಡಿಯ ಜೀರ್ಣೋದ್ಧಾರದ ಕೆಲಸವು ಯಾರ್ಯಾರ ಮುತುವರ್ಜಿಯಿಂದ ಯಾರ್ಯಾರ ಸಹಾಯದಿಂದ ಹೇಗೆ ನಡೆಯುತ್ತದೆ ಅನ್ನುವುದು. ಈ ವಸ್ತು ಅನ್ನುವುದು ಒಂದು ನೆಪ ಮಾತ್ರ. ಗ್ರಾಮದಲ್ಲಿ ಜನರು ಹೇಗೆ ಬದುಕುತ್ತಿದ್ದಾರೆ, ಅವರ ನಂಬಿಕೆಗಳೇನು, ಅವರು ಅನುಸರಿಸುವ ಸಂಪ್ರದಾಯ-ಪದ್ಧತಿ-ಆಚರಣೆ-ಆಹಾರ ಪದ್ಧತಿಗಳೇನು, ಸಾಂಸ್ಕೃತಿಕ ವಿವರಗಳೇನು, ಅವರ ಕೌಟುಂಬಿಕ ಬದುಕು ಹೇಗಿದೆ, ಅಲ್ಲಿ ಮನುಷ್ಯರ ನಡುವಣ ಸಂಬಂಧಗಳು ಹೇಗಿವೆ, ಅವರ ಬದುಕಿನ ಏಳುಬೀಳುಗಳೇನು- ಹೀಗೆ ನೂರಾರು ವಿಚಾರಗಳನ್ನು ಹೇಳುವುದು ಮತ್ತು ಇಂದು ಮರೆಗೆ ಸರಿದಿರುವ ಅಂಥ ವಿಚಾರಗಳನ್ನು ಮುಂದಿನವರಿಗಾಗಿ ದಾಖಲಿಸುವುದು ಕಾದಂಬರಿಕಾರರ ಮುಖ್ಯ ಉದ್ದೇಶ.
ಕಥೆಯ ಮುಖ್ಯ ಭೂಮಿಕೆ ನಡುಕಣಿ ಮತ್ತು ಪಡುಸಾಲು ಎಂಬ ಅಕ್ಕಪಕ್ಕದ ಎರಡು ಗ್ರಾಮಗಳು. ನಡುಕಣಿಯ ಪಟೇಲ ವೆಂಕಟರಮಣಯ್ಯನವರು ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಊರವರ ಸಮ್ಮುಖದಲ್ಲಿ ಹಿರಿಯರಾದ ಶೇಷಪ್ಪಯ್ಯನವರನ್ನು ಕರೆಸಿ ಮಾತುಕತೆ ನಡೆಸುತ್ತಾರೆ. ಆಗ ಆ ದೇವಸ್ಥಾನದಲ್ಲಿ ಹಿಂದೆ ಸರಳಾಯ ಕುಟುಂಬದವರು ಪೂಜೆ ನಡೆಸುತ್ತಿದ್ದರೆಂದೂ ದೇವಸ್ಥಾನದ ಪವಿತ್ರಪಾಣಿಗಳೊಂದಿಗೆ ಜಗಳವಾಗಿ ಅವರು ದೇಶಾಂತರ ಹೋದರೆಂದೂ ಕೊನೆಗೆ ಪೂಜೆಯೇ ನಿಂತು ಹೋಯಿತೆಂದೂ ಅಲ್ಲಿದ್ದ ಶಿವಲಿಂಗವನ್ನು ಕೆರೆಯೊಳಗೆ ಮುಳುಗಿಸಿದರೆಂದೂ ಗೊತ್ತಾಗುತ್ತದೆ. ಈಗ ಊರಿನಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿರುವ ಬಡ ಬ್ರಾಹ್ಮಣ ಸುಬ್ರಾಯರು ಆ ಸರಳಾಯರ ವಂಶದವರೆಂಬುದೂ ಗೊತ್ತಾಗುತ್ತದೆ.
ಅಲ್ಲಿಂದ ನಂತರ ಸುಬ್ರಾಯರ ಸಂಸಾರದ ಕಥೆಯಿದೆ. ಅವರ ಮೊದಲ ಹೆಂಡತಿ ಪಡುಸಾಲಿನ ಗೋದಾವರಿ ಅಲ್ಲಿನ ಶಿವಶಂಕರರಾಯರು ಎಂಬ ಸಾಹುಕಾರನೊಂದಿಗೆ ಸಂಬಂಧವಿಟ್ಟುಕೊಂಡದ್ದರಿಂದ ಗಂಡನ ಮನೆಗೆ ಬರಲು ಒಪ್ಪುವುದಿಲ್ಲ. ಅವಳಿಗೊಬ್ಬ ವಾಸುದೇವ ಅನ್ನುವ ಸದಾ ಸೋಮಾರಿಯಾಗಿ ತಿರುಗುವ ಮಗ ಇದ್ದಾನೆ. ಸುಬ್ರಾಯರು ಗೋದಾವರಿಯನ್ನು ಬಿಟ್ಟು ಸರಸ್ವತಿಯನ್ನು ಮದುವೆಯಾಗುತ್ತಾರೆ. ಅವರ ಹಾಗೆಯೇ ಕೊಡಪೆಟ್ಟು ಶೇಷಪ್ಪನೂ ಪಡುಸಾಲಿನ ಸುಬ್ಬಮ್ಮನನ್ನು ಮದುವೆಯಾಗಿದ್ದ. ಅವಳೂ ಗೋದಾವರಿಯ ಮಗ ವಾಸುದೇವನ ಜತೆ ಸಂಬಂಧವಿರಿಸಿಕೊಂಡಿದ್ದರಿಂದ ಗಂಡನ ಜತೆಗೆ ಬರುವುದಿಲ್ಲ. ಮನೆಯಲ್ಲಿ ಕಬ್ಬಿಣದ ಕೆಲಸ ಮಾಡುತ್ತಿದ್ದ ಶೇಷಪ್ಪ ಬಡವ. ಹೆಂಡತಿ ಬಂದರೆ ಜತೆಯಾಗಿ ಕೆಲಸ ಮಾಡಬಹುದೆಂದು ಕನಸು ಕಂಡಿದ್ದ. ಅವನ ಅಮ್ಮ ಸುಬ್ಬಮ್ಮನ ಮನ ಒಲಿಸಲೆಂದು ತನ್ನ ಗಂಡ ಕಷ್ಟಪಟ್ಟು ಮಾಡಿಸಿಕೊಟ್ಟ ಚಿನ್ನದ ಬೆಂಡೋಲೆಯನ್ನು ಮಗನ ಕೈಯಲ್ಲಿ ಕೊಟ್ಟುಕಳಿಸುತ್ತಾಳೆ. ಆದರೆ ಊರಿಂದೂರಿಗೆ ಮೈಲುಗಟ್ಟಲೆ ನಡೆದೇ ಹೋಗುತ್ತಿದ್ದ ಅ ಕಾಲದಲ್ಲಿ ದಾರಿಮಧ್ಯದಲ್ಲಿ ಸುಸ್ತಾಗಿ ಕುಳಿತ ಶೇಷಪ್ಪನಿಗೆ ನಿದ್ರೆ ಬರುತ್ತದೆ. ಅದೇ ಹೊತ್ತಿಗೆ ಅವನ ಚೀಲದಲ್ಲಿದ್ದ ಬೆಂಡೋಲೆ ಅತಿಮಾನುಷಲೋಕದ ‘ಕುಲೆಗಳ’ ಪಾಲಾಗುತ್ತದೆ. ಶೇಷಪ್ಪ ಸುಬ್ಬಮ್ಮನ ಆಸೆ ಬಿಡುತ್ತಾನೆ.
ನಡುಕಣಿ ಪಟೇಲ್ ವೆಂಕಟರಮಣಯ್ಯನ ಮನೆಯಲ್ಲಿ ಸದಾ ಒಂದಿಲ್ಲೊಂದು ಸಭೆ-ಮಾತುಕತೆಗಳು ನಡೆಯುತ್ತಿರುತ್ತವೆ. ದಾನ-ಧರ್ಮ-ಔದಾರ್ಯಗಳಿಗೆ ಹೆಸರಾದ ವ್ಯಕ್ತಿ ವೆಂಕಟರಮಣಯ್ಯ. ಅದೇ ರೀತಿ ಪಡುಸಾಲಿನ ಪುರೋಹಿತ ರಾಮಕೃಷ್ಣಾರ್ಯರದು ದೊಡ್ಡಮನೆ. ಅವರ ಚಾವಡಿಯೆಂದರೆ ಒಂದು ಆಸ್ಥಾನವಿದ್ದ ಹಾಗೆ. ಅಲ್ಲಿ ಯಾವಾಗಲೂ ಸಭೆ ಸೇರುವವರು ಶಾನುಭಾಗ ನೆಕ್ರತ್ತಾಯರು ಮತ್ತು ಶಾಲಾಮಾಸ್ತರ ಹರಿಕೃಷ್ಣ. ಊರಿನಲ್ಲಿ ಏನೇ ತೊಂದರೆಯಾದರೂ ಅಲ್ಲಿ ಪಂಚಾಯ್ತಿ ಮಾತುಕತೆ ನಡೆಯುತ್ತದೆ. ಶೇಷಪ್ಪ ಹೆಂಡತಿಯ ಬಗ್ಗೆ ಅವರಲ್ಲಿ ದೂರು ಕೊಡುತ್ತಾನೆ. ಅಲ್ಲಿ ಪಂಚಾಯ್ತಿ ನಡೆಸುವುದೆಂದು ಸಿದ್ಧತೆ ನಡೆಸುತ್ತಿರುವಾಗ ಅಲ್ಲಿಗೆ ಗೋದಾವರಿಯ ಮಗ ಪೌಂಡ್ರಕ ವಾಸುದೇವ (ಅ ಹೆಸರಿನ ಹಿಂದೆಯೂ ಒಂದು ಕಥೆಯಿದೆ) ಅಡ್ಡಾಡಿಕೊಂಡು ಬಂದವನಂತೆ ನಟಿಸುತ್ತ ಬರುತ್ತಾನೆ. ಪಂಚಾಯ್ತಿಯಲ್ಲಿ ಅವನು ಸುಮ್ಮನೆ ಮೂಗು ತೂರಿಸಿ ಸುಬ್ಬಮ್ಮನ ಪರವಾಗಿ ವಾದಿಸುತ್ತಾನೆ. ಅದು ಶಾನುಭಾಗರ ಮನಸ್ಸಿನಲ್ಲಿ ಅವರ ಸಂಬಂಧದ ಬಗ್ಗೆ ಅನುಮಾನ ಮೂಡಿಸುತ್ತದೆ.
ಪಟೇಲರು ಮದರಾಸಿನಲ್ಲಿರುವ ತನ್ನ ಭಾವ ರಾಮರಾಯರ ಸಹಾಯದಿಂದ ಮತ್ತು ಊರಿನ ಗಣ್ಯರಾದ ಗಿರಿಯ ಶೆಟ್ಟರು ಮುಂಬಯಿನಲ್ಲಿರುವ ಮಿತ್ರರ ಸಹಾಯದಿಂದ ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿ ಊರವರ ಸಹಾಯದಿಂದ ಜೀರ್ಣೋದ್ಧಾರ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಅದಕ್ಕೆ ಸರಳಾಯರ ವಂಶಸ್ತರಾದ ಸುಬ್ರಾಯರನ್ನೇ ಪೂಜೆಗೆ ನೇಮಕ ಮಾಡುತ್ತಾರೆ. ಸುಬ್ರಾಯರ ಮಗ ಸದ್ಗುಣಿ ವಾಸುದೇವ ಶಾಲೆ ಕಲಿತು ಉಡುಪಿಗೆ ಹೋಗಿ ಸಂಸ್ಕೃತ ಕಲಿತು ಇಂಗ್ಲೀಷ್ ಕೂಡಾ ಕಲಿತು ಶೈಕ್ಷಣಿಕವಾಗಿ ಬಹಳ ಮೇಲೇರುತ್ತಾನೆ. ಮದರಾಸಿನಲ್ಲಿ ಪದವಿ ಪಡೆದು ಸ್ಕಾಲರ್ಶಿಪ್ ಸಹಾಯದಿಂದ ಅಮೆರಿಕಾಕ್ಕೂ ಹೋಗಿ ಉನ್ನತ ವ್ಯಾಸಂಗ ನಡೆಸಿ ಒಳ್ಳೆಯ ಸ್ಥಾನಮಾನಗಳನ್ನು ಪಡೆಯುತ್ತಾನೆ.
ಈ ನಡುವೆ ಎರಡನೇ ಮಹಾಯುದ್ಧ ಆರಂಭವಾದಾಗ ಇಡೀ ದೇಶದಲ್ಲೇ ಆಹಾರವಸ್ತುಗಳ ಕ್ಷಾಮ ತಲೆದೋರುತ್ತದೆ. ಸುಬ್ರಾಯರೂ ಹೊಟ್ಟೆಗಿಲ್ಲದೆ ಬಹಳ ಕಷ್ಟಪಡುತ್ತಾರೆ. ಹಸಿವು ತಾಳಲಾರದೆ ಗ್ರಾಮಸ್ಥರು ಪಕ್ಕದೂರಿನ ಪಟೇಲರು ರಾತ್ರಿ ಹೊತ್ತು ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಮುಡಿಗಳನ್ನು ದರೋಡೆ ಮಾಡುತ್ತಾರೆ. ಆದರೆ ಅವರೆಲ್ಲ ಎಷ್ಟು ಮುಗ್ಧರು ಅಂದರೆ ಪೋಲೀಸರು ತಮ್ಮನ್ನು ಹಿಡಿದುಬಿಟ್ಟರೆ ಎಂದು ಹೆದರಿ ತಾತ್ಕಾಲಿಕವಾಗಿ ಊರು ಬಿಟ್ಟು ಹೋಗಿ ತಲೆಮರೆಸಿಕೊಳ್ಳುತ್ತಾರೆ.
ಹೊಟ್ಟೆಕಿಚ್ಚಿನ ಪೌಂಡ್ರಕ ವಾಸುದೇವ ಉದ್ದೇಶಪೂರ್ವಕವಾಗಿ ದೇವಸ್ಥಾನದ ಪೂಜೆಯ ಹಕ್ಕನ್ನು ಸುಬ್ರಾಯರಿಂದ ಕಿತ್ತುಕೊಳ್ಳುತ್ತಾನೆ. ಏನೋ ಕುತಂತ್ರ ಹೂಡಿ ಪಟೇಲ ವೆಂಕಟರಮಣಯ್ಯರನ್ನು ಅವರ ಸ್ಥಾನದಿಂದ ಕಿತ್ತು ಹಾಕಿ ಬೇರೊಬ್ಬ ಪಟೇಲನ ನೇಮಕವಾಗುವಂತೆ ಮಾಡುತ್ತಾನೆ. ದುರಭ್ಯಾಸ-ದುರ್ಗುಣಗಳಿಂದ ದೇವಸ್ಥಾನದ ಒಟ್ಟು ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿ ಕೊನೆಗೂ ವಿಫಲನಾಗಿ ಎಲ್ಲೋ ಹೋಗಿ ತಲೆಮರೆಸಿಕೊಳ್ಳುತ್ತಾನೆ. ಅಷ್ಟು ಹೊತ್ತಿಗೆ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತದೆ. ವೆಂಕಟರಮಣಯ್ಯನವರು ಪುನಃ ಪಟೇಲರಾಗುತ್ತಾರೆ. ಸುಬ್ರಾಯರು ಪುನಃ ದೇವಸ್ಥಾನದ ಅರ್ಚಕರಾಗುತ್ತಾರೆ. ಅಮೆರಿಕದಲ್ಲಿದ್ದ ಅವರ ಮಗ ವಾಸುದೇವ ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿ ಅದನ್ನೇ ತನ್ನ ಪಿ.ಹೆಚ್.ಡಿ. ಸಂಶೋಧನಾ ವಿಷಯವನ್ನಾಗಿ ಆಯ್ದುಕೊಂಡ ಹ್ಯಾರಿಸ್ ಸೂಥ್ ಎಂಬವನನ್ನು ಊರಿಗೆ ಕರೆದುಕೊಂಡು ಬಂದು ಇಲ್ಲಿನ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಅವನಿಗೆ ಹೇಳಿಕೊಡುತ್ತಾನೆ. ನಂತರ ಅವನು ವೆಂಕಟರಮಣಯ್ಯನವರ ಮಗಳನ್ನು ಮದುವೆಯಾಗಿ ಅಪ್ಪ-ಅಮ್ಮರನ್ನು ಅಮೆರಿಕಾಕ್ಕೆ ಕರೆದೊಯ್ಯುವುದರೊಂದಿಗೆ ಕಾದಂಬರಿ ಸಮಾಪ್ತವಾಗುತ್ತದೆ.
ಕಾದಂಬರಿಯು ಎಪಿಕ್ ಶೈಲಿಯಲ್ಲಿದೆ. ಮಹಾಭಾರತದಂತೆ ಲೇಖಕರು ಇದನ್ನು ಹದಿನೆಂಟು ಪರ್ವಗಳಾಗಿ ವಿಂಗಡಿಸಿದ್ದಾರೆ. ಕೊನೆಯ ಪರ್ವ ‘ಮಹಾಪ್ರಸ್ಥಾನ’ದಲ್ಲಿ ಸುಬ್ರಾಯರ ಕುಟುಂಬ ಅಮೇರಿಕಾಕ್ಕೆ ಹೋಗುವ ಸನ್ನಿವೇಶವಿದೆ. ಎಪಿಕ್ ನಂತೆ ಇಲ್ಲಿ ನೂರಾರು ಪಾತ್ರಗಳಿವೆ. ನಡುನಡುವೆ ಬರುವ ಹತ್ತಾರು ಉಪಕಥೆಗಳು ಮತ್ತು ಘಟನಾ ವಿವರಗಳು ಆಸಕ್ತಕರವಾಗಿವೆ. ಮಂತ್ರ-ತಂತ್ರ-ಜೋತಿಷ್ಯಗಳಲ್ಲಿ ಅದ್ಭುತ ನೈಪುಣ್ಯ ಸಾಧಿಸಿದ ಸುಬ್ರಾಯರ ತಂದೆ ಮುಕ್ಕಣ್ಣಯ್ಯನವರು ತಮ್ಮ ಸಾಮರ್ಥ್ಯವನ್ನು ತೋರಿಸಿದ ಕಥೆ, ದಟ್ಟದಾರಿದ್ರ್ಯದ ಕಷ್ಟಗಳನ್ನು ಸಹಿಸಿಕೊಳ್ಳಲಾರದೆ ಸುಬ್ರಾಯರು ಇತರ ಬಡಬ್ರಾಹ್ಮಣರೊಂದಿಗೆ ಕಡಂದಲೆಯ ಸಮಾರಂಭದಲ್ಲಿ ದಕ್ಷಿಣೆ ಸಿಕ್ಕೀತೆಂದು ಹೋಗಿ ಒಂದಾಣೆಯಷ್ಟೇ ಸಿಗುವುದೆಂದು ಗೊತ್ತಾದಾಗ ನಾಲ್ಕು ಬಾರಿ ಊಟಮಾಡಿದ ಕಥೆ, ದೇವಸ್ಥಾನದ ಪವಿತ್ರಪಾಣಿಗಳ ವಂಶದ ದಾಸಣ್ಣ ಭಟ್ಟರು ಕಿರಿಸ್ತಾನರ ದುಲ್ಸಿನ ಬಾಯಿಯನ್ನು ಮದುವೆ ಮಾಡಿ ಕರೆದುಕೊಂಡು ಊರಿಗೆ ಬಂದು ದೇವಸ್ಥಾನಕ್ಕೆ ಸೇರಿದ ಎಲ್ಲಾ ಭೂಮಿಯನ್ನು ಅವಳ ಹೆಸರಿಗೆ ಬರೆದ ಕಥೆ, ಯಮುನಕ್ಕನಿಗೆ ಲಭ್ಯವಾಗುವ ದೈವೀಶಕ್ತಿಯ ಕಥೆ, ವಾಗ್ದೇವಿ-ಗೋದಾವರಿಯರ ನಡುವಣ ಜಗಳದ ಕಥೆ, ಶೇಷಪ್ಪನ ಬೆಂಡೋಲೆಯನ್ನು ಕೊಂಡೊಯ್ಯುವ ಕುಲೆಗಳೆಂಬ ಅತಿಮಾನುಷ ಶಕ್ತಿಗಳ ಕಥೆ, ಎಚ್ಚಣ್ಣ ದಾನ ತೆಗೆದುಕೊಂಡು ಸಾವಿಗೀಡಾದ ಕಥೆ, ಮಲೆಯಾಳ ದೇಶದ ಕಥೆ, ಅಕ್ಕಿ ಮುಡಿಗಳ ದರೋಡೆಯ ಕಥೆ – ಹೀಗೆ ಮುಖ್ಯ ವಸ್ತುವಿನ ಮಧ್ಯೆ ಉದ್ದಕ್ಕೂ ಅಲ್ಲಲ್ಲಿ ಬರುವ ಕಥೆಗಳು ಕಾದಂಬರಿಯ ಗ್ರಾಮೀಣ ಚಿತ್ರಣಕ್ಕೆ ಮೆರುಗನ್ನೀಯುತ್ತವೆ. ಹಳ್ಳಿಯ ಪ್ರಕೃತಿ ಸೌಂದರ್ಯ, ಬೇಸಾಯದ ವಿವರಗಳು, ಶ್ರಮಿಕರ ಜೀವನ, ಎತ್ತಿನ ಗಾಡಿಗಳ ಓಡಾಟ, ಒಕ್ಕಲು-ದನಿಗಳ ನಡುವಣ ಸಂಬಂಧಗಳು, ಸಹಬಾಳ್ವೆ ಎಲ್ಲವೂ ಇಲ್ಲಿ ಕಾಣಸಿಗುತ್ತವೆ. ನಾಗರಿಕತೆಯ ಆಗಮನದೊಂದಿಗೆ ಹಳ್ಳಿಯ ಜೀವನಕ್ರಮದಲ್ಲಿ ಆಗುವ ಪಲ್ಲಟಗಳೂ ಕಾಣುತ್ತವೆ.
ಇಲ್ಲಿ ಕಥಾನಾಯಕನಿಲ್ಲ. ನಾಯಕಿಯೂ ಇಲ್ಲ. ಖಳನಾಯಕನೂ ಇಲ್ಲ. ಗ್ರಾಮೀಣ ಬದುಕೇ ಇಲ್ಲಿ ಎಲ್ಲವೂ ಅಗಿದೆ. ಅಲ್ಲಿ ನಡೆಯುವ ಯುದ್ಧವೆಂದರೆ ಒಳ್ಳೆಯತನ ಮತ್ತು ಕೆಟ್ಟತನಗಳ ನಡುವೆ ಮಾತ್ರ. ಅಲ್ಲಿ ಬಾಳುವ ಮನುಷ್ಯರ ಶಕ್ತಿ-ದೌರ್ಬಲ್ಯಗಳು, ಗುಣ-ಅವಗುಣಗುಣಗಳು, ಮೌಲ್ಯ-ಅಪಮೌಲ್ಯಗಳು –ಎಲ್ಲವನ್ನೂ ತೀರಾ ಸಹಜವೆಂಬಂತೆ ಲೇಖಕರು ನಿರುದ್ವಿಗ್ನವಾಗಿ ಚಿತ್ರಿಸಿದ್ದಾರೆ. ಪ್ರತಿಯೊಂದು ವಸ್ತು-ನೋಟ-ದೃಶ್ಯ ಘಟನೆ-ಸಂದರ್ಭ-ಸನ್ನಿವೇಶಗಳ ಅತಿ ಸೂಕ್ಷ್ಮ ಸುಂದರ ಕುಸುರಿ ವಿನ್ಯಾಸಗಳಿಗೂ ಪ್ರಾಮುಖ್ಯ ನೀಡಲಾಗಿದೆ. ಲೇಖಕರ ಕಥನಶೈಲಿ ತುಂಬಾ ಹೃದ್ಯವಾಗಿದ್ದು, ಕಾದಂಬರಿ ಬಹಳ ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ. ಹೊಸ ಶತಮಾನದಲ್ಲಿ ಬಂದ ಅತ್ಯಂತ ಮೌಲಿಕ ಕೃತಿಯಿದು.
ಕೃತಿಯ ಹೆಸರು : ‘ಉತ್ತರಾಧಿಕಾರ’ (ಕಾದಂಬರಿ)
ಲೇಖಕರು : ಡಾ. ಬಿ. ಜನಾರ್ದನ ಭಟ್
ಪ್ರ.ವರ್ಷ : 2014
ಪ್ರಕಾಶಕರು : ಹೇಮಾವತಿ ಪ್ರಕಾಶನ (2ನೇ ಮುದ್ರಣ)
ವಿಮರ್ಶಕರು | ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು