‘ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?’ ಇತ್ತೀಚಿಗೆ ಬಿಡುಗಡೆಯಾದ ಡಾ. ಬಿ. ಜನಾರ್ದನ ಭಟ್ ಇವರ ಹೊಸ ಕಾದಂಬರಿ. ಹಲವು ವೈಶಿಷ್ಟ್ಯಗಳನ್ನೊಳಗೊಂಡ ಇದು ತನ್ನ ಗಟ್ಟಿಯಾದ ಚೌಕಟ್ಟಿನೊಳಗಿನ ಅನೇಕ ಚಿಂತನಾರ್ಹ ವಿಚಾರಗಳಿಂದ ಮೈದುಂಬಿ ನಿಂತಿದೆ. ಸಾಂಸ್ಕೃತಿಕ-ಐತಿಹಾಸಿಕ ಪರಿಪ್ರೇಕ್ಷ್ಯದಲ್ಲೇ ತಮ್ಮ ಕಥನಗಳನ್ನು ಕಟ್ಟಿಕೊಡುವ ಜನಾರ್ದನ ಭಟ್ ಇಲ್ಲಿಯೂ ಅದೇ ವಿಧಾನವನ್ನು ಮುಂದುವರಿಸಿದ್ದಾರೆ. ಇಲ್ಲಿ ಅದಕ್ಕೆ ಆಧ್ಯಾತ್ಮಿಕತೆಯೂ ಸೇರಿಕೊಂಡಿದೆ ಅನ್ನುವುದು ಒಂದು ವಿಶೇಷ. ಅಲ್ಲದೆ ಅಂದಿನ ಬ್ರಾಹ್ಮಣ ಸಮಾಜದಲ್ಲಿನ ಪದ್ಧತಿ, ನಂಬಿಕೆ, ಸಂಪ್ರದಾಯ, ಆಚರಣೆಗಳನ್ನೂ ಅವರು ಅಲ್ಲಲ್ಲಿ ಸಾಂದರ್ಭಿಕವಾಗಿ ಚಿತ್ರಿಸುತ್ತಾರೆ.
ಉಡುಪಿಯ ಸಮೀಪದ ಬೆಳಂಜಾಲು ಅನ್ನುವ ಒಂದು ಗ್ರಾಮೀಣ ಪ್ರದೇಶವು ಕಥೆಯ ಕೇಂದ್ರ. ಕಥಾನಾಯಕ ಬೆಳಂಜಾಲು ಅನಂತರಾಮ ಉಡುಪರು ಹುಟ್ಟಿ ಬೆಳೆದ ಮನೆಯೇ ಈ ಕಾದಂಬರಿಯ ಶೀರ್ಷಿಕೆಯಲ್ಲಿ ಉಲ್ಲೇಖವಾಗಿರುವ ಮನೆ. (ಮನೆ ಅನ್ನುವುದು ಮನುಷ್ಯನ ದೇಹವೇ ಅನ್ನುವ ಅರ್ಥ ಆಮೇಲಿನದ್ದು.) ಕಥೆ ನಡೆಯುವ ಕಾಲ 20ನೇ ಶತಮಾನದ ಆದಿಭಾಗದಿಂದ 1993ರವರೆಗೆ. ವಸಾಹತುಶಾಹಿ ಮತ್ತು ಸ್ವತಂತ್ರ ಭಾರತ ಎರಡೂ ಇಲ್ಲಿವೆ. ಕಟ್ಟಾ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ವೇದ, ಅಗಮ, ಜ್ಯೋತಿಷ ಶಾಸ್ತ್ರ, ನ್ಯಾಯಶಾಸ್ತ್ರ ಮೊದಲಾದವುಗಳನ್ನು ಅರೆದು ಕುಡಿದ ವಾಸುದೇವ ಉಡುಪರ ಮಗನಾಗಿ ಜನಿಸಿದ ಅನಂತರಾಮ ಉಡುಪರು ಎಳೆತನದಲ್ಲೇ ಸಂಸ್ಕೃತವನ್ನು ಚೆನ್ನಾಗಿ ಕಲಿತು ಅದೇ ಊರಿಗೆ ಸಮೀಪದಲ್ಲಿದ್ದ ಒಂದು ಶಾಲೆಯಲ್ಲಿ ಕಲಿತು ಮುಂದೆ ಉಡುಪಿಯ ಸಂಸ್ಕೃತ ಶಾಲೆಗೆ ಸೇರಿ ಸಂಸ್ಕೃತದಲ್ಲಿ ಪ್ರಾವೀಣ್ಯ ಗಳಿಸುತ್ತಾರೆ. ಅವರ ಭಾಷಾಕಲಿಕೆಯ ಸಾಮರ್ಥ್ಯವನ್ನು ಗಮನಿಸಿ ಅವನ ಶಾಲಾ ಸ್ನೇಹಿತನಾದ ಗಾಡ್ವಿನ್ ಸದಾನಂದನ ತಂದೆ ಆನಂದರಾಯರು (ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಬ್ರಾಹ್ಮಣ) ಬರೇ ಸಂಸ್ಕೃತಕ್ಕೆ ಬೆಲೆಯಿಲ್ಲವೆಂದು ಹೇಳಿ ಅವರನ್ನು ಇಂಗ್ಲೀಷ್ ಕಲಿತು ಲಂಡನ್ ಯೂನಿವರ್ಸಿಟಿಯಿಂದ ಬಿ.ಎ. ಪದವಿ ಪಡೆಯಲು ಪ್ರೇರೇಪಿಸುತ್ತಾರೆ. ಸಿಲೋನಿನಲ್ಲಿ ಲಂಡನ್ ಯೂನಿವರ್ಸಿಟಿಯ ಶಾಖೆ ಇರುವುದರಿಂದ ಉಡುಪರು ಮೊದಲು ಅಲ್ಲಿಗೆ ಹೋಗಿ ತಮ್ಮ ವಯಸ್ಸಿಗೂ ಮೀರಿದ ಅಗಾಧವಾದ ಸಂಸ್ಕೃತ ಜ್ಞಾನದಿಂದ ಜನಪ್ರಿಯರಾಗುತ್ತಾರೆ. ಅಲ್ಲಿಗೆ ಬಂದ ಪ್ರಯಾಗದ ಮಹಾಪಂಡಿತ ಬೋಧಾಯನರ ಸಹಾಯದಿಂದ ಜರ್ಮನಿಗೆ ಪಿ.ಹೆಚ್.ಡಿ. ಮಾಡಲು ಹೋದ ನಂತರ ಅವರ ಜೀವನದಲ್ಲಿ ನಡೆದ ಘಟನೆಗಳೇ ಇಲ್ಲಿ ಕಥನದ ಮುಖ್ಯ ಭಾಗ.
ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯುವುದಲ್ಲದೆ ಅದೇ ಸಮಯದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅಲ್ಲಿಗೆ ಬಂದ ನಂತರ ಉಡುಪರು ಅವರ ಸಂಪರ್ಕಕ್ಕೂ ಬರುತ್ತಾರೆ. ಭಾರತವು ಬ್ರಿಟಿಷರ ಗುಲಾಮಗಿರಿಯಲ್ಲಿ ನರಳುತ್ತಿದೆ ಎಂಬುದರ ಕುರಿತು ಏನೂ ತಿಳಿಯದ ಉಡುಪರಿಗೆ ಅವರ ಸಹವರ್ತಿನಿ ಇಂಗ್ರಿಡ್ ರಾಜಕೀಯದಲ್ಲಿ ಭಾಗವಹಿಸುವ ಅಗತ್ಯವನ್ನು ತಿಳಿಯಪಡಿಸಿದ ನಂತರ ನೇತಾಜಿಯವರು ಹೊರಡಿಸುತ್ತಿದ್ದ ‘ಆಜಾದ್ ಹಿಂದ್’ ಪತ್ರಿಕೆಯ ಜರ್ಮನ್ ಆವೃತ್ತಿಯ ಸಂಪಾದಕರಾಗುತ್ತಾರೆ; ಸಂಪಾದಕೀಯಗಳನ್ನು, ಲೇಖನಗಳನ್ನು ಬರೆಯುತ್ತಾರೆ. ಎರಡನೇ ಮಹಾಯುದ್ಧದಲ್ಲಿ ಜರ್ಮನಿಯು ಸೋಲುವ ಹಂತದಲ್ಲಿದ್ದಾಗ ತನಗಿನ್ನು ಅಪಾಯ ತಪ್ಪಿದ್ದಲ್ಲವೆಂದು ಜರ್ಮನಿಯ ಬವೇರಿಯ ಎಂಬ ಹಳ್ಳಿಯಲ್ಲಿ ಮೂರು ವರ್ಷ ಅಜ್ಞಾತವಾಸದಲ್ಲಿ ಕಳೆದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಕಷ್ಟಪಟ್ಟು ಅವಕಾಶ ಮಾಡಿಕೊಂಡು ದಿಲ್ಲಿಗೆ ಮರಳುತ್ತಾರೆ.
ಅನಂತರಾಮ ಉಡುಪರಂತಹ ಮಹಾಜ್ಙಾನಿಯನ್ನು ಸ್ವತಂತ್ರ ಭಾರತದ ಯಾವ ಸಂಸ್ಥೆಯೂ ಗುರುತಿಸುವುದಿಲ್ಲ ಅನ್ನುವ ದುರಂತವೇ ಕಥೆಯ ಕ್ಲೈಮ್ಯಾಕ್ಸ್. ಇದು ಸ್ವತಂತ್ರ ಭಾರತದ ರಾಜಕೀಯ ಕ್ಷೇತ್ರದಲ್ಲಿ ಆಗುವ ಪಲ್ಲಟಗಳ ಬಗೆಗಿನ ಟೀಕೆಯೂ ಹೌದು. ಆದರೆ ಉಡುಪರು ಕಷ್ಟಪಟ್ಟು, ಆಸೆಪಟ್ಟು ಆರ್ಜಿಸಿದ ವಿದ್ಯೆಯ ಮೇಲೆ ಅದು ಬೀರಿದ ಪರಿಣಾಮ ಮಾತ್ರ ಘೋರ. ಅದು ಅವರ ಕರ್ಮಫಲವಲ್ಲದೆ ಇನ್ನೇನು?
ಕೊನೆಗೆ ಬೋಧಾಯನರ ಸಹಾಯದಿಂದ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಜೋಡಿಸುವಂಥ ಸಣ್ಣ ಪುಟ್ಟ ಕೆಲಸಗಳನ್ನು ಹೊಟ್ಟೆಪಾಡಿಗಾಗಿ ಮಾಡುವ ದುಸ್ಥಿತಿ ಅವರದ್ದಾಗುತ್ತದೆ. ಮುಂದೆ ಪ್ರಯಾಗದಲ್ಲಿ ಭಗವತಿ ಆಶ್ರಮದ ಬ್ರಹ್ಮ ಚೈತನ್ಯ ಸ್ವಾಮೀಜಿಯವರ ಆಶ್ರಮದಲ್ಲಿ ಸ್ವಲ್ಪ ಕಾಲ ಕಳೆಯುವ ಉಡುಪರು ಮುಂದೆ ಅಲ್ಲಿಗೆ ಬರುವ ಹಿಮಾಲಯದ ತಪ್ಪಲಿನ ಮಹಾಯೋಗಿಗಳಾದ ಗರ್ವಾಲ್ ಬಾಬಾ ಜತೆಗೆ ಹೋಗಿ ಯೋಗಸಾಧನೆ ಮಾಡುತ್ತಾರೆ. ಬಾಬಾ ಮತ್ತು ಅವರ ಶಿಷ್ಯರು ಸಾಧಿಸಿರುವ ‘ದೇಹವನ್ನು ಬಿಟ್ಟು ಆತ್ಮವು ತನಗೆ ಬೇಕಾದಲ್ಲಿಗೆ ಹೋಗಿ ಬರುವ ವಿದ್ಯೆ’ಯನ್ನು ಕಲಿಯಲು ಹೊರಟ ಉಡುಪರು ಅದನ್ನು ಕೈವಶ ಪಡಿಸಿಕೊಳ್ಳುವ ಮೊದಲೇ ಸಾಯುತ್ತಾರೆ. ಸತ್ತ ನಂತರ ಅವರ ಅತೃಪ್ತ ಆತ್ಮವು ತನ್ನ ಸುತ್ತಾಟವನ್ನು ಆರಂಭಿಸುತ್ತದೆ. ಆಗ ಅವರು ತಾನು ಯೋಗಸಾಧನೆ ಮಾಡಿಬಿಟ್ಟೆ ಎಂಬ ಭ್ರಮೆಗೆ ಒಳಗಾಗಿ ಉಡುಪಿಯ ತನ್ನ ಮನೆಗೆ ಬರುತ್ತಾರೆ. ತನ್ನ ಹಳೆಯ ಮನೆಯನ್ನು ಬೇರಾರೋ ಕೊಂಡುಕೊಂಡದ್ದು ನೋಡಿ ಅವರಿಗೆ ದುಃಖವಾಗುತ್ತದೆ.
ಕಾದಂಬರಿ ಆರಂಭವಾಗುವುದು ಈ ಹಂತದಲ್ಲಿ. ಉಡುಪರ ಫ್ಲ್ಯಾಶ್ ಬ್ಯಾಕ್, ಉಡುಪರ ಮಗ ಪದ್ಮನಾಭ ಉಡುಪ ಮತ್ತು ಅವನ ಮಗ ಅಶ್ವಿನ್ ಉಡುಪ, ಹುಬ್ಬಳ್ಳಿಯ ಪತ್ರಕರ್ತ ಕೊ.ವೆಂ. ಉಪಾಧ್ಯಾಯ, ಅವರ ಮಿತ್ರ ಎಸ್ಸೆಲ್ಲೆನ್ ಮೂರ್ತಿ, ಪ್ರಯಾಗದ ಪ್ರೊ. ಶ್ರೀವಾಸ್ತವ ಮೊದಲಾದವರ ನಡುವಣ ಮಾತುಕತೆಗಳ ಮೂಲಕ ನಮಗೆ ಅನಂತರಾಮ ಉಡುಪರ ಜೀವನದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ವಿವರಗಳು ದೊರಕುತ್ತವೆ. ಪದ್ಮನಾಭ ಉಡುಪರು ತಮ್ಮ ತಾಯಿಯ ಬಗ್ಗೆ ಹೇಳುವ ವಿಚಾರಗಳು ಮನಕಲಕುತ್ತವೆ. ಅಂಥ ಸಾಧ್ವಿಮಣಿಯನ್ನು ಬಿಟ್ಟು ಮರೀಚಿಕೆಯ ಹಿಂದೆ ಹೋದರಲ್ಲಾ ಅನಂತರಾಮ ಉಡುಪರು ಅನ್ನಿಸುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ಮತಾಂತರದ ಸಮಸ್ಯೆಯ ಕುರಿತು ಕಾದಂಬರಿ ಪ್ರಾರಂಭದಲ್ಲೇ ಚರ್ಚಿಸುತ್ತದೆ. ಕ್ರಿಸ್ತಾನಂದರ (ಆನಂದ ರಾಯರ) ಮತಾಂತರಕ್ಕೆ ಕಾರಣಗಳೇನು ಮತ್ತು ನಾಡಿನ ಜನತೆಯ ಮೇಲೆ ಅದು ಏನು ಪರಿಣಾಮ ಬೀರಿತು, ಹೇಗೆ ತಮ್ಮ ಸ್ವಧರ್ಮದ ಸ್ವವಿಮರ್ಶೆ ಮಾಡಲು ಪ್ರೇರೇಪಿಸಿತು ಅನ್ನುವುದನ್ನು ಸುದರ್ಶನ ಪತ್ರಿಕೆಯ ಒಂದು ವರದಿಯ ಮೂಲಕ ಲೇಖಕರು ಸ್ಪಷ್ಟ ಪಡಿಸಿದ್ದಾರೆ. ಆನಂದರಾಯರು ಮಾಡಿದ ತಪ್ಪಿಗೂ ಅನಂತರಾಮರು ಮಾಡಿದ ಪ್ರಮಾದಕ್ಕೂ ನಡುವೆ ಹೆಚ್ಚು ವ್ಯತ್ಯಾಸ ಏನಿಲ್ಲ.
ಹೆಚ್ಚು ಹೆಚ್ಚು ವಿದ್ಯಾರ್ಜನೆ ಮಾಡಬೇಕು, ಹೆಸರು ಮಾಡಬೇಕು, ಹಣ- ಅಧಿಕಾರ-ಸ್ಥಾನಮಾನಗಳನ್ನು ಗಳಿಸಬೇಕು ಅನ್ನುವುದು ಅನಂತರಾಮ ಉಡುಪರ ಮಹತ್ವಾಕಾಂಕ್ಷೆ. ಅದನ್ನು ಸಾಧಿಸುವುದಕ್ಕೋಸ್ಕರ ಅವರು ಅಮ್ಮನ ಮತ್ತು ಸೋದರಮಾವನ ಉಪದೇಶವನ್ನು ಲೆಕ್ಕಿಸದೆ, ಹೆಂಡತಿಯನ್ನೂ ಕಡೆಗಣಿಸಿ ಅವರ ಏಕಮಾತ್ರ ಜೀವನಾಧಾರವಾಗಿದ್ದ ಮನೆಯನ್ನೂ ಪಟೇಲರಲ್ಲಿ ಅಡವಿಟ್ಟು ಹಣ ಹೊಂದಿಸಿಕೊಂಡು ಜರ್ಮನಿಗೆ ಹೋಗುವುದು ಅವರ ಅಧಃಪತನದ ಮೊದಲ ಹಂತ. ಸ್ತ್ರೀಶಾಪವು ಆ ಮನೆಯ ಮೇಲೆ ಇದೆ, ಅಲ್ಲಿ ಪ್ರೇತಗಳು ವಾಸಿಸುತ್ತವೆ ಅನ್ನುವ ಉಲ್ಲೇಖ ಒಂದೆಡೆ ಬರುತ್ತದೆ. ಆ ಸ್ತ್ರೀಶಾಪದ ಪರಿಣಾಮವಾಗಿ ಮನೆಯನ್ನು ಬಿಟ್ಟು ಕುಟುಂಬದವರನ್ನು ನಡುನೀರಿನಲ್ಲಿ ಬಿಟ್ಟು ಹೋದ ಮನೆಯೊಡೆಯನ ಸ್ಥಿತಿ ಅತಂತ್ರವಾಗುತ್ತದೆ.
ಭಾರತೀಯ ಸಂಸ್ಕೃತಿ ನಿಂತಿರುವುದು ಕೌಟುಂಬಿಕ ಬದುಕಿನಲ್ಲಿ ಪುರುಷ ಹೊರುವ ನಾಲ್ಕು ಆಶ್ರಮಗಳನ್ನು ನಿರ್ವಹಿಸುವ ಜವಾಬ್ದಾರಿಗಳಲ್ಲಿ. ಅದರಲ್ಲೂ ಗೃಹಸ್ಥಾಶ್ರಮದ ಹೊಣೆ ಬಹಳ ಮಹತ್ವದ್ದು. ಇಲ್ಲಿ ಅನಂತರಾಮ ಉಡುಪರು ಅದನ್ನು ನಿರ್ಲಕ್ಷಿಸಲು ಕಾರಣ ಅವರ ಮಹತ್ವಾಕಾಂಕ್ಷೆ. ಭಾರತೀಯ ಸಮಾಜವು ವ್ಯಕ್ತಿಹಿತಕ್ಕಿಂತ ಸಮಾಜ ಹಿತ ದೊಡ್ಡದು ಎಂದು ನಂಬುತ್ತದೆ. ಒಬ್ಬ ಆದರ್ಶ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಬದುಕುವವನಲ್ಲ ಅನ್ನುತ್ತದೆ. ಆದರೆ ಅನಂತರಾಮ ಉಡುಪರು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆ.
ತಪ್ಪು ಮಾಡುವ ಭರದಲ್ಲಿ ಅದು ಅವರಿಗೆ ಗೊತ್ತಾಗುವುದಿಲ್ಲ. ಆದರೆ ಕೊನೆಗೆ ತಾನು ಕಡಲು ದಾಟಿ ಮಾಂಸ ತಿಂದು ಜಾತಿಭ್ರಷ್ಟನಾದೆ, ಕುಟುಂಬವನ್ನು ಕಡೆಗಣಿಸಿದೆ ಅನ್ನುವ ಅಪರಾಧಿ ಭಾವ ಅನಂತರಾಮ ಉಡುಪರ ಆತ್ಮವನ್ನು ಪದೆಪದೇ ಕಾಡುವುದನ್ನು ನಾವು ನೋಡಬಹುದು. ಅಂದಿನಿಂದ ಇಂದಿನ ತನಕ ತಾನು ಮಾಡಿದ ಕೃತ್ಯಗಳ ಬಗ್ಗೆ ಮಗ ಮತ್ತು ಮೊಮ್ಮಗ ಏನು ಹೇಳುತ್ತಾರೆಂಬುದನ್ನು ಕೇಳಲು ಅವನು ತವಕಿಸುವುದೂ ಅದೇ ಅಪರಾಧಿ ಪ್ರಜ್ಞೆಯಿಂದ.
ಒಂದು ಮನೆ ಮನೆ ಅನ್ನಿಸಿಕೊಳ್ಳುವುದು ಅದರೊಳಗೆ ಗೃಹಸ್ಥ ಮತ್ತು ಗೃಹಿಣಿ ಇದ್ದಾಗ ಮಾತ್ರ. (ಕಾದಂಬರಿಯಲ್ಲಿ ಗೃಹಿಣಿಗೆ ಮಹತ್ವ ಕೊಡಲಾಗಿಲ್ಲ. ತ್ಯಜಿಸಲ್ಪಟ್ಟ ಗೃಹಿಣಿಯ ಬಗ್ಗೆ ಸಹಾನುಭೂತಿಯಷ್ಟೇ ವ್ಯಕ್ತವಾಗಿದೆ. ಬಸವಣ್ಣನವರೂ ತಮ್ಮ ಪದ್ಯದಲ್ಲಿ ಒಂದು ಮನೆ ಮನೆಯಾಗುವಲ್ಲಿ ಸ್ತ್ರೀಯ ಪಾತ್ರವೇನೆಂದು ಹೇಳಿಲ್ಲ.) ಉಡುಪರ ಮಗ ಪದ್ಮನಾಭ ಮತ್ತು ಮೊಮ್ಮಗ ಅಶ್ವಿನ್ ಉಡುಪ ಬಹಳ ಕಷ್ಟಪಟ್ಟು ಎಲ್ಲೆಲ್ಲೋ ಅಲೆದಾಡಿ ಅನಂತರಾಮ ಉಡುಪರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಕಲಾವಿದರಿಂದ ಅವರ ಚಿತ್ರ ಬರೆಯಿಸಿ ಮನೆಯನ್ನು ತಿರುಗಿ ಕೊಂಡುಕೊಂಡು ಚಾವಡಿಯಲ್ಲಿ ಅವರ ನೆನಪಿಗಾಗಿ ಅವರ ಭಾವಚಿತ್ರ ಮತ್ತು ಅವರಿಗೆ ದೊರಕಿದ ಪ್ರಮಾಣಪತ್ರದಂತೆ ಕಂಡ ಹಿಟ್ಲರನ ಆತ್ಮಚರಿತ್ರೆಯ ಜಪಾನಿ ಅನುವಾದದ ಮುಖಚಿತ್ರವನ್ನು ತೂಗ ಹಾಕುವುದು ಪರಿಸ್ಥಿತಿಯ ಬಹುದೊಡ್ಡ ವ್ಯಂಗ್ಯ. ಅವರ ಇನ್ನೊಂದು ಮುಖದ ಬಗ್ಗೆ ಆಲೋಚಿಸುವಾಗ ಅವರು ಇಂಥ ಒಂದು ಗೌರವಕ್ಕೆ ಅರ್ಹರೇ ಅನ್ನಿಸುತ್ತದೆ. ಯಾಕೆಂದರೆ ಬೋಧಾಯನರು ಅವರಿಗೆ ಊರಿಗೆ ಹೋಗಿ ಕನ್ನಡ ಸಾಹಿತ್ಯ ಕೃಷಿ ಮಾಡಿ ಎಂದು ಬೋಧಿಸಿದರೆ ‘ಜರ್ಮನಿಯಲ್ಲಿ ಲಕ್ಷಗಟ್ಟಲೆ ಜನರು ಓದುತ್ತಿದ್ದ ತನ್ನ ಲೇಖನಗಳನ್ನು ಬರೇ ಎರಡು ಸಾವಿರ ಮಂದಿ ಓದುವುದೆ?’ ಎಂದು ತಾತ್ಸಾರ ಮಾಡುತ್ತಾರೆ. ಹೀಗೆ ಊರಿಗೆ ಮರಳುವ ಆಲೋಚನೆಯನ್ನು ತಿರಸ್ಕರಿಸಿದ್ದು, ಮನೆಯೊಳಗೆ ಮನೆಯೊಡೆಯ ಇಲ್ಲದಂತೆ ಮಾಡಿದ್ದು ಅವರೇ ಅಲ್ಲವೆ? ಕೊನೆಗೂ ಅವರ ಸಾವು ಬಹಳ ಬೇಗನೇ -ಅಂದರೆ ಸುಮಾರು 54ನೇ ವಯಸ್ಸಿನಲ್ಲಿ – ಸಂಭವಿಸಿತು. ಅವರ ಆತ್ಮವು ದೇಹವನ್ನು ಬಿಟ್ಟಾಗಲೂ ಅವರಿಗಿದ್ದ ಭ್ರಮೆ ತಾನು ಯೋಗಶಕ್ತಿಯನ್ನು ಸಾಧಿಸಿದೆ ಎಂದು. ಅವರ ಬದುಕಿನಲ್ಲಿ ಎಲ್ಲವೂ ತಲೆಕೆಳಗಾಯಿತು. ಅಲ್ಲಿ ತೂಗಹಾಕಿದ ಚಿತ್ರದಂತೆ..! ಅನಂತರಾಮ ಉಡುಪರ ಪಾತ್ರಚಿತ್ರಣವು ಒಟ್ಟಿನಲ್ಲಿ ಹೇಳುವುದೇನೆಂದರೆ ಅವರು ಕಥಾನಾಯಕರಲ್ಲ, ಬದಲಾಗಿ ಪ್ರತಿನಾಯಕರು ಎಂಬುದಾಗಿ. ಅವರಿಗೂ ಡಾಕ್ಟರ್ ಫಾಸ್ಟಸ್ ಗೂ ಏನು ವ್ಯತ್ಯಾಸ ಇದೆ ಅನ್ನಿಸುತ್ತದೆ. ಸನ್ನಿವೇಶ ಸಂದರ್ಭ, ಪರಿಸರಗಳು ಭಿನ್ನವೆಂಬುದನ್ನು ಬಿಟ್ಟರೆ ಇಬ್ಬರ ಅಧಃಪತನವೂ ಒಂದೇ..! ಸುಮ್ಮನೆ ಹೇಳಿದ್ದಾರೆಯೇ ಸರ್ವಜ್ಞ ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೆ ಲೇಸು’ ಎಂದು..! ವ್ಯವಹಾರ ಜ್ಞಾನವೇ ಇಲ್ಲದ, ಮಾನವೀಯ ಕಾಳಜಿಯೇ ಸೊನ್ನೆಯಾದ ವಿದ್ಯೆ ಯಾಕೆ ಬೇಕು? ಕಾದಂಬರಿಯಲ್ಲಿ ಪದೇ ಪದೇ ಅನಗತ್ಯವಾಗಿ ಅನಂತರಾಮ ಉಡುಪರ ಹೆಸರಿನ ಹಿಂದೆ ಡಾ. ಎಂದು ಹಾಕಿದ್ದು ಇದೇ ಉದ್ದೇಶದಿಂದ ಇರಬಹುದೇನೋ..!
ಲೇಖಕರು ತಮ್ಮ ಮೊದಲ ಮಾತುಗಳಲ್ಲಿ ಈ ವಿಚಾರಗಳನ್ನು ಸ್ಪರ್ಶಿಸಿಲ್ಲ ನಿಜ. ಆದರೆ ಕಾದಂಬರಿಯ ಸೂಕ್ಷ್ಮ ಓದು ಧ್ವನಿಸುವುದು ಇದನ್ನೇ. ಕೃತಿಯು ಕೃತಿಕಾರರನ್ನು ಮೀರಿ ಬೆಳೆಯುವುದು ಅಂದರೆ ಇದೇ ತಾನೇ?
ಅನಂತರಾಮ ಉಡುಪರ ಆತ್ಮವು ಕೆರೆಮಠ ಮನೆಯಲ್ಲಿ ಕುಳಿತು ಆಗುಹೋಗುಗಳನ್ನೆಲ್ಲ ಗಮನಿಸುವುದು, ತನಗೆ ಬೇಕಾದ ಕಡೆಗಳಿಗೆಲ್ಲ ಲೀಲಾಜಾಲವಾಗಿ ಹೋಗುವುದು, ಎಲ್ಲರ ಮಾತು-ಚಲನವಲನಗಳನ್ನು ಗಮನಿಸುವುದು ಇತ್ಯಾದಿ ಕ್ರಿಯೆಗಳು ಕಾದಂಬರಿಯ ನಿರೂಪಣೆಗೆ ಒಂದು ಮಾಯಾವಾಸ್ತವದ ಸ್ವರೂಪವನ್ನು ಕೊಡುತ್ತದೆ. ಗರ್ವಾಲ್ ಬಾಬಾ ಅವರ ಆತ್ಮವನ್ನು ಮಾತನಾಡಿಸುವ ಶಕ್ತಿ ಕೂಡಾ ಅವರ ಅತೀಂದ್ರಿಯ ಶಕ್ತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ನಿರೂಪಣೆಯಲ್ಲಿ ನಡುನಡುವೆ ನಾಟಕದ ಶೈಲಿಯ ಸಂಭಾಷಣೆಗಳು ಹಳೆಯ ಆರಂಭಕಾಲದ ಕಾದಂಬರಿಗಳನ್ನು ನೆನಪಿಸುತ್ತವೆ. ಬಹುಶಃ ಕಾದಂಬರಿಕಾರರು ಅನಗತ್ಯ ವಿವರಣೆಗಳಿಂದ ತಪ್ಪಿಸಿಕೊಳ್ಳಲು ಪಾತ್ರಗಳ ನಡುವೆ ನೇರ ಸಂಭಾಷಣೆಗಳನ್ನು ಬಳಸಿರಬಹುದು.
ಕಾದಂಬರಿಯ ಗಾತ್ರ ಚಿಕ್ಕದಾದರೂ (144 ಪುಟಗಳು) ಒಳಗಿನ ಹೂರಣವು ನೂರಾರು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟಿಸಿ ನಮ್ಮನ್ನು ಚಿಂತನೆಗೆ ಪ್ರೇರೇಪಿಸುತ್ತದೆ ಅನ್ನುವುದಂತೂ ನಿಜ. ಇದು ಅತ್ಯಂತ ಬಿಗಿಯಾದ ರಚನಾಬಂಧವುಳ್ಳ ಮತ್ತು ಕಡಿಮೆ ಶಬ್ದಗಳಲ್ಲಿ ಹೆಚ್ಚು ಹೇಳುವ ಕಾದಂಬರಿ. ಆದ್ದರಿಂದಲೇ ಹೆಚ್ಚು ಓದುಗರನ್ನು ಬೇಗನೆ ತಲುಪುವ ಸಾಧ್ಯತೆ ಇದೆ.
– ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು
ಕೃತಿಯ ಹೆಸರು : ‘ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?’ (ಕಾದಂಬರಿ)
ಕೃತಿಕಾರರು : ಡಾ. ಬಿ. ಜನಾರ್ದನ ಭಟ್
ಪ್ರ : ಅಂಕಿತ ಪುಸ್ತಕ
ಪ್ರ. ವರ್ಷ : 2025