ಮನಮೋಹಕ ಅಭಿನಯ ಮತ್ತು ನೃತ್ಯ-ನಟುವಾಂಗಗಳಿಗೆ ಹೆಸರಾದ ನೃತ್ಯಗುರು ಡಾ. ಶ್ರುತಿ ಎನ್. ಮೂರ್ತಿ – ‘ನಾಟ್ಯಭೈರವಿ ನೃತ್ಯ ಶಾಲೆ’ಯ ಹೆಸರಾಂತ ಗುರು. ಇತ್ತೀಚೆಗೆ ಇವರ ನುರಿತ ಗರಡಿಯಲ್ಲಿ ರೂಹು ತಳೆದ ನೃತ್ಯಶಿಲ್ಪ ಕುಮಾರಿ ಸುಪ್ರೀತಾ, ಬೆಂಗಳೂರಿನ ವಿವೇಕ ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ನೆರವೇರಿಸಿಕೊಂಡು ಅತ್ಯಂತ ಮೋಹಕ ಕೃತಿಗಳನ್ನು ವರ್ಣರಂಜಿತವಾಗಿ ಪ್ರದರ್ಶಿಸಿದಳು. ಸುಂದರ ಅಭಿನಯ, ಸೊಗಸಾದ ನೃತ್ತ ಸೌಂದರ್ಯದಿಂದ ಕೂಡಿದ ನಾಟ್ಯ ಮಯೂರಿ ಸುಪ್ರೀತಳ ನೃತ್ಯವೈವಿಧ್ಯ ಕಲಾರಸಿಕರನ್ನು ರಂಜಿಸಿತು.
ಕಲಾತ್ಮಕ ‘ಪುಷ್ಪಾಂಜಲಿ’ಯಿಂದ ನೃತ್ಯದ ಶುಭಾರಂಭ ಮಾಡಿ ‘ಗಣೇಶವಂದನೆ’ಯನ್ನು ವಿಶಿಷ್ಟವಾಗಿ ಕಣ್ಮನ ಸೆಳೆದ ಭಾವ-ಭಂಗಿಗಳಿಂದ ನಿರೂಪಿಸಿದಳು. ಆಕೆಯ ಅಂಗಶುದ್ಧ ನರ್ತನವು ‘ಅಲರಿಪು’ವಿನ ಆಂಗಿಕಾಭಿನಯಕ್ಕೆ ಕಳೆಗೊಟ್ಟಿತು. ಗುರು ಶ್ರುತಿ ಅವರ ಲಯಾತ್ಮಕ ನಟುವಾಂಗದ ಬನಿ ಅವಳ ಪಾದಚಲನೆಗೆ, ನೃತ್ತಗಳ ನಿರೂಪಣೆಗೆ ಅಮಿತ ಸ್ಫೂರ್ತಿ ನೀಡಿತು. ಮುಂದೆ ಸಾದರಪಡಿಸಿದ ‘ಕಾಲಭೈರವಾಷ್ಟಕಂ’ ಪರಿಣಾಮಕಾರಿಯಾಗಿ ಝೇಂಕರಿಸಿ, ವಿವಿಧ ಭಾವಗಳ ಸಾಂದ್ರತೆ ಮಡುಗಟ್ಟಿತ್ತು. ಕಲಾವಿದೆಯ ಪ್ರಖರ ಅಭಿನಯ ಶಕ್ತಿಗೆ ಕನ್ನಡಿ ಹಿಡಿಯಿತು.
ಪ್ರಸ್ತುತಿಯ ಕೇಂದ್ರಭಾಗ- ‘ಸ್ವಾಮಿಯೇ ವರ ಸೊಲ್ಲಡಿ’ ಎಂಬ ಶೃಂಗಾರ ಮಿಳಿತ- ವಿಪ್ರಲಂಭ ಶೃಂಗಾರದ ‘ವರ್ಣ’ – ನಾಯಕಿಯ ವಿರಹವೇದನೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿತು. ಕಲಾವಿದೆ, ತಾನೇ ಪಾತ್ರವಾಗಿ, ತನ್ಮಯತೆಯಿಂದ ಇಡೀ ರಂಗಾವರಣದ ತುಂಬಾ ತನ್ನ ಹೆಜ್ಜೆ-ಗೆಜ್ಜೆಗಳ ಕಲರವಿಸಿ, ತನ್ನ ಗತ ಪ್ರೀತಿಯ ಮಧುರ ಕಥಾನಕವನ್ನು ನಾಟಕೀಯ ಸಂಚಾರಿಯಲ್ಲಿ ಕಟ್ಟಿಕೊಟ್ಟದ್ದು ಹೃದಯ ಕಲಕಿತು. ಹರಿತ ನೃತ್ತಗಳ ವಿನ್ಯಾಸ, ಕಲಾವಿದೆಯ ಚೈತನ್ಯ- ನರ್ತನ ಪ್ರತಿಭೆ ಮನಸೂರೆಗೊಂಡು, ಅವಳ ಲೀಲಾಜಾಲ ನೃತ್ಯಾರ್ಪಣೆಗೆ ಸಾಕ್ಷಿ ನುಡಿಯಿತು. ನಡುನಡುವೆ ಮೂಡಿಬಂದ ಶೃತಿಯವರ ಸುಸ್ಪಷ್ಟ- ಖಚಿತ ನಟುವಾಂಗ ಕೂಡ ಗಮನ ಸೆಳೆಯಿತು.
ಮುಂದೆ ಕಲಾವಿದೆ ‘ಅಚ್ಯುತಂ ಕೇಶವ ರಾಮನಾರಾಯಣ’ನನ್ನು ದಶಾವತಾರದಲ್ಲಿ ಸಾಕ್ಷಾತ್ಕರಿಸಿದ ಬಗೆ ಮುದನೀಡಿತು. ಅನಂತರ ಮನಮೋಹಕ ‘ಏರಾ ರಾರಾ’ ಎಂದು ವಿಲಪಿಸುವ ನಾಯಕಿ ‘ಜಾವಳಿ’ಯಲ್ಲಿ ಕಲಾವಿದೆ ಚಿತ್ರಿಸಿದ ಪ್ರಣಯರಾಗದ ವಿವಿಧ ದೃಶ್ಯಗಳು, ಮನ್ಮಥ ಕಾಡುವ ಭಾವಗುಚ್ಚಗಳ, ಇನಿಯನ ಅಗಲಿಕೆಯ ನೋಟದ ಗಾಢ ಚಿತ್ರಣಗಳು ಬಹು ಹೃದಯಸ್ಪರ್ಶಿಯಾಗಿದ್ದವು. ನಂತರ ಕಲಾವಿದೆಯ ಅನುಪಮ ಅಭಿನಯದಲ್ಲಿ ಮೈತಳೆದ ಅಣ್ಣಮಾಚಾರ್ಯರ ಕೃತಿ ಮೈನವಿರೆಳಿಸಿತು. ಅಂತ್ಯದಲ್ಲಿ ಉಲ್ಲಾಸಭರಿತ ಸಂಭ್ರಮದ ಜತಿಗಳ ಲಾಸ್ಯದೊಂದಿಗಿನ ‘ತಿಲ್ಲಾನ’ದೊಂದಿಗೆ ಸುಪ್ರೀತಾ ತನ್ನ ಪ್ರಸ್ತುತಿಯನ್ನು ರೋಮಾಂಚಕವಾಗಿ ಸಂಪನ್ನಗೊಳಿಸಿದಳು. ಅಂದು ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದ ಸುಪ್ರೀತಾಳ ಪ್ರತಿಭಾ ನೈಪುಣ್ಯ, ಚೇತೋಹಾರಿ ಅಭಿನಯ ಚಿರಸ್ಮರಣೀಯವಾಗಿತ್ತು.
– ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.