ಉಪ್ಪಿನಂಗಡಿ : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕ ಮತ್ತು ವಸುಧಾ ಪ್ರತಿಷ್ಠಾನ ಉಪ್ಪಿನಂಗಡಿ ಇದರ ವತಿಯಿಂದ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿ ಅವರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ಹಮ್ಮಿಕೊಂಡ ‘ಕನ್ನಡ ಕಲರವ -2’ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಇಂದ್ರಪ್ರಭ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷರಾದ ಕರುಣಾಕರ ಸುವರ್ಣ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಮಾರ್ಗದರ್ಶಕರಾದ ಡಾ. ತಾಳ್ತಜೆ ವಸಂತ ಕುಮಾರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ ಪಾತಾಳ ವೆಂಕಟರಮಣ ಭಟ್, ವೈದ್ಯ ಕೆ. ಶೀನಪ್ಪ ಶೆಟ್ಟಿ ಮತ್ತು ಡಾ. ಮುದ್ರಜೆ ರಾಮಚಂದ್ರ ಭಟ್ ಇವರಿಗೆ ನುಡಿ ನಮನ ಸಲ್ಲಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ನಡೆಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ವೈಭವ ಪ್ರಸ್ತುತಗೊಳ್ಳಲಿದೆ.