Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದಲ್ಲಿ ‘ದಿವ್ಯದೃಷ್ಟಿಯ ಗಾಂಧಾರಿ’ ಕೃತಿ ಬಿಡುಗಡೆ ಸಮಾರಂಭ

    August 4, 2025

    ವಿಪ್ರ ವೇದಿಕೆಯ ದಶಮ ಸಂಭ್ರಮದ ಮೂರನೇ ಸರಣಿ ಕಾರ್ಯಕ್ರಮ

    August 4, 2025

    ಎಡನೀರಿನಲ್ಲಿ ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 4ನೇ ಕಾರ್ಯಕ್ರಮ

    August 4, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ‘ಕೊಡುವುದೇನು? ಕೊಂಬುದೇನು?’
    Article

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ‘ಕೊಡುವುದೇನು? ಕೊಂಬುದೇನು?’

    August 4, 2025No Comments12 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ದೇವರಂತೆ ಶಕ್ತವೂ, ಅಂತರ್ಯಾಮಿಯೂ ಆಗಿರುವ ಪ್ರೀತಿಯು ಅಳಿದಷ್ಟು ಬೆಳೆಯುವ ಅಮೂಲ್ಯ ನಿಧಿಯಾಗಿದೆ. ಯಾವ ಭೇದಭಾವವಿಲ್ಲದೆ ಕೊಟ್ಟು ಪಡೆಯುವ, ಕೊಟ್ಟಷ್ಟೂ ಮುಗಿಯದ ಸಂಪತ್ತು ಪ್ರೀತಿ. ಆದ್ದರಿಂದ ‘ಕೊಡುವುದೇನು? ಕೊಂಬುದೇನು?’ ಎಂಬ ವ್ಯಕ್ತಿ ಚಿತ್ರ- ಪ್ರಬಂಧಗಳ ಶೀರ್ಷಿಕೆಯು ಪ್ರೀತಿಯನ್ನು ಧ್ವನಿಸುತ್ತದೆ. ಪ್ರೀತಿಯ ಮೂರ್ತರೂಪವೆನಿಸಿರುವ ಇಲ್ಲಿನ ವ್ಯಕ್ತಿಗಳು ಚರಿತ್ರೆಯಲ್ಲಿ ಸ್ಥಾನವನ್ನು ಪಡೆಯದ ಜನಸಾಮಾನ್ಯರಾದರೂ ಗುಣದಲ್ಲಿ ಹಿರಿಯರು ಮತ್ತು ಎದೆ ತುಂಬಾ ಪ್ರೀತಿಯನ್ನು ಮೊಗೆದು ಕೊಟ್ಟವರು.

    ಹೃದಯ ಶ್ರೀಮಂತಿಕೆ ಇರುವ ವಿವೇಕಿಯು ಇನ್ನೊಬ್ಬನನ್ನು ಸಣ್ಣವ, ಅಲ್ಪನೆಂದು ತಿಳಿಯದೆ ಅವನಲ್ಲಿದ್ದ ಒಳ್ಳೆಯ ಗುಣಗಳಿಗೆ ಗುರುತಿಸುತ್ತಾನೆ. ಹೊಟ್ಟೆಕಿಚ್ಚು, ಸೊಕ್ಕು, ತಿರಸ್ಕಾರಗಳನ್ನು ಬೆಳೆಸಿಕೊಳ್ಳುವದಿಲ್ಲ. ಅವರ ಕಣ್ಣಿಗೆ ಚಾರಿತ್ರಿಕ ವ್ಯಕ್ತಿಗಳು ಮಾತ್ರವಲ್ಲ, ಜನಸಾಮಾನ್ಯರೂ ದೊಡ್ಡವರೇ ಆಗಿರುತ್ತಾರೆ. ಇಂಥ ಜನಸಾಮಾನ್ಯರು ‘ಕೊಡುವುದೇನು? ಕೊಂಬುದೇನು’ ಎಂಬ ಕೃತಿಯ ಕೇಂದ್ರವಾಗಿದ್ದಾರೆ. ಬದುಕು ಎಂಬ ಹೋರಾಟದಲ್ಲಿ ಪ್ರತಿಯೊಬ್ಬನೂ ಅಡೆತಡೆಯನ್ನು ಲೆಕ್ಕಿಸದೆ ಮುಂದುವರಿಯಬೇಕು. ಇಲ್ಲಿರುವವರು ಬದುಕಿನ ಹೋರಾಟದಲ್ಲಿ ಬಿದ್ದು ಗೆದ್ದವರು. ಅನುಭವದಿಂದ, ಪ್ರೀತಿಯಿಂದ ಇತರರನ್ನು ಎಬ್ಬಿಸಿ ನಿಲ್ಲಿಸಿದವರು. ಹೃದಯವೇ ಅವರ ಗುರು. ಅದರೊಳಗಿನ ಪ್ರೀತಿ ಮಾನವೀಯತೆಗಳು ಬತ್ತದ ಸೆಲೆ. ಎದೆಯಾಳದ ದನಿಗೆ ಮಿಗಿಲಾದ ಶಾಸ್ತ್ರವಿಲ್ಲ. ಧರ್ಮವಿಲ್ಲ.

    ಲೇಖಕಿಯು ತಮ್ಮ ಬಾಲ್ಯದ ದಿನಗಳಲ್ಲಿ ತನ್ನ ಕುತೂಹಲಕ್ಕೆ ಕಾರಣಾದ ವ್ಯಕ್ತಿಗಳ ಚರ್ಯೆಗಳು, ಅವರ ಬದುಕಿನ ಬವಣೆ ಮತ್ತು ಕಷ್ಟಕೋಟಲೆಗಳ ಹಿನ್ನೆಲೆಯನ್ನು ಹಿರಿಯರಿಂದ ಕೇಳಿ ತಿಳಿದು, ಅವರ ಗುಣದೋಷಗಳನ್ನು ಅವರ ಬದುಕಿನ ಹಿನ್ನೆಲೆಯಲ್ಲಿ ಸಹಜವಾಗಿ ನಿರೂಪಿಸಿದ್ದಾರೆ. ಕಂಡು ಅನುಭವಿಸಿದ ಸಂಗತಿಗಳನ್ನು ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಲೇಖಕಿಯ ಕುಟುಂಬದೊಂದಿಗೆ ಪ್ರೀತಿನಂಬಿಕೆಗಳನ್ನು ಇರಿಸಿಕೊಂಡವರಾಗಿದ್ದು ಅವರು ಕಣ್ಮರೆಯಾಗುವಲ್ಲಿವರೆಗಿನ ಬದುಕನ್ನು ತೋರಿಸಿದ್ದಾರೆ. ಆತ್ಮೀಯವಾಗಿ ಬಿಡಿಸಿಕೊಳ್ಳುವ ವ್ಯಕ್ತಿಚಿತ್ರ ಪ್ರಬಂಧಗಳು ಆಯಾ ವ್ಯಕ್ತಿಗಳ ಬದುಕಿನ ವೃತ್ತಾಂತಗಳಾದರೂ ಸಣ್ಣಕತೆಯ ಸ್ವರೂಪವನ್ನು ಪಡೆದುಕೊಂಡಿವೆ.

    ಬಾಲವಿಧವೆಯಾಗಿ ಬಾಳಿ ಸಾವನ್ನಪ್ಪುವ ಶಲ್ಲಕ್ಕ, ರಾಜಕ್ಕ, ಕಮಲಕ್ಕ ಮತ್ತು ರಾಜವ್ವ, ಎಲ್ಲಮ್ಮನ ಗುಡ್ಡದಲ್ಲಿ ನವಿಲನ್ನು ಹಿಂಬಾಲಿಸುತ್ತಾ ನವಿಲತೀರ್ಥದಲ್ಲಿ ಮುಳುಗಿ ಸಾಯುವ ಹೊನಗನ್ನಿ, ದಿನವೂ ಒಂದು ಕಡಲೆಕಾಳಿನಷ್ಟು ಬೆಲ್ಲವನ್ನು ಬೇಡುತ್ತಿದ್ದು ಎಲಗುರಕ್ಕೆ ಹೋಗುವ ನಿಟ್ಟಿನಲ್ಲಿ ಊರು ಬಿಡುವ ಬೆಲ್ಲದ ಬ್ರಾಹ್ಮಣ, ಗುಡಿಪೂಜೆ ಮತ್ತು ಮಠದ ಆಸ್ತಿಯ ವಾರಸುದಾರನಾಗಿದ್ದೂ ಬದುಕಿನಲ್ಲಿ ಅವನತಿಯನ್ನು ಹೊಂದಿ, ನ್ಯಾಯಾಲಯದ ಮುಂಭಾಗದಲ್ಲಿ ಸತ್ತು ಬಿದ್ದ ಏಗ್ಯಾ (ರಘೂತ್ತಮ) ತಾಯಿ ಮತ್ತು ಅಕ್ಕನನ್ನು ಕಳೆದುಕೊಂಡ ಬಳಿಕ ತನ್ನ ಒಡೆಯನ ಚಪ್ಪಲಿಗಳನ್ನು ಕೇಲಿ ಪಡೆದು ಫಕೀರನ ಜೊತೆಗೆ ಮಕ್ಕಾಗೆ ಹೋಗುವ ಅಲ್ಲಾಬಕ್ಷ ಮುಂತಾದವರ ವ್ಯಕ್ತಿತ್ವದ ರೇಖೆಗಳು ಸಾಂದ್ರವಾದ ಬರವಣಿಗೆಯ ಮೂಲಕ ಮಾಸದ ಛಾಪನ್ನು ಒತ್ತುತ್ತವೆ. ಪಾರ್ಶ್ವನೋಟದಲ್ಲಿ ತೃಪ್ತವಾಗದೆ ಸಮಗ್ರನೋಟವನ್ನು ಬೀರುತ್ತದೆ. ಕೆಲವೊಮ್ಮೆ ಅವುಗಳು ಶೋಕಗೀತೆಯೂ ಆಗುತ್ತವೆ.

    ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದು, ಮದುವೆ ಎಂಬುದರ ಅರ್ಥವನ್ನು ತಿಳಿಯುವ ಮೊದಲೇ ಹಿರಿಯರು ತೋರಿಸಿ ಕೊಟ್ಟವನನ್ನು ವರಿಸಿ, ಕೆಲವೇ ದಿನಗಳಲ್ಲಿ ವಿಧವೆಯಾದ ಶಲ್ಲಕ್ಕನ ಪರಿಸ್ಥಿತಿ, ಮಕ್ಕಳಿಂದ ದೂರವಿದ್ದ ವೃದ್ಧದಂಪತಿಗಳ ಜೊತೆಗಿದ್ದು ಅವರ ಚಾಕರಿಯನ್ನು ಮಾಡಿ ಹೊಟ್ಟೆ ಹೊರೆದುಕೊಳ್ಳಬೇಕಾಗಿ ಬಂದ ಸಂದರ್ಭವು ಮರ್ಮಭೇದಕವಾಗಿದೆ. ಶಲ್ಲಕ್ಕನ ಕೂದಲಿನಿಂತೆ ಬದುಕು ಬೋಳಾದರೂ ಆಕೆಯ ಜೀವನದ ನೈಸರ್ಗಿಕ ಒತ್ತಡವನ್ನು ಬೋಳಿಸುವುದು ಅಷ್ಟು ಸುಲಭವಲ್ಲ. ಕೂದಲಿನಂತೆ ಚಿಗುರಿ ಬರುವ ಬಯಕೆ, ಭಾವನೆ, ಹಂಬಲಗಳನ್ನು ನೀಗಲು ಆಕೆ ಕಷ್ಟಪಟ್ಟ ರೀತಿಯನ್ನು ಓದುಗರೇ ಊಹಿಸಬೇಕಾಗಿದೆ. ಮುಂಜಾನೆಯ ಹೊತ್ತಿನಲ್ಲಿ ಧಾರವಾಡದ ವಿದ್ಯಾರ್ಥಿ ನಿಲಯದಲ್ಲಿ ಜೋಳ ಭಕ್ಕರಿಗಳನ್ನು ಬಡಿಯುವ, ಹತ್ತು ಗಂಟೆಗೆ ಯಾರದೋ ಮನೆಯಲ್ಲಿ ಅಡುಗೆ ಕೆಲಸ, ಮಧ್ಯಾಹ್ನದಿಂದ ಸಂಜೆಯವರೆಗೆ ಪುಡಿ ಕುಟ್ಟುವ, ಹಬ್ಬ ಮದುವೆ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡುವ ಕೆಲಸ ನಿರಂತರವಾಗಿದ್ದುದರಿಂದ ಅಂಥ ಕಠಿಣ ದುಡಿಮೆಯ ಮೂಲಕ ತನ್ನ ಕಾಮನೆಗಳನ್ನು ಹತೋಟಿಯಲ್ಲಿಟ್ಟುಕೊಂಡಿರಬಹುದು. ಆಕೆಯ ಚಿಕ್ಕಪ್ಪನ ಮನೆಯು ಲೇಖಕಿಯ ನೆರೆಹೊರೆಯವರಾಗಿರುವುದರಿಂದ ಶಲ್ಲಕ್ಕನೊಡನೆ ಪ್ರೀತಿಯ ಬಾಂಧವ್ಯ ಸಾಧ್ಯವಾಗುತ್ತದೆ. ಲೇಖಕಿಯ ಮಗನ ಒಂದನೇ ವರ್ಷದ ಹುಟ್ಟುಹಬ್ಬದ ಆಚರಣೆಗೆ ಆಕೆಯು ಧಾರವಾಡದ ಕುಪ್ಪಸದ ಕಣ ಮತ್ತು ಬೆಳ್ಳಿಯ ಬಟ್ಟಲನ್ನು ಉಡುಗೊರೆಯಾಗಿ ನೀಡುತ್ತಾಳೆ. ಲೇಖಕಿಯು ಅದರಲ್ಲೇ ತನ್ನ ಮಗನಿಗೆ ಓಂಕಾರವನ್ನು ಬರೆಸುತ್ತಾಳೆ, ಪಾಯಸ ಉಣಿಸುತ್ತಾಳೆ ಮತ್ತು ಅವನ ಮದುವೆಗೆ ಅದರಲ್ಲೇ ಅರಶಿನ ಎಣ್ಣೆ ಹಚ್ಚುತ್ತಾಳೆ. ಶಲ್ಲಕ್ಕ ಅದೆಷ್ಟೋ ತಿಂಗಳು ದುಡಿದ ಹಣ, ತಿನ್ನದೆ ಉಣ್ಣದೆ ಕೂಡಿಟ್ಟ ದುಡ್ಡು ಹೀಗೆ ವ್ಯಯವಾಯಿತಲ್ಲ ಎಂಬ ಸಂಕಟ ಅವಳು ಹೊರಹಾಕುತ್ತಾಳೆ. “ನನ್ನ ಶ್ರಮಾ ನಿನ್ನ ಪ್ರೀತಿಯಿಂದ ಪರಿಹಾರ ಆಗಿ ಹೋತವ್ವಾ. ನಿಮ್ಮಂಥ ಪ್ರೀತಿ ಮಾಡೋ ಜನ ಇದ್ರಿ ಅಂತ ಈ ಆಯುಷ್ಯ ಭಿಕ್ಷಾ ಬೇಡದೆ ಮುಗದ ಹೋತು” (ಪುಟ 51) ಎನ್ನುವಲ್ಲಿ ಶಲ್ಲಕ್ಕನ ಮನದಲ್ಲಿದ್ದ ಪ್ರೀತಿಯ ತುಡಿತವು ಅರಿವಿಗೆ ಬರುತ್ತದೆ. ‘ರಾಜಕ್ಕ ಕಮಲಕ್ಕ’, ‘ರಾಜವ್ವ’ ಈಕೆಯ ವಿಸ್ತೃತ ರೂಪಗಳು.

    ‘ಬೆಲ್ಲದ ಬ್ರಾಹ್ಮಣ’ ಎಂಬ ರಚನೆಯಲ್ಲಿ ಲೌಕಿಕ ವಿವರಗಳೊಂದಿಗೆ ಪಾರಲೌಕಿಕ ಅನುಭವಗಳೂ ಸೇರಿಕೊಂಡಿದೆ. ಬ್ರಾಹ್ಮಣನೊಬ್ಬನು ಪ್ರತಿಮನೆಯಿಂದಲೂ ಕಡಲೆಬೇಳೆ ಕಾಳಿನಷ್ಟು ಬೆಲ್ಲದ ಚೂರು ಬೇಡುವುದನ್ನು ಕಂಡಾಗ ಲೇಖಕಿಯ ಕುತೂಹಲವು ಕೆರಳುವ ಹಿನ್ನೆಲೆಯಲ್ಲಿ ಆತನ ಬದುಕಿನ ಕತೆಯು ಬಿಚ್ಚಿಕೊಳ್ಳುತ್ತದೆ. ಬೆಲ್ಲದ ಬ್ರಾಹ್ಮಣನ ತಂದೆಯು ಸಜ್ಜನನಾಗಿದ್ದರೂ ನಿರಕ್ಷರಿ ಮತ್ತು ಉಗ್ಗುವ ಸಮಸ್ಯೆಯಿಂದಾಗಿ ವೇದಮಂತ್ರಗಳ ಪಾರಾಯಣ ಮತ್ತು ಅರ್ಚಕವೃತ್ತಿಗೆ ಯೋಗ್ಯನಾಗಿರಲಿಲ್ಲ. ಕೃಷ್ಣಾನದಿ ದಂಡೆಯ ಎಲಗೂರಪ್ಪ (ಹನುಮಂತ)ನ ಸೇವೆಯನ್ನು ಮಾಡಿ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದ. ದೇವರಿಗೆ ನೈವೇದ್ಯವಾಗಿ ಅರ್ಪಿಸಬೇಕಿದ್ದ ಸಿಹಿಗಡುಬಿಗೆ ಹೂರಣವನ್ನು ಅರೆಯುತ್ತಿದ್ದಂತೆ ಆತನ ಎದೆಯಲ್ಲಿ ನೋವಾಗಿ ಮಲಗುವ ಸ್ಥಿತಿ ಬಂದಾಗ ಹೆಂಡತಿಯೇ ನೈವೇದ್ಯದ ಕೆಲಸವನ್ನು ಪೂರ್ತಿಗೊಳಿಸುತ್ತಾಳೆ. ಬಸುರಿಯಾಗಿದ್ದ ಆಕೆಯು ಬಯಕೆಯನ್ನು ತಡೆಯಲಾರದೆ ಹೂರಣವನ್ನು ತಿಂದುಬಿಡುತ್ತಾಳೆ. ಇತ್ತ ದೇವರ ಸೇವೆ ಮಾಡಿಸಿಕೊಂಡವರ ಮಗನಿಗೆ ಹೂರಣ ಎಂಜಲಾಗಿದೆ ಎಂಬ ಕನಸು ಬೀಳುತ್ತದೆ. ಬ್ರಾಹ್ಮಣನು ಹೂರಣವನ್ನು ಕದ್ದು ತಿಂದುದರಿಂದ ಆತನ ಆರೋಗ್ಯ ಕೆಟ್ಟಿದೆ ಎಂದು ಜನರು ಆಡಿಕೊಳ್ಳುತ್ತಾರೆ. ಹೆಂಡತಿಯು ಗಂಡನ ಮುಂದೆ ತಪ್ಪೊಪ್ಪಿಕೊಳ್ಳುತ್ತಾಳೆ. ಗಂಡನು ಆಕೆಯ ತಪ್ಪನ್ನು ತನ್ನ ಮೇಲೆಳೆದುಕೊಂಡು ಪ್ರಾಣ ಬಿಡುತ್ತಾನೆ. ಅಪರಕ್ರಿಯೆಯಲ್ಲಿ ಕೂಡ ಜನರು ಛೀಮಾರಿ ಹಾಕುತ್ತಾರೆ. ಅವನ ಪಿಂಡವನ್ನು ಮುಟ್ಟಲು ಕಾಗೆಯು ಬರುವುದಿಲ್ಲ. ಸತ್ತ ದುಃಖಕ್ಕಿಂತಲೂ ಅವಮಾನದ ನೋವು ಹೆಚ್ಚಾಗುತ್ತದೆ. ಆಸರೆಯನ್ನು ಕಳೆದುಕೊಂಡ ಹೆಂಡತಿಯು ಸಂಬಂಧಿಕರ ಮನೆಯಲ್ಲಿ ಗಾಣದೆತ್ತಿನಂತೆ ದುಡಿಯುತ್ತಾಳೆ. ಹಂಗಿನ ಬದುಕು ರೋಸಿ ಜೀವವನ್ನು ಕಳೆದುಕೊಳ್ಳಲು ಹೊರಟರೆ ಹೊಟ್ಟೆಯೊಳಗೆ ಇನ್ನೊಂದು ಜೀವ ಮಿಸುಕಾಡುತ್ತಿರುತ್ತದೆ. ಒಂದು ದಿನ ಕನಸಿನಲ್ಲಿ ‘ನಿನಗೆ ಕದ್ದು ತಿನ್ನುವ ಮಗ ಬೇಕೇ? ಬೇಡಿ ತಿನ್ನುವ ಮಗ ಬೇಕೇ?’ ಎಂದು ಪ್ರಶ್ನಿಸಿದಂತಾಗುತ್ತದೆ. ಬೇಡಿ ತಿನ್ನುವ ಮಗನಾದರೂ ಚಿಂತೆಯಿಲ್ಲ ಎಂದುಕೊಂಡು ಕನಸಿನಲ್ಲಿ ಸೂಚಿಸಿದಂತೆ ಪ್ರತಿ ಮನೆಯಿಂದಲೂ ಒಂದು ಕಡಲೆಬೇಳೆಯಷ್ಟು ಬೆಲ್ಲ ಪಡೆದು ಇರುವೆಗೆ ಹಾಕಬೇಕಾಗುತ್ತದೆ. ಯಾವ ತಪ್ಪನ್ನು ಮಾಡದೆ ಆತನ ತಂದೆಯು ಕಳ್ಳನೆನಿಸಿಕೊಂಡ. ತಾಯಿಯು ಹಸಿವು, ಬಯಕೆ ತಾಳಲಾರದೆ ಹೂರಣ ತಿಂದ ತಪ್ಪಿಗಾಗಿ ಮಗ ಭಿಕ್ಷೆಯನ್ನು ಬೇಡಬೇಕಾಗುತ್ತದೆ. ಬೆಲ್ಲದ ಬ್ರಾಹ್ಮಣನ ತಂದೆತಾಯಿಯರು ತಾವು ಉತ್ಪಾದಿಸಿದ ವಸ್ತುವಿನ ಮೇಲೆ ತಮ್ಮ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಅವರು ಬಡವರಾದುದರಿಂದ ಸಾಮಾಜಿಕ ಅಂತಸ್ತಿನಲ್ಲೂ ಕೀಳಾಗಿದ್ದಾರೆ. ಇತರರಿಗೆ ಸಿಗುವ ಮರ್ಯಾದೆಯು ಸಿಗುವುದಿಲ್ಲ. ಮಕ್ಕಳ ಬದುಕನ್ನು ರೂಪಿಸಿ, ನಡೆನುಡಿಗಳನ್ನು ತಿದ್ದಿ ತೀಡಿ ದುಡಿದು ತಿನ್ನಲು ಕಲಿಸುವ ಮೊದಲ ಗುರುವೆನಿಸಿದ ತಾಯಿಯೇ ಮಗನನ್ನು ಭಿಕ್ಷೆಗೆ ಹಚ್ಚುವುದೇ? ನಂಬಲು ಸಾಧ್ಯವಿಲ್ಲದಿದ್ದರೂ ನಿಷ್ಠುರ ಸತ್ಯ. ಶಬರಿಯ ಎಂಜಲು ಹಣ್ಣನ್ನು ಸ್ವೀಕರಿಸಿದ ರಾಮನ ಬಂಟನೇ ನೈವೇದ್ಯವು ಎಂಜಲಾಗಿದೆ ಎಂಬ ನೆಪದಿಂದ ನಿಷ್ಪಾಪಿ ಮಗುವನ್ನು ಶಿಕ್ಷಿಸುವನೇ? ಆದ್ದರಿಂದ ಇದು ಪಾಪಪ್ರಜ್ಞೆಯಿಂದ ನರಳಿದ ತಾಯಿಯ ಮಾನಸಿಕ ಭೀತಿಯಾಗಿರಬಹುದೇ? ಎಂಬ ಪ್ರಶ್ನೆಗಳನ್ನು ಪ್ರಚೋದಿಸುವಲ್ಲಿ ಯಶಸ್ವಿಯಾಗಿದೆ. ಲೇಖಕಿಯ ಆಸಕ್ತಿಯ ಸ್ವರೂಪವು ನೈತಿಕವಾದದು ಎಂಬ ಸೂಚನೆಯು ಮಧ್ಯಂತರದಲ್ಲೇ ದೊರಕುತ್ತದೆ. ಬೆಲ್ಲದ ಬ್ರಾಹ್ಮಣನ ತಾಯಿಯು ಮಾಡಿದ್ದು ತಪ್ಪೋ? ಎಂಬ ಯೋಚನೆಯು ಮೇಲಿಂದ ಮೇಲೆ ಬರುತ್ತದೆ. ಅವಳದ್ದೇನು ತಪ್ಪು? ಎಂಬ ಪ್ರಶ್ನೆಯೂ ಮೂಡುತ್ತದೆ. ಇಲ್ಲಿ ನಡೆದ ಘಟನೆಗಳಿಗೆ ಲೇಖಕಿಯು ನೈತಿಕ ಆಯಾಮವನ್ನು ಸೃಷ್ಟಿಸಿದ್ದರಿಂದ ಪ್ರಬಂಧಕ್ಕೆ ತನ್ನದೇ ಆದ ವಿಶೇಷತೆಯು ಒದಗಿದೆ. ನೈತಿಕ ಸಮಸ್ಯೆಯು ಪ್ರಬಂಧದ ಕೊನೆಯವರೆಗೂ ಹಾಗೆಯೇ ಉಳಿದುಕೊಳ್ಳುತ್ತದೆ.

    ಮಳೆಗಾಲದಲ್ಲಿ ದಟ್ಟವಾಗಿ ಬೆಳೆಯುವ ಹೊನಗನ್ನಿ ಸೊಪ್ಪನ್ನು ಸೇವಿಸಿದರೆ ಆಯುಸ್ಸು ಹೆಚ್ಚುತ್ತದೆ. ರಕ್ತ ಶುದ್ಧಿಯಾಗುತ್ತದೆ. ಕಬ್ಬಿಣಾಂಶವು ದೊರೆಯುತ್ತದೆ. ರಕ್ತಹೀನತೆಯಿಂದ ಬಳಲುವವರಿಗೆ, ಬಸುರಿಯರಿಗೆ ಉತ್ತಮ ಪೌಷ್ಠಿಕ ಆಹಾರವಾಗಿದೆ. ಲೇಖಕಿಯ ಮನೆಗೆ ತರಕಾರಿಗಳನ್ನು ಮಾರುತ್ತಾ ಹೊನ್ನಿಯನ್ನು ಹೊನಗನ್ನಿಯೆಂದೇ ಅಡ್ಡಹೆಸರಿಟ್ಟು ಕರೆಯುತ್ತಿದ್ದರು. ಧಾರವಾಡದ ಪೇಟೆಯಲ್ಲಿ ಅಪರೂಪಕ್ಕೆ ಸಿಗುವ ಹೊನಗನ್ನಿಯನ್ನು ಹೊನ್ನಿಯು ಎಲ್ಲಿಂದಲೋ ಆಯ್ದು ತಂದು ಮಾರುವುದರಿಂದ ಆಕೆಗೆ ಆ ಹೆಸರು ರೂಢಿಯಾಗಿತ್ತು. ಆದರೆ ಆಕೆಗೆ ಹೊನಗನ್ನಿಯದ್ದೇ ನಿಸರ್ಗದತ್ತ ರೂಪ ಗುಣ. ಹಸಿರಿನಂಥ ಯೌವನ, ಬಿಳಿ ಚಿಕ್ಕಿ ಹೂವಿನಂಥ ಕಣ್ಣುಗಳು, ಕಬ್ಬಿಣದ ಮೈ ಮನ, ಬೆತ್ತದಂಥ ಗಂಟು ಗಣಿಕೆಯ ಗಟ್ಟಿ ಎತ್ತರದ ಶರೀರ. ಸಾಮಾಜಿಕ ವ್ಯವಸ್ಥೆಯ ಹಂಗು ತೊರೆದ ಬಾಳು. ತುಂಬು ಹರೆಯದವಳಗಿದ್ದಾಗ ಆಕೆಯು ದರ್ಜಿಯ ಹತ್ತಿರ ರವಿಕೆಯನ್ನು ಹೊಲಿಸಲು ಹೋಗಿದ್ದ ಸಂದರ್ಭದಲ್ಲಿ ಅಳತೆಯನ್ನು ತೆಗೆಯುವ ನೆಪ ಮಾಡಿಕೊಂಡು ಆಕೆಯ ಅಂಗಾಂಗಗಳ ಮೇಲೆ ಕೈಯಾಡಿಸಿದಾಗ ಆತ್ಮನಿಯಂತ್ರಣವನ್ನು ಕಳೆದುಕೊಂಡು ಆತನ ಸಂಗವನ್ನು ಮಾಡುತ್ತಾಳೆ. ಆಕೆಯು ಬಸುರಾದಾಗ ದರ್ಜಿಯು ಏನೂ ಗೊತ್ತಿಲ್ಲದವನಂತೆ ನಟಿಸಿದ್ದಲ್ಲದೆ ಈ ಬಗ್ಗೆ ವಿಚಾರಿಸಲು ಹೋದ ಹೊನ್ನಿಯ ಅಪ್ಪನಿಗೆ ಬೆದರಿಕೆಯನ್ನು ಹಾಕುತ್ತಾನೆ. ಆಕೆಯು ಗಂಡು ಮಗುವನ್ನು ಹಡೆದ ಬಳಿಕ ಅಪ್ಪನು ದುಃಖಿತನಾಗಿ ಕುಡಿತದ ಚಟಕ್ಕೆ ಬಿದ್ದುದರಿಂದ ಕುಟುಂಬದ ಆದಾಯವು ಕಡಿಮೆಯಾಗುತ್ತದೆ. ಆದ್ದರಿಂದ ಆಕೆಯು ಮುಂಜಾವದಲ್ಲಿ ಎದ್ದು ಆಸುಪಾಸಿನ ಗದ್ದೆಗಳಿಂದ ತರಕಾರಿಗಳನ್ನು ಕದ್ದು ಮಾರತೊಡಗುತ್ತಾಳೆ. ಆಳೊಬ್ಬನ ಕೈಗೆ ಸಿಕ್ಕಿಹಾಕಿಕೊಂಡಾಗ ಅವನಿಂದ ಬಿಡಿಸಿಕೊಳ್ಳಲು ಆತನಿಗೆ ದೇಹವನ್ನು ಒಪ್ಪಿಸಬೇಕಾಗಿ ಬರುತ್ತದೆ. ಆದರೆ ಆತನು ದರ್ಜಿಯಂತೆ ನುಣುಚಿಕೊಳ್ಳದೆ ಆಕೆಗೆ ಆಸರೆಯನ್ನು ನೀಡುತ್ತಾನೆ. ಆತನಿಗೆ ಬೇರೆ ಸಂಸಾರವಿರುವುದರಿಂದ ಮದುವೆಯಾಗಲು ಸಾಧ್ಯವಿಲ್ಲದ ಪರಿಸ್ಥಿತಿಯು ಉಂಟಾಗುತ್ತದೆ. ಇಬ್ಬರು ಗಂಡಸರ ಸ್ವಭಾವದ ವೈರುಧ್ಯಗಳ ಮೂಲಕ ಹೊನ್ನಿಯ ಬದುಕನ್ನು ಅವಲೋಕಿಸುವ ಭೂಮಿಕೆಯು ಸಿದ್ಧವಾಗುತ್ತದೆ. “ಯವ್ವಾ, ಮನಸ್ಯ ಒಳ್ಳೇವ. ನನ್ನ ಮೊದ್ಲ ಮಗನ್ನೂ ನೋಡ್ತಾನ” (ಪುಟ 62) ಎಂದರೂ ಆಕೆಯ ಮರಣದ ನಂತರ “ಅವ್ವಾರ, ನಾ ಅವರ ಮಗ ಅಲ್ಲಂತ್ರಿ. ನನ್ನ ತಮ್ಮ ಅವರ ಮಗಾ ಅಂತ್ರಿ. ಅದಕ ನನ್ನ ದುಡಿಯಾಕ ಹಚ್ಯಾರಂತ ಜನಾ ಹೇಳ್ತರ್ರಿ್” (ಪುಟ 67) ಎಂದ ಹುಡುಗನ ಮಾತು ಹೊನ್ನಿಯ ಜೊತೆಗಾರನ ಭೇದಭಾವ ನೀತಿಯನ್ನು ದಾಖಲಿಸುತ್ತದೆ. ಕನಸಿನಲ್ಲಿ ಕಂಡ ನವಿಲನ್ನು ಬೆಂಬತ್ತಿ ನವಿಲತೀರ್ಥದಲ್ಲಿ ಮುಳುಗಿ ಸತ್ತ ಹೊನ್ನಿಯ ಮರಣಕ್ಕೆ ಪ್ರಬಲ ಕಾರಣಗಳಿಲ್ಲದಿರುವುದು ಈ ಲೇಖನದ ಮಿತಿಯಾಗಿದೆ.

    ಇದೇ ವಸ್ತುವನ್ನು ಹೊಂದಿದ ‘ಮಾಲಿ ಮಾಲಿ’ಯು ‘ಹೊನಗನ್ನಿ’ಗಿಂತ ಸಂಕೀರ್ಣವಾದ ರಚನೆಯಾಗಿದೆ. ಹೊನಗನ್ನಿಯನ್ನು ಮಾರಾಟ ಮಾಡುತ್ತಿದ್ದುದರಿಂದ ಹೊನ್ನಿಗೆ ಆ ಅಡ್ಡ ಹೆಸರು ಸಿಕ್ಕಿದರೆ ತುಳಸಿಯು ‘ಮಾಲಿ ಮಾಲಿ’ (ಮಾಲೆ) ಎಂದು ಕೂಗುತ್ತಾ ಹೂವಿನ ಮಾಲೆಯನ್ನು ಮಾರುತ್ತಿದ್ದುದರಿಂದ ತುಳಸಿಗೆ ‘ಮಾಲಿ ಮಾಲಿ’ ಎಂಬ ಹೆಸರು ಅಂಟಿಕೊಳ್ಳುತ್ತದೆ. ಹೊನ್ನಿಯು ಹದಿಹರೆಯದಲ್ಲಿ ದರ್ಜಿಯ ಸಂಗ ಮಾಡಿ ‘ಮುತ್ತ’ನನ್ನು ಹೆತ್ತರೆ ಈಕೆಯು ನಾಟಕದ ಬಸ್ಲ್ಯಾನನ್ನು ಕೂಡಿ ಬಕುಲನ ತಾಯಿಯಾಗುತ್ತಾಳೆ. ಆದರೆ ಬಸ್ಲ್ಯಾ ಊರು ಬಿಟ್ಟು ಮುಂಬಯಿಗೆ ಓಡಿ ಹೋಗುತ್ತಾನೆ. ಆದರೆ ಚಲನಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಕೇಳಲು ಹೋಗಿದ್ದರೂ ಅಲ್ಲಿ ಕಸ ಬಳಿಯುವ, ನೆಲ ತೊಳೆಯುವ ಕೆಲಸ ಮಾಡಬೇಕಾಗುತ್ತದೆ. ಯಾರನ್ನೋ ಇಟ್ಟುಕೊಂಡು ಇಬ್ಬರು ಮಕ್ಕಳ ತಂದೆಯಾಗುತ್ತಾನೆ. ಆಕೆಯು ಇನ್ನೊಬ್ಬನ ಜೊತೆ ಹೋದಾಗ ಹುಚ್ಚನಂತಾಗುತ್ತಾನೆ. ಆದರೂ ತನ್ನನ್ನು ಕಳೆದುಕೊಂಡಾಗ ಮಾಲಿ ಅನುಭವಿಸಿರಬಹುದಾದ ನೋವಿನ ಕಲ್ಪನೆಯಾಗುವುದಿಲ್ಲ. ಆತನ ತಾಯಿ ತೀರಿಹೋದಾಗ ಮಾಲಿಯು ಆಕೆಯ ಆಭರಣಗಳನ್ನು ತೆಗೆದುಕೊಂಡು ಹೋಗುವಳೆಂಬ ಭಯದಿಂದ ಊರಿಗೆ ಹಿಂತಿರುಗುತ್ತಾನೆಯೇ ಹೊರತು ತಾಯಿಯ ಅಂತಿಮ ದರ್ಶನವನ್ನು ಪಡೆಯುವುದಕ್ಕಲ್ಲ. ಅವನನ್ನು ನೋಡಿಕೊಳ್ಳಲು ಹೆಂಡತಿಯಿಲ್ಲ. ಊರಿನಲ್ಲಿ ಯಾರೂ ಹೆಣ್ಣು ಕೊಡಲಾರರು. ಮುಂಬಯಿಯ ಹೆಂಗಸರು ನಂಬಿಕೆಗೆ ಅರ್ಹರಲ್ಲ ಎಂದು ಅರಿವಾಗಿದುದರಿಂದ ಆತನು ಮಾಲಿಯನ್ನು ತನ್ನ ಬದುಕಿನೆಡೆಗೆ ಕರೆದಾಗ ಆಕೆಯು ಕಟುವಾದ ಮಾತಿನ ಮೂಲಕ ಆತನನ್ನು ವಿರೋಧಿಸುತ್ತಾಳೆ. ಅನುಪಮಾ ನಿರಂಜನರ ‘ಒಂದು ಘಟನೆ ಹಾಗೂ ಅನಂತರ’ ಮತ್ತು ‘ತ್ರಿವೇಣಿಯವರ ‘ಕೊನೆಯ ನಿರ್ಧಾರ’ ಎಂಬ ಕತೆಗಳೊಂದಿಗೆ ಇಲ್ಲಿನ ಸನ್ನಿವೇಶವನ್ನು ಹೋಲಿಸಬಹುದು. ಈ ಕತೆಗಳಲ್ಲಿ ಗಂಡನು ಹೆಂಡತಿಯನ್ನು ದೂರ ಮಾಡಿರುತ್ತಾನೆ. ಹೆಂಡತಿಯು ಆತನ ಹಂಗಿಲ್ಲದೆ ಬಾಳುತ್ತಾಳೆ. ಹಲವು ವರುಷಗಳ ನಂತರ ಆತನು ಜೊತೆಯಾಗಿ ಬದುಕಲು ಕರೆ ನೀಡಿದಾಗ ಆಕೆಗೆ ಅದರ ಹಿಂದಿನ ಸ್ವಾರ್ಥದ ಅರಿವಾಗಿ ಅವನನ್ನು ಹೊರಹಾಕುತ್ತಾಳೆ. ಇದುವೇ ಆಕೆಯ ಕೊನೆಯ ನಿರ್ಧಾರ. ಬಿಸಿರಕ್ತವಿದ್ದಾಗ ಹೊನ್ನಿ ಮತ್ತು ಮಾಲಿ ದೈಹಿಕ ಸುಖವೇ ಸರ್ವಸ್ವವೆಂದುಕೊಂಡು ತಪ್ಪು ಮಾಡಿರುತ್ತಾರೆ. ಜ್ಞಾನೋದಯವಾದಾಗ ಕಾಲ ಮಿಂಚಿರುತ್ತದೆ. ‘ಒಂದು ಘಟನೆ ಹಾಗೂ ಅನಂತರ’, ‘ಕೊನೆಯ ನಿರ್ಧಾರ’ದಂತೆ ಹೊನ್ನಿ-ಮಾಲಿಯ ಬದುಕಿನ ಕಥನವೂ ಗಂಡುಹೆಣ್ಣಿನ ಸಂಬಂಧಗಳಲ್ಲಿ ಅನುಭವಕ್ಕೆ ಬರುವ ಸ್ವಾರ್ಥ ಮತ್ತು ನೈಜ ಪ್ರೇಮದ ಅಭಾವವನ್ನು ಎತ್ತಿ ತೋರಿಸುತ್ತದೆ. ಕಳೆದುಕೊಂಡ ನಂಬಿಕೆ, ಬಿಟ್ಟುಹೋದ ಸ್ನೇಹ, ನಿರಾಕರಣೆಗೊಳಗಾದ ಪ್ರೇಮ ಮರಳಿ ಬರಲಾರವು. ಆದರೆ ಅವುಗಳ ನೆನಪುಗಳು ಬೆಚ್ಚಗೆ ಉಳಿದುಕೊಳ್ಳುತ್ತವೆ. ಮರೆಯಲು ಹವಣಿಸಿದರೂ ಮರಳಿ ಬರುತ್ತವೆ. ಸುನಂದಾರ ರಚನೆಯು ಅನುಪಮಾ ನಿರಂಜನ ಮತ್ತು ತ್ರಿವೇಣಿಯವರ ಕತೆಗಳ ಮುಂದುವರಿಕೆಯಾಗಿದೆ. ಬಸ್ಲ್ಯಾನಂತೂ ಸೋಲೊಪ್ಪಿಕೊಳ್ಳದೆ ಮಾಲಿಯ ಮಗನನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ. ಬಡತನದ ಬದುಕಿನಿಂದ ರೋಸಿದ್ದ ಬಕುಲನು ಆತನ ಬಣ್ಣದ ಮಾತಿಗೆ ಮರುಳಾಗಿ ತಂದೆಯ ಪರ ನಿಂತುಕೊಳ್ಳುತ್ತಾನೆ. ಅವನೂ ಹೋದರೆ ಮಾಲಿಗೆ ಬದುಕು ಇಲ್ಲವೆಂದು ತಿಳಿದುದರಿಂದಲೇ ಬಸ್ಲ್ಯಾ ಈ ಉಪಾಯವನ್ನು ಹೂಡಿರುತ್ತಾನೆ. ಆದರೆ ಮಗನ ಭವಿಷ್ಯಕ್ಕಾಗಿ ಆಕೆಯು ಬಸ್ಲ್ಯಾನನ್ನು ಸ್ವೀಕರಿಸಬೇಕಾಗುತ್ತದೆ. ಲೇಖಕಿಯ ಉಪದೇಶದಂತೆ ಆಕೆಯು ಕಾನೂನಿನ ಪ್ರಕಾರ ಆತನಿಂದ ತಾಳಿಯನ್ನು ಕಟ್ಟಿಸಿಕೊಂಡು, ಮಗನ ಶಿಕ್ಷಣಕ್ಕಾಗಿ ಹಣವನ್ನು ವಸೂಲಿ ಮಾಡಿ ಮರ್ಯಾದಸ್ಥ ಬಾಳನ್ನು ಬಾಳುವಳೋ ಇಲ್ಲವೋ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ. ಹೆಣ್ಣು ತನ್ನದೇ ಆದ ಶಕ್ತಿಯ ವಲಯವನ್ನು ಕಟ್ಟಿಕೊಳ್ಳುವ ನಿರೀಕ್ಷೆಯು ಇದರಿಂದಾಗಿ ಇಲ್ಲವಾಗುತ್ತದೆ.

    ಲೇಖಕಿಯ ಮನೆಯ ಆಳು ಅಲ್ಲಾಬಕ್ಷ ನಂಬಿಗಸ್ಥ, ಪ್ರಾಮಾಣಿಕ ಮತ್ತು ಮಂದಮತಿ. ಆತನ ತಾಯಿ ಫಾತಿಮಾ ಬೀಬಿ ಮತ್ತು ಅಕ್ಕ ಮೆಹರುನ್ನೀಸಾಳನ್ನು ಕಂಡಾಗ ‘ಇಂಥ ತಾಯ ಹೊಟ್ಟೆಯಿಂದ ಇಂಥ ಮಗನೇ? ಅಲ್ಲಾಬಕ್ಷ ತಂದೆಯಂತಿರಬೇಕು. ಆದರೆ ಮೆಹರುನ್ನೀಸ ಬೇರೆಯೇ ಇದ್ದಾಳಲ್ಲ? ಒಡಹುಟ್ಟುಗಳಿಬ್ಬರಲ್ಲಿ ಸ್ವಲ್ಪವಾದರೂ ಸಾಮ್ಯ ಬೇಡವೇ?’ ಎಂದು ಸಂಶಯಪಡುವ ಅಜ್ಜಿಯ ಯೋಚನೆಯಲ್ಲಿ ಅವನ ಹುಟ್ಟಿನ ರಹಸ್ಯದ ಸೂಚನೆಯಿದೆ. ಅಕ್ಕ ಮತ್ತು ತಮ್ಮನ ಅಪ್ಪಂದಿರು ಬೇರೆ ಎಂಬ ದನಿಯಿದೆ. ಆದರೆ ಒಂದೇ ತಾಯಿಯ ಬಸಿರಿನಿಂದ ಬಂದವರಾಗಿದ್ದರಿಂದ ಅವರ ನಡುವೆ ಅನ್ಯೋನ್ಯತೆಯಿದೆ. ಫಾತಿಮಾಬೀಬಿ ತೀರಿಕೊಂಡ ಬಳಿಕ ಮೆಹರುನ್ನೀಸಳು ತನ್ನ ತಮ್ಮನನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಆಕೆಯೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದ ಬಸೀರನು ತನ್ನ ಕಾಮುಕತೆ ಮತ್ತು ದಾಳಿಕೋರತನದ ಮೂಲಕ ಅವರ ಬದುಕಿಗೆ ವಿಷ ಸುರಿಯುತ್ತಾನೆ. ಮೆಹರುನ್ನೀಸ ಬಸುರಾದಾಗ ರಾತ್ರಿಯ ಹೊತ್ತಿನಲ್ಲಿ ಮನೆಗೆ ಬಂದು ಅಲ್ಲಾಬಕ್ಷನೊಡನೆ ಜಗಳವಾಡಿ ಹೊರಗೆ ಹಾಕಿ ಹಕ್ಕಿನಲ್ಲೆಂಬಂತೆ ಅವಳ ಕೋಣೆಗೆ ಹೋಗುತ್ತಾನೆ. ಇದನ್ನು ತಿಳಿದ ಲೇಖಕಿಯ ತಂದೆಯು ಆರಕ್ಷಕರನ್ನು ಕಳುಹಿಸಿ ಬಸೀರನನ್ನು ಬೆದರಿಸಿ ಓಡಿಸುತ್ತಾರೆ. ಇವನಿಂದ ಒದಗಲಿರುವ ಗಂಡಾಂತರಗಳ ಬಗ್ಗೆ ಸೂಚನೆಗಳನ್ನು ಕೊಟ್ಟರೂ ಮೆಹರುನ್ನೀಸಳಿಗೆ ಅವನ ಸಂಗ ಮಾಡದಿರಲು ಸಾಧ್ಯವಾಗುವುದಿಲ್ಲ. ಬಸೀರನು ಮೆಹರುನ್ನೀಸಳಿಗೆ ಹೊಟ್ಟೆ ಇಳಿಸುವ ಮದ್ದು ಕೊಟ್ಟು ರಕ್ತಸ್ರಾವವಾದಾಗ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಇದರ ಬಳಿಕವೂ ಆತನು ಅಲ್ಲಾಬಕ್ಷನ ಕಣ್ಣು ತಪ್ಪಿಸಿ ಮೆಹರುನ್ನೀಸಳ ಸಂಗ ಮಾಡತೊಡಗಿದಾಗ ಅಲ್ಲಾಬಕ್ಷನು ತನ್ನ ಗೆಳೆಯರ ನೆರವಿನಿಂದ ಆತನಿಗೆ ಥಳಿಸುತ್ತಾನೆ. ಮೆಹರುನ್ನೀಸಳು ತಮ್ಮನನ್ನು ಬಿಟ್ಟು ಬಸೀರನೊಂದಿಗೆ ಮುಂಬಯಿಗೆ ಓಡಿಹೋಗುತ್ತಾಳೆ. ಆರಕ್ಷಕರು ಮುಂಬಯಿಯಲ್ಲಿ ಬಸೀರ ಮತ್ತು ಸೇಠನನ್ನು ಬಂಧಿಸಿದರೂ ಮೆಹರುನ್ನೀಸ ಕೊಲ್ಲಿ ರಾಷ್ಟ್ರಕ್ಕೆ ಮಾರಾಟವಾಗಿರುತ್ತಾಳೆ. ನಂಬಿ ಬಂದ ಹೆಣ್ಣನ್ನೇ ಪರದೇಶಕ್ಕೆ ಮಾರಾಟ ಮಾಡುವ ಹೇಯಕೃತ್ಯವು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಕ್ಕೆ ಕನ್ನಡಿಯನ್ನು ಹಿಡಿಯುತ್ತದೆ. ಅಪರಾಧಿಗಳಿಗೆ ಶಿಕ್ಷೆಯಾದರೂ ನಿರಪರಾಧಿಗಳು ನೋವನುಭವಿಸಬೇಕಾಗಿ ಬರುವ ಸನ್ನಿವೇಶವು ಗ್ರಾಮೀಣ ವಾಸ್ತವದ ವ್ಯಂಗ್ಯವಾಗಿದ್ದು ಕಥನದ ಪರಿಣಾಮವನ್ನು ತೀವ್ರಗೊಳಿಸುತ್ತದೆ. ಅಲ್ಲಾಬಕ್ಷ ಮತ್ತು ಬಸೀರನ ಪಾತ್ರಗಳ ನಡುವಿನ ವೈದೃಶ್ಯದಲ್ಲಿ ಪ್ರಬಂಧದ ಹೆಚ್ಚುಗಾರಿಕೆಯಿದೆ. ಪೇರಳೆಯ ಗಿಡದಲ್ಲಿ ಕಪ್ಪು ಮಂಗಗಳು ಗಲಾಟೆ ಮಾಡುತ್ತಿದ್ದುದರಿಂದ ಅದನ್ನು ಕಡಿದು ಹಾಕಿದಾಗ ಅದರಲ್ಲಿ ಆಸರೆಯನ್ನು ಪಡೆದಿದ್ದ ಹಕ್ಕಿಗಳು, ಅಳಿಲುಗಳನ್ನು ನೆನೆದು ಕಣ್ಣೀರು ಹಾಕಿದ್ದ ಅಲ್ಲಾಬಕ್ಷನು ತನ್ನ ಅಕ್ಕನನ್ನು ಸರಕಿನಂತೆ ಮಾರಾಟ ಮಾಡಿದಾಗ ಅನುಭವಿಸಿರಬಹುದಾದ ದುಃಖವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆಕೆಯನ್ನು ಬರೇ ದೇಹವಾಗಿ ಪರಿಭಾವಿಸಿಕೊಂಡ ಬಸೀರನು ಪಿಪಾಸೆ, ಲೋಭ ಮತ್ತು ಕ್ರೌರ್ಯದ ಪ್ರತೀಕವಾಗಿದ್ದಾನೆ. ಎಲ್ಲ ಬಗೆಯಲ್ಲೂ ಅನಾಥನಾದ ಅಲ್ಲಾಬಕ್ಷನಿಗೆ ಲೇಖಕಿಯ ತಂದೆಯ ಆಸರೆಯು ದೊರಕುತ್ತದೆ. ಹೊಟ್ಟೆಬಟ್ಟೆಗಳ ಚಿಂತೆಯು ತಪ್ಪಿದರೂ ಮನಸ್ಸಿನ ಅತೃಪ್ತಿ ಮತ್ತು ವ್ಯಗ್ರತೆ ಬಲಿಯುತ್ತಾ ಹೋಗುತ್ತದೆ. ಕೆಲಸ ಮಾಡುವಾಗ ಸಣ್ಣಪುಟ್ಟ ಪ್ರಮಾದಗಳು ನಡೆಯುತ್ತವೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಲೇಖಕಿಯ ತಂದೆಯವರು ಕಷ್ಟಪಟ್ಟು ಸಿದ್ಧಪಡಿಸಿದ ಮದ್ದನ್ನು ಅದರ ಶೀಷೆಯ ಸಮೇತ ಬೀಳಿಸಿ ಬಿಡುತ್ತಾನೆ. ತಂದೆಯು ಸಿಟ್ಟಿನಿಂದ ಬೈದಾಗ ಆತನು ಭಾವೋದ್ವೇಗಕ್ಕೊಳಗಾಗಿ ಕೋವಿಯನ್ನು ತೆಗೆದುಕೊಂಡು ಅವರ ಕೈಗೆ ಕೊಟ್ಟು ‘ನನ್ನನ್ನು ಕೊಲ್ಲಿ’ ಎಂದು ಕೂಗಾಡುವುದದಿದಕ್ಕೆ ಸಾಕ್ಷಿಯಾಗಿದೆ. ವಿವರಗಳು ಅಲ್ಲಾಬಕ್ಷನ ನಿವೇದನೆಯಾಗಿರುವುದರಿಂದ ಲೇಖಕಿಗೆ ದೇಸಿಯ ಬಳಕೆಯು ಸಾಧ್ಯವಾಗುತ್ತದೆ. ಅನುಭವದ ಅಧಿಕೃತತೆಯನ್ನು ಸ್ಥಾಪಿಸಲು ಅನುಕೂಲತೆಗಳು ದೊರಕುತ್ತವೆ. ಕತೆಯ ಮೂಲ ನಿವೇದಕಿಯು ಮಧ್ಯಮವರ್ಗದ ಪ್ರತಿನಿಧಿಯಾಗಿರುವುದರಿಂದ ಕೆಳವರ್ಗದ ಜನರ ಕತೆಯ ನಿರ್ವಹಣೆಗೆ ಅಗತ್ಯವಾದ ದೂರವನ್ನು ಸೃಷ್ಟಿಸುತ್ತದೆ.

    ‘ಏಗ್ಯಾ’ ಈ ಸಂಕಲನದ ಉತ್ತಮ ರಚನೆಗಳಲ್ಲೊಂದು. “ಮದುವೆಯಾಗುವ ಹೆಬ್ಬಯಕೆ. ಹೆಣ್ಣು ಕೊಡೋರಿಲ್ಲ ಗುಡಿಗೆ ಬರುವ ಹುಡುಗಿಯರನ್ನು ಛೇಡಿಸಿ ಛೀಮಾರಿ ಹಾಕಿಸಿಕೊಂಡಿದ್ದ” (ಪುಟ 113) ಎಂಬ ವಾಕ್ಯಗಳು ಆತನ ಸಮಸ್ಯಾತ್ಮಕ ಬದುಕಿನ ರಹಸ್ಯವನ್ನು ಸೂಚಿಸುತ್ತವೆ. ಇದರ ಅನ್ವೇಷಣೆಯೇ ಕತೆಯಲ್ಲಿ ನಡೆಯುವ ಕ್ರಿಯೆ. ಅವನ ಕುಟುಂಬದಲ್ಲಿ ತಂದೆ, ತಾಯಿ, ಅಣ್ಣ ಹೀಗೆ ಅಧಿಕಾರದ ಶ್ರೇಣೀಕೃತ ವ್ಯವಸ್ಥೆಯಿದೆ. ಕುಟುಂಬದ ಎಲ್ಲ ಮಂದಿಗಳಿಗೂ ಅವರದ್ದೇ ಆದ ಕರ್ತವ್ಯಗಳಿವೆ. ಆದರೆ ಏಗ್ಯಾ ಮಾತ್ರ ಸ್ವತಂತ್ರ. ಅವನ ‘ಚಿಂತಾಜನಕ ಮಾನಸಿಕ ಸ್ಥಿತಿ’ ಆತನಿಗೆ ಈ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ. ‘ನಿನ್ನ ಹಲ್ಲು ತುರಿಮಣೆಯಂತಿದೆ’ ಎಂದದ್ದೇ ನೆಪವಾಗಿ ತಾನು ನರಸಿಂಹರಾಜು ಎಂದು ಭ್ರಮಿಸಿ, ಚಲನಚಿತ್ರದ ಹುಚ್ಚನ್ನು ತಲೆಗೇರಿಸಿಕೊಂಡು ತಂದೆಯಂತೆ ಅರ್ಚಕವೃತ್ತಿಯನ್ನು ಮಾಡದೆ ದಕ್ಷಿಣೆಯ ಹಣವನ್ನು ಎಗರಿಸಿ, ಮಸಾಲೆ ದೋಸೆ ತಿಂದು ತಿರುಗಿದ. ಹುಚ್ಚರಿಗೆ ಇರುವಂತೆ ಅವನಿಗೆ ತಿರುಗಾಡಲು ವಿಶಾಲ ಲೋಕವಿದೆ. ಆದರೆ ಲೇಖಕಿಯ ಗಂಡನ ಗೆಳೆತನ, ಪ್ರೀತಿ, ಅನುಕಂಪಗಳು ಇರುವುದರಿಂದ ಏಕಾಕಿತನವನ್ನು ಅನುಭವಿಸುವುದಿಲ್ಲ. ಎಲ್ಲರೂ ಅವಳನ್ನು ಚುಡಾಯಿಸುತ್ತಾರೆ. ಇದ್ದಕ್ಕಿದ್ದಂತೆ ಕಾಣೆಯಾದವನು ಬದುಕಿದ್ದಾನೋ ಸತ್ತಿದ್ದಾನೋ ಎಂಬ ಸಂದೇಹವನ್ನು ಎಬ್ಬಿಸಿ, ಹಠಾತ್ತನೆ ಕಾಣಿಸಿಕೊಂಡು ಕೆದರಿದ ಕೂದಲು, ಗಡ್ಡ ಮೀಸೆ, ನೀರು ಕಾಣದ ಹರಿದ ಪ್ಯಾಂಟು, ಅರ್ಧ ಶರ್ಟು, ಸ್ನಾನ ಕಾಣದ ಮೈಯೊಂದಿಗೆ ಕಾಣಿಸಿಕೊಂಡು ಬೆರಗುಗೊಳಿಸುತ್ತಾನೆ. ಯಾರಾದರೂ ಕನಿಕರಪಟ್ಟು ತಿನ್ನಲು ಕೊಟ್ಟರೆ ಅದನ್ನು ನಾಯಿಗೆ ತಿನ್ನಿಸುತ್ತಾನೆ. ಸ್ವಂತ ಮನೆ, ಗುಡಿ, ಅಂಗಳ, ಅಶ್ವತ್ಥಕಟ್ಟೆಗಳಿದ್ದರೂ ಅವುಗಳು ಅವನಿಗೆ ಬೇಕಾಗಿರಲಿಲ್ಲ. ಬೇರೆಯವರ ಮನೆಯೇ ತನ್ನ ಮನೆ ಎಂದು ಹೇಳುವ ಅಧಿಕಾರವನ್ನು ಪ್ರೀತಿಯ ಹಕ್ಕಿನ ಮೂಲಕ ದೊರಕಿಸಿಕೊಂಡಿದ್ದ. ಆದರೆ ಅವನಿಗೆ ತನ್ನ ಮನೆ ತನ್ನದಾಗಿರಲಿಲ್ಲ. ಮನೆಯವರು ತನ್ನವರಾಗಿರಲಿಲ್ಲ. ಆದ್ದರಿಂದ ಮನೆಯಲ್ಲಿ, ಮನೆಯ ಹೊರಗಡೆಯಲ್ಲಿ ಅವನು ಅನ್ಯನಾಗಿರುತ್ತಾನೆ. ಆದರೆ ಲೇಖಕಿಯ ಗಂಡನೊಂದಿಗಿನ ಅವನ ಬಾಂಧವ್ಯ ಬೇರೆ ರೀತಿಯದ್ದು. ಇಲ್ಲಿ ಅವನ ಹುಚ್ಚಾಟಗಳು ಮಾಯವಾಗಿ ದಯನೀಯ ಮೃದುತ್ವವು ಕಾಣಿಸಿಕೊಳ್ಳುತ್ತದೆ. “ಮಸಾಲಿ ದ್ವಾಸಿ. ಭಾಳ ದಿನಾತು ತಿಂದಿಲ್ಲ” (ಪುಟ 119) ಎಂದು ಕರುಳು ಚುರುಕ್ಕೆನಿಸುವಂತೆ ಮಾಡುತ್ತಾನೆ. ಏಗ್ಯಾ ಸತ್ತಾಗ ಯಾರಿಗೂ ಅವನ ಮೇಲೆ ಸಹಾನುಭೂತಿಯಿರುವುದಿಲ್ಲ. “ಅವನ ಬಾಯಿಗೆ ಮಣ್ಣ ಬಿದ್ದ ಹೋತು, ರಘೂತ್ತಮ ಸ್ವಾಮಿಗಳು ಭೂಸಂಚಾರ ಮುಗಿಸಿದರು, ಇಷ್ಟ ಪರಿ ಹೊಲಸನ್ಯಾಗ ಇರ್ತಿ ದ್ದ. ಬೀಡಾಡಿ ನಾಯಿನ್ನ ಕಟ್ಕೊಂಡು ತಿರಗತಿದ್ದ, ಕೋರ್ಟಿನ ಹತ್ರ ಸತ್ತು ಬಿದ್ದಿದ್ದ, ಅತ್ತ ಕಳಸಲಿಕ್ಕೆ ನಾಯೊಂದರ ಇತ್ತಲ್ಲ” (ಪುಟ 123) ಎನ್ನುತ್ತಾರೆ. ಅಸ್ತಿತ್ವವಾದ ಅಥವಾ ಮನಶಾಸ್ತ್ರೀಯ ಸಿದ್ಧಾಂತಗಳ ಗೋಜಿಗೆ ಹೋಗದೆ ಲೇಖಕಿಯು ಏಗ್ಯಾನ ಬದುಕಿನ ದುರಂತವನ್ನು ಎಳೆ ಎಳೆಯಾಗಿ ಬಿಡಿಸುತ್ತಾರೆ.

    ‘ನೀಡುವ ಕೈ’ ಬದುಕಿನ ಸಾಮರಸ್ಯವನ್ನು ವ್ಯಕ್ತಪಡಿಸುವ ಪ್ರಬಂಧವಾಗಿದೆ. ರತ್ನವ್ವಳಿಗೆ ಮಕ್ಕಳಾಗದಿದ್ದುದರಿಂದ ಆಕೆಯ ಗಂಡನಾದ ನಿಂಗನಗೌಡನು ಬಡಕುಟುಂಬಕ್ಕೆ ಸೇರಿದ ಕಮಲವ್ವನನ್ನು ಮದುವೆಯಾಗುತ್ತಾನೆ. ರತ್ನವ್ವಳು ಅಳುತ್ತಾ ಅನ್ನ ನೀರು ಬಿಟ್ಟು ಮಲಗಿದರೂ ನಿಯಂತ್ರಣವನ್ನು ತಂದುಕೊಂಡು ಸನ್ಯಾಸಿನಿಯ ರೀತಿಯಲ್ಲಿ ಬದುಕತೊಡಗುತ್ತಾಳೆ. ಸವತಿ ಮತ್ಸರ ಸುಳಿಯದಿರುವುದು ಇಲ್ಲಿನ ಪ್ರತ್ಯೇಕತೆಯಾಗಿದೆ. ಗಂಡನನ್ನು ಮರಳಿ ಪಡೆಯಲು ಉಪಯೋಗಿಸುವ ಹಿರಿಯ ಹೆಂಡತಿಯ ತಂತ್ರ, ಕಿರಿ ಹೆಂಡತಿಯ ದೊಡ್ಡಸ್ತಿಕೆ ಲವಲೇಶವೂ ಇಲ್ಲ. ಬದಲಾಗಿ “ಅಕ್ಕಾರಿಗೆ ಬಾಳ್ವಿ ಕೊಡಬೇಕು. ನಾ ಅದೇನಿ ಅಂತ ಆಕಿನ ನಿರ್ಲಕ್ಷ್ಯ ಮಾಡಬಾರದು” (ಪುಟ 149) ಎನ್ನುವ ಔದಾರ್ಯವಿದೆ. ಕಮಲವ್ವನು ತನ್ನ ಸವತಿಯೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ಆಕೆಯ ವ್ಯಕ್ತಿತ್ವದ ವಿವೇಕ ಪೂರ್ಣವಾದ ಮುಖವನ್ನು ಕಾಣುತ್ತೇವೆ. ತಾನಿನ್ನು ತಿರಸ್ಕೃತಳು ಎಂಬ ಭಾವವನ್ನು ತಳೆದಿದ್ದ ರತ್ನವ್ವನೊಡನೆ ಹೊಂದಿಕೊಂಡು ಹೋಗುತ್ತಾಳೆ. ಇದು ಆಕೆಗೆ ಬಾಳುವೆಯು ಕಲಿಸಿದ ವಿನಯ. ಇಬ್ಬರೂ ಬಸುರಿಯರಾದಾಗ, ಅವಳಿ ಮಕ್ಕಳನ್ನು ಹೆತ್ತಾಗ ಆಶ್ರಮಕ್ಕೆ ಬಂದಾಗ ಸಂಯಮಿಗಳಾದ ನಿಂಗನಗೌಡರೂ ಅಪಾರವಾದ ಹಿಗ್ಗನ್ನು ವ್ಯಕ್ತಪಡಿಸುತ್ತಾರೆ. ರತ್ನವ್ವಳು ಜಾರಿ ಬೀಳುತ್ತಿದ್ದಂತೆ ಕಮಲವ್ವನು ಆಕೆಯನ್ನು ಹಿಡಿದುಕೊಳ್ಳಲು ಹೋದಾಗ ಇಬ್ಬರೂ ಆಯತಪ್ಪಿ ಕೆಳಗುರುಳಿ ಜೊತೆ ಜೊತೆಯಾಗಿ ಪ್ರಾಣ ಬಿಡುವಲ್ಲಿ ಅಖಂಡವೆನಿಸಿದ್ದ ಸುಖ ಸಂತೋಷಗಳು ಮುಕ್ತಾಯವಾಗುತ್ತವೆ.

    ಧಾರವಾಡ ಜಿಲ್ಲೆಯ ಸಾಂಸ್ಕೃತಿಕ ಆವರಣದಲ್ಲಿ ಸೃಷ್ಟಿಯಾಗಿರುವ ಸುನಂದಾ ಬೆಳಗಾಂವಕರರ ಬರಹಗಳಿಗೆ ಪ್ರಾದೇಶಿಕ ಅಸ್ತಿತ್ವವಿದೆ. ತಾನು ಕಂಡದ್ದನ್ನು, ಕೇಳಿದ್ದನ್ನು, ಮನಸ್ಸಿಗೆ ತಟ್ಟಿದ್ದನ್ನು ಬರೆಯುವ ನಿಷ್ಠೆಯಿದೆ. ವ್ಯಕ್ತಿಗಳ ಜೀವನವಿವರಗಳನ್ನು ಬರೆದು ಮೌಲ್ಯಗಳನ್ನು ಸೂಚಿಸುವ ಲೇಖಕಿಯ ಉದ್ದೇಶವು ಸಫಲವಾಗಿದೆ. ವಸ್ತುವನ್ನು ತೀರ ಭಾವುಕವಾಗಿ ನೋಡದೆ, ಭಾವಾರ್ದತೆಯನ್ನು ಬಿಟ್ಟು ಕೊಡದೆ, ಕಾಣುವುದರ ಜೊತೆಗೆ ಕಾಣದ ಮುಖಗಳನ್ನು ದರ್ಶಿಸಲು ಪ್ರಯತ್ನಿಸಿದ್ದಾರೆ. ವ್ಯವಸ್ಥೆಗೆ ಶರಣಾಗುವ ನಾಯಕಿಯರ ಪೈಕಿ ಹಿಂದಿನ ತಲೆಮಾರಿಗೆ ಸೇರಿದವರು ಬಾಲ್ಯವಿವಾಹಕ್ಕೆ ಬಲಿಯಾದರೆ ಲೇಖಕಿಯ ಸಮಕಾಲೀನರಿಗೆ ಬದಲಾವಣೆಯ, ಸ್ವ ಸಮರ್ಥನೆಯ ತಹತಹವಿದೆ. ಲಿಂಗಾಧಾರಿತ ಅಸಮಾನತೆಯನ್ನು ಎದುರಿಸುತ್ತವೆ. ಆಧುನಿಕತೆಯ ಸೋಂಕಿರದ ಹೆಣ್ಣುಗಳ ಒಡಲ ಕಿಚ್ಚಿನಿಂದ ಸ್ಪೋಟಿಸುವ ಪ್ರತಿರೋಧಕ್ಕಿಂತ, ಸುಖದ ಮರೀಚಿಕೆಯ ಬೆಂಬತ್ತಿ ಭ್ರಮನಿರಸನಕ್ಕೆ ಒಳಗಾಗಿ, ಗೋಳಿನ ಬಾಳನ್ನು ಅನುಭವಿಸುವ ಪರಿಸ್ಥಿತಿಯು ಇಲ್ಲಿದೆ. ವಿವಾಹಪೂರ್ವ ಮತ್ತು ಅದರ ಬಳಿಕ ಹೆಣ್ಣಿನ ಮನಸ್ಸನ್ನು ಕಾಡುವ ವಾಸನೆಯ ಅಲೆಗಳನ್ನು ಸೆರೆಹಿಡಿಯುವಲ್ಲಿ ಲೇಖಕಿಯು ಯಶಸ್ವಿಯಾಗಿದ್ದಾರೆ. ಸ್ತ್ರೀವಾದದ ನೆಲೆಯನ್ನು ಆರಿಸಿಕೊಳ್ಳದೆ ಸಮಾನತೆ ಮತ್ತು ಪರಸ್ಪರ ಅರ್ಥಮಾಡಿಕೊಳ್ಳಬೇಕಾದ ಅಗತ್ಯದ ಪ್ರತಿಪಾದನೆಯೊಂದಿಗೆ ಕಥನವನ್ನು ಬೆಳೆಸುತ್ತಾರೆ. ಸಂಬಂಧದ ಸ್ವರೂಪವನ್ನು ನ್ಯಾಯ ಅನ್ಯಾಯಗಳ ತಕ್ಕಡಿಯಲ್ಲಿ ನಿಲ್ಲಿಸದಿರುವುದರಿಂದ ಬರವಣಿಗೆಯು ಅಂತರಂಗವನ್ನು ತಟ್ಟುತ್ತದೆ.

    ಹಳ್ಳಿಯ ಜೀವನವನ್ನು ಮರುಸೃಷ್ಟಿಸುವ ಪ್ರತಿಯೊಂದು ಲೇಖನಗಳಲ್ಲಿ ನೂರು ವಿವರಗಳನ್ನು ಕಂಡು, ಅದನ್ನು ಪ್ರೀತಿಸಿ, ಅದರ ಮಿತಿಗಳನ್ನು ನೋಡಬಲ್ಲ ಕಣ್ಣು ಮತ್ತು ಹೃದಯಗಳನ್ನು ಕಾಣುತ್ತೇವೆ. ಹಳ್ಳಿಗರ ನಂಬಿಕೆಗಳು, ರೂಢಿಗಳು, ಬದುಕಿನ ದೃಶ್ಯಗಳು ಹಾಸುಹೊಕ್ಕಿವೆ. ಮರದ ಕೇಂದ್ರದಿಂದ ರೆಂಬೆಗಳು ಹುಟ್ಟಿಕೊಳ್ಳುವಂತೆ ಕೇಂದ್ರ ವಸ್ತುವಿನಿಂದ ಇತರ ವಿಚಾರಗಳು ಮೂಡುತ್ತವೆ. ಬದುಕಿನ ಅಸ್ಮಿತೆಯ ಜೊತೆ ಸಾವು ಮತ್ತು ವಾಸ್ತವತೆಗಳು ಬೆರೆತಿವೆ. ಸೂಕ್ಷ್ಮ ಸಂವೇದನೆಯ, ವಾಸ್ತವವನ್ನು ಹುಡುಕುವ, ಕೋಮಲತೆ-ಗಟ್ಟಿತನಗಳು ಬೆರೆತ ಮನಸ್ಸು ಕೆಲಸ ಮಾಡುತ್ತದೆ. ಮನುಷ್ಯ ಸ್ವಭಾವದಲ್ಲಿ ಆಸಕ್ತಿಯನ್ನು ಹೊಂದಿರುವ ಲೇಖಕಿಯು ಒಳ್ಳೆಯವರು, ಕೆಟ್ಟವರು ಎಂದು ತೀರ್ಪುಕೊಡುವ ಪ್ರವೃತ್ತಿಯನ್ನು ಬದಿಗಿಟ್ಟು, ಮನುಷ್ಯ ಸ್ವಭಾವದ ವೈವಿಧ್ಯಗಳತ್ತ ಗಮನವನ್ನು ಹರಿಸುತ್ತಾರೆ. ಹಿರಿಮೆಯ ದರ್ಶನ, ಸಂಸ್ಕೃತಿಯ ದರ್ಶನ, ಪರಿಪಕ್ವ ಮನಸ್ಸಿನವರು ಹೇಗೆ ನಡೆದುಕೊಳ್ಳುತ್ತಾರೆ ಎಂಬ ಚಿತ್ರಣವನ್ನು ನೀಡುವ ನಿಟ್ಟಿನಲ್ಲಿ ರೂಪುಗೊಂಡ ವ್ಯಕ್ತಿಗಳು ಕೇವಲ ಉದಾಹರಣೆಗಳಾಗದೆ ಜೀವಂತವಾಗಿ ಕಂಗೊಳಿಸುತ್ತಾರೆ. ಬಾಲ್ಯ, ಯೌವನಗಳನ್ನು ಕಳೆದು, ಬಾಳಿನ ಏರಿಳಿತದ ಹಾದಿಯನ್ನು ಸವೆಸಿ ಸಮತಲದ ಹಾದಿಗೆ ಬಂದಿರುವ ವ್ಯಕ್ತಿಗಳು ಬದುಕಿನ ಅಗ್ನಿದಿವ್ಯಗಳಿಂದ ಪಾಠವನ್ನು ಕಲಿತುಕೊಂಡಿದ್ದಾರೆ. ಲೇಖಕಿಯು ಇವರ ಪರಿಸ್ಥಿತಿಯನ್ನು ಸಮಸ್ತ ವಿವರಗಳೊಂದಿಗೆ ಸೃಷ್ಟಿಸುವಾಗ ತಾರುಣ್ಯ ಮತ್ತು ಪ್ರೌಢಾವಸ್ಥೆ ಮತ್ತು ಮುಪ್ಪಿನ ನಡುವೆ ಹರಿದ ಕಾಲ ಪ್ರವಾಹವನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಮಡಿಮೈಲಿಗೆಯಂಥ ವಿಧಿನಿಷೇಧಗಳ ನಿಯಂತ್ರಣಕ್ಕೊಳಗಾಗಿ ಬದುಕಿನ ಬೆಂಕಿಯಲ್ಲಿ ಬೆಂದು ಬೂದಿಯಾದ ವಿಧವೆಯರನ್ನು ಕಂಡ ಲೇಖಕಿಯು ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗದ ಅವರ ಚರಿತ್ರೆಯನ್ನು ಲಲಿತಪ್ರಬಂಧಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಇವರು ಒಂದೇ ಅಚ್ಚಿನಲ್ಲಿ ಎರಕ ಹೊಯ್ದವರಲ್ಲ. ಇಂಥವರ ಪಾಡು ಲೇಖಕಿಯನ್ನು ಕಲಕಿದರೂ ಭಾವುಕತೆಗೆ ಒಳಗಾಗದಿರುವುದರಿಂದ ಬರವಣಿಗೆಯಲ್ಲಿ ಸಂಯಮ ಮತ್ತು ಸಮತೋಲನವನ್ನು ಕಾಣುತ್ತೇವೆ. ಒರಟಾಗಿ ಅಥವಾ ಸೂಕ್ಷ್ಮವಾಗಿ ಗಂಡಸಿನ ಪ್ರಭುತ್ವದ ಮತ್ತು ಪರಂಪರಾಗತ ನಿಲುವುಗಳ ಹಿನ್ನೆಲೆಯಲ್ಲಿ ಬದುಕು ನಡೆಯಬೇಕಾದ ಆವರಣದಲ್ಲಿ ಗಂಡಿನ ಶೀಲದ ಪ್ರಶ್ನೆಯು ಬರುವುದಿಲ್ಲ. ಗಂಡನು ಹೆಂಡತಿಯ ಪಾಲಕ ಪೋಷಕ ಎಂಬ ನಂಬಿಕೆಯಿದೆ. ಬಂಧನದಲ್ಲಿರುವವರಿಗೆ ತಾವು ಬಂಧಿತರೆನ್ನುವುದೇ ಮರೆತು ಸರಪಳಿಗೆ ಹೊಂದಿಕೊಳ್ಳುವ ಹೆಂಗಸರ ನಡುವೆ ಬಂಧನದಿಂದ ಪಾರಾಗಬೇಕೆಂಬ ಅರಿವು ಮೂಡಿದ, ಕಳಕಳಿ ಇರುವ ಹೆಣ್ಣುಗಳ ತಲ್ಲಣ ಇಲ್ಲಿನ ಕೆಲವು ಪ್ರಬಂಧಗಳಲ್ಲಿ ಚಿತ್ರಿತವಾಗುತ್ತವೆ. ಸಂಬಂಧದ ಆಧಾರದ ಮೇಲೆ, ಭಾವ ನಿಷ್ಠೆಗಳ ಚೌಕಟ್ಟಿನಲ್ಲಿ ಗಂಡು ಹೆಣ್ಣಿನ ಸಂಬಂಧದ ವಿಶ್ಲೇಷಣೆ ನಡೆಯುತ್ತದೆ. ಬಂಧನಗಳನ್ನು ಕಿತ್ತೊಗೆದು ಪ್ರೀತಿ ಮತ್ತು ಹೃದಯವಂತಿಕೆಯ ಹಾದಿಯಲ್ಲಿ ನಡೆಯಲು ಬಯಸುವ ಹಂಬಲವು ಇಲ್ಲಿದೆ.

    ಪುಸ್ತಕ ವಿಮರ್ಶಕರು ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕಿ ಸುನಂದಾ ಬೆಳಗಾಂವಕರ

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಸಭಾಂಗಣದಲ್ಲಿ ‘ಕನ್ನಡ ಕಲರವ -2’ | ಆಗಸ್ಟ್ 09
    Next Article ಶ್ರೀ ಸುಬ್ರಹ್ಮಣ್ಯ ಮಠದ ಅನಿರುದ್ಧ ತೀರ್ಥ ವೇದಿಕೆಯಲ್ಲಿ ತಾಳಮದ್ದಳೆ
    roovari

    Add Comment Cancel Reply


    Related Posts

    ಧಾರವಾಡದಲ್ಲಿ ‘ದಿವ್ಯದೃಷ್ಟಿಯ ಗಾಂಧಾರಿ’ ಕೃತಿ ಬಿಡುಗಡೆ ಸಮಾರಂಭ

    August 4, 2025

    ವಿಪ್ರ ವೇದಿಕೆಯ ದಶಮ ಸಂಭ್ರಮದ ಮೂರನೇ ಸರಣಿ ಕಾರ್ಯಕ್ರಮ

    August 4, 2025

    ಎಡನೀರಿನಲ್ಲಿ ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 4ನೇ ಕಾರ್ಯಕ್ರಮ

    August 4, 2025

    ಬ್ರಹ್ಮಾವರದ ಜಿ.ಎಮ್. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ‘ಸಾಹಿತ್ಯ ಪ್ರೇರಣೆ’ | ಆಗಸ್ಟ್ 06

    August 4, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.