ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಕ್ಷೇಮ ಹಾಲ್ ನಲ್ಲಿ ದಿನಾಂಕ 31 ಜುಲೈ 2025 ಗುರುವಾರ ‘ಶರಸೇತು ಬಂಧ’ ಎಂಬ ಮಹಾಭಾರತದಿಂದ ಆಯ್ದ ಭಾಗದ ಯಕ್ಷಗಾನ ತಾಳಮದ್ದಳೆಯು ಪ್ರಸಿದ್ಧ ಮೇರು ಕಲಾವಿದರ ಕೂಡುವಿಕೆಯಿಂದ ಜರುಗಿತು.
ಹನುಮಗಿರಿ ಮೇಳದ ಯುವ ಪ್ರಸಿದ್ಧ ಭಾಗವತರಾದ ಚಿನ್ಮಯ ಭಟ್ ಇವರ ಹಾಡುಗಾರಿಕೆ, ಚೆಂಡೆವಾದನದಲ್ಲಿ ಎತ್ತಿದ ಕೈ ಸೀತಾರಾಮ ತೋಳ್ವಾಡಿತ್ತಾಯ, ಮೃದಂಗದಲ್ಲಿ ಜನಾರ್ದನ ತೋಳ್ವಾಡಿತ್ತಾಯರವರು ಹಿಮ್ಮೇಳ ವಾದಕರಾಗಿದ್ದರು. ಅರ್ಜುನನ ಪಾತ್ರದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಹನುಮಂತನಾಗಿ ಜಬ್ಬಾರ್ ಸಮೋ ಸಂಪಾಜೆ ಹಾಗೂ ಶ್ರೀ ಕೃಷ್ಣನ ಪಾತ್ರದಲ್ಲಿ ಪವನ್ ಕಿರಣ್ ಕೆರೆಯವರು ತಮ್ಮ ನಿರರ್ಗಳ ಅರ್ಥಗರ್ಭಿತ ಮಾತುಗಳಿಂದ ನೆರೆದ ಸಭಿಕರನ್ನು ಭಾವಪರವಶೆಯ ಮಾಯಾಲೋಕಕ್ಕೆ ಕೊಂಡೊಯ್ದರು. ಸೌಖ್ಯವನದಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ನಿರಂತರ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಇದರ ಪ್ರಾಯೋಜಕತ್ವವನ್ನು ಉಡುಪಿಯ ಖ್ಯಾತ ಕಾಂಟ್ರಾಕ್ಟರ್‌ದಾರರಾದ ಶ್ರೀ ನಂದಕುಮಾರ್ ಇವರು ವಹಿಸಿರುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಕಲಾವಿದರನ್ನು ಗೌರವಪೂರ್ವಕವಾಗಿ ಶ್ರೀ ನಂದಕುಮಾರ್ ರವರು ಸನ್ಮಾನಿಸಿದರು. ಆಸ್ಪತ್ರೆಯ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್‌ರವರು ಸ್ವಾಗತಿಸಿ, ನಿರೂಪಿಸಿದರು. ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾಧಕರೆಲ್ಲರೂ ಪ್ರೇಕ್ಷಕರಾಗಿ ಭಾಗವಹಿಸಿದ್ದರು.