Subscribe to Updates

    Get the latest creative news from FooBar about art, design and business.

    What's Hot

    ಸಾಹಿತ್ಯಾಸಕ್ತರ ಮನಸೂರೆಗೊಳಿಸಿದ ‘ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2025’

    August 13, 2025

    ಶ್ರೀ ಮದವೂರ ವಿಘ್ನೇಶ ಕಲಾ ಸಂಘದ ತಾಳಮದ್ದಳೆ

    August 13, 2025

    ಶ್ರೀ ಎಡನೀರು ಮಠದಲ್ಲಿ ‘ನೃತ್ಯ ದ್ವಯ’ ಮತ್ತು ‘ನೃತ್ಯ ಸಿರಿ’ ಭರತನಾಟ್ಯ ಪ್ರದರ್ಶನ | ಆಗಸ್ಟ್ 15

    August 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಕುಲತೊಂಭತ್ತು ಜಾತಿಗಳ ಕಥನ ‘ಜಾಲ್ಗಿರಿ’ ಕಾದಂಬರಿ
    Article

    ಪುಸ್ತಕ ವಿಮರ್ಶೆ | ಕುಲತೊಂಭತ್ತು ಜಾತಿಗಳ ಕಥನ ‘ಜಾಲ್ಗಿರಿ’ ಕಾದಂಬರಿ

    August 13, 2025No Comments10 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಳೆದ ತೊಂಭತ್ತರ ದಶಕದ ಕೊನೆಯ ಕಾಲ. ನಾನು ಎಂ.ಎ. ಓದುತ್ತಿದ್ದಾಗ ಮೊದಲ ಬಾರಿಗೆ ‘ತುಂಬಾಡಿ ರಾಮಯ್ಯ’ ಅವರ ಹೆಸರು ಕೇಳಿದ್ದೆ. ಮೇಷ್ಟ್ರು ಎಸ್.ಜಿ. ಸಿದ್ದರಾಮಯ್ಯ ಮತ್ತು ಡಾ. ರಾಜಪ್ಪ ದಳವಾಯಿಯವರು ಪಾಠ ಮಾಡುತ್ತಿದ್ದಾಗ ಆಗ ತಾನೇ ಬಿಡುಗಡೆಯಾಗಿದ್ದ ‘ಮಣೆಗಾರ’ ಆತ್ಮಕತೆಯ ಬಗೆಗೆ ಕ್ಲಾಸಿನಲ್ಲಿ ಹೇಳುತ್ತಿದ್ದರು. ‘ಯಾರಿವರು ತಮ್ಮ ಕೃತಿಗೆ ಸಮುದಾಯ ಸೂಚಕವಾದ ಹೆಸರಿಟ್ಟಿದ್ದಾರಲ್ಲ’ ಎಂದು ಆಶ್ಚರ್ಯನಾಗಿದ್ದೆ. ಆ ಕೃತಿ ನನ್ನ ಕೈಗೆ ಸಿಕ್ಕಿ ಓದಿದಾಗ ನನ್ನೂರ ಹತ್ತಿರದ ತುಂಬಾಡಿ ಗೊಲ್ಲಹಳ್ಳಿಯ ಹೆಸರು, ಅದರೊಳಗಿನ ಅನುಭವಗಳು ನನ್ನನ್ನು ತಲ್ಲಣಗೊಳಿಸಿದ್ದವು. ‘ಮಣೆಗಾರ’ ತುಮಕೂರಿನ ಮೊದಲ ‘ದಲಿತ ಆತ್ಮಕಥೆ’. ದಲಿತ ಅನುಭವವನ್ನು ವಿಭಿನ್ನವಾಗಿ ಕಟ್ಟಿದ ಕೃತಿ. ‘ಮುಟ್ಟಿದರೆ ಮಿಡಿವ ಮಣೆಗಾರ’ (ರಹಮತ್ ತರೀಕೆರೆ) ಎಂದೆಲ್ಲಾ ಕನ್ನಡದ ಚಿಂತನಾವಲಯದಲ್ಲಿ ದೊಡ್ಡ ಚರ್ಚೆಯನ್ನೇ ಈ ಕೃತಿ ಹುಟ್ಟಿಹಾಕಿತ್ತು. ಇಪ್ಪತೈದು ವರ್ಷಗಳ ಹಿಂದೆ ಬೆರಗಿನಿಂದ ನೋಡುತ್ತಿದ್ದ ಹಿರಿಯರಾದ ತುಂಬಾಡಿ ರಾಮಯ್ಯನವರ ಬರಹಕ್ಕೆ ಕಡನುಡಿಗಳನ್ನು ಬರೆಯುವ ಅವಕಾಶ ಒದಗಿಬಂದಿದೆ. ನನ್ನಂತಹ ಕಿರಿಯನಿಂದ ಬರೆಸಬೇಕೆಂಬ ಅವರ ನಿಲುವು ನನ್ನಲ್ಲಿ ಮುಜುಗರವನ್ನು ಮತ್ತು ಅವರ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಕಥನಕ್ಕೆ ಕಡನುಡಿಗಳ ಅಗತ್ಯವಿಲ್ಲ. ನನಗೆ ಮೊದಲ ಓದಿನ ಸುಖ ನೀಡಿದ್ದಾರೆ. ಆ ಅನುಭವದ ಸವಿಯನ್ನಷ್ಟೇ ಹಂಚಿಕೊಳ್ಳುತ್ತೇನೆ.

    ಕನ್ನಡ ದಲಿತ ಕಥನ ಸಾಹಿತ್ಯದೊಳಗೆ ಕಾದಂಬರಿಯ ಜಗತ್ತು ವಿಸ್ತಾರವಾದಂತೆ, ಹಟ್ಟಿ, ಕೇರಿಯ ಬರಹಗಳು ಸೇರಿಕೊಂಡಂತೆ ದಲಿತಾನುಭವ ವಿಭಿನ್ನವಾಗತೊಡಗಿತು. ಬೆಳ್ಯ, ಒಡಲಾಳ, ಮಾಗಿ, ಕುಸುಮಬಾಲೆ, ಕಾರ್ಯ, ಮರಣ ಮಂಡಲ ಮಧ್ಯದೊಳಗೆ .. ಹೀಗೆ ಪಟ್ಟಿಮಾಡಿದರೂ ಅವೆಲ್ಲಾ ದಲಿತ ಸಾಹಿತ್ಯದ ಆರಂಭ ಕಾಲದ ಕಾದಂಬರಿಗಳು. ಆಗಿನ ಹುಮ್ಮಸ್ಸು ಜೊತೆಗೆ ಅವುಗಳಿಗೆ ತಮ್ಮ ಕೇರಿಯದನ್ನು ಕಟ್ಟಿಕೊಡಬೇಕೆಂಬ ಧಾವಂತವಿತ್ತು. ನಂತರದಲ್ಲಿ ಕಾಲಮಾಗಿ ಅತಿ ಸೂಕ್ಷ್ಮ ವಿಷಯ-ಸಂಗತಿಗಳು ಕಾದಂಬರಿಯೊಳಗೆ ಇಣುಕಿ ಹಾಕಿವೆ. ಪರಂಪರೆಯೊಳಗೆ ಪ್ರಶ್ನೆಗಳೊಂದಿಗೆ ಈಜುವ, ಕುಲಮೂಲದ ಜೊತೆ ಗುದ್ದಾಡುವ, ಆಧುನಿಕತೆಯ ಹಂಬಲದಲ್ಲಿ ಮೈಮರೆಯದೇ ಐದಾರು ದಶಕಗಳ ನೆನಪುಗಳನ್ನು, ಬರಹವಾಗಿಸುವ ಕ್ರಿಯೆ ಇತ್ತೀಚೆಗೆ ಶುರುವಾಗಿದೆ. ಇದಕ್ಕೆ ನಮ್ಮ ಚಿಂತನಾ ಜಗತ್ತಿನಲ್ಲಿ ನಡೆಯುತ್ತಿರುವ ಅಧ್ಯಯನ ಕ್ರಮಗಳು, ಸಂಸ್ಕೃತಿ ಚರ್ಚೆಗಳು ಪ್ರಮುಖ ಕಾರಣವಾಗಿವೆ. ಮೂರನೇ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳು, ಸಂಕಟಗಳು ಇತ್ತೀಚಿನ ದಲಿತ ಕಾದಂಬರಿಗಳ ದಾರಿಯನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತಿವೆ ಎಂದರೆ ತಪ್ಪಾಗಲಾರದು.

    ‘ಜಾಲ್ಗಿರಿ’ ವಿಭಿನ್ನ ಅನುಭವಲೋಕ. ಸರಿಸುಮಾರು ನೂರುವರ್ಷಗಳ ಬದುಕನ್ನು ಕಟ್ಟಿಕೊಡುವ ಕಥನ. ಈ ಕಾದಂಬರಿಗೆ ಅನೇಕ ಪ್ರವೇಶಗಳಿವೆ. ಪಾತ್ರಗಳು, ಪ್ರಸಂಗಗಳು, ಪ್ರದೇಶಗಳು, ಆಧುನಿಕತೆಯ ಬಿಡುಗಡೆಗಳು ಮತ್ತು ಸಂಕಟಗಳು, ಆಚರಣೆಗಳು ಇತ್ಯಾದಿಗಳೆಲ್ಲ ಕೂಡಿಕೊಂಡು ಇಡೀ ಜಾಲ್ಗಿರಿ ನಮ್ಮ ಮುಂದೆ ಅನುಭವಲೋಕವನ್ನು ತೆರೆದಿಡುತ್ತದೆ. ಮೊದಲ ಓದಿನಲ್ಲಿಯೇ ನೂರುವರ್ಷದ ನಮ್ಮೂರ ಪುಟ್ಟಮ್ಮಜ್ಜಿ ತಾನು ಪಟ್ಟಪಾಡು, ಕಟ್ಟಿಕೊಂಡ ಬದುಕನ್ನು ಮೆಲುಕುಹಾಕುತ್ತ ಈ ಕಾಲದವರೊಂದಿಗೆ ಸಂವಾದಿಸುವಂತೆ ಭಾಸವಾಗುತ್ತದೆ. ಅಪಾರ ಅನುಭವಗಳನ್ನು ಹೊತ್ತು ಬಾಳ್ವೆ ಮಾಡಿದ ಮುದುಕಿ. ತನ್ನ ಬೊಚ್ಚುಬಾಯಿ, ಸುಕ್ಕುಸುಕ್ಲಾದ ಮೈಚರ್ಮ, ಹಣೆಯಲ್ಲಿ ಮಿರಮಿರ ಮಿರುಗುವ ಕೆಂಪು ಹಣೆಬಟ್ಟನ್ನಿಟ್ಟುಕೊಂಡು, ಇಳಿಬಿದ್ದ ಬಿಳಿಗೂದಲುಗಳನ್ನು ಹಾಗೇ ತುರುಬುಕಟ್ಟಿ, ಕೆನ್ನೆತುಂಬ ಅರಿಶಿನ ಬಳಿದುಕೊಂಡು, ಕಟವಾಯಲ್ಲಿ ಎಲಡಿಕೆಯ ಜೊಲ್ಲು ಸೋರಿಸುತ್ತಾ ನಡುನಡುವೆ ನಕ್ಸಾರ ಮಾಡುತ್ತಾ ತನ್ನ ನೂರು ವರ್ಷಗಳ ಬದುಕನ್ನು ನಮ್ಮ ಮುಂದೆಲ್ಲಾ ಹರಡಿದೆ. ಅದರಲ್ಲಿ ಸೊಗಸಿದೆ. ಚೆಲುವಿದೆ. ಸುಖ-ದುಃಖಗಳಿವೆ. ನಮಗೆ ಯಾವುದು ಬೇಕೋ ಅದನ್ನು ಹೆಕ್ಕಿಕೊಳ್ಳಬಹುದು.

    ಮೂರನೇ ಜಗತ್ತಿನ ದೇಶಗಳಿಗೆ ಎದುರಾಗುವ ಬಹುದೊಡ್ಡ ಸಂಕಟಗಳು, ತುಮುಲಗಳು ಈ ಕಾದಂಬರಿಯ ಉದ್ದಕ್ಕೂ ಸಾಗಿವೆ. ಈ ಕಥನವನ್ನು ಓದುತ್ತಿದ್ದರೆ ಚಿನುವಾ ಅಚುಬೆಯ ‘ಥಿಂಕ್ಸ್ ಫಾಲ್ ಅಪಾರ್ಟ್’, ಮಾಕ್ವೆರ್ಜ್ ನ ‘ಹಂಡ್ರೆಡ್ ಇರ್ಸ್ವ ಅಫ್ ಸಾಲಿಟ್ಯೂಡ್’, ಅಲೆಕ್ಸ್ ಹೆಲಿಯ ‘ದ ರೂಟ್ಸ್’ ಅಂಥ ಕಾದಂಬರಿಗಳು ಕಣ್ಣಮುಂದೆ ಹಾದುಹೋಗುತ್ತವೆ. ಬೇರೆ ಪ್ರದೇಶದ, ಬೇರೆ ದೇಶದ ಕಥನಗಳು ಈ ನೆಲದ ಜೊತೆ ಕೂಡಿಕೊಳ್ಳುವುದಕ್ಕೆ ಇರುವ ಕಾರಣ ಸಮಾನ ಸಂವೇದನೆಗಳು. ಮೂರನೇ ಜಗತ್ತು ಎದುರಿಸುತ್ತಿರುವ ಸಮಸ್ಯೆ, ತೊಳಲಾಟಗಳು, ಆಧುನಿಕತೆ ಹೆಸರಿನಲ್ಲಿ ನಡೆಸುತ್ತಿರುವ ದೌರ್ಜನ್ಯಗಳು ಇವೆಲ್ಲಾ ಆ ನೆಲದ ಬರಹಗಳಲ್ಲಿ ಸಹಜವಾಗಿರುತ್ತವೆ. ಪ್ರಸ್ತುತ ಜಾಲ್ಗಿರಿ ಇದೇ ಪ್ರಶ್ನೆಗಳನ್ನು ಎದುರಿಗಿಟ್ಟುಕೊಂಡು ಸಾಗಿದೆ. ಆದರೇ ಅಲ್ಲಿಗಷ್ಟೇ ನಿಲ್ಲದೇ ಈ ತೊಳಲಾಟಗಳನ್ನು, ಸ್ಥಿತ್ಯಂತರಗಳನ್ನು ಮುಂದಿಡುತ್ತಲೇ ಪರಂಪರೆಯನ್ನು ಸಮಕಾಲೀನದ ಜೊತೆ ಕೊಂಡಿಯಾಗಿಸುತ್ತದೆ. ಸಂಘರ್ಷಗಳನ್ನು ಮುಖ್ಯವಾಗಿಸಿಕೊಳ್ಳದೆ ಮುಗ್ಧವಾಗಿ ಹೇಳಿಕೊಳ್ಳುತ್ತದೆ.

    ಸ್ವಾತಂತ್ರ್ಯ ಪಡೆದು ಅಮೃತಮಹೋತ್ಸವ ಕಾಲದಲ್ಲಿ ನಿಂತು ನಮ್ಮ ಪರಂಪರೆಯನ್ನು ನೋಡುವುದು ಬಹುಮುಖ್ಯ ಗಣಿಕೆ. ವಸಾಹತುಶಾಹಿಗಳು ಉಂಟುಮಾಡಿರುವ ಪರಿಣಾಮಗಳ ಕಾರಣಕ್ಕೆ ನಾವು ಕಟ್ಟಿಕೊಳ್ಳಬೇಕಾದ ಬದುಕು ಮತ್ತಷ್ಟು ನಿಧಾನಗತಿಯ ಹಾದಿಹಿಡಿದಿರುವುದು ಒಂದು ಕಡೆಯದ್ದಾದರೆ, ಮತ್ತೊಂದು ಕಡೆ ಹಳ್ಳಿಗಳಿಂದ ವಲಸೆಹೋದ ಅನೇಕ ಮನಸುಗಳು ಅನುಭವಿಸುವ ಸಂಕಟಗಳು ಅಕ್ಷರರೂಪ ಪಡೆಯುವಲ್ಲಿ ಸ್ವಲ್ಪ ತಡವಾಯಿತು. ಪ್ರಗತಿಶೀಲ ಕಾದಂಬರಿಗಳಲ್ಲಿ ಈ ಪ್ರಯತ್ನ ನಡೆದರೂ ವರ್ಗದ ನೆಲೆಯಲ್ಲಿ ನೋಡಿ ವಿಸ್ತಾರಗೊಳ್ಳುವುದನ್ನು ಮೊಟಕುಮಾಡಿತ್ತು. ಕೇರಿಯಿಂದ ಬಂದ ಆಕ್ರಂದನಗಳಿಗೆ ಬಾಯಿ ಬಿಡಲಾಗಲಿಲ್ಲ. ಮೂರನೇ ಜಗತ್ತಿನ ಕಾದಂಬರಿಗಳು ಈ ವಸಾಹತು ಆಕ್ರಮಣದ ನೆಲೆಗಳನ್ನು ವಿಶ್ಲೇಷಿಸಿದರೆ, ಈ ಜಾಲ್ಗಿರಿ ಸ್ಥಳೀಯ ನೆಲೆಗಳ ಮೂಲಕ ಲೋಕದರ್ಶನವನ್ನು ಕಂಡಿರಿಸುತ್ತದೆ; ಸ್ಥಿತ್ಯಂತರವನ್ನು ಕಥಿಸುತ್ತದೆ. ಈ ಕಾರಣಕ್ಕಾಗಿ ಜಾಲ್ಗಿರಿಯಲ್ಲಿ ವಸಾಹತು ಸಂಘರ್ಷಗಳಿದ್ದರೂ ಮುಖ್ಯವಾಗದೆ ಬದುಕನ್ನು ಕಟ್ಟಿಕೊಳ್ಳುವ ಕಡೆ ಹೆಚ್ಚು ಆಸ್ಥೆ ವಹಿಸುತ್ತದೆ. ವಸಾಹತುಕ್ರಿಯೆಗಳ ವಿಭಿನ್ನ ಆಯಾಮದ ಕಡೆ ಹರಿಯುತ್ತದೆ.

    ಈ ಜಾಲ್ಗಿರಿ ಏಕವಸ್ತು, ಏಕವ್ಯಕ್ತಿ ಪ್ರಧಾನವಾದ ಕಾದಂಬರಿಯಲ್ಲ. ಬಹುಬಗೆಯ ಅನುಭವಗಳ ಕಥನ. ಇಲ್ಲೊಂದು ಡೆಮಾಕ್ರಟಿಕ್ ನೆಲೆಯ ವಿಸ್ತರಣೆಯಿದೆ. ಚರಿತ್ರೆಯ ಅಂಶಗಳು ಸಂಶೋಧನಾ ರೀತಿಯಲ್ಲಿ ಕಟ್ಟಿಕೊಂಡಿವೆ. ನೂರು ವರ್ಷಗಳ ಚರಿತ್ರೆ ನಮ್ಮ ಮುಂದೆ ಹಾಸಿದೆ. ಕುಂಪಣಿ, ಅಮಲ್ದಾರ, ಜಮೇದಾರ, ಪಲಾಂಟೆಶನ್ ಇವೆಲ್ಲಾ ಬೆಳೆದು ಬಂದು ಸಮಕಾಲೀನದಲ್ಲಿ ಪಡೆದುಕೊಂಡಿರುವ ಆಯಾಮಗಳನ್ನು ಕ್ರಮಾನುಗತಿಯಲ್ಲಿ ಕಟ್ಟಿದೆ. ಬ್ರಿಟಿಷ್ ವ್ಯವಸ್ಥೆಯಿಂದ ಶುರುವಾಗಿ ಸಮಕಾಲೀನದವರೆಗೂ ಈ ಕಾದಂಬರಿ ಚಾಚಿಕೊಂಡಿದೆ. ಅಮಲ್ದಾರ್ ಮಲ್ಲಪ್ಪನ ಮಾನವೀಯತೆಯ ಗುಣದಿಂದ ಕಾದಂಬರಿ ಆಪ್ತವಾಗಿ ಶುರುವಾಗುತ್ತದೆ. ತಾನು ಅಮಲ್ದಾರನಾಗಿದ್ದರೂ ರೈತನಂತೆ ಗದ್ದೆಗಿಳಿದು ಗೇಯುವ, ಎಲ್ಲರಿಗೂ ಮಿಡಿಯುವ, ಎಲ್ಲರೂ ನೆಮ್ಮದಿಯಿಂದ ಬದುಕಲೆಂದು ಹಂಬಲಿಸುವ, ಚಮ್ಮಾರ ಕೆಂಪೀರ, ಇಬ್ರಾಹಿಂ, ಪೆದ್ದಣ್ಣರಂತಹವರಿಗೆ ಸರ್ಕಾರಿ ಅನ್ನ ಉಣ್ಣುವ ಅವಕಾಶವನ್ನು ಒದಗಿಸಿದ ಮನುಷ್ಯಪ್ರೇಮಿ. ಕೆಲವರಿಗೇ ಮೀಸಲಿದ್ದ ಸರ್ಕಾರಿ ಉದ್ಯೋಗದಂತಹ ಅವಕಾಶಗಳು ಎಲ್ಲರಿಗೂ ತಲುಪಬೇಕೆಂಬ ಡೆಮಾಕ್ರಟಿಕ್ ಆಶಯ ಕಾದಂಬರಿಯ ಆರಂಭದಲ್ಲಿಯೇ ಅಮಲ್ದಾರ್ ಮಲ್ಲಪನ ಮೂಲಕ ಕಾಣುತ್ತದೆ. ಮುಂದುವರಿದು ಕಕ್ಕುಲಾತಿಯ ಗಂಗಣ್ಣ ಮೇಷ್ಟ್ರು, ಮಲ್ಲಪ್ಪ, ಕೆಂಪೀರಪ್ಪ, ಪಲ್ಗುಣಯ್ಯ, ಪುಂಡರೀಕ, ಆಚಾರ್ಯ, ಜಂಬಪ್ಪ, ಗುತ್ತೆಪ್ಪ, ಬಿದಿರಮ್ಮ, ತಾಯ್ತನದ ಲಕ್ಕಮ್ಮ, ಚೆಲುವಮ್ಮ, ರಾವುಲಮ್ಮ, ಮಾಳಮ್ಮ, ಬಾಯಮ್ಮ, ವಿಮಲಾದೇವಿ, ಪ್ರಮೀಳಾದೇವಿ.. ಹೀಗೆ ಮಾನವೀಯತೆಯ ಹನಿಯನ್ನು ಹೊತ್ತು ಅನೇಕ ಪಾತ್ರಗಳು, ಅದರಲ್ಲೂ ಮಹಿಳಾ ಪಾತ್ರಗಳು ಸಾಗಿಸುವ ಜೀವಸಂಜೀವಿನಿ ಈ ಕಥನ. ಮಾನವೀಯ ಲೋಕದಲ್ಲಿ ಉಳಿಯಬೇಕಾದ ಜೀವಸ್ಪುರಣವನ್ನು ಈ ಜಾಲ್ಗಿರಿ ತಲುಪಿಸುತ್ತದೆ.

    ವಸಾಹತು ನೆಲೆಯ ಮುಖ್ಯಕ್ರಿಯೆ ಮತಾಂತರ ಇಲ್ಲಿ ಕ್ವಚಿತ್ತಾಗಿ ಬಂದಿದ್ದರೂ ಅದು ಸಂಘರ್ಷವಲ್ಲ. ಮತಾಂತರ ಬಿಡುಗಡೆಯ ಅನಿವಾರ್ಯ ಅಥವಾ ಒಪ್ಪಿಗೆ ಆಗಿರಬಹುದು. ಇನ್ನೂ ಕೆಲವೊಮ್ಮೆ ಕಾಲಕ್ಕೆ ನಡೆಯುವ ಸಾಮಾನ್ಯ ಕ್ರಿಯೆಯೂ ಇರಬಹುದು. ದಮನಿತ ಸಮುದಾಯದೊಳಗೆ ನಡೆಯುವ ಈ ಮತಾಂತರ ಸ್ಥಳೀಯ ಬದುಕನ್ನು ಪ್ರತಿರೋಧಿಸುವ ರೀತಿಯಂತೆ ರೂಪುಗೊಂಡಿಲ್ಲ. ಆದರೆ ತಮ್ಮ ಶೋಷಣಾ ಬದುಕಿನಿಂದ ಬಿಡುಗಡೆಗೊಳ್ಳಲು, ಅವಮಾನಗಳಿಂದ ಹೊರಬರಲು ಪ್ರಮುಖ ದಾರಿಯಂತೆ ಕಾಣುತ್ತದೆ. ಮರಿಯಪ್ಪನ ಮಗ ಜವರಪ್ಪ ಮೈಕಲ್ ಜಾನ್ಸನ್ ಆಗಿ, ಮರಿಗೆಮ್ಮ ಮೇರಿಯಮ್ಮ ಆಗಿ, ಪುಟ್ಟಪ್ಪ ಪ್ಯಾಟ್ರಿಕ್, ಲಲಿತ ಲೂರ್ದಮ್ಮ, ಬಸವ ಬೆಂಜಮಿನ್…. ಹೀಗೆ ಸಾಗುತ್ತದೆ. ಈ ಮತಾಂತರದ ಕ್ರಿಯೆ ದಲಿತರ ಬಾಳಿನಲ್ಲಿ ಉಂಟುಮಾಡಿರುವ ಬದಲಾವಣೆಯನ್ನು ಈ ಕಾದಂಬರಿ ಚರ್ಚಿಸುತ್ತದೆ. ಆರ್ಥಿಕ ಬದುಕು ಹಸನಾದರೂ, ಶಿಕ್ಷಣ ಪಡೆದು ಉನ್ನತ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗೇರಿದರೂ ಸಾಮಾಜಿಕ ಬದುಕು ಮಾತ್ರ ಅದೇ ರೀತಿ ಇರುವ ಭಾರತೀಯ ಮನಸ್ಸನ್ನು ಜಾಲ್ಗಿರಿ ಸೂಕ್ಷ್ಮವಾಗಿ ಚಿತ್ರಿಸುತ್ತದೆ. ‘ಈ ಮಾರಾಯ್ನ್ ಮೂಲ ಮೆಟ್ಟೊಲಿಯೊ ಕುಲ ಕಸುಬು ಎಂದು ಹೇಳುವರಲ್ಲ! ತಾನೂ ಮೆಟ್ಟೊಲೆದು ಹೊಟ್ಟೆ ಹರ್ಕಪಳ್ತಿದ್ರಲ್ಲ !’ (62) ತನ್ನ ದಮನಿತ ಜಾತಿಯ ಬೇರನ್ನು ಕಡಿದುಕೊಂಡಿದ್ದರೂ ಕಡುಕಪ್ಪಾದ ಮೈಕಲ್ ಜಾನ್ಸನ್ ನ್ನು ಅವನ ಮೂಲ ಜಾತಿಯಲ್ಲಿಯೇ ಈ ಜಾತಿ ವ್ಯವಸ್ಥೆ ಗುರುತಿಸುತ್ತದೆ. ಆ ಸಂಕಟಕ್ಕಾಗಿ ಮೈಕಲ್ ಸದಾ ಕೋಪಿಷ್ಟನಾಗಿ ಎಲ್ಲರನ್ನೂ ಅನುಮಾನದಿಂದ ನೋಡುತ್ತಾನೆ. ಇಲ್ಲೆಲ್ಲಾ ಕೀಳಿರಿಮೆಯಿಂದ ನರಳುವ ಮತಾಂತರಗೊಂಡ ದಲಿತರ ಸಂಕಟಗಳು ಎದುರಾಗುತ್ತವೆ. ಇದು ಕಾದಂಬರಿಯಲ್ಲಿ ಪ್ರಮುಖಧಾರೆಯಾಗೇನು ಬಂದಿಲ್ಲ ನಿಜ. ಆದರೆ ಸಣ್ಣ ಎಳೆ ಮತಾಂತರಗೊಂಡ ದಲಿತರ ಸಂಕಟಗಳನ್ನು ವಿಶ್ಲೇಷಿಸುತ್ತದೆ.

    ಇದೊಂದು ಐತಿಹ್ಯಗಳ ಆಗರ. ಸ್ಥಳೀಯ ನೆಲೆಗಳನ್ನು ಐತಿಹ್ಯದ ಮೂಲಕ ಕಟ್ಟಿದೆ. ಅಪಾರವಾದ ಐತಿಹ್ಯಗಳು ಕತೆಯನ್ನಷ್ಟೇ ಹೇಳದೆ ಚಾರಿತ್ರಿಕ ಮಹತ್ವವನ್ನು ವಿಸ್ತರಿಸುತ್ತವೆ. ಹಾಗಾಗಿ ಈ ಕಾದಂಬರಿ ಕಥನವಷ್ಟೇ ಅಲ್ಲ. ಚರಿತ್ರೆಯನ್ನು ಶೋಧಿಸುವ ಸಂಶೋಧಕರಂತೆ ಸಾಗುತ್ತದೆ. ಕತೆ ಎನ್ನುವುದು ನೆಪಮಾತ್ರ. ಇಡೀ ಪ್ರದೇಶವೇ ಕೂತು ತನ್ನ ಕತೆಯನ್ನು ಮುನ್ನಡೆಸುತ್ತದೆ. ಪುರಾಣ, ನಂಬಿಕೆ, ಆಚರಣೆ, ಚರಿತ್ರೆ, ಐತಿಹ್ಯ ಇವೆಲ್ಲವೂ ಒಟ್ಟಾಗಿ ಸೇರಿ ಕಳೆದ ನೂರು ವರ್ಷಗಳಿಂದೀಚೆಗೆ ಸಂಭವಿಸಿರುವ ವಿಪ್ಲವಗಳು, ಸ್ಥಿತ್ಯಂತರಗೊಳ್ಳುತ್ತಿರುವ ಹಳ್ಳಿಗಳ ಕಥನವಾಗಿ ಹರಡಿಕೊಂಡಿದೆ. ಆಧುನಿಕತೆಯನ್ನು ಎದುರುಗೊಳ್ಳುವ ಆರಂಭಿಕ ತಲೆಮಾರಿನ ಆತಂಕಗಳು, ಅನಿವಾರ್ಯವಾಗಿ ಒಳಗೊಳ್ಳುವ ಸಂಕಟಗಳು, ಕೊನೆಗೆ ತಮ್ಮದಾಗಿಸಿಕೊಳ್ಳುವ ಛಲಗಾರಿಕೆ.. ಇವೆಲ್ಲ ಕಾದಂಬರಿಯ ಕಾಲವನ್ನು, ಸ್ಥಳವನ್ನು ಮೀರಿ ಕಾಲಾತೀತವಾಗಿಸುತ್ತವೆ. ವಸಾಹತುಶಾಹಿಗೆ ತನ್ನ ಮೂಲವನ್ನು ಕಳೆದುಕೊಳ್ಳಲಾಗದ, ಹೊಸದನ್ನು ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾದ ಸ್ಥಿತಿಯನ್ನು ಈ ಕಥನ ಆಪ್ತವಾಗಿ ಒಪ್ಪಿಸುತ್ತದೆ. ಈ ಬದಲಾವಣೆ ಕಾಲದ ತುರ್ತೋ? ಕಳೆದುಕೊಳ್ಳಬೇಕಾದ ಅನಿವಾರ್ಯತೆಯೋ? ಆಗಿರಬಹುದು. ಇಂಥೆಲ್ಲಾ ಚರ್ಚೆಗಳನ್ನು ಒಣಸಿದ್ಧಾಂತದ ನೊಗಕ್ಕೆ ಕಟ್ಟದಿರುವುದರಿಂದ ಈ ಕಥನ ನೂರು ವರ್ಷಗಳ ಯಾವುದೇ ನಾಡಿನ, ದೇಶದ, ನೆಲದ ಕಥನವಾಗಿ ಓದುಗರ ಮನಸ್ಸಿಗಿಳಿಯುತ್ತದೆ.

    ಇಲ್ಲಿ ಬರುವ ಕಮಲಪುರ, ಕಾಡುಮಲ್ಲಿಗೆ, ಟುಮಕಿಪುರ, ಜಾಲ್ಗಿರಿ, ಸಿದ್ದರನಾಡು, ನಾಮದ ಚಿಲುಮೆ, ಚೆನ್ನಂಗಿದುರ್ಗ, ಕುರನ್ಗರಾಯನ ಪ್ರದೇಶ, ಧಾರವಾಡ, ಕರೆಕಲ್ಲಟ್ಟಿ, ತಿಗಳರಪಾಳ್ಯ, ಶೆಟ್ಟಳ್ಳಿ, ಕೆಂಪಾಪುರ, ಗೊಲ್ಲೇರಿ, ಗೋಪನಳ್ಳಿ, ಸುಣಕಲರಪಾಳ್ಯ, ಕೋತಿಮರದಟ್ಟಿ, ಓಬಳದೇವರಹಟ್ಟಿ, ಲಂಬಾಣಿ ತಾಂಡ, ಉತ್ತಂಗಿ, ಮುತ್ತಂಗಿ, ಕಂಕಣಪಾಳ್ಯ, ಕೋತಿತೋಪು, .. ಹೀಗೆ ಹಳ್ಳಿಗಳೇ ಟುಮಕಿಪುರದ ಕಥನವನ್ನು ಹೆಣೆಯುತ್ತವೆ. ಹೆಸರುಗಳು ಒಂದು ಸ್ಥಳೀಯ ನೆಲವನ್ನು ಸೂಚಿಸುವಂತೆ ಮೇಲ್ನೋಟಕ್ಕೆ ಕಂಡರೂ ಜಗತ್ತಿನ ಯಾವ ಮೂಲೆಯಲ್ಲಿಯೂ ನಡೆಯುತ್ತಿರುವ/ಎದುರಿಸುತ್ತಿರುವ ಸಂಕಟಗಳ ಭಾಗವಾಗಿ ನಿಲ್ಲುತ್ತದೆ. ಊರಹೆಸರುಗಳೇ ರೂಪಕವಾಗಿ ಕೈ ಹಿಡಿದು ಕರೆದೊಯ್ಯತ್ತವೆ. ಇಲ್ಲಿನ ಹಳ್ಳಿಚಿತ್ರಗಳ ಮೂಲಕ ಗೆರೆಹಾಕಿಕೊಳ್ಳುತ್ತ ಹೋದರೆ ಇಡೀ ಗ್ರಾಮಭಾರತದ ಚಿತ್ರ ಅನಾವರಣವಾಗುತ್ತದೆ. ಇದರಿಂದಾಗಿ ಈ ಕಥನಕ್ಕೆ ಜಿಯಾಗ್ರಫಿಕಲ್ಲಾದ ಗುಣ ಒದಗಿದೆ. ಜಾಲ್ಗಿರಿಯಿಂದ ಪ್ರಾರಂಭಿಸಿ ಅದು ಧಾರವಾಡ, ವಿವೇಕಪುರ, ಚೆನ್ನಂಗಿದುರ್ಗ, ಕಮಲಪುರ, ಕೆಂಪಾಪುರ, ತಿಗಳರಪಾಳ್ಯ, ಟುಮಕಿಪುರ.. ಹೀಗೆಲ್ಲಾ ಭೌಗೋಳಿಕ ನೆಲೆಗಳನ್ನು ಈ ಕಥನ ಎದುರುಗೊಳ್ಳುತ್ತದೆ; ಒಳಗೊಳ್ಳುತ್ತದೆ. ಭೌಗೋಳಿಕ ಎಲ್ಲೆಗಳನ್ನು ಕಟ್ಟಿಕೊಳ್ಳುವುದೆಂದರೆ ಅದರೊಳಗಿನ ಸಂಸ್ಕೃತಿಗಳನ್ನು, ಜೀವಕಳೆಗಳನ್ನು ಕಟ್ಟಿಕೊಳ್ಳುತ್ತಲೇ ಸಾಂಪ್ರದಾಯಿಕ ಗೆರೆಗಳನ್ನು ದಾಟಲು ಪ್ರಯತ್ನಿಸುವುದು ಎಂದೆನಿಸುತ್ತದೆ. ಹಾಗಂತ ವಸಾಹತುರೂಪಿಯಾದ ಯಾಂತ್ರಿಕ ಜಿಯಾಗ್ರಫಿಕಲ್ ನೋಟ ಇಲ್ಲಿಲ್ಲ. ಇಲ್ಲಿನ ಜಿಯಾಗ್ರಪಿಕಲ್‌ಗೂ ಭಾವವಿದೆ. ಮಿಡಿಯುವ ಗುಣವಿದೆ.

    ಜಾಲ್ಗಿರಿಯೊಳಗೆ ಇನ್ನೊಂದು ಅಂಶವೂ ಇದೆ. ಜೀವವಿಲ್ಲದ ಜಿಯಾಗ್ರಫಿಕ್ ರೂಪಿಯಾದ ವಸಾಹತುಶಾಹಿಯೂ, ಜೀವರೂಪಿಯಾದ ಜೀವಿಗಳ ಗ್ರಾಮ್ಯಭಾರತ ಇಲ್ಲಿ ಮುಖಾಮುಖಿಯಾಗುತ್ತವೆ. ಜೀವಿಗಳ ಬದುಕನ್ನು ಕಟ್ಟಲು ಈ ಗ್ರಾಮ್ಯಭಾರತ ಹಂಬಲಿಸುತ್ತದೆ. ಅದಕ್ಕಾಗಿ ಗಡಿಗಳನ್ನು ದಾಟಿ ಹರಿಯುತ್ತದೆ. ಹಾಗೇ ಹರಿಯುತ್ತ ತನ್ನೆದುರಿಗಿನ ವಸಾಹತು ಹಲ್ಲೆಗಳನ್ನು ಪ್ರತಿರೋಧಿಸುತ್ತಲೇ ತನ್ನ ನೆಲೆಗಳ ತಂತುಗಳನ್ನು ಕೂಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುತ್ತಿರುತ್ತದೆ. ಆದರೆ ವಸಾಹತುಶಾಹಿ ನೆಲೆ ಬದುಕನ್ನು ಕೃತಕವಾದ ಯಾಂತ್ರಿಕ ದಾರಗಳಿಂದ ಹೊಸೆಯುತ್ತಿರುತ್ತದೆ. ಅದರ ಎಳೆಗಳು ಯಾವುದೋ ಕಾಣದ ಲೋಕದವಾಗಿರುತ್ತವೆ. ಟುಮಕಿಪುರದಂತಹ ಬದುಕುಗಳು ಬಾಳನ್ನು ಕಟ್ಟಿಕೊಳ್ಳುವುದು ತಮ್ಮ ಕುಲಮೂಲೀಯ ನೆನಪುಗಳಿಂದ. ಆಚರಣೆಗಳ ಮೂಲಕ. ಕುಲಸ್ಮೃತಿ, ಕುಲವಿಜ್ಞಾನ, ಕೌಶಲಗಳನ್ನು ಜತನದಿಂದ ಕಾಪಾಡಿಕೊಳ್ಳುವ ಗುಣ ಇಂಥ ಸ್ಥಳೀಯ ನೆಲೆಗಳಿಗಿರುತ್ತವೆ. ಅದು ಕೂಡಿಕೊಳ್ಳುವ ಮತ್ತು ಪೊರೆಯುವಂಥ ಬಹುದೊಡ್ಡ ಗುಣವನ್ನು ಧರಿಸಿರುತ್ತವೆ. ಹಾಗಾಗಿಯೇ ಬಿದಿರಮ್ಮ, ಮಾಳಮ್ಮ, ರಾವುಲಮ್ಮ, ಲಕ್ಷಮ್ಮ, ಪುಟ್ಟಮ್ಮ, ನರಸಮ್ಮ, ಪ್ರಮಿಳಾದೇವಿ, ವಿಮಲಾದೇವಿ, ಶಕುಂತಲಾ ಇಂಥವುಗಳೆಲ್ಲ ಬದುಕಿನ ಪ್ರೀತಿಗಾಗಿ ಹಂಬಲಿಸುವುದರಿಂದ ಗಡಿಸೀಮೆಗಳನ್ನೇ ದಾಟುತ್ತವೆ. ಅಷ್ಟೇಅಲ್ಲ ತಮ್ಮೊಳಗೆ ಭಾವುಕ ಬದುಕನ್ನು ಕಟ್ಟುತ್ತವೆ. ನಾವು ಕಳೆದುಕೊಂಡಿರುವ ಭಾವುಕ ಪ್ರಪಂಚವನ್ನು ನಮ್ಮ ಮುಂದೆ ನಿಲ್ಲಿಸುತ್ತವೆ. ಮಹಿಳಾಲೋಕದೊಳಗೆ ಇರುವ ಸೀಮೆಗಳನ್ನು ದಾಟಿದ, ಹೊಸಬದುಕಿಗಾಗಿ ಹಂಬಲಿಸುವ, ಲೋಕದ ತಲ್ಲಣಗಳಿಗೆ ಪ್ರತಿಕ್ರಿಯಿಸುವ, ತಮ್ಮ ಪ್ರೀತಿಯ ಲೋಕಕ್ಕೆ ಚ್ಯುತಿಬಂದೆಂತೆನಿಸಿದಾಗ ಪ್ರತಿರೋಧ ಒಡ್ಡುವ ಛಾತಿಯನ್ನು ಇವು ತಮ್ಮ ಒಡಲಲ್ಲಿಟ್ಟುಕೊಂಡಿವೆ.

    ಮೂರನೇ ಜಗತ್ತಿನ ರಾಷ್ಟ್ರಗಳಿಗೆ ವಸಾಹತುಶಾಹಿ ಕೊಟ್ಟ ಬಹುಮುಖ್ಯ ಕೊಡುಗೆಯೆಂದರೆ ಸ್ಥಳೀಯರನ್ನು ಒಕ್ಕಲೆಬ್ಬಿಸಿದ್ದು; ನೆಲೆ ಇಲ್ಲವಾಗಿಸಿದ್ದು. ಜೀವನ ಪ್ರೀತಿಯಿದ್ದವರಿಗೆ ಹೊಸದನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದ್ದು. ಈ ಕಥನದಲ್ಲಿಯೂ ಹೊಸನೆಲೆಯ ಹುಡುಕಾಟವೇ ಮುಖ್ಯವಾದ ನಡೆಯಾಗಿದೆ. ಆರಂಭದಲ್ಲಿ ಕುಂಪಣಿ ಸರ್ಕಾರದ ಪ್ರತಿನಿಧಿ ದೇಸಾಯಿ ಎಲ್ಲವನ್ನು ನುಂಗಿಕೊಂಡು ತಾನು ಕಾಲ್ತೆಗೆಯುವ ಮುನ್ನ ಧಾರವಾಡದ ಪಲ್ಗುಣಯ್ಯನಿಗೆ ಕಮಲಪುರ ಪ್ರಾಂತ್ಯದಲ್ಲಿ ನೆಲೆ ಕಲ್ಪಿಸುವುದು. ಸ್ಥಳಿಯ ಜಾಲ್ಗಿರಿ ನೆಲದವರು ನೆಲಹುಡುಕಿಕೊಂಡು ಇತರೆಡೆ ಅಲೆಯುವುದು. ಹಾಗಾಗಿಯೇ ಇಲ್ಲಿ ಊರುಗಳನ್ನು, ನೆಲೆಗಳನ್ನು ತಮ್ಮದೇ ಆಂತರಿಕ ಜಗತ್ತಿನ ಮೂಲಕ ಕಟ್ಟಿಕೊಳ್ಳುವುದು ವಿಶೇಷವಾಗಿದೆ. ಕೊನೆಯ ಭಾಗದಲ್ಲಿ ಹಳ್ಳಿಯಿಂದ ಬರುವ ಅಸಹಾಯಕ ಹೆಣ್ಣುಮಕ್ಕಳಿಗಾಗಿ ನೆಲೆ ಕಲ್ಪಿಸಲು ಪ್ರಮೀಳಾದೇವಿ, ವಿಮಲದೇವಿ, ಶಕುಂತಲದೇವಿ, ಲಿಂಗಪ್ಪ, ಸೋಮೇಗೌಡರು ರೂಪಿಸಿದ ‘ಮಹಾದೇವಿ ವಿದ್ಯಾರ್ಥಿನಿ ನಿಲಯ’, ‘ಭದ್ರಮ್ಮ ಕಲ್ಯಾಣ ಮಂಟಪ’ಗಳು. ಅವರ ಕಾಲಾನಂತರದಲ್ಲಿ ಈ ನೆಲೆಗಳೆಲ್ಲಾ ಅವಕಾಶವಾದಿಗಳ ಕೈಗೆ ಸಿಕ್ಕಿ ಅಸಹಾಯಕರ ನೆಲೆಯನ್ನು ಕಳೆಯುವ ಆಧುನಿಕರೂಪಕವಾಗಿ ಜಾಲ್ಗಿರಿ ಕೊನೆಗೊಳ್ಳುತ್ತದೆ.

    ಮೂರ್ನಾ ಲ್ಕು ತಲೆಮಾರಿನ ಏದುಸಿರು, ಕಟ್ಟುಬ್ಬುಸ, ಸಂಕಟ, ಸಂಕೋಲೆ, ಗಡಿದಾಟಿದ ಸಾಧನೆ, ಮಮಕಾರ ಪ್ರೀತಿ, ಮತ್ಸರ, ಸರಳವಾದ ಬದುಕಿಗೆ ಹುಡುಕಾಟ, ಮಾನವೀಯ ಸೆಳೆತಗಳ ಹೆಣಿಗೆಯಾಗಿ ಜಾಲ್ಗಿರಿ ಕಥನ ಸಾಗುತ್ತದೆ. ಇದರ ಜೊತೆಗೆ ಸ್ಥಳೀಯ ಸಂಕಟಗಳು, ಮತಾಂತರ ಕ್ರಿಯೆಗಳು, ಬ್ರಾಹ್ಮಣ ಬದುಕು, ಮಹಿಳಾ ದೌರ್ಜನ್ಯಗಳು, ಪ್ರೇಮ-ಕಾಮಗಳು, ಅಪ್ಪಿಕೊಳ್ಳುವ ಆಪ್ತಮನಸುಗಳು ಕಿಕ್ಕಿರಿದಿವೆ. ಹಾಗಾಗಿ ಇದು ನೂರು ವರ್ಷಗಳ ಸಮುದಾಯ ಕಥನವಾಗಿದೆ. ನೆಲದ ಬದುಕಿನ ಸಂತಸ, ಸಂಭ್ರಮ, ಸಂಕಟ, ಆಕ್ರಂದನ, ಆರಾಧನಾ, ಆಚರಣೆ, ಹೆಣ್ಮಕ್ಳು ಅನುಭವಿಸಿದ ಯಾತನೆ ಇವೆಲ್ಲವೂ ಒಟ್ಟಿಗೆ ಸೇರಿ ಸಮ್ಮಿಶ್ರಭಾವಗಳನ್ನು ಮೂಡಿಸುತ್ತದೆ. ಕೇರಿಯಿಂದ ಶುರುವಾಗಿ ಇತರ ಲೋಕವನ್ನು ಒಳಗೊಳ್ಳುವ ಗುಣವನ್ನು ದಕ್ಕಿಸಿಕೊಂಡು ಜಾಲ್ಗಿರಿ ಮುನ್ನಡೆಯುತ್ತದೆ.

    ದಲಿತ ಕಥನಗಳು ತಮ್ಮ ಕೇರಿಯನ್ನು ದಾಟಲಾಗಿಲ್ಲ ಎಂಬ ಆರೋಪ ವಿಮರ್ಶಾವಲಯದಲ್ಲಿ ಆಗಿಗ್ಗೆ ಕೇಳಿಬರುತ್ತದೆ. ಇನ್ನು ಎಷ್ಟು ದಿನ ಅದೇ ಶೋಷಣೆ, ದಬ್ಬಾಳಿಕೆ ಬಗೆಗೆ ಬರೆಯುತ್ತೀರಾ? ಅದೇ ಕೇರಿ, ಅದೇ ಹೊಲಸು, ಬಾಡು, ವಾಸ್ನೆ ಇವುಗಳಾಚೆಗೆ ದಲಿತ ಕಥನಗಳು ಹೊರಬರಲು ಹೆಣಗುತ್ತಿವೆ ಎಂಬ ಕುಹಕ ವಿಮರ್ಶೆ ದಲಿತ ಸಾಹಿತ್ಯದ ಬಗೆಗಿನ ಅಸಹನೆಯನ್ನು ತೋರಿಸುತ್ತದೆ. ಈ ಅಸಹನೆಯ ವಿಮರ್ಶೆಗೆ ಉತ್ತರ ನೀಡುವ ರೀತಿಯಲ್ಲಿ ಈ ‘ಜಾಲ್ಗಿರಿ’ ಕಾದಂಬರಿಯಿದೆ. ಕೇರಿಯನ್ನು ಒಳಗೊಂಡು ಕೇರಿಯಾಚೆಗಿನ ಅನುಭವಗಳಿಂದ ಈ ಜಾಲ್ಗಿರಿ ಸಮಾಜ ಶಾಸ್ತ್ರೀಯ ಮತ್ತು ಮಾನವಶಾಸ್ತ್ರೀಯ ನೆಲೆಗಳನ್ನು ಗರ್ಭೀಕರಿಸಿಕೊಂಡಿದೆ. ಸಂಸ್ಕೃತಿ ಅಧ್ಯಯನಕ್ಕೆ ಬಹುಮುಖ್ಯ ಆಕರಗಳನ್ನು ಈ ಕಾದಂಬರಿ ಒದಗಿಸುತ್ತದೆ. ಜಾತಿಕುರಿತಾದ ಸಂಸ್ಕೃತಿನೆಲೆಗಳು ಕೇವಲ ಕೆಳಜಾತಿಗಳಿಗೆ ನಿಲ್ಲದೇ ಎಲ್ಲ ಜಾತಿಗಳ ಮಾನವೀಯ ನೆಲೆಯನ್ನು ಹುಡುಕಲೆತ್ನಿಸುತ್ತದೆ. ಹಾಗೇ ನೋಡಿದರೆ ಮೇಲ್ನೋಟಕ್ಕೆ ದಲಿತ ನೆಲೆಯ ಕಾದಂಬರಿ ಎಂಬಂತೆ ಕಂಡರೂ ಆಂತರ್ಯದಲ್ಲಿ ಸಮುದಾಯಗಳ ಕೂಡುವಿಕೆಯ ಕಥನವಾಗಿದೆ. ಜಾಲ್ಗಿರಿ ಕುಲತೊಂಭತ್ತು ಜಾತಿಗಳ ಕಥನ.

    ಇದೊಂದು ಹಳ್ಳಿಗಳ ಕಥನ. ಸಂಶೋಧನೆಯ ರೂಪವಾಗಿ, ಸಾಂಸ್ಕೃತಿಕ ಪಳೆಯುಳಿಕೆ ಭಾಗವಾಗಿ ಹರಡಿಕೊಂಡಿದೆ. ಸಾಮಾಜಿಕ ಸಂಕಥನವಾಗಿ, ಸ್ಥಿತ್ಯಂತರಗಳ ಹುಡುಕಾಟವಾಗಿ ಕಟ್ಟಿಕೊಂಡಿದೆ. ಪಾತ್ರಗಳೇ ಜಾಲ್ಗಿರಿಯನ್ನು ಪೋಣಿಸುವ ಮಾಲೆಯಾಗಿ, ತಲೆಮಾರುಗಳ ಕೂಡುವಿಕೆಯ ರೂಪವಾಗಿ ಅನಾವರಣಗೊಂಡಿದೆ. ಜಾತಿಜಾತಿಗಳೊಳಗೆ ಇರುವ ಆಂತರಿಕ ಭಾವುಕತೆಯನ್ನು ಆಪ್ತವಾಗಿ ವರ್ಣಿಸುವ ರೂಪಿಯಾಗಿದೆ. ಬ್ರಿಟಿಷ್ ಆಡಳಿತದ ನಂತರದ ಹಳ್ಳಿಗಳ ಅವಸ್ಥೆ, ಹಳ್ಳಿಗಳಿಂದ ನಗರಕ್ಕೆ ಬಂದೊದವರ ಬದುಕು, ಸ್ವಾಭಿಮಾನದ ಅಭಿವ್ಯಕ್ತಿ ಎಲ್ಲವೂ ಒಟ್ಟಾಗಿ ಸೇರಿ ಈ ಕಥನವನ್ನು ಮುನ್ನಡೆಸಿವೆ. ಏಕಕೇಂದ್ರೀತ ನೆಲೆಯನ್ನು ಒಡೆದು, ಹಟ್ಟಿ, ಕೇರಿ, ಹಳ್ಳಿಗಳನ್ನು ದಾಟಿಕೊಂಡು ನೀರಿನಂತೆ ಹರಿಯುತ್ತದೆ. ನೀರು ಈ ಕಾದಂಬರಿಯಲ್ಲಿ ಅನೇಕ ಬಾರಿ ರೂಪಕವಾಗಿಯೂ ಕಟ್ಟಿಕೊಂಡಿದೆ. ಸ್ಥಾವರದ ಜಗತ್ತನ್ನು ನಿರಾಕರಿಸಿ ಸಾಗುವ ಗುಣದಿಂದ ಓದುಗರಿಗೆ ಆಪ್ತವೆನಿಸುತ್ತದೆ. ಅಪಾರವಾದ ಗಾದೆಗಳು, ಸ್ಥಳೀಯ ನುಡಿಗಟ್ಟುಗಳು, ಪ್ರದೇಶಗಳು, ಆಚರಣೆಗಳು, ಜೋಗಿ ಸಂಪ್ರದಾಯಗಳು, ಮಠದಯ್ಯರ ನೆನಪುಗಳು, ಕಾಲಾಂತರದಲ್ಲಿ ಕಳೆದುಹೋಗುತ್ತಿರುವ ದಲಿತ ಆಧ್ಯಾತ್ಮದ ಸುಳಿಗಳು- ಇವೆಲ್ಲಾ ಓದುಗರನ್ನು ಬೆರಗುಗೊಳಿಸುತ್ತವೆ; ಸೋಜಿಗ ಹುಟ್ಟಿಸುತ್ತವೆ. ಇವುಗಳಿಂದ ಕಾದಂಬರಿಯನ್ನು ಇನ್ನೊಂದು ಲೋಕವಾಗಿಯೂ ಕಟ್ಟಿಕೊಳ್ಳಬಹುದು. ಮೈಮರೆತು ಕಾದಂಬರಿ ಜಗತ್ತಿನೊಳಗೆ ಲೀನವಾಗುವಂತೆ ಭಾಷೆ ಹದಗೊಂಡಿದೆ. ಜಾಲ್ಗಿರಿಯನ್ನು ಓದಿ ಮುಗಿಸಿದಾಗ ಅದರೊಳಗಿನ ಭಾಷೆಯ ಪಸೆ ನಾಲಗೆ ಮೇಲೆ ಹಾಗೇ ಅಂಟಿಕೊಳ್ಳುತ್ತದೆ. ಸವಿಯನ್ನು ಮತ್ತೆ ಮತ್ತೆ ಮೆಲುಕುಹಾಕಿಸುತ್ತದೆ. ಭಾಷೆ ನುಡಿಗಟ್ಟುಗಳ ಮೂಲಕ ಈ ಕಥನ ಮತ್ತಷ್ಟು ಶ್ರೀಮಂತವಾಗಿದೆ.

    ಈ ‘ಜಾಲ್ಗಿರಿ’ ಗ್ರಾಮ್ಯಭಾರತ, ಆಧುನಿಕತೆ ಎದುರುಗೊಳ್ಳುವ ತವಕತಲ್ಲಣಗಳು, ಹಾಸುಹೊದ್ದಿರುವ ಪಾತ್ರಗಳು, ಅನುಭವಗಳು, ಸರಳವಾದ ನಿರೂಪಣೆ, ಕೌತುಕ, ಕಾತುರ, ಅನುಭವಗಳನ್ನು ತಬ್ಬಿಕೊಳ್ಳುವ ಉಮೇದು ಓದುಗನಿಗೆ ಹುಟ್ಟಿಸುತ್ತದೆ. ಈ ಕಥನದ ನಿರೂಪಣ ಕ್ರಮವೇ ವಿಶಿಷ್ಟವಾದುದು. ಪ್ರತಿ ಅಧ್ಯಾಯಗಳೇ ಒಂದೊಂದು ಬಿಡಿಕತೆಗಳಾಗಿಯೂ ನಿಲ್ಲುತ್ತವೆ. ಹಾಗೆಯೇ ಹಿಡಿಯಾಗಿಯೂ ಕೂಡಿಕೊಳ್ಳುವ ಗುಣವನ್ನು ಧರಿಸಿದೆ. ಆಂತರಿಕ ಸಾಂಗತ್ಯವೇ ಕಥನವನ್ನಾಗಿಸಿದೆ. ಈ ಮಾದರಿಯ ಬರಹ ಈ ಕಾಲಕ್ಕೆ ವಿಶಿಷ್ಟವಾದುದು. ವ್ಯಕ್ತಿ ಕುರಿತಾದ ಈ ತರದ ಕಥನಗಳು ಇವೆ. ಖಲೀಲ್ ಗಿಬ್ರಾನ್ ಅವರ ‘ದ ಸನ್ ಆಫ್ ಮ್ಯಾನ್’ ಮಾದರಿಯಂತೆ ಈ ಕಥನ ಕಟ್ಟಿಕೊಂಡಿದೆ. ಕ್ರಿಸ್ತನ ಸಮಕಾಲೀನರು ಕ್ರಿಸ್ತನ ಬಗ್ಗೆ ಹೇಳಿರಬಹುದಾದಂತೆ ಖಲೀಲ್ ಗಿಬ್ರಾನ್‌ನ ಕೃತಿ ರಚನೆಗೊಂಡಿದೆ. ಕನ್ನಡದಲ್ಲೂ ಈ ತರದ ಪ್ರಯೋಗಗಳಾಗಿವೆ. ಪ್ರಭುಶಂಕರರ ‘ಬೆರಗು’ ಕೃತಿ ಬಸವಣ್ಣವನರ ಸಮಕಾಲೀನರು ಬಸವಣ್ಣನನ್ನು ಕಂಡಂತೆ ಕಟ್ಟಿಕೊಟ್ಟಿದ್ದಾರೆ. ಎಚ್.ಎಸ್. ಶಿವಪ್ರಕಾಶರ ‘ಮಹಾಚೈತ್ರ’ವು ಈ ಸ್ವರೂಪದಲ್ಲಿಯೇ ಕಟ್ಟಿಕೊಂಡಿರುವ ನಾಟಕ. ಪ್ರಸ್ತುತ ‘ಜಾಲ್ಗಿರಿ’ ಇದೇ ರೂಪದ ನಿರೂಪಣೆಯ ಮಾದರಿಯನ್ನು ಆಧರಿಸಿದೆ. ಅಂದರೆ ಇಡೀ ಪ್ರದೇಶವೇ ತನ್ನ ಕತೆಯನ್ನು ನಿರೂಪಿಸುವುದು ಇದರ ವೈಶಿಷ್ಟ್ಯ. ವ್ಯಕ್ತಿಗಳ ಮೂಲಕ ಕಟ್ಟುವ ನೆಲೆಯನ್ನು ದಾಟಿ, ಪ್ರದೇಶಗಳು ತಮ್ಮ ಕತೆಯನ್ನು ಹೇಳುತ್ತಾ ಇಡೀ ಗ್ರಾಮಭಾರತವೇ ಮಾತನಾಡುತ್ತದೆ. ವಿಭಿನ್ನ ತರಾವರಿ ಪಾತ್ರಗಳು, ಪ್ರದೇಶಗಳು ಕಮಲಪುರವನ್ನು ಕಟ್ಟಿಕೊಡುವಂತೆ ಜಾಲ್ಗಿರಿ ಹೆಣೆದುಕೊಂಡಿದೆ.

    ಜಾಲ್ಗಿರಿ ಕಥನ ಸಂಘರ್ಷದ ಕಥನವಲ್ಲ. ಕೂಡುಕಥನ. ಸಂಘರ್ಷಗಳು ನಡೆದರೂ ಈ ಕಾದಂಬರಿಯ ಆಂತರ್ಯದ ಆಶಯ ಕೂಡಿಕೆ. ಹಾಗಾಗಿಯೇ ಇಲ್ಲಿ ಎಲ್ಲವನ್ನು ಕೂಡಿಸಬೇಕೆಂಬ ಹಂಬಲವಿದೆ. ಜಾತಿ ಮೀರಿದ, ಧರ್ಮ ಮೀರಿದ ಅಷ್ಟೇ ಅಲ್ಲದೇ ಲಿಂಗಾತೀತವಾದ ಮನಸುಗಳ ಕೂಡುವಿಕೆ ಇದೆ. ಕಾದಂಬರಿಯೊಳಗೆ ಬರುವ ಗೋಡೆಬಸ್ಸು ಪ್ರದೇಶ ಪ್ರದೇಶಗಳನ್ನೆಲ್ಲವನ್ನು ಕೂಡಿಸಿಕೊಂಡು ಸಾಗುವುದು ಕಾದಂಬರಿಯ ಆಶಯಕ್ಕೆ ರೂಪಕವಾಗಿ ಬಂದಿದೆ. ಈ ಕೂಡಿಸುವಿಕೆ ಹೇಗೆಲ್ಲಾ ಹರಡಿಕೊಂಡಿದೆಯೆಂದರೆ ‘ಬೀದಿಪಾಲಾಗಿದ್ದ ಬಿದಿರಮ್ಮಳ ಜೊತೆ ಪ್ರೀತಿಯಿಂದ ಜೀವನ ಸಾಗಿಸಿದ ವಿದುರನಾದ ಒಂಟೆಪ್ಪ, ಓಡಿಹೋದ ಪ್ರೇಮಿಗಳನ್ನು ಹುಡುಕಿ ತರಲು ಹೊರಟ ಜೋಗಪ್ಪ ‘ಆಡಿದ್ ಮಾತ್ನಂತ್ ನಡೀದ್ ಈ ನಾಲ್ಗೆ ಹಳೆ ಕೆರುಕ್ ಸಮ’, ‘ಮಗಳ ಹುಡುಕದೆ ಹೋದರೆ ಈ ಮಗನ ಮುಖ ಕೊನೆಗೆ ನೋಡಿ ಬಾಯಿಗಿಷ್ಟು ಮಣ್ಣಾಕು’ ಅಂತ ಊರೂರು ಅಲೆದು ಕೂಡಿಸುವುದು. ತಾನೆತ್ತದಿದ್ದರೂ ಸಾಕಿ ಬೆಳೆಸಿದ ಚೆಲುವಮ್ಮಳಿಗಾಗಿ ಲಕ್ಕಮ್ಮ ಪಡುವಪಾಡು, ಜೋಗಪ್ಪನಿಗೆ ಮಗಳನ್ನು ತೋರಿಸು ಎಂದು ಅಂಗಲಾಚುವುದು, ಓಡಿಹೋದ ಚೆಲುವಮ್ಮ ಸಿದ್ದಣ್ಣರನ್ನು ಹೆತ್ತಮಕ್ಕಳಂತೆ ಪೊರೆಯುವ ಬಿದಿರಮ್ಮ.. ತನ್ನ ಗಂಡ ಕಚ್ಚೆಹರುಕ ಎಂದು ಗೊತ್ತಿದ್ದು ಗಂಡನ ದೌರ್ಜನ್ಯಕ್ಕೆ ಬಲಿಯಾದ ರಾವುಲಮ್ಮಳನ್ನು ತಂಗಿ ಎಂಬಂತೆ ಬಾಣಂತನ ಮಾಡುವ ಮಾಳಮ್ಮ.. ಹೀಗೆ ಕೂಡುಗುಣದ ಅನೇಕ ಪಾತ್ರಗಳು ಕೂಡಿಕೊಂಡು, ಸಣ್ಣ ಸಣ್ಣ ಎಳೆಯನ್ನು ಕೂಡಿಸಿ-ಜೋಡಿಸಿ ಮಾಲೆಯಾಗಿಸುತ್ತವೆ. ಇವೆಲ್ಲ ಕೇವಲ ಬಾವುಣಿಕೆಗಳಾಗಿ ಬಂದಿಲ್ಲ. ಕಳೆದುಕೊಳ್ಳುತ್ತಿರುವ ಮಾನವೀಯ ಲೋಕವೊಂದರ ಮರುಕಟ್ಟುವಿಕೆಯ ರೂಪವಾಗಿ ಜೋಡಿಸಿಕೊಂಡಿವೆ.

    ನಿಜ ಈ ಕಾದಂಬರಿಯೊಳಗೆ ಸಂಘರ್ಷಗಳು ಎದುರಾಗುವುದೇ ಇಲ್ಲ. ಆ ಸಂಘರ್ಷಗಳ ಸಂಕಟವನ್ನು ಉಂಡು ಈ ಕಾದಂಬರಿ ಎದುರುಗೊಳ್ಳುವುದು ಸಂವಿಧಾನದ ಆಶಯಗಳನ್ನು. ಈ ಕಾದಂಬರಿಯ ಸತುವು ಸಂವಿಧಾನದ ಆಶಯಗಳನ್ನು ಮತ್ತು ಗಾಂಧಿಯ ಹಿಂದ್‌ಸ್ವರಾಜ್ ಕಲ್ಪನೆಯನ್ನು ಏಕೀಭವಿಸಿ ಕಟ್ಟಿಕೊಂಡಿದೆ. ಅದಕ್ಕಾಗಿ ಪರಿತಪಿಸುವುದು ಒಂದು ವ್ಯಕ್ತಿತ್ವವಲ್ಲ. ಇಡೀ ಪ್ರದೇಶ ಹಪಹಪಿಸುತ್ತದೆ. ಕಮಲಪುರ, ಟುಮುಕಿಪುರಗಳು ನೆಪವಾಗಿ ಅಂಬೇಡ್ಕರೋತ್ತರ ಮತ್ತು ಗಾಂಧಿಯೋತ್ತರ ಗ್ರಾಮಜಗತ್ತನ್ನು ಎದುರುಗೊಳ್ಳುವ ರೂಪಕವಾಗಿ ಈ ಜಾಲ್ಗಿರಿ ಅರಳಿ ಸಂವಿಧಾನದ ಸುಂದರ ಹೂಗಳನ್ನು ಬಿಟ್ಟಿದೆ. ಅಂಬೇಡ್ಕರ್ ಹೂದೋಟದಲ್ಲಿ ಗಾಂಧಿಯ ಘಮಲು ಸೇರಿ ಇಡೀ ಜಾಲ್ಗಿರಿಯೇ ಘಮಘಮಿಸುವ, ಕೂಡಿಕೊಳ್ಳುವ ಹೂಗಿರಿಯಾಗಿದೆ. ನಮ್ಮೆದುರಿಗಿನ ಇಸಂಗಳನ್ನು ಕಳೆದು ಮಾನವೀಯಲೋಕದ ಕಡೆ ಸಾಗಲು ಬೇಕಾದ ಬಹುಮುಖ್ಯ ದಾರಿಗಳನ್ನು ಈ ಕಾದಂಬರಿ ತೋರುಗೈಯಾಗಿ ನಮ್ಮ ಮುಂದಿಟ್ಟಿದೆ. ನಾವು ದಾಟಬೇಕಷ್ಟೇ.

    ಪುಸ್ತಕ ವಿಮರ್ಶಕರು : ಡಾ. ರವಿಕುಮಾರ್ ನೀಹ

    ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಯ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾ‌ರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ. ಪದವಿ ಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ.

    ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ಒಂದೂವರೆ ದಶಕದಿಂದಲೂ ಕನ್ನಡ ಪ್ರಾಧ್ಯಾಪಕರಾಗಿ ಅಧ್ಯಾಪನ ನಿರತರಾಗಿರುವ ರವಿಕುಮಾರ್ ಈವರೆಗೆ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ. ಸೂಲು, ಪುಸ್ತಕ ವಿಮರ್ಶಾ ಕಥನಗಳು, ಕಂಡದಾರಿ, ಧರ್ಮ ರಾಜಕಾರಣ, ಜಲಜಂಬೂಕನ್ಯೆ (ಖಂಡಕಾವ್ಯ), ಕ್ರಿಯಾಪದ, ನೆಲನಿಲ್ಲದ ಭೂಮಿ, ನಡೆದದಾರಿ, ಸುವರ್ಣ ಮುಖಿ, ಪುಸ್ತಕ ವಿಮರ್ಶೆ: ಸಾಂಸ್ಕೃತಿಕ ಬಿಕ್ಕಟ್ಟುಗಳ ಹುಡುಕಾಟ, ನೆರಳಿಲ್ಲದ ಕಾಯ ಮತ್ತು ಬಯಲ ಬನಿ ಪ್ರಕಟಿತ ಕೃತಿಗಳು. ನಾಡಿನ ಅನೇಕ ಪತ್ರಿಕೆಗಳಲ್ಲಿ ರವಿಕುಮಾರ್ ಅವರ ಲೇಖನಗಳು ಪ್ರಕಟಗೊಂಡು ಓದುಗರ ಚಿಂತನಾಲಹರಿಯನ್ನು ವಿಸ್ತರಿಸಿವೆ. ಕೊರಟಗೆರೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    ಲೇಖಕ : ತುಂಬಾಡಿ ರಾಮಯ್ಯ

    ಲೇಖಕ ತುಂಬಾಡಿ ರಾಮಯ್ಯ ಇವರು ಮೂಲತಃ ತುಮಕೂರು ಜಿಲ್ಲೆಯ ತುಂಬಾಡಿ ಗ್ರಾಮದವರು. ದಲಿತ ಚಳವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಪ್ರಸ್ತುತ ಕಾರ್ಮಿಕ ಅಧಿಕಾರಿಯಾಗಿದ್ದಾರೆ. ಇವರ ಕೃತಿಗಳು ‘ಮಣೆಗಾರ’, ‘ಓದೋರಂಗ’. 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ ಪಡೆದಿರುತ್ತಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleತಿಂಗಳ ನಾಟಕ ಸಂಭ್ರಮದಲ್ಲಿ ‘ಮೂರನೇ ಕಿವಿ’ ನಾಟಕ ಪ್ರದರ್ಶನ | ಆಗಸ್ಟ್ 16
    Next Article ಮಲಯಾಳಂ ಸಾಹಿತಿ ಕೆ.ಆರ್.‌ ಮೀರಾ ಇವರಿಗೆ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ 2025’
    roovari

    Add Comment Cancel Reply


    Related Posts

    ಸಾಹಿತ್ಯಾಸಕ್ತರ ಮನಸೂರೆಗೊಳಿಸಿದ ‘ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2025’

    August 13, 2025

    ಶ್ರೀ ಮದವೂರ ವಿಘ್ನೇಶ ಕಲಾ ಸಂಘದ ತಾಳಮದ್ದಳೆ

    August 13, 2025

    ಶ್ರೀ ಎಡನೀರು ಮಠದಲ್ಲಿ ‘ನೃತ್ಯ ದ್ವಯ’ ಮತ್ತು ‘ನೃತ್ಯ ಸಿರಿ’ ಭರತನಾಟ್ಯ ಪ್ರದರ್ಶನ | ಆಗಸ್ಟ್ 15

    August 13, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಉರುವಿ’ ನಾಟಕ ಪ್ರದರ್ಶನ | ಆಗಸ್ಟ್ 17

    August 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.