Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಹೆಜ್ಜೆಗಳು’ ನಾಟಕ ಪ್ರದರ್ಶನ | ಆಗಸ್ಟ್ 19

    August 16, 2025

    ‘ಆವಿಷ್ಕಾರ’ ವೇದಿಕೆಯಿಂದ ‘ಕಥನ, ಕವನ, ಗಾಯನ’ ಕಾರ್ಯಕ್ರಮ | ಆಗಸ್ಟ್ 17

    August 16, 2025

    ಅರ್ಥಪೂರ್ಣವಾಗಿ ಜರಗಿದ ಹಂದಾಡಿ ಬಾಲಕೃಷ್ಣ ನಾಯಕ್ ಇವರ ಪ್ರಥಮ ಪುಣ್ಯತಿಥಿ

    August 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುನಂದಾ ಬೆಳಗಾಂವಕರ ಅವರ ‘ಕಾಕ ಭುಶುಂಡಿ’ ಪ್ರಬಂಧ ಸಂಕಲನ
    Article

    ಸುನಂದಾ ಬೆಳಗಾಂವಕರ ಅವರ ‘ಕಾಕ ಭುಶುಂಡಿ’ ಪ್ರಬಂಧ ಸಂಕಲನ

    August 16, 2025No Comments8 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮನುಷ್ಯ ಮತ್ತು ಪಶು ಪಕ್ಷಿಗಳ ನಡುವಿನ ಒಡನಾಟವು ಅನಾದಿ ಕಾಲದಿಂದ ಸಾಗಿ ಬಂದಿದೆ. ಪ್ರಾಣಿ ಪಕ್ಷಿಗಳೊಂದಿಗೆ ತನ್ನ ಸಂಬಂಧಕ್ಕೆ ಮಾನವನು ಹಲವು ರೀತಿಯ ಅರ್ಥಗಳನ್ನು ಹಚ್ಚುತ್ತಾ ಬಂದಿದ್ದಾನೆ. ಸುನಂದಾ ಬೆಳಗಾಂವಕರರ ‘ಕಾಕ ಭುಶುಂಡಿ’ ಎಂಬ ಪ್ರಬಂಧ ಸಂಕಲನವು ಮನುಷ್ಯ ಮತ್ತು ಪಶುಪಕ್ಷಿಗಳ ನಡುವಿನ ಸಂಬಂಧವನ್ನು ನವಿರಾಗಿ, ಆತ್ಮೀಯವಾಗಿ ಚಿತ್ರಿಸುವುದರೊಂದಿಗೆ ಅಂತರಂಗವನ್ನು ಸ್ಪರ್ಶಿಸುತ್ತವೆ. ಕಾಳಿ-ಬೆಳ್ಳಿ (ದನ-ಎತ್ತು) ಕಾಕ ಭುಶುಂಡಿ (ಕಾಗೆ), ಗುಂಡ್ಯಾ (ಬೆಕ್ಕು) ಅಳಿಲುಗಳು, ನಾಗಪ್ಪ, ಗುಬ್ಬಿಗಳು, ಮುರಿಗೆವ್ವ (ಎಮ್ಮೆ) ಟಾಮ್- ತಿಮ್ಮ (ನಾಯಿ) ಮಂಗ ಮಂಗಿಗಳು, ಗೂಗಪ್ಪ, ಪ್ರಾಣಿ ಪಕ್ಷಿಗಳೆನಿಸದೆ ಮನುಷ್ಯರೆಂಬಂತೆ ಭಾಸವಾಗುತ್ತದೆ. ಇವುಗಳು ಪ್ರಾಣಿ ಪಕ್ಷಿಗಳ ಕತೆಯಾಗಿ ಉಳಿಯದೆ ಜೀವನ ದರ್ಶನವನ್ನು ಮಾಡಿಸುವುದು ವಿಶೇಷ.

    ಇಲ್ಲಿ ಮೌಲ್ಯಗಳ ಪ್ರತಿಪಾದನೆಗೆ ಪ್ರಾಣಿ ಪಾತ್ರಗಳು ಬಳಕೆಯಾಗಿವೆ. ಮನುಷ್ಯಲೋಕವೂ ಅದರೊಂದಿಗೆ ಬೆರೆತುಕೊಳ್ಳುತ್ತದೆ. ಆದ್ದರಿಂದ ಇವುಗಳು ಸರಳ ನೀತಿಕತೆ ಮತ್ತೆ ದೃಷ್ಟಾಂತಗಳೆನಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತವೆ. ಮನುಷ್ಯರ ನಡೆನುಡಿಗಳನ್ನು ಪ್ರಾಣಿಗಳಲ್ಲಿಯೂ ಕಾಣುತ್ತೇವೆ. ಮಾನವ ಜನ್ಮವು ಶ್ರೇ಼ಷ್ಠವೆಂಬ ನಂಬಿಕೆಯು ಬೇರೂರಿರುವ ಹೊತ್ತಿನಲ್ಲಿ, ಲೇಖಕಿಯು ಪ್ರಾಣಿಗಳ ಪಾತ್ರವನ್ನು ಬಳಸಿಕೊಂಡು ಅವನ ಸಣ್ಣತನ, ಕುಹಕ, ಮೋಸ, ವಂಚನೆ, ಕ್ರೌರ್ಯ ದ್ವೇಷಗಳನ್ನು ವಿಮರ್ಶಿಸುತ್ತಾ ಮಾನವೀಯತೆಯನ್ನು ಗ್ರಹಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮನುಷ್ಯನು ಪ್ರಾಣಿಗಿಂತ ಕನಿಷ್ಠನೆಂದೂ, ಅವುಗಳನ್ನು ಮೀರಿಸುವ ದುಷ್ಟತನವು ಮನುಷ್ಯನಲ್ಲಿದೆ ಎಂದಷ್ಟೇ ಹೇಳದೆ ಮನುಷ್ಯನಲ್ಲಿರುವ ಸ್ವಾರ್ಥ, ಮತ್ಸರಗಳು ಪ್ರಾಣಿಗಳಲ್ಲಿಯೂ ಇವೆ ಎಂಬ ವಿಚಾರವು ಮುಖ್ಯವಾಗುತ್ತದೆ. ಮನುಷ್ಯ ಜಗತ್ತಿಗೆ ಪರ್ಯಾಯವಾಗಿ ಮತ್ತು ಪೂರಕಾಗಿ ಪ್ರಾಣಿಜಗತ್ತನ್ನು ಪರಿಭಾವಿಸಿದ ಬಗೆಯು ವ್ಯಕ್ತವಾಗುತ್ತದೆ.

    “ಪ್ರಾಣಿಗಳಿಗೆಲ್ಲಾ ಪ್ರೇಮ ಎಲ್ಲರಿ? ಅದರಾಗ ಗಂಡು ಹೆಣ್ಣು ಎರಡ ಲಿಂಗಭೇದ. ಸಂತಾನ, ಅವುಗಳ ತಳಿ ಅಭಿವೃದ್ಧಿಗೆ ದೇವರು ಅವನ್ನ ಹುಟ್ಟಿಸ್ಯಾನ. ಕೆಲವೊಂದು ಮನುಷ್ಯನ ಉಪಯೋಗಕ್ಕೆ ಕೊಟ್ಟಾನ. ಅದೆಲ್ಲಾ ಬಿಟ್ಟು ಕಾಳಿ ಬೆಳ್ಳಿಯರ ಪ್ರೀತಿ. ಅವರ ಮಾಂಗಲ್ಯ, ಸಪ್ತಪದಿ ಅಂತೆಲ್ಲಾ ಕಥಿ ಕಟ್ಟಿದರ ಹ್ಯಾಂಗ? ದನಕ್ಕ ಮಕ್ಕಳ ಬಂಧನ ಸುದ್ದಾ ಇರುವುದಿಲ್ಲ. ಅವು ಹಾಲುವುಣಿಸೋ ತನಕ ಅಷ್ಟ ಸಂಬಂಧ” (ಪುಟ 25) ಎನ್ನುವ ವ್ಯಾವಹಾರಿಕ ತಿಳುವಳಿಕೆಯೇ ವೈಜ್ಞಾನಿಕ ಸತ್ಯವೆಂದುಕೊಳ್ಳುವ ನಂಬಿಕೆಯ ವಿರುದ್ಧ ನೆಲೆಯಲ್ಲಿ ಪ್ರಬಂಧಗಳು ಮೂಡಿ ಬಂದಿವೆ. ಲಕ್ಷ್ಮಣ ಮತ್ತು ಸಿಂಗಿ ಎಂಬ ಪ್ರೇಮಿಗಳು ಕೆರೆಯಲ್ಲಿ ಮುಳುಗಿ ಸತ್ತ ಅಮರ ಪ್ರೇಮದ ಕತೆಗೆ ಪರ್ಯಾಯವಾಗಿ ‘ಕಾಳಿ ಬೆಳ್ಳಿ’ ಎಂಬ ದನ ಮತ್ತು ಎತ್ತಿನ ಕತೆಯನ್ನು ಕಟ್ಟಿಕೊಟ್ಟಿದ್ದಾರೆ. ದನ ಕರು ಹಾಕಿದಾಗ ಮನೆಯವರು ಪಡುವ ಸಂಭ್ರಮ ಸಡಗರ, ಮಾಸು ಬೀಳದಿದ್ದಾಗ ಅನುಭವಿಸುವ ತಲೆಬಿಸಿ, ದನಕ್ಕೆ ಮಾಡುವ ವಿಶೇಷ ಆರೈಕೆಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿವೆ. ಶೆಟ್ಟರ ಮನೆಯ ಹೋರಿಯು ಕಾಳಿಯ ಮೇಲೆ ಏರಿದಾಗ ಸಿಟ್ಟಿಗೆದ್ದ ಬೆಳ್ಳಿಯು ಅದನ್ನು ಹಾಯ್ದು ಓಡಿಸುತ್ತಾನೆ. ಕಾಳಿಗೂ ಹಾಯ್ದು ಆಕೆಯ ಮೇಲೆ ಅಧಿಕಾರವನ್ನು ಸ್ಥಾಪಿಸುವಂತೆ ಏರಲು ಮುಂದಾಗುತ್ತಾನೆ. ಆದರೆ ಬೆದೆಗೆ ಸಮಯವಲ್ಲದಿದ್ದುದರಿಂದ ಅವನ ಕಾಮುಕತೆಗೆ ಹೇಸಿ ದೂರ ಉಳಿಯುತ್ತಾಳೆ. ಇದನ್ನರಿತ ಬೆಳ್ಳಿಯು ಆಕೆಯನ್ನು ರಮಿಸಲು ಮುಂದಾಗುವುದಿಲ್ಲ. ಮನುಷ್ಯರಲ್ಲಿ ನಡೆಯುವಂಥ ಬಲಾತ್ಕಾರವು ನಡೆಯುವುದಿಲ್ಲ. ಕಾಳಿಯು ನೀರು ಪಾಲಾದಾಗ ಆಕೆಯನ್ನು ಉಳಿಸಲು ಹೋಗಿ ಜೀವ ಕಳೆದುಕೊಳ್ಳುವ ಬೆಳ್ಳಿಯು ಸಾವಿನಲ್ಲೂ ಆಕೆಗೆ ಜೊತೆಯಾಗುತ್ತಾನೆ. ಲಕ್ಷ್ಮಣ ಸಿಂಗಿಯರ ಪ್ರೇಮಕ್ಕಿಂತ ಇವರದ್ದು ಕಡಿಮೆಯಲ್ಲ ಎಂಬ ದನಿಯು ಇಲ್ಲಿದೆ.

    ಎಲ್ಲರ ಪಾಲಿಗೆ ತಿರಸ್ಕೃತವೆನಿಸಿದ ಕಾಗೆಯು ತನ್ನ ಸಾಕು ಹಕ್ಕಿಯೆಂಬಂತೆ ಅದಕ್ಕೆ ‘ಭುಶುಂಡಿ’ ಎಂಬ ಹೆಸರನ್ನು ಇಟ್ಟಿದ್ದಾರೆ. ಪುರಾಣದಲ್ಲಿ ಭುಶುಂಡಿ ಎಂಬ ಬ್ರಾಹ್ಮಣನು ಗುರುವಿನೊಡನೆ ವಾದಿಸಿದ್ದಕ್ಕೆ ಆತನ ಶಾಪವನ್ನು ಪಡೆದು ಕಾಗೆಯಾಗಿ ಹುಟ್ಟುತ್ತಾನೆ. ಬದುಕಿರುವವರೆಗೂ ನೀರು ಕುಡಿಯದೆ ರಾಮನಾಮ ಜಪಿಸುತ್ತಾ ಶ್ರೀರಾಮನ ಆಗಮನದ ಬಳಿಕ ಶಾಪಮೋಕ್ಷವನ್ನು ಪಡೆಯುತ್ತಾನೆ. “ಕಾಗೆಯ ಜಾಣತನ, ಕ್ರಿಯಾಶೀಲತೆ, ಒಗ್ಗಟ್ಟು, ಹಂಚಿ ತಿನ್ನುವ ಸ್ವಭಾವ, ದೃಷ್ಟಿ ಮೇಲಾಗಿ ಅದರ ಕತ್ತಲೆ ನಯ ರೇಶಿಮೆ ಬಣ್ಣ ಇಷ್ಟೆಲ್ಲ ಸೃಷ್ಟಿದತ್ತ ಗುಣಗಳಿದ್ದರೂ ಕಾಗೆ ದುರ್ದೈವಿ, ಶಾಪಗ್ರಸ್ತ, ಅಭ್ಯಾಗತ, ನಿರ್ಲಜ್ಜ, ಧೂರ್ತ, ಹೇಸಿ ಕಾಗಿ ಕೈಯಾಗ ಕಾರಭಾರ ಕೊಟ್ಟರ ಕಚೇರಿಯೆಲ್ಲ ಹೊಲಸ ಮಾಡಿತಂತ ಎಂಬ ಗಾದೆಯ ಮಾತೂ ಪ್ರಚಲಿತ.” (ಪುಟ 46) ಎಂಬ ಮಾತುಗಳು ಒಳ್ಳೆಯ ಸ್ವಭಾವದ ಬದಲು ಕೆಟ್ಟಗುಣಗಳನ್ನೇ ಕಾಣುವ ಮನುಷ್ಯನ ಧೋರಣೆಯನ್ನು ವಿಮರ್ಶಿಸುತ್ತದೆ. ಕಾಗೆಯನ್ನು ಕುರಿತ ತಿರಸ್ಕಾರ ಮನೋಭಾವವನ್ನು ಒಡೆಯುವ ಪ್ರಯತ್ನವು ಇಲ್ಲಿದೆ. “ಅವಕ್ಕ ಎಂದೂ ಒಂದ ತಿಂದ ಗೊತ್ತಿಲ್ಲ. ಹಂಚಿ ತಿಂತಾವ. ಅವುಗಳ ಈ ಗುಣಾ ನಾವು ಮನಸ್ಯಾರಿಗಿಲ್ಲ ನೋಡು. ಅವುಗಳ ಕ್ರಿಯಾಶೀಲ ಗುಣ ಒಗ್ಗಟ್ಟು ನಮ್ಮೊಳಗಿಲ್ಲ, ಮನಸ್ಯಾ ಭಾಳ ಸ್ವಾರ್ಥಿ. ಒಂದ ಕಾಗಿ ಸತ್ರಾತು ಕೂಗಿ ಕೂಗಿ ತಮ್ಮ ಬಳಗ ಕರಸ್ತಾವ ನಮ್ಮಲ್ಲಿ ನೋಡ್ರಿ ಹೆಣಾ ಹೊರಲಿಕ್ಕೆ ಸುದ್ಧಾ ನಾಲ್ಕ ಮಂದಿ ಬರೂದಿಲ್ಲ. ಬುದ್ದಿ ಇದ್ದ ನಾವು ಅವನ್ನ ನೋಡಿ ಕಲೀಬೇಕು” (ಪುಟ 49) ಎಂಬಲ್ಲಿ ಪ್ರಬಂಧದ ಆಶಯವು ವಾಚ್ಯವಾಗುತ್ತದೆ.

    ‘ಇಣಚಿ ಸಂಸಾರ’ ಎಂಬ ಪ್ರಬಂಧವು ಸಂಬಂಧವನ್ನು ಕಳೆದುಕೊಳ್ಳುವಾಗ ಅನುಭವಿಸುವ ನೋವನ್ನು ವಿವರಿಸುತ್ತದೆ. ಗುಂಡ್ಯಾ ಎಂಬ ಬೆಕ್ಕಿನಿಂದ ಇಣಚಿಗಳನ್ನು ಉಳಿಸುವುದಕ್ಕಾಗಿ ಅವುಗಳನ್ನು ದೇವಾಲಯದ ಅಳಿಲುಗಳ ನಡುವೆ ಬಿಡುವಾಗ ಲೇಖಕಿಯ ಯಾತನೆಯಲ್ಲೂ ಕಥನವು “ಪರಮಾತ್ಮನ ಲೀಲೆ ಅಗಾಧ ಯಾರಿಂದಲೋ ಯಾರನ್ನೋ ಪ್ರೀತಿಸಲು ಹಚ್ಚುತ್ತಾನೆ. ಯಾರಿಂದ ಯಾರನ್ನೋ ಬದುಕಿಸುತ್ತಾನೆ. ಯಾರಿಂದ ಯಾರನ್ನೋ ಉದ್ಧರಿಸುತ್ತಾನೆ. ಒಮ್ಮೊಮ್ಮೆ ಯಾರಿಂದ ಯಾರನ್ನೋ ದ್ವೇಷಿಸಲು ಹಚ್ಚಿ ಕೊಲ್ಲಿಸುತ್ತಾನೆ. ಗೊತ್ತಿಲ್ಲ. ಅವನಾಟ ಅವನಿಗೇ ಗೊತ್ತು. ಆದರೆ ನನಗೆ ಮಾತ್ರ ನನ್ನದೆ ತಳಮಳ. ಈ ಪುಟ್ಟ ನಿರುಪದ್ರವಿ ಜೀವಿಗಳು ಮಾಡಿದ ತಪ್ಪಾದರೂ ಏನು? ಅವರೇಕೆ ನಮ್ಮ ಮನೆ ಬಿಟ್ಟು ಬೇರೆ ಕಡೆ ಹೋಗಬೇಕು? ಅವರ ನಮ್ಮೊಡನೆ ಅವರಿಗೂ ಅನ್ನ, ನೀರು ನೆರಳಿದೆ.” (ಪುಟ 93) ಎಂಬ ದಾರ್ಶನಿಕತೆಯತ್ತ ಹೊರಳುತ್ತದೆ.

    ಈ ಪ್ರಬಂಧಗಳಲ್ಲಿ ‘ಗುಂಡ್ಯಾ’ ಎಂಬ ಬೆಕ್ಕು ಇತರ ಪ್ರಾಣಿಗಳಂತೆ ಒಳ್ಳೆಯತನದ ಪ್ರತೀಕವಾಗಿ ಕಾಣಿಸಿಕೊಳ್ಳದೆ, ಬದುಕಿನ ಎಲ್ಲ ಬಗೆಯ ಕ್ರೌರ್ಯಗಳಿಗೆ ಸಂಕೇತವಾಗುತ್ತದೆ. ಆದರೆ ಲೇಖಕಿಯು ಬೆಕ್ಕನ್ನು ಕಪ್ಪು ಬಿಳುಪಿನ ದೃಷ್ಟಿಕೋನದಿಂದ ಚಿತ್ರಿಸುವುದಿಲ್ಲ. “ಪ್ರಾಣಿಗಳನ್ನು ಕೊಲ್ಲುವುದು ಬೆಕ್ಕುಗಳ ಸ್ವಾಭಾವಿಕ ಗುಣಧರ್ಮ. ಅವುಗಳ ಕೊರಳಿಗೆ ಗಂಟೆ ಕಟ್ಟಲಾದೀತೇ? ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ಕೊಲ್ಲುವುದು ಅವುಗಳ ಜನ್ಮ ಸಿದ್ಧ ಹಕ್ಕು. ಅಲ್ಲದೇ ಹೊಟ್ಟೆಪಾಡು?” (ಪುಟ 68) ಎಂಬ ಸಾಲುಗಳು ಅದಕ್ಕೆ ಪುಷ್ಟಿಯನ್ನು ಒದಗಿಸುತ್ತವೆ.

    ಇತರ ರಚನೆಗಳಲ್ಲಿ ಇರುವಂತೆ ‘ನಾಗಪ್ಪ’ ಎಂಬ ಪ್ರಬಂಧದಲ್ಲಿ ಕತೆಯ ಎಳೆಯಿಲ್ಲ. ನಾಗಾರಾಧನೆ ಸಂಪ್ರದಾಯದ ಹಿನ್ನೆಲೆ ಮತ್ತು ಪುರಾಣದೊಂದಿಗೆ ಬೆಸೆದಿರುವ ಈ ಲೇಖನವು ಇದು ಸೊಗಸಾದ ನುಡಿಚಿತ್ರಕ್ಕೆ ಹತ್ತಿರವಾದ ರಚನೆಯಾಗಿದೆ. “ಆಳೆತ್ತರ ಅವನ ಹುತ್ತ. ಅದು ಅವನ ಅರಮನೆ. ಅದರ ಹಿಂದಿನ ಫಲವತಿ ಸಕ್ಕರೆ ಗುತ್ತಲಿ ಮಾವಿನ ಮರ, ಗೊಂಚಲು ಗೊಂಚಲು ಹಣ್ಣು ತೂಗಿಸುವ, ಅಕ್ಷಯ ಪಾತ್ರೆ, ಸೌಟು ಕೈಯಲ್ಲಿ ಹಿಡಿದ ದೇವಿ ಅನ್ನಪೂರ್ಣೇಶ್ವರಿ ಅವಳು” (ಪುಟ 114) ಎಂಬ ಬಣ್ಣನೆಯು ಅದಕ್ಕೆ ಉದಾಹರಣೆಯಾಗಿದೆ.

    ಲೇಖಕಿಯ ಸಾಕುನಾಯಿಯು ಆಕೆಯ ಪಾಲಿಗೆ ‘ಟಾಮ್’ ಎನಿಸಿಕೊಂಡರೆ ಅಜ್ಜಿಯ ಬಾಯಿಯಲ್ಲಿ ‘ತಿಮ್ಮ’ ಎಂದು ಕರೆಸಿಕೊಳ್ಳುತ್ತಾನೆ. ಇದು ನಾಯಿಯ ದೈನಿಕ ಮತ್ತು ಚರ್ಯೆಗಳ ವರ್ಣನೆಗೆ ಮಾತ್ರ ಸೀಮಿತವಾಗದೆ “ನಮ್ಮ ಅಂಗಳದಾಗ ಲಕ್ಷ್ಮಿ ಅದಾಳ. ಹೊಲದಿಂದ ಕಾಳುಕಡಿ ಬರ್ತರದ. ಹೈನ ದೇವತ್ಯಾರು ವಾಸಿಸೋ ಮನ್ಯಗ ನೀವು ನಾಯಿ ಸಾಕಿದ್ದ ನನಗ ಮನಸ್ಸಿಲ್ಲ.” (ಪುಟ 170) ಎಂಬ ಮಾತುಗಳ ಮೂಲಕ ಮನೆಯ ಆಚಾರಗಳ ಬಗೆಗಿನ ಸೂಕ್ಷ್ಮ ವಿಮರ್ಶೆಯಾಗಿಯೂ ಕಂಡು ಬರುತ್ತದೆ. ಹಾಗೆ ನೋಡಿದರೆ ಇಲ್ಲಿ ಯಾರ ತಪ್ಪೂ ಇಲ್ಲ. ಎಲುಬನ್ನು ಕಡಿಯುವುದು, ಮಾಂಸವನ್ನು ತಿನ್ನುವುದು ನಾಯಿಯ ಗುಣಧರ್ಮ. ನಾಯಿಯ ಆರೋಗ್ಯಕ್ಕೆ ಅವುಗಳು ಅಗತ್ಯವಾಗಿವೆ. ಸಂಪ್ರದಾಯಸ್ಥ ಅಜ್ಜಿಗೆ ಮೂಳೆ ಮಾಂಸಗಳು ನಿಷಿದ್ಧವಾಗಿರುವುದರಿಂದ ಅವುಗಳನ್ನು ತಿನ್ನುವ ನಾಯಿಯನ್ನು ಸಾಕುವುದು ಇಷ್ಟವಿಲ್ಲ. ಆದರೆ ಅಂಥ ಆಹಾರವನ್ನು ಸೇವಿಸುವ ಬೆಕ್ಕಿಗೆ ಮನೆಯೊಳಗೆ ಪ್ರವೇಶವಿದೆ. ಆದರೆ ಪ್ರಾಮಾಣಿಕ ನಾಯಿಗೆ ಹೊರಗಷ್ಟೇ ಜಾಗ ಎಂಬ ವಿಚಾರವು ಮನೆಯವರ ನಡತೆಗಳ ನಡುವಿನ ವೈರುಧ್ಯವನ್ನು ಪ್ರಶ್ನಿಸುತ್ತದೆ. ಟಾಮ್ ಸತ್ತರೂ ಅದರ ಮರಿಗಳು ಬೆಳೆಯುತ್ತಿರುವುದರಿಂದ ಜೀವ ವಿಕಾಸಕ್ಕೆ ಕೊನೆಯಿಲ್ಲ ಎಂದು ಸ್ಪಷ್ಟವಾಗುತ್ತದೆ.

    ಗೂಗೆಯ ಕೂಗು ಅಪಶಕುನ ಮತ್ತು ಮರಣದ ಸಂಕೇತವಾಗಿರುವುದರಿಂದ ಲೇಖಕಿಯ ತೋಟದಲ್ಲಿ ವಾಸಿಸುತ್ತಿರುವ ಆ ಹಕ್ಕಿಯನ್ನು ಕೊಂದುಬಿಡಬೇಕೆಂದು ನೀಲವ್ವಳು ವಾದಿಸುತ್ತಾಳೆ. ಗೂಗೆಯನ್ನು ಕೊಲ್ಲುವುದು ಕಾನೂನಿನ ಕಣ್ಣಿನಲ್ಲಿ ಅಪರಾಧವಾಗಿರುವುದರಿಂದ ಅರಣ್ಯಾಧಿಕಾರಿಯ ನೆರವಿನೊಂದಿಗೆ ಅದನ್ನು ಹಿಡಿದು ಕಾಡಿಗೆ ಬಿಡುವ ಯೋಜನೆಯನ್ನು ಮಾಡುತ್ತಾರೆಯೇ ಹೊರತು ಕೊಲ್ಲಲು ಒಪ್ಪುವುದಿಲ್ಲ. ಎಲ್ಲೋ ದೂರದಲ್ಲಿರುವ ತನ್ನ ಸಂಗಾತಿಯನ್ನು ಕರೆಯುವ ಗೂಗೆಯು ಏಕಪತ್ನಿ ವ್ರತಸ್ಥ. ಬೆದೆಯೆದ್ದ ಸಮಯದಲ್ಲಿ ತನ್ನ ಸಂಗಾತಿಯ ಜೊತೆಯಲ್ಲದೆ ಇತರ ಗೂಗೆಗಳ ಸಂಗವನ್ನು ಮಾಡುವುದಿಲ್ಲ. ಇತರ ಹಕ್ಕಿಗಳಂತೆ ಮನುಷ್ಯರು ಹಾಕಿದ ಕಾಳುಗಳನ್ನು ಮತ್ತು ಎಂಜಲನ್ನು ತಿನ್ನದೆ ತಾನೇ ಬೇಟೆಯಾಡಿ ಹೊಟ್ಟೆಯನ್ನು ಹೊರೆದುಕೊಳ್ಳುವ ಸ್ವಾಭಿಮಾನಿ. “ನೀನು ಕುಡಿತಿ. ಹೆಂಡ್ತಿ ಮಕ್ಕಳ್ನ ಹೊಡಿತಿ. ಬಂಗಾರದಂಥ ಸಂಸಾರ ಹಾಳು ಮಾಡಕೋತಿ. ನಿನ್ನ ಛಲೋ ಗುಣ ಹೊಳ್ಯಾಗ ಹುಣಸಿ ಹಣ್ಣು ತೊಳ್ದಂಗ” (ಪುಟ 229) ಎಂದು ಭೀಮಪ್ಪನನ್ನು ಉದ್ದೇಶಿಸಿ ಅಜ್ಜಿ ಹೇಳುವ ಮಾತು, ಎಲ್ಲಪ್ಪ ಮತ್ತು ಭೀಮಪ್ಪನಿಗೆ ಹೆಂಡವನ್ನು ಕುಡಿಸಿ, ಹಣ ಕೊಟ್ಟು, ಇನ್ನಷ್ಟು ಮಂದಿಗಳನ್ನು ಲೇಖಕಿಯ ತೋಟಕ್ಕೆ ಗೂಗೆಯನ್ನು ಕೊಲ್ಲಲು ಕಳುಹಿಸಿಕೊಟ್ಟು ಸಿಕ್ಕಿಬಿದ್ದ ನೀಲವ್ವಳ ಕುರಿತು “ಆಕಿನ ಗೂಗಿರಿ. ಇಂಗ್ಲೀಷದಾಗ ಅದಕ್ಕ ಇನ್ನೊಂದು ಅರ್ಥ ಅದರಿ. ಗೂಗಿ ಅಂದ್ರ ಬುದ್ಧಿವಂತರಂಗ ತೋರಿಸೋ ಮೂರ್ಖ ಅಂತರಿ. ಅಪ್ಪನ ಮನಿ ಶ್ರೀಮಂತಿಕೆ ಘಮಿಂಡಿ. ನನ್ನ ಜೀವಾ ತಿಂತಾಳ್ರೀ. ನೀವು ಮೂರು ಮಂದೀಗ ನಾ ಕ್ಷಮಾ ಕೇಳ್ತೀನ್ರೀ ನೋಡ್ರೀ” (ಪುಟ 239) ಎನ್ನುವ ಗಂಗಾಧರಪ್ಪ, “ಈ ಮೂವರು ಕಳ್ಳ ಸೂಳಿಮಕ್ಳು ಪಿಕ್ ಪಾಕೀಟ ಮಾಡ್ತರ್ರೀು. ಒಬ್ಬ ಕುರುಡ, ಇನ್ನೊಬ್ಬ ಕಿವುಡ, ಮತ್ತೊಬ್ಬ ಮೂಕನ ವೇಷ ಹಾಕಿ ಭಿಕ್ಷೆ ಬೇಡ್ತಾವ್ರಿ, ರಾತ್ರಿ ಜನರ ದಾರಿ ತರಬಿ ಹೆಂಡ, ಹೆಣ್ಣ ಮಜಾರಿ” (ಪುಟ 237) ಎಂದು ಗೂಗೆಯನ್ನು ಹಿಡಿಯಲು ಹೊರಟು ಸಿಕ್ಕಿಬಿದ್ದ ಎಲ್ಲಪ್ಪ ಮತ್ತು ಸಂಗಡಿಗರ ಬಗೆಗಿನ ಅಭಿಪ್ರಾಯದ ಮೂಲಕ ಮನುಷ್ಯರ ವಿಷಮ ದಾಂಪತ್ಯ, ಮರ್ಯಾದೆಗೆಟ್ಟ ಕ್ಷುದ್ರ ಕ್ಷುಲ್ಲಕ ಬದುಕನ್ನು ಗೂಗೆಯ ಸ್ವಾಭಿಮಾನ ಮತ್ತು ಸಾಂಸಾರಿಕ ಬದುಕಿಗೆ ವೈದೃಶ್ಯವಾಗಿ ನಿರ್ಮಿಸಿ ಗೂಗೆಯ ಸದ್ಗುಣಗಳನ್ನು ಮೆರೆಸಿದ್ದಾರೆ. ಆದರೆ ಗೂಗೆಯ ದನಿಯನ್ನು ಅಮಂಗಲ, ಸಾವು-ಕೇಡು, ದೆವ್ವ-ಭೂತಗಳ ಅಸ್ತಿತ್ವದ ಸಂಕೇತ ಎಂದು ಕತೆ ಕಟ್ಟಿ ಅದನ್ನು ಕೆಟ್ಟ ಸಂಕೇತವಾಗಿ ಚಿತ್ರಿಸುವ ಮನುಷ್ಯರ ದುರ್ಬುದ್ಧಿಯನ್ನು ವಿಮರ್ಶಿಸುವ ಮೂಲಕ ಒಳ್ಳೆಯವರಿಗೆ ಇದು ಕಾಲವಲ್ಲ ಎಂಬ ಆಶಯವನ್ನು ಧ್ವನಿಸುತ್ತಾರೆ.

    “ಅಂದು ರವಿವಾರ. ನಾವೆಲ್ಲ ಮಕ್ಕಳು ತಿಂಡಿ ತಿನ್ನುತ್ತ ಕುಳಿತಲ್ಲಿ ಗುಬ್ಬ ಗುಬ್ಬಿ ಮರಿಗಳೊಂದಿಗೆ ಹಾರಿ ಬಂದವು. ಮನೆ ತುಂಬ ಅಲ್ಲಿ ಇಲ್ಲಿ ಹಾರಾಡಿದವು. ನಾವು ಹಾಕಿದ ತಿಂಡಿ ಬಾಯಲ್ಲಿ ಕಚ್ಚಿಕೊಂಡು ನಮ್ಮ ಕಣ್ಣೆದುರೇ ಮರಿಗಳು ತಲೆಬಾಗಿಲಿನಿಂದ ಫರ್ರರನೇ ಹಾರಿ ಹೋದವು. ಗುಬ್ಬ ಗುಬ್ಬಿಗಳು ಅವುಗಳ ಹಿಂದೆ ಸರ್ರಯನೇ ಹಾರಿಹೋದವು. ಸ್ವಲ್ಪು ಹೊತ್ತಿನ ನಂತರ ದೊಡ್ಡ ಗುಬ್ಬಿಗಳು ಮನೆಯೊಳಗೆ ಹಾರಿ ಬಂದು ತಮ್ಮ ಗೂಡು ಸೇರಿದವು. ಆದರೆ ಮರಿಗಳು ಬರಲೇ ಇಲ್ಲ. ಮರಿಗಳಿಗಾಗಿ ದಾರಿ ಕಾಯುತ್ತ, ಅಪ್ಪ ಅವ್ವ ಗುಬ್ಬಿ ಕಿಡಿಕಿಯ ಸಳಿಗಳಿಗೆ ಹೋಗಿ ಹಾಯುತ್ತ, ಕತ್ತು ಅತ್ತಿತ್ತ ತಿರುಗಿಸುತ್ತ ಕೂತಿದ್ದು ನಿರಾಶೆಯಲ್ಲಿ ಮತ್ತೆ ಗೂಡಿಗೆ ಮರಳುತ್ತಿದ್ದವು.” (ಪುಟ 131) ತಮ್ಮ ಮರಿಗಳನ್ನು ಹೊತ್ತು ಹೆತ್ತು ಬೆಳೆಸಿ, ಪುಕ್ಕ ಬಲಿತೊಡನೆ ಹಾರಲು ಕಲಿಸಿ, ಸ್ವಾವಲಂಬಿಯಾಗಿ ಮಾಡಿ, ಬದುಕಿನ ದಾರಿ ತೋರಿಸುವ ಜವಾಬ್ದಾರಿಯನ್ನು ನಿಭಾಯಿಸಿದರೂ ಸಂಕಟಪಡುವ ಗುಬ್ಬಿಗಳ ನೋವನ್ನು ಈ ಕಾಲದ ವೃದ್ಧ ತಂದೆತಾಯಿಯರ ಪರಿಸ್ಥಿತಿಗೂ ಅನ್ವಯಿಸಬಹುದು.

    ಪ್ರಪಂಚದ ಎಲ್ಲ ಜೀವರಾಶಿಯ ಗಂಡು ಹೆಣ್ಣು ಜೀವಿಗಳಿಗೆ ಪರಸ್ಪರ ಸಾಮೀಪ್ಯ ಅಗತ್ಯ. ಬುದ್ಧಿ, ವಿವೇಕವಿದ್ದ ಮನುಷ್ಯರ ಪೈಕಿ ಹೆಣ್ಣಿನ ಬಾಳಿಗೆ ಮಕ್ಕಳನ್ನು ಕೊಟ್ಟು, ಜವಾಬ್ದಾರಿಯಿಂದ ಸಲಹುವ ಮೂಲಕ ಬದುಕಿಗೊಂದು ಅರ್ಥವನ್ನು ನೀಡಬೇಕಾದ ಗಂಡಸೇ ತನ್ನ ಸಂಗಾತಿಯನ್ನು ಕೊಲ್ಲುವ ಘಟನೆಯು ಪ್ರಾಣಿಜಗತ್ತಿನಲ್ಲೂ ನಡೆಯುತ್ತವೆ ಎಂಬುದನ್ನು ‘ಮುರಿಗೆವ್ವ’ ಉದಾಹರಣೆ ಸಮೇತ ವಿವರಿಸುತ್ತದೆ. “ರಾತ್ರಿಯಿನ್ನೂ ಕರಗಿರಲಿಲ್ಲ. ಕೋಣನ ಮೇಲೆ ಬರುವ ಯಮರಾಯ ಕಾಲ. ಮುರಿಗಿಯ ಪಾಲಿಗೆ ಮುರಿಗನ ರೂಪದಲ್ಲಿ ಬಂದು ಬಿಟ್ಟಿದ್ದ. ಅವರಿಬ್ಬರದು ಎಷ್ಟು ಜನ್ಮದ ಪ್ರೇಮ ವೈರವಿತ್ತೋ ಅದಿಂದು ಸಾಧಿಸಿತ್ತು. ಮುರಿಗಿ ಬಿದ್ದುಕೊಂಡಿದ್ದಳು. ಜನಾಂಗದಿಂದ ರಕ್ತ ಸೋರುತ್ತಿತ್ತು. ರಕ್ತಸ್ರಾವ. ಬಾಯಿಗೆ ನೀರು ಹಾಕಿದರು. ಕಟಬಾಯಿಯಿಂದ ಹೊರಬಂತು (ಪುಟ 153-154) ಎಂಬ ಸಾಲುಗಳು ಪ್ರೇಮಶಯ್ಯೆಯಲ್ಲಿ ಸಾಯುವ ಹೆಣ್ಣಿನ ದುರವಸ್ಥೆಯ ಪ್ರತೀಕವಾಗುತ್ತದೆ. ‘ಮಂಗ ಮಂಗಿ’ಯಲ್ಲೂ ಇದೇ ಆಶಯವು ಮುಂದುವರಿದಿದೆ. ಇವುಗಳ ವಸ್ತು ಒಂದೇ ಆದರೂ ಸ್ವರೂಪಗಳು ಬೇರೆಯಾಗಿವೆ. ಗದುಗಿನ ಕಪ್ಪತಗುಡ್ಡದಿಂದ ಮಂಗಗಳನ್ನು ಕುಣಿಸಲು ಬರುವ ಶಿವಭಕ್ತ ಸಂತನಾದ ಕಪ್ಪತಯ್ಯನು ಅನಾಥ. ಆತನ ಪ್ರೇಯಸಿ ತೀರಿಹೋದ ಬಳಿಕ ದುಃಖಿಸಿ ಅಳುತ್ತಾ ‘ಯವ್ವಾ ನನ್ನ ಲಗ್ನಾ ಆಗಿ ಹೋಗೇತಿ. ಇನ್ನ ನನಗ ಹೆಣ್ಣ ನೋಡಬ್ಯಾಡಾ’ ಎನ್ನುತ್ತಾ ಒಂಟಿಯಾಗಿ, ಬೈರಾಗಿಯಂತೆ ಮಂಗಗಳನ್ನು ಕುಣಿಸುತ್ತಾ ತಿರುಗಾಡುತ್ತಾನೆ. ಗುರುಗಳೊಂದಿಗೆ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಮಂಗ ಮಂಗಿಗಳನ್ನು ಈರವ್ವನಿಗೆ ಒಪ್ಪಿಸಿ ಹೋಗುತ್ತಾನೆ. ಕೆಲವೇ ತಿಂಗಳುಗಳಲ್ಲಿ ಧಡೂತಿ ಮುಸುವನೊಂದು ಹೆಣ್ಣು ಮಂಗವನ್ನು ಬಲಾತ್ಕಾರದಿಂದ ಭೋಗಿಸಿ ಕೊಲ್ಲುತ್ತದೆ. ಆಗ ಲೇಖಕಿಯ ಮುಂದೆ ಹಿಂಸೆಯ ಲೋಕವೇ ತೆರದುಕೊಳ್ಳುತ್ತದೆ. ಮನುಷ್ಯ ಜಗತ್ತು ಮತ್ತು ಪ್ರಾಣಿಲೋಕದ ನಡುವಿನ ಅಂತರವು ಅಳಿಸಿ ಹೋಗುತ್ತದೆ. ತನ್ನ ಸಂಗಾತಿಯನ್ನು ಕಳೆದುಕೊಂಡ ಮಂಗನ ರೋದನವು ಮನಮಿಡಿಯುವಂತೆ ಚಿತ್ರಿತವಾಗಿದೆ. ಗೆಳತಿಯನ್ನು ಕಳೆದುಕೊಂಡ ಕಪ್ಪತಯ್ಯ ಮತ್ತು ಮಂಗನ ಯಾತನೆಯನ್ನು ಜೊತೆಯಾಗಿಟ್ಟುಕೊಂಡು ನೋಡುವ ಭೂಮಿಕೆಯು ಸಿದ್ಧವಾಗುತ್ತದೆ. ಉಪಯೋ(ಭೋ)ಗಿಸಿ ಬಿಸುಟುಬಿಡುವ ಸಂಸ್ಕೃತಿಯನ್ನು ಹೊಂದಿದ ಆಧುನಿಕ ಸಮಾಜದೊಳಗೆ ನಿಷ್ಪಾಪಿ ಜೀವಗಳು ಎಂಥ ಒತ್ತಡದಲ್ಲಿ ಉಸಿರಾಡುತ್ತವೆ ಎಂಬುದನ್ನು ಈ ರಚನೆಯು ಸಾಬೀತು ಪಡಿಸುತ್ತದೆ. ಒಲಿದ ಜೀವಗಳನ್ನು ಬೇರ್ಪಡಿಸುವ ಮೂರನೆಯವರ ಪ್ರವೇಶವನ್ನು ನಿತ್ಯಜೀವನದಲ್ಲಿ ಬಹಳಷ್ಟು ಕಾಣುತ್ತೇವೆ. ತನ್ನ ಕಣ್ಣೆದುರೇ ಇನ್ನೊಬ್ಬನ ಪಿಪಾಸೆಗೊಳಗಾದ ತನ್ನ ಗೆಳತಿಯ ಚಿಂತಾಜನಕ ಪರಿಸ್ಥಿತಿಯು ಮಂಗನ ಮನಸ್ಸಿನಲ್ಲಿ ಉಂಟು ಮಾಡಿರಬಹುದಾದ ಯಾತನೆಯ ಆಳವನ್ನು ಓದುಗರೇ ಊಹಿಸಬೇಕಾಗಿದೆ. ಗಿಡದಿಂದ ಕಿತ್ತ ಹೂವಿನಂತೆ ಅದೆಷ್ಟೋ ಮಂದಿ ತಮ್ಮ ಪ್ರೀತಿಪಾತ್ರರ ತೆಕ್ಕೆಯಿಂದ ಬೇರ್ಪಡುತ್ತಿದ್ದಾರೆ. ಮನುಷ್ಯನು ತನ್ನ ನಾಗರಿಕತೆಯ ಮುಖವಾಡವನ್ನು ಕಿತ್ತೆಸೆದರೆ ಇಂಥ ಲೋಕ ಅನಾವರಣಗೊಳ್ಳುವುದರಲ್ಲಿ ಸಂದೇಹವಿಲ್ಲ.

    ಮಾನವ ಜನ್ಮವು ಶ್ರೇಷ್ಠವೆಂಬ ನಂಬಿಕೆಯು ನಮ್ಮಲ್ಲಿದೆ. ಆದರೆ ಮನುಷ್ಯರಷ್ಟೇ ಅಥವಾ ಅವರಿಗಿಂತ ನಿಷ್ಠೆಯಿಂದ ಬದುಕುವ ಪ್ರಾಣಿಪಕ್ಷಿಗಳ ಬದುಕಿನ ರೀತಿ, ಜೀವನಕ್ಕಾಗಿ ಪಡುವ ಶ್ರಮ, ಸಾಮರ್ಥ್ಯ, ಗೂಡು ಕಟ್ಟುವ ಕಲೆ, ನೋವು ನಲಿವುಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವುದರೊಂದಿಗೆ ಲೇಖಕಿಯು ಇಲ್ಲಿ ಪ್ರಾಣಿಗಳ ಕೌಟುಂಬಿಕ ಕತೆಯನ್ನು ನಿರೂಪಿಸುತ್ತಾರೆ. ‘ಕಾಕ ಭುಶುಂಡಿ’ಯ ವ್ಯಾಪ್ತಿಯನ್ನು ಹೊರತುಪಡಿಸಿದರೆ ಎಲ್ಲವೂ ಅಚ್ಚುಕಟ್ಟಾದ ಅಪರೂಪದ ಪ್ರಬಂಧಗಳಾಗಿದ್ದು ಅವುಗಳ ಆಕೃತಿಯು ಅನ್ಯೋಕ್ತಿ (ಎಲಿಗರಿ)ಗೆ ಸಮೀಪವಾಗಿದೆ. ಪುರಾಣ, ಪಂಚತಂತ್ರ ಮತ್ತು ಬೋಧಿಸತ್ವನ ಕತೆಗಳಲ್ಲಿರುವಂತೆ ಪ್ರಾಣಿಪಕ್ಷಿಗಳು ಮನುಷ್ಯರಂತೆ ಮಾತನಾಡಿ ಕತೆಗಳ ಆಶಯವನ್ನು ಹೇಳುವುದಿಲ್ಲ. ಮನುಷ್ಯನ ವ್ಯವಹಾರಗಳನ್ನು ಪ್ರಾಣಿಗಳ ಮೇಲೆ ಆರೋಪಿಸುವುದಿಲ್ಲ. ಬದಲಾಗಿ ತಮ್ಮ ಸೂಕ್ಷ್ಮಾವಲೋಕನದ ಮೂಲಕ ಪ್ರಾಣಿಗಳ ಮನಸ್ಸನ್ನು ಅರಿತು, ತಮ್ಮ ಮಾತಿನ ಮೂಲಕ ಓದುಗರ ಅರಿವಿಗೆ ತರುತ್ತಾರೆ. ಆದ್ದರಿಂದ ಇಲ್ಲಿನ ರಚನೆಗಳು ಭಾವತೀವ್ರತೆಯೊಂದಿಗೆ ಮನಸ್ಸನ್ನು ತಟ್ಟುತ್ತವೆ. ಇಲ್ಲಿನ ಪ್ರಬಂಧಗಳಲ್ಲಿ ಪ್ರಾಣಿಗಳ ಮೇಲಿನ ಕರುಣೆಯ ನೋಟವನ್ನು ಕಾಣುತ್ತೇವೆ. ಪ್ರಾಣಿಪಕ್ಷಿಗಳಿಗೂ ತಮ್ಮದೇ ಆದ ಸಂಸಾರವಿದ್ದು ಮನುಷ್ಯರಂತೆ ಪ್ರೀತಿ, ಪ್ರೇಮ, ವಿರಹಗಳನ್ನು ಹೊಂದಿದ್ದರೂ ಅವರ ಕ್ರೌರ್ಯ ಮತ್ತು ವೈರದ ಪರಿಸರವನ್ನು ಮುಚ್ಚಿಡುವುದಿಲ್ಲ. ಪ್ರಾಣಿಗಳ ಉತ್ತಮ ಗುಣಗಳನ್ನು ಮುಂದಿಟ್ಟುಕೊಂಡು ಮಾನವನ ಕೆಟ್ಟತನಗಳನ್ನು ಖಂಡಿಸುವುದರ ಮೂಲಕ ಬದುಕಿನ ಅರ್ಥದ ನೆಲೆಯನ್ನು ಅರಸುತ್ತಾರೆ. ಪ್ರಾಣಿಗಳ ಬದುಕಿನ ಚರ್ಯೆಗಳನ್ನು ವಿವರಿಸುತ್ತಾ ಬದುಕಿನ ತತ್ವವನ್ನು ಕಂಡುಕೊಳ್ಳುತ್ತಾರೆ. ಪ್ರಾಣಿಗಳು ತಮ್ಮ ಸಹಜ ಲಕ್ಷಣಗಳನ್ನು ಒಳಗೊಂಡೂ ಮಾನವೀಯತೆಯನ್ನು ತೋರಿಸುವ ಬಗೆಯು ಮುಖ್ಯವಾಗುತ್ತದೆ. ಇವುಗಳು ಮನುಷ್ಯ ಜಗತ್ತಿನ ವರ್ತನೆಗಳಿಗೆ ಕನ್ನಡಿಯನ್ನು ಹಿಡಿಯುತ್ತವೆ. ಹುಟ್ಟು ಸಾವುಗಳನ್ನು ಕುರಿತ ರಹಸ್ಯವನ್ನು ಸಾರುತ್ತವೆ. ಪ್ರಾಣಿಗಳ ಬಗ್ಗೆ ಬರೆಯುವ ಮೂಲಕ ಮನುಷ್ಯನ ಮೂಲಭೂತ ಗುಣಗಳಾದ ಪ್ರೀತಿ, ಪ್ರೇಮ, ಸಾಂಸಾರಿಕ ಕಲಹ, ನೋವು ನಲಿವುಗಳು ಪ್ರಾಣಿಗಳಲ್ಲೂ ಇವೆ ಎಂದು ತಿಳಿಸುತ್ತವೆ. ಪ್ರಾಣಿಗಳ ಕುರಿತು ಮನುಷ್ಯನಿಗಿರುವ ಅಜ್ಞಾನದ ಮೇಲೆ ಬೆಳಕನ್ನು ಚೆಲ್ಲುತ್ತಾರೆ. ಸಾಕು ಪ್ರಾಣಿಗಳಲ್ಲದೆ ಇತರ ಜೀವಿಗಳ ಬಗ್ಗೆ ಲೇಖಕಿಗಿರುವ ವಿಶೇಷ ಪ್ರೀತಿಯನ್ನು ಕಾಣುತ್ತೇವೆ. ಅವುಗಳ ನೋವು ನಲಿವುಗಳು, ಎದೆಯ ಶೂನ್ಯ ಓದುಗರ ಹೃದಯವನ್ನು ತುಂಬಿ ಕವಿಯುತ್ತವೆ. ಪ್ರಾಣಿಗಳು ತಮಗೆ ತಾವೇ ಮಾಡಿಕೊಳ್ಳುವ ಹಿಂಸೆಯನ್ನು ಲೇಖಕಿಯು ವಿರೋಧಿಸದಿದ್ದರೂ ಅವುಗಳನ್ನು ಹಿಂಸಿಸುವ ಮನುಷ್ಯನ ನಡವಳಿಕೆಯನ್ನು ವಿರೋಧಿಸುತ್ತಾರೆ. ಈ ಸಂಕಲನದಲ್ಲಿ ಕಾಣಲು ಸಿಗುವ ಹುಲ್ಲು, ಗಿಡ, ಮರ, ಹುಳು, ಪ್ರಾಣಿ ಪಕ್ಷಿಗಳು ಮತ್ತು ಮನುಷ್ಯರೆಲ್ಲರೂ ಪ್ರಕೃತಿಮಾತೆಯ ಸೂತ್ರಕ್ಕೆ ಒಳಪಟ್ಟವರು. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ನಾಗರಿಕತೆಯು ಬೆಳೆಯುತ್ತಾ ಬಂದಂತೆ ನಿಸರ್ಗದೊಡನೆ ಮನುಷ್ಯನಿಗೆ ಇರುವ ಒಡನಾಟ ದೂರವಾಗುತ್ತಿರುವುದರಿಂದ ಆತನು ಕಳೆದುಕೊಂಡದ್ದೇ ಹೆಚ್ಚು ಎಂಬ ದನಿಯು ಇಲ್ಲಿದೆ.

    ಪುಸ್ತಕ ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕಿ : ಸುನಂದಾ ಬೆಳಗಾಂವಕರ

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಮೂಡಬಿದಿರೆಯಲ್ಲಿ ‘ರಂಗ ಸಂಸ್ಕ್ಕತಿ’ ಉಪನ್ಯಾಸ
    Next Article ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ರವರ ನೆನಪು ಕಾರ್ಯಕ್ರಮ
    roovari

    Add Comment Cancel Reply


    Related Posts

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಹೆಜ್ಜೆಗಳು’ ನಾಟಕ ಪ್ರದರ್ಶನ | ಆಗಸ್ಟ್ 19

    August 16, 2025

    ‘ಆವಿಷ್ಕಾರ’ ವೇದಿಕೆಯಿಂದ ‘ಕಥನ, ಕವನ, ಗಾಯನ’ ಕಾರ್ಯಕ್ರಮ | ಆಗಸ್ಟ್ 17

    August 16, 2025

    ಅರ್ಥಪೂರ್ಣವಾಗಿ ಜರಗಿದ ಹಂದಾಡಿ ಬಾಲಕೃಷ್ಣ ನಾಯಕ್ ಇವರ ಪ್ರಥಮ ಪುಣ್ಯತಿಥಿ

    August 16, 2025

    ಮಂಗಳೂರಿನ ಟಾಗೋರ್ ಪಾರ್ಕಿನಲ್ಲಿ ಸೃಜನಾತ್ಮಕ ಕಲಾ ಪ್ರದರ್ಶನ | ಆಗಸ್ಟ್ 17

    August 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.