ಉಡುಪಿಯ ರಾಗ ಧನ (ರಿ.) ಸಂಸ್ಥೆಯ ರಾಗರತ್ನಮಾಲಿಕೆ ಸರಣಿ ಸಂಗೀತ ಕಾರ್ಯಕ್ರಮದ 39ನೆಯ ಸಂಗೀತ ಕಛೇರಿ ದಿನಾಂಕ 22 ಜುಲೈ 2025ರಂದು ಬ್ರಹ್ಮಾವರ ತಾಲೂಕಿನ ಕುಂಜಾಲು ಶ್ರೀರಾಮಮಂದಿರದ ಸಭಾಂಗಣದಲ್ಲಿ ಇಬ್ಬರು ಯುವ ಪ್ರತಿಭೆಗಳಿಂದ ಸಂಪನ್ನಗೊಂಡಿತು. ಇಬ್ಬರೂ ಶಾಸ್ತ್ರೀಯ ಸಂಗೀತದ ಆಧಾರಮೌಲ್ಯಗಳನ್ನು ಕಾದುಕೊಂಡು, ಅದರಲ್ಲಿ ತಂತಮ್ಮ ಮನೋಧರ್ಮಕ್ಕೆ ಅನುಗುಣವಾಗಿ ಕೆಲವು ಹೊಸ ಕಲ್ಪನೆಗಳನ್ನು ಅಳವಡಿಸುವ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದರು.
ಉದ್ಘಾಟನಾ ಪೂರ್ವ ಕಛೇರಿಯನ್ನು ನೀಡಿದ ತರುಣ ಕಾರ್ತಿಕ್ ಶ್ಯಾಮ್ ಮುಂಡೋಳುಮೂಲೆ. ಗಂಭೀರವಾದ ಶಾರೀರ, ಅಪಾರವಾದ ಆತ್ಮವಿಶ್ವಾಸ, ನಿರಂತರ ಸಾಧನೆಯಿಂದ ರೂಡಿಸಿಕೊಳ್ಳಲಾದ ‘ಅ’ಕಾರಗಳು, ಸ್ವರಗಳ ಖಚಿತತೆ, ಅದಮ್ಯ ಉತ್ಸಾಹ…. 70ರ ದಶಕದ ವಿದ್ವಾಂಸರುಗಳನ್ನು ನೆನಪಿಸಿದವು.
ಶಂಕರಾಭರಣದ ಅಟತಾಳ ವರ್ಣದ ನಂತರ ಶ್ರೀರಂಜನಿ (ಗಜವದನಾ) ರಚನೆಯು ಮೂಡಿಬಂತು. ಮುಂದಿನ ವಸಂತ (ಸೀತಮ್ಮ ಮಾಯಮ) ಅಂತೆಯೇ ಪ್ರಧಾನ ರಾಗವಾಗಿದ್ದ ವರಾಳಿ (ಮಾಮವ ಮೀನಾಕ್ಷಿ) ಈ ಎರಡೂ ಕೃತಿಗಳೂ ತಂತಮ್ಮ ನೆಲೆಯಲ್ಲಿ, ತ್ವರಿತಗತಿಯ ಬಿರ್ಕಾಗಳೊಂದಿಗೆ ನೀಡಲಾದ ರಾಗಾಲಾಪನೆ, ಚುರುಕಾದ ಕೃತಿನಿರೂಪಣೆ, ನೆರವಲ್, ಮುಕ್ತಾಯಗಳಿಂದಲೇ ತುಂಬಿದ್ದ ತುಂಬಿದ್ದ ಸ್ವರ ಪ್ರಸ್ತಾರಗಳಿಂದ ಕೂಡಿದ್ದು, ಒಟ್ಟಂದದಲ್ಲಿ ಆಸಕ್ತಿದಾಯಕವಾದ ಪ್ರಸ್ತುತಿಗಳೆನಿಸಿದವು; ಶ್ರೋತೃಗಳ ಶ್ಲಾಘನೆಗೆ ಪಾತ್ರವಾದವು. ಮೋಹನ ರಾಗದ (ರಾಮಾ ನಿನ್ನೇ) ವಿಳಂಬಕಾಲ ಕೃತಿ ಒಳ್ಳೆ ಘನವಾಗಿದ್ದು ರಸಿಕರಿಗೆ ಮುದ ನೀಡಿತು. ದೇವರ ನಾಮ ಮತ್ತು ವಚನಗಳೊಂದಿಗೆ ಈ ಕಚೇರಿ ಸಮಾಪನಗೊಂಡಿತು. ವಯಲಿನ್ ನಲ್ಲಿ ಬೆಂಗಳೂರಿನ ಜನಾರ್ದನ ಎಸ್. ಅವರು ಮತ್ತು ಮೃದಂಗದಲ್ಲಿ ಸುನಾದಕೃಷ್ಣ ಅಮೈ ಇವರು ಗಾಯಕರ ಇಂಗಿತವರಿತು ಪ್ರೋತ್ಸಾಹದಾಯಕವಾಗಿ ಸಹಕರಿಸಿ ಕಚೇರಿಗೆ ಹೆಚ್ಚಿನ ಕಳೆಯನ್ನು ನೀಡಿದ್ದಾರೆ.
ಕುಮಾರಿ ಚಿನ್ಮಯಿ ಮಕ್ಕಿತ್ತಾಯ ಇವರಿಂದ ಸುಶ್ರಾವ್ಯವಾಗಿ ಪ್ರಾರ್ಥನೆ ಮತ್ತು ದೀಪ ಪ್ರಜ್ವಲನೆಯ ನಂತರ ಅಂದಿನ ಪ್ರಧಾನ ಕಚೇರಿಯನ್ನು ನಡೆಸಿಕೊಟ್ಟವರು ಯುವತಿ ಕುಮಾರಿ ಧನ್ಯ ದಿನೇಶ್ ರುದ್ರಪಟ್ಣಂ. ನಗುಮುಖ, ವಯೊಲಿನ್ ಅನ್ನು ಹೋಲುವ ಇಂಪಾದ ಕಂಠಸಿರಿ! ಸ್ಫುಟವಾದ ಉಚ್ಛಾರ! ಸ್ವರ ಸ್ಥಾನಗಳ ಮೇಲೆ ಒಳ್ಳೆಯ ಹಿಡಿತ! ಸಹವಾದಕರನ್ನು ಮಾತ್ರವಲ್ಲದೆ, ಸಭಿಕರನ್ನು ಕೂಡ ತಮ್ಮ ಸಂಗೀತ ವಲಯದೊಳಗೆ ಕರೆದುಕೊಳ್ಳುವಂತಹ ಸ್ನೇಹ ಪರವಾದ ಸಂವಹನ!
ನಾಟ (ಜಯ ಜಾನಕಿ) ಪ್ರಸ್ತುತಿಯ ನಂತರ ಗಾಯಕಿ ವಸಂತ ರಾಗದ (ಕೊಡು ಬೇಗ ದಿವ್ಯಮತಿ) ಕೀರ್ತನೆಯನ್ನು ಉತ್ತಮವಾದ ರಾಗ, ಸ್ವರ, ಕಲ್ಪನೆಗಳಿಂದ ಪೋಷಿಸಿದರು. ಪ್ರತಿ ಸ್ವರಮೆಟ್ಟಲುಗಳಲ್ಲೂ ನಿಂತು, ರಾಗವನ್ನು ಅಂದವಾಗಿ ಬೆಳೆಸುವ ಎಲ್ಲಾ ಸಾಧ್ಯತೆಗಳನ್ನೂ ಶ್ರುತ ಪಡಿಸುತ್ತ, ಸೂಕ್ತ ಕಂಡಲ್ಲಿ ‘ಅ’ಕಾರಗಳನ್ನು ಧಾರಾಳವಾಗಿ ಬೆರೆಸುತ್ತ ಸಾಗಿದ ಪರಿ ಅನನ್ಯ. ಮಾಧುರ್ಯಪೂರ್ಣವಾದ ಆಲಾಪನೆಯೊಂದಿಗೆ ಮೂಡಿಬಂದ (ರೀತಿ ಗೌಳ- ರಾಗರತ್ನ ಮಾಲಿಕೆ) ಹಿತವಾದ ಶ್ರವಣ ಸೌಖ್ಯವನ್ನು ಒದಗಿಸಿತು.
ಪ್ರಧಾನ ರಾಗಗಳು ತೋಡಿ (ನೀನೇ ದೊಡ್ಡವನೋ) ಮತ್ತು ಕಲ್ಯಾಣಿ (ಕಲ್ಲು ಸಕ್ಕರೆ ಕೊಳ್ಳಿರೋ). ಈ ಎರಡೂ ಪ್ರಸ್ತುತಿಗಳಲ್ಲಿ ಆಯಾ ರಾಗಗಳ ಉತ್ತಮಾಂಶಗಳು, ಪುನರುಕ್ತವಾಗದ ಸಂಚಾರಗಳು, ಆಕರ್ಷಕವಾದ ಸ್ವರ ಜೋಡಣೆಗಳಿಂದ ಸೊಗಸಾದ ರಾಗ ಹಂದರವನ್ನು ರಚಿಸಿ ರಾಗ ಅಂದರವನ್ನು ರಚಿಸಿದ ಕಲಾವಿದೆ, ಮುಂದೆಯೂ ಹಲವು ಸಂಗತಿಗಳಿಂದ ರಕ್ಷಿಸಿದ ರಂಜಿಸಿದ ಕೀರ್ತನೆ, ನೆರವಲ್, ಅಂತಯೇ ಬಹು ಚಾತುರ್ಯದಿಂದ ಹೆಣೆಯಲಾದ ಕ್ಲಿಷ್ಟವಾದ ಸ್ವರಗಣಿತಗಳು ಮತ್ತು ಮುಕ್ತಾಯಗಳನ್ನು ಪ್ರಸ್ತುತಪಡಿಸಿ ರಾಗಗಳ ಘನತೆಗೆ ನ್ಯಾಯ ಒದಗಿಸಿದರು.
ಸೌಖ್ಯವಾದ ಈ ಸಂಗೀತ ಪಯಣದಲ್ಲಿ ಗಾಯಕಿಗೆ ಸರಿಸಾಟಿಯಾಗಿ ಬಿಲ್ಲುಗಾರಿಕೆಯನ್ನು ತೋರಿದ ಜನಾರ್ಧನ್ ಎಸ್. ಬೆಂಗಳೂರು ಅಂತೆಯೇ ಸಹವಾದನದಲ್ಲಿ ಮತ್ತು ತನಿ ಆವರ್ತನದಲ್ಲಿ ಅದ್ಭುತವಾದ ಲಯಗಾರಿಕೆಯನ್ನು ತೋರಿದ ಸುನಾದ ಕೃಷ್ಣ ಅಮೈ ಅಭಿನಂದನಾರ್ಹರು.
ಮದುವಂತಿ (ನರಜನ್ಮ) ರಾಗಮಾಲಿಕೆ (ಬಾರೋ ಕೃಷ್ಣಯ್ಯ) ದೇವರ ನಾಮಗಳು ಮತ್ತು ಹಂಸಾನಂದಿ ತಿಲ್ಲಾನದೊಂದಿಗೆ ಈ ಕಛೇರಿ ಸಂಪನ್ನಗೊಂಡಿತು. ಈ ಕಛೇರಿಯಲ್ಲಿ ಗಾಯಕಿ ‘ದಾಸರ ರಚನೆ’ಗಳನ್ನೇ ಆಯ್ದುಕೊಂಡಿದ್ದರು ಎನ್ನುವುದು ಗಮನಾರ್ಹ ! ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಕುಂಜಾಲಿನ ಶ್ರೀರಾಮಮಂದಿರದ ಆಡಳಿತ ಮಂಡಳಿಯವರು ವಹಿಸಿದ್ದರು.
– ಸರೋಜಾ ಆರ್. ಆಚಾರ್ಯ, ಉಡುಪಿ.