ಬೆಂಗಳೂರಿನ ಜಿಗಣಿ ಸಮೀಪದ ನಿಸರ್ಗ ಲೇ ಔಟ್ ನಲ್ಲಿರುವ ‘ಪುರಂದರ ಮಂಟಪ’ದಲ್ಲಿ ‘ಲಯಾಭಿನಯ ಕಲ್ಚುರಲ್ ಫೌಂಡೇಶನ್’ ನೃತ್ಯ ಸಂಸ್ಥೆಯ ನೃತ್ಯಗುರು ಡಾ. ಜಯಶ್ರೀ ರವಿ ಇವರ ಶಿಷ್ಯೆ ಉದಯೋನ್ಮುಖ ನೃತ್ಯ ಕಲಾವಿದೆ ಕುಮಾರಿ ಆರಾಧನಾ ಎಬಿತ್ ಇತ್ತೀಚೆಗೆ ತನ್ನ ‘ಗೆಜ್ಜೆಪೂಜೆ’ಯನ್ನು ವಿದ್ಯುಕ್ತವಾಗಿ ನೆರವೇರಿಸಿಕೊಂಡಳು.
ಹತ್ತು ವರ್ಷದ ಬಾಲಪ್ರತಿಭೆ ತನ್ನ ವಯಸ್ಸಿಗೂ ಮೀರಿದ ಕಲಾನೈಪುಣ್ಯವನ್ನು ಪ್ರದರ್ಶಿಸಿ ಕಲಾರಸಿಕರ ಮೆಚ್ಚುಗೆ ಗಳಿಸಿದಳು. ನುರಿತ ನರ್ತಕಿಯಂತೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದ ಆರಾಧನಾ ಎಬಿತ್, ಅತ್ಯಂತ ಲವಲವಿಕೆಯಿಂದ ನಿರಾಯಾಸವಾಗಿ ನರ್ತಿಸಿದ್ದು ಅವಳ ನೃತ್ಯಪ್ರತಿಭೆಗೆ ಸಾಕ್ಷಿಯಾಯಿತು. ಕಲಾವಿದೆ ತನ್ನ ಭಾವಪುರಸ್ಸರ ಬೊಗಸೆ ಕಣ್ಣುಗಳ ಅಭಿವ್ಯಕ್ತಿಯಿಂದ, ಕೃತಿಯ ಅಭಿನಯಕ್ಕೆ ಪೂರಕವಾಗಿ ಭಾವಾಭಿನಯ ನೀಡುತ್ತಿದ್ದುದು ವಿಶೇಷವಾಗಿತ್ತು. ಮೂರ್ತಿ ಪುಟ್ಟದಾದರೂ ಕೀರ್ತಿ ದೊಡ್ಡದು ಎಂಬಂತೆ ಬಾಲ ಕಲಾವಿದೆ ಸೊಗಸಾದ ಸುಂದರ ಆಂಗಿಕಾಭಿನಯ, ತನ್ನ ಖಚಿತ ಅಡವು, ಹಸ್ತಮುದ್ರೆ ಮತ್ತು ಅಂಗಶುದ್ಧ ನರ್ತನದಿಂದ ಪ್ರೇಕ್ಷಕರನ್ನು ಸೆಳೆದಳು.
ಸಾಂಪ್ರದಾಯಕ ‘ಪುಷ್ಪಾಂಜಲಿ’ಯಿಂದ ಕಲಾವಿದೆ ಪ್ರಸ್ತುತಿ ಆರಂಭಿಸಿದಳು. ರಂಗಾಕ್ರಮಣದಲ್ಲಿ ದೇವಾನುದೇವತೆಗಳಿಗೆ, ಗುರು-ಹಿರಿಯರಿಗೆ, ಭೂಮಾತೆಗೆ, ವಾದ್ಯಗೋಷ್ಠಿ ಮತ್ತು ಕಲಾರಸಿಕರಿಗೆ ನಮ್ರಭಾವದಿಂದ ನೃತ್ತ ನಮನ ಸಲ್ಲಿಸಿ, ಚಿಗರೆ ಮರಿಯಂತೆ ಮಿಂಚಿನ ಸಂಚಾರದಲ್ಲಿ ವಿಶಿಷ್ಟ ವಿನ್ಯಾಸದ ನೃತ್ತಗಳನ್ನು ಸಮರ್ಪಿಸಿದಳು. ಗುರು ಜಯಶ್ರೀ ರವಿ ಅವರ ಉತ್ತಮ ನೃತ್ಯಶಿಕ್ಷಣಕ್ಕೆ ಸಾಕ್ಷಿಯಾಯಿತು. ಕಲಾವಿದೆಯ ಆತ್ಮವಿಶ್ವಾಸದ ಪ್ರಥಮ ನೂಪುರಾರ್ಪಣೆ. ಅನಂತರ – ಶ್ರೀ ಪುರಂದರದಾಸರ ’ಗಜವದನ ಬೇಡುವೆ ಗೌರೀ ತನಯ’ ಎಂಬ ಗಣೇಶಸ್ತುತಿಯನ್ನು ಆರಾಧನಾ, ಗಣಪನ ಮೋಹಕ ಭಂಗಿಗಳ ಪ್ರದರ್ಶನದಿಂದ, ಸಂಕ್ಷಿಪ್ತ ಸಂಚಾರಿಗಳ ಅಭಿನಯದಿಂದ ಮುದ ನೀಡಿದಳು.
ಮುಂದೆ- ತಾಳ ಮತ್ತು ಲಯಬದ್ಧವಾಗಿ, ಪಾದರಸದ ಹೆಜ್ಜೆ-ಗೆಜ್ಜೆಗಳಿಂದ ‘ಜತಿಸ್ವರ’ವನ್ನು ಆನಂದದಿಂದ ನಿರೂಪಿಸಿದ್ದು ಮತ್ತು ಪ್ರದರ್ಶಿಸಿದ ಕಲಾತ್ಮಕ ಭ್ರಮರಿ- ಆಕಾಶಚಾರಿಗಳು, ಅರೆಮಂಡಿ, ಬಾಗು ಬಳುಕುಗಳು ಕಲಾವಿದೆಯ ನೃತ್ಯ ವ್ಯಾಕರಣದ ತಿಳಿವಿಗೆ ಕನ್ನಡಿ ಹಿಡಿಯಿತು. ಗುರು ಜಯಶ್ರೀ ಅವರ ಸ್ಫುಟವಾದ ನಟುವಾಂಗ ಗಮನಾರ್ಹವಾಗಿತ್ತು. ಮುಂದಿನ ‘ಶಿವ ಶಬ್ದಂ’ (ರಚನೆ- ಜಯಶ್ರೀ ರವಿ) ಶಿವ-ಶಿವೆಯರು ಒಂದಾಗುವ ಕಥಾ ಪ್ರಸಂಗವನ್ನು ಚಿತ್ರಿಸಿತು. ಅದಕ್ಕೆ ಕಾರಣವಾಗುವ ರತಿ-ಮನ್ಮಥರ ನೃತ್ಯ-ಕಾಮಬಾಣ ಪ್ರಯೋಗದ ಭಾವುಕ ಪ್ರಸಂಗದಲ್ಲಿ ಮನ್ಮಥ ಅನಂಗನಾಗುವ ಸಂದರ್ಭವನ್ನು ಕಲಾವಿದೆ ನವಿರಾಗಿ ಅಭಿನಯಿಸಿದಳು. ಅವಳ ಹದವರಿತ ಹೆಜ್ಜೆಗಳು ಮತ್ತು ಮನಮೋಹಕ ನೃತ್ತಾಭಿನಯ ಸೊಗಸೆನಿಸಿದವು.
‘ಲೀಲಾ ಶುಕ ಶ್ಲೋಕ’ದ ಕನ್ನಡ ಅನುವಾದದ ಕೃತಿಯಲ್ಲಿ ಕಲಾವಿದೆ, ತುಂಟ ಕೃಷ್ಣನ ಲೀಲಾ ವಿನೋದಗಳನ್ನು ಬಹು ರಮ್ಯವಾಗಿ ಸಾಕಾರಗೊಳಿಸಿದಳು. ಶ್ರೀ ಪದ್ಮಚರಣರ ರಚನೆ –‘ಶೃಂಗ ಪುರಾಧೀಶ್ವರಿ ಶಾರದೆ’ಯನ್ನು ಸಾಕ್ಷಾತ್ ಧರೆಗಿಳಿಸಿದ ಆರಾಧನಾ, ದೈವೀಕ ನೆಲೆಯ ಆನಂದಾನುಭವ ನೀಡಿದಳು. ಅಂತ್ಯದಲ್ಲಿ ಹರ್ಷಭರಿತ ಚಲನೆಗಳಿಂದ ಕೂಡಿದ್ದ ತಿಲ್ಲಾನ-ಮಂಗಳದವರೆಗೂ ಆರಾಧನಾ, ತನಗೆ ದೊರೆತ ಬದ್ಧತೆಯ ಶಿಕ್ಷಣದ ಸಾಕಾರ ರೂಪವಾಗಿ ಬಹು ಅಚ್ಚುಕಟ್ಟಾಗಿ ಮನೋಜ್ಞವಾಗಿ ನರ್ತಿಸಿದ್ದು ಸ್ತುತ್ಯಾರ್ಹ.
ಪುಟ್ಟ ವಯಸ್ಸಿಗೆ ಕಲಾವಿದೆ ಸಾಧಿಸಿರುವ ಲಯಜ್ಞಾನ, ಸುಂದರ ನೃತ್ತಾಭಿನಯ ಅವಳು ಪಡೆದ ತರಬೇತಿ, ಪರಿಶ್ರಮ- ಬದ್ಧತೆಗೆ ಸಾಕ್ಷಿಯಾಗಿತ್ತು. ಅವಳ ಯಶಸ್ವೀ ನೃತ್ಯ ಪ್ರದರ್ಶನಕ್ಕೆ ಕಳಸವಿಟ್ಟಂತೆ ಗಾಯನ ಮತ್ತು ವಾದ್ಯಗಳ ಅಮೋಘ ಸಾಂಗತ್ಯ ನೀಡಿದ ವಿದುಷಿ ಜಯಶ್ರೀ ಅಜಯ್ ಕುಮಾರ್ (ಸುಮಧುರ ಗಾಯನ), ವಿದ್ವಾನ್ ಶಶಿಶಂಕರ್ (ಮೃದಂಗ ವಾದನ ), ವಿದ್ವಾನ್ ರಘು ಸಿಂಹ (ಕೊಳಲು ವಾದನ), ವಿದ್ವಾನ್ ಡಿ.ವಿ. ಪ್ರಸನ್ನ ಕುಮಾರ್ (ರಿದಂ ಪ್ಯಾಡ್ ವಿಶಿಷ್ಟ ಧ್ವನಿ ಪರಿಣಾಮ), ವಿದ್ವಾನ್ ಶ್ರೀನಿವಾಸ್ (ಸಿತಾರ್ ವಾದನ) ಮತ್ತು ಗುರು ಜಯಶ್ರೀ ರವಿ ಉತ್ಸಾಹದ ನಟುವಾಂಗದಲ್ಲಿ ಮನಮುಟ್ಟಿದರು. ಅಂದು ಕುಮಾರಿ ಆರಾಧನಾ ಭರವಸೆಯ ನೃತ್ಯ ಕಲಾವಿದೆಯಾಗಿ ಹೊರಹೊಮ್ಮಿದಳು.
*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.