ಉಡುಪಿಯ ಪ್ರತಿಷ್ಠಿತ ಸಂಸ್ಥೆ ರಾಗ ಧನ (ರಿ.) ಇದರ ಆಶ್ರಯದಲ್ಲಿ ರಾಗರತ್ನಮಾಲಿಕೆ -40 ತಿಂಗಳ ಸರಣಿ ಕಾರ್ಯಕ್ರಮವು ಚೆನ್ನೈಯ ಭಾರದ್ವಾಜ್ ಸುಬ್ರಹ್ಮಣ್ಯಂ ಇವರ ಸಂಗೀತ ಕಛೇರಿಯೊಂದಿಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.
ಉತ್ತಮ ಶಾರೀರ ಭಾವಸ್ಪಷ್ಟತೆ, ಉಚ್ಚಾರ ಸ್ಪುಟತೆ, ಲಯ ಶುದ್ಧತೆಯಿಂದ ವಿದ್ವತ್ಪೂರ್ಣ ಕಚೇರಿ ನೀಡಿದವರು ಚೆನ್ನೈನ ಭಾರದ್ವಾಜ್ ಸುಬ್ರಹ್ಮಣ್ಯಂ. ಆರಂಭದಲ್ಲಿ ವಲಚಿ ನವರಾಗಮಾಲಿಕೆಯನ್ನು ಆದಿತಾಳದಲ್ಲಿ ಸುಂದರವಾಗಿ ಹಾಡಿ ಚರಣ ಭಾಗದಲ್ಲಿ ಬೇರೆ ಬೇರೆ ರಾಗಗಳಿಗೆ ಸ್ವರ ಪ್ರಸ್ತಾರವನ್ನು ಅಚ್ಚುಕಟ್ಟಾಗಿ ಹಾಕಿ ಹಾಡಿದರು. ಮುಂದೆ ಆರಭಿ ರಾಗದ ಚುಟುಕಾದ ರಾಗಾಲಾಪನೆ ‘ವಿಘ್ನೇಶ್ವರ ಶುಭಕಾರಕ’ ಕೃತಿಗೆ ಸ್ವರ ಪ್ರಸ್ತಾರವನ್ನು ನೀಡಿದರು. ತದನಂತರ ಶುದ್ಧಧನ್ಯಾಸಿ ರಾಗಾಲಾಪನೆ ‘ನಾರಾಯಣ ನಿನ್ನ’ ಪುರಂದರದಾಸರ ದೇವರ ನಾಮವು ಸ್ವರಪ್ರಸ್ತಾರದೊಂದಿಗೆ ಮೂಡಿ ಬಂದದು ಶ್ಲಾಘನೀಯವಾಗಿತ್ತು.
ಮುಂದುವರಿದು ವೇಗವಾಗಿ ‘ಮಾಳವಿ’ ರಾಗದಲ್ಲಿ ‘ನೆನರುಂಚಿನ’ ಆದಿತಾಳದಲ್ಲಿ ಕೃತಿಯನ್ನು ಪ್ರಸ್ತುತಪಡಿಸಿದರು. ಕಛೇರಿ ಮುಂದುವರಿಯುತ್ತಾ ಭೈರವಿ ರಾಗ ಆಲಾಪನೆಯೂ ದೀರ್ಘವಾಗಿ ಒಂದೇ ಉಸಿರಿನಲ್ಲಿ ನಿಂತ ಪರಿ ಅನನ್ಯ. ‘ನನ್ನುಬ್ರೋವಲಲಿತ’ ಕೃತಿಯನ್ನು ತುಂಬಾ ಸೊಗಸಾಗಿ ಹಾಡಿ ನೆರವಲ್-ಸ್ವರಪ್ರಸ್ತಾರಗಳ ಗುಚ್ಛವನ್ನು ಅದೆಷ್ಟು ಚಂದವಾಗಿ ಪ್ರಸ್ತುತಪಡಿಸಿದರು. ಭಾರ್ಗವ ವಿಘ್ನೇಶ್ ಚೆನ್ನೈ ಇವರು ಕಲಾವಿದರನ್ನು ಅನುಸರಿಸಿಕೊಂಡು ವಯೊಲಿನ್ ಸಹವಾದನ ನೀಡಿದ್ದು ಶ್ಲಾಘನೀಯ. ಮೃದಂಗವಾದನ ನುಡಿಸಿರುವ ಡಾ. ಬಾಲಚಂದ್ರ ಆಚಾರ್ ಮಣಿಪಾಲ ಕಲಾವಿದರ ಮನೋಧರ್ಮವನ್ನು ಅರಿತುಕೊಂಡು ನುಡಿಸಿದ್ದು ಇಡೀ ಕಚೇರಿಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು ಹಾಗೂ ಸುಂದರವಾದ ತನಿ ಆವರ್ತನವನ್ನು ಉಣಬಡಿಸಿದರು.
ಮುಂದೆ ಶ್ರೀ ಮುತ್ತುಸ್ವಾಮಿ ದೀಕ್ಷಿತರ ‘ಆನಂದ ನಟನ ಪ್ರಕಾಶ ಚಿತ್ ಸಭೇಶಂ’ ಕೇದಾರ ರಾಗದಲ್ಲಿ ಮುದ್ದಾಗಿ ಪ್ರಸ್ತುತಪಡಿಸಿದರು. ಮತ್ತೆ ಸಂಗೀತ ಕಛೇರಿ ಮುಂದುವರಿಯುತ್ತಾ ಸರಸ್ವತಿ ರಾಗದಲ್ಲಿ ರಾಗಾಲಾಪನೆ ತಾನ- ಪಲ್ಲವಿಯನ್ನು ಪ್ರಸ್ತುತಪಡಿಸಿದರು. ಭಾರದ್ವಾಜ್ ಸುಬ್ರಹ್ಮಣ್ಯಂ ಅವರು ತಾನು ರಚಿಸಿರುವ ಪಲ್ಲವಿ ‘ಸಂಗೀತಾದಿ ಕಲಾವಿನೋದಿನಿ ಶ್ರೀ ಮುಕಾಂಬಿಕಾ ಭಗವತೀ ಜನನೀಂ’ ಪಲ್ಲವಿಯನ್ನು ಖಂಡಜಾತಿ ತ್ರಿಪುಟತಾಳದಲ್ಲಿ ‘ರಾಗಂ _ತಾನಂ ಪಲ್ಲವಿ’ಯನ್ನು ಸಮದಿಂದ 10 ಮಾತ್ರೆ ಬಿಟ್ಟು ಇರುವ ಅನಾಗತ ಎಡುಪ್ಪಿನಿಂದ ಪ್ರಾರಂಭಿಸಿ ಹಾಡಿದರು. ಈ ಪಲ್ಲವಿಯು ರಾಗಮಾಲಿಕೆಯಲ್ಲಿ ಮೂಡಿ ಬಂದುದು ಭಾರಧ್ವಾಜ್ ಅವರ ವಿದ್ವತ್ತಿಗೆ ಸಾಕ್ಷಿಯಾಗಿತ್ತು. ರಾಗಮಾಲಿಕೆಯಲ್ಲಿ ಸೂರ್ಯ, ಕುಂತಲವರಾಳಿ, ಬಿಂದುಮಾಲಿನಿ, ಕಾಂತಾಮಣಿ, ರಂಜನಿ, ನಾಗಸ್ವರಾವಳಿ, ಕಾಪಿ- ರಾಗಗಳ ಮಾಲೆಗಳು ಅಚ್ಚುಕಟ್ಟಾಗಿ ಮೂಡಿಬಂದುವು. ಸಿಂಧುಭೈರವಿಯಲ್ಲಿ ಉಗಾಭೋಗ ಹಾಡಿ, ಮುಂದೆ ಮಿಶ್ರ ಮಾಂಡ್ ರಾಗದಲ್ಲಿ ಬಾರೋ ಕೃಷ್ಣಯ್ಯ ರಾಗಮಾಲಿಕೆಯಲ್ಲಿ ಹಾಡಿದರು. ಭಾರಧ್ವಾಜ್ ಸುಬ್ರಹ್ಮಣ್ಯಂ ಅವರ ಸ್ವರಚಿತ ಚಂದ್ರಕೌಂಸ್ ರಾಗದ ತಿಲ್ಲಾನ ಹಾಗೂ ಮಂಗಳದೊಂದಿಗೆ ಕಚೇರಿ ಸಂಪನ್ನಗೊಂಡಿತು. ತಂಬೂರದಲ್ಲಿ ಕುಮಾರಿ ಸ್ವಸ್ತಿ ಎಂ. ಭಟ್. ಸಹಕರಿಸಿದರು.
– ರಸಿಕ ರಂಜನಿ