Subscribe to Updates

    Get the latest creative news from FooBar about art, design and business.

    What's Hot

    ಅಮೃತ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನಡೆದ ನಾಲ್ಕು ದಿನಗಳ ಕಾರ್ಯಕ್ರಮಗಳು ಸಂಪನ್ನ

    September 15, 2025

    ಪುಸ್ತಕ ವಿಮರ್ಶೆ | ‘ಈ ಪಯಣ ನೂತನ’ ಲಲಿತ ಪ್ರಬಂಧಗಳು

    September 15, 2025

    ಗುರು ಸಂಜೀವ ಸುವರ್ಣರಿಗೆ ಸಪ್ತತಿ ಅಭಿನಂದನೆ ಸಮಾರಂಭ

    September 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ‘ಈ ಪಯಣ ನೂತನ’ ಲಲಿತ ಪ್ರಬಂಧಗಳು
    Article

    ಪುಸ್ತಕ ವಿಮರ್ಶೆ | ‘ಈ ಪಯಣ ನೂತನ’ ಲಲಿತ ಪ್ರಬಂಧಗಳು

    September 15, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಈ ಪಯಣ ನೂತನ’ ರೇಡಿಯೋ ಜಾಕಿ ನಯನಾ ಶೆಟ್ಟಿಯವರ ಮೊದಲ ಕೃತಿ.‌ ಹೆಸರಿಗೆ ತಕ್ಕಂತೆ ಹೊಸ ದಾರಿಯನ್ನು ಹುಡುಕುವ ಪ್ರಯತ್ನವಿರುವ 21 ಲಲಿತ ಪ್ರಬಂಧಗಳು ಇಲ್ಲಿವೆ. ಪರಂಪರೆಯ ಮತ್ತು ಆಧುನಿಕ ಶೈಲಿಯ ಜೀವನ ಕ್ರಮಗಳ ನಡುವೆ ಮಾಡುವ ಒಂದು ತೌಲನಿಕ ಚಿಂತನೆ ಸಂಕಲನದಲ್ಲಿರುವ ಎಲ್ಲ ಲೇಖನಗಳ ಮೂಲ ಸ್ರೋತ. ಸಹಜವಾಗಿಯೇ ತಮ್ಮ ಬಾಲ್ಯದಲ್ಲಿ ತಾವು ಕಂಡು ಅನುಭವಿಸಿದ ಜೀವನದ ಒಂದೊಂದು ಹೆಜ್ಜೆಗಳು ಅವರಿಗೆ ಧನಾತ್ಮಕವಾಗಿಯೂ ಅಧುನಿಕ, ನಾಗರಿಕವೆಂದು ಹೇಳಿಕೊಳ್ಳುವ ಬದುಕಿನಲ್ಲಿ ಕಾಣುವ ದೋಷ – ವಿಪರ್ಯಾಸಗಳು ಋಣಾತ್ಮಕವಾಗಿಯೂ ಅವರಿಗೆ ಕಾಣುತ್ತವೆ. ಕಳೆದುಕೊಂಡ ಹೆಜ್ಜೆಗಳನ್ನು ಮತ್ತೆ ಪಡೆದುಕೊಂಡರೆ ಎಷ್ಟು ಚೆನ್ನ ಎಂದು ಅವರಿಗೆ ಅನ್ನಿಸುತ್ತದೆ. ಹಾಗೆಂದು ಆಧುನಿಕ ಜಗತ್ತಿನಲ್ಲಿ ಸಾಗುತ್ತಿರುವ ಎಲ್ಲರಲ್ಲೂ ಆ ದೋಷಗಳಿವೆ ಎಂದು ಅವರು ಹೇಳುತ್ತಿಲ್ಲ. ಫಿನ್ ಲ್ಯಾಂಡ್, ಜಪಾನ್, ಸಿಂಗಾಪುರಗಳಂತಹ ದೇಶಗಳಲ್ಲಿ ಎಳೆಯ ಮಕ್ಕಳಿಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಿರುವ ರೀತಿಯ ಬಗ್ಗೆ ಅವರ ಶ್ಲಾಘನೆಯಿದೆ.

    ಮನುಷ್ಯನ ಖುಷಿಯ ಬಗೆಗಿನ ಮೊದಲ ಲೇಖನದಲ್ಲೇ ಇದು ಅರಂಭವಾಗುತ್ತದೆ. ಜಗತ್ತಿನ ಅತ್ಯಂತ ಹೆಚ್ಚು ಖುಷಿಯಾಗಿರುವ ದೇಶ ಫಿನ್ ಲ್ಯಾಂಡ್ ಎಂಬುದನ್ನು ತಮ್ಮ ಓದಿನ ಮೂಲಕ ಲೇಖಕಿ ತಿಳಿದುಕೊಂಡಿದ್ದಾರೆ. Where does happiness lie? ಅಂತ ಕೇಳಿದರೆ ಯಾರೋ It is in your eye ! ಅಂದರಂತೆ ಯಾರೋ ! ಹೌದು ಖುಷಿ ಅನ್ನುವುದು ನಮ್ಮ ಒಳಗೇ ಇದೆ. ನಾವು ಬದುಕನ್ನು ನೋಡುವ ದೃಷ್ಟಿಕೋನದಲ್ಲಿದೆ. ನಮ್ಮ ಹಿರಿಯರು ನಮಗೆ ಅದನ್ನು ಹೇಳಿಕೊಟ್ಟಿದ್ದರು. ಬೆಳಗ್ಗೆ ಬೇಗ ಯಾಕೆ ಏಳಬೇಕು, ಎದ್ದ ಕೂಡಲೇ ದೇಹವನ್ನೂ ಮನಸ್ಸನ್ನೂ ಹೇಗೆ warm up ಮಾಡಿಕೊಳ್ಳಬೇಕು ಎಂಬುದನ್ನು ನಾವು ಅಗ ಸಹಜವಾಗಿಯೇ ಮೈಗೂಡಿಸಿಕೊಂಡಿದ್ದೆವು. ಇತರರ ಬಗ್ಗೆ ಅಸೂಯೆ ಪಡದಿರುವುದು, ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದು, ದಾನ ಮಾಡುವುದು ಮೊದಲಾದ ಕ್ರಿಯೆಗಳು ನಮಗೆ ನೀಡುವ ಖುಷಿಗೆ ಎಣೆಯಿಲ್ಲ. ಆದರೆ ಈಗ ಸ್ವಾರ್ಥ ಸುಖಕ್ಕಾಗಿ ಹಣ ಕೂಡಿಡುವ ಮತ್ತು ಐಷಾರಾಮಿ ಜೀವನದ ಹಿಂದೆ ಸ್ಪರ್ಧಾತ್ಮಕ ವೇಗದಲ್ಲಿ ಓಡುವ ಭರಾಟೆಯಲ್ಲಿ ನಮ್ಮ ಮಕ್ಕಳಿಗೆ ನಾವು ಆ ಪಾಠವನ್ನು ದಾಟಿಸುತ್ತಿಲ್ಲ ಅನ್ನುವುದು ಲೇಖಕಿಯ ಕೊರಗು.

    ಮಕ್ಕಳಿಗೆ ಸ್ವಚ್ಚತೆಯ ಪಾಠವನ್ನು ಹಿಂದೆ ನಮ್ಮ ಶಾಲೆಗಳಲ್ಲಿ ಶಿಕ್ಷಣದ ಒಂದು ಭಾಗವಾಗಿ ಹೇಳಿ ಕೊಡುತ್ತಿದ್ದರು. ಆಧುನಿಕತೆಯ ಎಲ್ಲ ಸೌಲಭ್ಯಗಳ ನಡುವೆಯೂ ಅಂಥ ಪ್ರಾಕ್ಟಿಕಲ್ ಪಾಠಗಳನ್ನು ಇಂದು ಜಪಾನ್ ದೇಶ ಆಚರಣೆಗೆ ತಂದಿದೆ. ಮಕ್ಕಳ ಕೈಯಲ್ಲಿ ಅವರು ಟಾಯ್ಲೆಟ್ ಸ್ವಚ್ಛ ಮಾಡಿಸುತ್ತಾರೆ. ನಮ್ಮ ದೇಶದ ಹಲವರಲ್ಲಿ ಮಕ್ಕಳ ಹತ್ತಿರ ಅಂಥ ಕೆಲಸ ಮಾಡಿಸುವುದು ತಮ್ಮ ಪ್ರತಿಷ್ಠೆಗೆ ಕಡಿಮೆ ಅಂತ ಅವರು ತಿಳಿದುಕೊಳ್ಳುತ್ತಾರೆ. ಇದರಿಂದ ಮುಂದೆ ತೊಂದರೆಯಾಗುವುದು ತಮಗೇ ಅನ್ನುವ ಅರಿವು ಅವರಿಗಿಲ್ಲ. ಅಂತೆಯೇ ಮಕ್ಕಳು ಚ್ಯೂಯಿಂಗ್ ಗಮ್ ತಿಂದು ಸಿಕ್ಕಿದಲ್ಲಿ ಅಂಟಿಸುವ ಕೆಟ್ಟ ಚಟ ಬೆಳೆಸಿಕೊಳ್ಳುವುದು. ಚ್ಯೂಯಿಂಗ್ ಗಮ್ ನಿಂದ ಆಗುವ ಅನಾಹುತವನ್ನು ತಪ್ಪಿಸಲು ಸಿಂಗಾಪುರ್ ಸರಕಾರ ಅದರ ಮಾರಾಟವನ್ನೇ ನಿಷೇಧಿಸಿದೆ. ಅಂತೆಯೇ ಕಸದ ವಿಲೇವಾರಿ. ಕಾರಿನಲ್ಲಿ ಪ್ರಯಾಣಿಸುವಾಗ ಎಸೆಯುವ ಕಸಗಳನ್ನು ಹಾಕಲು ಒಳಗೇ ಒಂದು ಕಸದ ಬುಟ್ಟಿ ಇಟ್ಟುಕೊಳ್ಳುವ ಕೆಲವರಾದರೂ ಇದ್ದಾರೆ. ಇಂಥ ಸುಧಾರಣೆಗಳನ್ನು ತರಲು ನಮ್ಮಿಂದ ಸಾಧ್ಯವಿಲ್ಲವೇ ಎಂದು ಲೇಖಕಿ ಕೇಳುತ್ತಾರೆ.

    ನಮ್ಮ ಹಿರಿಯರು ಯಾವಾಗಲೂ ನಮ್ಮ ಹತ್ತಿರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸುತ್ತ ನಾವು ಚುರುಕಾಗಿ ಓಡಾಡುವಂತೆ ಮಾಡುತ್ತಿದ್ದರು. ಆದರೆ ಇವತ್ತು ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸುವ ರೀತಿಯಲ್ಲಿಯೇ ಎಡವುತ್ತಿದ್ದಾರೆ. ತಮಗೆ ಸಿಗದಿದ್ದ ಸುಖವನ್ನು ಅವರಾದರೂ ಅನುಭವಿಸಲಿ ಎಂದು ಮಕ್ಕಳ ಬಗ್ಗೆ ವಿಪರೀತ ಮೃದು ಧೋರಣೆ ತಾಳುತ್ತಾರೆ. ಅವರಿಗೆ ಕುಳಿತಲ್ಲಿಗೇ ಎಲ್ಲವನ್ನೂ ಒದಗಿಸುತ್ತ ಅವರು ಬೇಕೆಂದು ಹೇಳಿದ್ದನ್ನೆಲ್ಲ ಕೊಡಿಸುತ್ತ ಅವರು ಪೂರ್ತಿಯಾಗಿ ಪರಾವಲಂಬಿಗಳಾಗುವಂತೆ ಮಾಡುತ್ತಾರೆ. ಅಲ್ಲದೆ ವಾಸ್ತವದ ಬದುಕಿನಲ್ಲಿ ನಾವು ಬಯಸಿದ್ದೆಲ್ಲವೂ ಸಿಗುವುದಿಲ್ಲ ಎಂಬ ಕಟುಸತ್ಯದ ಪರಿಚಯವೇ ಅವರಿಗೆ ಆಗದಂತೆ ಮಾಡುವುದು ಅಪಾಯಕಾರಿ ಎನ್ನುತ್ತಾರೆ ಲೇಖಕಿ.

    ಪ್ರಕೃತಿಯ ಸಾಂಗತ್ಯವು ನಮಗೆ ಪ್ರಾಣಿ-ಪಕ್ಷಿ ಮೊದಲಾದ ಸಕಲ ಜೀವರಾಶಿಯನ್ನು ಪ್ರೀತಿಸುವ ಪಾಠವನ್ನು ಹೇಳಿಕೊಡುತ್ತದೆ. ನಗರದ ಬದುಕಿನಲ್ಲಿ ಇದು ಸಾಧ್ಯವಾಗುವುದಿಲ್ಲ ನಿಜ. ಆದರೆ ಅಪರೂಪಕ್ಕೊಮ್ಮೆಯಾದರೂ ನಮ್ಮ ಮಕ್ಕಳನ್ನು ಕಾಡು-ಗುಡ್ಡಗಳ ನಡುವಿನ ಚಾರಣಕ್ಕೋ ವಿಹಾರಕ್ಕೋ ಕರೆದೊಯ್ಯುವುದರಿಂದ ಮಕ್ಕಳಿಗೆ ಪ್ರಕೃತಿ-ಪರಿಸರಗಳನ್ನು ಪ್ರೀತಿಸಲು ಮತ್ತು ಅವುಗಳಿಂದ ನಮಗಾಗುವ ಉಪಕಾರಗಳ ಬಗ್ಗೆ ತಿಳಿಯ ಹೇಳಬಹುದಲ್ಲವೇ ಎಂದೂ ಹಳ್ಳಿಯಲ್ಲಿರುವ ಬಂಧುಗಳ ಮನೆಗೆ ಹೋಗಿ ತೋಟಗಾರಿಕೆ-ಬೇಸಾಯ–ಕೃಷಿ ಬದುಕುಗಳ ಪರಿಚಯ ಮಾಡಿಸುತ್ತ ಹಿರಿಯರ ಜತೆಗೆ ಸಂಬಂಧಗಳನ್ನು ಗಾಢಗೊಳಿಸುವುದು ಎಷ್ಟು ಒಳ್ಳೆಯದಲ್ಲವೇ ಎಂದೂ ಅವರಿಗೆ ಅನ್ನಿಸುತ್ತದೆ.

    ಹಲಸಿನ ಹಣ್ಣಿನ ಕುರಿತಾದ ಕೊನೆಯ ಪ್ರಬಂಧದಲ್ಲಿ ಹಿಂದಿನ ಕಾಲದಲ್ಲಿ ಹಲಸು ಅನ್ನುವುದು ಹೇಗೆ ಬಡವರ ಬಂಧುವಾಗಿತ್ತು, ತಾವೆಲ್ಲ ಹೇಗೆ ಇಡೀ ಇಡೀ ಹಣ್ಣುಗಳನ್ನು ಆಸೆಯಿಂದ ಕಬಳಿಸುತ್ತಿದ್ದೆವು ಅನ್ನುತ್ತ ಇಂದಿನ ಮಕ್ಕಳು ಅದರ ಬಗ್ಗೆ ಬೆಳೆಸಿಕೊಂಡ ಅನಾದರದ ಕುರಿತು ಲೇಖಕಿ ವಿಷಾದಿಸುತ್ತಾರೆ. ಆದರೂ ಇಂದಿನ ವೈದ್ಯಶಾಸ್ತ್ರವು ಹಲಸಿನ ಕಾಯಿ-ಹಣ್ಣುಗಳ ಮಹತ್ವದ ಮೇಲೆ ಒತ್ತುಹಾಕುತ್ತಿರುವುದರಿಂದ ಬೇರೆ ಬೇರೆ ದೇಶಗಳಿಂದ ಬರುತ್ತಿರುವ ವೈವಿಧ್ಯಮಯ ಹಲಸಿನ ತಳಿಗಳನ್ನು ಪ್ರದರ್ಶನಕ್ಕಿಡುವ ಹಲಸಿನ ಮೇಳಗಳ ಬಗ್ಗೆ ಅವರಿಗೆ ಸಂತೋಷವಿದೆ.

    ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತ ಯುವಕರನ್ನೂ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿರುವ ಜಪಾನ್ ದೇಶದ ನಡೆಯ ಬಗ್ಗೆ ಅವರು ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಾರೆ. ಎಂದಿಗೂ ಬತ್ತಿ ಹೋಗದ ಆಹಾರ ಪದಾರ್ಥಗಳ ಮೇಲಿನ ಬೇಡಿಕೆಯಿಂದಾಗಿ ಕೃಷಿಕ್ಷೇತ್ರವನ್ನು ಯುವಕರು ತಾವಾಗಿಯೇ ಆಯ್ದುಕೊಳ್ಳುವ ದಿನಗಳು ಬರಬೇಕಾಗಿವೆ ಎಂದು ಅವರು ‘ಅಪ್ಪ ನೆಟ್ಟ ಆಲದ ಮರ’ ಎಂಬ ಲೇಖನದಲ್ಲಿ ಹೇಳುತ್ತಾರೆ.

    ನಯನಾ ಅವರು ಬರೆದ ಪ್ರತಿಯೊಂದು ಲೇಖನವೂ ಹೀಗೆ ಒಂದಿಲ್ಲೊಂದು ಜೀವನ ಮೌಲ್ಯಗಳ ಕುರಿತಾದ ಪಾಠವನ್ನು ಹೇಳುತ್ತದೆ. ಸ್ಫಟಿಕ ಜಲದಂತೆ ಶುದ್ಧವೂ ದೋಷರಹಿತವೂ ಆದ ಭಾಷೆಯು ಅವರ ನಿರೂಪಣಾ ಶೈಲಿಗೆ ಮೆರುಗನ್ನಿತ್ತಿದೆ. ಮುನ್ನುಡಿಯಲ್ಲಿ ಜೋಗಿಯವರು ‘ಲೇಖಕಿಯ ಪಯಣ ಕಥೆಗಾರ್ತಿಯಾಗಿ ಮುಂದುವರಿಯಬೇಕು’ ಅಂದಿದ್ದಾರೆ.‌ ಆ ಪಯಣಕ್ಕೆ ಇಲ್ಲಿನ ಹಲವು ಲೇಖನಗಳು ಈಗಾಗಲೇ ನಾಂದಿ ಹಾಡಿವೆ. ‘ಹುಣಿಸೆಮರದಲಿ ಹೆಡೆಯೆತ್ತಿದ ಕಾಳಿಂಗ’, ‘ಮನೆಗೆ ಮರಳಿದಳಾ ಲಕ್ಷ್ಮಿ?’, ‘ಅವಳು ಗೆದ್ದರೆ ನಾನೇ ಗೆದ್ದಂತೆ’, ‘ಯಶಸ್ಸಿನ ವ್ಯಾಖ್ಯಾನಗಳು’ ಮೊದಲಾದ ಲೇಖನಗಳು ಹತ್ತಿರ ಹತ್ತಿರ ಕಥನ ಶೈಲಿಯಲ್ಲೇ ಇವೆ. ಕೆಲವು ಲೇಖನಗಳಲ್ಲಿ ಅವರು ನಿಸರ್ಗದ ಚೆಲುವನ್ನು ವರ್ಣಿಸುವ ಪರಿ ಯಾವ ರಮ್ಯ ಕಥೆಗಾರರಿಗೂ ಕಡಿಮೆಯಿಲ್ಲ. ಖಂಡಿತವಾಗಿಯೂ ನಯನಾರವರಿಂದ ಮುಂದೆ ಒಳ್ಳೆಯ ಕಥೆಗಳನ್ನೂ ಎದುರು ನೋಡಬಹುದು.

    ಕೃತಿಯ ಹೆಸರು : ‘ಈ ಪಯಣ ನೂತನ’ ಲಲಿತ ಪ್ರಬಂಧಗಳು
    ಲೇ : RJ ನಯನಾ ಶೆಟ್ಟಿ
    ಪ್ರ : ವಿನಯ ಪ್ರಕಾಶನ ಮಂಗಳೂರು
    ಪ್ರ.ವ. : 2025

    -ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ಲೇಖಕಿ : ರೇಡಿಯೋ ಜಾಕಿ ನಯನಾ ಶೆಟ್ಟಿ

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಗುರು ಸಂಜೀವ ಸುವರ್ಣರಿಗೆ ಸಪ್ತತಿ ಅಭಿನಂದನೆ ಸಮಾರಂಭ
    Next Article ಅಮೃತ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನಡೆದ ನಾಲ್ಕು ದಿನಗಳ ಕಾರ್ಯಕ್ರಮಗಳು ಸಂಪನ್ನ
    roovari

    Add Comment Cancel Reply


    Related Posts

    ಅಮೃತ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನಡೆದ ನಾಲ್ಕು ದಿನಗಳ ಕಾರ್ಯಕ್ರಮಗಳು ಸಂಪನ್ನ

    September 15, 2025

    ಗುರು ಸಂಜೀವ ಸುವರ್ಣರಿಗೆ ಸಪ್ತತಿ ಅಭಿನಂದನೆ ಸಮಾರಂಭ

    September 15, 2025

    ಕನ್ನಡ ರಾಜ್ಯೋತ್ಸವ ಅಂಚೆ ಕಾರ್ಡ್ ಕವನ ಸ್ಪರ್ಧೆಗೆ ಕವನಗಳ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 10

    September 15, 2025

    ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ‘ಬಿ.ವಿ. ಕಾರಂತ ನೆನಪು’ | ಸೆಪ್ಟೆಂಬರ್ 18, 19 ಮತ್ತು 20

    September 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.