ವಿಕ್ರಮ್ ಕಾಂತಿಕೆರೆ ಈಗಾಗಲೇ ತಮ್ಮ ಉತ್ತಮ ಗುಣಮಟ್ಟದ ಅನುವಾದಗಳಿಂದ ಓದುಗರ ಗಮನ ಸೆಳೆದವರು. ಅತ್ಯಂತ ಕ್ಲಿಷ್ಟಕರವೆನ್ನಿಸಿದ ಕೃತಿಗಳ ಅನುವಾದವನ್ನೂ ತಮ್ಮ ಅದ್ಭುತ ಪ್ರತಿಭೆಯಿಂದ ಸರಳವೂ ಸುಂದರವೂ ಆದ ಭಾಷೆಯಲ್ಲಿ ಸುಲಲಿತವಾಗಿ ಅನುವಾದಿಸಿದ ಜಾಣ್ಮೆ ಅವರದ್ದು. ಮಲೆಯಾಳದ ಹಳೆಯ ಶೈಲಿಯಲ್ಲಿರುವ ‘ಉಮಾಕೇರಳಂ’ ಅನ್ನುವ ಕಾವ್ಯಕೃತಿ ಇವರ ಕೈಯಲ್ಲಿ ಚಂದದ ಒಂದು ಕನ್ನಡ ಕಾವ್ಯವಾಗಿ ಅರಳಿದ್ದನ್ನು ಮರೆಯುವಂತಿಲ್ಲ. ಈಗ ಮಲೆಯಾಳದ ಪ್ರಸಿದ್ಧ ಲೇಖಕಿ ಕೆ.ಆರ್. ಮೀರಾ ಇವರ ‘ಭಗವಾಂಡೆ ಮರಣಂ’ ಅನ್ನುವ ವಿಶಿಷ್ಟ ಶೀರ್ಷಿಕೆಯ ಒಂದು ಕಥಾಸಂಕಲನವನ್ನು ಅವರು ‘ಭಗವಂತನ ಸಾವು’ ಎಂಬುದಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಸಂಕಲನದಲ್ಲಿ ಆರು ಕಥೆಗಳಿವೆ. ಎಡಪಂಥೀಯ ಚಿಂತಕರಾದ ಕೆ.ಆರ್. ಮೀರಾ ಇವತ್ತು ಮಲೆಯಾಳದಲ್ಲಿ ಬಹುಬೇಡಿಕೆಯ ಲೇಖಕಿ. ಅವರು ಏನಾದರೂ ಬರೆದ ತಕ್ಷಣ ಅವರ ಕೃತಿಗಳು ಮಲೆಯಾಳ ಪುಸ್ತಕ ಮಾರುಕಟ್ಟೆಯಲ್ಲಿ ‘ಹಾಟ್ ಕೇಕ್’ ಆಗಿ ಮಾರಾಟವಾಗುತ್ತವೆ. ಅವರ ಬೃಹತ್ ಕಾದಂಬರಿ ‘ಆರಾಚ್ಚಾರ್’ (The Hang woman ಅಥವಾ ಕೊಲೆಗಡುಕಿ) ಕೆಲವು ವರ್ಷಗಳ ಹಿಂದೆ ಲಕ್ಷಗಟ್ಟಲೆ ಮಾರಾಟವಾಗಿತ್ತು. ಅಷ್ಟೊಂದು ಆಕರ್ಷಕ ಬರವಣಿಗೆಯ ಶೈಲಿ ಅವರದ್ದು. ಅಷ್ಟೇ ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ದಿಟ್ಟತನವೂ ಅವರಲ್ಲಿದೆ.
ಮೂರನೆಯ ಕಥೆ ‘ಸ್ವಚ್ಛ ಭಾರತಿ’, ನಾಲ್ಕನೆಯ ಕಥೆ ‘ಸೆಪ್ಟೆಂಬರ್ 30’ ಮತ್ತು ಐದನೆಯ ಕಥೆ ‘ಗಂಡು ಪಿಶಾಚಿ’ ಪ್ರೀತಿಯ ನಾಟಕವಾಡಿ ಹೆಣ್ಣಿನಿಂದ ಲೈಂಗಿಕ ಸುಖ ಪಡೆದು ನಂತರ ಕೈಕೊಡುವ ಗಂಡುಗಳನ್ನು ಹೆಣ್ಣುಮಕ್ಕಳು ಯಾವ ರೀತಿ ತಮ್ಮ ತಣ್ಣಗಿನ ವರ್ತನೆಯಿಂದಲೇ ಸೇಡು ತೀರಿಸಿ ಸೋಲಿಸುತ್ತಾರೆ ಅನ್ನುವುದರ ಕುರಿತಾಗಿವೆ. ತಮ್ಮದೇ ಆದ ಪ್ರತಿಮಾತ್ಮಕ ಶೈಲಿಯಲ್ಲಿ ಅರ್ಥವನ್ನು ಸುಲಭವಾಗಿ ಬಿಟ್ಟುಕೊಡದ ಕಾವ್ಯಾತ್ಮಕ ಭಾಷೆಯಲ್ಲಿ ಅವರು ಅದನ್ನು ಪ್ರಸ್ತುತ ಪಡಿಸುವ ಪರಿ ಕನ್ನಡಕ್ಕೆ ಹೊಸದು ಅನ್ನಿಸುತ್ತದೆ. ಕೊನೆಯ ಕಥೆ ‘ಮಾಧ್ಯಮ ಧರ್ಮರಾಜ’ ತುಂಬಾ ವಿಡಂಬನಾತ್ಮಕವಾಗಿದೆ. ಇದು ಇವತ್ತಿನ ಜ್ವಲಂತ ಸಮಸ್ಯೆಯೂ ಹೌದು. ಸುತ್ತಮುತ್ತ ನಡೆಯುವ ಘಟನೆಗಳನ್ನು ಮಾಧ್ಯಮವು ಹೇಗೆ ತನ್ನ ಅಗತ್ಯಕ್ಕೆ ತಕ್ಕಂತೆ ತಿರುಚಿ ತನ್ನ ಬೇಳೆ ಬೇಯಿಸಿಕೊಳ್ಳುತ್ತದೆ ಅನ್ನುವುದನ್ನು ಅದ್ಭುತವಾಗಿ ಕಟ್ಟಿಕೊಡುವ ಈ ಕಥೆ ಪೋಲೀಸ್ ಇಲಾಖೆಯ ದುರ್ವರ್ತನೆಯನ್ನೂ ಚಿತ್ರಿಸುತ್ತ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ ಕೂಡಾ. ಪ್ರಸಿದ್ಧ ವ್ಯಕ್ತಿಯಾಗಬೇಕು ಎಂಬ ಹಪಾಹಪಿಯಲ್ಲಿ ರೋಮಿಯೋ ಎಂಬ ಪೊಲೀಸ್ ಅಧಿಕಾರಿಯ ಮೂರ್ಖ ವರ್ತನೆಯನ್ನು ನೋಡಿದಾಗ ಹದಿನಾರನೇ ಶತಮಾನದ ಸ್ಪಾನಿಷ್ ಲೇಖಕ ಸರ್ವಾಂಟೆ ಬರೆದ ‘ಡಾನ್ ಕ್ವಿಯೋಟ್’ ಎಂಬ ಕಾದಂಬರಿ ನೆನಪಾಗುತ್ತದೆ. ಅಷ್ಟು ಪವರ್ ಫುಲ್ ಆದ ಒಂದು ಕಥೆಯಿದು.
ಮೊದಲ ಕಥೆ ‘ಭಗವಂತನ ಸಾವು’ ತನ್ನನ್ನು ಶೂಟ್ ಮಾಡಿ ಕೊಲ್ಲಲು ಬಂದ ಅಮರ ಅವನ ಗುರಿ ತಪ್ಪಿ ಅಲ್ಲೇ ಸಿಕ್ಕಿ ಹಾಕಿಕೊಂಡ ಸಂದರ್ಭದಲ್ಲಿ ಅವನನ್ನು ಬಸವಣ್ಣನ ಬಗ್ಗೆ ಅಪಾರವಾಗಿ ತಿಳಿದುಕೊಂಡು ಜ್ಞಾನಿಯಾಗಿದ್ದ ಒಬ್ಬರು ಪ್ರೊಫೆಸರ್ ಅವನ ಮೇಲೆ ಸ್ವಲ್ಪವೂ ಸಿಟ್ಟಾಗದೆ ಅವನನ್ನು ಸಹಾನುಭೂತಿಯಿಂದ ಕಂಡು ಅವನಲ್ಲಿ ಸಂಪೂರ್ಣ ಪರಿವರ್ತನೆ ತರುವ ಒಂದು ಕಥೆಯಿದು. ಮೀರಾ ಅವರು ಅಲ್ಲಲ್ಲಿ ಸಾಂದರ್ಭಿಕವಾಗಿ ಬಳಸಿದ ಬಸವಣ್ಣನವರ ವಚನಗಳನ್ನು ನೋಡಿದರೆ ಅವರ ಅಧ್ಯಯನಶೀಲತೆ ಅಚ್ಚರಿ ಹುಟ್ಟಿಸುತ್ತದೆ. ಈ ಕಥೆಯನ್ನು ಓದುವಾಗ ವಿಕ್ಟರ್ ಹ್ಯೂಗೋ ಬರೆದ ‘ಲೇ ಮಿಸರೆಬಲ್ಸ್’ ಎಂಬ ಕಾದಂಬರಿಯಲ್ಲಿ ದಯಾಳುವಾದ ಬಿಷಪ್ ತನ್ನದಲ್ಲದ ತಪ್ಪಿಗ ಕಳ್ಳನೆಂಬ ಪಟ್ಟ ಹೊತ್ತು ಬದುಕಿನ ಬಗ್ಗೆ ವ್ಯಗ್ರನಾದ ಜೀನ್ ವಾಲ್ಜೀನ್ ಎಂಬ ಬಡಪಾಯಿಯನ್ನು ಪರಿವರ್ತಿಸುವ ಕಥೆ ನೆನಪಾಗುತ್ತದೆ. ಆದರೆ ಅಲ್ಲಿ ಬಿಷಪ್ ಒಬ್ಬ ಸರ್ವ ಸಂಗ ಪರಿತ್ಯಾಗಿ. ಇಲ್ಲಿ ಒಬ್ಬ ಪ್ರೊಫೆಸರ್ ಹಾಗಿರಲು ಸಾಧ್ಯವೇ ಅನ್ನುವುದು ಒಂದು ಪ್ರಶ್ನೆ. ಯಾಕೋ ಈ ಪ್ರೊಫೆಸರನ ಔದಾರ್ಯ – ಆದರ್ಶಗಳು ವಾಸ್ತವಕ್ಕೆ ಮೀರಿದ್ದು ಅನ್ನಿಸುತ್ತದೆ. ಅಲ್ಲದೆ ಸಾಹಿತ್ಯವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ತಿರುಚುವ ಈ ಕಥೆಯ ಹಿಂದೆ ಇರುವ ಪೊಲಿಟಿಕಲ್ ಅಜೆಂಡಾ ‘ಎಲ್ಲೋ ಏನೋ ಮಿಸ್ ಹೊಡೀತಿದೆ’ ಅನ್ನಿಸುವಂತೆ ಮಾಡುತ್ತದೆ. ‘ಸಂಘಣ್ಣ’ ಕಥೆಯ ಹಿಂದೆಯೂ ಇದೇ ರೀತಿಯ ಪೊಲಿಟಿಕಲ್ ಅಜೆಂಡಾ ಇದೆ.
‘ಧರ್ಮ’ ಪದವನ್ನು ಸಂಕುಚಿತ ಅರ್ಥದಲ್ಲಿ ತೆಗೆದುಕೊಂಡು ಅದರ ರಕ್ಷಣೆಯ ಹೆಸರಿನಲ್ಲಿ ಹಿಂಸೆಗಿಳಿಯುವವರು ಎಲ್ಲಾ ‘ಧರ್ಮ’ಗಳಲ್ಲೂ ಇದ್ದಾರೆ ಅನ್ನುವುದು ಆತ್ಯಂತಿಕ ಸತ್ಯ. ಅಂಥ ಕೆರಳುವಿಕೆ ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ. ಆದರೆ ಇಲ್ಲಿನ ಒಂದೆರಡು ಕಥೆಗಳಲ್ಲಿ ಒಂದು ವರ್ಗವನ್ನಷ್ಟೇ ಟಾರ್ಗೆಟ್ ಆಗಿ ಇಟ್ಟುಕೊಂಡು ಮಾತನಾಡುವುದು ಸರಿಯಲ್ಲ. ಸಾಹಿತಿಗಳು ಸಮಚಿತ್ತದಿಂದ ಆಲೋಚಿಸದಿದ್ದರೆ ಅಂಥವರು ಬರೆಯುವ ಸಾಹಿತ್ಯವು ಒಂದು ರಾಜಕೀಯ ಪಕ್ಷದ ಪ್ರೊಪಗಾಂಡಾ ಮಾತ್ರ ಅಗುತ್ತದೆ. ನಿಜವಾದ ಸಾಹಿತ್ಯ ಹಾಗಾಗಬಾರದು ಅಲ್ಲವೇ? ಬರವಣಿಗೆಯ ಪ್ರತಿಭೆ ಎಷ್ಟೇ ಇದ್ದರೂ ಈ ಸತ್ಯವನ್ನು ಕಡೆಗಣಿಸುವುದು ಸರಿಯಲ್ಲವೆಂದು ಅನ್ನಿಸುತ್ತದೆ.
– ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.