ಡಾ. ಪಾರ್ವತಿ ಜಿ. ಐತಾಳ್ ರವರು ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕರು. ಕವನ, ಕತೆ, ವ್ಯಕ್ತಿ ಚಿತ್ರಣ, ಆತ್ಮಕಥೆ, ಕಾದಂಬರಿ, ಮಕ್ಕಳ ನಾಟಕ, ರಂಗ ವಿಮರ್ಶೆ, ಸಂಪಾದನೆ ಎಂದು ವಿವಿಧ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವವರು. ಕನ್ನಡ, ಇಂಗ್ಲೀಷ್, ಮಲೆಯಾಳಂ, ತುಳು, ಹಿಂದಿ ಎಂದು ಐದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿರುವುದೇ ಅಲ್ಲದೆ ಈ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಗೆ ಕೊಡುಗೆ ನೀಡಿರುವವರು. ಶಿವರಾಮ ಕಾರಂತರು, ವಾಸುದೇವನ್ ನಾಯರ್, ನಿಸಾರ್ ಅಹಮದ್, ಕೆ.ವಿ. ತಿರುಮಲೇಶರಂತಹ ಮಹತ್ವಪೂರ್ಣ ಸಾಹಿತಿಗಳ ಕೃತಿಗಳನ್ನು ಬೇರೆ ಬೇರೆ ಭಾಷೆಗಳಿಗೆ ಯಶಸ್ವಿಯಾಗಿ ಅನುವಾದಿಸಿರುವವರು.
ರ್ಪಾರ್ವತಿ ಜಿ. ಐತಾಳರ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಇದೇ ವರ್ಷ ಶ್ರೀರಾಮ ಪ್ರಕಾಶನದಿಂದ ಪ್ರಕಟವಾಗಿರುವ 136 ಪುಟಗಳ ಕೃತಿ. ಪ್ರಸ್ತುತದಲ್ಲಿ ಮಲೆಯಾಳಂನಲ್ಲಿ ಬರೆಯುತ್ತಿರುವ 11 ಮಂದಿ ಲೇಖಕರ 17 ಕಥೆಗಳಿವೆ. ಮುಗಿಯದ ಯಾತ್ರೆಗಳಲ್ಲಿ ತಿಳಿಯಾದ ನೀಲಾಕಾಶಕ್ಕಾಗಿ ಹಂಬಲಿಸುವ ಮಹಾದೇವನನ್ನು ಆವರಿಸುವ ನಿಜಾನಂದದ ಲಹರಿಯ ಕಥೆ, ಪಿ. ಸುರೇಂದ್ರರವರ ‘ನೀಲಾಕಾಶ’ವೇ ಮೊದಲ ಕಥೆ. ಸುಷ್ಮೇಶ್ ಚಂದ್ರೋತ್ ರವರ ‘ಇನ್ನೊಂದು ವ್ಯಕ್ತಿ ಬರುವುದನ್ನು ಮರೆಯಿಂದ ನೋಡಿದಾಗ’ ನಿಗೂಢತೆಯ ದಟ್ಟ ಛಾಯೆಯ ಕಥೆ. ಕೆ.ಎಸ್.ಎನ್. ಕಳರಿಕ್ಕಲ್ ರ ಕಥೆ ‘ತಡವಾಗಿ ಓಡುವ ರೈಲು ಗಾಡಿಗಳು’ ಅನಾವರಣಗೊಳಿಸುವುದು ಓದಿ ಪ್ರತಿಭಾವಂತರಾಗಿ ವಿದೇಶಗಳಲ್ಲಿರುವ ಮಕ್ಕಳ ತಾಯ್ತಂದೆಯರು ಅನುಭವಿಸುವ ಒಂಟಿತನದ ಯಾತನೆಯನ್ನು. ದೀನ ಅಸಹಾಯಕ ಹೆಣ್ಣು ಹೊಟ್ಟೆಪಾಡಿಗಾಗಿ ಮಾಡುವ ವೇಶ್ಯಾವೃತ್ತಿಯಲ್ಲಿನ ದಯನೀಯತೆಯ ಅಭಿವ್ಯಕ್ತಿ ನಕುಲನ್ ರವರ ‘ಸುಖ ಒಂದು ಮಿಥ್ಯೆ’ ಕಥೆಯಲ್ಲಿದೆ. ಶಾಹಿನಾ ಇ.ಕೆ.ಯವರ ಪುಟ್ಟ ಕಥೆ ‘ಗಾತ್ರದಲ್ಲಿ ಚಿಕ್ಕದಾದರೂ ಪರಿಣಾಮದಲ್ಲಿ ದೊಡ್ಡದು’ ಎಂಬಂತೆ ಸಂದೇಶವನ್ನು ನೇರವಾಗಿ ಗುರಿ ಮುಟ್ಟಿಸಿದೆ.
– ಉಮಾದೇವಿ ಉರಾಳ್ ತೀರ್ಥಹಳ್ಳಿ