Subscribe to Updates

    Get the latest creative news from FooBar about art, design and business.

    What's Hot

    ವಿಶಾಲ ಯಕ್ಷ ಕಲಾ ಬಳಗದಿಂದ ‘ತಾಳಮದ್ದಳೆ ಜ್ಞಾನಯಜ್ಞ’ | ಸೆಪ್ಟೆಂಬರ್ 21, 23, 26 ಮತ್ತು ಅಕ್ಟೋಬರ್ 02

    September 19, 2025

    ಪುಸ್ತಕ ವಿಮರ್ಶೆ | ಮುಂಬೈಗೆ ರಂಗೇರಿಸಿದ ಯಕ್ಷಗಾನ ಒಂದು ಅಧಿಕೃತ ದಾಖಲಾತಿ ‘ಮುಂಬೈ ಯಕ್ಷಗಾನ ರಂಗಭೂಮಿ’

    September 19, 2025

    ಖ್ಯಾತ ಇತಿಹಾಸ ಸಂಶೋಧಕ-ಸಾಹಿತಿ ಡಾ. ಕೆ.ಜಿ. ವಸಂತ ಮಾಧವ ನಿಧನ

    September 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಮುಂಬೈಗೆ ರಂಗೇರಿಸಿದ ಯಕ್ಷಗಾನ ಒಂದು ಅಧಿಕೃತ ದಾಖಲಾತಿ ‘ಮುಂಬೈ ಯಕ್ಷಗಾನ ರಂಗಭೂಮಿ’
    Article

    ಪುಸ್ತಕ ವಿಮರ್ಶೆ | ಮುಂಬೈಗೆ ರಂಗೇರಿಸಿದ ಯಕ್ಷಗಾನ ಒಂದು ಅಧಿಕೃತ ದಾಖಲಾತಿ ‘ಮುಂಬೈ ಯಕ್ಷಗಾನ ರಂಗಭೂಮಿ’

    September 19, 2025No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಮುಂಬೈ ಯಕ್ಷಗಾನ ರಂಗಭೂಮಿ’ ಇದು ಡಾ. ವೈ.ವಿ. ಮಧುಸೂದನ್ ರಾವ್ ಅವರ ಸಂಶೋಧನ ಮಹಾಪ್ರಬಂಧ. ಮುಂಬೈ ಒಂದು ದೈತ್ಯ ನಗರ. ಇದು ನಮ್ಮ ದೇಶದ ಬಹು ದೊಡ್ಡ ಸಾಂಸ್ಕೃತಿಕ ಕೇಂದ್ರವೂ ಅಹುದು. ಈ ಮಾಯಾ ನಗರಿಯಲ್ಲಿ ಕರ್ನಾಟಕ ಮೂಲದ ಯಕ್ಷಗಾನ ಕಲೆ ಇಟ್ಟ ಹೆಜ್ಜೆ ಹಾಗೂ ಅದು ತೊಟ್ಟ ರೂಪದ ಸಮಗ್ರ ಚಿತ್ರಣ ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ದಾಖಲಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶವೆಂದರೆ ಅದು ಮುಂಬಯಿ. ಇಂದಿಗೂ ಮುಂಬಯಿ ಸುತ್ತ ಮುತ್ತ ಸುಮಾರು ಇಪ್ಪತ್ತೈದು ಲಕ್ಷ ತುಳು-ಕನ್ನಡಿಗರು ನೆಲೆಸಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವುದು ಉಲ್ಲೇಖನೀಯ ಅಂಶ. ಮುಂಬಯಿಯಲ್ಲಿ ಇರುವಷ್ಟು ಸಂಘ ಸಂಸ್ಥೆಗಳು ಜಗತ್ತಿನ ಬೇರೆ ಎಲ್ಲಿಯೂ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಯಕ್ಷಗಾನ ಕಲೆಯ ಬಲವರ್ಧನೆಗೆ ಹೊರನಾಡಾದ ಮುಂಬಯಿ ಬಹು ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇಲ್ಲಿನ ಯಕ್ಷಗಾನ ರಂಗಭೂಮಿಗೆ ಹತ್ತಿರ ಹತ್ತಿರ ಒಂದು ಶತಮಾನದ ಇತಿಹಾಸವಿದೆ. 1880ರ ಹೊತ್ತಿಗೆ ಕರ್ಕಿ ವೆಂಕಟರಮಣ ಶಾಸ್ತ್ರಿಗಳು ಅನೇಕ ಯಕ್ಷಗಾನ ಪ್ರಸಂಗಗಳನ್ನು ಮುಂಬಯಿಯಲ್ಲಿ ಅಚ್ಚು ಹಾಕಿಸಿದ್ದು ಚಾರಿತ್ರಿಕ ಸಂಗತಿ. ಆ ಬಳಿಕ ದೊಡ್ಡ ಪ್ರಮಾಣದಲ್ಲಿ ಯಕ್ಷಗಾನ ಕಲೆಯ ಪ್ರಸಾರ ಮುಂಬಯಿಯಲ್ಲಿ ನಡೆದದ್ದು ಈಗ ಇತಿಹಾಸ. ಇವೆಲ್ಲದರ ಅಧಿಕೃತ ವಿವರ ಪ್ರವರ ವಿಶ್ಲೇಷಣೆ ದಾಖಲಾತಿ ಪ್ರಸ್ತುತ ಮಹಾಪ್ರಬಂಧದಲ್ಲಿದೆ.

    ಯಕ್ಷಗಾನ ಕರ್ನಾಟಕ ಸಂಸ್ಕೃತಿಯನ್ನು ರೂಪಿಸಿದ ಪ್ರಮುಖ ಹಾಗೂ ಪ್ರಧಾನ ಕಲೆಗಳಲ್ಲಿ ಒಂದು. ಯಕ್ಷಗಾನ ರಂಗಕ್ಕೆ ಸುದೀರ್ಘವಾದ ಇತಿಹಾಸವಿದೆ, ದೊಡ್ಡ ಆಚಾರ್ಯ ಪರಂಪರೆಯಿದೆ. ಇದೊಂದು ಸಂಪೂರ್ಣ ರಂಗಭೂಮಿಯೂ ಆಗಿದೆ. ವಲಸೆ ಬಂದ ಮುಂಬೈ ಕನ್ನಡಿಗರು ಯಕ್ಷಗಾನವನ್ನು ಇಲ್ಲಿ ಪ್ರತಿಷ್ಠಾಪಿಸಿದರು, ಪೋಷಿಸಿದರು. ಅದು ರಾಷ್ಟ್ರ ಮಟ್ಟದಲ್ಲಿ ಬೆಳಗುವಂತೆ ನೋಡಿಕೊಂಡರು. ಮುಂಬೈ ಯಕ್ಷಗಾನ ರಂಗಭೂಮಿಗೆ ನೂರಾರು ವರ್ಷಗಳ ಇತಿಹಾಸವಿದೆ. ಅನೇಕ ಯಕ್ಷಗಾನ ಮೇಳಗಳು ಇವತ್ತಿಗೂ ಮುಂಬಯಿಯಲ್ಲಿ ಸಕ್ರಿಯವಾಗಿ ಈ ಕಲೆಯ ಉಪಾಸನೆಯಲ್ಲಿ ನಿರತವಾಗಿವೆ. ಮರಾಠಿಯಲ್ಲಿಯೂ ಕನ್ನಡದ ಯಕ್ಷಗಾನ ನಡೆಯುತ್ತಿರುವುದು ಈ ಕಲೆಯ ಅತಿಶಯತೆಯನ್ನು ಎತ್ತಿ ತೋರಿಸುತ್ತದೆ. ಮರಾಠಿ ರಂಗಭೂಮಿಯ ಹುಟ್ಟಿಗೂ ಯಕ್ಷಗಾನ ಪ್ರೇರಣೆ ನೀಡಿದ್ದು ಐತಿಹಾಸಿಕ ದಾಖಲೆಯಾಗಿದೆ. ಭಾರತದ ಜಾನಪದ ರಂಗಭೂಮಿಗೆ ಕರ್ನಾಟಕ ಕೊಟ್ಟ ಮಹತ್ವದ ಯೋಗದಾನ ಎಂದರೆ ಯಕ್ಷಗಾನ. ಮುಂಬೈಯಲ್ಲಿ ಯಕ್ಷಗಾನ ಕಲೆಯ ಏಳುಬೀಳುಗಳ ವರ್ಣನಾತ್ಮಕ ಕಥನ ಈ ಮಹಾಪ್ರಬಂಧದಲ್ಲಿ ಸೊಗಸಾಗಿ ಬಿಂಬಿತವಾಗಿದೆ.

    ಮುಂಬೈ ಸಾಹಿತ್ಯ ವಲಯವಾಗಿ ಹೆಸರು ಮಾಡಿದೆ. ಅಂತಯೇ ಮುಂಬೈಯ ಯಕ್ಷಗಾನ ಪ್ರಸಂಗಕರ್ತರು ಸಹ ಈ ಮರಾಠಿ ಮಣ್ಣಿನಲ್ಲಿ ಅನನ್ಯವಾದ ಸಾಧನೆಯನ್ನು ಮಾಡಿದ್ದಾರೆ. ಯಕ್ಷಗಾನ ಕಲೆಗೆ ಮುಂಬೈ ನೂತನ ಆಯಾಮವನ್ನು ನೀಡುವಲ್ಲಿ ಹೇಗೆ ಯಶಸ್ವಿಯಾಗಿದೆ ಎಂಬ ಸಂಗತಿಯನ್ನು ಆಧಾರ ಸಹಿತವಾಗಿ ಇಲ್ಲಿ ಬೆಳಕಿಗೆ ಹಿಡಿಯಲಾಗಿದೆ. ಮುಂಬೈಯ ಯಕ್ಷಗಾನ ಸಾಹಿತ್ಯವು ಸಾಕಷ್ಟು ವೈವಿಧ್ಯಮಯವಾಗಿದೆ ಎಂಬುದನ್ನು ವಿಪುಲ ಉದಾಹರಣೆಗಳೊಂದಿಗೆ ಇಲ್ಲಿ ಲೋಕಸಮ್ಮುಖಗೊಳಿಸಲಾಗಿದೆ. ಇಲ್ಲಿನ ಯಕ್ಷಗಾನ ರಂಗಭೂಮಿ ಕಾಲಕಾಲಕ್ಕೆ ಕಂಡ ಸ್ಥಿತ್ಯಂತರಗಳನ್ನು ಪ್ರಯೋಗ ಪರಿಣಾಮಗಳನ್ನು ಯಕ್ಷಗಾನ ಪ್ರಸಂಗಗಳ ಹಿರಿಮೆಗಳನ್ನು ವೈಶಿಷ್ಟ್ಯಗಳನ್ನು ಎತ್ತಿ ತೋರಿಸುವ ಮೌಲ್ಯಮಾಪನ ಮಾಡುವ, ಬಳಕೆಯಲ್ಲಿರುವ ಪ್ರಸಂಗಗಳೊಡನೆ ತಾಳೆ ಹಾಕಿ ನೋಡುವ ಪ್ರಯತ್ನದಲ್ಲಿ ಈ ಮಹಾಪ್ರಬಂಧ ಯಶಸ್ವಿಯಾಗಿದೆ. ಚಾರಿತ್ರಿಕ ಮಹತ್ವದ ಕೆಲವು ಸಂಗತಿಗಳನ್ನು ಮುನ್ನೆಲೆಗೆ ತಂದು ಚರ್ಚಿಸಿರುವುದು ಸಕಾಲಿಕ ಉಪಕ್ರಮವೂ ಆಗಿದೆ. ಉದಾಹರಣೆಗೆ ‘ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಭಾ’ ಇದು ಮುಂಬಯಿ ಯಕ್ಷರಂಗದ ಒಂದು ಅವಿಸ್ಮರಣೀಯ ಹೆಸರು. ದಕ್ಷಿಣ ಕನ್ನಡದ ಪದ್ಮಶಾಲಿ ಸಮಾಜಸ್ಥರ ಪ್ರೋತ್ಸಾಹದಿಂದ 1940ರಲ್ಲಿ ತೆಂಕುತಿಟ್ಟಿನ ಇದು ಪ್ರಸಿದ್ಧಿಗೆ ಬಂದಿತು. ಬ್ರುಯೆಲ್ ಕಂಪೆನಿ, ಎಂಪಾಯರ್ ಬಿಲ್ಡಿಂಗ್, ಡಿ.ಎನ್. ರೋಡ್‌ ನಲ್ಲಿ ಸಂಗಡಿಗರೊಡಗೂಡಿ ಇದನ್ನು ಅವರು ಸ್ಥಾಪಿಸಿದರು. ದಿ. ತಡಂಬೈಲು ಈಶ್ವರ ಸೂರ ಶೆಟ್ಟಿಗಾರರು ತನ್ನ ಭಾಷೆ, ದೇಶ, ಸಂಸ್ಕೃತಿ ಹಾಗು ಕಲೆಯ ಅನನ್ಯ ಉಪಾಸಕರಾಗಿದ್ದರು. ಸಭಾದ ಅಭಿವೃದ್ಧಿಗಾಗಿ ಅವರು ತನು, ಮನ, ಧನವನ್ನು ಮುಡುಪಿಟ್ಟರು.

    ಸಭಾದ ಕಲಾವಿದರ ತರಬೇತಿ ಹೆಚ್ಚಾಗಿ ದಿ. ಬಾಡು ಸೋಮ ಶೆಟ್ಟಿಗಾರರು ಕೆಲಸಕ್ಕಿದ್ದ ಕೊಡಕ್ ಹೌಸ್ (ಡಿ.ಎನ್. ರೋಡ್)ನ ಅಗಸೆಯಲ್ಲಿ ಮತ್ತು ವೀರಪ್ಪ ಶೆಟ್ಟಿಗಾರರು ಕೆಲಸಕ್ಕಿದ್ದ ಕ್ವೀನ್ಸ್‌ಲ್ಯಾಂಡ್ ಇನ್ಸೂರೆನ್ಸ್ ಕಂ. (ಬಲಾರ್ಡ್ ಪಿಯರ್)ಯ ವಿಶಾಲ ಕಚೇರಿಯಲ್ಲಿ ನಡೆಯುತ್ತಿತ್ತು. ಕಾರ್ಯಕಲಾಪ, ಸಭೆ ಇತ್ಯಾದಿಗಳು ಹೆಚ್ಚಾಗಿ ಮಿಜಾರು ವನ್ನಯ ಎನ್. ಶೆಟ್ಟಿಗಾರರು (ತಪ್ಪಾಗಿ ಹೊನ್ನಯ ಎಂದು ಕರೆಯಲಾಗುತ್ತಿತ್ತು) ಕೆಲಸಕ್ಕಿದ್ದ ಬ್ರುಯೆಲ್ ಕಂ. (ಡಿ.ಎನ್. ರೋಡ್)ಯಲ್ಲಿ ನಡೆಯುತ್ತಿದ್ದವು. ಅವರು ಸಭಾದ ಪ್ರತಿಯೊಂದು ಕಾರ್ಯಕಲಾಪದಲ್ಲಿ ಈಶ್ವರ ಸೂರ ಶೆಟ್ಟಿಗಾರರಿಗೆ ಬೆಂಬಲವಿತ್ತು. ಮುಂಬಯಿಯಲ್ಲಿ ಯಕ್ಷಗಾನ ಕಲೆಯ ಅಭಿವೃದ್ಧಿಗೆ ಮೌನ ಸೇವೆ ಸಲ್ಲಿಸಿದರು. ಅವರು ಪದ್ಮಶಾಲಿ ಸಮಾಜ ಸೇವಾ ಸಂಘದ ಕಾರ್ಯಕರ್ತರಾಗಿಯೂ, ಅಧ್ಯಕ್ಷರಾಗಿಯೂ ಮೂರು ದಶಕಗಳ ತನಕ ದುಡಿದಿದ್ದರು. ಸಭಾದ ಬೆಳವಣಿಗೆಗೆ ತುಂಬು ಸಹಕಾರದಿಂದ ದುಡಿದವರು ಬಾಬು ಕೆಂಚ ಶೆಟ್ಟಿಗಾರರು.

    ಜೇಲಿನಿಂದ ರಂಗಸ್ಥಳಕ್ಕೆ : 1942-43ರ ಅವಧಿಯಲ್ಲಿ ಸಭಾದ ಕಾರ್ಯಕಲಾಪಗಳು ತುಸ ಇಳಿಮುಖವಾದವು. ಗಾಂಧೀಜಿಯವರ ‘ಚಲೇಜಾವ್ ಚಳವಳಿ’ ಇದಕ್ಕೆ ಕಾರಣವಾಗಿತ್ತು. ಪರಿಣಾಮತಃ ಅನೇಕ ಕಾರ್ಯಕರ್ತ, ಕಲಾವಿದರು ಜೇಲುವಾಸ ಅನುಭವಿಸಿದರು. ಕೆಲವರು ಭೂಗತರಾದರು. ಅಗಸ್ಟ್ ಕ್ರಾಂತಿ ಮೈದಾನ (ಗೋವಾಲಿಯಾ ಟ್ಯಾಂಕ್ ಮೈದಾನ)ದಲ್ಲಿ ಪೋಲೀಸರ ಲಾಠಿ, ಏಟು ಅಶ್ರುವಾಯು ಎದುರಿಸಿ ಅನುಭವಿಸಿ ಈಶ್ವರ ಸೂರ ಶೆಟ್ಟಿಗಾರರು ಕಾರಾಗೃಹದ ಅತಿಥಿಯಾದರು. ಜೈಲು ಸೇರುವ ಮುನ್ನ ಅವರು ಯಾವುದೋ ಸಂಸ್ಥೆಗೆ ಯಕ್ಷಗಾನ ಪ್ರದರ್ಶನ ನೀಡುವ ಮಾತು ಕೊಟ್ಟಿದ್ದರು. ಜೇಲು ಸೇರಿದ ಈಶ್ವರರಿಂದ ಯಾ ಸಭಾದ ಕಾರ್ಯಕರ್ತರಿಂದ ಸೂಚನೆ ಬಾರದ್ದನ್ನು ಕಂಡು ಆಯೋಜಕರಿಂದ ಪ್ರದರ್ಶನ ರದ್ದು ಮಾಡಲಾಗಿದೆಯೆಂದು ರಸ್ತೆಯಲ್ಲಿ ಸಾರ್ವಜನಿಕರಿಗೆ ಸೂಚನೆ ನೀಡಲಾಯಿತು. ಆದರೆ ಪದರ್ಶನದ ಮುನ್ನಾದಿನ ಪೋಲೀಸು ಠಾಣೆಯ ಕಿಟಕಿಯಿಂದ ಹೊರಗೆ ಹಾರಿ, ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ, ಈಶ್ವರ ಸೂರ ಶೆಟ್ಟಿಗಾರರು ತನ್ನ ಬಿಡಾರಕ್ಕೆ ಓಡಿ ಬಂದು ಸಿಕ್ಕಿದ ಹಳೆ-ಎಳೆ ಕಲಾವಿದರನ್ನು ಒಟ್ಟುಗೂಡಿಸಿದರು. ರಾತ್ರೋರಾತ್ರಿ ರಸ್ತೆಯಲ್ಲಿ ಹೊಸ ಸೂಚನೆ ಬರೆಸಿದರು. ಮರುದಿನ ರಂಗಸ್ಥಳದಲ್ಲಿ ರಾಷ್ಟ್ರಧ್ವಜ ಹಾರಿಸಿ ಬಯಲಾಟ ಪ್ರದರ್ಶಿಸಿಯೇ ಬಿಟ್ಟರು. ಮಾರನೆಯ ದಿನ ಬೆಳಿಗ್ಗೆ ತಾನಿದ್ದ ಠಾಣೆಗೆ ಹೋಗಿ ಬಂಧಿಸಲು ಪೋಲೀಸರಿಗೆ ವಿನಂತಿಸಿದರಂತೆ. ಮೇಲಿನ ಘಟನೆ ಶ್ರೀಯುತರಿಗೆ ಯಕ್ಷಗಾನದ ಬಗೆಗೆ ಇದ್ದ ಅಪಾರ ಬದ್ಧತೆಯನ್ನು ಬಿಂಬಿಸುತ್ತದೆ. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾದ ಸಭಾದ ಎಳೆಯ ಕಾರ್ಯಕರ್ತರು ‘ಸ್ವಾತಂತ್ರ್ಯ ಯುದ್ಧ’, ‘ಮಾತೃಭೂಮಿ ವಿಜಯ’ ಮುಂತಾದ ಒಂದೆರಡು ತಾಸಿನ ಮಿನಿ ಯಕ್ಷಗಾನಗಳನ್ನು ಆಡಿದ್ದರಂತೆ. ಸಭಾವು 1940ರಿಂದ ಮೂರು ದಶಕಗಳ ತನಕ ಹಲವಾರು ಉತ್ತಮ ಹಾಗೂ ನಿಷ್ಠಾವಂತ ಕಲಾವಿದರ ಕೂಡುವಿಕೆಯಿಂದ ಉತ್ತಮ ಗುಣಮಟ್ಟದ ಸುಮಾರು ಐನೂರು ಪ್ರದರ್ಶನಗಳನ್ನಿತ್ತು ಭಾರಿ ಜನಪ್ರಿಯತೆ ಪಡೆಯಿತು. ಊರಿನ ವೃತ್ತಿ ಕಲಾವಿದರನ್ನು ಆಗಾಗ್ಗೆ ಆಮಂತ್ರಿಸಿದ್ದುಂಟು. ಕಲೆಯ ದೃಷ್ಟಿಯಿಂದ ಯಕ್ಷಗಾನದ ಮಟ್ಟವನ್ನು ಏರಿಸಲು ಹಾಗು ಪರಂಪರೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಗೈದ ಮುಂಬಯಿಯ ಮೊತ್ತ ಮೊದಲ ಸಂಸ್ಥೆ ಇದು ಎಂದು ವಿಮರ್ಶಕರು ಉದ್ಧರಿಸಿದ್ದಾರೆ. ಸಭಾವು ಕಲಾತ್ಮಕತೆಯ ದೃಷ್ಟಿಯಿಂದ ಪಥ ಪ್ರದರ್ಶನ ಕಾರ್ಯ ಕೈಗೊಂಡಿದೆ. ‘ಮುಂಬಯಿ ಯಕ್ಷಗಾನದ ಮುಂಗೋಳಿ’ ಎಂದು ಜನ ಸಭಾವನ್ನು ಶ್ಲಾಘಿಸಿದ್ದಾರೆ. ಹೀಗೆ ಮುಂಬಯಿ ಯಕ್ಷಗಾನ ಪರಂಪರೆ ಹಾಗೂ ಇತಿಹಾಸವನ್ನು ಸ್ವಾರಸ್ಯಪೂರ್ಣವಾಗಿ ಚಿತ್ರಿಸಿರುವುದು ಈ ಶೋಧ ಕೃತಿಯ ಹೆಗ್ಗಳಿಕೆ.

    ಮುಂಬಯಿಯಲ್ಲಿ ಯಕ್ಷಗಾನದಲ್ಲಿ ತಮ್ಮ ಹೊಸ ಪ್ರಯೋಗಾತ್ಮಕವಾದ ಕಿನ್ನರತವನ್ನು ಪ್ರದರ್ಶಿಸಿದವರು ಶಿವರಾಮ ಕಾರಂತರು. ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಯಕ್ಷಗಾನದ ಒಂದು ಅಂಗವಾದ ಸಂಭಾಷಣೆಯನ್ನು ತೆಗೆದುಹಾಕಿ ಬರೇ ಸಂಗೀತ ಹಾಗೂ ನೃತ್ಯ, ವೇಷಭೂಷಣ ಮತ್ತು ಅಭಿನಯಗಳನ್ನು ಅಳವಡಿಸಿಕೊಂಡು ಕಾರಂತರು ತಮ್ಮ ಬ್ಯಾಲೆಯನ್ನು ತಯಾರಿಸಿದರು. ಕೆಲವರಿಂದ ಟೀಕೆಗೊಳಗಾದಾಗ ತಮ್ಮದು ‘ಕಿನ್ನರ ನೃತ್ಯ’ ಯಕ್ಷಗಾನ ಅಲ್ಲ ಎನ್ನತೊಡಗಿದರು. ಕಥಕ್ಕಳಿಯ ಕೃಷ್ಣಾಟ್ಟಂಗೆ ಪರ್ಯಾಯವಾಗಿ ರಾಮನಾಟ್ಟಂ ಆರಂಭವಾದ ಹಾಗೆ, ತಮ್ಮ ಊರಲ್ಲಿ ಇದರ ಪ್ರದರ್ಶನಕ್ಕೆ ಅಡೆ ತಡೆಗಳು ಬಂದಾಗ ಕಾರಂತರು ಮುಂಬಯಿಯಲ್ಲಿ ಮೊದಲ ಪ್ರದರ್ಶನವನ್ನಿತ್ತರು. ಅವರು ತಮ್ಮ ಯಕ್ಷಗಾನದ ಪ್ರಯೋಗಗಳ ಧನ ಸಹಾಯಕ್ಕಾಗಿ ಮುಂಬಯಿಯ ಮಿತ್ರರನ್ನು ಅವಲಂಬಿಸಿದ್ದನ್ನು ತಮ್ಮ ‘ಸ್ಮೃತಿಪಟಲದಲ್ಲಿ-ಸಂಪುಟ 1ರಲ್ಲಿ ನೆನಪಿಸಿದ್ದಾರೆ. ಪುಟ 310ರಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಾ 1962ರಲ್ಲಿ ಎರಡು ತಿಂಗಳ ಕಾಲ ಮಳೆಗಾಲದಲ್ಲಿ ಇಬ್ಬರು ಭಾಗವತರನ್ನೂ ಹತ್ತು ಹದಿನೈದು ಮಂದಿ ಯೌವನಸ್ಥ ವೇಷಧಾರಿಗಳನ್ನು ಕರೆಯಿಸಿಕೊಂಡು ಯಕ್ಷಗಾನ ಬ್ಯಾಲೆ ರೂಪಿಸುವುದು ಸಾಧ್ಯ: ಆ ಕೆಲಸಕ್ಕೆ ಬೇಕಾಗುವ ಧನ ಸಹಾಯ ಒದಗಿದರೆ ನಾನು ತಕ್ಷಣವೇ (ನನ್ನ ಮಿತ್ರ-ಮುಖ್ಯತಃ ಮೂಡಬಿದ್ರೆ ಸಂಜೀವರಾಯರು, ಚಿತ್ರಕಾರ ಹೆಬ್ಬಾರರು) ಇವನ್ನು ಸಾಧಿಸಿ ತೋರಿಸುತ್ತೇನೆ ಎಂದು ನನ್ನ ಮುಂಬಯಿಯ ಮಿತ್ರರಿಗೆ ಹೇಳಿದೆ. ದೇಶಭಟ್ಟರು. ವ್ಯಾಸರಾಯ ಬಲ್ಲಾಳರು, ದಿ. ಅಮೀನ ಮೊದಲಾದವರು ‘ನಾವಿದ್ದೇವೆ, ಕೆಲಸ ನಡೆಸಿ’ ಎಂಬ ಭರವಸೆಯನ್ನು ನನಗೆ ಕೊಟ್ಟೇ ಬಿಟ್ಟರು. ಮುಂದೆ ಪುಟ 313ರಲ್ಲಿ ಮುಂಬಯಿಯಲಿ ತಮ್ಮ ಬ್ಯಾಲೆಗೆ ಸಿಕ್ಕ ಪ್ರೋತ್ಸಾಹವನ್ನು ಶಿವರಾಮ ಕಾರಂತರು ತಿಳಿಸುತ್ತಾರೆ. ಮುಂಬಯಿಯಲ್ಲಿ ನನಗೆ ನನ್ನ ಅಭಿಮಾನಿ ಸ್ನೇಹಿತರ ದೆಸೆಯಿಂದಾಗಿ ಹೆಚ್ಚಿನ ಸ್ವಾಗತ ದೊರೆಯಿತು. ಅದಕ್ಕಿಂತ ಮುಖ್ಯವಾಗಿ ಕನ್ನಡಿಗರಲ್ಲಿ ಹಲವು ಜನರು ಈ ಪ್ರದರ್ಶನವನ್ನು ನೋಡಲು ಬಂದಿದ್ದರು.

    ಚಿತ್ರಕಾರ ಹೆಬ್ಬಾರರ ಪ್ರಯತ್ನದಿಂದಾಗಿ ವಿದೇಶಿ ದೂತಾವಾಸಗಳ ಹಲವು ಮಂದಿ ಬಂದಿದ್ದರು. ಮುಂಬಯಿ ಕೋಟೆಯ ಓಪನ್ ಎಯರ್ ಥಿಯೇಟರಲ್ಲಿ ‘ಅಭಿಮನ್ಯು ವಧೆ’ಯನ್ನು ನಾವು ಆಡಿದಾಗ ಸಾವಿರ ಮಂದಿಗಿಂತ ಹೆಚ್ಚಿನ ಪ್ರೇಕ್ಷಕರು ಕಲೆತಿದ್ದರು. ಮುಂದೆ ಮುಂಬಯಿ ಪತ್ರಿಕೆಗಳಲ್ಲಿ ಈ ವಿಚಾರದ ಒಳ್ಳೆಯ ವಿಮರ್ಶೆಗಳನ್ನು ಓದಿದೆ. ಒಬ್ಬಳು ವಿಮರ್ಶಕಿ ‘ಬ್ರಿಲಿಯಂಟ್ ಕೊರಿಯೋಗ್ರಫಿ’ ಎಂಬ ಮಾತನ್ನು ಹೇಳಿದ್ದಳು. ಅಲ್ಲೊಂದು ಕೊರಿಯೋಗ್ರಫಿ ಇತ್ತು ಎಂದು ಅನಿಸಿದ್ದು ಅವಳೊಬ್ಬಳಿಗೇ; ಉಳಿದ ಪತ್ರಿಕೆಗಳು ನಾಟಕವನ್ನೂ ಅದರ ಸಂಗೀತವನ್ನೂ ಮೆಚ್ಚಿ ಬರೆದಿದ್ದರು. ಮುಂಬಯಿಯ ಕನ್ನಡೇತರರೂ, ವಿದೇಶೀಯರೂ ನಮ್ಮ ಪ್ರಯೋಗವನ್ನು ಬಹುವಾಗಿ ಮೆಚ್ಚಿಕೊಂಡರೂ ನಮ್ಮ ಉದ್ದಾಮ ಕನ್ನಡಿಗರು ಮಾತ್ರ, ಅಲ್ಲಲ್ಲಿ ಒಂದೊಂದು ಮಾತನ್ನಾದರೂ ಹಾಕಬೇಕಿತ್ತು ಎಂದು ಅಂದೇ ಅಂದರು”.

    ಪದವೀಧರ ಯಕ್ಷಗಾನ ಸಮಿತಿ ಮುಂಬೈಯಲ್ಲಿ ಮಾಡಿದ ಸಾಂಸ್ಕೃತಿಕ ಕಾಯಕ ದೊಡ್ಡದು. ಮರಾಠಿ ನೆಲದಲ್ಲಿ ಯಕ್ಷಗಾನದ ಬಲವರ್ಧನೆಗೆ ಇದು ನೀಡಿದ ಯೋಗದಾನವನ್ನು ಇಲ್ಲಿ ವಸ್ತುನಿಷ್ಟವಾಗಿ ವಿವರಿಸಲಾಗಿದೆ. “ಮುಂಬಯಿಯಲ್ಲಿ 1985ರಿಂದ 2008ರವರೆಗೆ 15 ‘ಯಕ್ಷಗಾನ ಸಾಹಿತ್ಯ ಸಮ್ಮೇಳನ’ಗಳು ನಡೆದಿವೆ. ಪದವೀಧರ ಯಕ್ಷಗಾನ ಸಮಿತಿಯ ಆಶ್ರಯದಲ್ಲಿ ನಡೆದ ಈ ಸಮ್ಮೇಳನಗಳ ರೂವಾರಿ ಎಚ್.ಬಿ.ಎಲ್. ರಾವ್ ಅವರು. ‘ಯಕ್ಷಗಾನ ಸಾಹಿತ್ಯ ಸಮ್ಮೇಳನ’ ಎಂಬ ಶೀರ್ಷಿಕೆಯಾದರೂ ಈ ಸಮ್ಮೇಳನಗಳಲ್ಲಿ ಹಲವಾರು ಕಮ್ಮಟಗಳು ಮತ್ತು ದಾಖಲಾತಿಗಳು ನಡೆದಿವೆ. ಯಕ್ಷಗಾನ ಪ್ರಸಂಗಗಳ ವಿಶ್ಲೇಷಣೆ, ಪ್ರಸಂಗಕಾರ ಕವಿ ಚರಿತ್ರೆ, ಯಕ್ಷಗಾನದ ಪೂರ್ವ-ಪರ, ಸ್ಥಿತಿಗತಿ ಇವುಗಳ ಜಿಜ್ಞಾಸೆ ನಡೆದಿದೆ. ಊರಿನ ಮತ್ತು ಮುಂಬಯಿಯ ಯಕ್ಷಗಾನ ಕಲಾವಿದರ ಮಾನ ಸಮ್ಮಾನಗಳು ನಡೆದಿವೆ. ಹಲವಾರು ಅಪ್ರಕಟಿತ ಯಕ್ಷಗಾನ ಪ್ರಸಂಗಗಳ ಪ್ರಕಟಣೆಯಾಗಿದೆ. ಯಕ್ಷಗಾನ ಸಾಹಿತ್ಯ ಸಮ್ಮೇಳನಗಳಲ್ಲಿ ನಡೆದ ಭಾಷಣಗಳು ಮತ್ತು ಮಂಡಿಸಿದ ಪ್ರಬಂಧಗಳು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ. ಮುಂಬಯಿ ಯಕ್ಷಗಾನ ರಂಗಭೂಮಿಯ ಬಗೆಗೆ ಹಲವಾರು ವಿಷಯಗಳು, ವಿಚಾರಗಳು ದಾಖಲೆಗೊಂಡಿವೆ ಎಂಬುದನ್ನು ಇಲ್ಲಿ ಸವಿವರವಾಗಿ ಕಟ್ಟಿಕೊಡಲಾಗಿದೆ.

    ಪದವೀಧರ ಯಕ್ಷಗಾನ ಸಮಿತಿಯ ಸಾಧನೆ, ಬಿಲ್ಲವರ ಅಸೋಸಿಯೇಷನ್ ಪ್ರಾಯೋಜಿತ ಗುರುನಾರಾಯಣ ಯಕ್ಷಗಾನ ಮಂಡಳಿ, ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಜನಪ್ರಿಯ ಯಕ್ಷಗಾನ ಮಂಡಳಿ, ಗೀತಾಂಬಿಕಾ ಯಕ್ಷಗಾನ ಮಂಡಳಿ, ಅಜೆಕಾರು ಕಲಾಭಿಮಾನಿ ಬಳಗ ಜತೆ ಜತೆಗೆ ಇಲ್ಲಿನ ತಾಳಮದ್ದಳೆ ಕೂಟ, ಮರಾಠಿ ಹಿಂದಿ ಆಂಗ್ಲ ಭಾಷೆಗಳಲ್ಲಿ ಯಕ್ಷ ಕಲಾ ಸೌರಭ ಪ್ರಸಾರಗೊಂಡಿರುವುದು, ಇವತ್ತಿಗೂ ಮುಂಬೈಯಲ್ಲಿ ಯಕ್ಷಗಾನ ಕಲೆಯನ್ನು ಜೀವಂತವಾಗಿ ಉಳಿಸಲು ಪ್ರಯತ್ನಿಸುತ್ತಿರುವ ಅನೇಕ ಸಂಘ ಸಂಸ್ಥೆಗಳು ಸಂಘಟಕರು, ನೂರಾರು ಯಕ್ಷಗಾನ ಕಲಾವಿದರ ಸಾಹಸ ಸಾಧನೆಗಳೆಲ್ಲ ಇಲ್ಲಿ ಇತಿಹಾಸದ ಪುಟ ಸೇರಿರುವುದು ಅವಲೋಕನೀಯವಾಗಿದೆ. ಕಲಾವಿದನೊಬ್ಬನ ಶೋಧಕ ದೃಷ್ಟಿ ಹಾಗೂ ಹುಡುಕಾಟದ ಒಳಗಣ್ಣು ಇಲ್ಲಿ ಚೆನ್ನಾಗಿ ಕೆಲಸ ಮಾಡಿದೆ. ನಾಡಿನ ಖ್ಯಾತ ಯಕ್ಷಗಾನ ಕಲಾವಿದ, ವಿದ್ವಾಂಸ ವಿಮರ್ಶಕ ಡಾ. ಪ್ರಭಾಕರ ಜೋಶಿ ಅವರು ಈ ಕೃತಿಗೆ ಸುದೀರ್ಘವಾದ ಮುನ್ನುಡಿಯನ್ನು ಬರೆದಿದ್ದು, ಪ್ರಾದೇಶಿಕತೆ ಸಹ ಯಕ್ಷಗಾನದ ಬೆಳವಣಿಗೆಗೆ ಪೂರಕವಾಗಿದೆ ಎಂದಿರುವುದು ಗಮನೀಯ ಅಂಶ. ಮುಂಬೈ ಯಕ್ಷಗಾನ ರಂಗಭೂಮಿಯ ವಿಭಿನ್ನ ನೆಲೆಗಳ ಮೇಲೆ ಬೆಳಕು ಹಾಯಿಸುವ ಹೊಸ ಹೊಸ ಮಾಹಿತಿಗಳಿಂದ ಸಮೃದ್ಧವಾಗಿರುವ ಈ ಮಹತ್ವದ ಶೋಧ ಕೃತಿಗಾಗಿ ಕಲಾವಿದ ಡಾ. ಮಧುಸೂದನ್ ರಾವ್ ಅವರಿಗೆ ಹಾರ್ದಿಕ ಅಭಿನಂದನೆಗಳು.

    ಲೇಖಕ : ಡಾ. ವೈ.ವಿ. ಮಧುಸೂದನ ರಾವ್
    ಪ್ರಕಾಶನ : ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ಮುಂಬೈ
    ಬೆಲೆ : ರೂ 500/-, ವರ್ಷ 2025, ಸಂಪರ್ಕ : 98686 75364


    ವಿಮರ್ಶಕರು : ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ

    baikady Literature review roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಖ್ಯಾತ ಇತಿಹಾಸ ಸಂಶೋಧಕ-ಸಾಹಿತಿ ಡಾ. ಕೆ.ಜಿ. ವಸಂತ ಮಾಧವ ನಿಧನ
    Next Article ವಿಶಾಲ ಯಕ್ಷ ಕಲಾ ಬಳಗದಿಂದ ‘ತಾಳಮದ್ದಳೆ ಜ್ಞಾನಯಜ್ಞ’ | ಸೆಪ್ಟೆಂಬರ್ 21, 23, 26 ಮತ್ತು ಅಕ್ಟೋಬರ್ 02
    roovari

    Add Comment Cancel Reply


    Related Posts

    ವಿಶಾಲ ಯಕ್ಷ ಕಲಾ ಬಳಗದಿಂದ ‘ತಾಳಮದ್ದಳೆ ಜ್ಞಾನಯಜ್ಞ’ | ಸೆಪ್ಟೆಂಬರ್ 21, 23, 26 ಮತ್ತು ಅಕ್ಟೋಬರ್ 02

    September 19, 2025

    ಖ್ಯಾತ ಇತಿಹಾಸ ಸಂಶೋಧಕ-ಸಾಹಿತಿ ಡಾ. ಕೆ.ಜಿ. ವಸಂತ ಮಾಧವ ನಿಧನ

    September 19, 2025

    ದೇರಳಕಟ್ಟೆಯಲ್ಲಿ ರಾಜ್ಯಮಟ್ಟದ ಭಾವೈಕ್ಯತಾ ಚುಟುಕು ಕವಿಗೋಷ್ಠಿ

    September 19, 2025

    ನಾಟಕ ವಿಮರ್ಶೆ – “ಲೀಕ್‌ ಔಟ್‌” ಎಂಬ ರಂಗ ಪ್ರಯೋಗ ಕಟ್ಟಿಕೊಂಡು ಯುದ್ಧಕ್ಕೆ ನಿಂತರೇ ಅಕ್ಷತಾ ಪಾಂಡವಪುರ…!

    September 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.