ಮಂಗಳೂರು : ಸುರತ್ಕಲ್ ನ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಆಯೋಜಿಸಿದ್ದ ಪ್ರಸಿದ್ಧ ಸಂಶೋಧಕ, ಸಾಹಿತಿ ಡಾ. ಕೆ.ಜಿ. ವಸಂತ ಮಾಧವ ಇವರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 22 ಸೆಪ್ಟೆಂಬರ್ 2025ರಂದು ಸಾಹಿತಿ ಇಂದಿರಾ ಹೆಗ್ಗಡೆಯವರ ನಿವಾಸದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಇತಿಹಾಸ ತಜ್ಞ ಡಾ. ತುಕಾರಾಮ್ ಪೂಜಾರಿ ಇವರು ಮಾತನಾಡಿ “ನಮ್ಮ ನಾಡಿನ ಶ್ರೇಷ್ಠ ಇತಿಹಾಸಗಾರರಾಗಿರುವ ಡಾ. ವಸಂತ ಮಾಧವ ಕೆ.ಜಿ.ಯವರು ಇತಿಹಾಸ ಸಂಶೋಧನೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡವರು. ಕರಾವಳಿ ಕರ್ನಾಟಕದ ಇತಿಹಾಸದ ಅಧ್ಯಯನಕ್ಕೆ ಬೇಕಾದ ಆಕರಗಳು ವೈಜ್ಞಾನಿಕವಾಗಿ ಕ್ರೋಡೀಕೃತವಾಗಲು ಶ್ರಮಿಸಿದವರು. ಇತಿಹಾಸಗಾರರ ಅವಜ್ಞೆ ಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿದ್ದು, ಅವರ ಕಾರ್ಯಗಳನ್ನು ಗುರುತಿಸುವ ಕಾರ್ಯ ನಡೆಯಬೇಕು” ಎಂದು ನುಡಿದರು.
ಸಂಶೋಧಕ ಬೆನೆಟ್ ಅಮನ್ನ ಮಾತನಾಡಿ “ವಸಂತ ಮಾಧವರ ಸಂಶೋಧನಾ ಆಸಕ್ತಿ ಅವರ ಕೃತಿ ಸಂಗ್ರಹ ಅನನ್ಯವಾಗಿದ್ದು, ಅದನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ವರ್ಗಾವಣೆ ಮಾಡುವ ಹೊಣೆಗಾರಿಕೆ ಸಮಾಜದ್ದಾಗಿದೆ” ಎಂದರು. ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ “ಕರಾವಳಿ ಕರ್ನಾಟಕದ ಇತಿಹಾಸವನ್ನು ಕಟ್ಟುವಲ್ಲಿ ದೇಶ ವಿದೇಶಗಳ ಆಕರಗಳನ್ನು ವಸಂತ ಮಾಧವರು ಸಮರ್ಥವಾಗಿ ಬಳಸಿಕೊಂಡರು. ಪ್ರಾದೇಶಿಕ ಇತಿಹಾಸದ ಅಧ್ಯಯನದ ಪರಂಪರೆಯನ್ನು ಇವರು ಸಮರ್ಥವಾಗಿ ಮುನ್ನಡಿಸಿದವರು” ಎಂದರು.
ಹಿರಿಯ ಸಂಶೋಧಕಿ ಮತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಇಂದಿರಾ ಹೆಗ್ಗಡೆ ಮಾತನಾಡಿ “2005-06ರ ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ ಪುರಸ್ಕೃತರಾಗಿದ್ದ ವಸಂತ ಮಾಧವರು ರಾಜ್ಯ ಇತಿಹಾಸ ಅಕಾಡೆಮಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಯುವ ಸಂಶೋಧಕರಿಗೆ ಮಾರ್ಗದರ್ಶಕರಾಗಿದ್ದವರು. ಅವರು ಸೂಚಿಸಿರುವ ಹೊಳಹುಗಳೊಂದಿಗೆ ಇತಿಹಾಸ ಸಂಶೋದನೆಯ ವ್ಯಾಪ್ತಿಯನ್ನು ವಿಸ್ತರಿಸಬೇಕು” ಎಂದರು. ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಕೋಶಾಧಿಕಾರಿ ಡಾ. ಜ್ಯೋತಿ ಚೇಳ್ಯಾರು ಪ್ರಸ್ತಾವನೆಯ ನುಡಿಗಳನ್ನಾಡಿ, ಕರ್ನಾಟಕ ರಾಜ್ಯ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್ ವಂದಿಸಿದರು.