ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಇದರ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 ಕಾರ್ಯಕ್ರಮದ ಅಂಗವಾಗಿ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಕೀರ್ತನಾ ಪ್ರತಿಷ್ಠಾನ ಮುಜುಂಗಾವು ಇದರ ಆಶ್ರಯದಲ್ಲಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ ಬಗ್ಗೆ ಗಾನಗಂಗೆ ಕೃತಿ ರಚಿಸಿದ ಖ್ಯಾತ ಪತ್ರಕರ್ತ, ಲೇಖಕ, ಸಂಘಟಕ, ನಿರೂಪಕ ರವಿ ನಾಯ್ಕಾಪು ಇವರಿಗೆ ಹೃದ್ಯ ಗೌರವಾರ್ಪಣೆ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮವನ್ನು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ಪಾಂಗೋಡು ಪ್ರವೀಣ ನಾಯಕ ಇವರ ಗೌರವ ಉಪಸ್ಥಿತಿಯಲ್ಲಿ ಕನ್ನಡ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಜಾಗಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಕನ್ನಡ ಭವನದ ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ರವಿ ನಾಯ್ಕಾಪು ಓರ್ವ ಬಹುಮುಖ ಪ್ರತಿಭೆ. ಪತ್ರಿಕಾ ರಂಗದಲ್ಲಿ ಮಾತ್ರವಲ್ಲ ಕಾಸರಗೋಡಿನ ಹಲವಾರು ಕಡೆ ನಿರೂಪಕರಾಗಿ ಜನರ ಮನ ಗೆದ್ದಿದ್ದಾರೆ. ಹಲವಾರು ಕಡೆ ಪ್ರಶಸ್ತಿಗಳನ್ನು ಸ್ವೀಕರಿಸಿದ ಇವರಿಗೆ ಇನ್ನೂ ಹೆಚ್ಚಿನ ಕಡೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಒದಗುವಂತಾಗಲಿ” ಎಂದರು.
ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎ. ಶ್ರೀನಾಥ ಇವರು ರವಿ ನಾಯ್ಕಾಪುರವರ ಪರಿಚಯ ಭಾಷಣ ಮಾಡಿ ಮಾತನಾಡಿ “ಕುಂಬಳೆ ಸಮೀಪದ ನಾಯ್ಕಾಪು ನಿವಾಸಿಯಾದ ಇವರು ಪತ್ರಕರ್ತ ಲೇಖಕ ಮಾತ್ರವಲ್ಲದೆ ಕನ್ನಡ ಕಾರ್ಯಕ್ರಮಗಳ ಶ್ರೇಷ್ಠ ನಿರೂಪಕರು ಆಗಿದ್ದಾರೆ. ‘ಗಾನಗಂಗೆ’ ಕೃತಿಯೊಂದಿಗೆ ದಾನಗಂಗೆ, ಸ್ನೇಹ ಗಂಗೆ, ಸಾವಿರದ ಸಾಧಕ ಸಮಾಜ ಸಂಪದ ಮುಂತಾದವುಗಳು ಇವರ ಪ್ರಕಟಿತ ಕೃತಿಗಳು. ಈ ಪೈಕಿ ಸ್ನೇಹ ಗಂಗೆಯು ಎರಡನೆ ಮುದ್ರಣವನ್ನು ಕಂಡಿದೆ. ಸ್ನೇಹ ಗಂಗೆಯು ಶ್ರೇಷ್ಠ ಸಮಾಜಮುಖಿ ಕೃತಿಗಿರುವ ಪುರಸ್ಕಾರಕ್ಕೆ ಪಾತ್ರವಾಗಿರುವುದಲ್ಲದೆ ತೃತೀಯ ಸಂಕ್ಷಿಪ್ತ ರೂಪವು ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ನಾಲ್ಕನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಒಳಪಟ್ಟಿರುವುದು ಗಮನೀಯ. ಕಥೆ ಕವನಗಳು ಸಾಮಾಜಿಕ ಸ್ಪಂದನದ ಮಾನವೀಯ ಕಳಕಳಿಯ ನೂರಾರು ಬರಹಗಳು ಪರಿಸರ ಸಂಬಂಧಿ ಲೇಖನಗಳು ಕನ್ನಡದ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಕನ್ನಡ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷನೂ ಆಗಿರುವ ಇವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಒದಗಿ ಬರಲಿ” ಎಂದು ಹೇಳಿದರು. ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ರವಿ ನಾಯ್ಕಾಪು ಇವರನ್ನು ಪ್ರಶಸ್ತಿ ಪತ್ರ, ಫಲಕ ಸಹಿತ ಶಾಲು ಹೊದಿಸಿ ಗೌರವಿಸಿದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿ ನಾಯ್ಕಾಪು ನನಗೆ ದೊರೆತ ಸನ್ಮಾನ ನನ್ನ ಸಹೋದ್ಯೋಗಿ ಬಂಧುಗಳಿಗೂ ಹಿತೈಷಿಗಳಿಗೂ ಸಮರ್ಪಿಸುತ್ತೇನೆ ಎಂದರು. ದಕ್ಷಿಣ ಕನ್ನಡ ಜಿಲ್ಲೆ ಕೆ.ಯು.ಡಬ್ಲ್ಯೂ.ಜೆ. ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ “ಪತ್ರಿಕಾ ದೃಶ್ಯ ಮಾಧ್ಯಮಗಳೆರಡರಲ್ಲಿಯೂ ಪಳಗಿರುವ ರವಿ ನಾಯ್ಕಾಪು ಅನೇಕ ಮಾಧ್ಯಮಗಳಲ್ಲಿ ವರದಿಗಾರ ಉಪಸಂಪಾದಕ ಸುದ್ದಿ ಸಂಪಾದಕ ಸಂಪಾದಕರ ಹುದ್ದೆಗಳಲ್ಲಿ ಟಿವಿ ಚಾನೆಲ್ ಗಳ ಸುದ್ದಿ ಸಂಪಾದಕ ವಾರ್ತಾವಾಚಕನಾಗಿ ಸೇವೆಸಲ್ಲಿಸಿ, ಹಲವು ಕ್ಷೇತ್ರಗಳಲ್ಲಿ ಪಳಗಿರುವ ಇವರು ಪತ್ರಕರ್ತರಿಗೆ ಹೆಮ್ಮೆ” ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ.ಆರ್. ಸುಬ್ಬಯ್ಯ ಕಟ್ಟೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಅಧ್ಯಕ್ಷರಾದ ಚನಿಯಪ್ಪ ನಾಯ್ಕ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಖಿಲೇಶ್ ನಗುಮುಗಂ, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು. ಸಂಕೀರ್ತನ ಪ್ರತಿಷ್ಠಾನ ಮುಜಂಗಾವು ಇದರ ಅಧ್ಯಕ್ಷರಾದ ಹರಿದಾಸ್ ಜಯಾನಂದ ಕುಮಾರ್ ಹೊಸದುರ್ಗ ಸ್ವಾಗತಿಸಿ, ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ಧನ್ಯವಾದಗೈದರು. ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಕಾರ್ಯಕ್ರಮವನ್ನು ನಿರೂಪಿಸಿದರು.