Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ‘ಕಲ್ಲು ಕರಗುವ ಸಮಯ’ ನಾಟಕ ಪ್ರದರ್ಶನ | ಅಕ್ಟೋಬರ್ 05

    October 3, 2025

    ಡಾ. ಸುರೇಶ ನೆಗಳಗುಳಿಯವರಿಗೆ ಕುದ್ರೋಳಿ ದಸರಾದಲ್ಲಿ ಗೌರವಾರ್ಪಣೆ

    October 3, 2025

    ಸರಿಗಮ ಭಾರತಿ ಸಭಾಂಗಣದಲ್ಲಿ ಸಂಗೀತ ಮತ್ತು ಭರತನಾಟ್ಯದೊಂದಿಗೆ ಸಂಪನ್ನಗೊಂಡ ವಿಜಯದಶಮಿ ಉತ್ಸವ

    October 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯ ವಿಮರ್ಶೆ | ಮನದುಂಬಿದ ವಿಸ್ಮಯಳ ಸಾತ್ವಿಕ ಅಭಿನಯ
    Bharathanatya

    ನೃತ್ಯ ವಿಮರ್ಶೆ | ಮನದುಂಬಿದ ವಿಸ್ಮಯಳ ಸಾತ್ವಿಕ ಅಭಿನಯ

    September 29, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸೊಗಸಾದ ಅಷ್ಟೇ ಕಲಾತ್ಮಕವಾಗಿದ್ದ ರಂಗಸಜ್ಜಿಕೆ, ಅಪೂರ್ವ ದೇವಾಲಯದ ಆವರಣದಲ್ಲಿ ಬಹು ಭಕ್ತಿಯಿಂದ ದೈವೀಕ ನರ್ತನ ಅರ್ಪಿಸಿದ ಉದಯೋನ್ಮುಖ ನೃತ್ಯ ಕಲಾವಿದೆ ವಿಸ್ಮಯ ಸುಧೀರಳ ಸೌಮ್ಯ ನರ್ತನ ನೆರೆದಿದ್ದ ಕಲಾರಸಿಕರ ಮೆಚ್ಚುಗೆಯ ಕರತಾಡನ ಪಡೆಯಿತು. ನೃತ್ಯಕ್ಕೆ ಹೇಳಿ ಮಾಡಿಸಿದ ಮೈಮಾಟ- ಅಭಿವ್ಯಕ್ತಿ ಸೂಸುವ ಮುಖಭಾವ ಹೊಂದಿದ್ದ ಬಾಲಕಿ ಕುಮಾರಿ ವಿಸ್ಮಯ ಇತ್ತೀಚೆಗೆ ಕೋರಮಂಗಲದ ‘ಪ್ರಭಾತ್ ಕಲಾದ್ವಾರಕ’ ಮಂದಿರದಲ್ಲಿ ತನ್ನ ಭರತನಾಟ್ಯದ ರಂಗಪ್ರವೇಶವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡಳು. ಅಭಿನಯಕ್ಕೆ ಹೆಸರಾದ ‘ಆವಾಹನಂ’ ನೃತ್ಯಶಾಲೆಯ ವಿದುಷಿ ದೀಪಾ ಮನೋಹರ ಇವರ ನೆಚ್ಚಿನ ಶಿಷ್ಯೆಯಾದ ಇವಳು ಅಂದು ‘ಮಾರ್ಗಂ’ ಸಂಪ್ರದಾಯದ ಕೃತಿಗಳನ್ನು ಬಹು ಅಚ್ಚುಕಟ್ಟಾಗಿ ನಿರೂಪಿಸಿದ್ದು ವಿಶೇಷವಾಗಿತ್ತು.

    ವಿಸ್ಮಯಳ ದೈವೀಕ ನೃತ್ಯ ಕೃತಿಗಳ ಪ್ರದರ್ಶನಕ್ಕೆ ಪೂರಕವಾಗಿದ್ದ ದೇವಾಲಯದ ಮನಮೋಹಕ ರಂಗಸಜ್ಜಿಕೆ, ಪರಿಸರ, ದೀಪಗಳ ವಿನ್ಯಾಸ, ಸುಮಧುರ ಸಂಗೀತದ ಸಾಂಗತ್ಯ ನೀಡಿದ ವಾದ್ಯಮೇಳ- ಗುರು ದೀಪಾ ಮನೋಹರ್ ಅವರ ಸುಸ್ಪಷ್ಟ-ಖಚಿತ ನಟುವಾಂಗದಿಂದ ದಿವ್ಯ ಪರಿಸರ ರೂಪಿತವಾಗಿತ್ತು.

    ಶುಭಾರಂಭಕ್ಕೆ ವಿಸ್ಮಯ, ಪಾರಂಪರಿಕ ಕೃತಿಯಾದ ಗಂಭೀರ ನಾಟರಾಗದ ತಿಶ್ರ ತ್ರಿಪುಟ ತಾಳದ ‘ಮಲ್ಲಾರಿ’ಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದಳು. ಸಾಮಾನ್ಯವಾಗಿ ಭರತನಾಟ್ಯ ಪ್ರಸ್ತುತಿಗಳಲ್ಲಿ ಇದು ಆರಂಭದ ಕೃತಿಯಾಗಿ ನರ್ತಿಸಲ್ಪಡುತ್ತದೆ. ಇದರ ಲಯದ ವಿನ್ಯಾಸವೇ ಒಂದು ದೈವೀಕ ವಾತಾವರಣವನ್ನು ನಿರ್ಮಿಸುತ್ತದೆ. ದೇವಾಲಯ ಸಂಪ್ರದಾಯದ ಸಂಗೀತ ಪದ್ಧತಿಗಳಲ್ಲಿ 5 ಬಗೆಯ ಮಲ್ಲಾರಿಗಳಿವೆ. ದೇವರಿಗೆ ಸಲ್ಲಿಸುತ್ತಿದ್ದ ಪೂಜಾ ವಿಧಾನಗಳಿಗೆ ತಕ್ಕಂತೆ, ತೀರ್ಥ ಮಲ್ಲಾರಿ, ತಳಿಗೈ ಮಲ್ಲಾರಿ, ಕುಂಭ ಮಲ್ಲಾರಿ, ತೇರ್ ಮಲ್ಲಾರಿ ಮತ್ತು ಕಡೆಯದಾಗಿ, ಪುರಾತನ ದೇವಸ್ಥಾನದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗುವಾಗ ನಾದಸ್ವರ ಕಲಾವಿದರು ತಮಿಳು ವಾದ್ಯ ಮತ್ತು ಡೋಲುಗಳ ಸಹಕಾರದೊಂದಿಗೆ ಉತ್ಸವಗಳನ್ನು ಮುನ್ನಡೆಸುತ್ತಿದ್ದುದಕ್ಕೆ ‘ಪುರಪಟ್ಟು’ ಮಲ್ಲಾರಿ ಎಂದು ಹೆಸರು. ಪ್ರಾರಂಭದಲ್ಲಿ ಗಾಯನರೂಪದಲ್ಲಿರುತ್ತಿದ್ದ ಇದು ಕ್ರಮೇಣ ನೃತ್ಯರೂಪಕ್ಕೆ ಅಳವಟ್ಟು ಜನಪ್ರಿಯತೆಯನ್ನು ಪಡೆಯಿತು. ಇಂಥ ಒಂದು ಮನೋಹರ ಮಲ್ಲಾರಿಯನ್ನು ಕಲಾವಿದೆ ದೃಶ್ಯಾತ್ಮಕವಾಗಿ ಕಟ್ಟಿಕೊಟ್ಟಳು.

    ಅನಂತರ ಪ್ರಥಮ ಪೂಜಿತ ಗಣೇಶನನ್ನು ಭಕ್ತಿಪೂರ್ವಕವಾಗಿ ಅರ್ಚಿಸಿ, ಆತನ ಗುಣಾವಳಿ- ಮಹಿಮೆಯನ್ನು ವರ್ಣಿಸಿ, ವಿನಾಯಕನ ಅನೇಕ ಭಾವ-ಭಂಗಿಗಳನ್ನು ತೋರಿದಳು. ಮುಂದೆ ‘ಅಲರಿಪು’ವಿನಲ್ಲಿ ನಿರೂಪಿಸಿದ ಆಂಗಿಕಾಭಿನಯ ಸೊಗಸೆನಿಸಿತು. ಇಷ್ಟದೇವತಾ ಸ್ತುತಿ, ಪದ್ಯದ ಮಾದರಿಯ ಕವಿತ್ವಂ ಎಂಬುದನ್ನು ಕೆಲವೊಮ್ಮೆ ‘ಕೌತ್ವಂ’ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಸೊಲ್ಲುಕಟ್ಟುಗಳು ಮತ್ತು ಸಾಹಿತ್ಯ ಹದವಾಗಿರುತ್ತದೆ. ಮುಂದಿನ ‘ನಟೇಶ ಕೌತ್ವಂ’ (ರಚನೆ- ಗಂಗೈ ಮುತ್ತು ನಟುವನ್ನಾರ್, ಹಂಸಧ್ವನಿ ರಾಗ ಮತ್ತು ಚತುರಶ್ರ ಏಕ ತಾಳ)ನಲ್ಲಿ ನಾಟ್ಯಾಧಿಪತಿಯ ವರ್ಣನೆ ಸುಮನೋಹರವಾಗಿ ಮೂಡಿಬಂತು. ವಿಸ್ಮಯಳ ಮುಗ್ಧತೆ ಬೆರೆತ ಮುಖಭಾವದ, ಸರಳ ನೃತ್ತಗಳ ನಿರೂಪಣೆ, ಮನೋಹರ ನಟೇಶನ ಭಾವ-ಭಂಗಿಗಳು ಕಲಾರಸಿಕರ ಮನಸೆಳೆಯಿತು. ಗುರು ದೀಪಾ ಮನೋಹರ್ ಅವರ ಸುಂದರ ಕವಿತ್ವಂ ನಿರೂಪಣೆ ಮತ್ತು ಲಯಾತ್ಮಕ ನಟುವಾಂಗ ಸೊಗಸಾಗಿತ್ತು.

    ಪ್ರಸ್ತುತಿಯ ಪ್ರಮುಖ ಕೃತಿ ‘ಧರು ವರ್ಣ’ – ಸುದೀರ್ಘ ಬಂಧ. ಸಂಕೀರ್ಣ ಜತಿಗಳ ಸಂಗತದೊಂದಿಗೆ ಕಲಾವಿದೆಯ ಅಭಿನಯ ಮೇಳೈವಿಸಿತ್ತು. ನಾಲ್ವಡಿ ಕೃಷ್ಣರಾಜರ ಆಶ್ರಯದಲ್ಲಿದ್ದ ಮುತ್ತಯ್ಯ ಭಾಗವತರ್ ಅವರನ್ನೇ ನಾಯಕನನ್ನಾಗಿ ಕಲ್ಪಿಸಿಕೊಂಡು, ನರ್ತಕಿಯನ್ನು ನಾಯಕಿಯನ್ನಾಗಿಸಿಕೊಂಡು, ಮಹಿಷಾಸುರ ಮರ್ಧಿನಿಯಾದ ಆ ಶಕ್ತಿದೇವತೆಯನ್ನು ಕುರಿತು ‘ಶ್ರೀ ರಾಜರಾಜೇಶ್ವರಿ’ (ರಾಗ- ಕಾಪಿ, ತಾಳ -ಮಿಶ್ರಚಾಪು) ಎಂಬ ದೈವೀಕ ಕೃತಿಯನ್ನು ರಚಿಸಿದ್ದಾರೆ. ಇಂಥ ಸಕಲ ಭುವನಮಾತೆಯ ಕಣ್ಮನ ಸೂರೆಗೊಳ್ಳುವ ವರ್ಣನೆ ಮತ್ತು ಆಕೆಯ ಶಕ್ತಿ-ಸಾಮರ್ಥ್ಯವನ್ನು ಮಹಿಷಾಸುರನ ಮರ್ಧಿನಿಯಾಗಿ ಗೈದ ಲೋಕಕಲ್ಯಾಣಕರ ಚಿತ್ರವನ್ನು ಕಲಾವಿದೆ ವಿಸ್ಮಯ, ಸಂಚಾರಿ ಕಥಾನಕದಲ್ಲಿ ಅಯಗಿರಿ ನಂದಿನಿಯಾಗಿ ತನ್ನ ಕ್ರೌರ್ಯ ರೂಪವನ್ನು ಮೆರೆದು, ಪ್ರಸನ್ನತೆಯನ್ನು ತನ್ನ ದೇವೀ ಸ್ವರೂಪದಲ್ಲಿ ಮಹೋನ್ನತವಾಗಿ ನಿರೂಪಿಸಿದಳು.

    ಅನಂತರ ಮೂಡಿಬಂದ ಶ್ರೀತುಳಸೀದಾಸರ ‘ಶ್ರೀರಾಮಚಂದ್ರ ಕೃಪಾಳು ಭಜಮನ’ ಭಜನೆ ರಾಮಾಯಣದ ಅನೇಕ ಕಿರು ಸಂಚಾರಿಗಳೊಂದಿಗೆ ಮನನೀಯವಾಗಿ ಪ್ರಪ್ಹುಲ್ಲಿಸಿತು. ನಂತರ- ‘ಕೃಷ್ಣ ನೀ ಬೇಗನೆ ಬಾರೋ’- (ರಚನೆ- ವ್ಯಾಸರಾಯರು) ಯಶೋದೆಯ ವಾತ್ಸಲ್ಯಭಾವದಲ್ಲಿ ಬಾಲಕೃಷ್ಣನ ಅನೇಕ ಲೀಲೆಗಳನ್ನು ವಿಸ್ಮಯ, ರಮ್ಯವಾಗಿ ಅನಾವರಣಗೊಳಿಸಿದಳು. ಬೃಂದಾವನಿ ರಾಗದ ಶ್ರೀ ಬಾಲಮುರಳೀಕೃಷ್ಣರ ರಚನೆಯ ‘ತಿಲ್ಲಾನ’ದೊಂದಿಗೆ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು ಕಲಾವಿದೆ. ಈಕೆ, ತನ್ನ ಪರಿಶ್ರಮ- ಅಭ್ಯಾಸಗಳಿಂದ ಗುರುಗಳು ಹೇಳಿಕೊಟ್ಟಿದ್ದನ್ನು ತುಂಬ ಅಚ್ಚುಕಟ್ಟಾಗಿ ನಿರೂಪಿಸಿದ್ದರಲ್ಲಿ ವಿದುಷಿ ದೀಪಾ ಅವರ ಸುಂದರ ನೃತ್ಯ ಸಂಯೋಜನೆ ಮತ್ತು ಶಿಷ್ಯೆಗೆ ನೀಡಿದ ಬದ್ಧತೆಯ ಶಿಕ್ಷಣ ಎದ್ದುಕಂಡಿತು. ರಘುರಾಮ್ ಅವರ ಪ್ರಬುದ್ಧ ಗಾಯನ, ಮಹೇಶಸ್ವಾಮಿ ಅವರ ಕೊಳಲ ಮಾಧುರ್ಯ, ಸುಮಾರಾಣಿ ಸಿತಾರ್ ಮಧುರ ನಿನಾದ ಮತ್ತು ವಿದ್ಯಾಶಂಕರ್ ಮೃದಂಗ ಸಾಂಗತ್ಯ ನೃತ್ಯಪ್ರದರ್ಶನಕ್ಕೆ ಚೆಂದ ನೀಡಿತ್ತು.

    ** ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    baikady bharatanatyam dance review roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಬಸವನ ಗುಡಿಯಲ್ಲಿ ‘ಶತಾಬ್ದಿ ನಾದ ನೈವೇದ್ಯ’ | ಅಕ್ಟೋಬರ್ 04
    Next Article ಮೈಸೂರು ರಂಗಾಯಣದ ಭೂಮಿಗೀತದಲ್ಲಿ ‘ಜನ ಗಣ ಮನ’ ಸಂವಿಧಾನ ಮತ್ತು ಶಿಕ್ಷಣದ ಆಶಯದ ನಾಟಕ | ಅಕ್ಟೋಬರ್ 01
    roovari

    Add Comment Cancel Reply


    Related Posts

    ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ‘ಕಲ್ಲು ಕರಗುವ ಸಮಯ’ ನಾಟಕ ಪ್ರದರ್ಶನ | ಅಕ್ಟೋಬರ್ 05

    October 3, 2025

    ಡಾ. ಸುರೇಶ ನೆಗಳಗುಳಿಯವರಿಗೆ ಕುದ್ರೋಳಿ ದಸರಾದಲ್ಲಿ ಗೌರವಾರ್ಪಣೆ

    October 3, 2025

    ಸರಿಗಮ ಭಾರತಿ ಸಭಾಂಗಣದಲ್ಲಿ ಸಂಗೀತ ಮತ್ತು ಭರತನಾಟ್ಯದೊಂದಿಗೆ ಸಂಪನ್ನಗೊಂಡ ವಿಜಯದಶಮಿ ಉತ್ಸವ

    October 3, 2025

    ಮೋಹನ ಕಲ್ಲೂರಾಯ ಇವರಿಂದ ನಾರಾವಿಯಲ್ಲಿ ಹರಿಕಥೆ

    October 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.