ಧರ್ಮಸ್ಥಳ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಹೂವಿನಕೋಲು ಅಭಿಯಾನವು ದಿನಾಂಕ 04 ಅಕ್ಟೋಬರ್ 2025ರಂದು ಧರ್ಮಸ್ಥಳದ ದೇಗುಲದಲ್ಲಿ ನಡೆಯಿತು.
ಈ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಧರ್ಮಸ್ಥಳ ದೇಗುಲದ ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರು “ನವರಾತ್ರಿಯ ಆಚರಣೆಯನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಯಶಸ್ವಿ ಕಲಾವೃಂದ ಹಳೆಯ ಯಕ್ಷ ಕಲಾ ಪ್ರಕಾರವಾದ ಹೂವಿನಕೋಲನ್ನು ನವರಾತ್ರಿಯ ಸಂದರ್ಭದಲ್ಲಿ ಕರಾವಳಿಯುದ್ದಕ್ಕೂ ಮನೆ ಮನೆಗಳಿಗೆ ತಂಡವನ್ನು ಕೊಂಡಯ್ದು ಮನೆಯ ಮನಗಳಿಗೆ ಹರಸಿ, ಪ್ರದರ್ಶಿಸುವ ಕಲೆ ಚಿತ್ತಾಕರ್ಷಕವಾದದ್ದು. ಕಲಿಕೆಯ ಜೊತೆಗೆ ಪೌರಾಣಿಕ ಕಥೆಯ ಸ್ತುತಿ ಎನ್ನುವುದು ಮನೆಗಳಲ್ಲಿ ಪಸರಿಸುವ ಕಾರ್ಯ ಹೆಚ್ಚು ಆಪ್ತವಾಗಿದೆ. ಮಕ್ಕಳ ನಿರರ್ಗಳ ಮಾತುಗಾರಿಕೆ ಹೂವಿನಕೋಲಿನಂತಹ ಕಲಾ ಪ್ರಕಾರದಲ್ಲಿ ಬೆಳೆದಿದೆ ಎನ್ನಬಹುದು. ಈ ತಂಡದಲ್ಲಿ ಭಾಗವಹಿಸಿದ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ” ಎಂದು ಅಭಿಪ್ರಾಯಪಟ್ಟರು.
“ಪ್ರದರ್ಶನದ ಜೊತೆ ಜೊತೆಗೆ ಕಲಿಕೆಯನ್ನು ಒಳಗೊಂಡ ಈ ಪ್ರಕಾರ ಮಕ್ಕಳು ಸಾಂಸ್ಕೃತಿಕ ಕ್ಷೇತದಲ್ಲಿ ಬೆಳೆಯುವುದಕ್ಕೆ ಹೆಚ್ಚು ಪೂರಕ. ಮೊಬೈಲ್ ಯುಗದಲ್ಲಿಯೂ ಗಮನ ಸೆಳೆಯುವ ಈ ಕಲೆಯನ್ನು ಸಮಾಜದ ಗಣ್ಯರು ಪೋಷಿಸಬೇಕು” ಎಂದು ಶ್ರೀಮತಿ ಸುಪ್ರಿಯಾ ಹರ್ಷೆಂದ್ರ ಕುಮಾರ್ ಅಭಿಪ್ರಾಯಪಟ್ಟರು. ಅನಂತ ಪದ್ಮನಾಭ ಬೆಂಗಳೂರು, ಚಂದಿಕಾ ಹೆಬ್ಬಾರ್, ನೀಲಕಂಠ ಉಪಾಧ್ಯಾಯ. ಭಾಗ್ಯಲಕ್ಷ್ಮಿ ವೈದ್ಯ, ರಾಹುಲ್ ಕುಂದರ್ ಕೋಡಿ ಕನ್ಯಾಣ, ಪಂಚಮಿ ವೈದ್ಯ, ಆರಭಿ ಹೆಗಡೆ, ಪರಿಣಿತ ವೈದ್ಯ ಉಪಸ್ಥಿತರಿದ್ದರು.