ಮಂಗಳೂರು : ಮಾಂಡ್ ಸೊಭಾಣ್ ಮತ್ತು ಸುಮೇಳ್ ಆಯೋಜಿಸಿದ ಅಂತರ ರಾಷ್ಟ್ರೀಯ ಸಂಗೀತ ದಿನ ಮತ್ತು ತಿಂಗಳ ವೇದಿಕೆ ಸರಣಿಯ 286ನೇ ಕಾರ್ಯಕ್ರಮವು ದಿನಾಂಕ 05 ಅಕ್ಟೋಬರ್ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಗೀತ ಶಿಕ್ಷಕಿ ಕಾರ್ಮೆಲಿಟಾ ಆಲ್ವಾರಿಸ್ “ಸಂಗೀತವು ಜೀವನವನ್ನು ಮಧುರಗೊಳಿಸುತ್ತದೆ. ಸಂಗೀತ ಶಿಕ್ಷಕಿಯಾಗುವ ದೊಡ್ಡ ಭಾಗ್ಯ ನನ್ನದು. ಕಳೆದ 40 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತದ ಧಾರೆಯೆರೆದಿದ್ದೇನೆ. ಸಂಗೀತ ಕಲಿಸುವಾಗ ನನಗೆ ಆತ್ಮತೃಪ್ತಿ ಸಿಕ್ಕಿದೆ ಹಾಗೂ ಇಂದು ಬಯಸದೆ ಈ ಸನ್ಮಾನ ಲಭಿಸಿದೆ.ʼʼ ಎಂದು ಸಂತಸ ವ್ಯಕ್ತ ಪಡಿಸಿದರು.
ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಪಿಂಟೊ ಸನ್ಮಾನ ನೆರವೇರಿಸಿದರು. ಸುಮೇಳ್ ಸಂಯೋಜಕಿ ರೈನಾ ಸಿಕ್ವೇರಾ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರೇಮಿ ಲೋಬೊ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿಗಳಾದ ರೊನಿ ಕ್ರಾಸ್ತಾ, ಸುನಿಲ್ ಮೊಂತೇರೊ, ಕ್ಲಾರಾ ಪಿಂಟೊ ಮತ್ತು ಸನ್ಮಾನಿತರ ಪತಿ ವಿಲ್ಫ್ರೆಡ್ ಆಲ್ವಾರಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಶ್ಲಿನ್ ವಿಸ್ಮಯಾ ಲೋಬೊ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೇರನ್ ಮಾಡ್ತಾ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಕ್ಲಾರಾ ಡಿಕುನ್ಹಾ ಇವರಿಂದ ಕೊಳಲು ವಾದನ ನಡೆಯಿತು.
ನಂತರ 286ನೇ ತಿಂಗಳ ವೇದಿಕೆಯಲ್ಲಿ ಸುಮೇಳ್ ತಂಡವು ಅಂತ್ಯಾಕ್ಷರಿ ಕಾರ್ಯಕ್ರಮ ನಡೆಸಿತು. ಸಾಂಪ್ರದಾಯಿಕ ಹಾಡುಗಳು, ಮಾಂಡ್ ಸೊಭಾಣ್ ಹಾಡುಗಳು, ಗೋವಾದ ಹಾಡುಗಳು, ಗಂಡು ಹೆಣ್ಣುಗಳ ಹೆಸರಿಸುವ ಹಾಡುಗಳು, ಪ್ರೇಕ್ಷಕರಿಗಾಗಿ ಹಾಡುಗಳು ಹಾಗೂ ಕನ್ನಡ, ತುಳು, ಇಂಗ್ಲೀಷ್, ಹಿಂದಿ, ಪಂಜಾಬಿ ಮತ್ತು ಶ್ರೀಲಂಕನ್ ಬಹುಭಾಷಾ ಹಾಡುಗಳು ವಿವಿಧ ಹಂತಗಳ ಅಂತ್ಯಾಕ್ಷರಿ ಜನಮೆಚ್ಚುಗೆ ಪಡೆಯಿತು. ಸಿಮೊನ್ ಮೊಂತೇರೊ, ಲವಿನಾ ದಾಂತಿ, ರೆನೊಲ್ಡ್ ಲೋಬೊ, ಜೆಸಿಂತಾ ಬೇಳ, ಪ್ರೀಮಾ ಫೆರಾವೊ, ಪ್ರಿಥುಮಾ ಮೊಂತೇರೊ ಮತ್ತು ರೈನಾ ಸಿಕ್ವೇರಾ ಇವರು ವಿವಿಧ ಹಂತಗಳನ್ನು ನಿರ್ವಹಿಸಿದರು. ಸಂಜಯ್ ರೊಡ್ರಿಗಸ್, ಎಲ್ರೊನ್ ರೊಡ್ರಿಗಸ್, ಆಶ್ವಿಲ್ ಕುಲಾಸೊ, ರೆನೊಲ್ಡ್ ಲೋಬೊ ಮತ್ತು ಕೀತ್ ರಸ್ಕಿನ್ಹಾ ಸಂಗೀತ ನಿರ್ವಹಿಸಿದರು.