ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ದತ್ತಿ ಪುರಸ್ಕಾರಗಳಾದ ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧೀ ಪುರಸ್ಕಾರ ಪುದವಟ್ಟು ದತ್ತಿ, ಪಂಕಜಶ್ರೀ ಸಾಹಿತ್ಯ ದತ್ತಿ, ಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮವು ದಿನಾಂಕ 10 ಅಕ್ಟೋಬರ್ 2025ರ ಶುಕ್ರವಾರ ಸಂಜೆ 5-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜವಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ. ಬಿ.ಆರ್. ಗುರುಪ್ರಸಾದ್ ಇವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ವಹಿಸಲಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ದತ್ತಿದಾನಿಗಳಾದ ಎ.ಆರ್. ನಾರಾಯಣಘಟ್ಟ ಮತ್ತು ಟಿ.ಎಸ್. ಶೈಲಜ ಉಪಸ್ಥಿತರಿರುತ್ತಾರೆ.
ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರವನ್ನು ರಾಜ್ಯ ಸರ್ವೋದ್ಯ ಮಂಡಲದ ಅಧ್ಯಕ್ಷರಾದ ಡಾ. ಎಚ್.ಎನ್. ಸುರೇಶ್ ಇವರಿಗೂ ಪಂಕಜಶ್ರೀ ಪುರಸ್ಕಾರವನ್ನು ಮುಂಬಯಿಯಲ್ಲಿ ನೆಲೆಸಿರುವ ಹಿರಿಯ ಕಥೆಗಾರ್ತಿ ಮಿತ್ರಾ ವೆಂಕಟ್ರಾಜು ಇವರಿಗೂ ಟಿ. ಗಿರಿಜಾ ಸಾಹಿತ್ಯ ದತ್ತಿಯನ್ನು ಹಿರಿಯ ವಿಜ್ಞಾನ ಬರಹಗಾರರಾದ ಡಾ. ಬಿ.ಎಸ್. ಶೈಲಜಾ ಇವರಿಗೂ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು.