ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ, ಯಕ್ಷರಂಜಿನಿ ಘಟಕ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ಯಕ್ಷ ದೀಕ್ಷಾ ಪ್ರದಾನ ಹಾಗೂ ಯಕ್ಷರಂಜಿನಿ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯು ದಿನಾಂಕ 30 ಸೆಪ್ಟೆಂಬರ್ 2025ರಂದು ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಹಾಗೂ ವೇಷಧಾರಿ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರು ಮಾತನಾಡಿ “ಒಳಿತು ಕೆಡುಕುಗಳನ್ನು ವಿಮರ್ಶಿಸಿ ಒಳ್ಳೆಯ ವಿಚಾರಗಳನ್ನು ಪುರಾಣಗಳಲ್ಲಿ ತಿಳಿಸಲಾಗಿದೆ. ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಒಳ್ಳೆಯ ಸಂಸ್ಕೃತಿ, ಆಚರಣೆಗಳನ್ನು ಪಾಲಿಸುವಂತೆ ನೋಡಿಕೊಳ್ಳುವುದು ಅವಶ್ಯಕ. ಯಕ್ಷಗಾನ ಸ್ವಂತಿಕೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾದ ಕಲೆ. ಬುದ್ಧಿಯ ಮಟ್ಟವನ್ನೂ ಹೆಚ್ಚಿಸುತ್ತದೆ. ಯಕ್ಷಗಾನ ಪ್ರಸಂಗಗಳ ಮೂಲಕ ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬಹುದು. ಇಂತಹಾ ಕಲಾ ಪ್ರಕಾರಗಳು ಹಾಗೂ ಧಾರ್ಮಿಕ ಆಚರಣೆಗಳಿಂದ ಕೂಡಿದ ಸಂಸ್ಕೃತಿಯನ್ನು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ” ಎಂದು ನುಡಿದರು.
ಈ ಸಂದರ್ಭದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿ ಕೃಷ್ಣ ಕೆ.ಎನ್., ಪ್ರಾಂಶುಪಾಲ ಡಾ. ಶ್ರೀಧರ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ. ಸ್ವಾಗತಿಸಿ, ತೃತೀಯ ಪದವಿ ವಿದ್ಯಾರ್ಥಿನಿ ಚೈತ್ರ ವಂದಿಸಿ, ಭಾಗ್ಯಶ್ರೀ ಕುಂಚಿನಡ್ಕ ನಿರೂಪಿಸಿದರು. ಈ ಸಂದರ್ಭದಲ್ಲಿ ಖ್ಯಾತ ಕಲಾವಿದರಿಂದ ‘ಪಾದುಕ ಪ್ರದಾನ’ ಪ್ರಸಂಗದ ತಾಳಮದ್ದಳೆ ಜರುಗಿತು. ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಚೆಂಡೆಯಲ್ಲಿ ಪಿ.ಟಿ. ಜಯರಾಮ ಪದ್ಯಾಣ ಸಹಕರಿಸಿದರು. ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಅಶೋಕ ಭಟ್ ಉಜಿರೆ, ವಿದ್ವಾನ್ ಕೇಶವ ಭಟ್ ಕೇಕಣಾಜೆ ಹಾಗೂ ಶುಭ ಅಡಿಗ ಸಹಕರಿಸಿದರು.