ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ವೃತ್ತಿಪರ ಯಕ್ಷಗಾನ ಮೇಳದ ಪ್ರಥಮ ಮಹಿಳಾ ಭಾಗವತರಾದ ದಿವಂಗತ ಲೀಲಾವತಿ ಬೈಪಾಡಿತ್ತಾಯ ಅವರ ನೆನೆಪಿನಲ್ಲಿ ಸಂಸ್ಮರಣಾ ಗೋಷ್ಠಿ ಹಾಗೂ ಅವರ ಶಿಷ್ಯ ವೃಂದದ ಮಹಿಳಾ ಕಲಾವಿದರಿಂದ ತುಳು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 12 ಅಕ್ಟೋಬರ್ 2025ರಂದು ಅಪರಾಹ್ನ 2-30ಕ್ಕೆ ಉರ್ವಸ್ಟೋರಿನ ತುಳು ಭವನದ ಸಿರಿಚಾವಡಿಯಲ್ಲಿ ನಡೆಯಲಿದೆ.
ಹಿರಿಯ ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಇವರು ಸಂಸ್ಮರಣಾ ಉಪನ್ಯಾಸ ನೀಡಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸುವರು. ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಎಸ್. ಸುರೇಂದ್ರ ರಾವ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಯಕ್ಷಗಾನ ಗುರುಗಳು ಹಾಗೂ ಲೀಲಾವತಿಯವರ ಪತಿ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿಯವರ ಪುತ್ರ ಅವಿನಾಶ್ ಬೈಪಾಡಿತ್ತಾಯ ಉಪಸ್ಥಿತರಿರುವರು.
ಲೀಲಾವತಿಯವರ ಶಿಷ್ಯ ನಾದಾ ಮಣಿನಾಲ್ಕೂರು ಇವರು ಬೈಪಾಡಿತ್ತಾಯರವರ ಜೊತೆಗಿನ ಮೇಳದ ತಿರುಗಾಟದ ನೆನಪುಗಳ ಕುರಿತು ಮಾತನಾಡಿ, ಲೀಲಾವತಿ ಬೈಪಾಡಿತ್ತಾಯರವರ ಶೈಲಿಯ ಯಕ್ಷಗಾನದ ಹಾಡನ್ನು ಪ್ರಸ್ತುತಪಡಿಸುವರು. ಸಂಸ್ಮರಣಾ ಗೋಷ್ಠಿ ಬಳಿಕ ಮಹಿಳಾ ಕಲಾವಿದರಿಂದ ಪೂರ್ಣಿಮಾ ಯತೀಶ್ ರೈ ಇವರ ನಿರ್ದೇಶನದ ‘ತ್ಯಾಗೊದ ತಿರ್ಲ್’ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಮತಿ ಭವ್ಯಶ್ರೀ ಕುಲ್ಕುಂದ ಹಾಗೂ ಶಾಲಿನಿ ಹೆಬ್ಬಾರ್, ಕುಮಾರಿಯರಾದ ಶ್ರಾವ್ಯ ತಲಕಳ, ಮಹತಿ ಶೆಟ್ಟಿ, ಶಮ ತಲಕಳ, ವಂದನಾ ಮಾಲೆಂಕಿ ಇವರುಗಳು ಪಾಲ್ಗೊಳ್ಳುವವರು.