ಹುಬ್ಬಳ್ಳಿ : ಸಾಹಿತ್ಯ, ಸಾಂಸ್ಕೃತಿಕ ಮತ್ತು ಗ್ರಾಮಾಭ್ಯುದಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಶ್ವಶಾಂತಿ ಸೇವಾ ಟ್ರಸ್ಟ್ ಪ್ರಕಟಿಸುವ ಪ್ರತಿಷ್ಠಿತ ‘ನಮ್ಮನೆ ಪ್ರಶಸ್ತಿ’ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿ ಪ್ರಶಸ್ತಿಗೆ ರಂಗಭೂಮಿ ಮತ್ತು ಚಿತ್ರರಂಗದ ಹಿರಿಯ ಕಲಾವಿದೆ ಬಿ. ಜಯಶ್ರೀ, ಔಷಧೋದ್ಯಮ ಕ್ಷೇತ್ರದ ಪ್ರಮುಖ ಸಾಧಕ ರಾಮನಂದನ ಹೆಗಡೆ ದೊಡ್ಮನೆ ಹಾಗೂ ಯುವ ಪ್ರತಿಭೆ ತೇಜಸ್ವಿ ಗಾಂವಕರ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ.
ಬಿ. ಜಯಶ್ರೀಗೆ ನಮ್ಮನೆ ಸಾಧಕ ಪ್ರಶಸ್ತಿ : ಪ್ರಖ್ಯಾತ ರಂಗಭೂಮಿ ನಟಿ, ನಿರ್ದೇಶಕಿ ಹಾಗೂ ಗಾಯಕಿ ಬಿ. ಜಯಶ್ರೀ ಇವರು ಈ ವರ್ಷದ ನಮ್ಮನೆ ಸಾಧಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಗುಬ್ಬಿ ವೀರಣ್ಣ ಇವರ ಮೊಮ್ಮಗಳಾದ ಜಯಶ್ರೀಯವರು ಹವ್ಯಾಸಿ ನಾಟಕ ಸಂಸ್ಥೆ ಸ್ಪಂದನ ಥಿಯೇಟರ್ನ ಸೃಜನಶೀಲ ನಿರ್ದೇಶಕರಾಗಿ ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. 2010ರಿಂದ 2016ರವರೆಗೆ ಅವರು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದು, ಕಲಾರಂಗದಲ್ಲಿ ರಾಜ್ಯೋತ್ಸವ ಹಾಗೂ ಪದ್ಮಶ್ರೀ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ.
ಔಷಧೋದ್ಯಮದ ಸಾಧಕ ರಾಮನಂದನ ಹೆಗಡೆ ದೊಡ್ಮನೆ: ಸಿದ್ದಾಪುರ ತಾಲೂಕಿನ ದೊಡ್ಮನೆ ಮೂಲದ ರಾಮನಂದನ ಹೆಗಡೆ ಅವರು ಜಗತ್ತೇ ಕೋವಿಡ್ ಸಂಕಷ್ಟದಲ್ಲಿದ್ದಾಗ ಲಸಿಕೆಗಳಿಗೆ ಅಗತ್ಯವಾದ ಮೂಲ ವಸ್ತುಗಳನ್ನು ಪೂರೈಸುವ ಮೂಲಕ ಮಾನವಕೋಟಿಗೆ ಸೇವೆ ಸಲ್ಲಿಸಿದ್ದಾರೆ. 1978ರಲ್ಲಿ ಸ್ಥಾಪಿಸಿದ ನಂದು ಕೆಮಿಕಲ್ಸ್ ಇಂಡಸ್ಟ್ರೀಸ್ ಇಂದಿಗೆ 20ಕ್ಕೂ ಹೆಚ್ಚು ದೇಶಗಳಿಗೆ ಔಷಧ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಭಾರತದಲ್ಲಿ ತಯಾರಾಗುವ 10 ಐವೀ ಬಾಟಲಿಗಳಲ್ಲಿ 8 ಬಾಟಲಿಗಳಲ್ಲಿ ಇವರ ಕಂಪನಿಯ ಉತ್ಪನ್ನಗಳೇ ಸೇರಿವೆ ಎನ್ನುವುದು ವಿಶಿಷ್ಟ. ಅವರು ವಾಣಿಜ್ಯ ರತ್ನ, ಹವ್ಯಕ ಸ್ಪೂರ್ತಿ ರತ್ನ ಸೇರಿದಂತೆ ಅನೇಕ ಪುರಸ್ಕಾರಗಳ ಪುರಸ್ಕೃತರಾಗಿದ್ದಾರೆ.
ಯುವ ಪ್ರತಿಭೆ ತೇಜಸ್ವಿ ಗಾಂವಕರಗೆ ಕಿಶೋರ ಪುರಸ್ಕಾರ : ಅಂಕೋಲಾ ತಾಲೂಕಿನ ತೇಜಸ್ವಿ ರಾಮಕೃಷ್ಣ ಗಾಂವಕರ ಇವರಿಗೆ ಕಿಶೋರ ಪುರಸ್ಕಾರ ಘೋಷಿಸಲಾಗಿದೆ. ಯಕ್ಷಗಾನ ಹಾಗೂ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಈ ಯುವ ಪ್ರತಿಭೆ ‘ಯಕ್ಷತೇಜ’ ಕವನ ಸಂಕಲನ ಹಾಗೂ ‘ಹೃದಯದ ಮಾತು ಕೇಳು ನನ್ನ ಒಲವೇ’ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಕವಿಗೋಷ್ಠಿ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ತೇಜಸ್ವಿ, ಕೀರ್ತನಾಚತುರನಾಗಿಯೂ ಜನಪ್ರಿಯರಾಗಿದ್ದಾರೆ.
ಪ್ರತಿ ವರ್ಷ ನಡೆಯುವ ನಮ್ಮನೆ ಹಬ್ಬದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ಡಿಸೆಂಬರ್ ಮೊದಲ ವಾರದಲ್ಲಿ ಬೆಟ್ಟಕೊಪ್ಪದಲ್ಲಿ ಜರುಗಲಿದೆ. ‘ನೈಜ ಸಾಧಕರಿಗೆ ಗೌರವ, ಬೆಳೆಯುತ್ತಿರುವ ಪ್ರತಿಭೆಗೆ ಪ್ರೋತ್ಸಾಹ’ ಎಂಬ ಧ್ಯೇಯದಡಿ ಈ ವರ್ಷವೂ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿದೆ.