‘ಗಾಡ್ is not ರೀಚಬಲ್’ ಯುವ ಕಥೆಗಾರ ರವೀಂದ್ರ ಮುದ್ದಿಯವರ ಮೊದಲ ಕಾದಂಬರಿ. ತನ್ನ ವಿಶಿಷ್ಟ ಶೀರ್ಷಿಕೆಯಿಂದಲೇ ಗಮನ ಸೆಳೆಯುವ ಇದು ಒಂದು ಭಿನ್ನ ಅನುಭವ ನೀಡುವ ಕಾದಂಬರಿ. ನೇರ ನಿರೂಪಣೆಯ, ಸರಳ ಶೈಲಿಯ, ಎಲ್ಲಿಯೂ ಕೆಳಗಿಡಬೇಕೆಂದು ಅನ್ನಿಸದೆ ಒಂದೇ ಓಟಕ್ಕೆ ಓದಿಸಿಕೊಂಡು ಹೋಗುವ ಇದು ಮೇಲ್ನೋಟಕ್ಕೆ ಒಂದು ಜನಪ್ರಿಯ ಥ್ರಿಲ್ಲರ್ ಎಂದು ಫಕ್ಕನೆ ಅನ್ನಿಸಿದರೂ ಓದಿ ಮುಗಿಸಿದ ನಂತರ ಮರೆತು ಹೋಗುವಂಥ ಕಾದಂಬರಿಯಲ್ಲ, ಬದಲಾಗಿ ಮನಸ್ಸಿನ ಮೂಲೆಗಳಲ್ಲಿ ತಂಗಿ ನಿಂತು ಕಾಡುವ ಗುಣ ಇದಕ್ಕಿದೆ ಅನ್ನುವ ಭಾವನೆ ಹುಟ್ಟಿಸುತ್ತದೆ.
ದೇವರು ಅನ್ನುವ ಅಮೂರ್ತ ಪರಿಕಲ್ಪನೆಯು ಮನುಷ್ಯನ ನಂಬಿಕೆಯ ಪದರಗಳಲ್ಲಿ ಬೇರುಬಿಟ್ಟು ಅವನನ್ನು ಅಲುಗಾಡಿಸುವ ಕೆಲಸವನ್ನು ಹೇಗೆ ಮಾಡುತ್ತದೆ ಅನ್ನುವುದಕ್ಕೆ ಕಾದಂಬರಿಯ ಹಲವು ಕಥಾಪಾತ್ರಗಳು ಸಾಕ್ಷಿಯಾಗುತ್ತವೆ. ಮನುಷ್ಯರ ನಡುವಣ ಪ್ರೀತಿ ಹಾಗೂ ಸ್ನೇಹ ಸಂಬಂಧಗಳೇ ದೇವರೆಂಬ ನಂಬಿಕೆ ಮನಸ್ಸಿನಲ್ಲಿ ಬೇರೂರುವಂತಾದರೆ ಆ ದೇವರನ್ನು ಮುಟ್ಟುವುದು ತಡವಾದರೂ ಅಸಾದ್ಯವಾದ ಕಾರ್ಯವೇನಲ್ಲ. ಕಥಾನಾಯಕ ಗೌತಮ್ ಆರಂಭದಲ್ಲಿ ತಾನು ತನ್ನ ಸರ್ವಸ್ವವನ್ನೂ ಕಳೆದುಕೊಂಡು ಬಿಟ್ಟೆ ಎಂಬ ಅನಾಥಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವನು ಏನೇನೋ ಅಗ್ನಿಪರೀಕ್ಷೆಗಳನ್ನು ದಾಟಿ ಕೊನೆಗೆ ಅಹಲ್ಯೆಯ ಪ್ರೀತಿಯನ್ನು ಪಡೆಯುವುದರ ಮೂಲಕ ಗೆಲುವು ಸಾಧಿಸುತ್ತಾನೆ. ಆರಂಭದಲ್ಲಿ ನಾಸ್ತಿಕನಾಗಿದ್ದವನು ಅಮ್ಮನ ಜತೆಗೆ ದೇವಸ್ಥಾನಗಳನ್ನು ಯಾಂತ್ರಿಕವಾಗಿ ಸುತ್ತುತ್ತ ಅನಾಥಪ್ರಜ್ಞೆ ಕಾಡಿದಾಗ ಮಹಾ ದೈವಭಕ್ತನಾಗುವುದು ಆಕಸ್ಮಿಕ. ತನ್ನ ಪ್ರಿಯಕರನ ಪಾಲಿಗೆ ದೇವರಾಗಿದ್ದ ಅವನ ಅಮ್ಮನನ್ನು ಹುಡುಕುವುದಕ್ಕೋಸ್ಕರ ಮದುವೆ ನಿಶ್ಚಯವಾಗಿದ್ದರೂ ಅದನ್ನು ಬಿಟ್ಟು ಕಾಶಿಗೆ ಹೋಗುವ ಅಹಲ್ಯಳ ವರ್ತನೆಗೆ ಕಾರಣ ಅವಳು ಪ್ರೀತಿ ಎಂಬ ದೇವರಲ್ಲಿಟ್ಟ ನಂಬಿಕೆ. ಅಪ್ಪ-ಅಮ್ಮ, ಅಜ್ಜಿ ಎಲ್ಲರನ್ನೂ ಕಳೆದುಕೊಂಡು ಅನಾಥಳಾದ ಅಹಲ್ಯೆಯ ಪಾಲಿಗೆ ಉಳಿದಿರುವುದು ಗೌತಮನ ಪ್ರೀತಿ ಮಾತ್ರ. ಅವನನ್ನು ಸಂತೋಷ ಪಡಿಸಲು ಅವಳಿಗಿದ್ದ ಒಂದೇ ದಾರಿ ಅವನ ದೇವರನ್ನು ಅವನಿಗೆ ಹುಡುಕಿ ಕೊಡುವುದು. ಬುದ್ಧಿವಂತಳಾದ ಅವಳು ಅದನ್ನು ಸಾಧಿಸುತ್ತಾಳೆ ಕೂಡಾ.
ರಕ್ತ ಸಂಬಂಧಿಗಳನ್ನು ಕಳೆದುಕೊಂಡು ಅನಾಥರಾದರೂ ಅಕಸ್ಮಿಕವಾಗಿ ಒದಗುವ ಸ್ನೇಹಸಂಬಂಧಗಳು ಕಾದಂಬರಿಯಲ್ಲಿ ಚೇತೋಹಾರಿಯಾಗಿ ಕಾಣಿಸಿಕೊಳ್ಳುತ್ತವೆ. ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡ ಸುಬ್ರಮಣಿಗೆ ಶಾರದಮ್ಮ ತಾಯಿಯಾಗಿ ಮತ್ತು ಗೌತಮ ತಮ್ಮನಾಗಿ ಸಿಗುವುದು, ಗೌತಮನ ಗೆಳೆಯ ಗುರುರಾಜನ ಪ್ರೀತಿ, ಅಹಲ್ಯೆ ಅನಾಥಳಾದಾಗ ತಂದೆಯ ಗೆಳೆಯ ಶೇಷಗಿರಿ ಮತ್ತು ಅವರ ಮಗಳು ಪೂನಂ ಆಸರೆ ಅವಳಿಗೆ ಸಿಗುವುದು, ಕಷ್ಟದಲ್ಲಿ ಸಿಲುಕಿದಾಗ ಅಭಿಷೇಕ್ ಶೆಟ್ಟಿ ಮಾಡುವ ಸಹಾಯ, ಮಗಳನ್ನು ಕಳೆದುಕೊಂಡಿದ್ದ ರಾಮಲಾಲ್ ಕಾಶಿಯಲ್ಲಿ ಅಹಲ್ಯೆಗೆ ಮಾಡುವ ಸಹಾಯ-ಹೀಗೆ ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ಮನುಷ್ಯರ ನಡುವಣ ಸ್ನೇಹಸಂಬಂಧಗಳು ದೇವರ ಒಂದು ರೂಪವಲ್ಲದೆ ಬೇರೇನಲ್ಲ. ಅಹಲ್ಯೆಯ ಆಸ್ತಿಗಾಗಿ ಹೊಂಚುಹಾಕಿ ಅವಳನ್ನು ಕೊಲ್ಲಲು ಹವಣಿಸುವ ಲಕ್ಷ್ಮಣ ಬಂಗಾಡೆ ಸೈತಾನನ ಪ್ರತಿರೂಪ. ಅಂತಲೇ ಆರಡಿ ಎತ್ತರದ ಭಯಾನಕ ರೂಪಿ ಅಘೋರಿ ಅವನನ್ನೆತ್ತಿ ಗಂಗೆಯ ನೀರಿಗೆ ಒಗೆಯುವುದು ಪ್ರೀತಿಯ ಗೆಲುವಿನ ದ್ಯೋತಕ.
ಥ್ರಿಲ್ಲರ್ ನ ಗುಣವನ್ನು ಅಲ್ಲಲ್ಲಿ ತೋರಿಸುವ ಕಾದಂಬರಿ ಹೆಜ್ಜೆಹಜ್ಜೆಗೂ ಕುತೂಹಲ ಮೂಡಿಸುತ್ತ ಹೋಗುತ್ತದೆ. ಐದು ವರ್ಷಗಳಿಂದ ಯಾರೂ ವಾಸವಾಗಿರದ ಗಂಗೊಳ್ಳಿಯ ಮನೆಯೊಳಗೆ ಗೌತಮ-ಅಹಲ್ಯೆಯರ ಪ್ರವೇಶ, ದೇವರ ಕೋಣೆಯೊಳಗಿನ ಕೆಂಪು ಬಟ್ಟೆ, ಅಮ್ಮನ ಟ್ರಂಕಿನ ಹುಡುಕಾಟಗಳು ಕಥೆಯನ್ನು ನಿಗೂಢವಾಗಿಸುತ್ತ ಹೋಗುತ್ತವೆ. ಅಹಲ್ಯೆಯ ತಂದೆ-ತಾಯಿಯರ ಸಾವಿನ ರಹಸ್ಯವೂ ಕೊನೆಯ ತನಕ ಓದುಗನನ್ನು ಕಾಡುತ್ತದೆ.
ಲೇಖಕರು ಈ ಕಾದಂಬರಿಯನ್ನು ರಚಿಸುವಾಗ ಬೇರೆಬೇರೆ ಸ್ಥಳಗಳನ್ನು ಮತ್ತು ಇತಿಹಾಸವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ್ದಾರೆ ಅನ್ನುವುದು ಸ್ಪಷ್ಟವಾಗುತ್ತದೆ. ಕುಂದಾಪುರ, ಗಂಗೊಳ್ಳಿ, ಬಸ್ರೂರು, ಮುಂಬಯಿ ನಗರದ ವಿವಿಧ ಭಾಗಗಳ ಸಾಂಸ್ಕೃತಿಕ ಬದುಕು, ಭೌಗೋಳಿಕ ಲಕ್ಷಣಗಳು ಮತ್ತು ಸ್ತಳನಾಮಗಳು, ದೋಣಿಯಲ್ಲಿ ಸಮುದ್ರಯಾನ ಮತ್ತು ಅಲ್ಲಿ ನಡೆಸುವ ಹೊಡೆದಾಟಗಳು-ಇವೆಲ್ಲವನ್ನೂ ನಮೂದಿಸುವುದರ ಹಿಂದೆ ಅಪಾರವಾದ ಪರಿಶ್ರಮವಿದೆ. ಕಾಶಿಯಲ್ಲಿರುವ ಬೇರೆ ಬೇರೆ ದೇವಸ್ಥಾನಗಳು ಮತ್ತು ಪೂಜಾಕ್ರಮಗಳು, ಅಲ್ಲಿನ ಸ್ನಾನಘಟ್ಟಗಳು, ಬೀದಿಗಳು, ವಾಹನಗಳು, ಗಲ್ಲಿಗಳು, ಶವದಹನದ ಜಾಗಗಳ ವಿವರಣೆಗಳು, ಅಂಗಡಿ ಕಟ್ಟಡಗಳು-ಎಲ್ಲದರ ಅಧಿಕೃತ ವರ್ಣನೆ ನೀಡುವುದು ಸುಲಭದ ಕೆಲಸವಲ್ಲ. ಇತಿಹಾಸದಲ್ಲಿ ಆಗಿಹೋದ ಬಸವಣ್ಣನವರ ಶರಣ ಚಳುವಳಿಯನ್ನು ಕೂಡಾ ಉಲ್ಲೇಖಿಸುತ್ತ ಗೌತಮನ ಪೂರ್ವಜರು ಉತ್ತರ ಕರ್ನಾಟಕದಿಂದ ಗಂಗೊಳ್ಳಿಗೆ ವಲಸೆ ಬಂದ ಹರಳಯ್ಯನ ವಂಶದವರು ಅನ್ನುವ ವಿಚಾರವು ಕಥೆಗೊಂದು ವಾಸ್ತವದ ಸ್ಪರ್ಶವನ್ನು ನೀಡುತ್ತದೆ. ಕಾದಂಬರಿಯುದ್ದಕ್ಕೂ ಕಾಣುವ ಇಂತಹ ವರ್ಣನೆಗಳು ಓದುಗನ ಕಲ್ಪನೆಯನ್ನು ಚುರುಕುಗೊಳಿಸಿ ಇದು ಒಂದು ಸಿನಿಮಾದ ಚಿತ್ರಕಥೆಯೇನೋ ಎಂದು ಭಾಸವಾಗುವಂತೆ ಕಣ್ಣಿಗೆ ಕಟ್ಟುವ ದೃಶ್ಯಗಳನ್ನು ಚಿತ್ರಿಸುತ್ತವೆ.
ಕಥಾನಾಯಕ ಮತ್ತು ನಾಯಕಿಯರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಪುರಾಣದಿಂದ ಆಯ್ದುಕೊಂಡದ್ದು ಕಥೆಯನ್ನು ಹೆಚ್ಚು ಅರ್ಥಪೂರ್ಣವಾಗಿಸಿದೆ. ಪುರಾಣದ ಕಥೆಯಲ್ಲಿ ಗೌತಮ-ಅಹಲ್ಯೆಯರ ನಡುವೆ ಪ್ರೀತಿಯೇ ಇಲ್ಲ. ನಿರಪರಾಧಿಯಾದ ಅಹಲ್ಯೆಯನ್ನು ನಂಬಿಕೆಗೆ ಅರ್ಹಳಲ್ಲವೆಂದು ಆರೋಪಿಸಿ ಗೌತಮ ಶಪಿಸುತ್ತಾನೆ. ಆದರೆ ಇಲ್ಲಿನ ಗೌತಮ ಅಹಲ್ಯೆಯಲ್ಲಿ ಅಚಲವಾದ ನಂಬಿಕೆ ಇಟ್ಟಿದ್ದರಿಂದಲೇ ಅವರ ಬದುಕು ಪ್ರೀತಿ ಎಂಬ ದೇವರ ಅನುಗ್ರಹದಿಂದ ಸುಗಮವಾಗುತ್ತದೆ. ಆದ್ದರಿಂದ ಮನುಷ್ಯರು ಮನಸ್ಸು ಮಾಡಿದರೆ ಗಾಡ್ is ರೀಚಬಲ್ ಅನ್ನುವುದು ಕಾದಂಬರಿ ನೀಡುವ ಧನಾತ್ಮಕ ಸಂದೇಶ ಅನ್ನಿಸುತ್ತದೆ.

– ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಕೃತಿಯ ಹೆಸರು : ಗಾಡ್ is not ರೀಚಬಲ್ (ಕಾದಂಬರಿ)
ಲೇಖಕರು : ರವೀಂದ್ರ ಮುದ್ದಿ
ಪ್ರಕಟಣೆ : ಮುದ್ದಿ ಮೈಂಡ್ಸ್ ವಿತರಣೆ : ವೀರಲೋಕ ಬುಕ್ಸ್
ಪುಟಗಳು : 105, ಬೆಲೆ : ರೂ.175/-

ಲೇಖಕರು : ರವೀಂದ್ರ ಮುದ್ದಿ
