ಮನುಷ್ಯನ ಸಂಬಂಧಗಳ ಕೊಂಡಿ ಸಡಿಲವಾಗುತ್ತಿರುವ ಪ್ರಸ್ತುತ ಕಾಲಮಾನದಲ್ಲಿ ‘ಗೋಕುಲ ನಿರ್ಗಮನ’ ನಾಟಕ ಮನುಷ್ಯ ಸಂಬಂಧಗಳ ಮಹತ್ವವನ್ನು ತಿಳಿಹೇಳುತ್ತದೆ. ಗೋಕುಲ ನಿರ್ಗಮನವು ಒಂದು ಪೌರಾಣಿಕ ನಾಟಕ. ಇಲ್ಲಿ ಗೋಕುಲದ ಜನರ ಜೀವನದ ಚಿತ್ರಣವು ಅದ್ಭುತವಾಗಿ ಮೂಡಿಬಂದಿದೆ. ಗೋಕುಲದ ಜನರು, ಕೃಷ್ಣ ಹಾಗೂ ಕೊಳಲಿನ ಜೊತೆಗೆ ಹೊಂದಿದ ಭಾವನಾತ್ಮಕ ಸಂಬಂಧ ನಾಟಕದ ಕೇಂದ್ರಬಿಂದುವಾಗಿ ನಿಲ್ಲುತ್ತದೆ.

ಗೋಪಾಲಕರು-ಗೋಪಿಕೆಯರು, ಕೃಷ್ಣ, ಬಲರಾಮ, ಅಕ್ರೂರ, ಸುದಾಸ, ಸುಬಲ ಎಲ್ಲ ಪಾತ್ರಗಳ ನಟನೆ ಅದರಲ್ಲೂ ಕೃಷ್ಣನೊಂದಿಗಿರುವ ರಾಧೆ, ಬಲರಾಮ, ಶ್ರೀಧಾಮನ ದೃಶ್ಯಗಳು ಮನದೊಳಗುಳಿಯುತ್ತವೆ. ಶ್ರೀಧಾಮನ ಪಾತ್ರ ಪ್ರೇಕ್ಷಕರನ್ನು ಪ್ರತಿಬಾರಿಯೂ ನಗುವಿನ ಅಲೆಯಲ್ಲಿ ತೇಲಿಸುತ್ತದೆ. ಗೋಕುಲದ ಚಿಕ್ಕಮಕ್ಕಳಿಂದ ಹಿಡಿದು ಹಿರಿಜೀವಗಳ ತನಕ ಕೃಷ್ಣನು ಕೊಳಲನೂದುವುದನ್ನು ಆಲಿಸಲು ತೋರುವ ತುಡಿತ ಹಾಗೂ ಕೃಷ್ಣನ ಮೇಲಿನ ಪ್ರೀತಿ ಪ್ರತಿ ಸನ್ನಿವೇಶದಲ್ಲೂ ಕಾಣುತ್ತದೆ. ಕೃಷ್ಣನು ಕೊಳಲನ್ನು ಮತ್ತು ಗೋಕುಲವನ್ನು ಒಲ್ಲದ ಮನಸ್ಸಿನಿಂದ ತೊರೆದು ಬಲರಾಮ ಮತ್ತು ಅಕ್ರೂರನೊಂದಿಗೆ ಮಥುರೆಗೆ ಹೋಗುವ ಆ ದುಃಖದ ಪ್ರಸಂಗ, ಕೃಷ್ಣ ಗೋಕುಲವನ್ನು ಬಿಟ್ಟು ಹೋಗಬಾರದಿತ್ತು ಎನ್ನುವ ಭಾವನೆಯನ್ನು ಮೂಡಿಸುತ್ತದೆ.

ಗೋಕುಲ ನಿರ್ಗಮನ ಒಂದು ಗೀತ-ನಾಟಕವಾಗಿದ್ದರಿಂದ ಇಲ್ಲಿ ಸಂಗೀತ ನಾಟಕದ ಬೆನ್ನೆಲುಬು. ನಟರು ತಮ್ಮ ನಟನೆಯ ಮೂಲಕ ಪಾತ್ರಕ್ಕೆ ಜೀವ ತುಂಬಿದರೆ ಸಂಗೀತ ಆ ನಾಟಕಕ್ಕೆ ಜೀವ ತುಂಬಿದೆ. ಪು.ತಿ.ನ.ರವರ ಕಾವ್ಯಾತ್ಮಕ ಬರವಣಿಗೆ ನಾಟಕವನ್ನು ಉಸಿರಾಗಿ ಹಿಡಿದಿದೆ. ಹಳೆಗನ್ನಡದಲ್ಲಿರುವುದರಿಂದ ಸಾಹಿತ್ಯದ ಅಭಿರುಚಿಯಿರದ ಇಂದಿನ ಜೆನ್-ಜಿಗೆ ಈ ನಾಟಕ ಸಾಹಿತ್ಯಕವಾಗಿ ಅರ್ಥವಾಗುವುದು ಸ್ವಲ್ಪ ಕಷ್ಟವೆನ್ನಬಹುದು.
– ರಾಮಸುತ
ನಾಟಕದ ಹೆಸರು – ಗೋಕುಲ ನಿರ್ಗಮನ
ಲೇಖಕರು – ಪು.ತಿ.ನ.
ಸಂಗೀತ ಮತ್ತು ನಿರ್ದೇಶನ : ಬಿ.ವಿ. ಕಾರಂತ
ಮರು ವಿನ್ಯಾಸ : ಟಿ.ಎಸ್. ನಾಗಾಭರಣ
ಪ್ರಸ್ತುತಿ : ಬೆನಕ
ನಾಟಕದ ಪ್ರಕಾರ : ಪೌರಾಣಿಕ
