ಮಂಗಳೂರು : ಮಂಗಳೂರು ವಿ.ವಿ. ಕಾಲೇಜಿನಲ್ಲಿ ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ, ಮಂಗಳೂರು ವಿ.ವಿ.ಯ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ (ರಿ.) ಪುತ್ತೂರು ಇವರ ಸಹಯೋಗದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಹದಿಮೂರನೇ ವರ್ಷದ ನುಡಿಹಬ್ಬ ತ್ರಯೋದಶ ಸರಣಿಯ ಮೂರನೇ ದಿನ ಕೀರ್ತಿಶೇಷ ಅರ್ಥಧಾರಿಗಳಾದ ದಿ. ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಫರಂಗಿಪೇಟೆ ಇವರ ನೆನಪಿನ ಕಾರ್ಯಕ್ರಮ ದಿನಾಂಕ 25 ನವೆಂಬರ್ 2025ರಂದು ನಡೆಯಿತು.

ಸಂಸ್ಮರಣಾ ಜ್ಯೋತಿ ಬೆಳಗಿ ಮಾತನಾಡಿದ ಪ್ರಸಿದ್ಧ ಲೆಕ್ಕ ಪರಿಶೋಧಕರಾದ ಎಸ್.ಎಸ್. ನಾಯಕ್ ‘ಯಕ್ಷಗಾನದಲ್ಲಿ ಹಾಡು, ಕುಣಿತ, ಮಾತು, ಬಣ್ಣಗಾರಿಕೆ ಮತ್ತು ವೇಷಭೂಷಣಗಳಂತಹ ರಂಜನೀಯ ಅಂಶಗಳಿವೆ. ಆದರೆ ಕೇವಲ ಮಾತಿನಲ್ಲೇ ವಿವಿಧ ಪಾತ್ರಗಳಿಗೆ ಜೀವ ತುಂಬುವ ಒಂದು ಕಲೆಯಿದ್ದರೆ ಅದು ಯಕ್ಷಗಾನದ ಇನ್ನೊಂದು ಪ್ರಕಾರವಾದ ತಾಳಮದ್ದಳೆ ಮಾತ್ರ. ಇದರಲ್ಲಿ ಭಾಗವಹಿಸುವ ಕಲಾವಿದರಿಗೆ ಅಪಾರ ಪುರಾಣ ಜ್ಞಾನ ಮತ್ತು ಪಾತ್ರಗಳ ಒಳ ಹೊರಗು ತಿಳಿದಿರಬೇಕು’ ಎಂದು ಹೇಳಿದರು. ನೆನಪು ಸಮಿತಿ ಸಂಚಾಲಕರಾದ ಎ.ಕೆ. ಜಯರಾಮ ಶೇಖ ಸಂಸ್ಮರಣಾ ಭಾಷಣ ಮಾಡಿದರು.

ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ 50ನೇ ವರ್ಷಾಚರಣೆ ಸಂದರ್ಭ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಬಾರಿ ಸುವರ್ಣ ಸಂಭ್ರಮದ ‘ಆರ್ಯಭಟ ಪ್ರಶಸ್ತಿ’ ಪುರಸ್ಕೃತರಾದ ಮೂವರು ಸಾಧಕರಿಗೆ ಯಕ್ಷಾಂಗಣದ ವತಿಯಿಂದ ಅಭಿನಂದನಾ ಗೌರವ ನೀಡಲಾಯಿತು. ಮಹೇಶ್ ಮೋಟರ್ಸ್ ಮಾಲಕ ಹಾಗೂ ಕಲಾಪೋಷಕ ಎ.ಕೆ. ಜಯರಾಮ ಶೇಖ, ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮತ್ತು ಹವ್ಯಾಸಿ ಕಲಾವಿದ ಹಾಗೂ ಹೋಟೇಲ್ ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು ಇವರನ್ನು ಯಕ್ಷಾಂಗಣ ಪರವಾಗಿ ಗಣ್ಯರು ಸನ್ಮಾನಿಸಿದರು. ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು.

ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಶ್ರೀಪತಿ ಭಟ್ ಮೂಡಬಿದ್ರಿ, ಮಾಜಿ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ, ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಮತ್ತು ಫರಂಗಿಪೇಟೆ ರೋಟರಿ ಕ್ಲಬ್ ಅಧ್ಯಕ್ಷ ರಮೇಶ್ ಶೆಟ್ಟಿ ನಡಿಗುತ್ತು ಮುಖ್ಯ ಅತಿಥಿಗಳಾಗಿದ್ದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿ, ಸಮಿತಿಯ ಸುಧಾಕರ ರಾವ್ ಪೇಜಾವರ ವಂದಿಸಿದರು. ಪದ್ಮಾವತಿ ಜಯರಾಮ ಶೇಖ, ಸಂಜ್ಯೋತಿ ಶೇಖ ದಂಪತಿ ಹಾಗೂ ಸನ್ಮಾನಿತರ ನಿಕಟ ಬಂಧುಗಳು ಕಾರ್ಯಕ್ರಮದಲ್ಲಿ ಉಪಸಿತರಿದ್ದರು.

ಸಪ್ತಾಹದ ಮೂರನೇ ದಿನದ ಕಾರ್ಯಕ್ರಮವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕದ ಸಂಯೋಜನೆಯಲ್ಲಿ ‘ಸೌಗಂಧಿಕಾ ಹರಣ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು. ಅಶೋಕ ಭಟ್ ಉಜಿರೆ, ವಿನಯ ಆಚಾರ್ ಹೊಸಬೆಟ್ಟು, ಸದಾಶಿವ ಆಳ್ವ ತಲಪಾಡಿ, ವಿಜಯಶಂಕರ ಆಳ್ವ ಮಿತ್ತಳಿಗೆ ಅರ್ಥಧಾರಿಗಳಾಗಿದ್ದರು. ಶಶಿಧರ ರಾವ್ ಮತ್ತು ಗಣೇಶ ಮಯ್ಯ ವರ್ಕಾಡಿ ಇವರ ಭಾಗವತಿಕೆಗೆ ರಾಮ ಹೊಳ್ಳ, ವೇದವ್ಯಾಸ ರಾವ್ ಮತ್ತು ಹರಿಶ್ಚಂದ್ರ ನಾಯಗ ಹಿಮ್ಮೇಳದಲ್ಲಿದ್ದರು.

