Subscribe to Updates

    Get the latest creative news from FooBar about art, design and business.

    What's Hot

    ಸೃಷ್ಟಿ ಕಲಾಮಂದಿರದಲ್ಲಿ ‘ಸೃಷ್ಟಿ ಚಿತ್ರ ಸಂಭ್ರಮ’ | ಡಿಸೆಂಬರ್ 05

    December 3, 2025

    ಎಸ್.ಎನ್. ಸೇತುರಾಮ್ ಇವರಿಗೆ ‘ಶಾರದಾ ಕೃಷ್ಣ’ ಪ್ರಶಸ್ತಿ ಪ್ರಕಟ

    December 3, 2025

    ಪುಸ್ತಕ ವಿಮರ್ಶೆ | ವಿಕಾಸ ಹೊಸಮನಿಯವರ ವಿಮರ್ಶಾ ಕೃತಿ ‘ಜೀವ ಸಂವಾದ’

    December 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ವಿಕಾಸ ಹೊಸಮನಿಯವರ ವಿಮರ್ಶಾ ಕೃತಿ ‘ಜೀವ ಸಂವಾದ’
    Article

    ಪುಸ್ತಕ ವಿಮರ್ಶೆ | ವಿಕಾಸ ಹೊಸಮನಿಯವರ ವಿಮರ್ಶಾ ಕೃತಿ ‘ಜೀವ ಸಂವಾದ’

    December 3, 2025No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಯುವ ಲೇಖಕ ವಿಕಾಸ ಹೊಸಮನಿಯವರ ಮೂರನೇ ವಿಮರ್ಶಾ ಕೃತಿ ‘ಜೀವ ಸಂವಾದ’. ಗಾಳಿ ಹೆಜ್ಜೆ ಹಿಡಿದ ಸುಗಂಧ, ವೀತರಾಗ ಎಂಬ ವಿಮರ್ಶಾ ಕೃತಿಗಳ ಮೂಲಕ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿರುವ ಲೇಖಕರು ಈ ದೀರ್ಘ ಸಮೀಕ್ಷಾ ಪ್ರಬಂಧದಲ್ಲಿ ಕಳೆದ ಐವತ್ತು ವರ್ಷಗಳ (1973 – 2023) ಕನ್ನಡ ಕಾದಂಬರಿ ಪ್ರಕಾರದ ಬೆಳವಣಿಗೆಯ ಕುರಿತು ಪರಿಚಯಾತ್ಮಕ ವಿಮರ್ಶೆಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಿದ ಈ ಪುಟ್ಟ ಪುಸ್ತಕದ ಮೂಲಕ ಸೃಜನಶೀಲತೆ ಮತ್ತು ವಿಮರ್ಶೆಯ ನಡುವೆ ಜೀವಂತ ಸಂವಾದ ಸಾಧ್ಯವಾಗಬೇಕೆಂಬ ಉದ್ದೇಶವು ವ್ಯಕ್ತವಾಗುತ್ತದೆ.

    ಕನ್ನಡದಲ್ಲಿ ಕಾದಂಬರಿಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನಲಾಗುತ್ತಿದ್ದರೂ ಅವುಗಳೆಲ್ಲ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ದಲಿತ ಬಂಡಾಯ ಯುಗ ಮುಗಿದರೂ ಅದರ ಸೂಕ್ಷ್ಮ ಧ್ವನಿಯನ್ನು ಹೊಂದಿದ ಕಾದಂಬರಿಗಳು ಬರುತ್ತಿವೆ. ನವೋದಯ, ನವ್ಯ ಮಾರ್ಗದ ಕಾದಂಬರಿಗಳೂ ಬೆಳಕು ಕಾಣುತ್ತಿವೆ.

    ಇಪ್ಪತ್ತನೇ ಶತಮಾನದ ಎಪ್ಪತ್ತರ ದಶಕವು ಕನ್ನಡ ಸಾಹಿತ್ಯ ಚರಿತ್ರೆಯ ಮಹತ್ವದ ಕಾಲಘಟ್ಟವಾಗಿದೆ. ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯ ಪಂಥಗಳು ಕ್ಷೀಣಿಸಿ ಹೊಸತನದಿಂದ ಕೂಡಿದ ಸಾಹಿತ್ಯ ಕೃತಿಗಳಿಗಾಗಿ ಹಂಬಲಿಸುತ್ತಿದ್ದ ಸಂದರ್ಭದಲ್ಲಿ ಬಂಡಾಯ-ದಲಿತ ಸಾಹಿತ್ಯ ಪಂಥ ಮೈವಡೆದು ವೈವಿಧ್ಯಮಯವೂ, ವ್ಯಾಪಕವೂ ಆದ ಸಾಹಿತ್ಯ ಸೃಷ್ಟಿಯಾಯಿತು. ನವ್ಯ ಸಾಹಿತ್ಯದ ಇತಿಮಿತಿಗಳು, ಮಾರ್ಕ್ಸ್ವಾದ, ಲೋಹಿಯಾವಾದ, ಅಂಬೇಡ್ಕರ್ ವಾದ, ಬೂಸಾ ಪ್ರಕರಣ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ಪ್ರಗತಿಪಂಥ, ದಲಿತ ಸಂಘರ್ಷ ಸಮಿತಿ, ತುರ್ತು ಪರಿಸ್ಥಿತಿ ಈ ಸಾಹಿತ್ಯ ಪಂಥದ ಹುಟ್ಟಿಗೆ ಕಾರಣವಾಯಿತು. ಆದರೆ ‘ಜೀವ ಸಂವಾದ’ವು ಕೇವಲ ದಲಿತ ಬಂಡಾಯ ಕಾದಂಬರಿಗಳಿಗೆ ಜೋತುಬಿದ್ದು ಆ ಪಂಥದಲ್ಲಿ ಗುರುತಿಸಿಕೊಂಡ ಬರಹಗಾರರ ಜಾತಿ, ಮತ, ಧರ್ಮಗಳನ್ನು ಮುಂದಿಟ್ಟುಕೊಂಡು ಭೋಳೆಯಾಗಿ ಹೊಗಳುವ ಕೃತಿಯಲ್ಲ. ಇತರ ಸಾಹಿತ್ಯ ಪಂಥದಲ್ಲಿ ಗುರುತಿಸಿಕೊಂಡ ಹಿರಿಯ ಲೇಖಕರನ್ನು ತೆಗಳುವ ಸಿನಿಕತನ ಮತ್ತು ಏಕಪಕ್ಷೀಯ ನೋಟವಿಲ್ಲ. ಎಪ್ಪತ್ತರ ದಶಕದಲ್ಲಿಯೂ ಬರವಣಿಗೆಯನ್ನು ಮುಂದುವರಿಸಿದ್ದ ಶಿವರಾಮ ಕಾರಂತ, ರಾವ್ ಬಹದ್ದೂರರಂಥ ನವೋದಯ ಸಾಹಿತಿಗಳ ಕಾದಂಬರಿಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡುವುದರೊಂದಿಗೆ ಅವರ ಬರವಣಿಗೆಯ ಇತಿಮಿತಿಗಳನ್ನು ಗುರುತಿಸಿದ್ದಾರೆ. “ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಪ್ರಕಟವಾದ ಕಾರಂತರ ಕಾದಂಬರಿಗಳ ವಿಶೇಷತೆಯೆಂದರೆ ಇಲ್ಲಿ ಕಾದಂಬರಿಕಾರ ಕಾರಂತರು ಮತ್ತು ವಿಚಾರವಾದಿ ಕಾರಂತರು ಪರಸ್ಪರ ಸ್ಪರ್ಧೆಗಿಳಿಯುತ್ತಾರೆ ಮತ್ತು ವಿಚಾರವಾದ ಕಥನವನ್ನು ಸೋಲಿಸುತ್ತದೆ. ವೈಚಾರಿಕತೆಯ ದೃಷ್ಟಿಯಿಂದ ಗಟ್ಟಿಯಿದ್ದರೂ ಕಥನದ ದೃಷ್ಟಿಯಿಂದ ಸೊರಗಿದಂತೆ ಕಾಣುವ ಅವರ ಕೊನೆಯ ಕಾದಂಬರಿಗಳು ಓದುಗರ ಗಮನವನ್ನು ಅಷ್ಟಾಗಿ ಸೆಳೆಯಲಿಲ್ಲ ಎಂಬುದು ಗಮನಿಸತಕ್ಕ ಅಂಶ” (ಪುಟ 15) ಎಂಬ ಒಳನೋಟವನ್ನು ನೀಡಿದ್ದಾರೆ. ‘ಗ್ರಾಮಾಯಣ’ದ ಖ್ಯಾತಿಯ ರಾವ್ ಬಹದ್ದೂರರ ‘ಬಿತ್ತಿ ಬೆಳೆದವರು’ ಎಂಬ ಕಾದಂಬರಿಯ ಕಡೆಗೆ ಅಪೂರ್ವಕಥನ ಕಲೆ ಮತ್ತು ಕಲ್ಪನಾ ಸಾಮರ್ಥ್ಯದ ಕಡೆ ಬೆಳಕು ಚೆಲ್ಲಿರುವ ಲೇಖಕರು “ರಾವ್ ಬಹದ್ದೂರರು ಒಳ್ಳೆಯ ಕಾದಂಬರಿಗಳನ್ನು ಬರೆದರೂ ವಿಮರ್ಶಕರು ಅವರ ಮೊದಲ ಕಾದಂಬರಿಯಾದ ಗ್ರಾಮಾಯಣದ ಜೊತೆ ಹೋಲಿಸುತ್ತಾ ಹೋದ್ದರಿಂದ ಅವರ ಅತ್ಯುತ್ತಮ ಕಾದಂಬರಿಗಳಾದ ‘ತಬ್ಬಲಿಗಳು’, ‘ವೃಂದಾವನ’ಕ್ಕೆ ಸಹ ಸೂಕ್ತ ವಿಮರ್ಶೆ ಸಿಗದಂತಾಯಿತು” (ಪುಟ 16) ಎಂಬ ವಿಷಾದವನ್ನು ವ್ಯಕ್ತಪಡಿಸುವ ಮೂಲಕ ಅವರ ಅಲಕ್ಷಿತ ಕಾದಂಬರಿಗಳ ಬಗ್ಗೆ ಅಧ್ಯಯನವನ್ನು ಮಾಡಲು ಸಾಧ್ಯತೆಗಳನ್ನು ಕಲ್ಪಿಸಿದ್ದಾರೆ. ಚದುರಂಗರ ‘ವೈಶಾಖ’ದ ಬಗ್ಗೆ ಬರೆಯುತ್ತಾ ಉತ್ತರ ಕರ್ನಾಟಕದ ಪಾದಳ್ಳಿ ಎಂಬ ಗ್ರಾಮದ ಆಧುನಿಕ ಪುರಾಣವಾದ ರಾವ್ ಬಹದ್ದೂರರ ‘ಗ್ರಾಮಯಣ’ಕ್ಕೂ ಹಳೆ ಮೈಸೂರಿನ ಧರುಮನಹಳ್ಳಿ ಎಂಬ ಗ್ರಾಮದ ಆಧುನಿಕ ಪುರಾಣವಾದ ‘ವೈಶಾಖ’ಕ್ಕೂ ಇರುವ ಸಾಮ್ಯತೆಗಳನ್ನು ಸೂಚಿಸಿ ತೌಲನಿಕ ಅಧ್ಯಯನದ ಕಡೆಗೆ ದಾರಿಯನ್ನು ತೋರಿದ್ದಾರೆ. ಅದೇ ಕಾಲಘಟ್ಟದಲ್ಲಿ ಪ್ರಕಟಗೊಂಡ ತ.ರಾ.ಸು. ಅವರ ‘ದುರ್ಗಾಸ್ತಮಾನ’, ನಿರಂಜನರ ‘ಮೃತ್ಯುಂಜಯ’, ವ್ಯಾಸರಾಯ ಬಲ್ಲಾಳರ ‘ಬಂಡಾಯ’, ‘ಆಕಾಶಕ್ಕೊಂದು ಕಂದೀಲು’ ಎಂಬ ಕಾದಂಬರಿಗಳ ಸಮೀಕ್ಷೆಯು ಪ್ರಗತಿಶೀಲ ಪಂಥದ ಮೂಲಕ ಬೆಳಕಿಗೆ ಬಂದ ಈ ಲೇಖಕರ ಪೈಕಿ ನಿರಂಜನರು ಮಾತ್ರ ಪ್ರಗತಿಶೀಲ ಮನೋಧರ್ಮವನ್ನು ಉಳಿಸಿಕೊಂಡಿದ್ದು, ತ.ರಾ.ಸು. ಮತ್ತು ಬಲ್ಲಾಳರು ಅದರಿಂದ ದೂರವಾಗಿರುವ ವಿಚಾರವನ್ನು ತಿಳಿಸುತ್ತದೆ.

    ಎಪ್ಪತ್ತರ ದಶಕದಲ್ಲಿ ನವ್ಯಸಂವೇದನೆ ಮುಖ್ಯವಾಗಿರುವ ಕಾದಂಬರಿಗಳ ಪೈಕಿ ಅನಂತಮೂರ್ತಿ, ಲಂಕೇಶ, ಶಾಂತಿನಾಥ ದೇಸಾಯಿ, ಶ್ರೀಕೃಷ್ಣ ಆಲನಹಳ್ಳಿ, ಯಶವಂತ ಚಿತ್ತಾಲ ಮೊದಲಾದವರನ್ನು ಮುಖ್ಯವಾಗಿಟ್ಟುಕೊಂಡು ನವ್ಯ ಬರವಣಿಗೆಯ ಧಾಟಿಯು ವ್ಯಕ್ತಿ ಕೇಂದ್ರಿತ ನೆಲೆಯಿಂದ ಸಾಮಾಜಿಕತೆಯತ್ತ ಹೊರಳಿದ ಲಕ್ಷಣವನ್ನು ಗುರುತಿಸಿದ್ದಾರೆ. ಕಥನತಂತ್ರ, ಪ್ರತಿಮೆ ಸಂಕೇತಗಳನ್ನು ಬಿಟ್ಟು ಸರಳ ನಿರೂಪಣೆಯ ಅಗತ್ಯವನ್ನು ವಿವರಿಸುವ ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗಳ ಸಮೀಕ್ಷೆ ಇಲ್ಲಿದೆ. ವಿಮರ್ಶಕರು ದೂರವಿರಿಸಿದ ಭಾರತೀಸುತ, ಎಸ್.ಎಲ್. ಭೈರಪ್ಪ, ನಾ. ಮೊಗಸಾಲೆ ಮುಂತಾದವರ ಕಾದಂಬರಿಗಳನ್ನು ಅಭಿಜಾತ ಕೃತಿಗಳ ಜೊತೆಗಿರಿಸಿ ಚರ್ಚಿಸಿದ್ದಲ್ಲದೆ ಟಿ.ಕೆ. ರಾಮರಾವ್, ವಿಜಯ ಸಾಸನೂರ, ನಾ. ಡಿಸೋಜ ಮುಂತಾದವರ ಜನಪ್ರಿಯ ಕಾದಂಬರಿಗಳನ್ನು ಈ ಕಕ್ಷೆಯೊಳಗೆ ತಂದಿದ್ದಾರೆ. ಕನ್ನಡಿಗರಿಗೆ ಓದಿನ ರುಚಿಯನ್ನು ಹತ್ತಿಸಿದ ಇವರಿಗೂ ವಿಮರ್ಶಾಲೋಕದಲ್ಲಿ ಸೂಕ್ತ ಸ್ಥಾನ ದೊರಕಿಸಿಕೊಡಬೇಕೆಂಬ ಉದ್ದೇಶ ಫಲಿಸಿದೆ. ಹಳೆ ತಲೆಮಾರಿನ ವಿಮರ್ಶಕರು ಎಸಗಿದ ತಪ್ಪು ಮರುಕಳಿಸದಿರುವುದು ಸಮಾಧಾನಕರ ಅಂಶವಾಗಿದೆ.

    ಭಾರತೀಯ ಇತಿಹಾಸದಲ್ಲಿ ಸ್ಥಿತ್ಯಂತರದ ಘಟ್ಟವಾದ ಎಪ್ಪತ್ತರ ದಶಕದಲ್ಲಿ ಸರ್ವಾಧಿಕಾರಿ ಶಕ್ತಿ ಜನರ ಮೂಲಭೂತ ಹಕ್ಕುಗಳನ್ನು ದಮನಿಸಿದಾಗ ಜನಶಕ್ತಿ ಜಾಗೃತವಾಗಿ ಹೊಸ ಆಶಯ, ಹೊಸ ಕನಸುಗಳು ರೂಪುಗೊಂಡವು. ದೇಶದಲ್ಲಿ ನಡೆದ ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರಗಳು ಸಾಮಾಜಿಕ ಸಾಂಸ್ಕೃತಿಕ ಬದುಕಿನ ಮೇಲೆ ಪರಿಣಾಮವನ್ನು ಬೀರಿದವು. ಸಮಾಜದ ಕೆಳವರ್ಗದ ಸಮುದಾಯವು ಆತ್ಮವಿಶ್ವಾಸದ ದನಿಯನ್ನು ಪಡೆದುಕೊಂಡಿತು. ಕನ್ನಡ ಸಂಸ್ಕೃತಿಗೆ ಅಪರಿಚಿತವೆನಿಸಿದ ಅನುಭವಗಳು ಅಕ್ಷರಲೋಕವನ್ನು ಪ್ರವೇಶಿಸಿದವು. ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಕುಂ.ವೀ.ಯವರ ಕಾದಂಬರಿಗಳ ಸಮೀಕ್ಷೆಯನ್ನು ಹೋಲಿಸಿದರೆ ಬರಗೂರು ಮತ್ತು ದೇವನೂರರಲ್ಲಿ ಸುಪ್ತವಾಗಿದ್ದ ಪ್ರತಿಭಟನೆಯು ಕುಂ.ವೀ.ಯವರ ಕೃತಿಗಳಲ್ಲಿ ಬಹಿರಂಗವಾಗಿ ಪ್ರಕಟಗೊಂಡ ಬಗೆಯನ್ನು ಕಾಣಲು ಸಾಧ್ಯ. ಎಚ್. ತಿಪ್ಪೇರುದ್ರಸ್ವಾಮಿ, ಕಾ.ತ. ಚಿಕ್ಕಣ್ಣ, ಬೊಳುವಾರು ಮಹಮ್ಮದ್‌ ಕುಂಞಂ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠರ ಕಾದಂಬರಿಗಳು ಸಾಮಾಜಿಕ ಜೀವನದ ಅಂಗವಾಗಿ ಮೂಡಿದ ಬಗೆಯನ್ನು ವಿಶ್ಲೇಷಿಸುವುದರ ಜೊತೆಗೆ ಇತ್ತೀಚಿನ ಬರಹಗಾರರಾದ ಗುರುಪ್ರಸಾದ ಕಾಗಿನೆಲೆ, ಎಂ.ಆರ್. ದತ್ತಾತ್ರಿ ಮೊದಲಾದವರ ಕಾದಂಬರಿಗಳ ಮಹತ್ವವನ್ನು ಮನಗಾಣಿಸಿದ್ದಾರೆ.

    ಮಹಿಳಾ ಕಾದಂಬರಿಕಾರರು ಮತ್ತು ಕಾದಂಬರಿಗಳ ಬಗ್ಗೆ ವಿವರಿಸುತ್ತಾ “ಅನ್ಯ ಭಾರತೀಯ ಭಾಷೆಗಳ ಲೇಖಕಿಯರು ಮಹಿಳಾ ಮೀಸಲಾತಿ ಬಯಸದೆ, ಪುರುಷ ಲೇಖಕರೊಂದಿಗೆ ಸಮಾನಸ್ಕಂಧರಾಗಿ ವಿರಾಜಮಾನರಾಗಿದ್ದಾರೆ. ಲಲಿತಾಂಬಿಕಾ ಅಂತರ್ಜನಂ (ಮಲಯಾಳಂ), ರಾಜಂಕೃಷ್ಣನ್ (ತಮಿಳು, ಅಬ್ಬೂರಿ ಛಾಯಾದೇವಿ (ತೆಲುಗು), ಪ್ರತಿಭಾರಾಯ್ (ಒರಿಯಾ), ಮಹಾಶ್ವೇತಾದೇವಿ (ಬಂಗಾಳಿ) ಮುಂತಾದವರನ್ನು ಆಯಾ ಭಾಷೆಗಳ ಪ್ರಮುಖ ಸಾಹಿತಿಗಳೆಂದು ಪರಿಗಣಿಸಲಾಗುತ್ತಿದೆಯೇ ಹೊರತು ಮಹಿಳಾ ಸಾಹಿತಿಗಳೆಂದಲ್ಲ. ಕಳೆದ ಐವತ್ತು ವರ್ಷಗಳಲ್ಲಿ ಬಂದ ಎಲ್ಲ ಬಗೆಯ ಕನ್ನಡ ಕಾದಂಬರಿಗಳ ಒಟ್ಟು ಸಂಖ್ಯೆಯನ್ನು ಲೆಕ್ಕ ಹಾಕಿದರೆ ಲೇಖಕಿಯರು ಬರೆದ ಕಾದಂಬರಿಗಳ ಸಂಖ್ಯೆಯೇ ಹೆಚ್ಚು. ಬೆಂಗಳೂರು ವಿಶ್ವವಿದ್ಯಾಲಯ ಹೊರತಂದ ಎಪ್ಪತ್ತರ ದಶಕದ ವಾರ್ಷಿಕದ ಪ್ರಕಾರ ಆ ವರ್ಷ ಲೇಖಕಿಯರು ಹೊರತಂದ ಕಾದಂಬರಿಗಳ ಸಂಖ್ಯೆ ಸಾವಿರ ಮೀರುತ್ತದೆ. ಸಂಖ್ಯಾಬಾಹುಳ್ಯದ ದೃಷ್ಟಿಯಿಂದ ಲೇಖಕಿಯರು ಮುಂದಿದ್ದರೂ ಗುಣಮಟ್ಟದ ದೃಷ್ಟಿಯಿಂದ ಹಿಂದಿದ್ದಾರೆ. ಇದು ಕಹಿಯಾದರೂ ಸತ್ಯ (ಪುಟ 87)” ಎಂಬ ಮಾತು ಗಂಭೀರ ಚರ್ಚೆಗೆ ದಾರಿಯಾಗಬೇಕಿದೆ.

    ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಲೇಖಕರು ಸಾಹಿತ್ಯದ ವಿದ್ಯಾರ್ಥಿಯಲ್ಲದಿದ್ದರೂ ಕನ್ನಡ ಭಾಷೆ, ಸಂಸ್ಕೃತಿಯ ಕಡೆಗೆ ಒಲವನ್ನು ಹೊಂದಿದ್ದಾರೆ. ವೈಚಾರಿಕ ಗೊಂದಲಗಳಿಗೆ ಗುರಿಯಾಗದೆ, ಶ್ರಮಪಟ್ಟು, ಶ್ರದ್ಧೆಯಿಂದ ಸಮೀಕ್ಷೆಯನ್ನು ಮಾಡಿ ಐದು ದಶಕಗಳ ಕನ್ನಡ ಕಾದಂಬರಿಗಳ ಪಕ್ಷಿನೋಟವನ್ನು ಬೀರಿದ್ದಾರೆ. ಕನ್ನಡದಲ್ಲಿ ಕಾದಂಬರಿ ಪ್ರಕಾರವು ಆರಂಭವಾದಾಗಿನಿಂದ ಇಲ್ಲಿಯವರೆಗಿನ ಕಾದಂಬರಿಗಳಲ್ಲಿ ಸಮಾಜವೇ ಕೇಂದ್ರ ಬಿಂದು ಎಂಬುದನ್ನು ಗುರುತಿಸಿದ್ದಾರೆ. ಕೆಲವೇ ಲೇಖಕರ ಕೃತಿಗಳ ಮೂಲಕ ಕನ್ನಡ ಕಾದಂಬರಿ ಜಗತ್ತನ್ನು ವಿಶ್ಲೇಷಿಸದಿರುವುದು ಅವರ ಹೆಚ್ಚುಗಾರಿಕೆಯಾಗಿದೆ. ಪ್ರಾತಿನಿಧಿಕ ಲೇಖಕರನ್ನು ಆವಾಹಿಸಿದರೆ ಮಿಕ್ಕವರ ಸಾಹಿತ್ಯವನ್ನು ಸೂಕ್ಷ್ಮವಾಗಿ, ಭಿನ್ನವಾಗಿ ನೋಡಲು ಅಡ್ಡಿಯಾಗುವುದಲ್ಲದೆ ಆತನ ಮಾದರಿಯನ್ನು ಶ್ರೇಷ್ಠವೆಂದು ಒಪ್ಪಿಕೊಂಡು, ಅದನ್ನೇ ವಿಮರ್ಶೆಯ ಮಾನದಂಡವನ್ನಾಗಿಸಿದರೆ ಸಾಹಿತ್ಯದೊಳಗಿನ ವೈವಿಧ್ಯಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದಿರುವುದರಿಂದ ಸಮಷ್ಟಿ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದಾರೆ. ಇಲ್ಲಿ ಚರ್ಚೆಗೊಳಗಾದ ಕಾದಂಬರಿಕಾರರು ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆಗಳನ್ನು ಒದಗಿಸಿದ ಬಗೆಯನ್ನು ತಿಳಿಸಿದ್ದಾರೆ. ಎಪ್ಪತ್ತರ ದಶಕದ ಸಾಮಾಜಿಕ ಬದಲಾವಣೆಗೆ ಅನುಗುಣವಾಗಿ ನವೋದಯ ನವ್ಯ ಮತ್ತು ದಲಿತ ಬಂಡಾಯ ಲೇಖಕರಲ್ಲಿ ಕಾಣಿಸಿಕೊಂಡ ಸಮಷ್ಟಿ ಪ್ರಜ್ಞೆಯ ವಿಶೇಷತೆಗಳನ್ನು ವಿವರಿಸಿದ್ದಾರೆ. ಯಾವುದೇ ಒಂದು ಸಾಹಿತ್ಯ ಚಳುವಳಿಯನ್ನು ಎತ್ತಿ ಹಿಡಿಯದೆ ಅಥವಾ ಹೀಗೆಳೆಯದೆ ವ್ಯಕ್ತಿ ಮತ್ತು ಕೃತಿಗಳನ್ನಷ್ಟೇ ಗಮನಿಸಿ ಪೂರ್ವಾಗ್ರಹರಹಿತ ಧೋರಣೆಯನ್ನು ಮೆರೆದಿದ್ದಾರೆ. ಈ ಪುಸ್ತಕದ ಮತ್ತೊಂದು ವಿಶೇಷತೆಯೆಂದರೆ ಮೊದಲ ಬಾರಿಗೆ ಪತ್ತೇದಾರಿ ಮತ್ತು ಜನಪ್ರಿಯ ಕಾದಂಬರಿಗಳನ್ನು ಬರೆದ ಲೇಖಕರ ಕೊಡುಗೆಯನ್ನು ಗಮನಿಸಿ ವಿಮರ್ಶಿಸಿರುವುದು. ಆದ್ದರಿಂದ ಈ ಪುಸ್ತಕವು ಓದುಗರನ್ನು ಹೊಸ ದಿಕ್ಕಿನಲ್ಲಿ ಚಿಂತಿಸುವಂತೆ ಮಾಡುತ್ತದೆ. ಈ ಕೃತಿಯು ಐದು ದಶಕದ ಕಾದಂಬರಿಗಳ ಸಮೀಕ್ಷೆಯಾದರೂ ಅದರ ಮೇಲ್ಮೈಯಲ್ಲಿ ವಿಮರ್ಶೆ, ಆಳದಲ್ಲಿ ಸಂಶೋಧನ ದೃಷ್ಟಿ ಇರುವುದರಿಂದ ಇಲ್ಲಿನ ಕೃತಿಗಳು ಮತ್ತು ಕೃತಿಕಾರರ ಕುರಿತು ವಿಸ್ತೃತ ವಿಮರ್ಶೆ ಮತ್ತು ಸಂಶೋಧನೆಗೆ ಅವಕಾಶಗಳನ್ನು ಒದಗಿಸುತ್ತದೆ.

    ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleವಿದುಷಿ ಶಾರದಾಮಣಿ ಶೇಖರ್ ಇವರಿಗೆ ಗುರು ನಮನ – ನೃತ್ಯ ನಮನ
    Next Article ಎಸ್.ಎನ್. ಸೇತುರಾಮ್ ಇವರಿಗೆ ‘ಶಾರದಾ ಕೃಷ್ಣ’ ಪ್ರಶಸ್ತಿ ಪ್ರಕಟ
    roovari

    Add Comment Cancel Reply


    Related Posts

    ಸೃಷ್ಟಿ ಕಲಾಮಂದಿರದಲ್ಲಿ ‘ಸೃಷ್ಟಿ ಚಿತ್ರ ಸಂಭ್ರಮ’ | ಡಿಸೆಂಬರ್ 05

    December 3, 2025

    ಎಸ್.ಎನ್. ಸೇತುರಾಮ್ ಇವರಿಗೆ ‘ಶಾರದಾ ಕೃಷ್ಣ’ ಪ್ರಶಸ್ತಿ ಪ್ರಕಟ

    December 3, 2025

    ವಿದುಷಿ ಶಾರದಾಮಣಿ ಶೇಖರ್ ಇವರಿಗೆ ಗುರು ನಮನ – ನೃತ್ಯ ನಮನ

    December 3, 2025

    ಶ್ರೀ ಕೃಷ್ಣ ಮಠದಲ್ಲಿ ಉದ್ಘಾಟನೆಗೊಂಡ ‘ಕಿಶೋರ ಯಕ್ಷಗಾನ ಸಂಭ್ರಮ’

    December 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.