ವಿಜಯಪುರ : ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ನೀಡುವ ಹಸ್ತಪ್ರತಿ ಪ್ರಶಸ್ತಿ, ಸೃಜನಶೀಲ ಸಾಹಿತ್ಯ ಪ್ರಶಸ್ತಿ, ಸೃಜನೇತರ ವಿಭಾಗದ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ರಾಜ್ಯಮಟ್ಟದ 2025ನೇ ಸಾಲಿನ ‘ಪ್ರೊ. ಎಚ್.ಟಿ. ಪೋತೆ ಹಸ್ತಪ್ರತಿ ಪ್ರಶಸ್ತಿ’ಗೆ ಸಿಂದಗಿಯ ದೇವೂ ಮಾಕೊಂಡ ಇವರ ‘ಯುದ್ಧ ಮೃದಂಗ’ ಅನುವಾದಿತ ಸಂಕಲನ ಆಯ್ಕೆಯಾಗಿದೆ. ‘ಪ್ರೊ. ಎಚ್.ಟಿ. ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ’ಗೆ ಬೆಂಗಳೂರಿನ ಡಾ. ಪದ್ಮನಿ ನಾಗರಾಜು ಇವರ ‘ಸಮುದ್ರದ ತೆರೆಯ ಸರಿಸಿ’ ಕಥಾ ಸಂಕಲನ ಮತ್ತು ವಿಜಯಪುರದ ಡಾ. ಸುಜಾತ ಚಲವಾದಿ ಇವರ ‘ಲಚಮವ್ವ ಮತ್ತು ಇತರ ಕತೆಗಳು’ ಆಯ್ಕೆಯಾಗಿವೆ.
ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ 2024ರ ಸಾಲಿನ ಸೃಜನೇತರ ವಿಭಾಗದ ಪುಸ್ತಕ ಪ್ರಶಸ್ತಿಗೆ ಬಾಗಲಕೋಟೆಯ ಮಹಾದೇವ ಬಸರಕೋಡ ಇವರ ‘ಸುರಧೇನು’ ಮತ್ತು ತುಮಕೂರಿನ ಅನಂತ ಕುಣಿಗಲ್ ಇವರ ‘ಅಪ್ಪನ ಆಟೋಗ್ರಾಫ್’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶನ ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ಹೇಳಿದ್ದಾರೆ.
ಹಸ್ತಪ್ರತಿ ಪ್ರಶಸ್ತಿ ರೂ.ಹತ್ತು ಸಾವಿರ ನಗದು ಒಳಗೊಂಡಿದ್ದು, ಬೆರಗು ಪ್ರಕಾಶನವು ಪ್ರಕಟಿಸಲಿದೆ. ಪುಸ್ತಕ ಪ್ರಶಸ್ತಿಯು ರೂ.ಐದು ಸಾವಿರ ನಗದು ಒಳಗೊಂಡಿದೆ. ಜನವರಿ ಮೊದಲ ವಾರದಲ್ಲಿ ಕಡಣಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
