ಎಂಬತ್ತರ ದಶಕದಿಂದ ಮುಖ್ಯವಾಹಿನಿಗೆ ಬಂದ ಮಹಿಳಾ ಕಾವ್ಯದಲ್ಲಿ ಅಸಂಖ್ಯಾತ ಕವಯತ್ರಿಯರು ಬರವಣಿಗೆಯನ್ನು ಮಾಡುತ್ತಿದ್ದಾರೆ. ಸ. ಉಷಾ, ಚ. ಸರ್ವಮಂಗಳಾ, ವೈದೇಹಿ, ಶಶಿಕಲಾ ವಸ್ತ್ರದ, ಶೈಲಜ ಉಡಚಣ ಮುಂತಾದವರು ನವ್ಯ ಕಾವ್ಯದಿಂದ ಪ್ರೇರಿತರಾಗಿದುದರಿಂದ ಅವರ ರಚನೆಗಳಲ್ಲಿ ಸಂಯಮ, ಕಲಾತ್ಮಕತೆ, ಕವಿತೆಯನ್ನು ವಿವಿಧ ಅರ್ಥಗಳಿಂದ ಬೆಳೆಸುವ ಪ್ರಯತ್ನವನ್ನು ಕಾಣುತ್ತೇವೆ. ಈ ಮಾತು ಕನ್ನಡದ ಪ್ರಮುಖ ಲೇಖಕಿ ಮಾಲತಿ ಪಟ್ಟಣಶೆಟ್ಟಿಯವರ ಕವನಗಳಿಗೂ ಅನ್ವಯವಾಗುತ್ತದೆ. ನವೋದಯದ ಸಾತ್ವಿಕ ಮನಸ್ಸು, ನವ್ಯ ಆಕೃತಿ ಮತ್ತು ಸ್ತ್ರೀವಾದಿ ಸಂವೇದನೆಯನ್ನೊಳಗೊಂಡ ಮಾಲತಿ ಪಟ್ಟಣಶೆಟ್ಟಿಯವರ ಕಾವ್ಯ ಅದರ ಆಚೆಗೂ ಕೈಚಾಚುತ್ತದೆ. ಅವರ ಕಾವ್ಯದಲ್ಲಿ ಪುರುಷ ವಂಚಿತ ದನಿಯು ಮಿಡಿಯುತ್ತದೆ. ಪ್ರೀತಿ ಪ್ರೇಮದ ವಿಷಯದಲ್ಲಿ ಮಹಿಳೆಯರು ತೋರುವ ಸ್ಪಂದನಗಳು, ಗಂಡು ಹೆಣ್ಣಿನ ಸಂಬಂಧ, ವಿವಾಹಪೂರ್ವ, ವಿವಾಹದ ನಂತರ ಮತ್ತು ಬೇರೆ ಗಂಡಸರಿಂದ ಮೋಸ ಹೋದ ಹೆಣ್ಣಿನ ಮನಸ್ಥಿತಿಯನ್ನು ಗುರುತಿಸಬಹುದು. ಸ್ತ್ರೀಪರ ದನಿಯನ್ನು ರೊಚ್ಚಿನಿಂದ ಹೊಮ್ಮಿಸುವ ಸುಕನ್ಯಾ ಮಾರುತಿ, ಬಿ.ಟಿ. ಲಲಿತಾ ನಾಯಕ್, ವಿಜಯಶ್ರೀ ಸಬರದ, ಮಲ್ಲಿಕಾ ಘಂಟಿ, ಸ್ತ್ರೀ ಕೇಂದ್ರಿತ ಕಾಮದ ಮೂಲಕ ಬದುಕಿನ ಅರ್ಥಗಳನ್ನು ಹುಡುಕಾಡುತ್ತಾ ಅದರೊಳಗೇ ಗಿರಕಿ ಹೊಡೆಯುವ ಪ್ರತಿಭಾ ನಂದಕುಮಾರ, ಹಾ. ಮ. ಕನಕ ಮುಂತಾದವರ ಕಾವ್ಯಕ್ಕೆ ಹೋಲಿಸಿದರೆ ಇವರ ಕವಿತೆಗಳು ಭಿನ್ನವಾಗಿವೆ.
ಮಾಲತಿ ಪಟ್ಟಣಶೆಟ್ಟಿಯವರಿಗೆ ಕಾವ್ಯ ಎನ್ನುವುದು ತಾವೂ ಸೇರಿದಂತೆ ತಮ್ಮನ್ನು ಒಳಗೊಂಡ ಸಮಾಜದ ಸಂಕಟವನ್ನು ತೋಡಿಕೊಳ್ಳುವ, ಮಾನವ ಜಗತ್ತಿನೊಡನೆ ಸಂಬಂಧವನ್ನು ಬೆಸೆಯುವ ಮತ್ತು ಬದುಕಿನ ಅರ್ಥವನ್ನು ಹುಡುಕುವ ಮಾಧ್ಯಮವಾಗಿದೆ. ಆದ್ದರಿಂದ ಅವರ ಕವಿತೆಗಳು ವರ್ತಮಾನದ ಬದುಕಿನಲ್ಲಿ ಸಹಜವಾಗಿ ಅರಳಿವೆ. ದೈನಂದಿನ ಬದುಕಿನ ವಿದ್ಯಮಾನಗಳು, ನೋವು ನಲಿವುಗಳು, ಸಮಾಜದಲ್ಲಿ ಕಾಣುವ ವ್ಯಕ್ತಿಗಳು, ಅವರ ವರ್ತನೆಗಳು, ಅವರ ವ್ಯಕ್ತಿತ್ವದಲ್ಲಿನ ಆದರ್ಶ, ಕುಂದುಕೊರತೆಗಳು, ಪ್ರಕೃತಿಯನ್ನು ಹಾಳುಗೆಡಹುವ ವಿದ್ಯಮಾನಗಳು, ವೈಚಾರಿಕತೆ, ಸಾಂಸ್ಕೃತಿಕ ಸಂಗತಿಗಳು ಅವರ ಕಾವ್ಯದ ವಸ್ತುಗಳಾಗಿವೆ. ಕನ್ನಡ ನವ್ಯ ಕಾವ್ಯವು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ‘ಬಾ ಪರೀಕ್ಷೆಗೆ’ (1976) ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿರಿಸಿದ ಮಾಲತಿ ಪಟ್ಟಣಶೆಟ್ಟಿಯವರ ರಚನೆಗಳಲ್ಲಿ ಆ ಕಾಲಕ್ಕೆ ಹೊಸತೆನಿಸುವ ಸಂವೇದನೆಗಳಿವೆ. ನವ್ಯರು ಕಾವ್ಯದ ಕುರಿತು ಇಟ್ಟುಕೊಂಡಿದ್ದ ನಂಬಿಕೆ, ನಿಯಮಾವಳಿ, ಬದುಕನ್ನು ಹುಡುಕಾಡಲು ಬಳಸುತ್ತಿದ್ದ ಮಾಧ್ಯಮಗಳು ಸಂದಿಗ್ಧತೆಗಳಿಗೆ ಎಡೆಮಾಡುತ್ತಿದ್ದ ಸಂದರ್ಭದಲ್ಲಿ ಕಾವ್ಯ ರಚನೆಯನ್ನು ಆರಂಭಿಸಿದ ಮಾಲತಿ ಪಟ್ಟಣಶೆಟ್ಟಿಯವರಲ್ಲಿ ಎಲ್ಲ ಉದಯೋನ್ಮುಖ ಕವಿಗಳಲ್ಲಿರುವಂತೆ ನೋವು, ಹತಾಶೆ, ಹಟ ಮತ್ತು ಪ್ರತಿಭಟನೆಗಳಿವೆ. ಕಾವ್ಯದ ವಿನ್ಯಾಸದಲ್ಲಿ ಭಿನ್ನತೆಯನ್ನು ತರಬಯಸುವ ತುಡಿತವಿದೆ. “ಯಾವ ಬಾಹ್ಯ ಪ್ರಭಾವವಿಲ್ಲದೆ ಆಂತರಿಕ ಒತ್ತಡಕ್ಕೆ ಚಿಮ್ಮಿ ಬಂದ ನನ್ನ ಈ ಕವನಗಳಿಗೆ ತನ್ನತನವಿದೆ ಎಂದು ತಿಳಿದಿದ್ದೇನೆ. ಉಮ್ಮಳದ ಹಸುಳೆಗಳನ್ನು ಶಬ್ದಗಳ ತೊಟ್ಟಿಲಲ್ಲಿಟ್ಟು ಹಾಡಿ ನನ್ನನ್ನೇ ನಾನು ರಮಿಸಿಕೊಂಡಿದ್ದೇನೆ” ಎಂದು ಹೇಳಿಕೊಂಡಿದ್ದರೂ ನವ್ಯ ಸಾಹಿತ್ಯವನ್ನು ಹೊರಗಿನಿಂದ ಪ್ರಭಾವಿಸಿದ ಭ್ರಮ ನಿರಸನ, ಯಾಂತ್ರಿಕ ಜೀವನ, ಮೌಲ್ಯಗಳ ಅಳಿವು ಅವರ ಕಾವ್ಯ ಸಂದರ್ಭಗಳನ್ನು ನಿರ್ಮಿಸಿದೆ ಎಂದು ಸ್ಪಷ್ಟವಾಗುತ್ತದೆ. ತಾಯಿಯಾಗಿ ಹೆಣ್ಣಿನ ಅನನ್ಯತೆಯನ್ನು ಸಮರ್ಥಿಸುವ, ಪುರುಷ ದೃಷ್ಟಿಕೋನಕ್ಕೆ ಪ್ರತಿಯಾಗಿ ಸ್ತ್ರೀ ದೃಷ್ಟಿಕೋನವನ್ನು ಒದಗಿಸುವ ರಚನೆಗಳು ಇಲ್ಲಿವೆ. ಅಂತರಂಗದ ಭಾವಗಳನ್ನು ಮಕ್ಕಳಾಗಿ ಪರಿಗಣಿಸಿಕೊಂಡಿರುವ ಅವರದ್ದು ಮೂಲಭೂತವಾಗಿ ತಾಯಿ ಭಾವದ ಧೋರಣೆಯಾಗಿದೆ.
“ಕನ್ನಡ ಕಾವ್ಯಕ್ಕೆ ಈಗ ಮತ್ತೊಂದು ಸಂಕ್ರಮಣದ ಕಾಲ. ನವ್ಯ ಈಗ ಬರಿ ಅನುಕರಣೆಯಾಗಿ ಉಳಿದುಕೊಂಡಿದ್ದು ತನ್ನ ಪೂರ್ಣರೂಪವನ್ನು ಇನ್ನೂ ಪಡೆಯಬೇಕಾದ ಹೊಸ ಬಗೆಯ ಕಾವ್ಯ ಅಲ್ಲಲ್ಲಿ ಹಣಕಿ ಹಾಕುತ್ತಿದೆ. ಆ ಸಂದರ್ಭದಲ್ಲಿ ಹೊರ ಬರುತ್ತಿರುವ ‘ಬಾ ಪರೀಕ್ಷೆಗೆ’ ಅನೇಕ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗಿದ್ದರೂ ಸ್ವಂತ ಅನುಭವದ ಸಿದ್ಧತೆಯಿಂದ ಅದು ಸಹಜವಾಗಿ ತೇರ್ಗಡೆ ಪಡೆಯಬಲ್ಲದು” ಎಂದು ಚೆನ್ನವೀರ ಕಣವಿಯವರು ಈ ಸಂಕಲನದ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಮಾತು ಮಾಲತಿ ಪಟ್ಟಣಶೆಟ್ಟಿಯವರ ಕಾವ್ಯದ ಚಾರಿತ್ರಿಕ ಮಹತ್ವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಬದುಕಿನಲ್ಲಿ ಹಲವು ವಿಧದ ಆಘಾತಗಳಿಂದಾಗಿ ಸಂಬಂಧಗಳು ಜಟಿಲಗೊಂಡು ಅಥವಾ ಬೇರ್ಪಟ್ಟು, ಯಾತನೆಯನ್ನುಂಟುಮಾಡಿ ಅಶಾಂತ ಜ್ವಾಲಾಮುಖಿಯನ್ನು ಎಬ್ಬಿಸುತ್ತವೆ. ಆದರೆ ಅವರು ರೊಚ್ಚಿನಿಂದ ಮಾತನಾಡದೆ, ಅದಕ್ಕೆ ತಾತ್ವಿಕ ಚಿಂತನೆಯ ಪರಿವೇಶವನ್ನು ತೊಡಿಸಿ, ತಮ್ಮ ಪರಿಸ್ಥಿತಿಯನ್ನು ತೋಡಿಕೊಳ್ಳುತ್ತಾರೆ. ಅನುಭವಿಸಿದ, ಭೀತಿ, ವಿಷಾದ, ಕ್ರೌರ್ಯ, ಉದ್ವಿಗ್ನತೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು
ಹೊಸ ಹಳೆ ನೋವು
ಕಣಜ
ಹೊರಹಾಕದೆ ಗೆದ್ದಲಿ ಹಿಡಿದು
ನುಸಿಯಾಡಿ ಹುಡಿಯಾದೀತೆಂದು
ಹೊರಗೆ ಅಂಗಳದಲ್ಲಿ
ಸುರುವಬೇಕೆಂದಿದ್ದೆ
ಸತ್ವ ಹೀರುವ ನುಸಿಗಳ
ಹೊರಹಾಕಿ ಹಸನುಗೊಳಿಸಬೇಕೆಂದಿದ್ದೆ
ಎಲ್ಲಿದೆ ಅಂಗಳ? ತಂಗಾಳಿ ಎಲ್ಲಿದೆ (ಕಣಜ, ಪುಟ 1)
ಎಂದು ವಿಹ್ವಲರಾಗುತ್ತಾರೆ.
ಭಾರತೀಯ ಸಮಾಜದಲ್ಲಿ ಹೆಣ್ಣನ್ನು ದೇವತೆಯಾಗಿ, ಮಾತೆಯಾಗಿ ಪೂಜಿಸಲಾಗುತ್ತದೆ. ಆದರೆ ಆಕೆಯು ಜೀವಂತವಾಗಿ ಮೈದಳೆದಾಗ ದೇವಿ ದೇವತೆಗಳ ಕಲ್ಪನೆಯು ಮಾಯವಾಗುತ್ತದೆ. ಎರಡನೇ ದರ್ಜೆಯ ಪ್ರಜೆಯಾಗಿ, ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ, ಕಾಮದ ವಸ್ತುವಾಗಿ, ಹೆರುವ ಯಂತ್ರವಾಗಿ, ಪರಾವಲಂಬಿಯಾಗಿ, ದಾಸ್ಯ ಮನೋಭಾವವನ್ನು ಮೈಗೂಡಿಸಿಕೊಂಡು ಅಬಲೆ ಎನಿಸಿಕೊಳ್ಳುತ್ತಾಳೆ. ಸ್ವತಂತ್ರ ವ್ಯಕ್ತಿತ್ವ, ತನ್ನದೇ ಆದ ಆಸೆ ಆಕಾಂಕ್ಷೆಗಳಿರುವ, ಗಂಡಿಗೆ ಸಮಾನವಾದ, ಕೌಟುಂಬಿಕ ಬದುಕಿನಲ್ಲಿ ತನ್ನಷ್ಟೇ ಪ್ರಾಮುಖ್ಯತೆ ಇರುವ ಮನುಷ್ಯಳೆನಿಸಿಕೊಂಡ ಸಂದರ್ಭ ಅಪರೂಪವಾಗಿದೆ. ಮಹಿಳೆಯರು ವೇದಕಾಲದಿಂದಲೂ ದೌರ್ಜನ್ಯಕ್ಕೊಳಗಾಗಿದ್ದರು ಎಂಬುದಕ್ಕೆ ಸೀತೆ, ದ್ರೌಪದಿಯರ ಪಾತ್ರಗಳು ಸಾಕ್ಷಿಯಾಗಿವೆ. ಸೀತೆಯು ರಾವಣನ ಬಂಧನದಿಂದ ಬಿಡುಗಡೆಯಾದಾಗ ಆಕೆಯ ಪರಿಶುದ್ಧತೆಯನ್ನು ಅರಿಯಲು ಅಗ್ನಿಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಇಂಥ ವಿರೋಧಾಭಾಸಗಳು ಕವಯತ್ರಿಯನ್ನು ಕಾಡಿವೆ. ದೈವತ್ವದ ಭಾರವನ್ನು ನೀಡುವ ಮೂಲಕ ಹೆಣ್ಣಿನ ಸಹಜ ಭಾವನೆಗಳಿಗೆ ಬೆಲೆಯನ್ನು ಕಲ್ಪಿಸದ ಪರಿಸ್ಥಿತಿಯ ಕಡೆಗೆ ಬೊಟ್ಟು ಮಾಡುವ ‘ನಿರೀಕ್ಷೆ’ ಉತ್ಸವಮೂರ್ತಿಯನ್ನು ಮುಂದಿಟ್ಟುಕೊಂಡು ಹೆಣ್ಣಿನ ಬಾಳಿನ ವಿಪರ್ಯಾಸಗಳನ್ನು ವಿವರಿಸುತ್ತದೆ. ಈ ಮೂಲಕ ಆಧುನಿಕ ಹೆಣ್ಣಿನ ಭಾವನೆ ಅಳಲುಗಳಲ್ಲಿ ಪೌರಾಣಿಕ ಸಂವೇದನೆಗಳು ಸೇರಿಕೊಳ್ಳುತ್ತವೆ. ಆದರೆ ‘ಪರೀಕ್ಷೆ’ಯು ಇದಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಪಡೆಯುತ್ತದೆ.
ಉರಿವ ನಾಲಗೆ ಚಾಚಿದ
ಗುಲ್‌ಮೊಹರ್ ಬಿಟ್ಟ
ಕೆಂಗಣ್ಣ ಎಪ್ರಿಲ್
ಹೊತ್ತಿಸುತ್ತದೆ ತಲೆತುಂಬ ಅಗ್ನಿಕಾಂಡ
ಆ ಸ್ವೇಚ್ಛೆಯ ಕಟುಕ
ಹೊಣೆಗೇಡಿ ನಿರ್ಲಜ್ಜ
ಕೆಂಡಕಾರುವ ಶಬ್ದಗಳು ನಿಗಿನಿಗಿ
ಉರಿವ ಅಗ್ನಿಹೋತ್ರಗಳು
ಕುದಿವ ಪಾತ್ರಗಳು ನಿತ್ಯ
ನೂರು ನರಕಯಾತನೆ ತುತ್ತು
ನನ್ನ ಕೊರಳ ಮೆತ್ತಿದ ಮುತ್ತು
ಗಳ ಮತ್ತು
ಪರಿಪರಿ ಸುಟ್ಟು
ವೇಷಗಳ ಬಿಟ್ಟು ಸತ್ಯ
ಸಾವಿರ ಕೊಂಡಿಯ ವೃಶ್ಚಿಕ
ಕಚ್ಚಿದ ಕಾರಣ
ಬಿಚ್ಚಿದ ಉರುಪಿನೆಪ್ರಿಲ್
ಬಾ ಅಗ್ನಿ ಪರೀಕ್ಷೆಗೆ
ನಿಂತೇ ಇರುವೆ
ಸೀತೆ
ನಿರೀಕ್ಷೆಗೆ (ಪುಟ 16)
ಜೀವವನ್ನು ಕಿತ್ತು ತಿನ್ನುವ ಯಾತನೆಗಳ ನಡುವೆಯೂ ಬದುಕಿಗೆ ಎದೆಗೊಟ್ಟು ನಿಲ್ಲುವ ಛಲ ಮತ್ತು ಕಷ್ಟಗಳಿಗೆ ಮಾಲತಿಯವರು ಸವಾಲು ರೀತಿಯು ಮುಖ್ಯವಾಗುತ್ತದೆ.
ಬದುಕೆ
ನೋಡಿದೆ ನಿನ್ನ ಹರಿತಗಳ
ವಿಶ್ವಾಸದಿರಿತಗಳ
ಮೋಸದ ಮೆರೆತಗಳ
ನೋವು ಖಡ್ಗ
ಕೊರೆಯಾಗಿ
ಮರೆಯಲ್ಲಿರಿಸಿ
ಎಷ್ಟಂತ ಕೊರಗಲಿ? ಕನಲಲಿ? (ಬದುಕು, ಪುಟ 22)
ಎಂದು ಪ್ರಶ್ನಿಸುತ್ತಾರೆ. ಆ ವ್ಯಗ್ರತೆಯ ಹಿಂದಿನ ಬದುಕನ್ನು ಹೀಗೆ ಪರಿಭಾವಿಸುತ್ತಾರೆ.
ನಿನ್ನ ಹಂಬಲ
ನನ್ನ ತೇರಿಗೆ ತಳಿರಾಗಿ ಹೂವಾಗಿ
ಮತ್ತೆ ಮತ್ತೆ
ನನ್ನ ತಿರು ತಿರುಗಿ ಮುತ್ತಾಗಿ
ಸುತ್ತಬೇಕು
ಮುತ್ತಬೇಕು (ಪುಟ 23)
ಎಂಬ ‘ಹಂಬಲ’ ಕವಿತೆಯಾಗಿ ಅರಳಿದೆ.
ಬಹಳ ದಿನವಾಯ್ತು
ಬಾ ಒಮ್ಮೆ ಕೂಡೋಣ
ಸಂಜೆ ಬಯಲಲ್ಲಿ ಬಯಲಾಗಿ ನಿಲ್ಲೋಣ
ಬಾ ಒಮ್ಮೆ (ಬಾ ಒಮ್ಮೆ, ಪುಟ 11)
ಇದು ಕವಯತ್ರಿ ಕಳೆದುಕೊಂಡ, ಮತ್ತೆ ಬಯಸಿದ, ಕನಸು ಕಂಡ ಜಗತ್ತು. ಆದರೆ ಇದು ದಕ್ಕಲಾರದು ಎಂಬ ಅರಿವು ಅವರಿಗಿದೆ. ಆದರೆ ಆಸೆಗೆ ಕಡಿವಾಣವನ್ನು ಹಾಕಲು ಕಷ್ಟವಾದಾಗ
ಸುಟ್ಟು ಬೂದಿ
ಬಡಿದು ಬಡಕಲಾಗುವ ದಿನಗಳ
ಕುತ್ತಿಗೆ ಮುರಿದು
ಮರೆವು ಬಾವಿಗೆ
ನೂಕಿದರೂ
ಹಣಿಹಣಿಕುವ ಸಹಸ್ರ ಆಸೆ
ತಾರೆ ಬಾನು
ನಾಚಿಕೆಗೇಡುತನವ
ಯಾವ ಕತ್ತಲೆಗಟ್ಟಲಿ? (ಆಸೆ, ಪುಟ 17)
ಎಂದು ಆರ್ತರಾಗುತ್ತಾರೆ. ಮನಸ್ಸನ್ನು ಮುತ್ತಿ ಭ್ರಮೆಗೆ ಈಡು ಮಾಡುವ ಬಯಕೆಗಳನ್ನು ನಿವಾರಿಸುವ ಉದ್ದೇಶದಿಂದ
ವೇದನೆ ಕತಕತ ಕುದ್ದು ಕೆನೆ
ಗಟ್ಟಿ ಶಾಂತಿ ಏಕೆ
ಸುಖ ಚಿಗುರ ಹೆಜ್ಜೆ
ಯನಿಟ್ಟು ಬಂದು ಬಳಿ
ನನ್ನ ಬಳೆ ಸರಿಗಮ
ರಾಗವಾಗಲು ನಿಂತಿ? ನಡೆ ತೊಲಗಾಚೆ (ಶಾಂತಿ, ಪುಟ 19)
ಎಂದು ದನಿಯೆತ್ತಿ ಹೇಳುತ್ತಾರೆ.
ಆಸೆ ಮೊಳಕೆ
ಗಳ ಮಣ್ಣು ಮಾಡಿ
ನನ್ನ ಮುಗ್ಧತೆಯಮೃತ ಶಿಲೆಗಳಲಿ
ತಾಜಮಹಲ ಕಟ್ಟಬೇಡ (ತಾಜಮಹಲು, ಪುಟ 15)
ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಒಂದರ್ಥದಲ್ಲಿ ಇವು ಕವನಗಳಲ್ಲ. ದೂರದ ಬೆಟ್ಟದ, ಕಾಡಿನ, ಕಂದಕದ, ವಿಶಾಲ ಆಕಾಶದ ಖಾಲಿಯಲ್ಲಿ ನಿಂತು ಮಾಡಿದ ಚೀರಾಟದಂತೆ ಭಾಸವಾಗುತ್ತದೆ. ಅದಕ್ಕೆ ಕಾರಣಗಳೇನು ಎಂಬುದನ್ನು ಕೆಳಗಿನ ಸಾಲುಗಳು ಸ್ಪಷ್ಟಪಡಿಸುತ್ತವೆ.
ಒಂಟಿ
ಯಾಗಿ ಎಂದಿನಿಂದಲೋ ಕಾಲ
ಎಳೆಯುತ್ತಿರುವೆ
ಅಂದು
ಇಂದೂ ನನ್ನ ಸುತ್ತಿದ
ಹೃದಯಹೀನ ಮಳಲ ವಿಸ್ತಾರಗಳಲ್ಲಿ
ನಿಷ್ಕಲ್ಮಶ ಪ್ರೇಮ, ನಿಷ್ಠೆ, ವಿಶ್ವಾಸ
ಗಗನ ತಾರೆ
ಗಳ ನಿರಭ್ರ ನೀಲ ಆಕಾಶ
ದ ಮುಳ್ಳು ಹಾಸಿಗೆ
ಯಲಿ ನರಳಿ ಮನಸು ಕನಸು
ಮುಪ್ಪಾಗಿವೆ (ಒಂಟಿ, ಪುಟ 34)
ಆದ್ದರಿಂದ ತಾನೂ ಒಂದು ಭಾಗವಾಗಿರುವ ಸಂವೇದನಾ ರಹಿತ, ಆತ್ಮಹೀನ ಜಗತ್ತಿನ ಸಮ್ಮುಖದಲ್ಲಿ ಕವಯತ್ರಿಯು ಹೀಗೆ ವಿನಂತಿಸುತ್ತಾರೆ.
ಉಲಿಯೊಮ್ಮೆ ಒಲವಿನ ಮಾತು
ಉರುಳಿ ಹೋಗುವುದಿಲ್ಲ ನಿನ್ನ ಅಂತಸ್ತು
ದಿನದ ಹಿಟ್ಟಿನ ಎಲೆ
ಗೆ ಹೂರಣ ನಿನ್ನೊಲವು ಗೆಲವು
ಆತು
ಹಾಲಾಹಲಗಳ ನುಂಗಿ ನಕ್ಕೇನು (ನಿರ್ಮೋಹಿ, ಪುಟ 31)
ಮಾನವೀಯ ಸಂಬಂಧಗಳು ಶಿಥಿಲವೂ ಅಪರಿಚಿತವೂ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ದನಿಗಳು ಅನಿವಾರ್ಯವೂ ಅಪೇಕ್ಷಣೀಯವೂ ಆಗಿವೆ. ಸರಕು ಸಂಸ್ಕೃತಿಯ ಭೌತಿಕ ಸಂಪನ್ನತೆ, ಬೌದ್ಧಿಕ ಹೆಚ್ಚುಗಾರಿಕೆ, ಶುಷ್ಕ ತತ್ವೋಪದೇಶಗಳು ಬದುಕನ್ನು ಆರ್ದಗೊಳಿಸಲಾರವು. ಪ್ರೀತಿ ಎಂಬ ಎರಡಕ್ಷರಗಳೇ ಬದುಕಿನ ತಾರಕ ಮಂತ್ರ ಎನಿಸಬಲ್ಲವು. ಪ್ರೀತಿಯ ತುಡಿತವನ್ನು ಹೊಂದಿದ ಸಾಹಿತ್ಯ ಸದಾ ಜೀವಂತವಾಗಿರುತ್ತದೆ. ಬದುಕಿನ ಸಂಕೀರ್ಣ ಅನುಭವ ಪ್ರಪಂಚದ ಹೊಸ್ತಿಲಿಗೆ ಕಾಲಿಡುವ ಯುವಕವಿಗಳ ಆರಂಭಿಕ ರಚನೆಗಳಲ್ಲಿ ಕಂಡು ಬರುವ ಪ್ರೀತಿ ಪ್ರೇಮ, ಮುಗ್ಧತೆ ಮತ್ತು ಸ್ನಿಗ್ಧತೆಯ ಚೆಲುವನ್ನು ಕಾಣಲಾರೆವು. ಯಾಕೆಂದರೆ
ಮೂವತ್ತೈದರಲಿ
ಮುಪ್ಪಿನುಪ್ಪನುಣಿಸಿದವರ
ಉಪಕಾರ ಎಷ್ಟೆಂದು ಹೇಳಲಿ
ಜನ್ಮ ಜನ್ಮಾಂತರಕೆ ಕಟ್ಟಿದೆ ಬುತ್ತಿ
ಕಲುಷಿತ ತೈಲದಲುರಿಯುವ ಬತ್ತಿ
ಮಂದ ಉಸಿರು
ಕಣ್ಣ ಕುಸುರು ಕುಸಿಯುತಿದೆ
ಸಾವಿನುಗುರು ಚಾಚಿದೆ ನಿರಾಸೆ (ಉಪಕಾರ, ಪುಟ 29)
ಮಾತ್ರವಲ್ಲ,
ಲೂಟಿ ಮಾಡಿದ್ದಾರೆ
ಕೋಟಿ ಸಣ್ಣ ದೊಡ್ಡ ಗುಣಗಳನ್ನೆಲ್ಲ
ಇದ್ದ ಬಿದ್ದ ಆಸ್ತಿ
ಬೆವರ ಬೆಲೆಗಳನ್ನೆಲ್ಲ (ಪುಟ 37)
ಇಂಥ ಕವಿತೆಗಳು ತಕ್ಷಣದ ಬದುಕಿಗೆ ಮಖಾಮುಖಿಯಾಗಬಲ್ಲ ವಿಚಾರಗಳನ್ನು ಅಭಿವ್ಯಕ್ತಿಸುವುದರಿಂದ ಈ ಸಂಕಲನದಲ್ಲಿ ಪ್ರೇಮಗೀತೆಗಳನ್ನು ನಿರೀಕ್ಷಿಸುವಂತಿಲ್ಲ. ಸಿಟ್ಟು, ಅಸಮಾಧಾನ ಮತ್ತು ತಲ್ಲಣಗಳನ್ನು ಹಿಡಿತದಲ್ಲಿಟ್ಟುಕೊಂಡಾಗ ‘ಬಾ ಒಮ್ಮೆ’, ‘ಹಂಬಲ’ ಮತ್ತು ‘ನಿರ್ಮೋಹಿ’ಯಂಥ ಕೋಮಲ ಭಾವದ ಕವಿತೆಗಳು ಹುಟ್ಟಿಕೊಂಡಿವೆ. ಸುತ್ತಿ ಕೆರಳಿದ ಕ್ಷಿತಿಜ, ಧರೆಯಾಗಿ ಅಧರ ಕಚ್ಚಿದ್ದೆ, ಜೋತಾಡುವ ನಿರಾಶೆ ಗುಳಾಪು, ಜರ್ಜರಿತ ಮಗ್ಗಲು ಹಾಸಿಗೆ, ಸಂದಿಯಲಿ ಹೆಡೆಯೆತ್ತಿ ನಿಂತ ನೆನಪು, ಕನಸಿನ ಕಸ ಮುಂತಾದ ಪ್ರತೀಕ ರೂಪಕಗಳು ಹೊಸತನದಿಂದ ಕಂಗೊಳಿಸಿದರೆ ‘ಕುತ್ತು’, ‘ಅನ್ವೇಷ಼ಣೆ’ಗಳಲ್ಲಿ ಪ್ರತೀಕಗಳು ಅನವಶ್ಯಕವಾಗಿವೆ. ಪದ್ಯದ ಸಾಲಿನಲ್ಲಿ ಪದ ಮತ್ತು ಪ್ರತ್ಯಯಗಳನ್ನು ಒಡೆದು ಮುಂದಿನ ಸಾಲುಗಳಿಗೆ ಟಂಕಿಸಿದ್ದರಿಂದ ವಿಶೇಷಾರ್ಥಗಳು ಒದಗಿದರೂ ಕೆಲವೆಡೆಗಳಲ್ಲಿ ಅರ್ಥಸ್ಪಷ್ಟತೆಯನ್ನು ಕಳೆದುಕೊಂಡು ಸರಾಗ ಓದಿಗೆ ತೊಂದರೆಯನ್ನುಂಟು ಮಾಡುತ್ತವೆ.
ಮನದೊಳಗೆ ಕವಿದ ಕತ್ತಲೆಯ ಒಡಲಲ್ಲಿ ಸಂಚರಿಸಿ, ಅದನ್ನೇ ಹೊರತೆಗೆದು ತೋರಿಸುವ ಮಾಲತಿ ಪಟ್ಟಣಶೆಟ್ಟಿಯವರ ‘ಬಾ ಪರೀಕ್ಷೆಗೆ’ ಕಪ್ಪು ದರ್ಶನದ ಕಾವ್ಯ. ಧಾವಿಸಿ ಬರುವ ಅನುಭವಗಳ ಪೈಕಿ ಕವಯತ್ರಿಯು ಆಯ್ದುಕೊಳ್ಳುವುದು ತನ್ನನ್ನು ನೋಯಿಸಿಯೂ ತನ್ನೊಳಗಿಗೆ ಏನನ್ನೋ ಕೊಟ್ಟು ಅದರ ಬಗ್ಗೆ ಚಿಂತಿಸುವಂತೆ ಮಾಡಿದ ಲೌಕಿಕ ಅನುಭವಗಳನ್ನು. ಅವುಗಳು ಆ ಕ್ಷಣಕ್ಕೆ ಏನೋ ಕೊಟ್ಟಿರಬಹುದು. ಕಳೆದಿರಬಹುದು. ಈ ಪೈಕಿ ಹೃದಯದಲ್ಲಿ ಗಾಢವಾಗಿ ಅಚ್ಚೊತ್ತಿ ಉಳಿಯುವ ಸಂಗತಿಗಳೇ ಮುಖ್ಯ ಎಂದು ಪರೋಕ್ಷವಾಗಿ ಹೇಳುವ ಕವಯತ್ರಿಯು ಅನುಭವಗಳ ನಿಕಷಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಾ ಸತ್ಯವನ್ನು ಆರಿಸಿಕೊಳ್ಳಲು, ನಿರ್ಧರಿಸಲು ಹೊರಡುತ್ತಾರೆ. ಪ್ರಥಮ ಸಂಕಲನದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಎಲ್ಲ ಬಗೆಯ ಚಡಪಡಿಕೆಗಳು ಇಲ್ಲಿವೆ. ಭಾವಾಭಿವ್ಯಕ್ತಿಗಾಗಿ ನಡೆಸಿದ ಶ್ರಮ, ತಪ್ತ ಪದಗಳಲ್ಲಿ ಪ್ರಕಟಗೊಳ್ಳುವ ಭಾವಲಹರಿಗಳ ಸ್ವಬಾವ ಮತ್ತು ಸ್ವರೂಪಗಳ ಹುಡುಕಾಟವು ಗಮನಾರ್ಹವಾಗಿದೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುತ್ತಾ ಕವಿಯತ್ರಿಯ ಅಂತರಂಗಕ್ಕೆ ಬೆಳಕು ಬೀರುವ ಕವಿತೆಗಳ ಒಳನೋಟ ಹೊರನೋಟಗಳಲ್ಲಿ ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಭಾಷೆ ತಿಳಿಯಾಗಿರುವುದರಿಂದ ಗೊಂದಲದ ಸ್ಥಿತಿಯುಂಟಾಗಿಲ್ಲ. ಕವಿತೆಗಳು ಗಾಢವಾಗಿ ತಟ್ಟದಿದ್ದರೂ ಹಲವು ಭಾವ, ವಿಚಾರಗಳ ಎಳೆಯನ್ನು ಮಿಂಚಿಸಿ ಮರೆಯಾಗುತ್ತವೆ. ನೇರವಾಗಿ ಹೇಳುವ ಶೈಲಿ ಓದುಗರನ್ನು ಆಕರ್ಷಿಸುತ್ತದೆ. ಪಾತ್ರದ ಒಳದನಿಗಳಿಗೆ ತಕ್ಕ ಭಾಷಾಶರೀರವನ್ನು ನಿರ್ಮಿಸಲು ಯತ್ನಿಸುವ ಕಾವ್ಯವು ಸಾಧನೆಯ ಕಡೆಗೆ ಚಲಿಸಿದೆ.

ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

ಲೇಖಕಿ : ಮಾಲತಿ ಪಟ್ಟಣಶೆಟ್ಟಿ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಮಾಲತಿ ಪಟ್ಟಣಶೆಟ್ಟಿಯವರು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಮೂವತ್ನಾಲ್ಕು ವರ್ಷಗಳ ಕಾಲ ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾ ಪರೀಕ್ಷೆಗೆ, ಗರಿ ಕೆದರಿ, ತಂದೆ ಬದುಕು ಗುಲಾಬಿ, ದಾಹತೀರ, ಮೌನ ಕರಗುವ ಹೊತ್ತು, ಹೂ ದಂಡಿ, ಎಷ್ಟೊಂದು ನಾವೆಗಳು, ನನ್ನ ಸೂರ್ಯ, ಗುನ್ ಗುನ್ ಗೀತ ಗಾನ, ಬಾಳೆಂಬ ವ್ರತ (ಕವನ ಸಂಕಲನಗಳು) ಇಂದು ನಿನ್ನಿನ ಕತೆಗಳು, ಸೂರ್ಯ ಮುಳುಗುವುದಿಲ್ಲ, ಎಲ್ಯಾದರೂ ಬದುಕಿರು ಗೆಳೆಯಾ, ಕಣ್ಣಂಚಿನ ತಾರೆ (ಕಥಾ ಸಂಕಲನ) ಬಗೆದಷ್ಟು ಜೀವಜಲ (ಪ್ರಬಂಧ ಸಂಕಲನ) ಸಹಸ್ಪಂದನ, ಸಂವೇದನ (ವಿಮರ್ಶಾ ಸಂಗ್ರಹ) ಬೆಳ್ಳಕ್ಕಿ ಸಾಲು, ಬೋರಂಗಿ, ಮಕ್ಕಳ ಮೂರು ನಾಟಕಗಳು (ಮಕ್ಕಳ ಸಾಹಿತ್ಯ) ಮುಂತಾಗಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಥೆ, ಕವಿತೆ ಮತ್ತು ಪ್ರಬಂಧಗಳು ಇತರ ಭಾಷೆಗಳಿಗೆ ಅನುವಾದವಾದಗೊಂಡಿದ್ದು ವಿವಿಧ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಂಡಿವೆ. ಇವರ ಸಾಹಿತ್ಯ ಸೇವೆಗಾಗಿ 25ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ. ಸದ್ಯ ಧಾರವಾಡದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದು, ಎಂಬತ್ತಾರರ ವಯಸ್ಸಿನಲ್ಲೂ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.
