ತುಮಕೂರು : ತುಮಕೂರು ತಾಲ್ಲೂಕಿನ ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರವು ಆಯೋಜಿಸಿದ್ದ 18ನೇ ವರ್ಷದ ಚಿಣ್ಣರ ಬಣ್ಣದ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 06-05-2023ನೇ ಶನಿವಾರ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ನೆರವೇರಿತು.
ಅತಿಥಿಯಾಗಿ ಭಾಗವಹಿಸಿದ ಜಿ.ಎಂ.ಹೆಚ್.ಪಿ.ಎಸ್. ಕೋರಾ ಇದರ ಮುಖ್ಯ ಶಿಕ್ಷಕರಾದ ಶ್ರೀ ಮಧುಸೂಧನ್ ರಾವ್
ಮಾತನಾಡುತ್ತಾ “ಶಾಲೆಯಲ್ಲಿ ಒಂದು ವರ್ಷ ಪೂರ್ತಿ ಮಾಡಲಾಗದ ಕಾರ್ಯವನ್ನು ಒಂದು ತಿಂಗಳ ಶಿಬಿರ ಮಾಡಿ ಬಿಡುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ನನ್ನ ಶಾಲೆಯ ಮಕ್ಕಳು ಶಿಬಿರದಲ್ಲಿದ್ದಾರೆ ಅವರ ಬದಲಾವಣೆಯನ್ನು ಕಂಡು ನಾನು ಹೇಳುತ್ತಿದ್ದೇನೆ. ಮಕ್ಕಳು ಬಹುಮುಖಿಯಾಗಿ ವಿಕಾಸಗೊಳ್ಳಲು ಇಂತಹ ಶಿಬಿರಗಳು ಬೇಕು” ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಸಾಹಿತಿಗಳಾದ ಪ್ರಕಾಶ್ ನಾಡಿಗ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧಕ್ಷರಾದ ಸಿದ್ದರಾಮಯ್ಯ, ನಿವೃತ್ತ ಪ್ರಾಂಶುಪಾಲರಾದ ಕುಮಾರಸ್ವಾಮಿ ಹಾಗೂ ತುಮಕೂರಿನ ಉಪನಿರ್ದೇಶಕ ಕಚೇರಿಯ ಡಿ.ವೈ.ಎಸ್.ಪಿ. ರಂಗಧಾಮಯ್ಯ ಉಪಸ್ಥಿತರಿದ್ದರು.
ನಂತರ ಸುಮಾರು ಐವತ್ತು ಮಕ್ಕಳು ಮೆಳೇಹಳ್ಳಿ ದೇವರಾಜ್ ನಿರ್ದೇಶನದಲ್ಲಿ ಕುವೆಂಪುರವರ ‘ನನ್ನ ಗೋಪಾಲ’ ನಾಟಕ ಪ್ರಯೋಗಿಸಿದರು. ಕಾಡಿನ ಸೌಂದರ್ಯ, ಪ್ರಾಣಿ-ಪಕ್ಷಿಗಳ ಕಲರವ, ಮನುಷ್ಯ ಮತ್ತು ಜೀವ ಸಂಕುಲಗಳ ಬಾಂಧವ್ಯ ಮನುಷ್ಯನ ಆಧುನಿಕತೆಗೆ ಬಲಿಯಾಗಿ ಅಳಿವಿನತ್ತ ಸಾಗುತ್ತಿರುವ ವನ ಮತ್ತು ಪ್ರಾಣಿಗಳ ಸಂಕಟಗಳನ್ನು ಮತ್ತು ಗೋಪಾಲನೆಯ ನೆಲ-ಮೂಲ ಸಂಸ್ಕೃತಿ, ಭವಿಷ್ಯದ ಅಕ್ಷಯ ಪಾತ್ರೆಯೆಂಬ ಒಳಹುಗಳನ್ನು ನಿರ್ದೇಶಕರು ತುಂಬಾ ಚೆನ್ನಾಗಿ ಹೊರ ಹೊಮ್ಮಿಸಿದರು. ಮಕ್ಕಳು ಲವಲವಿಕೆಯಿಂದ ಅಭಿನಯಿಸಿ ಕುವೆಂಪುರವರ ನಾಟಕದ ಅರ್ಥ ವ್ಯಾಪ್ತಿ ಹಿಗ್ಗಿಸಿದರು.
ಶಿಬಿರದ ಎಲ್ಲಾ ಚಿಣ್ಣರು ಲವಲವಿಕೆಯಿಂದ ಅಭಿನಯಿಸಿದರು. ಶಿಬಿರಕ್ಕಾಗಿ ದುಡಿದ, ಶಿಬಿರದಲ್ಲಿ ತರಬೇತಿ ನೀಡಿದ
ಸಂಪನ್ಮೂಲ ವ್ಯಕ್ತಿಗಳನ್ನು ಮತ್ತು ಪ್ರತಿದಿನದ ದಾಸೋಹಿಗಳನ್ನು ಅಭಿನಂದಿಸಲಾಯಿತು.