ಅಮೇರಿಕಾದ ಆಸ್ಟಿನ್ ನಲ್ಲಿ ನೆಲೆಸಿರುವ ನೃತ್ಯ ಕಲಾವಿದೆ ಶ್ರೀಮತಿ ರಮ್ಯ ಸುಧೀರ್ ಪಟೇಲ್, ‘ಕಾವೇರಿ ನಾಟ್ಯಯೋಗ’ ನೃತ್ಯ ಸಂಸ್ಥೆಯ ನಾಟ್ಯಾಚಾರ್ಯ ಡಾ. ಶ್ರೀಧರ್ ಆರ್. ಅಕ್ಕಿಹೆಬ್ಬಾಳು ಇವರ ನುರಿತ ಗರಡಿಯಲ್ಲಿ ರೂಪುಗೊಂಡ ಕಲಾಶಿಲ್ಪ. ಇವರ ಸತತ ಮಾರ್ಗದರ್ಶನದಲ್ಲಿ ನೃತ್ಯದ ವಿವಿಧ ಆಯಾಮಗಳನ್ನು ಅರಿತ ಕಲಾವಿದೆ ರಮ್ಯಾ ಇತ್ತೀಚೆಗೆ ಆಸ್ಟಿನ್ ನಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಂಡಳು.

ನೃತ್ಯಕ್ಕೆ ಹೇಳಿ ಮಾಡಿಸಿದಂಥ ಮಾಟವಾದ ಶರೀರ, ಭಾವಪ್ರದ ಕಣ್ಣುಗಳನ್ನು ಹೊಂದಿರುವ ರಮ್ಯ, ಆಕರ್ಷಕ ಆಹಾರ್ಯ- ವೇಷಭೂಷಣಗಳಲ್ಲಿ ಗಂಧರ್ವ ಪುತ್ಥಳಿಯಂತೆ ರಂಗದ ಮೇಲೆ ಗೋಚರಿಸುತ್ತಿದ್ದಳು. ಹಸನ್ಮುಖ -ಆತ್ಮವಿಶ್ವಾಸದಿಂದ ವೇದಿಕೆಯನ್ನು ಪ್ರವೇಶಿಸಿದ ಕಲಾವಿದೆ, ಶುಭಾರಂಭಕ್ಕೆ ಬಸವಣ್ಣನ ವಚನದ ಅಭಿನಯ ಸಮರ್ಪಣೆಯಿಂದ ದೈವೀಕತೆಯನ್ನು ಪಸರಿಸಿದಳು. ‘ವಚನದಲ್ಲಿ ನಾಮಾಮೃತ ತುಂಬಿ’ ಎನ್ನುತ್ತ ಅತ್ಯಂತ ವಿನಮ್ರಶಾಲಿಯಾಗಿ ಭಕ್ತಿಭಾವದಿಂದ ಕೂಡಲ ಸಂಗಮದೇವನಲ್ಲಿ ವಿಲೀನ- ಭಕ್ತಿಭಾವದಲ್ಲಿ, ಶರಣಾಗತಳಾದ ಕಲಾವಿದೆಯ ನೃತ್ಯಾಭಿನಯದಲ್ಲಿ ಸುಕೋಮಲತೆಯೊಂದಿಗೆ ಮಾರ್ದವತೆ ತುಂಬಿತ್ತು.


ನಂತರ- ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ’ – ಎಂಬ ಅಕ್ಕನ ವಚನವನ್ನು ರಮ್ಯ, ತನ್ನ ನವಿರಾದ ಆಂಗಿಕಾಭಿನಯ, ಲಜ್ಜೆ-ಶೃಂಗಾರಗಳ ಸಮ್ಮಿಶ್ರ ಭಾವಾಭಿವ್ಯಕ್ತಿಯಲ್ಲಿ, ಮಲ್ಲಿಕಾರ್ಜುನನಿಗೆ ತನ್ನನ್ನು ಮದುವೆ ಮಾಡಿಕೊಟ್ಟರು ಎಂಬ ಮಧುರಾನುಭವವನ್ನು ಹದವಾಗಿ ಸೂಸಿದಳು. ಕನಸಿನಲ್ಲಿ ಶಿವನ ದರ್ಶನ- ಸಾಂಗತ್ಯ ಪಡೆದ ರೋಮಾಂಚನ, ಅನಿರ್ವಚನೀಯ ಅನುಭೂತಿಯನ್ನು ಕಲಾವಿದೆ ತನ್ನ ಸಾತ್ವಿಕಾಭಿನಯದ ಸೊಗಡಿನಲ್ಲಿ ಸುಮನೋಹರವಾಗಿ ಅಭಿವ್ಯಕ್ತಿಸಿದಳು. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ತಾದಾತ್ಮ್ಯ- ತಲ್ಲೀನತೆ ಪರಿಣಾಮಕಾರಿಯಾಗಿತ್ತು.

ನೃತ್ಯ ಪ್ರಸ್ತುತಿಯ ಕೇಂದ್ರಭಾಗ ಅಥವಾ ಪ್ರಮುಖ ಘಟ್ಟ ‘ವರ್ಣ’. ಕ್ಲಿಷ್ಟವಾದ ಜತಿಗಳಿಂದ ಕೂಡಿದ ದೀರ್ಘಬಂಧವಾದ ‘ವರ್ಣ’ ನಿರ್ವಹಿಸುವುದು ಸಾಮಾನ್ಯವಾಗಿ ಕಲಾವಿದರಿಗೆ ಸವಾಲಿನ ಕೆಲಸ. ಆಳವಾದ ನೆನಪಿನ ಶಕ್ತಿ ಮತ್ತು ಉತ್ತಮ ಲಯ ಮತ್ತು ತಾಳ ಜ್ಞಾನ ಬೇಡುವ ಈ ಕೃತಿಯನ್ನು ಸಶಕ್ತವಾಗಿ ಪ್ರಸ್ತುತಿಗೊಳಿಸಲು ಕಲಾವಿದರಾದವರಿಗೆ ಉತ್ತಮ ಶಿಕ್ಷಣ ಮತ್ತು ತಕ್ಕಷ್ಟು ಪರಿಶ್ರಮ ಬೇಕಾಗುತ್ತದೆ. ರಮ್ಯ, ಅಂದು ಪ್ರಸ್ತುತಪಡಿಸಿದ್ದು ಭಕ್ತಿಪ್ರಧಾನವಾದ ವರ್ಣ. ಗಾಯಕ ಬಾಲಸುಬ್ರಹ್ಮಣ್ಯ ಶರ್ಮ ಮೋಹನ ಕಲ್ಯಾಣಿ ರಾಗ- ಆದಿತಾಳದಲ್ಲಿ ರಚಿಸಿದ ‘ಪಾರ್ವತಿ ಪಾಹಿಮಾಂ’ –ವರ್ಣವು, ಅರ್ಧನಾರೀಶ್ವರಿ- ನಾಟ್ಯೇಶ್ವರಿ- ಸಿಂಹವಾಹಿನಿಯ ಭೈರವ ರೂಪ ಮತ್ತು ಪ್ರಸನ್ನ ರೂಪಗಳೆರಡನ್ನೂ ಅನಾವರಣಗೊಳಿಸಿ, ದೇವಿಯ ಗುಣಾತಿಶಯ-ಮಹಿಮೆಯನ್ನು ಸಾರುವ ದೈವೀಕ ನೆಲೆಯಲ್ಲಿ ಪ್ರಸ್ತುತವಾಯಿತು. ಶುಂಭ-ನಿಶುಂಭರನ್ನು ವಧಿಸಿ ಲೋಕ ಕಲ್ಯಾಣಗೈದ, ಮಹಿಷಾಸುರ ಮರ್ಧಿನಿಯಾದ ದೇವಿ, ಋಷಿ-ಮುನಿಗಳನ್ನು ಕಂಡಾಗ ಸೌಮ್ಯಭಾವ ಅಷ್ಟೇ ಪ್ರಸನ್ನಭಾವ ತಳೆಯುವ ಕರುಣಾಮಯಿ-ವಾತ್ಸಲ್ಯದಾಯಿನಿಯ ಚಿತ್ರಣವನ್ನು ಕಲಾವಿದೆ, ತನ್ನ ಮುದಗೊಳಿಸುವ ನಾಜೂಕು ಅಭಿನಯದಿಂದ, ದುಷ್ಟ ಶಿಕ್ಷಣದ ಸಂದರ್ಭದಲ್ಲಿ ಕೆರಳಿ ಕನಲುವ ಭಯಂಕರ ಸ್ವರೂಪಿ ತನ್ನ ಒರಟಾದ ಹೆಜ್ಜೆ- ಭಾವ ಭಂಗಿಗಳಿಂದ ರೌದ್ರವ ರೂಪಿಯಾಗುವ ಬಹುರೂಪ ವ್ಯಕ್ತಿತ್ವವನ್ನು ಸೊಗಸಾಗಿ ಕಂಡರಿಸಿದಳು.


ಯಾವುದೇ ಗೊಂದಲವಿಲ್ಲದ ಸರಳ ವಿನ್ಯಾಸದ ಚೇತೋಹಾರಿ ನೃತ್ತಗಳು ಮತ್ತು ಆಂಗಿಕಾಭಿನಯವನ್ನು ಪ್ರದರ್ಶಿಸಿದ ಕಲಾವಿದೆ ಲಾಸ್ಯಪೂರ್ಣವಾದ ಭಂಗಿಗಳನ್ನು ತೋರಿದಳು. ತನ್ನ ಆರಾಧ್ಯದೈವ ಶಿವನ ಪರೀಕ್ಷೆಗೆ ಒಳಗಾಗಿ ಅವನನ್ನು ಸಾಕ್ಷಾತ್ಕರಿಸಿಕೊಳ್ಳುವ ಸುಂದರ ಸಂಚಾರಿ ಕಥಾನಕವನ್ನು ರಮ್ಯ, ತನ್ನ ಸಾತ್ವಿಕಾಭಿನಯದಿಂದ ನಿರೂಪಿಸಿದಳು. ನಡು ನಡುವಣ ನಟುವಾಂಗದ ಜತಿಗಳಿಗೆ ಸುಸ್ಪಷ್ಟ ಹಸ್ತಮುದ್ರೆ, ಖಚಿತ ಅಡವುಗಳ ಮಿನುಗಿನೊಂದಿಗೆ ಮನಸೆಳೆದಳು. ನರ್ತನದ ಹಾಸುಹೊಕ್ಕಾಗಿ ಮೂಡಿಬಂದ ನವರಸಗಳ ಸಮರ್ಥ ಅಭಿನಯ ಗಮನ ಸೆಳೆಯಿತು. ಕಲಾವಿದೆಯ ಸುಲಲಿತ ಆಕಾಶಚಾರಿ, ಪಾದಭೇದ, ಅರೆಮಂಡಿಯ ಭಂಗಿಗಳು ರಮ್ಯವಾಗಿದ್ದವು. ಮುಂದಿನ ‘ಆನಂದ ತಾಂಡವೇಶ್ವರ’ನ ಕುರಿತ ಕೀರ್ತನೆ (ರಚನೆ- ದ್ವಾರಕೀ ಕೃಷ್ಣಸ್ವಾಮಿ) ದೈವೀಕ ನೆಲೆಯಲ್ಲಿ ಆನಂದ ನೀಡಿತು. ಇದು, ಚಿದಂಬರದಲ್ಲಿ ಆನಂದ ನರ್ತನ ಮಾಡುವ ಪರಶಿವನ ವೈಶಿಷ್ಟ್ಯವನ್ನು, ದೈವೀಕ ಸೌಂದರ್ಯಗಳ ಜೊತೆ ಆತನ ಪರಾತ್ಪರ ಶಕ್ತಿ- ಮಹಿಮೆಯನ್ನು ಪ್ರತಿಫಲಿಸಿತು. ಕಲಾವಿದೆ ಪ್ರಕಾಶಿಸಿದ ಯೋಗದ ಮನಮೋಹಕ ಭಂಗಿಗಳು, ಆಕೆಯ ಸಮತೋಲನದ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಿತು. ಸುಸ್ಪಷ್ಟವಾಗಿ ಅರ್ಥ ಸ್ಫುರಿಸುವಂಥ ಅವಳ ಖಚಿತ ಹಸ್ತಮುದ್ರೆ, ಎಲ್ಲೂ ಯಾಂತ್ರಿಕವೆನಿಸದ ಆಂಗಿಕಾಭಿನಯ- ಅಭಿನಯ, ಪರಿಶ್ರಮ ಗಮನಾರ್ಹವಾಗಿದ್ದವು.

ಅನಂತರ- ಅಪ್ಪಯ್ಯ ದೀಕ್ಷಿತರು ರಚಿಸಿದ (ರಾಗಮಾಲಿಕೆ- ಆದಿತಾಳ) ‘ಹೇ ರಂಭಾ’ – ಕುತೂಹಲ ಕೆರಳಿಸುವ ಕಥಾನಕವನ್ನು ಹೊಂದಿದ್ದ, ತಾಯಿ ಪಾರ್ವತೀದೇವಿಯ ವಾತ್ಸಲ್ಯ ಮುಖವನ್ನು ಅನಾವರಣಗೊಳಿಸುವ ಆಸಕ್ತಿಕರ ಕೃತಿ. ಗಣಪತಿ ಮತ್ತು ಸ್ಕಂಧ ಸೋದರರ ನಡುವೆ ನಡೆಯುವ ತುಂಟಾಟದ ಪ್ರಸಂಗ, ತಾಯಿ ಪಾರ್ವತಿಯ ಬಳಿ ದೂರು ಹೋಗಿ ಅವಳು ಅವರಿಬ್ಬರನ್ನೂ ಸಮಾಧಾನಿಸುವ ಒಂದು ನಲ್ಮೆಯ ಸನ್ನಿವೇಶ. ಒಬ್ಬರನ್ನೊಬ್ಬರು ಚುಡಾಯಿಸುವ ಕಥಾನಕ ನಾಟಕೀಯ ಆಯಾಮದಲ್ಲಿ ಅಭಿವ್ಯಕ್ತಗೊಂಡಿತು. ಈ ಹಾಸ್ಯದ ಸಂಚಾರಿಯನ್ನು ರಮ್ಯ ಬಹು ವಿನೋದಪೂರ್ಣವಾಗಿ ಸೊಗಸಾಗಿ ಕಟ್ಟಿಕೊಟ್ಟಳು. ಅಂತ್ಯದಲ್ಲಿ ದಂಡಾಯುಧ ಪಾಣಿ ಪಿಳ್ಳೈ ರಚನೆಯ ‘ತಿಲ್ಲಾನ’ವನ್ನು ರಮ್ಯ, ಲೀಲಾಜಾಲ ನೃತ್ತಾವಳಿಗಳ ಸಂಭ್ರಮ ಚೆಲ್ಲುತ್ತ ಆನಂದದಿಂದ ನರ್ತಿಸಿದಳು. ಬಸವಣ್ಣನ ವಚನದ ಶುಭ ಸಂದೇಶದ ಮಂಗಳದೊಂದಿಗೆ ರಮ್ಯ ಚೆಂದದ ತನ್ನ ನರ್ತನ ಪ್ರಸುತಿಯನ್ನು ಸಂಪನ್ನಗೊಳಿಸಿದಳು.

ನೃತ್ಯ ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
