ಒಂದು ಹಗಲ ‘ಬೆಳೆಸಿರಿ’ : ಲಲಿತಕಲೆಗಳ ಸಂಗಮ
ಆಡಳಿತ ರೀತಿ , ಶಿಕ್ಷಣ ನೀತಿ , ಹಾಗೂ ಮತೀಯ ಒತ್ತಡಗಳು ಭಾರತೀಯ ಕಲೆಗಳನ್ನು ಹ್ರಾಸಗೊಳಿಸುತ್ತ ಬಂದಿವೆ . ಕುಣಿಯುವ ಹಾಡುವ ಸ್ವಾತಂತ್ರ್ಯ ಲಕ್ಷಾಂತರ ವರ್ಷಗಳಿಂದ ಮನರಂಜನೆಯನ್ನೂ ಆರೋಗ್ಯವನ್ನೂ ಕೊಡುತ್ತ ಬಂದಿದ್ದು ಸಹಜವಾಗಿಯೇ ಅಳವಟ್ಟಿರುವಾಗ ಅದೆಲ್ಲ ಈಗ ಅಗತ್ಯ ಇಲ್ಲವೆಂಬ ವಾದವೂ ಹೆಚ್ಚಾಗುತ್ತಿದೆ .
ಸಾಮಾಜಿಕ ಜಾಲ ತಾಣಗಳ ಮೂಲಕ ಅತ್ಯುತ್ತಮಗಳನ್ನು ಆಸ್ವಾದಿಸುವುದು ವೈಯಕ್ತಿಕ . ಹಾಗೇ ಸಾರ್ವಜನಿಕದಲ್ಲಿ ಈ ಕಲೆಗಳನ್ನು ಒಪ್ಪಿ ಸ್ವೀಕರಿಸಿ ದೈಹಿಕ ಮಾನಸಿಕ ಆರೋಗ್ಯ ಸಂಪಾದಿಸುವುದು ಸಾಧ್ಯವೆ ? ಎಂಬ ಚಿಂತನೆ ಮೊನ್ನೆ ಮೇ ತಿಂಗಳ ಏಳನೇ ತಾರೀಕಿನಂದು ನಡೆದದ್ದು ಬಾಯಿಕಟ್ಟೆಯ ಅಯ್ಯಪ್ಪ ಮಂದಿರದ ವಠಾರದಲ್ಲಿ . ಜಿಲ್ಲಾ ಕನ್ನಡ ಲೇಖಕರ ಸಂಘ ಕಾಸರಗೋಡು , ತಪಸ್ಯ ಕಲಾಸಾಹಿತ್ಯ ವೇದಿಕೆ ಹಾಗೂ ಬೆಂಗಳೂರಿನ ಶಂ ಪಾ ಪ್ರತಿಷ್ಠಾನಗಳು “ಬೆಳೆಸಿರಿ” ಅಂಕಿತದಲ್ಲಿ ಈ ಕಾರ್ಯಕ್ರಮವನ್ನು ದಿನಾಂಕ 7-05-2023 ರಂದು ನಿರ್ವಹಿಸಿದುವು .
ಪ್ರತಿಭಾವಂತ ಮಕ್ಕಳು ಭಾಗವಹಿಸಿದರು . ಭರತನಾಟ್ಯ , ಕೂಚುಪುಡಿ , ಜಾನಪದ ನೃತ್ಯಗಳಲ್ಲಿ ಜಿಲ್ಲೆಯ ಅಪೂರ್ವ ಪ್ರತಿಭೆ ಎನಿಸಿದ ಆದಿಶ್ರೀಯ ನೃತ್ಯ ಪ್ರಸ್ತುತಿ , ಶ್ರೀಆದ್ಯನಿಂದ ಭರತನಾಟ್ಯ , ನೃತ್ಯ , ಚಿತ್ರಕಲೆಗಳ ಪರಸ್ಪರ ಸಂಬಂಧದ ಕುರಿತ ಸಂವಾದ ನಡೆಯಿತು .
ಉದ್ಘಾಟನಾ ಸಮಾರಂಭದಲ್ಲಿ ತಪಸ್ಯದ ಸದಸ್ಯ ಮಾಧವನ್ ನಂಬೂದಿರಿ ಮಾತನಾಡುತ್ತ , ಒಂದೊಂದು ಕುಟುಂಬವೂ ಕಲೆಗಳನ್ನು ಪ್ರೀತಿಸಿ ಒಳಿತುಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು . ಕಾರ್ಟೂನು ಹಾಗೂ ಚಿತ್ರಪ್ರದರ್ಶನಗಳನ್ನು ಏರ್ಪಡಿಸಿದ್ದ ಜಯಪ್ರಕಾಶ ಶೆಟ್ಟಿ , ವಿರಾಜ್ ಅಡೂರು, ರಾಧಾಕೃಷ್ಣ ಬಲ್ಲಾಳರು ಅಭಿಪ್ರಾಯಗಳನ್ನು ಹಂಚಿಕೊಂಡರು .
ಕಾರ್ಟೂನು ಧಾರವಾಹಿಗಳಿಗೆ ಹೆಸರಾದ ಜಾನ್ ಚಂದ್ರನ್ , ಮಂಡಲ ಕಲಾ ಪ್ರವೀಣೆ ಕು l ಖುಶಿ ಶೆಟ್ಟಿ , ಕ್ಯಾರಿಕೇಚರ್ , ಚಿತ್ರಕಲೆಗಳಿಗೆ ಪ್ರಸಿದ್ಧರಾದ ಬಾಲ ಮಧುರಕಾನನರ ರಚನೆಗಳೂ ಪ್ರದರ್ಶನದಲ್ಲಿದ್ದುವು . ಸಾವಿರಾರು ಬಾರಿ ಕನ್ನಡ , ತುಳು ನಾಟಕಗಳಲ್ಲಿ ಪ್ರತಿಭೆಯನ್ನು ಹಂಚಿದ , ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆಯಂತಹ ಹತ್ತಾರು ಸಿನೆಮಗಳಲ್ಲಿ ಗೌಣ , ಪೋಷಕ ಪಾತ್ರಗಳನ್ನು ನಿರ್ವಹಿಸಿದ ರಾಧಾಕೃಷ್ಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಕೇರಳದ ಆಯುರ್ವೇದ ಪ್ರತಿಭೆ , ವೈದ್ಯೆ ರೂಪಾ ಸರಸ್ವತಿ ಸಂಗೀತ ಚಿಕಿತ್ಸೆಯ ಕುರಿತು ಮಾಹಿತಿ ನೀಡುತ್ತ , ” ಮಾನಸಿಕ ಆಘಾತ , ನಡತೆಯಲ್ಲಿ ಭಿನ್ನತೆ , ರೋಗಬಾಧೆಗೀಡಾಗಿ ಅಡ್ ಪರಿಣಾಮಗಳಿಗೀಡಾದವರಿಗೆ ಮ್ಯೂಸಿಕ್ ಥೆರಪಿ ಬೇಕು . ಅಂತಹ ನೂರೆಂಬತ್ತು ಮಂದಿಗೆ ಪ್ರತಿ ತಿಂಗಳು ಸಂದರ್ಶಿಸಿ ಚಿಕಿತ್ಸೆ ಕೊಡುತ್ತಿದ್ದೇನೆ . ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಿವಿ ನಿದ್ದೆಯಲ್ಲೂ ಎಚ್ಚರವಿರುವ ಅವಯವ . ಹಾಗಾಗಿ ಶಬ್ದವೀಚಿ ( ಧ್ವನಿ ತರಂಗ ) ಗಳ ಮೂಲಕ ಚಿಕಿತ್ಸೆ ಸಾಧ್ಯ . ಪ್ರಭಾತಕಾಲ , ಮಧ್ಯಾಹ್ನ , ಸಂಜೆ ಮತ್ತು ಯಾವ ಕಾಲಕ್ಕೂ ಹೊಂದುವ ರಾಗಗಳು ಸಂಗೀತದಲ್ಲಿವೆ . ಗೌಳಿ , ಭೂಪಾಳಿ ಬೆಳಿಗ್ಗೆ , ಮಧ್ಯಾಹ್ನಕ್ಕೆ ಮಧ್ಯಮಾವತಿ , ಸಂಜೆಗೆ ಶಂಕರಾಭರಣ , ಕಲ್ಯಾಣಿಯಂತಹ ರಾಗಗಳು ಹೊಂದುತ್ತವೆ . ಸುಧಾರಣೆ ಮೆಲ್ಲ ಆಗುತ್ತದಾದರೂ , ಅದನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ವಾಸಿ ಮಾಡಿದ ಅನುಭವ ನನ್ನದು ” ಎಂದರು . ಅವರು ದೇವತಾರಾಧನೆಯಲ್ಲೂ , ಭರತನಾಟ್ಯದಲ್ಲೂ ಬಳಸುವ ಮುದ್ರೆಗಳ ಬಗ್ಗೆ ಮಾಹಿತಿ ಹಂಚಿಕೊಂಡು ಲಲಿತಕಲೆಗಳ ಪರಸ್ಪರ ಸಂಬಂಧವನ್ನೂ ಪರಿಚಯಿಸಿದರು . ಕೀರ್ತನೆಗಳನ್ನು ಹಾಡಿ ತೋರಿಸಿದರು .
ಅಂತಾರಾಷ್ಟ್ರೀಯ ಜಾದೂಗಾರ ಬಾಲಚಂದ್ರನ್ ಕೊಟ್ಟೋಡಿ ಅವರ ಮ್ಯಾಜಿಕ್ ಶೋ , ವ್ಯಕ್ತಿತ್ವ ತರಬೇತಿಯ ಪಟ್ಟುಗಳು , ಸುಶ್ರಾವ್ಯವಾದ ಕೊಳಲುವಾದನ ರಂಜಿಸಿತು .
ಚಿತ್ರ ಪ್ರದರ್ಶನದಲ್ಲಿ ಕಂಡುಬಂದ ವೈವಿಧ್ಯತೆಯನ್ನು ಮೆಚ್ಚಿ ಭಾರತೀಯ ಚಿತ್ರಕಲೆಯ ಹಂತಗಳನ್ನು ಮುಂದಿಟ್ಟ ಶಿಕ್ಷಕ ಸದಾನಂದನ್ , ಮಿನಿ ಭಾರತದಂತಿರುವ ಕಾಸರಗೋಡಿನ ಜನವರ್ಗ , ವಿಶಿಷ್ಟ ಸಂಸ್ಕೃತಿಯ ಕುರಿತು ನೆನಪಿಸಿದರು . ತಪಸ್ಯ ರಾಜ್ಯ ಸಮಿತಿಯ ಸದಸ್ಯ ಶೈಲೇಂದ್ರನ್ ಎಂ ವಿ ಇಲ್ಲಿನ ವಿವಿಧ ಭಾಷೆಗಳ ಮಾಹಿತಿ ನೀಡಿದ್ದಲ್ಲದೆ ಇಲ್ಲಿನ ಕಲಾಜಗತ್ತು ಸಾರುವ ಸಂಸ್ಕೃತಿಯ ಪರಿಚಯ ಮಾಡಿಸಿದರು .
ಸಂಗೀತದ ಪ್ರಾದೇಶಿಕ ಪ್ರತಿಭೆ ಕಾವ್ಯಶ್ರೀ ಅವರಿಂ ಪ್ರಾರ್ಥನೆ , ಹಾಡು , ಮಾಸ್ಟರ್ ಸಿದ್ಧಾರ್ಥನ ಹಾಡು , ಮೀಯಪದವು ಪ್ರೌಢಶಾಲೆಯ ವಿದ್ಯಾರ್ಥಿ ಅನನ್ಯಳಿಂದ ಕಾವ್ಯವಾಚನ , ಸ್ಥಳೀಯ ಮಕ್ಕಳಿಂದ ಜಾನಪದ ನೃತ್ಯಗಳು ಗಮನಸೆಳೆದುವು .
ಕೃತಿ ಬಿಡುಗಡೆ
ಡಾ. ಪ್ರಮೀಳಾ ಮಾಧವ್ ಅವರ ಸ್ಫೂರ್ತಿ ಚೇತಸರು ಎಂಬ ಹದಿನೈದು ವ್ಯಕ್ತಿ ಚಿತ್ರಣಗಳನ್ನೊಳಗೊಂಡ ಬೃಹತಗ ಕೃತಿಯನ್ನು ಗೋವಾ ವಿ ವಿಯ ನಿವೃತ್ತ ಮುಖ್ಯಗ್ರಂಥಪಾಲಕ ಡಾ. ವಿ ಗೋಪಕುಮಾರ್ ಬಿಡುಗಡೆಗೊಳಿಸಿ , ಪುಸ್ತಕ ಪ್ರಪಂಚ , ಡಿಜಿಟಲ್ ಕ್ರಾಂತಿ , ಕೃತಕ ಬುದ್ಧಿಮತ್ತೆ ವಿಶೇಷ ಅ್ಯಾಪುಗಳ ಮೂಲಕ ತೋರುತ್ತಿರುವ ಕರಾಮತ್ತುಗಳನ್ನು ಪ್ರಸ್ತಾಪಿಸಿದರು .
ಅಧ್ಯಕ್ಷತೆಯನ್ನು ವಹಿಸಿದ್ದ ಡಾ . ರಮಾನಂದ ಬನಾರಿ ಅವರು
ಒಟ್ಟಿಗೇ ನಾಮಪದವೂ ಕ್ರಿಯಾಪದವೂ ಆಗುವ ಬೆಳೆಸಿರಿ ಎಂಬ ಶೀರ್ಷಿಕೆ ಇಂದಿನ ಕಾರ್ಯಕ್ರಕ್ಕೆ ಹೊಂದಿಕೆಯಾದ್ದನ್ನು ಉಲ್ಲೇಖಿಸಿದರು . ” ಕಾಸರಗೋಡಿನವರೇ ಆದ ಪ್ರಮೀಳಾ ತಡವಾಗಿ ಬಂದು ಫಕ್ಕನೆ ಮನೆ ಮಾತಾಗಿದ್ದಾರೆ . ಅವರ ಭಾಷಾ ಶೈಲಿ ಸರಳ . ಆದರೆ ಅರ್ಥಗರ್ಭಿತ . ತಕ್ಕುದಾದ ಪದಗಳನ್ನು ಬಳಸುವ ಅವರ ಶೈಲಿ ಕೌಶಲಯುಕ್ತವಾದುದು ” ಎಂದರು .
ಕಾರ್ಯಕ್ರಮವನ್ನು ಉದ್ಘಾಟಿಸಿದವರು ಡಾ . ಶ್ರೀಕೃಷ್ಣ ಭಟ್ .
” ಶಿಷ್ಯೆ ಪ್ರಮೀಳಾ ನಿರಂತರ ಬರೆಯುತ್ತ ಬಂದವರು . ಈಕೆ ಪರಿಚಯಿಸಿದವರಲ್ಲಿ ಹಲವರು ಆಕೆಯ ಗುರುಗಳೇ . ಹಾಗಾಗಿ ಶಿಕ್ಷಕರನ್ನು ಗೌರವಿಸುವ ಸಂಸ್ಕೃತಿ ಇಲ್ಲಿ ಸುವ್ಯಕ್ತ . ಗುರುವಿನ ಮೇಲೆ ಶಿಷ್ಯರಿಗಿರುವ ವಿಶ್ವಾಸ ಮತ್ತು ಶಿಷ್ಯರ ಮೇಲೆ ಗುರುವಿಗೆ ಇರುವ ಪ್ರೀತಿ ಅನನ್ಯ . ಅಂತಹ ಸಾಂಸ್ಕೃತಿಕ ಮುಖವೂ ಈ ಕೃತಿಗೆ ಇದೆ .” ಎಂದರು .
ಪುಸ್ತಕ ಪರಿಚಯವನ್ನು ಮಾಡಿಸಿದವರು ಅರುಣಾ ನಾಗರಾಜ್ ಕಾಸರಗೋಡು ಸರಕಾರಿ ಕಾಲೇಜಿನ ಹಳೆ ವಿದ್ಯಾರ್ಥಿ . ” ಈ ಕೃತಿಯ ಹೆಚ್ಚಿನವರು ನನಗೂ ಪರಿಚಿತರೇ . ಈ ಲೇಖಕಿಯ ಇದೊಂದು ಮೇರುಕೃತಿ ವ್ಯಕ್ತಿ ಚಿತ್ರಗಳಾಗಿರುವುದರೊಂದಿಗೆ ಪೂರ್ತಿ ಓದಿ ಆದ ಮೇಲೆ ಪ್ರಮೀಳಾ ಅವರ ಆತ್ಮಚರಿತ್ರೆಯ ಹಾಗೂ ಕಾಣಿಸುತ್ತದೆ . ” ಎಂದರು .
ಕೊನೆಯಲ್ಲಿ ಕಯ್ಯಾರು ಬಾಲಕಿಯರ ಭಜನಾ ತಂಡದ ಕುಣಿತ ಭಜನೆ ಇತ್ತು . ಸಮರ್ಪಕ ಹೆಜ್ಜೆ ತಾಳಕ್ಕೆ ಹೊಂದಿ ಲಘು , ಧ್ರುತ ಗತಿಯ ಕುಣಿತ ಮೋಹಕವಾಗಿತ್ತು , ಜಯಲಕ್ಷ್ಮಿ ಕಾರಂತ , ಸತೀಶ್ , ಸೌಮ್ಯ ಮುಂತಾದವರು ಶ್ರಮ ವಹಿಸಿ ತಂಡವನ್ನು ಕರೆತಂದಿದ್ದು ಈ ಭಜನಾ ಕಾರ್ಯಕ್ರಮ ಚೇತೋಹಾರಿ ಅನಿಸಿತು .
ನೀರಜಾ ಕಾಮತ್ ನಿರವಹಿಸಿದರು . ವಿವಿಧ ಹಂತಗಳಲ್ಲಿ ಇತರರ ಸಹಾಕಾರವಿದ್ದು ಒಟ್ಟು ಕಾರ್ಯಕ್ರಮ ಸಾಹಿತ್ಯ , ಸಂಗೀತ , ನೃತ್ಯ , ಚಿತ್ರ , ಶಿಲ್ಪ ಕಲೆಗಳ ಸಂಗಮದಂತಿದ್ದು ಪ್ರೇಕ್ಷಕರ ಪಾಲಿಗೆ ರಂಜನೀಯವೂ ಕಿರಿಯರಿಗೆ ಜ್ಞಾನ ಪ್ರದವೂ ಆಗಿ ಪರಿಣಮಿಸಿತು .
• ಪಿ ಎನ್ ಮೂಡಿತ್ತಾಯ