ಮಂಗಳೂರು : ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ ಶ್ರೀಮತಿ ಫೆಲ್ಸಿ ಲೋಬೊರವರ ಕೊಂಕಣಿ ಕವನ ಸಂಕಲನ ‘ಪಾಲ್ವಾ ಪೊಂತ್’ ಕೃತಿ ಆಯ್ಕೆಯಾಗಿದೆ. ದಿನಾಂಕ 11 ಜನವರಿ 2026ರಂದು ಸಂತ ಎಲೋಷಿಯಸ್ ಮಹಾವಿದ್ಯಾಲಯದ ಪೀಸ್ ಪಾರ್ಕ್ ನಲ್ಲಿ ನಡೆಯುವ ‘ಕವಿತಾ ಫೆಸ್ತ್’ ಸಮಾರಂಭದಲ್ಲಿ ಬಹುಮಾನ ವಿತರಣೆಯಾಗಲಿರುವುದು.
ಮಂಗಳೂರು ದೇರೆಬೈಲಿನ ಶ್ರೀಮತಿ ಫೆಲ್ಸಿ ಲೋಬೊ ಇವರು ಮಂಗಳೂರು ಸಂತ ಎಲೋಶಿಯಸ್ ಪ್ರೌಢಶಾಲೆಯ ಶಿಕ್ಷಕಿ, ಲೇಖಕಿ, ಕವಯಿತ್ರಿ. ಇವರ ಮೂರು ಕೃತಿಗಳು ಲೋಕಾರ್ಪಣೆಗೊಂಡಿದ್ದು, ಹಲವು ಕವಿಗೋಷ್ಠಿ, ಸಾಹಿತ್ಯ ಕಮ್ಮಟಗಳಲ್ಲಿ ಭಾಗವಹಿಸಿದ ಅನುಭವ ಇವರದು. ಕನ್ನಡ, ತುಳು, ಕೊಂಕಣಿ ಭಾಷೆಗಳಲ್ಲಿ ಬರೆಯುವ ಇವರ ಹಲವು ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಷಣ, ಕವಿತಾ ವಾಚನ ಪ್ರಸಾರಗೊಂಡಿದೆ.
ಸ್ತ್ರೀ ಸಂವೇದಿತ ಸಾಹಿತ್ಯ ಇವರ ಆಸಕ್ತಿ. ಕೊಂಕಣಿ ಭಾಷೆಯಲ್ಲಿ ಪ್ರಕಟವಾಗುವ ಹಲವು ಪತ್ರಿಕೆಗಳಲ್ಲಿ ಇವರ ಸಾಹಿತ್ಯ ಕೃಷಿ ನಿರಂತರವಾಗಿ ಹದಿನೈದು ವರ್ಷಗಳನ್ನು ಮಿಕ್ಕಿ ನಡೆಯುತ್ತ ಬಂದಿದೆ. ವಿದ್ಯಾರ್ಥಿಗಳಲ್ಲೂ ಸಾಹಿತ್ಯದ ಒಲವು ಮೂಡಿಸಲು, ಅವರನ್ನು ವಿವಿಧ ಸ್ಪರ್ಧೆಗಳಿಗೆ ಸಿದ್ಧಗೊಳಿಸುವುದರೊಂದಿಗೆ, ಶಾಲಾ ವಾರ್ಷಿಕ ಸಂಚಿಕೆಯಲ್ಲಿ ವಿದ್ಯಾರ್ಥಿ ಬರಹಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಸಾಹಿತ್ಯ ಸ್ಪರ್ಧೆಗಳಲ್ಲಿ ಕವಿತೆ, ಲೇಖನ, ಲಲಿತ ಪ್ರಬಂಧ ಬರಹಗಳಿಗೆ ಹಲವು ಬಹುಮಾನಗಳನ್ನು ಗಳಿಸಿರುತ್ತಾರೆ.

