ಮಂಗಳೂರು : ತುಳುಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮ ದಿನಾಂಕ 10 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿಯ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ಸಿ. ರೋಡಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ, ನಿರ್ದೇಶಕ ಡಾ. ತುಕಾರಾಂ ಪೂಜಾರಿ “ತುಳುವಿಗೂ ಯಕ್ಷಗಾನಕ್ಕೂ ಅವಿನಾಭಾವ ಸಂಬಂಧ ಇದೆ. ಯಾಕೆಂದರೆ ಹಿಂದಿನ ಕಲಾವಿದರ್ಯಾರೂ ವಿದ್ಯಾಸಂಪನ್ನರಾಗಿರದಿದ್ದರೂ ಕಲೆಯನ್ನು, ಧರ್ಮವನ್ನು ಪಸರಿಸಿದರು. ಬಣ್ಣದ ಮನೆಯಲ್ಲಿ ತುಳುವಿನಲ್ಲೇ ಮಾತನಾಡಿದರೂ ನಾಲ್ಕು ಹೆಜ್ಜೆ ನಡೆದು ರಂಗ ಪ್ರವೇಶ ಮಾಡುತ್ತಾ ಶುದ್ಧ ಕನ್ನಡದಲ್ಲೇ ಸಂಭಾಷಿಸುತ್ತಾ ಕಲೆಯನ್ನು ಶ್ರೀಮಂತಗೊಳಿಸಿದರು. ಹಾಗಾಗಿ ತುಳುವಿನ ಪಂಚಾಂಗದಲ್ಲಿ ಯಕ್ಷ ವೈಭವ ಮೆರೆದು ಪ್ರೇಕ್ಷಕರಿಗೂ ದಿವ್ಯ ಸಂದೇಶವನ್ನು ಪಸರಿಸುತ್ತಾರೆ. ಈಗಲೂ ಈ ಕಾರ್ಯವನ್ನು ತುಳುಕೂಟ ನಡೆಸಿಕೊಂಡು ಬರುತ್ತಿದೆ. ದಾಮೋದರ ನಿಸರ್ಗರ ಪಥದರ್ಶನದ ಈ ಹೊತ್ತು ಈ ತಾಳಮದ್ದಳೆ ಸಪ್ತಾಹ ತುಳುವಿನಲ್ಲೇ ನಡೆಯುತ್ತಿರುವುದು ಶುಭದ ಕಾರ್ಯ” ಎಂದು ಹೇಳಿದರು.

ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಪ್ರಸ್ತಾವಿಸಿದರು. ಬಂಟ್ಟಾಳದ ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪಾಂಡುರಂಗ ನಾಯಕ್, ಡಾ. ಮೇಘಾ ತ್ರಿದೇವ್, ಕದ್ರಿ ನಾಗೇಶ ದೇವಾಡಿಗ ಉಪಸ್ಥಿತರಿದ್ದರು. ಕದ್ರಿಯ ಯಕ್ಷ ಮಂಜುಳಾ ಮಹಿಳಾ ತಾಳಮದ್ದಳೆ ಬಳಗದ ಅಧ್ಯಕ್ಷೆ ಪೂರ್ಣಿಮಾ ಪ್ರಭಾಕರ ಪೇಜಾವರರನ್ನು ಅಭಿನಂದಿಸಲಾಯಿತು. ಬಳಿಕ ಅವರಿಂದ ‘ಯಕ್ಷಮಣಿ’ ತುಳು ತಾಳಮದ್ದಳೆ ನಡೆಯಿತು.
