ಕನ್ನಡ ಸಾಹಿತ್ಯವು ನವ್ಯೋತ್ತರಕ್ಕೆ ಹೊರಳಿದ ಸಂದರ್ಭದಲ್ಲಿ ಪ್ರಕಟವಾದ ‘ತಂದೆ ಬದುಕು ಗುಲಾಬಿ’ (1988)ಯು ಕಾವ್ಯದ ಸೂಕ್ಷ್ಮತೆಗಳನ್ನು ಮೈಗೂಡಿಸಿಕೊಂಡು ಮೈವಡೆದಿದ್ದು, ಆತ್ಮಶೋಧನೆಯೆಡೆಗೆ ಗಮನವನ್ನು ಹರಿಸಿವೆ. ದಲಿತ ಬಂಡಾಯ ಪಂಥದ ಕೃತಿಗಳಲ್ಲಿ ಕಾಣಿಸುವ ಸಿಟ್ಟು ಅಬ್ಬರಗಳ ಬದಲಾಗಿ ಮಾರ್ದವತೆಯು ಆವರಿಸಿಕೊಂಡಿದೆ. ಸಂಕಲನದ ಶೀರ್ಷಿಕೆಯು ಎದುರಾದ ಅಡ್ಡಿ ಆತಂಕ ಮತ್ತು ತಲ್ಲಣಗಳಿಗೆದುರಾಗಿ ಬದುಕಿಗೆ ಪ್ರೀತಿ ಮತ್ತು ಮೃದುತ್ವವನ್ನು ತಂದು ಕೊಟ್ಟ ಘಟಕಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಮಾನವೀಯ ಸಂಬಂಧಗಳು ಶಿಥಿಲವೂ ಅಪರಿಚಿತವೂ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ದನಿಗಳು ಅನಿವಾರ್ಯವೂ ಅಪೇಕ್ಷಣೀಯವೂ ಆಗಿವೆ. ಸರಕು ಸಂಸ್ಕೃತಿಯ ಭೌತಿಕ ಸಂಪನ್ನತೆ, ಬೌದ್ಧಿಕ ಹೆಚ್ಚುಗಾರಿಕೆ, ಶುಷ್ಕ ತತ್ವೋಪದೇಶಗಳು ಬದುಕನ್ನು ಆರ್ದಗೊಳಿಸಲಾರವು. ಪ್ರೀತಿ ಎಂಬ ಎರಡಕ್ಷರಗಳೇ ಬದುಕಿನ ತಾರಕ ಮಂತ್ರ ಎನಿಸಬಲ್ಲವು. ಪ್ರೀತಿಯ ತುಡಿತವನ್ನು ಹೊಂದಿದ ಸಾಹಿತ್ಯ ಸದಾ ಜೀವಂತವಾಗಿರುತ್ತದೆ ಎಂಬುದಕ್ಕೆ ಈ ಸಂಕಲನವು ಸಾಕ್ಷಿಯಾಗಿದೆ. ಉಪದೇಶ, ಭಾಷಣ, ಘೋಷಣೆಗಳಿಂದ ಕೂಡಿದ ರಚನೆಗಳು ಇಲ್ಲಿದ್ದರೂ ಅವುಗಳಿಂದ ಹೊರತಾದ ಅಪ್ಪಟ ಕವಿತೆಗಳು ನಳನಳಿಸುತ್ತವೆ. ಈ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ಪು.ತಿ. ನರಸಿಂಹಾಚಾರ್ ಹೀಗೆನ್ನುತ್ತಾರೆ. “ಶ್ರೀಮತಿ ಮಾಲತಿಯವರು ನೈಜ ಕವಿ. ಅವರದು ಎಚ್ಚತ್ತಿರುವ ಹೃದಯ, ಹದಗೊಂಡ ಮಾತು, ಪ್ರತಿಮೆಗಳಿಂದ ಭಾವಗಳ ಸೊಗಡುಗಳನ್ನು ಎಬ್ಬಿಸುತ್ತಾ ಹೆಣೆದು ಗಾಢವಾಗಿ ಮಾಡುವ ಭಾವಗಾರಿಕೆಯ ಕಲೆಯನ್ನು ವಶಪಡಿಸಿಕೊಂಡಿದ್ದಾರೆ.”
ಬದುಕಿನ ಮುಖ್ಯ ಆಸರೆಯಾದ ಪ್ರೀತಿಗೆ ಆದ್ಯತೆಯನ್ನು ನೀಡುವ ಕವಿತೆಗಳಲ್ಲಿ ಪ್ರೀತಿಯ ವೈವಿಧ್ಯಮಯ ಮುಖಗಳಿವೆ. ಒಲವಿನ ಎಳೆಗಳಿಂದ ಸಂಬಂಧವನ್ನು ಬೆಸೆಯಲಾಗಿದೆ. ಪ್ರೀತಿಗಾಗಿ ಮಿಡುಕುತ್ತಾ ನಲ್ಲನಿಗಾಗಿ ಕಾತರಿಸುವ, ನೆನಪಿನ ದೋಣಿಯಲ್ಲಿ ಸಾಗುವ, ಕನಸಿನ ಮುಗಿಲಲ್ಲಿ ತೇಲುವ, ಹತಾಶೆಯಿಂದ ಚಡಪಡಿಸುವ, ನಿರೀಕ್ಷೆಯಲ್ಲಿ ಬೇಯುವ ನಲ್ಲೆಯ ಚಿತ್ರಗಳು ಎದುರಾಗುತ್ತವೆ. ಯಾವುದೇ ಹಳಹಳಿಕೆ ತಕರಾರುಗಳಿಲ್ಲದೆ ನಲ್ಲನನ್ನು ಕನವರಿಸುವ ಕವಿಯತ್ರಿಯು ಪ್ರೀತಿ, ಚೆಲುವು, ಮೌನ ಮತ್ತು ವಿರಹದ ಭಾವಗಳನ್ನು ಸೊಗಸಾಗಿ ಹೆಣೆದಿದ್ದಾರೆ. ಕಣ್ಣಿನಿಂದ ಮರೆಯಾದರೂ ಹೃದಯದಲ್ಲಿ ಉಳಿದುಕೊಂಡಿರುವ ವ್ಯಕ್ತಿಯನ್ನು ನೆನೆಯುತ್ತಾ ಒಲವಿನ ಮುಖಗಳನ್ನು ಹುಡುಕಾಡಿದ್ದಾರೆ. ಪ್ರಕೃತಿಯಲ್ಲೇ ಪ್ರೀತಿಯನ್ನೂ ಪ್ರೀತಿಸುವವರನ್ನೂ ಕಾಣುತ್ತಾ ಪ್ರಾಕೃತಿಕ ಸತ್ಯವೇ ಕಾವ್ಯ ಸತ್ಯವಾಗುವ ಬಗೆಯನ್ನು ಮನಗಾಣಿಸಿದ್ದಾರೆ. ತಾರುಣ್ಯದ ಸವಿಗನಸು, ಗಂಡುಹೆಣ್ಣಿನ ಪ್ರೇಮ – ವಿರಹಗಳಿಗೆ ಸಂಬಂಧಿಸಿದ ರಚನೆಗಳಲ್ಲಿ ಸಹಜವಾಗಿ ಕಂಡು ಬರುವ ಆಪ್ತವಾದ ಆತ್ಮನಿವೇದನೆ, ಏಕಾಂತದ ಪ್ರೇಮೋದ್ಗಾರಗಳು ಅಗಲಿಕೆಯ ಕಾವಿನಿಂದ ದೀಪ್ತವಾಗಿವೆ. ಸಾಮಾನ್ಯವಾಗಿ ಆರಂಭಿಕ ಸಂಕಲನಗಳಲ್ಲಿ ಕಂಡು ಬರಬೇಕಿದ್ದ ವಿಚಾರಗಳು ಮೂರನೇ ಸಂಕಲನದಲ್ಲಿ ಕಂಡುಬಂದಿರುವುದು ವಿಶೇಷ.
ಪ್ರೇಮಿಗಳ ಪೈಕಿ ಒಬ್ಬರು ಮೌನವಾದಾಗ ಸಾಂಗತ್ಯದ ತಂತು ತುಂಡಾಗುತ್ತದೆ. ಆತ್ಮನಿವೇದನೆಯಿಲ್ಲದ ಬಾಳು ದುರ್ಭರವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗುವ
ಮೌನ ಹುತ್ತಿನಲಿ ಮತ್ತೆ
ಏಕೆ ಹುದುಗಿಕೊಂಡಿರುತ್ತೀ
ಮೌನ ಧಾರೆಯ ಮೇಲೆ
ತೆವಳುತಿದೆ ಎನ್ನ ಮನ
ನನ್ನ ಭಾವದ ಪಕಳೆ
ಕತ್ತರಿಸಿಯೇ ಹೀಗೆ
ನೋಡಬೇಕೆ? (ಮಾತು ಸುಗಂಧಿ, ಪುಟ 8)
ಎಂಬ ಸಾಲುಗಳ ಮುಂದುವರಿಕೆಯೆಂಬಂತೆ ನೀರಸ ಬಾಳಿನಲ್ಲಿ ಪ್ರೀತಿಯ ಬಣ್ಣಗಳನ್ನು ತುಂಬಲು ಪ್ರಿಯಕರನನ್ನು ಅಹ್ವಾನಿಸುತ್ತದೆ.
ಬಣ್ಣ ತುಂಬದ ನನ್ನ ಚಿತ್ರ
ದಿ ಇಂದ್ರಧನುವಾಗಿ
ಹೊಮ್ಮು ಬಾ ಒಮ್ಮೆ
ನನ್ನ ಚಿತ್ರಕಾರ (ನನ್ನ ಚಿತ್ರಕಾರ, ಪುಟ 13)
ಪ್ರಪಂಚದ ಸೃಷ್ಟಿಗೆ ಮೂಲ ಪ್ರೇರಣೆಯಾದ ಪ್ರೀತಿಯ ನಿವೇದನೆಯು ‘ಹಂಬಲ’ದಲ್ಲಿದೆ. ಪ್ರೀತಿಯಿಲ್ಲದ ಬದುಕು ಅರ್ಥಹೀನವೇ ಸರಿ.
ಮರೆವು ಕೊಳ್ಳಕೆ ಇಳಿದು
ಮುಳುಗಿ ಕಳೆದು
ಹೋಗಬೇಡವೋ
ಮುದುಡಿಕೊಳ್ಳುತ್ತೇನೆ ಕಮಲಿನಿ
ಹುದುಗಿ ಹೋಗುತ್ತೇನೆ
ಕರಾಳ ಕಪ್ಪು ಕೆಸರಲ್ಲಿ
ಹುಗಿದು ಬಾಳ ಹೊಳೆ
ಹೊಳೆವ ಹಂಬಲ
ಪಳೆಯುಳಿಕೆಯಾಗಿಸಿ ಮತ್ತೆ
ಹೂಳಬೇಡವೋ ನನ್ನ ಸ್ಮೃತಿ
ಸತ್ತ ಗರ್ಭದಲ್ಲಿ (ಹಂಬಲ, ಪುಟ 1)
ಎಂದು ಬೇಡುವ ಸಾಲುಗಳು ಜೀವನಪ್ರೀತಿಯ ಅಂಗವಾಗಿ ಮೂಡಿ ಬಂದಿವೆ.
ಬಾಳ ಜಾತ್ರೆಯಲೊಮ್ಮೆ
ಸಂಧಿಸಿದ ಮಿತ್ರ ಸಣ್ಣದಲ್ಲವೋ ನಿನ್ನದೀ ಪಾತ್ರ
ಕಣ್ಣ ಕುಂಚಿಗೆ ಬಣ್ಣ ತುಂಬಿದೆ
ಬಿಂಬಿಸಿದೆ ತಿಳಿವು
ಕೆತ್ತಿರುವೆ ಧೈರ್ಯ ದುರ್ಗ ಈ
ಋಣಕಾಗಿ ಬರುವೆನೋ ಇನ್ನೊಂದು ಜನ್ಮವೆತ್ತಿ (ನನ್ನ ಹಾದಿಯಲ್ಲಿ, ಪುಟ 21)
ಬಾಳ ಕುಲುಮೆಯಲ್ಲಿ ನೊಂದು ಬೇಯುತ್ತಿದ್ದ ಸಂದರ್ಭದಲ್ಲಿ ಸಾಂತ್ವನದ ನೆರಳಾಗಿ ಬಂದ ಗೆಳೆಯನಿಗೆ ಕೃತಜ್ಞತೆಯನ್ನು ಸಲ್ಲಿಸುವಲ್ಲಿ ಪ್ರೀತಿಯ ಸೆಲೆಯೊಡೆದಿದೆ.
ನನ್ನಲ್ಲಿ ನೀ ಸುರಿದೆಯೊ
ನಿನ್ನಲ್ಲಿ ನಾ ಹರಿದೆನೊ
ಪರಿವೆ ಯಾರಿಗಿದೆ ಪ್ರೀತಿ
ಸಮಾಗಮದಲ್ಲಿ? (ತಂದೆ ಬದುಕು ಗುಲಾಬಿ, ಪುಟ 45)
ಎಂಬ ಪಂಕ್ತಿಗಳು ಪ್ರೀತಿಯ ಚರಮ ಸೀಮೆಯನ್ನು ಮುಟ್ಟಿದ ಬದುಕಿನ ಸಾರ್ಥಕ್ಯವನ್ನು ಬಣ್ಣಿಸುತ್ತವೆ. ‘ಬಾ ಪರೀಕ್ಷೆಗೆ’ ಮತ್ತು ‘ಗರಿಕೆದರಿ’ ಸಂಕಲನಗಳಲ್ಲಿ ಕಾಣಿಸಿದ್ದ ಬಿಗುಮಾನವು ಪ್ರೀತಿಯ ಮುಂದೆ ಕರಗಿ ಹೋಗಿದೆ.
ಕೆಲವು ಕವಿತೆಗಳು ಅಪ್ಪಟ ಸಾಮಾಜಿಕ ರಚನೆಗಳಾಗಿ ಕಂಗೊಳಿಸುತ್ತವೆ. ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾದರೂ ಹೆಣ್ಣಿನ ಮೇಲಿನ ದೌರ್ಜನ್ಯ ನಿಂತಿಲ್ಲ. ರಾಮ ರಾವಣ ಯುದ್ಧ ಮತ್ತು ಕುರುಕ್ಷೇತ್ರ ಯುದ್ಧವು ಹಣ್ಣಿನ ದೌರ್ಜನ್ಯಕ್ಕೆ ನೀಡಿದ ಪ್ರತ್ಯುತ್ತರಗಳಾಗಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ
ಓ ಇನ್ನು ನೋಯಬೇಕಿಲ್ಲ
ಕಾಯಬೇಕಿಲ್ಲ ಯುಗ ಸಂಭವನ ಬಾರಿ
ಪೌರುಷದಸಭ್ಯ ಜವಾಬುದಾರಿ
ಈಗ
ನನಗೆ ನಾನೇ ದಾರಿ
ನನ್ನ ಎತ್ತಿಕೊಳ್ಳುವ
ಅವತಾರಿ (ಸಂಭವಾಮಿ ಯುಗೆ, ಪುಟ 23)
ಎನ್ನುವ ಮೂಲಕ ರಾಮ ಕೃಷ್ಣರ ಬದಲು ಹೆಣ್ಣೇ ತನ್ನ ಉದ್ಧಾರವನ್ನು ಕೈಗೊಳ್ಳಬೇಕೆಂಬ ವಿಚಾರವನ್ನು ಪ್ರತಿಪಾದಿಸುತ್ತದೆ.
ದೇವರು ಮತ್ತು ಧರ್ಮದ ಹೆಸರಿನಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. 1829ರಲ್ಲಿ ಸತಿ ಪದ್ಧತಿಯನ್ನು ನಿಲ್ಲಿಸಿದ್ದರೂ 1987ರಂದು ರಾಜಸ್ಥಾನದಲ್ಲಿ ರೂಪ ಕನ್ವರ್ ಎಂಬ ಹದಿಹರೆಯದ ಯುವತಿಯು ಸತಿ ಹೋಗುವ ಮೂಲಕ ಈ ಕ್ರೂರ ಪದ್ಧತಿಯು ಮತ್ತೆ ಜೀವವನ್ನು ತಳೆದಿತ್ತು. 21ನೇ ಶತಮಾನಕ್ಕೆ ಕಾಲಿಡಲು ಹೊರಟಿದ್ದ ಸಂದರ್ಭಲ್ಲಿಯೂ ಮಹಿಳೆಯೊಬ್ಬಳನ್ನು ಗಂಡನ ಚಿತೆಗೆ ಬಲವಂತವಾಗಿ ತಳ್ಳಿದ್ದು, ಹಲವರು ಅದನ್ನು ಸಮರ್ಥಿಸಿದ್ದು, ರಾಜಕಾರಣಿಗಳು ಅದನ್ನು ಖಂಡಿಸಿ ಹೇಳಿಕೆ ನೀಡಲು ಮೀನಮೇಷ ಎಣಿಸಿ, ಅಡ್ಡಗೋಡೆಗೆ ದೀಪವಿಟ್ಟಂತೆ ಮಾತನಾಡಿದ್ದು, ಕೊಲೆ ನಡೆದ ಆ ಜಾಗದಲ್ಲಿ ಗುಡಿ ಕಟ್ಟಿ ಪೂಜೆ ಮಾಡಿದ್ದು, ದೆಹಲಿಯ ಮಹಿಳಾ ಸಂಘಟನೆಗಳ ಹೋರಾಟಕ್ಕೆ ಮಣಿದ ಭಾರತದ ಸಂಸತ್ತು ಸತಿ ಪದ್ಧತಿಯನ್ನು ತಡೆಯುವ ಉದ್ದೇಶದಿಂದ 1988ರಲ್ಲಿ ‘ಸತಿ (ತಡೆಗಟ್ಟುವಿಕೆ) ಕಾಯಿದೆ’ಯನ್ನು ಜಾರಿಗೆ ತಂದದ್ದು ಎಲ್ಲವೂ ಈಗ ಇತಿಹಾಸ.
ನಮ್ಮ ದೇಶದ ಸಂಸ್ಕೃತಿ, ಪರಂಪರೆಗಳ ಹಿನ್ನೆಲೆಯಲ್ಲಿ ಭಾರತೀಯ ಮಹಿಳೆಯರ ವಿವಾಹವು ಅಗ್ನಿಪರೀಕ್ಷೆಯಂತಿದೆ. ಶತಮಾನಗಳಿಂದ ಮಹಿಳೆಯರು ಅನುಭವಿಸುತ್ತಾ ಬಂದ ಯಾತನೆಯ ಚಿತ್ರವು ಮಾಲತಿ ಪಟ್ಟಣಶೆಟ್ಟಿಯವರ ‘ಸಹಗಮನ’ದಲ್ಲಿದ್ದರೆ ಆಧುನಿಕ ಯುಗದಲ್ಲಿ ಇನ್ನೂ ಉಳಿದಿರುವ ಈ ಅನಿಷ್ಟ ಸಂಪ್ರದಾಯವು ದೇಶದ ಬೆಳವಣಿಗೆಗೆ ಮಾರಕವಾಗಿದೆ. ರೂಪಾ ಕನ್ವರ್ ಸಹಗಮನ ಮಾಡಬೇಕಾಗಿ ಬಂದ ಪರಿಸ್ಥಿತಿಯ ವಿರುದ್ಧ
ಓ ಮುಗ್ಧ ರೂಪ
ಕನ್ವರ ಸತ್ತಿಲ್ಲ ನೀನೀಗ
ಎಚ್ಚೆತ್ತೆ ಇಲ್ಲಿ ನಮ್ಮೊಳಗೆ
ವಿದಗ್ಧ ಆತ್ಮದ ಮಗಳೆ
ನಿನ್ನ ಅಸ್ಥಿಯ ಲೇಖನಿ ನಮ್ಮ ಕಂಬನಿಯಲದ್ದಿ
ಬರೆಯುತ್ತೇವೊಂದು ಹಣೆ
ಬರಹ ಇತಿಹಾಸಕೆ ಹೀಗೆ
ಬಳಿಕ ಮತ್ತೆ ಹುಟ್ಟಲಿಲ್ಲ
ಸತಿಗೆ ಕುವರಿಯೊಬ್ಬಳ
ಹುಟ್ಟಡಗಿಸ ಬಂದರವರು
ಶಕುನಿ ದುಃಶಾಸನರ ಕಾಲ
ಚಕ್ರ ಬೆರಳಲಿ ಅಭಯ
ತೊಟ್ಟ ಅಗ್ನಿಪುತ್ರಿಯರು (ಅಭಯ, ಪುಟ 40-41)
ಎಂಬ ಸಂಕಲ್ಪವನ್ನು ತೊಡುತ್ತದೆ. ಇಲ್ಲಿ ‘ಅಗ್ನಿಪುತ್ರಿಯರು’ ಎಂಬ ಪದವು ಕಾಣದ ಬೆಂಕಿಯಲ್ಲಿ ಬೇಯುತ್ತಿರುವ ವರ್ಗದ ಪ್ರತೀಕವಾಗಿ ಮೂಡಿ ಬಂದಿದೆ.
ಹೆಣ್ಣಿನ ಏಳಿಗೆಯನ್ನು ತಡೆಯಲು ಅದೆಷ್ಟೋ ನಿಯಮಗಳನ್ನು ರೂಪಿಸಿಕೊಂಡಿರುವ ಸಮಾಜಕ್ಕೆ ಆಕೆಯನ್ನು ಹಿಂಸಿಸಿದಷ್ಟೂ ನೆಮ್ಮದಿಯಿಲ್ಲ. ಒಂದೊಂದು ಧರ್ಮಕ್ಕೆ ಒಂದೊಂದು ನಿಯಮ. ಉದ್ದೇಶ ಒಂದೇ. ಹೆಣ್ಣು ತಲೆಯೆತ್ತಬಾರದು. ಆಧುನಿಕ ಶಿಕ್ಷಣವು ಜನಮನದಲ್ಲಿ ಬೇರೂರಿದ ಮೂಢನಂಬಿಕೆಗಳನ್ನು ಕಿತ್ತೆಸೆಯುವಲ್ಲಿ ಸೋತಿದೆಯೇ ಎಂಬ ಪ್ರಶ್ನೆ ಮೂಡಿದರೆ ಅಚ್ಚರಿಯಿಲ್ಲ. ರೂಪ ಕನ್ವರಳ ಸಾವು ಲೇಖಕಿಯನ್ನು ಕ್ರಾಂತಿಗೆ ಪ್ರಚೋದಿಸಿದಂತೆ ಇಲ್ಲಿನ ಕೆಲವು ಕವಿತೆಗಳ ಸಂವೇದನೆಗಳು ಓದುಗರನ್ನು ವ್ಯವಸ್ಥೆಯ ವಿರುದ್ಧ ಬಂಡೇಳಿಸಬಲ್ಲವು.
ದೇಶಕ್ಕೆ ಬಂದ ಬಿಡುಗಡೆಯನ್ನು ಸ್ವಾರ್ಥ, ಲಾಲಸೆಗಳಿಗೆ ಬಳಸುತ್ತಾ ಶೋಷಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ‘ಸ್ವಾತಂತ್ರ್ಯ’ ಎಂಬ ಕವಿತೆಯು ವ್ಯಂಗ್ಯವಾಡುತ್ತದೆ. ಹೊರಗಿನ ಶಕ್ತಿಗಳಿಂದ ನಾಡು ಸ್ವತಂತ್ರವಾದರೂ ಒಳಗಿನ ಸ್ವಾರ್ಥ ಶಕ್ತಿಗಳ ಕೈಗೆ ಸಿಲುಕಿ ನಲುಗುವ ವಿದ್ಯಮಾನವನ್ನು ಕವಯತ್ರಿಯು ಮರದ ಪ್ರತೀಕದ ಮೂಲಕ ಮಾರ್ಮಿಕವಾಗಿ ವಿವರಿಸಿದ್ದಾರೆ. ಅಜ್ಜನು (ಗಾಂಧೀಜಿ ಮೊದಲಾದ ಹಿರಿಯರು) ತನ್ನ ಹೃದಯವನ್ನೇ ಕಸಿಮಾಡಿ ಸಸಿಯನ್ನು (ಸ್ವಾತಂತ್ರ್ಯ) ನೆಟ್ಟಿದ್ದಾರೆ. ಯೋಧರು ತಮ್ಮ ನೆತ್ತರು ಸುರಿದು (ಬಲಿದಾನ) ಅದನ್ನು ಬೆಳೆಸಿದ್ದಾರೆ. ಆದರೆ ಮಿಕ್ಕವರು (ರಾಜಕಾರಣಿಗಳು) ಫಲವನ್ನು ತಿಂದು ಹೋಗುತ್ತಾರೆ.
ನಮ್ಮ ಕಣ್ಣು ತೆರೆದಾಗ
ಏನಿತ್ತು ಇಲ್ಲಿ
ಬಟ್ಟ ಬಯಲಿತ್ತು, ನಟ್ಟ ನಡುವಿತ್ತು ಒಣ
ವೃಕ್ಷ, ಸುತ್ತಿ ದಾಯಾದಿ ಮುಳ್ಳುಬೇಲಿ
ಕೊನರಿಗೊಂದೊಂದು ಗುದ್ದಲಿ
ಬೇರಿನಾಳವ ನುಂಗುವ ಗೆದ್ದಲಿ
ಬೇಲಿ ಹಾರಲು ಕಾಯ್ದ ಕೆಂಗಣ್ಣ ಗೂಳಿ (ಪುಟ 6)
ನಾಡಿನ ಜ್ವಲಂತ ವಿದ್ಯಮಾನಗಳನ್ನು ಒಣವೃಕ್ಷ (ಬರಡಾದ ಬದುಕು) ಮುಳ್ಳುಬೇಲಿ (ಮತಧರ್ಮಗಳ ಆಧಾರದಲ್ಲಿ ವಿಭಜನೆ) ಗುದ್ದಲಿ (ಬದುಕಿನ ಎಲ್ಲ ರಂಗದಲ್ಲಿ ಚಿಗುರುವ ಪ್ರತಿಭೆಗಳ ನಾಶ) ಗೆದ್ದಲು (ಬದುಕಿನ ಮೂಲವನ್ನು ನಾಶಗೊಳಿಸುವ ಸಾಮಾಜಿಕ ಸಮಸ್ಯೆಗಳು) ಮತ್ತು ಬೇಲಿ ಹಾರುವ ಗೂಳಿ (ಗಡಿಯನ್ನು ಮೀರಿ ಬರುವ ಭಯೋತ್ಪಾದಕರು) ಮುಂತಾದ ಪ್ರತಿಮೆಗಳ ಸಹಯೋಗದಿಂದಾಗಿ ಕ್ರಿಯೆಯು ಸಾವಯವ ರೂಪವನ್ನು ತಳೆದಿದೆ. ಕವಿತೆಯು ಏಕಮುಖಿಯಾಗದೆ, ಅನುಭವವನ್ನು ಅದರ ಸಮಗ್ರತೆಗೆ ಊನ ಬಾರದಂತೆ ಗ್ರಹಿಸಲು ಯತ್ನಿಸುತ್ತದೆ. ಸಾಯುತ್ತಿರುವ ಮರದ ಕೊಂಬೆಗಳಲ್ಲಿ ಮಿಡಿಗಳಾದರೂ ಇವೆಯೇ ಎಂದು ಹುಡುಕುವ ಹಕ್ಕಿಗಳ (ಯುವ ತಲೆಮಾರು) ಚಿತ್ರಣವು ಈ ದುಸ್ಥಿತಿಯ ಆತ್ಯಂತಿಕ ರೂಪವಾದರೆ ‘ಮೋಡಕಾ ಬಜಾರು’ ಇದರ ವಿಸ್ತೃತ ರೂಪವಾಗಿದೆ. ಒಂದರ ಹಿಂದೆ ಒಂದರಂತೆ ಪ್ರಯೋಗಗೊಳ್ಳುವ ಮರುಕದಂಗಡಿ, ಮುರುಕು ಬಜಾರ, ಹಾಳೂರರಮನೆ, ಒಡೆದ ಕನ್ನಡಿ ಚೂರು ಮುಂತಾದ ಪ್ರತಿಮೆಗಳು ಛಿದ್ರಗೊಂಡ ಬದುಕು, ನೋವಿನ ಆಳ ಮತ್ತು ತೀವ್ರತೆಯನ್ನು ಸಮರ್ಥವಾಗಿ ಪ್ರಕಟಿಸುತ್ತವೆ.
ಒಡಕು ತೊಡಕುಗಳನ್ನು
ಒಡಲು ಮಕ್ಕಳ ನಯದಿ
ಕುಶಲ ಕರ್ಮಿಯ ತೆರದಿ
ಶ್ರಮಿಸುತ್ತ
ರಮಿಸುತ್ತ
ಭ್ರಮಿಸುತ್ತದೊಂದು ಭವಿಷ್ಯ ಸೇತುವೆ (ಪುಟ 15)
ಮೋಸ ವಂಚನೆಗಳಿಗೆ ಬಲಿಯಾಗಿ ಚಲ್ಲಾಪಿಲ್ಲಿಯಾದ ಬದುಕನ್ನು ಮತ್ತೆ ಕಟ್ಟುವ ಆಶಾವಾದಿ ಬೆಳವಣಿಗೆಯನ್ನು ಇಲ್ಲಿ ಕಾಣುತ್ತೇವೆ.
ನಿಸರ್ಗ ಉಳಿಯದಿದ್ದರೆ ಮನುಷ್ಯನಿಲ್ಲ. ಆತನ ಒಳ್ಳೆಯ ಮತ್ತು ಕೆಟ್ಟ ಚಟುವಟಿಕೆಗಳು ಪ್ರಕೃತಿಯ ಮೇಲೆ ಕೇಂದ್ರೀಕೃತವಾಗಿದೆ. ಪ್ರಕೃತಿಯ ನಾಶದಿಂದ ನಾಗರಿಕತೆ ಕುಸಿಯುವ ದುರಂತ ಕಣ್ಮುಂದೆ ಇದೆ. ‘ವಸಂತ ವೇದನ’ವು
ಯುಗವು ಬರುವುದೆ? ಯುಗಾದಿ ಬರುವುದೆ
ಪ್ರಕೃತಿಗೆ ನೆಲೆಯಿಲ್ಲದೆ
ಮನುಜ ಉಳಿವನೆ
ಮಾನವತೆ ಬೆಳೆವುದೆ
ಸೃಷ್ಟಿಯ ತುಳಿದವನಿಗೆ? (ಪುಟ 17)
ಎಂಬ ಆತಂಕವನ್ನು ಹೊರಹಾಕಿದರೆ
ಹೂ ಬೆಳೆವ ತೋಟಿಗರು
ವಿಷಬೀಜ ಬಿತ್ತಿಹರು
ವಸಂತಕ್ಕೆ ಕಾಯ್ದಿಹರ
ಚೆಂಡಾಡಿ ಇಂಥವರ
ರುಂಡಮಾಲೆಯ ಧರಿಸಿ
ತಾಯ ಮಂಡೆಗೆ ಹೂ
ತರುವ ಕುವರ ಬೇಕು (ಪುಟ 26)
ಎಂದು ‘ಹೂ ತರುವವರು’ ಪರಿಹಾರವನ್ನು ಸೂಚಿಸುತ್ತದೆ.
ಮಳೆಯ ಸೆಳಕನ್ನು ‘ಸತ್ತ ಗಂಡನ ಹೆಣಕ್ಕೆ ಅತ್ತ ಬಾಯಿ ಸತ್ತ ಹೆಂಡತಿಗೆ’, ಗುಡುಗನ್ನು ಒಳಗುದಿಗೆ, ಎದೆಯನ್ನು ಸೀಳಿ ಹೊರನುಗ್ಗುವ ಮಿಂಚನ್ನು ನೋವಿಗೆ, ಮರೆಯಲು ಯತ್ನಿಸಿದಷ್ಟೂ ಮರಳಿ ಬರುವ ಅಳುವನ್ನು ಮಳೆಗೆ ಹೋಲಿಸಿದ ‘ಮೃಗಶಿರ’ದ ರೀತಿಯು ಕನ್ನಡಕ್ಕೇ ಹೊಸತು. ಇದರ ಮುಂದುವರಿಕೆಯಂತಿರುವ ‘ನಮ್ಮ ಹಾಡು’ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಶೋಷಿತಳಾದ ಮಹಿಳೆಯು ತನ್ನ ನೋವುಗಳನ್ನು ತೋಡಿಕೊಳ್ಳುವ ರೀತಿಯ ಸಂವಿಧಾನವನ್ನು ಒಳಗೊಂಡಿದೆ.
ನನ್ನ ಕನಸು ಕಲ್ಪನೆಗಾಗಿ
ಬುದ್ಧಿ ಭಾವನೆಗಾಗಿ
ಆತ್ಮಗೌರವಕ್ಕಾಗಿ
ನನಗಾಗಿ ನಾನಾಗಿ
ಇರಲೇಬೇಕು (ಪುಟ 18)
ತುಳಿತಕ್ಕೊಳಗಾದ ಹೀನ ಸ್ಥಿತಿಯಿಂದ ಮೇಲೆದ್ದು ಆತ್ಮಗೌರವದಿಂದ ಬಾಳುವತ್ತ ಹೆಜ್ಜೆಯಿಡುವ ನಿರ್ಧಾರ ಇಲ್ಲಿ ವ್ಯಕ್ತವಾಗುತ್ತದೆ.
ನಿಟ್ಟುಸಿರು ಬರ್ಚಿಗಳು ಮೈತುಂಬ ನೆಟ್ಟಾವ
ಸಹನೆ ಬಂಡೆದ್ದಾವ
ನೆಟ್ಟ ಮಾತಿನ ಕೈಗೆ ಖಡ್ಗ ಕೊಡಿರೊ (ಬೆಳಗು, ಪುಟ 27)
ಈ ಸಾಲುಗಳು ಖಡ್ಗವಾಗಲಿ ಕಾವ್ಯ ಎಂಬ ಆಶಯವನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸಿದರೆ,
ನೋವುಗಳು ಸುಟ್ಟ ನೂರಾರು ಬನದಲ್ಲೂ
ಸಾವಿರ ಮೈಲಿಗೆಗಣ್ಣು ಬೆಳದಿಂಗಳೆಲ್ಲೆಲ್ಲೂ (ಗಜಲ್, ಪುಟ 24)
ಎನ್ನುತ್ತವೆ ಇತರ ಸಾಲುಗಳು. ಪರಸ್ಪರ ವಿರುದ್ಧ ಭಾವನೆಗಳು ಇವರ ಕವಿತೆಗಳಲ್ಲಿ ಹೇಗೆ ತುಂಬಿಕೊಂಡವು? ಎಂದು ಯೋಚಿಸಿದರೆ ‘ಸ್ವಯಂಸಿದ್ಧಾ’ದಲ್ಲಿ ಅದಕ್ಕೆ ಉತ್ತರ ಸಿಗುತ್ತದೆ.
ಮುಳ್ಳು ನಟ್ಟರೆ ಮೋಸವಾಗದು
ಹೂವು ನಟ್ಟಿವೆ ಒಳಗೆ ನಂಬುವಿರಾ ನೀವು (ಪುಟ 39)
ತಮ್ಮ ಮೊದಲ ಸಂಕಲನವಾದ ‘ಬಾ ಪರೀಕ್ಷೆ’ಯಲ್ಲಿ ಉತ್ತೀರ್ಣರಾದ ಬಳಿಕ ‘ಗರಿಕೆದರಿ’ದ ಅವರ ಕಾವ್ಯಪಕ್ಷಿಯು ‘ತಂದೆ ಬದುಕು ಗುಲಾಬಿ’ ಮೂಲಕ ಗಮನಾರ್ಹ ಮಜಲನ್ನು ಮುಟ್ಟಿದೆ. ಮಾತಿನಾಚೆಗಿನ ಮೌನವನ್ನು ದಾಖಲಿಸುವುದರಲ್ಲಿ ಯಶಸ್ವಿಯಾದ ಕವಯತ್ರಿಯು ಪ್ರೀತಿ ಪ್ರೇಮ ಪ್ರಣಯಗಳ ಸುತ್ತ ಸುಳಿಯದೆ, ಸಾಮಾಜಿಕ ರಾಜಕೀಯ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ನಿರ್ದಿಷ್ಟ ಜಾತಿಮತಗಳ ವಿರುದ್ಧ ಕೂಗಾಡದೆ, ಅನುಭವಿಸಿದ ನೋವನ್ನು ವ್ಯಕ್ತಪಡಿಸಿದ್ದಾರೆ. ಗಂಡಸರನ್ನು ಶೋಷಕರೆಂದು, ಹೆಂಗಸರನ್ನು ಶೋಷಿತರೆಂದು ಯೋಚಿಸಿ ಅಭ್ಯಾಸವಾಗಿರುವ ಹೊತ್ತಿನಲ್ಲಿ ಶೋಷಣೆಗೆ ಗಂಡು ಹೆಣ್ಣು ಮತ್ತು ಜಾತಿಮತಗಳ ಭೇದವಿಲ್ಲವೆಂದು ಪ್ರತಿಪಾದಿಸುವ ಈ ಸಂಕಲನವು ಕಾವ್ಯಾಸಕ್ತರಿಗೆ ಹೊಸ ಹಾದಿಯನ್ನು ತೋರಿಸುತ್ತದೆ.
