‘ಸುಳ್ಳೇ ನಮ್ಮನೆ ದೇವರು’ ಇದು ಕೆ.ವಿ. ಭಟ್ ಕುದಬೈಲ್ ಇವರ ಇತ್ತೀಚಿನ ನಾಟಕ ಕೃತಿ. ಇದೊಂದು ವಿಡಂಬನಾತ್ಮಕ ಸರಳ ಸುಂದರ ನಾಟಕ. ನಮ್ಮ ವರ್ತಮಾನದ ಬದುಕು ಹಿಡಿದಿರುವ ದಾರಿ, ಪತನಮುಖಿ ಸಮಾಜ ಸಂಸ್ಕೃತಿ, ಮಾತು ಕೃತಿಗಳ ನಡುವೆ ಎದ್ದು ಕಾಣುವ ವಿರೋಧಾಭಾಸ, ಸಾಂಪ್ರತ ಜೀವನಶೈಲಿ, ನಿರುದ್ಯೋಗ, ಭ್ರಷ್ಟಾಚಾರ, ಸಂಶಯ ಪ್ರವೃತ್ತಿ ಮೊದಲಾದ ಅಂಶಗಳು ಇಲ್ಲಿ ವೈನೋದಿಕ ನೆಲೆಯಲ್ಲಿ ಜಿಜ್ಞಾಸೆಗೊಳಗಾಗಿವೆ.
ಈ ನಾಟಕದಲ್ಲಿ ಎದ್ದು ಕಾಣುವುದು ಹಾಸ್ಯ ಪ್ರಜ್ಞೆ, ವ್ಯಂಗ್ಯ ದೃಷ್ಟಿ ಹಾಗೂ ವಿಚಾರ ಪರತೆ. ವಿಡಂಬನೆಯ ಮೂಲಕ ಸಮಕಾಲಿನ ಸಮಾಜದ ಆಗುಹೋಗುಗಳನ್ನು ವಿಶಿಷ್ಟವಾಗಿ ಇಲ್ಲಿ ವಿಶ್ಲೇಷಣೆಗೆ ಗುರಿಪಡಿಸಲಾಗಿದೆ. ಮೇಲುನೋಟಕ್ಕೆ ಇದು ಹಾಸ್ಯ ಪ್ರಧಾನ ನಾಟಕ ಅನಿಸಿದರೂ ಆಳದಲ್ಲಿ ಗಂಭೀರ ಚಿಂತನೆ ಇರುವುದನ್ನು ನಾವು ಕಾಣಬಹುದಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ನಡೆಯುವ ನಾನಾ ಪ್ರಸಂಗಗಳಿಗೆ ಹಾಸ್ಯದ ಲೇಪ ನೀಡಿ ಸಮಾಜದ ವಿಡಂಬನೆಯ ಜತೆಗೆ ಮನರಂಜನೆಯನ್ನು ನೀಡುವಲ್ಲಿ ಈ ನಾಟಕ ಯಶಸ್ವಿಯಾಗಿದೆ. ಇಲ್ಲಿ ಲೇಖಕರ ಚಿಕಿತ್ಸಕ ದೃಷ್ಟಿಕೋನ ಎದ್ದು ಕಾಣುತ್ತದೆ
ಈ ನಾಟಕ ಬದುಕಿಗೆ ಸಂಬಂಧಪಟ್ಟ ಗಂಭೀರವಾದ ಪ್ರಶ್ನೆಯಿಂದಲೇ ಆರಂಭವಾಗುತ್ತದೆ. “ಈಗ ಒಂದು ತಿಂಗಳಿಂದ ನಾನು ನಮ್ಮೂರ ಪೇಟೆಯನ್ನು ಸುತ್ತಾಡಿದೆ, ಕೋರ್ಟು-ಕಚೇರಿ ಸುತ್ತುವರಿದು ಬಂದೆ, ಸಂಘ-ಸಂಸ್ಥೆಗಳ ಜೊತೆಗೆ ವ್ಯವಹಾರವನ್ನು ಮಾಡಿದೆ, ರಾಜಕೀಯ ವ್ಯಕ್ತಿ, ಪದಾಧಿಕಾರಿಗಳ ಜೊತೆ ಮಾತಾಡಿದೆ, ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುವವರನ್ನು ನೋಡಿದೆ. ವಿವಿಧ ವ್ಯಾಪಾರಿಗಳಿಂದ ನನಗೆ ಬೇಕಾದ ಸಾಮಾನುಗಳನ್ನು ಖರೀದಿಸಿದೆ. ಎಲ್ಲಿ ನೋಡಿದರಲ್ಲಿ ಮೋಸ, ವಂಚನೆ, ಸುಳ್ಳು. ಪ್ರತಿಯೊಬ್ಬರೂ ತಮ್ಮ ಸ್ವಾರ್ಥಕ್ಕಾಗಿ ಬೆಳಗಿನಿಂದ ಸಂಜೆಯವರೆಗೆ ಹೇಳುವುದೇ ಸುಳ್ಳು! ಸತ್ಯಕ್ಕೆ ಬೆಲೆಯೇ ಇಲ್ಲ. ಭಗವದ್ಗೀತೆ ಹಿಡಿದು ಸುಳ್ಳು ಹೇಳ್ತಾರೆ. ದೇವರ ಭಯವೂ ಇಲ್ಲ. ಇಂಥವರ ಮಧ್ಯ ನಾವು ನಮ್ಮ ಮುಂದಿನ ಜೀವನವನ್ನು ಹೇಗೆ ಕಳೆಯುವುದೋ? ಎಂಬ ಉದ್ಗಾರವು ಕೇಳಿ ಬಂದಿದೆ. ನ್ಯಾಯ ನೀತಿ ಮರೆಯಾಗಿ ಅಪ್ರಾಮಾಣಿಕತೆ ಹೆಚ್ಚು ತಿರುವುದಕ್ಕೆ ವಿಷಾದವೂ ವ್ಯಕ್ತವಾಗಿದೆ. ಸುಳ್ಳನ್ನೇ ಬಂಡವಾಳವಾಗಿ ಮಾಡಿಕೊಂಡು ಬದುಕುವವರ ಮುಖವಾಡವೂ ಇಲ್ಲಿ ಬಯಲಾಗಿದೆ.
ಸತ್ಯಮೇವ ಜಯತೆ, ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬುದು ಬಲ್ಲವರ ಮಾತು. ಇದೊಂದು ಭಾವಪ್ರಧಾನ ನಾಟಕ. ಕಳೆದು ಹೋದ ಸಂಸ್ಕೃತಿಯ ಮೌಲ್ಯಗಳನ್ನು ಕಟ್ಟಿಕೊಡುವ ಪ್ರಧಾನ ಆಶಯ ಈ ನಾಟಕದ್ದಾಗಿದೆ. ಹಾಸ್ಯ, ವಿನೋದ ಅಲ್ಲಲ್ಲಿ ಸಹಜ ಸೆಲೆಯಂತೆ ಚಿಮ್ಮಿದೆ. ಜನಪದ ರಂಗತಂತ್ರಗಳ ಬಳಕೆ ಗಮನೀಯ ಸಂಗತಿ. ಏಕ ಕಾಲಕ್ಕೆ ಇತಿಹಾಸ, ಪುರಾಣ, ವರ್ತಮಾನದ ಸ್ಪರ್ಶ ಇವೆಲ್ಲ ಪ್ರಸಕ್ತ ನಾಟಕದಲ್ಲಿ ನೆಲೆ ಪಡೆದು ವಿಮರ್ಶೆಗೆ ಈಡಾಗಿರುವುದು ವಿಶೇಷ.
ಸರಳವಾದ ಪಾತ್ರಗಳ ರಚನೆ, ಲವಲವಿಕೆಯ ಸಂಭಾಷಣೆ, ಹಿತಮಿತವಾದ ಹಾಡುಗಳ ಬಳಕೆ ಭಟ್ ಅವರ ನಾಟಕಗಳ ಸಾಮಾನ್ಯ ಲಕ್ಷಣ. ಹೇಳೋದೆಲ್ಲ ಕಾಶಿಕಾಂಡ ತಿನ್ನೋದೆಲ್ಲ ಮಶಿಗೆಂಡ, ಮನೇಲಿ ಗದ್ಲ ಅಂತ ಮಂಜುಗುಣಿ ಜಾತ್ರೆಗೆ ಹೋದ್ನಂತೆ ಹೀಗೆ ವಿಶೇಷವಾದ ಗಾದೆ ಮಾತುಗಳು ನುಡಿಗಟ್ಟುಗಳು ಹಾಳತವಾಗಿ ಬಳಕೆಯಾಗಿವೆ. ಈ ನಾಟಕದ ಶೀರ್ಷಿಕೆ ಸಹ ಧ್ವನಿ ಪೂರ್ಣವಾಗಿದೆ. ಸುಳ್ಳೇ ಅಲ್ಲ ಅಲ್ಲ ಸತ್ಯ. ಸುಳ್ಳಿನ ಜಾಡು ಹಿಡಿದು ಸತ್ಯವನ್ನು ಪ್ರತಿಷ್ಠಾಪಿಸಲಾಗಿದೆ.
“ಸುಳ್ಳು, ಮೋಸ, ವಂಚನೆಯಿಂದ ತುಂಬಿದ ನಮ್ಮೂರ ಜನರನ್ನು ಸುಳ್ಳಿನಿಂದಲೇ ಬಗ್ಗಿಸಬೇಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು” ಎಂಬ ಆಶಯ ಇಲ್ಲಿ ನೆರವೇರಿದೆ. ಆದರೆ ದ್ವೇಷ ಭಾವನೆ ಇಲ್ಲಿ ಇಲ್ಲ ಎಂಬುದು ಅವಲೋಕನೀಯ ಅಂಶ.

ವಿಮರ್ಶಕರು : ಪ್ರೊ. ಜಿ.ಎನ್. ಉಪಾಧ್ಯ ಮುಂಬೈ
ಸುಳ್ಳೇ ನಮ್ಮನೆ ದೇವರು (ನಾಟಕ)
ಕೆ.ವಿ. ಭಟ್, ಕುದಬೈಲ
ಶ್ರೀರಾಮ ಪ್ರಕಾಶನ,ಮಂಡ್ಯ
ಬೆಲೆ ರೂ.150/-
94489 30173
