ಮಂಗಳೂರು : ಡಾ. ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ನೀಡುವ 2025ರ ಸಾಲಿನ ಶೇಣಿ ಪ್ರಶಸ್ತಿಗೆ ಹಿರಿಯ ತಾಳಮದ್ದಳೆ ಅರ್ಥದಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ತಿಳಿಸಿದ್ದಾರೆ. ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಬಂಟ್ವಾಳ ತಾಲೂಕಿನ ಮೂಡಂಬೈಲಿನ ಹೆಸರಾಂತ ಚಕ್ರಕೋಡಿ ಮನೆತನದಲ್ಲಿ 1936ರಲ್ಲಿ ಜನಿಸಿದರು. ಕೈಕೆಯಿ, ಅಂಬೆ, ದೌಪದಿ, ತಾರೆ, ಸೀತೆ, ಮಂಡೋದರಿ, ಕಯಾದು ಮೊದಲಾದ ಸ್ತ್ರೀಪಾತ್ರಗಳಿಂದ ಪ್ರಸಿದ್ದರಾಗಿದ್ದಾರೆ.
ಟ್ರಸ್ಟ್ ವತಿಯಿಂದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ದಿನಾಂಕ 25 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ.30,000/- ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್ ದೀಪ ಪ್ರಜ್ವಲನೆ ಮಾಡಲಿದ್ದು, ಶೇಣಿ ಗೋಪಾಲಕೃಷ್ಣಭಟ್ ಚಾರಿಟೆಬಲ್ ಟ್ರಸ್ಟ್ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಶುಭಾಶಂಸನೆ ಮಾಡುವರು. ಹಿರಿಯ ಲೆಕ್ಕಪರಿಶೋಧಕ ಸಿ.ಎ. ಶ್ಯಾಮ ಭಟ್, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಉದ್ಯಮಿ ಶಿವಪ್ರಸಾದ ಪ್ರಭು ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 3-30ರಿಂದ ಹರಿದಾಸ ಮಂಜುಳಾ ಜಿ. ರಾವ್ ಇರಾ ಇವರಿಂದ ಹರಿಕಥೆ ಪ್ರಸ್ತುತಗೊಳ್ಳಲಿದೆ.
