ಉಡುಪಿ : ಸಾಹಿತಿ, ನಾಟಕಕಾರ, ರಂಗನಟ, ದೊಡ್ಡಣಗುಡ್ಡೆ ನಿವಾಸಿ ಪ್ರೊ. ರಾಮದಾಸ್ (86) ಇವರು ದಿನಾಂಕ 23 ಡಿಸೆಂಬರ್ 2025ರ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ ಅವರು ಉಡುಪಿಯ ಸಾಂಸ್ಕೃತಿಕ, ಸಾಹಿತ್ಯ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಉಡುಪಿ ರಂಗಭೂಮಿಯ ಮುಖ್ಯ ಕಲಾವಿದರಾಗಿ ವೀರ ಪುರೂರವ, ಸಂಕ್ರಾಂತಿ, ಹರಕೆಯ ಕುರಿ, ಧರ್ಮಚಕ್ರ, ಸಾಕ್ಷಾತ್ಕಾರ ನಾಟಕ ಹಾಗೂ ಸದಾನಂದ ಸುವರ್ಣ ನಿರ್ದೇಶನದ ಗುಡ್ಡೆದ ಭೂತ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ತಲೆದಂಡ, ನಾಯಿಕತೆ, ಸೂರ್ಯ ಶಿಕಾರಿ ನಾಟಕ ನಿರ್ದೇಶನ ಮಾಡಿದ್ದರು. ಸಾಕ್ಷಾತ್ಕಾರ ನಾಟಕ ಕೃತಿಗೆ ಕರ್ನಾಟಕ ನಾಟಕ ಅಕಾಡೆಮಿಯ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿತ್ತು. ಸಂಕ್ರಾಂತಿ ನಾಟಕದ ಉಜ್ಜ, ಸೂರ್ಯ ಶಿಕಾರಿಯ ರಾಜ, ಹರಕೆಯ ಕುರಿ ನಾಟಕದ ರಾಜಕಾರಣಿ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 7 ಕವನ ಸಂಕಲನ, 3 ಕಾದಂಬರಿ, 15 ಏಕಾಂಕ ನಾಟಕ ಸಹಿತ ಒಟ್ಟು 40 ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಪೆರ್ಲ ಕಾವ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ಉಡುಪಿ ರಂಗಭೂಮಿಯಿಂದ ರಂಗ ವಿಭೂಷಣ, ಆನಂದೋತ್ಸವ ಗೌರವ ಪಡೆದಿದ್ದರು.
