ಖ್ಯಾತ ‘ಶ್ರದ್ಧಾ ಡ್ಯಾನ್ಸ್ ಸೆಂಟರ್’ ನೃತ್ಯಶಾಲೆಯ ಬದ್ಧತೆಯ ಗುರುವೆಂದು ಹೆಸರಾದ, ಸ್ವತಃ ಅತ್ಯುತ್ತಮ ನೃತ್ಯ ಕಲಾವಿದೆಯಾದ ವಿದುಷಿ ಶಮಾ ಕೃಷ್ಣಾ ಇವರ ವಿಶಿಷ್ಟ ನಾಟ್ಯಶಿಕ್ಷಣದಲ್ಲಿ ಕಲಾಪ್ರಪೂರ್ಣವಾಗಿ ಅರಳಿದ ಪುಟ್ಟ ಕಲಾವಿದೆ ವಿದಿತಾ ನವೀನ್, ತನ್ನ ಮನೋಜ್ಞ ನೃತ್ಯ ವೈಖರಿಯಿಂದ ಸಮಸ್ತ ಕಲಾರಸಿಕರನ್ನು ಮಂತ್ರಮುಗ್ಧಗೊಳಿಸಿದಳು. ಸಂದರ್ಭ – ನಗರದ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಈ ಬಾಲಪ್ರತಿಭೆ ತನ್ನ ವಯಸ್ಸಿಗೂ ಮೀರಿದ ನುರಿತಾಭಿನಯ, ಮಿಂಚಿನ ಸಂಚಾರದ ಅಪೂರ್ವ ನೃತ್ತ ವಿನ್ಯಾಸಗಳಿಂದ, ಬೆರಗುಗೊಳಿಸಿದ ಆಂಗಿಕಾಭಿನಯದಿಂದ ಚಿರಸ್ಮರಣೀಯವಾದ ವಿಶೇಷ ಅನುಭವವನ್ನು ಕಟ್ಟಿಕೊಟ್ಟಳು.

ವೇದಿಕೆಯ ಮೇಲೆ ಮಿಂಚಿನ ಬಳ್ಳಿಯೊಂದು, ಇಡೀ ರಂಗವನ್ನು ಬಳಸಿಕೊಂಡು ಪ್ರತಿಯೊಂದು ನೃತ್ಯ ಕೃತಿಯನ್ನೂ ವಿಶೇಷ ಆಯಾಮದಲ್ಲಿ ಪ್ರಫುಲ್ಲವಾಗಿ ಪ್ರಸ್ತುತಿಪಡಿಸಿದ್ದು ಕಲಾವಿದೆಯ ಅಸ್ಮಿತೆಯೇ ಸರಿ. ವಿಘ್ನ ವಿನಾಯಕನ ಆರಾಧನೆಯ ವಿಶಿಷ್ಟ ನೋಟದಿಂದ ಆರಂಭವಾದ ವಿದಿತಾಳ ಸುಮನೋಹರ ನೃತ್ಯದ ಹೆಜ್ಜೆಗಳು ‘ನರಸಿಂಹ ಕೌತ್ವಂ’ದ ನಾರಸಿಂಹನ ಕೌತುಕ ಭಂಗಿಗಳು, ಉಗ್ರಸ್ವರೂಪದ ಸಾಕ್ಷಾತ್ಕಾರದಲ್ಲಿ ಮೈ ನವಿರೇಳಿಸಿತು. ಕಲಾವಿದೆಯ ಆತ್ಮವಿಶ್ವಾಸದ ಹಸನ್ಮುಖದ ಭಾವ-ಭಂಗಿಗಳು, ಲೀಲಾಜಾಲದ ಆನಂದದ ನೃತ್ಯ ನೋಡುಗರನ್ನು ಕಣ್ಣೆವೆ ಮಿಟುಕಿಸದಂತೆ ಸೆರೆಹಿಡಿದಿತ್ತು.


ನಂತರ- ರಾಮಾಯಣದ ಘಟನೆಗಳ ಆಧಾರಿತ, ಹಲವು ಸಂಚಾರಿಗಳಿಂದ ಕಸೂತಿಯಂತೆ ನೇಯಲ್ಪಟ್ಟ ಮನಮೋಹಕ ನೃತ್ತಬಂಧ ‘ವರ್ಣ’ ಅತ್ಯಮೋಘವಾಗಿ ಮೂಡಿಬಂತು. ಅಶೋಕವನದಲ್ಲಿ ಶೋಕತಪ್ತಳಾಗಿ ಕುಳಿತ ಸೀತೆ ತನ್ನ ಪತಿ ಶ್ರೀರಾಮಚಂದ್ರನನ್ನು ನೆನೆಯುತ್ತ ಅವನ ಮಹಿಮೆಯ ಪ್ರತಿ ಘಟನೆಗಳನ್ನೂ ನೆನೆದು ದುಃಖಿಸುತ್ತ, ಇಂಥವನು ನನ್ನ ಸ್ವಾಮಿ ಎಂದು ಪರೋಕ್ಷವಾಗಿ ಆ ಮಹಾ ಮಹಿಮನ ಶೌರ್ಯ- ಪರಾಕ್ರಮಗಳ ಜೊತೆ ಅವನ ಕರುಣಾಳು- ದಯಾರ್ದ್ರ ಗುಣಗಳನ್ನು ಒಳಗೊಂಡ ಚಿತ್ರಣವನ್ನು ತನ್ನ ಬಹು ಸೊಗಸಾದ ತಲ್ಲೀನ ಅಭಿನಯ ಚಾತುರ್ಯದಿಂದ ಕಟ್ಟಿಕೊಡುತ್ತಾಳೆ.

ಕಲಾವಿದೆಯ ನೃತ್ಯ ಸಾಮರ್ಥ್ಯವನ್ನು ಉದ್ದೀಪಿಸುವ, ಗುರು ಶಮಾರವರ ಸುಸ್ಪಷ್ಟ, ಓತಪ್ರೋತ ನಟುವಾಂಗದ ಸೊಗಡು ಗಾಢವಾಗಿ ಆಕರ್ಷಿಸುತ್ತದೆ. ಗುರು – ಶಿಷ್ಯರ ನಾಟ್ಯಕ್ಷಮತೆಗೆ ಕನ್ನಡಿ ಹಿಡಿವ ದೀರ್ಘ ನೃತ್ಯಬಂಧ- ‘ವರ್ಣ’ (ರಚನೆ- ಮಹೇಶಸ್ವಾಮಿ- ರಾಮಪ್ರಿಯ ರಾಗ- ಆದಿತಾಳ)ದಲ್ಲಿ, ‘ಬಾರೈ ರಘುವಂಶ ಚಂದ್ರನೇ’ ಎಂದು ಕಲಾವಿದೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ, ಭಕ್ತಿ ತಾದಾತ್ಮ್ಯತೆಯಿಂದ ಕರೆಯುವಾಗ, ಆ ‘ಮರ್ಯಾದಾ ಪುರುಷೋತ್ತಮ’ ಕಣ್ಮುಂದೆಯೇ ಪ್ರತ್ಯಕ್ಷನಾಗಿ ತನ್ನ ಅಪೂರ್ವ ದರ್ಶನ ನೀಡಿದಂತೆ ಭಾಸವಾಯಿತು.

ಕಲಾವಿದೆಯ ಲಾಲಿತ್ಯಪೂರ್ಣ ಹೃದಯಸ್ಪರ್ಶಿ ಅಭಿನಯ ಪರಿಣಾಮಕಾರಿಯಾಗಿತ್ತು. ಅಂಗಶುದ್ಧತೆಯ ಪರಿಪೂರ್ಣ ನೃತ್ಯ, ಸುಮನೋಹರ ಕರಣಗಳಿಂದ ಕೂಡಿದ ಆಂಗಿಕಾಭಿನಯ- ಹಕ್ಕಿ ಹಗುರಿನ ಕುಣಿತದ ಲಯಾತ್ಮಕ ಚಾರಿಗಳು, ರಂಗಾಕ್ರಮಣದಲ್ಲಿ ಚಲಿಸಿದ ಮಂಡಿ ಅಡವುಗಳು, ಅರೆಮಂಡಿಯ ಮೇಲೆ ಮೂಡಿದ ಭಂಗಿಗಳ ಗುಚ್ಛ, ನಿರಾಯಾಸ ಭ್ರಮರಿಗಳ ಜೊತೆ ಮೆರೆದ ನೃತ್ತವಿಲಾಸದ ವರ್ಣರಂಜಿತ ನೃತ್ಯ ನಿಜಕ್ಕೂ ಅತಿಶಯವಾಗಿತ್ತು.

ಮುಂದೆ ಮನರಂಜಿಸಿದ ಕೃತಿ – ತಾಯಿ ಯಶೋದೆ ಮತ್ತು ಬಾಲಕೃಷ್ಣರ ವಾತ್ಸಲ್ಯದ ಚಿತ್ರಣವನ್ನು ಕಟ್ಟಿಕೊಡುವ ಜಾನಪದ ಧಾಟಿಯ ತಮಿಳು ಕೃತಿ ‘ಹೋಗಬೇಡ ಕಂದ’ ಎಂದು ತಾಯಿ ಕಾಳಜಿಯಿಂದ ಮಗನನ್ನು ಅಪಾಯದ ಜಾಗಗಳಿಗೆ ಹೋಗಬೇಡವೆಂದು ಅನುನಯದಿಂದ ಕೇಳಿಕೊಳ್ಳುವ, ಅದಕ್ಕೆ ಅಷ್ಟೇ ಚಾಣಕ್ಯತೆಯಿಂದ ಉತ್ತರಿಸಿ ತಾಯಿಯನ್ನು ನಂಬಿಸುವ, ಸಮಾಧಾನಗೊಳಿಸುವ ತುಂಟ ಕೃಷ್ಣನ ಸಂಭಾಷಣಾತ್ಮಕ ಘಟನೆಗಳಿಗೆ ತನ್ನ ಕಲಾತ್ಮಕ ನೃತ್ಯದಿಂದ ರೂಪ ಕೊಡುವ ಕಾರ್ಯವನ್ನು ಕಲಾವಿದೆ ಬಹು ಸುಂದರವಾಗಿ ನಿರ್ವಹಿಸಿ ನೋಡುಗರಿಗೆ ಮುದ ನೀಡಿದಳು.

ರೋಮಾಂಚಕಾರಿ ‘ತಿಲ್ಲಾನ’ದ ಆನಂದದ ನರ್ತನದಲ್ಲಿ ವಿದಿತಾ, ವಿಶಿಷ್ಟ ಬಾಗು- ಬಳುಕುಗಳ ಸೊಬಗಿನ ಯೋಗ ಭಂಗಿಗಳ ಚಮತ್ಕಾರವನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಕಿವಿಗಡಚಿಕ್ಕುವಂತೆ ಕರತಾಡನ ಪಡೆದಳು. ಅಂತ್ಯದಲ್ಲಿ, ಆಂಧ್ರಪ್ರದೇಶದ ಪುರಾತನ ದೇವಾಲಯ ಸಾಂಪ್ರದಾಯಕ ಪದ್ಧತಿಯಂತೆ, ಮೆರವಣಿಗೆಯಲ್ಲಿ ದೇವದಾಸಿಯರು ದೇವತಾ ಕೈಕಂರ್ಯವಾಗಿ ಸಾದರಪಡಿಸುತ್ತಿದ್ದ ‘ಚಿತ್ರ ನೃತ್ಯಂ’ ಎಂಬ ವಿಸ್ಮಯಕಾರಕವಾದ ಅಷ್ಟೇ ಕಲಾತ್ಮಕವಾಗಿದ್ದ ನೃತ್ಯವನ್ನು ವಿದಿತಾ, ಗುರು ಶಮಾರಿಂದ ವಿಶೇಷ ತರಬೇತಿ ಪಡೆದು ನರ್ತಿಸಿದ ‘ಮಯೂರ ಕೌತ್ವಂ’ ನಯನ ಮನೋಹರವಾಗಿ ಚೋದಿಸಿತು.

ನೆಲದ ಮೇಲೆ ಹರವಿದ ರಂಗೋಲಿಯ ಮೇಲೆ ಕಲಾವಿದೆ ಮಯೂರದಂತೆ ಕೊರಳು ಕೊಂಕಿಸುತ್ತ, ಮಯೂರದ ಹಸ್ತಮುದ್ರೆಗಳಿಂದ ನರ್ತಿಸುತ್ತ, ತನ್ನ ಲಯಾತ್ಮಕ ಹೆಜ್ಜೆಗಳಿಂದ ರಚಿಸಿದ ಸುಂದರ ನವಿಲು, ಗರಿಬಿಚ್ಚಿ ನಲಿದುದನ್ನು ಕಂಡು ಇಡೀ ಸಭಾಂಗಣ ಅಚ್ಚರಿಯಿಂದ ಉದ್ಗಾರ ತೆಗೆದಿತ್ತು. ನಿಜಕ್ಕೂ ನಶಿಸಿ ಹೋಗುತ್ತಿರುವ ಕುಚಿಪುಡಿ ಶೈಲಿಯ ಈ ಸುಂದರ ‘ಚಿತ್ರ ನೃತ್ಯಂ’ವನ್ನು, ತಾವು ತಮ್ಮ ಗುರು ಸಿ.ಆರ್. ಆಚಾರ್ಯಲು ಇವರಿಂದ ಕಲಿತು, ಮುಂದೆ ತಮ್ಮ ಶಿಷ್ಯ ಪರಂಪರೆಗೆ ದಾಟಿಸುತ್ತಿರುವ ಗುರು ಡಾ. ವೀಣಾ ಮೂರ್ತಿ ವಿಜಯ್ ಇವರ ಈ ಅನುಪಮ ಕಾರ್ಯಸೇವೆ ಶ್ಲಾಘನೀಯವಾದುದು. ಇದನ್ನು ಮುತವರ್ಜಿಯಿಂದ ತಮ್ಮ ಶಿಷ್ಯೆಗೆ ಹೇಳಿಕೊಟ್ಟ ಗುರು ಶಮಾ ಕೃಷ್ಣ ಮತ್ತು ಕಲಾವಿದೆ ವಿದಿತಾಗೆ ನವೋಲ್ಲಾಸದ ಅಭಿನಂದನೆಗಳು.

ಕಲಾವಿದೆಯ ಪ್ರಜ್ವಲ ನರ್ತನಕ್ಕೆ ಸುವರ್ಣದ ಪ್ರಭಾವಳಿಯಾದವರು- ಗಾಯನ- ವಿದುಷಿ ಲಾವಣ್ಯ ಕೃಷ್ಣಮೂರ್ತಿ, ಮೃದಂಗ- ವಿದ್ವಾನ್ ವಿನಯ್ ನಾಗರಾಜನ್, ಕೊಳಲು- ವಿದ್ವಾನ್ ನರಸಿಂಹಮೂರ್ತಿ, ವೀಣೆ- ವಿದ್ವಾನ್ ಶಂಕರರಾಮನ್, ರಿದಂ ಪ್ಯಾಡ್- ವಿದ್ವಾನ್ ಭಾರ್ಗವ ಹಾಲಂಬಿ ಮತ್ತು ನಟುವಾಂಗದ ಝೇಂಕಾರದಲ್ಲಿ ವಿದುಷಿ ಶಮಾ ಕೃಷ್ಣ. ಕಲಾತ್ಮಕ ರಂಗಸಜ್ಜಿಕೆ ಮತ್ತು ಬೆಳಕಿನ ವಿನ್ಯಾಸ- ನಾಗರಾಜ್ ಟಿ. ಮರಿಹೊನ್ನಯ್ಯ.


* ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
