ಮಂಗಳೂರು : ಅಲೆವೂರಾಯ ಪ್ರತಿಷ್ಠಾನದ ವತಿಯಿಂದ ದಿನಾಂಕ 26 ಡಿಸೆಂಬರ್ 2025ರಂದು ಮಂಗಳಾದೇವಿ ದೇವಸ್ಥಾನದಲ್ಲಿ ‘ಯಕ್ಷ ತ್ರಿವೇಣಿ’ಯ ಎರಡನೇ ದಿನದ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ತನ್ನ ಮನದಾಳದ ಮಾತುಗಳನ್ನಾಡಿದ ಹಿರಿಯ ಯಕ್ಷಗಾನ ಕಲಾವಿದ ವಸಂತ ಗೌಡ ಕಾಯರ್ತಡ್ಕ “ಕಲೆಗಳೆಲ್ಲಾ ನಮ್ಮ ಸಂಸ್ಕೃತಿಯ ವಿವಿಧ ಮುಖಗಳು. ಅದರ ಆರಾಧನೆಯಿಂದ ಕಲಾವಿದರಾದ ನಾವು ಬೆಳಗುತ್ತೇವೆ. ಸರ್ವಸಮರ್ಪಣಾ ಭಾವದಿಂದ ನಾನು ನನ್ನನ್ನು ಶ್ರೀಕ್ಷೇತ್ರ ಧರ್ಮಸ್ಥಳ ಮೇಳದಲ್ಲೇ ತೊಡಗಿಸಿಕೊಂಡೆ. ಸಂತಸವನ್ನು ಪಡೆದೆ. ಇದೀಗ ಐವತ್ತೊಂದು ವರ್ಷದ ತಿರುಗಾಟದಲ್ಲಿದ್ದೇನೆ. ಯಕ್ಷಗಾನ ನನಗೆ ಎಲ್ಲವನ್ನೂ ನೀಡಿದೆ.” ಎಂದು ಸಂತೃಪ್ತ ಭಾವದಿಂದ ಹೇಳಿದರು.

ಲೋಕಾಯುಕ್ತ ಇನ್ಸ್ಪೆಕ್ಟರ್ ಚಂದ್ರಶೇಖರ್ ರವರು ವಸಂತಗೌಡರ ತಿರುಗಾಟ, ಅವರು ನಿರ್ವಹಿಸುವ ಭಿನ್ನ ಭಿನ್ನ ಪಾತ್ರಗಳ ಬಗ್ಗೆ ಮೆಚ್ಚುಗೆ ಸೂಸಿ ಅವರನ್ನು ಅಭಿನಂದಿಸಿದರು. ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ಉಳ್ಳಾಲ ಪುರಸಭೆಯ ಅಧಿಕಾರಿ ರವಿಕೃಷ್ಣ ದಂಬೆ ಉಪಸ್ಥಿತರಿದ್ದರು. ಸಂಘಟಕ ಪೇಜಾವರ ಸುಧಾಕರ ರಾವ್ ನಿರ್ವಹಿಸಿದರೆ, ಯಕ್ಷಮಂಜುಳಾದ ಸದಸ್ಯೆ ಪೂರ್ಣಿಮಾ ಪ್ರಶಾಂತ ಶಾಸ್ತ್ರಿ ಅಭಿನಂದನಾ ಪತ್ರ ವಾಚಿಸಿದರು. ಪ್ರತೀಕ್ ರಾವ್ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಬಳಿಕ ‘ಶಾಂಭವಿ ವಿಜಯ’ ಯಕ್ಷಗಾನ ಪ್ರದರ್ಶನಗೊಂಡಿತು.

