ಕಲೆಯ ಬೆಳವಣಿಗೆಗೆ ಉತ್ತಮ ಸಂಘಟಕರು, ಕಲಾಪ್ರೇಕ್ಷಕರೂ ಬೇಕಂತೆ. ಅದರಲ್ಲೂ ನೃತ್ಯ ಕಾರ್ಯಕ್ರಮದ ಆಯೋಜನೆಗೆ ಆಯೋಜಕರಾಗಿ ನೃತ್ಯಕಲಾ ಸಂಸ್ಥೆಗಳೇ ಮುಂದಾದಾಗ ಆ ಪ್ರದರ್ಶನಕ್ಕೇ ಒಂದಷ್ಟು ಮೆರುಗು ಹೆಚ್ಚೇ ಎನ್ನಬಹುದು. ಹೀಗೊಂದು ಸುಂದರವಾಗಿ ಮೂಡಿ ಬಂದ ಕಾರ್ಯಕ್ರಮ ನೃತ್ಯವಾಹಿನಿ. ಸನಾತನ ನಾಟ್ಯಾಲಯ ಮಂಗಳೂರು ಹಾಗೂ ನೃತ್ಯಾಂಗನ್ ಮಂಗಳೂರು ಎರಡೂ ನೃತ್ಯ ಸಂಸ್ಥೆಗಳು ಜಂಟಿಯಾಗಿ ‘ನೃತ್ಯವಾಹಿನಿ’ ಎಂಬ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಇದು ನಾಲ್ಕನೇ ವರ್ಷದ ಕಾರ್ಯಕ್ರಮ.
ಈ ಬಾರಿ ಮೂರು ವಿಭಿನ್ನ ನೃತ್ಯ ಪ್ರಯೋಗಗಳನ್ನು ಸವಿಯುವ ಭಾಗ್ಯ ನೋಡುಗರದ್ದಾಗಿತ್ತು. ಮೊದಲನೆಯದಾಗಿ ನರ್ತಿಸಿದವರು ಯುವ ಕಲಾವಿದೆ ಅನಘ ಜಿ.ಎಸ್. ಸ್ಪಷ್ಟವಾದ ಹೆಜ್ಜೆಗಳು, ಚೆಲುವಾದ ಅಂಗಶುದ್ಧಿ ಹಾಗೂ ಪ್ರಬುದ್ದತೆಯಿಂದ ಕೂಡಿದ ಅಭಿನಯದೊಂದಿಗೆ ಕಾರ್ಯಕ್ರಮಕ್ಕೇ ಉತ್ತಮವಾದ ಚಾಲನೆಯೇ ದೊರಕಿತು.

ಎರಡನೆಯದಾಗಿ ಪ್ರದರ್ಶನಗೊಂಡಿರುವುದು ‘ಪೂತನ’ ರಂಗರೂಪಾತ್ಮಕ ಪ್ರಯೋಗ. ಪುಣೆಯ ಸ್ವರದ ಭಾವೆ ಹಾಗೂ ಈಶ ಪಿಂಗ್ಳೈ ಇಬ್ಬರು ಕಲಾವಿದರ ಜೋಡಿ ರಾಕ್ಷಸಿ ಪೂತನಿಯ ಮನದ ಮಾತುಗಳನ್ನು ತೆರೆದಿಟ್ಟರು. ದೇಹ ಭಾಷೆಯನ್ನು ಬಳಸಿಕೊಂಡು, ರಂಗಭೂಮಿಯ ಚಲನೆಗಳನ್ನು ಅಳವಡಿಸಿಕೊಂಡು, ಭರತನಾಟ್ಯದ ಜತಿಗಳ ಮೂಲಕವೇ ಪೂತನಿಯ ಕತೆಯನ್ನು ತಲುಪಿಸುವ ಪ್ರಯತ್ನ ನಿಜಕ್ಕೂ ಒಂದು ಉತ್ತಮ ಪ್ರಯೋಗವಾಗಿ ಮೂಡಿಬಂತು. ಪೂತನಿಯ ಸಾವನ್ನು ದೃಶ್ಯೀಕರಿಸಿದ ಪರಿ ಆಕೆಯ ಮೇಲೇ ಕನಿಕರಿಸುವಷ್ಟು ಪರಿಣಾಮಕಾರಿಯಾಗಿತ್ತು. ಪ್ರಥ್ವಿನ್ ಉಡುಪಿಯವರು ಮಾಡಿದ ಬೆಳಕಿನ ವಿನ್ಯಾಸ ಪ್ರಯೋಗದ ಚೆಂದವನ್ನು ಇನ್ನಷ್ಟು ಹೆಚ್ಚಿಸಿತು.

ಕೊನೆಯದಾಗಿ ಪ್ರದರ್ಶನಗೊಂಡ ರೂಪಕ ‘ರಾಮ’ ಸೃಷ್ಟಿ ಫೌಂಡೇಶನ್ ನ ಡಾ. ಮಂಜರೀಚಂದ್ರ ಪುಷ್ಪರಾಜ್ ಬಳಗದವರು ಪ್ರಸ್ತುತ ಪಡಿಸಿದ್ದರು. ರಾಮನ ಕುರಿತು ಮಹಾಕವಿ ಸ್ವಾತಿ ತಿರುನಾಳ್ ರ ರಚಿತ ಭಾವಯಾಮಿ ರಘುರಾಮ ಕೃತಿಯನ್ನು ಮೂಲವಾಗಿಟ್ಟುಕೊಂಡು ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ, ಯುದ್ಧಾ ಕಾಂಡವನ್ನು ಅತ್ಯಂತ ಸುಂದರವಾಗಿ ಅಭಿವ್ಯಕ್ತಿ ಪಡಿಸಲಾಯಿತು. ಕಥೆಯ ನಿರೂಪಣೆ, ಶುರುವಿನಿಂದ ಕೊನೆಯ ತನಕ ಎಲ್ಲಾ ಕಲಾವಿದರ ಚುರುಕಿನ ನಡೆ ಅಲ್ಲದೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ನೃತ್ಯರೂಪಕದ ಚೆಂದವಾದ ಪ್ರದರ್ಶನಕ್ಕೇ ಕಾರಣವಾಯಿತು. ಬಾಲಕೃಷ್ಣ ಕೊಡವೂರು ಇವರ ಬೆಳಕಿನ ವಿನ್ಯಾಸವೂ ಪೂರಕವಾಗಿತ್ತು ಎನ್ನಬಹುದು. ಒಟ್ಟಿನಲ್ಲಿ ‘ನೃತ್ಯವಾಹಿನಿ’ ಒಂದು ಸುಂದರವಾದ ನೃತ್ಯಪ್ರಸ್ರುತಿಗಳ ಗೊಂಚಲಾಗಿ ನೋಡುಗರಿಗೆ ಮುದನೀಡಿದುದಂತು ಸತ್ಯ. ಈ ಕಾರಣಕ್ಕೇ ಕಾರ್ಯಕ್ರಮದ ಆಯೋಜನೆಗಾಗಿ ಶ್ರಮಿಸಿದ ಸನಾನತ ನಾಟ್ಯಾಲಯದ ವಿದುಷಿ ಶ್ರೀಲತಾ ನಾಗರಾಜ್ ಹಾಗೂ ನೃತ್ಯಾಂಗನ್ ಸಂಸ್ಥೆಯ ರಾಧಿಕಾ ಶೆಟ್ಟಿ ಅಭಿನಂದನಾರ್ಹರು.

ನೃತ್ಯ ವಿಮರ್ಶಕರು : ಮಂಜುಳಾ ಸುಬ್ರಹ್ಮಣ್ಯ
